Homeಕರ್ನಾಟಕಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಒಂದು ಆರೋಗ್ಯಪೂರ್ಣ ಸಂವಾದ

ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಒಂದು ಆರೋಗ್ಯಪೂರ್ಣ ಸಂವಾದ

- Advertisement -
- Advertisement -

ಕಳೆದೊಂದು ವಾರದಿಂದ ಯುವ ಬರಹಗಾರರು ಫೇಸ್ ಬುಕ್ ನಲ್ಲಿ ಪ್ರಶಸ್ತಿಗಾಗಿ ಬರಹ: ಬೇಕೊ, ಬೇಡವೋ ಎಂಬುದರ ಕುರಿತು ಆರೋಗ್ಯಪೂರ್ಣ ಸಂವಾದವೊಂದನ್ನು ನಡೆಸುತ್ತಿದ್ದಾರೆ. ಹಲವು ಆಯಾಮಗಳಿಂದ ಬಂದಿರುವ ಪ್ರತಿಕ್ರಿಯೆಗಳು ಕುತೂಹಲಕಾರಿಯಾಗಿವೆ ಮತ್ತು ಅವರವರ ನೆಲೆಗಳಿಂದ ಸಮಂಜಸವಾಗಿವೆ. ಆಯ್ದ ಕೆಲವನ್ನು ಒಟ್ಟಿಗೆ ಓದಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಯಾವುದೇ ಬರಹವನ್ನು ಸ್ಪರ್ಧೆಗಾಗಿ ಬರೆಯದೆ, ಪ್ರಕಟಿತ ಪುಸ್ತಕಗಳನ್ನು ಯಾವುದೇ ಪ್ರಶಸ್ತಿಗೆ ಕಳಿಸದೆ, ಪುಸ್ತಕ ಪ್ರಕಟಿಸಿದ ಪ್ರಕಾಶಕರಿಗೂ ಯಾವ ಪ್ರಶಸ್ತಿಗೂ ಪುಸ್ತಕ ಕಳಿಸಬೇಡಿ ಎಂದು ಹೇಳಿ, ಮತ್ಯಾರದೋ ಶಿಫಾರಸ್ಸಿನ ಆಧಾರದ ಮೇಲೆ ನಮಗೆ ಪ್ರಶಸ್ತಿ ಕೊಡುವ ಪ್ರಸ್ತಾಪ ಬಂದಾಗ ಅವರ ಅಭಿಮಾನವನ್ನು ಗೌರವಿಸುತ್ತಲೇ..ಯಾವುದೇ ಪ್ರಶಸ್ತಿಗೆ ನಾನು ಬರೆದಿಲ್ಲ ಎಂದು ನಯವಾಗಿ ಪ್ರಶಸ್ತಿಗಳನ್ನು ನಿರಾಕರಿಸುತ್ತಾ ಬರೆಯಲು ಸಾಧ್ಯವೇ..??

ಅಂತದ್ದೊಂದು ಅಭಿಯಾನಕ್ಕೆ ಎಷ್ಟು ಜನ ಬರಹಗಾರ್ತಿ/ಗಾರರು ಜೊತೆಯಾಗಬಹುದು…

#ಜಸ್ಟ್ #ಕುತೂಹಲಕ್ಕೆ
#ಪ್ರಶಸ್ತಿಗಳ
#ನೆಲೆನಿಲುವುಗಳ
#ಸ್ಪಷ್ಟತೆ

ಪ್ರಶಸ್ತಿ ಕುರಿತ ನನ್ನ ಸ್ಟೇಟಸ್ ಗೆ ಪಾಸಿಟಿವ್  ನೆಗೆಟಿವ್ ಎರಡೂ ಬಗೆಯ ಅಭಿಪ್ರಾಯಗಳು ಸಹಜವಾಗಿ ಬಂದಿವೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟನೆ ಕೊಡುವುದು ಉಚಿತ. ಬೆಜವಾಡ ವಿಲ್ಸನ್ ಅವರಿಗೆ ಮೆಗ್ಸೆಸೆ ಪ್ರಶಸ್ತಿ ಕೊಡಲು ತೀರ್ಮಾನಿಸಿದ ಸಂಸ್ಥೆ ಬೆಜವಾಡರನ್ನು ಸಂಪರ್ಕಿಸುತ್ತೆ. ಆಗ ಬೆಜವಾಡ  ಈ ಪ್ರಶಸ್ತಿಯನ್ನು ತಗೋಬೇಕೋ ಬೇಡವೋ ಎಂದು ತೀರ್ಮಾನಿಸಲು ಸ್ವಲ್ಪ ದಿನ ಸಮಯಾವಕಾಶ ಕೇಳುತ್ತಾರೆ. ನಂತರ ತಮ್ಮ ಒಡನಾಡಿ ಸಂಗಾತಿಗಳ ಜತೆ ಈ ಬಗ್ಗೆ ಚರ್ಚೆ ಮಾಡುತ್ತಾರೆ. ಕೊನೆಗೆ ಈ ಪ್ರಶಸ್ತಿಯಿಂದ ಸಿಗುವ ಜನಪ್ರಿಯತೆ ಮತ್ತು ಹಣವನ್ನು ಅವರು ಸಫಾಯಿ ಕರ್ಮಚಾರಿ ಹೋರಾಟಕ್ಕೆ ನೆರವಾಗಬಹುದೆಂದೂ, ಅಲಕ್ಷಿತವಾದ ವಿಷಯ ಮೇನ್ ಸ್ಟ್ರೀಮ್ ಚರ್ಚೆಗೆ ಬರುತ್ತದೆಂದು ತೀರ್ಮಾನಿಸಿ ನಂತರ ಮೆಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.

ಅವರು ಅಂದುಕೊಂಡಂತೆ ಈ ಪ್ರಶಸ್ತಿ ಅವರ ಹೋರಾಟವನ್ನು ವಿಸ್ತರಿಸಲು ನೆರವಾಗುತ್ತದೆ. ಆ ತನಕ ಸ್ವತಃ ಕರ್ನಾಟಕದವರೆ ಆದ ಬೆಜವಾಡ ಅವರು ಕರ್ನಾಟಕದ  ಚಳವಳಿಗಾರರಿಗೆ ಚಿಂತಕರಿಗೆ ಅಪರಿಚಿತರಂತಿದ್ದವರು ಮೆಗ್ಸೆಸೆ ಅವಾರ್ಡ್ ಬಂದಂದಿನಿಂದ ಬಹುಶಃ ಅವರ ಕರ್ನಾಟಕದ ಪ್ರವಾಸ ಹೆಚ್ಚಾಗಿದೆ. ದೇಶವ್ಯಾಪಿ ಸಫಾಯಿ ಕರ್ಮಚಾರಿ ಹೋರಾಟಕ್ಕೆ ಒಂದು ಜನಾಭಿಪ್ರಾಯ ರೂಪಿಸಲು ಈ ಮ್ಯಾಗ್ಸಸೆ ಪ್ರಶಸ್ತಿ ನೆರವಾಗಿದೆ. ಅಂತೆಯೇ ಕಷ್ಟದಲ್ಲಿದ್ದ ಮರಿಯಮ್ಮನಹಳ್ಳಿ ನಾಗರತ್ಮಮ್ಮನಿಗೆ ವಾಲ್ಮೀಕಿ ಪ್ರಶಸ್ತಿ ಬಂದಾಗ ನಿಜಕ್ಕೂ ಆ ಹಣ ಅವರ ಬದುಕಿಗೆ ತುಂಬಾ ನೆರವಾಯಿತು.

ಹೀಗೆ ಜಾನಪದ ಕಲಾವಿದರಿಗೆ, ಅಲಕ್ಷಿತರಿಗೆ  ದುರ್ಬಲರಿಗೆ ಕೊಡುವ ಪ್ರಶಸ್ತಿಗಳ ಹಣ ಅವರ ಬದುಕಿಗೆ ಖಂಡಿತಾ ನೆರವಾಗುತ್ತದೆ., ಅಂತೆಯೇ ಪ್ರಶಸ್ತಿಯ ಗೌರವವನ್ನು ಸ್ವೀಕರಿಸಿ ಅದರ ಹಣವನ್ನು ಪ್ರಾಮಾಣಿಕವಾಗಿ ಹೋರಾಟ ಚಳವಳಿ ಮಾಡುವ ಸಂಗಾತಿಗಳಿಗೆ ಕೊಡುವ ಒಂದು ಗುಂಪಿದೆ. ಹೀಗೆ ಪ್ರಶಸ್ತಿ ವಯಕ್ತಿಕ ನೆಲೆಯಲ್ಲಿಯೂ, ಸಾಮಾಜಿಕ ನೆಲೆಯಲ್ಲಿಯೂ ಅದರಿಂದಾಗಿ ನೆರವಾಗುವಂತಿದ್ದರೆ, ಆ ನೆರವಿನ ಅಗತ್ಯವಿದ್ದವರು ಖಂಡಿತಾ ಪ್ರಶಸ್ತಿ ಸ್ವೀಕರಿಸುವುದು ಸರಿ. ಈ ಎರಡೂ ಆಯಾಮಗಳಿಲ್ಲದವರು ತಮ್ಮ ಕಲೆ, ಬರಹ, ಪ್ರತಿಭೆಯನ್ನು ಪ್ರಶಸ್ತಿಗಳಿಗೆ ಮಾನದಂಡಗಳನ್ನಾಗಿ ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.

ಎಂ.ಎಂ.ಕಲಬುರ್ಗಿಯವರ ಕೊಲೆಯ ತನಿಕೆಯ ವಿಳಂಬ ವಿರೋಧಿಸಿ ಪ್ರಶಸ್ತಿ ವಾಪಸಾತಿ ಚಳವಳಿಯಲ್ಲಿ ನನಗೆ ಬಂದಿದ್ದ  ಕ.ಸಾ.ಪ ದ ಅರಳು ಪ್ರಶಸ್ತಿಯನ್ನು ಮರಳಿಸಿದ್ದೆ. ಅಲ್ಲಿಂದ ಈತನಕ ನನ್ನೊಳಗೇ ಪ್ರಶಸ್ತಿಗಳ ತೆಗೆದುಕೊಳ್ಳುವ ಸರಿ ತಪ್ಪುಗಳ ಬಗೆಗೆ ಒಂದು ಯೋಚನೆ ಆಗಾಗ ಕೊರೆಯುತ್ತಿತ್ತು. ಇದೀಗ ಒಂದು ಸ್ಪಷ್ಟತೆಗೆ ಬಂದಿರುವೆ. ಮುಂದೆಂದಾದರೂ ಪ್ರಶಸ್ತಿಯ ಗೌರವ ವಯಕ್ತಿಕವಾಗಿ ನನಗೂ.. ಪರೋಕ್ಷವಾಗಿ ಸಮಾಜಕ್ಕೂ.. ಒಳಿತಾಗುವಂತಿದ್ದರೆ, ಮತ್ತು ಆ ನೆಪದಲ್ಲಿ ಸಿಗುವ ಹಣದ ಅಗತ್ಯ ನನ್ನ ಬದುಕಿಗೆ ಇದೆ ಅನ್ನಿಸಿದ ಅನಿವಾರ್ಯ ಸಂದರ್ಭ ಬಂದೊದಗುವ ತನಕ ಬರಹವನ್ನು ಯಾವುದೇ ಪ್ರಶಸ್ತಿಯ ಮಾನದಂಡಕ್ಕೆ ಸಿಕ್ಕಿಸಬಾರದು ಅನ್ನಿಸಿದೆ. ಇದೊಂದು ತೀರಾ ಖಾಸಗಿಯಾದ ನನ್ನ ವಯಕ್ತಿಕ ನಿಲುವು. ಯಾರನ್ನು ಮೆಚ್ಚಿಸುವ ಅಥವಾ ಪ್ರಶಸ್ತಿ ಸ್ವೀಕರಿಸುವವರನ್ನು ಅವಮಾನಿಸುವ ಉದ್ದೇಶ ಖಂಡಿತಾ ನನಗಿಲ್ಲ. ಅವರವರ ನಿಲುವು ತಿಳಿವುಗಳನ್ನು ಗೌರವಿಸುವೆ. ಈ ನಿಲುವು ತೆಗೆದುಕೊಳ್ಳುವಲ್ಲಿ ಪರೋಕ್ಷವಾಗಿ Peer Bavaji (ಬಿ. ಪೀರ್ ಭಾಷಾ) ಅವರ ಪ್ರಭಾವವಿದೆ.

ಈ ನಿಲುವನ್ನು ಸಾರ್ವಜನಿಕಗೊಳಿಸುವ ಬಗ್ಗೆ ಇದೂ ಪ್ರಚಾರವಲ್ಲವೇ ಎನ್ನುವ ಅರ್ಥದಲ್ಲಿ ಹಿಂದೊಮ್ಮೆ Humchadakatte Akshatha (ಅಕ್ಷತಾ ಹುಂಚದಕಟ್ಟೆ) ಹೇಳಿದ್ದರು. ಇಂತಹದ್ದೊಂದು ನಿಲುವು ಸಾರ್ವಜನಿಕ ಚರ್ಚೆಗೆ ಬರುವ ಅಗತ್ಯವಿದೆ ಅನ್ನಿಸಿತು. ಇಂತಹದ್ದೇ ಆಲೋಚನೆ ಇರುವವರಾದರೂ ಜೊತೆಯಾಗಲಿ ಎನ್ನುವ ಉದ್ದೇಶದಿಂದ ಈ ನಿಲುವನ್ನು ಸಾರ್ವಜನಿಕ ಚರ್ಚೆಗೆ ತರಲಾಯಿತು. ಹಾಗಾಗಿ ಅನ್ಯಥಾ ಭಾವಿಸಬಾರದು. ಇದನ್ನು ಎಲ್ಲರೂ ಒಪ್ಪಬೇಕೆಂದಾಗಲಿ, ಒಪ್ಪದೆ ಇರುವವರು ಪ್ರಶಸ್ತಿಯ ಆಸೆಯನ್ನಿಟ್ಟುಕೊಂಡಿದ್ದಾರೆ ಎನ್ನುವುದಾಗಲಿ ಎರಡೂ ಬಾಲಿಷವೆ. ಕಾರಣ ಹಿಂದೆ ನಾನು ಸ್ಪರ್ಧೆಗೆ ಬರೆದು ಪ್ರಶಸ್ತಿ ತೆಗೆದುಕೊಂಡಿರುವೆ. ಸಂಡೂರು ಭೂಹೋರಾಟ ಪುಸ್ತಕಕ್ಕೆ ಪ್ರಶಸ್ತಿಯನ್ನೂ ಪಡೆದಿರುವೆ. ಹಾಗಾಗಿ ಇದು ದಿಢೀರ್ ನಿಲುವು ಖಂಡಿತಾ ಅಲ್ಲ.  ಅನ್ಯರಿಗೆ ಇದು ಸರಿಯೋ ತಪ್ಪೋ ಆಗಿ ಕಾಣಬಹುದು. ಆದರೆ ನಾನಿಲ್ಲಿ ನನ್ನ ಖಚಿತ ನಿಲುವನ್ನು ಹಂಚಿಕೊಂಡಿರುವೆ.

ಮೇಲಿನ ಇವಿಷ್ಟು ಪೋಸ್ಟ್ ಗಳು ಸಂವಾದವನ್ನು ಆರಂಭಿಸಿದ ಅರುಣ್ ಜೋಳದ ಕೂಡ್ಲಿಗಿಯವರದ್ದಾಗಿವೆ.

ಪ್ರಶಸ್ತಿಯ ಥ್ರಿಲ್ ಇಲ್ಲಿನ ಗುಡ್ಡಗಾಡು ಮತ್ತು ತಳಸಮುದಾಯಗಳ ಹುಡುಗ ಹುಡುಗಿಯರ ಬರೆಹಗಳಿಗೆ ಸಿಗಬೇಕು…ಅದರಿಂದ ಸ್ಫೂರ್ತಿಗೊಂಡ ಅವರು ಮತ್ತಷ್ಟು ಮಗದಷ್ಟು ಬರೀಬೇಕು…ಅವರು ಕಂಡುಂಡ  ಲೋಕದ ಅನಾವರಣ ಆಗಬೇಕು….ಆಮೇಲೆ ಅವರೆ ಸಾಕಪ್ಪ ಇನ್ನು ಪ್ರಶಸ್ತಿ…ನಮ್ಮಲ್ಲಿ ನೂರಾರು ಲೇಖಕರಿಗೆ ಬಂದು ಬಿಟ್ಟದೆ ಇದರಲ್ಲೇನೂ ವಿಶೇಷವಿಲ್ಲ ಎನ್ನಬೇಕು….. ಇಷ್ಟು ಸದ್ಯಕ್ಕೆ…ಇನ್ನೂ ಸ್ವಲ್ಪ ಉಳ್ಕಂಡಿದೆ…. ಮುಂದೆ ಹೇಳಕೆ ಆದಾಗ ಹೇಳುವೆ… ಎಂದು ಅಕ್ಷತಾ ಹುಂಚದಕಟ್ಟೆ ಕಮೆಂಟ್ ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಪ್ರಶಸ್ತಿಗಾಗಿ ಬರೀಬಾರದು ನಿಜ.. ಆದರೆ ನಾವು ಬರೆದದ್ದಕ್ಕೆ ಪ್ರಶಸ್ತಿಯಿಂದ ಮೌಲ್ಯ ಹಾಗೂ ಐಡೆಂಟಿಟಿ ಸಿಗುತ್ತದೆ ಎಂದಾದರೆ ಪ್ರಶಸ್ತಿಗಾಗಿ ಪುಸ್ತಕಗಳನ್ನು ಕಳಿಸಬೇಕು. ಇಲ್ಲದೇ ಹೋದರೆ ಕಳಪೆ ಬರೆಯುವುವವರೇ ಸಮಾಜದಲ್ಲಿ ಸಾಹಿತಿಗಳಾಗಿ ಐಡೆಂಟಿಟಿ ಪಡೆದು ಬೂಸಾ ಸಾಹಿತ್ಯದ ಹೆಚ್ಚಳಕ್ಕೆ ನಾವೂ ಕಾರಣವಾಗುತ್ತೇವೆ… ನಾವು ಒಪ್ಪದಿರಬಹುದು ಆದರೆ ಪ್ರಶಸ್ತಿಗಳ ಮೂಲಕ ಸಾಹಿತಿಯನ್ನು, ಸಾಹಿತ್ಯವನ್ನು ಅಳೆಯುವ ಮೌಲ್ಯ ವ್ಯವಸ್ಥೆ ಈಗಾಗಲೇ ರೂಪಿತವಾಗಿದೆ. ಇದನ್ನು ದಿಡೀರ್ ನಿರಾಕರಿಸಿ ಹೊಸ ಮೌಲ್ಯ ವ್ಯವಸ್ಥೆ ರೂಪಿಸಿ ಬಿಡಲಾಗದು.

ಹಾಗಂತ ಪ್ರಶಸ್ತಿಗಾಗಿ ಮಾಡಬಾರದ ಅನಾಚಾರ, ಭ್ರಷ್ಟಾಚಾರವನ್ನು ಮಾಡಬೇಕಿಲ್ಲ… ಆಯ್ಕೆ ಸಮಿತಿಗಳಲ್ಲಿ ಗುಣಮಟ್ಟಕ್ಕೆ ಬೆಲೆ ನೀಡುವವರು ಇದ್ದರೂ ಇರಬಹುದು ಎಂಬ ಆಶಯವಿದ್ದರೆ ಸಾಕು…

ಇನ್ನು ಅರುಣ ಹೇಳುವ “ಕಮ್ಯುನಿಸಂ” ಸಧ್ಯ ಕ್ರೋನಿ ಕ್ಯಾಪಿಟಲಿಸಂ ಕಾಲಘಟ್ಟದಲ್ಲಿ ಬಹಳ ದೂರದ ಮಾತು….. ಇದಕ್ಕಾಗಿ ಬಹಳ ಸೈಕಲ್ ಹೊಡೆಯೋದಿದೆ. ಎಂದು ಹರ್ಷಕುಮಾರ್ ಕುಗ್ವೆ ಪ್ರತಿಕ್ರಿಯೆ ನೀಡಿದ್ದಾರೆ.

Arun Joladkudligi ಅವರ ಪ್ರಶಸ್ತಿ ನಿರಾಕರಿಸುತ್ತಾ ಬರೆಯಲು ಸಾಧ್ಯವೇ? ಎಂಬ ಅಭಿಯಾನದಲ್ಲಿ #ನಾನು ಇದ್ದೇನೆ ಎಂಬುದಾಗಿ ಅವತ್ತು ಉತ್ಸಾಹದಲ್ಲಿ ಕಾಮೆಂಟಿಸಿದೆ.

ಇವತ್ತು ಪತ್ರಿಕೆಯಲ್ಲಿ ಮುದ್ದಣ ಕಾವ್ಯಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದ್ದನ್ನು ಓದಿದ ಮೇಲೆ ಅವತ್ತಿನ ನನ್ನ ಪ್ರತಿಕ್ರಿಯೆ ಆತುರದ್ದು ಅನಿಸಿತು.

ಯಾಕೆಂದರೆ,
ಪ್ರಶಸ್ತಿಗಳನ್ನ ಪಡೆದು ಸಾಹಿತಿಯ ಪಟ್ಟವನ್ನೇರಿದ ಗುಂಪುಗಳಾಚೆಗೆ ನಾನೂ ಸಾಹಿತಿ ಅನ್ನಿಸಿಕೊಳ್ಳಬೇಕಾದರೆ ಯಾವುದಾದರೂ ಪ್ರಶಸ್ತಿ ಪಡೆದ ಬೋರ್ಡ್ ತಗಲಾಕಂಡಿರ್ಬೇಕು. ನನ್ನ ಗೆಳೆಯನೊಬ್ಬ ಹದಿನೈದಿಪ್ಪತ್ತು ಪುಸ್ತಕ ಪ್ರಕಟಿಸಿದ್ದಾನೆ. ಆದರೆ ಅವನಿಗೆ ಯಾವುದೇ ರಾಜ್ಯಮಟ್ಟದ ಅಥವಾ ಗುರುತು ಹೇಳಿಕೊಳ್ಳಬಹುದಾದ ಒಂದೂ ಪ್ರಶಸ್ತಿ ಬಾರದೆ ಅಷ್ಟು ಬರೆದರೂ ಸಾಹಿತಿಪಟ್ಟ ಅವನಿಗೆ ಒಲಿದಂತಿಲ್ಲ.

ಕಡೇಪಕ್ಷ ಮುಂದೆ ಯಾವತ್ತಾದರೂ ಪ್ರಶಸ್ತಿ ವಾಪಸಾತಿ ಚಳುವಳಿ ನಡೆದರೆ, ವಾಪಾಸು ಮಾಡಲಿಕ್ಕಾದರೂ ಒಂದು ಪ್ರಶಸ್ತಿ ಬೇಕಲ್ಲ. ಅದಕ್ಕಾಗಿಯಾದರೂ ಒಂದು ಪ್ರಶಸ್ತಿ ಬರಬೇಕು.

ಹೀಗೆ ಯಾಕೆ ಮನಸ್ಸಿಗೆ ಬಂತೆಂದರೆ, ಕನ್ನಡದ ಪ್ರಖ್ಯಾತರೊಬ್ಬರ ಬಳಿ ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಿರಾ? ಎಂದಾಗ ‘ಮುನ್ನುಡಿ ಯಾಕೆ, ಮುನ್ನುಡಿ ಇಲ್ಲದೆಯೆ ಪುಸ್ತಕ ತರಬಾರದು ಅಂತೇನಾದ್ರೂ ಇದೆಯಾ, ನಾನು ಮುನ್ನುಡಿ ಬರೆಯುವುದನ್ನ ನಿಲ್ಲಿಸಬೇಕಂತ ಯೋಚಿಸುತ್ತಿದ್ದೇನೆ’ ಎಂಬ ಹಾರಿಕೆಯ ಉತ್ತರ ನೀಡಿ ನನ್ನ ಪುಸ್ತಕದ ಮುನ್ನುಡಿಯಿಂದ ತಪ್ಪಿಸಿಕೊಂಡರು.

ಆಯ್ತು ಪುಸ್ತಕವೂ ಬಂತು. ಬಿಡುಗಡೆಗೆ ಇನ್ನೊಬ್ಬ ಪ್ರಖ್ಯಾತರು ಪುಸ್ತಕದ ಬಗ್ಗೆ ಮಾತನಾಡಲು ಬಂದಿದ್ದರು. ಕನ್ನಡದ ಬಿಕ್ಕಟ್ಟುಗಳ ಬಗ್ಗೆ ಮಾತಾಡಿದರೆ ಹೊರತು ನನ್ನ ಕತೆಗಳ ಕುರಿತು ಒಂದು ಸಾಲೂ ಮಾತಾಡದೆ “ಅಂದು ಬಿಡುಗಡೆಗೊಳ್ಳುವ ಪುಸ್ತಕದ ಬಗ್ಗೆ” ಮಾತಾಡಿದರಪ್ಪ.

ಪುಸ್ತಕ ಬಿಡುಗಡೆ ಆಯ್ತು. ಪತ್ರಿಕೆಗಳಿಗೆ ವಿಮರ್ಶೆಗೆ ಕಳಿಸಿದರೆ ಎಲ್ಲೂ ಬರದಂತಾಯಿತು. ನನ್ನ ಬಹುತೇಕ ಕತೆಗಳು ಪ್ರಕಟವಾದ ಪ್ರಜಾವಾಣಿಯಲ್ಲೂ ಒಂದು ಸಾಲೂ ಬರಲಿಲ್ಲ.

ಇಷ್ಟೆಲ್ಲ ಆದ ಮೇಲೆ ನನಗೆ ಅನಿಸಿದ್ದು, ನನ್ನ ಬರಹಗಳು ಇವೆಲ್ಲಕ್ಕೂ ಅರ್ಹವಾಗಿಲ್ಲವೇನೋ ಅಂತ. ಹಾಗಾಗಿ ನನಗೆ ಪ್ರಶಸ್ತಿಗಳು ಬರುವುದಿಲ್ಲವೇನೋ ಅಂತ. ಅದಕ್ಕಾಗಿಯೇ ಅವತ್ತು ಅರುಣಣ್ಣನ ಅಭಿಯಾನಕ್ಕೆ #ನಾನು ಅಂತ ಕಾಮೆಂಟಿಸಿದ್ದು. ಪ್ರಶಸ್ತಿಗಳೇ ಬರದಿದ್ದ ಮೇಲೆ ನಿರಾಕರಣೆಯು ಹೆಮ್ಮೆ ಆಗಬಹುದಲ್ವೆ.

ಹಾಗಂತ ಪ್ರಶಸ್ತಿಗೆ ನಾನು ಅರ್ಜಿ ಹಾಕಲೇ ಇಲ್ಲ ಅಂತಲ್ಲ. ಆ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ಸಂಘ ಶಿವಮೊಗ್ಗ, ಕೇಂದ್ರ ಸಾ. ಅಕಾಡೆಮಿ ಯುವ ಪ್ರಶಸ್ತಿ (ವಯೋಮಿತಿ ಮೀರಿದ್ದರೂ ಮೊದಲ ಪುಸ್ತಕ ಅಂತ ಕುಶಿಯಲ್ಲಿ)ಗೆ ಕಳಿಸಿದ್ದೆ.

ಯಾವ ಪ್ರಶಸ್ತಿಯೂ ಬರಲಿಲ್ಲ, ನಂತರ ನನ್ನ ಹೊಸ ಪುಸ್ತಕವೂ ಬರಲಿಲ್ಲ. ಎಂದು ಪ್ರಸಿದ್ದ ರಂಗಕರ್ಮಿ ಮತ್ತು ಶಿಕ್ಷಕರಾದ ಸಂತೋಷ್ ಗುಡ್ಡಿಯಂಗಡಿ ಪೋಸ್ಟ್ ಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...