ತೇಜಸ್ವಿ ಸೂರ್ಯ

2019 ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದರಾದ ನಂತರ ಆಗಾಗ ವಿವಾದಾತ್ಮಕ ಭಾಷಣಗಳು ಮತ್ತು ಟೀಕೆಗಳಲ್ಲಿ ನಿರತರಾಗಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವನಾಯಕ ತೇಜಸ್ವಿ ಸೂರ್ಯ ಎಲ್ಲಿದ್ದಾರೆ? ಈ ಕೋವಿಡ್ ಎರಡನೇ ಅಲೆಯಲ್ಲಿ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಯುವ ವಿಭಾಗ ಏನು ಮಾಡುತ್ತಿದೆ ಎಂದು ಬೆಂಗಳೂರು ದಕ್ಷಿಣದ ಮತದಾರರು ಪ್ರಶ್ನೆ ಮಾಡುತ್ತಿದ್ದಾರೆ.

ಬಂಗಾಳ-ತಮಿಳುನಾಡು ಚುನಾವಣಾ ಪ್ರಚಾರಗಳಿಂದ ಮಾಯವಾದ ಅವರು, ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗಾಗಿ ಕೆಲಸ ಮಾಡುತ್ತಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಏನೋ ವಿವಾದಾತ್ಮಕ ಹೇಳಿಕೆ ನೀಡಿ ಹೆಡ್‌ಲೈನ್‌ಗಳಲ್ಲಿ ಮಿಂಚುತ್ತಿದ್ದ ಅವರು ಈಗ ಹೆಡ್‌ಲೈನ್‌ಗಳಲ್ಲೂ ಇಲ್ಲ ಎಂದು ದಿ ಪ್ರಿಂಟ್ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರ ಕುರಿತು ಪ್ರಶ್ನೆ ಮಾಡಿದೆ.

ಎರಡನೇ ಕೋವಿಡ್ ಅಲೆಯಲ್ಲಿ ದೇಶವು ಹಿಮ್ಮೆಟ್ಟುತ್ತಿರುವಾಗ, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಎಎಪಿ ಯುವ ಶಾಸಕ ದಿಲೀಪ್ ಕೆ. ಪಾಂಡೆ ಅವರು ಈಗ ಹೀರೊಗಳಾಗಿ ಹೊರಹೊಮ್ಮಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಸಹಾಯಕ್ಕಾಗಿ ಅಪಾರ ಸಂಖ್ಯೆಯ ಜನರು ಈ ಜೋಡಿಯನ್ನು ಸಂಪರ್ಕಿಸುತ್ತಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ಯುವ ಘಟಕಗಳು ಜನರ ನೆರವಿಗೆ ನಿಂತಿರುವಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಕಾಣಿಸುತ್ತಲೇ ಇಲ್ಲವಲ್ಲ ಎಂಬ ಮಾತಿಗೆ, ‘ಸೋಷಿಯಲ್ ಮೀಡಿಯಾ ನೋಡಿ, ನಾನು ತುಂಬ ಆಕ್ಟಿವ್ ಆಗಿದ್ದೇನೆ’ ಎಂದು ಸೂರ್ಯ ಸಮರ್ಥಿಸಿಕೊಳ್ಳುತ್ತಾರಂತೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಬೆಂಗಳೂರು ದಕ್ಷಿಣ ನಿವಾಸಿ, ಫ್ರೀ ಲ್ಯಾನ್ಸ್ ಪತ್ರಕರ್ತ ಡೇನಿಯಲ್ ಕ್ರಿಸ್ಟೋಫರ್, “ಸೂರ್ಯ ಇಲ್ಲಿನ ಸಂಸದರು ಎಂಬುದಕ್ಕಿಂತ ತಾನು ರಾಷ್ಟ್ರೀಯ ನಾಯಕ ಎಂಬ ಗರ್ವದಲ್ಲಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗಳಿಗೆ ಪ್ರಚಾರ ಮಾಡಲು ಕಳಿಸಿದ ನಂತರ ಅಂತಹ ಭಾವನೆ ಅವರಲ್ಲಿ ತೀವ್ರವಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ದುರಂತ ಸಂಭವಿಸುವಾಗ ಸಂಸದ ಮಹಾಶಯರು ಎಲ್ಲಿದ್ದಾರೋ ಗೊತ್ತಿಲ್ಲ” ಎಂದರು.

ಆಮ್ ಆದ್ಮಿ ಪಕ್ಷದ ಬಳ್ಳಾರಿ ಜಿಲ್ಲೆಯ ಸಂಚಾಲಕ ವಿ. ಬಿ. ಮಲ್ಲಪ್ಪ, ‘ತೇಜಸ್ವಿ ಸೂರ್ಯ ಎಂದೂ ರಾಜ್ಯದ ಪರ ಸಂಸತ್ತಿನಲ್ಲಿ ಮಾತನಾಡಿದ್ದೇ ಇಲ್ಲ. ಅಲ್ಲೂ ಟಿಪ್ಪು ಬಗ್ಗೆ ಸುಳ್ಳು ಹೇಳಿದ ಮನುಷ್ಯ. ಅವರು ಜನರ ಪರವಾಗಿ ಕೆಲಸ ಮಾಡದಿರುವಾಗ ಆತ ಇದ್ದರೆಷ್ಟು ಕಾಣೆಯಾದರೆಷ್ಟು? ಆದರೆ ಆತನ ನಂಜು ಜನಕ್ಕೆ ತಾಗದಿರಲಿ’ ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾರೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣಾ ಪ್ರಚಾರಗಳಲ್ಲಿ ಎಂಪಿ ಸೂರ್ಯ ಅಷ್ಟೇನೂ ಕಾಣಲಿಲ್ಲ. ಬಂಗಾಳ ಚುನಾವಣೆ ಘೋಷಣೆಗೆ ಮುನ್ನ ಅಲ್ಲಿ ಯುವ ರ‍್ಯಾಲಿ ಮಾಡಿದಾಗ ಗಲಾಟೆ ನಡೆಯಿತು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡ ಸೂರ್ಯ ಪೂರ್ವ ನಿರ್ದೇಶನದಂತೆ ಅಲ್ಲಿ ಸೇರಿದ್ದ ತಮ್ಮ ಕಾರ್ಯಕರ್ತರ ಗುಂಪಿನೊಂದಿಗೆ, ‘ಬಂಗಾಳದಲ್ಲಿ ಸೂರ್ಯರ ರ‍್ಯಾಲಿ ಮೇಲೆ ದಾಳಿ ಮಾಡಿಸಿದ ಮಮತಾರಿಗೆ ಧಿಕ್ಕಾರ’ ಎಂದು ಗುಂಪು ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು.

ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ತಮ್ಮ ಆಘಾದವಾದ ಕೋವಿಡ್ ಪರಿಹಾರ ಕಾರ್ಯಗಳೊಂದಿಗೆ ಜನರನ್ನು ತಲುಪಿದರು. ಸಂಕಷ್ಟದ ಸಮಯದಲ್ಲಿ ಅವರು ಸಾವಿರಾರು ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಅವರನ್ನು ಮಾಧ್ಯಮಗಳು ಗುರುತಿಸಿ ಪ್ರೋತ್ಸಾಹಿಸಿದ್ದವರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವೈಫಲ್ಯತೆಗಳನ್ನು ಕರಾರುವಾಕ್ಕಾಗಿ ತೋರಿಸುತ್ತಿದ್ದರೆ, ಆಮ್‌ಆದ್ಮಿಯ ಯುವಜನರು ದೆಹಲಿಯ ಜನರಿಗೆ ನೆರವು ನೀಡುತ್ತಲಿದ್ದರೆ ಬಿಜೆಪಿ ಯುವ ಘಟಕ ಮಾತ್ರ ಸೀನ್‌ನಲ್ಲೇ ಇಲ್ಲ! ಸೂರ್ಯ ಮೋಡದ ಮರೆಯಲ್ಲಿ ಎಲ್ಲೋ ಸೇಫಾಗಿದ್ದಾರೆ ಎಂದು ಅವರ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ದಿ ಪ್ರಿಂಟ್ ಪ್ರಕಾರ, ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ! ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ (ಬಿಜೆವೈಎಂ) ಚಟುವಟಿಕೆಗಳನ್ನು ಪ್ರಸಾರ ಮಾಡಲು ಅವರು ಸ್ವತಃ ವೃತ್ತಿಪರರು ಮತ್ತು ವೈದ್ಯರೊಂದಿಗೆ ನಡೆಸುವ ಸಂದರ್ಶನಗಳನ್ನು ಪೋಸ್ಟ್ ಮಾಡುತ್ತಿದ್ದಾರೆ!

ಆದರೆ ಕೋವಿಡ್ ದುರಂತದ ಮಧ್ಯೆ ವಿರೋಧ ಪಕ್ಷದ ಯುವ ನಾಯಕರ ಜನಪರ ಚಟುವಟಿಕೆಗಳನ್ನು ನೋಡಿದಾಗ ಸೂರ್ಯ ತಮ್ಮೊಂದಿಗೆ ಯುವ ಬಿಜೆಪಿಯನ್ನೂ ಜನರಿಂದ ದೂರ ಒಯ್ದಿದ್ದಾರೆ ಎನಿಸುತ್ತದೆ.

ದಿ ಪ್ರಿಂಟ್ ಜೊತೆ ಮಾತನಾಡಿದ ಸೂರ್ಯ, ತಮ್ಮನ್ನು ಪ್ರಶ್ನಿಸುವವರು, ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮತ್ತು ಬಿಜೆವೈಎಂನ ಹ್ಯಾಂಡಲ್‌ಗಳನ್ನು ಚೆಕ್ ಮಾಡಬೇಕು ಎಂದು ಹೇಳಿದರು.

ಜನತೆಗೆ ಈಗ ಬೇಕಾಗಿರುವುದು ಜನರ ಸಂಕಷ್ಟಗಳಿಗೆ ನೆರವಾಗುವ ಕೆಲಸವೇ ಹೊರತು ಸೋಷಿಯಲ್ ಮೀಡಿಯಾ ಮೂಲಕ ಉಪದೇಶವಲ್ಲ ಅಲ್ಲವೇ? ಆದರೆ ಸೂರ್ಯ ತಮ್ಮ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರಚೋದನಾಕಾರಿ ಸಾಮಾಜಿಕ ಜಾಲತಾಣಗಳ ಸಂದೇಶಗಳು ಮತ್ತು ಭಾಷಣಗಳಿಂದಲೇ ಅಲ್ಲವೇ?

ತಮಿಳುನಾಡು ಪ್ರಚಾರದಲ್ಲಿ ಅವರು ಡಿಎಂಕೆ ಹಿಂದೂತ್ವ ವಿರೋಧಿ ಪಕ್ಷ ಎಂದು ಏನೆಲ್ಲಾ ಹೇಳುತ್ತ ಪೆರಿಯಾರ್ ನೆಲದಲ್ಲಿ ಹಾಸ್ಯಾಸ್ಪದರಾದರು. ಮತ್ತೆ ಅಲ್ಲಿ ಅವರು ಕಾಣಿಸಿಕೊಳ್ಳಲೇ ಇಲ್ಲ. ಹೋಟೆಲ್ ಒಂದರಲ್ಲಿ ತಿಂದು ಬಿಲ್ ಕಟ್ಟಿದೆ ಎಂದು ಅವರು ಹಾಕಿಕೊಂಡ ಪೋಸ್ಟ್ ಕೂಡ ಅವರಿಗೆ ತಿರುಗುಬಾಣವಾಗಿತ್ತು. ಹೋಟೆಲ್ ಮಾಲೀಕರು ಫೇಸ್‌ಬುಕ್‌ನಲ್ಲಿ ತಣ್ಣಗೆ ಸೂರ್ಯನಿಗೆ ತಿರುಗೇಟು ನೀಡಿದ್ದರು.

ದಿಢೀರ್ ಪ್ರಮೋಷನ್: ಪಕ್ಷದಲ್ಲಿ ಅಸಮಾಧಾನ?

ದಿ. ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದೇ ಸೊಷಿಯಲ್ ಮೀಡಿಯಾದಲ್ಲಿ, ಟಿವಿ ಚರ್ಚೆಗಳಲ್ಲಿ ಅಸಂಬದ್ಧವಾಗಿ ವಾದ ಮಾಡುತ್ತಿದ್ದ ತೇಜಸ್ವಿ ಸೂರ್ಯ ಬಿಜೆಪಿಯ ಕೂಗುಮಾರಿ ನಾಯಕರಿಗೆ ಇಷ್ಟವಾದ ಕಾರಣ ಟಿಕೆಟ್ ಅವರಿಗೇ ಸಿಕ್ಕಿತು. ಆಗಲೇ ಅವರ ವಿರುದ್ಧ ಅಸಮಾಧಾನ ಹೊರಬಿದ್ದಿತ್ತು. ಆದರೆ ಗೆದ್ದ ನಂತರ ಅದು ತಣ್ಣಗಾಗಿತು.

ತನ್ನ ಕ್ಷೇತ್ರದ ವ್ಯಾಪ್ತಿಗೆ ಬರದ ಯಲಹಂಕದಲ್ಲಿ ನಡೆದ ಏರೋ-ಶೋದಲ್ಲಿ ಹಾಜರಾಗಿ ರಕ್ಷಣಾ ಜೆಟ್ ಒಂದರಲ್ಲಿ ಮಜಾ ಮಾಡಿದ್ದು ಅವರ ಪಕ್ಷದ ಹಿರಿಯರಲ್ಲೇ ಅಸಮಾಧಾನ ಮೂಡಿಸಿದ್ದನ್ನು ನಾನುಗೌರಿ.ಕಾಂನಲ್ಲಿ ಬರೆದಿದ್ದೆವು.

ಬಂಗಾಳ ಮತ್ತು ತಮಿಳುನಾಡು ಚುನಾವಣಾ ಪ್ರಚಾರಗಳಿಗೆ ಆತನನ್ನು ಕಳಿಸಿದ್ದು ಹಲವರಲ್ಲಿ ಮತ್ತೆ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕಾರಣಕ್ಕೇ ಪಕ್ಷವು ಸುಮ್ಮನಿರಲು ಹೇಳಿದೆಯೇ ಎಂಬ ಪ್ರಿಂಟ್ ಪ್ರಶ್ನೆಗೆ ಆ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ. “ಇಂದಿನವರೆಗೂ, ನಾನು ಹೇಳಿದ್ದು ಸರಿ ಅಥವಾ ತಪ್ಪು ಎಂದು ಪಕ್ಷವು ಒಮ್ಮೆಯೂ ಹೇಳಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಶಾಸಕಾಂಗೀಯ ಕಾರ್ಯಗಳಲ್ಲಿ ನಿರತನಾಗಿದ್ದೇನೆ. ಅಲ್ಲದೆ, ಪಕ್ಷದಲ್ಲಿ ಮಾತನಾಡಲು ಮತ್ತು ಬದಲಾವಣೆಗಳ ಮೇಲೆ ಪರಿಣಾಮ ಬೀರಲು ನನಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ, ಆದ್ದರಿಂದ ನಾನು ಹೊರಗಡೆ ಕಡಿಮೆ ಮಾತನಾಡಬೇಕಾಗಿದೆ” ಎಂದಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡುವಾಗ, ಎರಡನೇ ಅಲೆಯು ವಿಶ್ವದ ಇತರ ಭಾಗಗಳನ್ನು ತೀವ್ರವಾಗಿ ಕಾಡಿದೆ ಎಂದು ಸೂರ್ಯ ಹೇಳಿದರು.

ಏಪ್ರಿಲ್ 18 ರಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದ ಮೇರೆಗೆ ಸೂರ್ಯ ಮುಖ್ಯಸ್ಥರಾಗಿರುವ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಎಲ್ಲಾ ರಾಜ್ಯ ಘಟಕಗಳು ಮತ್ತು ಮೋರ್ಚಾಗಳನ್ನು “ಯಾವುದೇ ವಿಳಂಬವಿಲ್ಲದೆ ಕೊರೊನಾದ ವಿರುದ್ಧ ತಮ್ಮ ಅಭಿಯಾನ ಮತ್ತು ಉಪಕ್ರಮಗಳನ್ನು ತಕ್ಷಣ ಪ್ರಾರಂಭಿಸಬೇಕು” ಎಂದು ಸೂಚಿಸಲಾಗಿದೆ.
ಬಿಜೆವೈಎಂ ಸಾಮಾಜಿಕ ಮಾಧ್ಯಮದಲ್ಲಿ #BJYMDoctorHelpline ಅನ್ನು ಬುಧವಾರ ಪ್ರಾರಂಭಿಸಿದಾಗಲೂ, ಅದನ್ನು ಉದ್ಘಾಟಿಸಿದವರು ನಡ್ಡಾರವರೇ ಹೊರತು ಸೂರ್ಯ ಅಲ್ಲ.

ಹೆಸರು ಹೇಳಲು ಇಚ್ಛಿಸದ ಬಿಜೆಪಿಯ ಪ್ರಮುಖ ಕಾರ್ಯಕರ್ತರೊಬ್ಬರು, ಕೋವಿಡ್ ಸಂದರ್ಭದಲ್ಲಿ ತಮ್ಮ ಪಕ್ಷ ಮತ್ತು ಯುವ ವಿಭಾಗವು ಈ ಲೆಕ್ಕದಲ್ಲಿ ಪ್ರತಿಪಕ್ಷಗಳ ಎದುರು ಸೋತಿದೆ ಎಂದು ಪ್ರಿಂಟ್ ಎದುರು ಒಪ್ಪಿಕೊಂಡಿದ್ದಾರೆ.

“ನಾವು ನಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು ಮೊದಲೇ ಪ್ರಾರಂಭಿಸಬೇಕಾಗಿತ್ತು. ಪ್ರತಿಪಕ್ಷಗಳು, ವಿಶೇಷವಾಗಿ ಯುವ ಕಾಂಗ್ರೆಸ್‌ನ ಶ್ರೀನಿವಾಸ್, ಮೊದಲೇ ಸಹಾಯ ಮಾಡಲು ಪ್ರಾರಂಭಿಸಿದರು ಮತ್ತು ಅದರಿಂದ ಅವರು ಜನರ ಒಲವು ಗಳಿಸಿದರು” ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ನಾಯಕರೊಬ್ಬರು ಪ್ರಿಂಟ್ ಜೊತೆ ಮಾತನಾಡಿ, ಸೂರ್ಯ ಅವರು ಮಾಧ್ಯಮಗಳಲ್ಲಿ ಹೆಸರಾಗಿರಬಹುದು. ಆದರೆ ಪಶ್ಚಿಮ ಬಂಗಾಳದ ಜನರಿಗೆ, ಅವರು ವಿಷಯವೇ ಅಲ್ಲ. ಅವರು ಅಕ್ಟೋಬರ್‌ನಲ್ಲಿ ದೊಡ್ಡ ರ‍್ಯಾಲಿ ನಡೆಸಿದ್ದರು, ಅವರು ಯುವ ವಿಭಾಗದ ಅಧ್ಯಕ್ಷರಾಗಿದ್ದರಿಂದ ಅದು ಮುಖ್ಯವಾಗಿತ್ತು. ಈ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ, ಅವರು ಬಂದು ಕೆಲವು ಸಣ್ಣ ಕಾರ್ನರ್ ಮೀಟಿಂಗ್‌ಗಳನ್ನು ಮಾಡಿದರು, ಅದರಿಂದ ಏನೋನೂ ಉಪಯೋಗವಿಲ್ಲ’ ಎಂದಿದ್ದಾರೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಅಸ್ಸಾಮಿನಲ್ಲಿ ತೇಜಸ್ವಿ ಸೂರ್ಯ ಮಾಡಿದ ಭಾಷಣಗಳು ಬಿಜೆಪಿಯ ಭವಿಷ್ಯವನ್ನು ಘಾಸಿಗೊಳಿಸುತ್ತವೆ ಎಂದು ಪಕ್ಷದ ಅನೇಕ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ದಿ ಪ್ರಿಂಟ್ ಬರೆದಿದೆ.

“ಅವರು ತಮಿಳುನಾಡಿನಲ್ಲಿ ಸ್ಟಾರ್ ಪ್ರಚಾರಕರಾಗಿದ್ದರು. ಆದರೆ ಅವರ ರ‍್ಯಾಲಿಗಳಿಗೆ ಹೆಚ್ಚಿನ ಜನರೇ ಇರಲಿಲ್ಲ’ ಎಂದು ತಮಿಳುನಾಡಿನ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here