ತನ್ನ ಸರ್ಕಾರವನ್ನು ಅಸ್ಥಿರಗೊಳಿಸಲು “ಆಪರೇಷನ್ ಹೋಳಿ” ಎಂದು ಕರೆದು 14 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅಪಹರಿಸಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಬೆಂಬಲದ ನಾಲ್ಕು ಶಾಸಕರಾದ ಹರ್ದೀಪ್ ಡಾಂಗ್, ರಘುರಾಜ್ ಕನ್ಸಾನಾ ಮತ್ತು ಬಿಸಾಹುಲಾಲ್ ಸಿಂಗ್ ಮತ್ತು ಸ್ವತಂತ್ರ ಸದಸ್ಯೆ ಶೇರಾ ಭೈಯಾರನ್ನು ಕರ್ನಾಟಕದ ಪಂಚತಾರಾ ಹೋಟೆಲ್ ನಲ್ಲಿಟ್ಟಿದ್ದಾರೆ ಎಂಬ ವದಂತಿಗಳಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೆಹಲಿಯ ಕಾಂಗ್ರೆಸ್ ಮುಖಂಡರು ಬಿಜೆಪಿಯು “ರಾಜ್ಯದಿಂದ ರಾಜ್ಯ”ದ ಮೇಲೆ ಆಕ್ರಮಣ ಮಾಡುತ್ತಿದೆ. ರಾಜ್ಯಸಭೆಯ ಚುನಾವಣೆಗೆ ಹತ್ತಿರವಿರುವಾಗ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ಸಂಜೆ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರದ ಕೆಲವು ಶಾಸಕರು ದೆಹಲಿ ಬಳಿಯ ಗುರಗಾಂವ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಬಗ್ಗೆ ವರದಿಗಳು ಹೊರಬಿದ್ದಿವೆ. ಬಿಜೆಪಿ ತಮ್ಮ ಪಕ್ಷದ ಶಾಸಕರಿಗೆ 25-35 ಕೋಟಿ ರೂ. ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.
ಶಾಸಕರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ಪಕ್ಷದ ಹಿರಿಯ ನಾಯಕರನ್ನು ಬಿಜೆಪಿ ಆಡಳಿತದ ಹರಿಯಾಣದ ಪೊಲೀಸರು ಹೋಟೆಲ್‌ಗೆ ಅನುಮತಿಸುತ್ತಿಲ್ಲ ಎಂದು ಕಾಂಗ್ರೆಸ್ ದೂರಿದೆ.
ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಬಿಎಸ್‌ಪಿ ಶಾಸಕಿ ರಮಾಬಾಯಿ ದಿಗ್ವಿಜಯ ಸಿಂಗ್ ಅವರ ಪುತ್ರ ಸೇರಿದಂತೆ ಕಾಂಗ್ರೆಸ್ ಮಂತ್ರಿಗಳ ಬೆಂಗಾವಲಿನೊಂದಿಗೆ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‌ನಿಂದ ತನ್ನ ಬ್ಯಾಗುಗಳೊಂದಿಗೆ ಹೊರಬಂದಿದ್ದರು.
“ಕಾಂಗ್ರೆಸ್ ಸರ್ಕಾರವು 15 ವರ್ಷಗಳಿಂದ ನಡೆಯುತ್ತಿರುವ ಲ್ಯಾಂಡ್ ಮಾಫಿಯಾ, ಚಿಟ್ ಫಂಡ್ ಮಾಫಿಯಾ, ಸುಲಿಗೆ ಮಾಫಿಯಾದಂತಹ ಮಾಫಿಯಾಗಳನ್ನು ನಿಲ್ಲಿಸಿದೆ, ಅವುಗಳ ಕುರಿತು ಸಾಕ್ಷ್ಯ ಸಂಗ್ರಹಿಸಿದೆ. ಇದರಿಂದ ಜೈಲಿನ ಕಂಬಿಗಳಿಗೆ ಹೆದರಿ ಮಧ್ಯಪ್ರದೇಶದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಎಂಎಲ್ ಖಟ್ಟರ್ ಅವರೇ, 12 ಶಾಸಕರನ್ನು ವಿಶೇಷ ವಿಮಾನದಲ್ಲಿ ಗುರಗಾಂವ್ ಗೆ ಕರೆದೊಯ್ದವರು ಯಾರು ಎಂದು ದಯವಿಟ್ಟು ಹೇಳುತ್ತೀರಾ?” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಮಧ್ಯಪ್ರದೇಶದ ಪ್ರಮುಖ ಬಿಜೆಪಿ ಮುಖಂಡ ನರೋತ್ತಮ್ ಮಿಶ್ರಾ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಇದು ರಾಜ್ಯಸಭಾ ಸದಸ್ಯರಾಗಿ ದಿಗ್ವಿಜಯ್ ಸಿಂಗ್ ಮುಂದುವರೆಯಲು ಆಡುತ್ತಿರು ನಾಟಕ ಎಂದು ಕರೆದಿದ್ದಾರೆ.
ವಿಶೇಷ ವಿಮಾನದ ಮೂಲಕ ತನ್ನನ್ನು ಮತ್ತು ಇತರರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ರಮಾಬಾಯಿ ನಿರಾಕರಿಸಿದ್ದಾರೆ. ಅಲ್ಲದೆ ತಾನು ಮುಖ್ಯಮಂತ್ರಿ ಕಮಲ್ ನಾಥ್ ಅವರೊಂದಿಗೆ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. “ರಾಜ್ಯ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡಲು ಬಯಸಿದರೆ ನಾನು ತಯಾರಿದ್ದೇನೆ” ಎಂದೂ ಸಹ ಅವರು ಹೇಳಿದ್ದಾರೆ.
230 ಸದಸ್ಯರ ಮದ್ಯಪ್ರದೇಶದ ವಿಧಾನಸಭೆಯಲ್ಲಿ ಕಮಲ್ ನಾಥ್ ಸರ್ಕಾರವು 120 ಶಾಸಕರನ್ನು ಹೊಂದಿದೆ. ಈ ಪೈಕಿ 114 ಶಾಸಕರು ಕಾಂಗ್ರೆಸ್, ಇಬ್ಬರು ಬಿಎಸ್ಪಿ, ಒಬ್ಬರು ಸಮಾಜವಾದಿ ಪಕ್ಷ ಮತ್ತು ನಾಲ್ವರು ಪಕ್ಷೇತರರು. ಬಿಜೆಪಿಗೆ 107 ಶಾಸಕರಿದ್ದಾರೆ. ವಿಧಾನಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇವೆ.