Homeಕರ್ನಾಟಕಶೆಟ್ಟರ್‌ ನಡೆ ಅಕ್ಷಮ್ಯ ಅಪರಾಧ ಎಂದ ಬಿಎಸ್‌ವೈ; ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದು ಯಾಕೆ?-ಶೆಟ್ಟರ್ ತಿರುಗೇಟು

ಶೆಟ್ಟರ್‌ ನಡೆ ಅಕ್ಷಮ್ಯ ಅಪರಾಧ ಎಂದ ಬಿಎಸ್‌ವೈ; ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದು ಯಾಕೆ?-ಶೆಟ್ಟರ್ ತಿರುಗೇಟು

- Advertisement -
- Advertisement -

”ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ನನ್ನ ಪರವಾಗಿ ಮಾತನಾಡಿದ್ದರು. ಆದರೆ, ಈಗ ಅವರು ನಾನು ಪಕ್ಷ ತೊರೆದಿರುವ ಬಗ್ಗೆ ಅಕ್ಷಮ್ಯ ಅಪರಾಧ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷ ಬಿಡುವುದು ಅಪರಾಧ ಎನ್ನುವುದಾದರೆ, ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದು ಯಾಕೆ? ಆಗ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಿರಲಿಲ್ಲವೇ?” ಎಂದು ಪ್ರಶ್ನೆ ಮಾಡುವ ಮೂಲಕ ಬಿಎಸ್‌ವೈಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜೀನಾಮೆ ನೀಡಿ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡು ಸ್ಪರ್ಧೆ ಮಾಡುವುದು ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಕುರಿತು ನಾನು ಹುಬ್ಬಳ್ಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

”ನನಗೆ ಪಕ್ಷ ಎಲ್ಲ ಸ್ಥಾನಮಾನವನ್ನು ಕೊಟ್ಟರೂ ನಾನು ಪಕ್ಷ ತೊರೆಯುತ್ತಿರುವುದರ ಬಗ್ಗೆ ಯಡಿಯೂರಪ್ಪ ಅವರು ಈ ಮಾತನಾಡುತ್ತಿದ್ದಾರೆ. ಹಾಗಾದರೆ ಈ ಹಿಂದೆ ಬಿ.ಎಸ್.‌ ಯಡಿಯೂರಪ್ಪ ಅವರಿಗೂ ಪಕ್ಷ ಸೂಕ್ತ ಸ್ಥಾನಮಾನವನ್ನು ಕೊಟ್ಟಿತ್ತು. ಆದರೆ, ಅವರು ಯಾಕೆ ಬಿಜೆಪಿ ಬಿಟ್ಟು ಕೆಜೆಪಿಯನ್ನು ಕಟ್ಟಿದರು?” ಎಂದು ಪ್ರಶ್ನೆ ಮಾಡಿದರು.

”ನಾನು ಈ ಹಿಂದೆ ನಿರ್ಧಾರ ಮಾಡಿದಂತೆ ರಾಜೀನಾಮೆ ನೀಡುತ್ತಿದ್ದೇನೆ. ಬಿಜೆಪಿ ನಾಯಕರು ಶನಿವಾರ (ಏ. 15) ನನ್ನನ್ನು ಸಂಪರ್ಕ ಮಾಡಿದ್ದರು. ಆದರೆ, ಅವರು ನನ್ನ ಬೇಡಿಕೆಯನ್ನು ಈಡೇರಿಸುವ ಕೆಲವನ್ನು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.

”ನನಗೆ ಯಾವ ದೊಡ್ಡ ಹುದ್ದೆ ಬೇಡ. ನನಗೆ ಶಾಸಕನಾಗಿ ಕೆಲಸ ಮಾಡುವ ಅವಕಾಶ ಕೊಟ್ಟರೆ ಸಾಕಿತ್ತು. ಪಕ್ಷಕ್ಕೆ ಸಹಕಾರ ಕೊಟ್ಟು ಸಂಘಟನೆ ಮಾಡಿದ್ದೇನೆ. ನನಗೆ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ಮಾಡಿರೋದು ಬೇಸರ ತರಿಸಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಮೂಲವಾಗಿ ಬಿಜೆಪಿಯಲ್ಲಿದ್ದೋರನ್ನು ಹೊರಗಡೆ ಹಾಕಲಾಗುತ್ತಿದೆ. ಇದು ಮಾನಸಿಕವಾಗಿ ಬೇಸರ ತರಿಸಿದೆ” ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಕೊನೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ಘೋಷಣೆ

ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ”ನನಗೆ ಯಾವ ಕಾಂಗ್ರೆಸ್ ನಾಯಕರೂ ಕರೆ ಮಾಡಿಲ್ಲ. ನಾನು ಹುಬ್ಬಳ್ಳಿಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಅಲ್ಲಿಗೆ ಹೋದ ಮೇಲೆ ಹೇಳುತ್ತೇನೆ” ಎಂದು ಶಿರಸಿಯಲ್ಲಿ ಶೆಟ್ಟರ್‌ ಪ್ರತಿಕ್ರಿಯೆ ನೀಡಿದರು.

ಬಿಎಸ್ ಯಡಿಯೂರಪ್ಪ ಹೇಳಿದ್ದೇನು?

”ಭಾರತೀಯ ಜನತಾ ಪಕ್ಷವು ಎಲ್ಲವನ್ನೂ ನೀಡಿದ್ದರೂ ಆ ಋಣವನ್ನು ತೀರಿಸದೆ ಇದೀಗ ಕಾಂಗ್ರೆಸ್‌ಗೆ ಹೊರಟಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ನಡೆ ಅಕ್ಷಮ್ಯ ಅಪರಾಧ” ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ”ಈ ಪಕ್ಷವು ನನಗೆ, ಶೆಟ್ಟರ್‌ ಅವರಿಗೆ, ಲಕ್ಷ್ಮಣ ಸವದಿ ಅವರಿಗೆ ಹಾಗೂ ಈಶ್ವರಪ್ಪ ಅವರಿಗೆ ಅನೇಕ ಅವಕಾಶ ನೀಡಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ರಾಜ್ಯದ ಎಲ್ಲೇ ಹೋದರೂ ವಿಶ್ವಾಸ ಗಳಿಸಲು ಬಿಜೆಪಿಯೇ ಕಾರಣ ಎನ್ನುವುದನ್ನು ನಾನು ಮರೆತಿಲ್ಲ” ಎಂದು ಹೇಳಿದರು.

”ಜಗದೀಶ ಶೆಟ್ಟರ್‌ ಜನಸಂಘದ ಕಾಲದಿಂದ ಬಿಜೆಪಿಯಲ್ಲಿರುವವರು. ವಿರೋಧ ಪಕ್ಷದ ನಾಯಕ, ಮಂತ್ರಿ ಜತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತು. ಬಿಬಿ ಶಿವಪ್ಪ ಅವರನ್ನು ಎದುರು ಹಾಕಿಕೊಂಡು, ಒಬ್ಬ ಯುವಕ ಬೆಳೆಯಬೇಕು ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್‌ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಯಿತು” ಎಂದರು.

”ನಾನು ಹಾಗೂ ಅನಂತಕುಮಾರ್‌, ಅವರ ಬೆನ್ನಿಗೆ ನಿಂತಿದ್ದೆವು. ನಾವೇ ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಿದ್ದೆವು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿರುವ ಸಮಯದಲ್ಲಿ ನಾವು ಅವರೊಂದಿಗೆ ಹೆಜ್ಜೆ ಹಾಕಬೇಕಾಗಿತ್ತು. ಜಗದೀಶ ಶೆಟ್ಟರ್‌ ಅವರ ಹೇಳಿಕೆ ಹಾಗೂ ಅವರ ನಿರ್ಧಾರ, ಅವರು ನಂಬಿಕೊಂಡಿರುವ ವಿಚಾರಕ್ಕೆ ತದ್ವಿರುದ್ಧವಾಗಿದೆ. ಸ್ಥಾನಮಾನ ಸಿಗಲಿ, ಸಿಗದೇ ಇರಲಿ ದೇಶಕ್ಕಾಗಿ ಕೆಲಸ ಮಾಡುವಂತಹದ್ದು ನಾವು ನಡೆದುಕೊಂಡುಬಂದಿರುವ ದಾರಿ. ಜಗದೀಶ್‌ ಶೆಟ್ಟರ್‌ ಅವರನ್ನು ರಾಜ್ಯದ ಜನತೆ ಗುರುತು ಮಾಡಿದ್ದು ಭಾರತೀಯ ಜನತಾ ಪಾರ್ಟಿ ಮೂಲಕ. ಪಕ್ಷವಿಲ್ಲದೆ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...