Homeಕರ್ನಾಟಕಬಿಜೆಪಿ-ಜೆಡಿಎಸ್ ಶಾಸಕರಿಂದ ಸಂವಿಧಾನಕ್ಕೆ ಅಪಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿಜೆಪಿ-ಜೆಡಿಎಸ್ ಶಾಸಕರಿಂದ ಸಂವಿಧಾನಕ್ಕೆ ಅಪಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

- Advertisement -
- Advertisement -

ಬಜೆಟ್ ಮಂಡನೆಯನ್ನು ದಿಕ್ಕರಿಸುವ ಮೂಲಕ ಬಿಜೆಪಿಯ 65 ಹಾಗೂ ಜೆಡಿಎಸ್‌ನ 19 ಶಾಸಕರು ಜನರಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಮಲ-ದಳ ನಾಯಕರ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬಜೆಟ್ ಮಂಡನೆ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಮ್ಮದು ಜನರಿಗೆ ಬದುಕು ಕಟ್ಟಿಕೊಡುವ ಬಜೆಟ್. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಜೆಟ್ ಅನ್ನು ಬಾಯ್ಕಾಟ್ ಮಾಡುವ ಮೂಲಕ ವಿರೋಧ ಪಕ್ಷಗಳ ನಾಯಕರು ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ನಮ್ಮ ಬಜೆಟ್ ನ ಅಂಕಿ-ಅಂಶಗಳನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ಸಂಕಟದಿಂದ ಕೂರಲು ಆಗಲಿಲ್ಲ. ಎಲ್ಲ ಗ್ಯಾರಂಟಿಗಳಿಗೆ ಹಣ ಕೊಟ್ಟು ಇಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರಲ್ಲ ಎಂದು ಅಸೂಯೆಯಿಂದ ಬಜೆಟ್ ಧಿಕ್ಕರಿಸಿ ಎದ್ದು ಹೋದರು. ರಾಜ್ಯದ ಇತಿಹಾಸದಲ್ಲಿ ಯಾವುದೇ ವಿರೋಧ ಪಕ್ಷದವರು ಈ ರೀತಿ ಬಜೆಟ್ ಗೆ ಅಪಮಾನ ಮಾಡಿ ಹೋಗಿರಲಿಲ್ಲ. ಅವರು ಬಜೆಟ್ ಮಂಡನೆ ನಂತರ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಆದರೆ ಇಂದು ಜನರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ಅನ್ನು ಧಿಕ್ಕರಿಸುವ ಮೂಲಕ ಬಿಜೆಪಿಯ 65 ಹಾಗೂ ಜೆಡಿಎಸ್‌ನ 19 ಶಾಸಕರು ಜನರಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮದು ಜನರಿಗೆ ಬದುಕು ಕಟ್ಟಿಕೊಡುವ, ಎಲ್ಲ ಕ್ಷೇತ್ರದಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರುವ ಬಜೆಟ್. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ಬಗ್ಗೆ ದೊಡ್ಡ ಪ್ರಮಾಣದ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ನೀರಾವರಿ ಇಲಾಖೆಯಲ್ಲಿ ಹೊಸ ಚಿಂತನೆ ಹಮ್ಮಿಕೊಳ್ಳಲಾಗಿದೆ. ಕೆಆರ್ ಎಸ್ ಉದ್ಯಾನ ಅಭಿವೃದ್ಧಿ, ನವಲಿ ಸಮತೋಲಿತ ಜಲಾಶಯ ನಿರ್ಮಾಣ, ಕೃಷ್ಣ ಮೇಲ್ದಂಡೆ, ಕಳಸಾ ಬಂಡೂರಿ ಯೋಜನೆಗೆ ಮುಂದಾಗಿದ್ದೇವೆ. ಕೇಂದ್ರ ಸರ್ಕಾರ ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ನೀಡದಿದ್ದರೂ ನಾವು ಟೆಂಡರ್ ಕರೆದಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟ ತಕ್ಷಣ ಕೆಲಸ ಆರಂಭಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮೇಕೆದಾಟು ಯೋಜನೆಗೂ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ವಿವರಿಸಿದರು.

‘ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಮಾಗಡಿ, ಹೊಸಕೋಟೆ, ನೆಲಮಂಗಲ, ಬಿಡದಿ ಸೇರಿದಂತೆ ಐದು ಹೊಸ ಟೌನ್ ಶಿಪ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಸ್ಕೈ ಡೆಕ್ ನಿರ್ಮಾಣ ಮಾಡಲು ಪ್ರಸ್ತಾವನೆ ಮಾಡಿದ್ದೇವೆ. ಕಂದಾಯ ಇಲಾಖೆಯಲ್ಲಿ ಜನರಿಗೆ ಆಗುತ್ತಿರುವ ತೊಂದರೆ ಸರಿ ಮಾಡಲು ಬದಲಾವಣೆ ತರುತ್ತಿದ್ದೇವೆ. ಪಹಣಿ, ಪೋಡಿ, ಖಾತೆ ಸಮಸ್ಯೆ ಬಗೆಹರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಆಸ್ತಿ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸಲು ಮುಂದಾಗಿದ್ದೇವೆ’ ಎಂದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ:

ಮುಖ್ಯಮಂತ್ರಿ ಸಿದ್ದರಾಮಯ್ಯನವರು 15ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ದೇಶದಲ್ಲೇ ಇದು ಮಾದರಿಯಾಗಿದೆ. ₹3.71 ಲಕ್ಷ ಕೋಟಿ ಮೊತ್ತದ ಬಜೆಟ್ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.

ಆರ್ಥಿಕ ಶಿಸ್ತು ಪಾಲನೆಯಾಗಿದೆ:

‘ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರಾಜ್ಯದಲ್ಲಿ ಆರ್ಥಿಕ ಶಿಸ್ತು ಪಾಲನೆ ಮಾಡಿಕೊಂಡಿದ್ದೇವೆ. ನಾವು ಯಾರ ಮೇಲೂ ಹೆಚ್ಚಿನ ತೆರಿಗೆ ಹಾಕಿಲ್ಲ. ನಮಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೂಢೀಕರಣ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ನೀರಾವರಿ ಇಲಾಖೆಗೆ ಹಾಗೂ ಶಿವಕುಮಾರ್ ಅವರಿಗೆ ಅನ್ಯಾಯ ಮಾಡಲಾಗಿದೆ ಎಂಬ ಯಡಿಯೂರಪ್ಪ ಅವರ ಟೀಕೆ ಬಗ್ಗೆ ಕೇಳಿದಾಗ, ‘ಯಡಿಯೂರಪ್ಪನವರಿಂದ ನಿರೀಕ್ಷೆ ಮಾಡಲು ಸಾಧ್ಯವೇ? ಯಡಿಯೂರಪ್ಪನವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಕೆಲಸಗಳಿಗೂ ನಾವು ಅನುಮೋದನೆ ನೀಡಿದ್ದೇವೆ. ನಿಮ್ಮ ಇಲಾಖೆಗಳಿಗೆ ಅನುದಾನದಲ್ಲಿ ಅನ್ಯಾಯವಾಗಿಲ್ಲವೇ ಎಂದು ಕೇಳಿದಾಗ, ‘ನೀರಾವರಿ ಬೇರೆ, ಇತರ ಇಲಾಖೆ ಬೇರೆ ಎಂದು ನಾನು ಹೇಳುವುದಿಲ್ಲ. ನಾನು ಸಮಗ್ರ ಕರ್ನಾಟಕದವನು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕಕ್ಕೂ ಸೇರಿ ಮಾತನಾಡುತ್ತಿದ್ದೇನೆ’ ಎಂದರು.

ಕಳೆದ ಬಜೆಟ್ ನಲ್ಲಿ ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ಹಣ ನಿಗದಿ ಮಾಡಲಾಗಿತ್ತು ಎಂದು ಕೇಳಿದಾಗ, ‘ಈ ಯೋಜನೆಗಳಿಗೆ ನಾವು ಹಣ ಇಟ್ಟಿರಲಿಲ್ಲ. ಅವರು ಹಣ ಘೋಷಣೆ ಮಾಡಿ ನಂತರ ಹಿಂಪಡೆದಿದ್ದರು’ ಎಂದು ತಿಳಿಸಿದರು.

ಬಿಜೆಪಿ ಶಾಸಕರಿಗೂ ಬಜೆಟ್ ತೃಪ್ತಿಯಿದೆ:

ಬಜೆಟ್ ಅನ್ನು ಬಿಜೆಪಿ ಶಾಸಕ ಸೋಮಶೇಖರ್ ಅವರು ಸ್ವಾಗತಿಸಿರುವ ಬಗ್ಗೆ ಕೇಳಿದಾಗ, ‘ನೀವು ಕೇವಲ ಅವರನ್ನು ಮಾತ್ರ ಕೇಳಿದ್ದೀರಿ. ಬೇರೆಯವರನ್ನೂ ಕೇಳಿ ಅವರಿಗೂ ಈ ಬಜೆಟ್ ನಿಂದ ಸಂತೋಷವಾಗಿದೆ. ಆದರೆ ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಬೆಂಗಳೂರು ನಗರಕ್ಕೆ ಏನೇನು ಬೇಕು ಎಂದು ಸೋಮಶೇಖರ್ ಅವರಿಗೆ ಗೊತ್ತಿದೆ. ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ನೀಡಬೇಕು ಎಂದು ಪತ್ರ ನೀಡಿದ್ದೇ ಅವರು. ಹೀಗಾಗಿ ಅವರು ಇದನ್ನು ಸ್ವಾಗತಿಸಿದ್ದಾರೆ. ಬಿಜೆಪಿ ಶಾಸಕರು ಕೂಡ ಇನ್ನಷ್ಟು ಬೇಡಿಕೆ ನಮಗೆ ಕೊಟ್ಟಿದ್ದಾರೆ. ಪಾಲಿಕೆ ಬಜೆಟ್ ಮಂಡನೆ ವೇಳೆಯಲ್ಲಿ ಅವರ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ’ ಎಂದರು.

ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್ ನಲ್ಲಿ ಕೊಡುಗೆ ಏನು ಎಂದು ಕೇಳಿದಾಗ, ‘ಟನಲ್ ರಸ್ತೆ, ಬಿಸಿನೆಸ್ ಕಾರಿಡಾರ್, ಸ್ಯಾಟಲೈಟ್ ಟೌನ್ ಶಿಪ್, ಮೆಟ್ರೋ ಯೋಜನೆ, ಉಪನಗರ ರೈಲು, ಸ್ಕೈ ಡೆಕ್ ಯೋಜನೆಗಳನ್ನು ನೀಡಲಾಗಿದೆ. ಇದಕ್ಕಿಂತ ಇನ್ನೇನು ಬೇಕು’ ಎಂದು ಕೇಳಿದರು.

ಕುಮಾರಸ್ವಾಮಿ ಅವರು ಸದನಕ್ಕೆ ಬಂದು ಟೀಕಿಸಲಿ:

ರಸ್ತೆ ರಿಪೇರಿ ಮಾಡಲು ಹಣವಿಲ್ಲ ಟನಲ್ ರಸ್ತೆಗೆ ಹಣವಿಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ‘ಪಾಪ ಕುಮಾರಸ್ವಾಮಿ ಅವರಿಗೆ ಅಧಿವೇಶನಕ್ಕೆ ಬರಲು ಆಗಿಲ್ಲ. ಅವರು ಬಂದು ಬಜೆಟ್ ನೋಡಿದ್ದರೆ ತಿಳಿಯುತ್ತಿತ್ತು. ಅವರು ಎಲ್ಲೋ ಕೂತು ಪಿಎಗಳು, ಮಾಧ್ಯಮಗಳು ಹೇಳಿದ್ದನ್ನು ಕೇಳಿಕೊಂಡು ಮಾತನಾಡಿದರೆ ಹೇಗೆ? ಸದನಕ್ಕೆ ಬಂದು ನಮ್ಮ ತಪ್ಪು ಏನು ಎಂದು ಚರ್ಚೆ ಮಾಡಿದ್ದರೆ ನಾವು ಯೋಚನೆ ಮಾಡಬಹುದು. ಅವರ ಮಾರ್ಗದರ್ಶನ ನಮಗೆ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಇದನ್ನೂ ಓದಿ; ಕರ್ನಾಟಕ ಬಜೆಟ್-2024: ಅಹಿಂದ, ಮಹಿಳಾ ಕಲ್ಯಾಣಕ್ಕೆ ಸಿಕ್ಕ ಅನುದಾನ ಎಷ್ಟು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...