Homeಮುಖಪುಟ“ಎಷ್ಟು ಸಾಧ್ಯವೋ ಅಷ್ಟು ಕೇಸ್ ಜಡಿದುಬಿಡಿ!” : ಪತ್ರಕರ್ತರ ಮೇಲಿನ ಪ್ರಭುತ್ವದ ದಮನಕ್ಕೆ ಪರಿಹಾರವೇನು?

“ಎಷ್ಟು ಸಾಧ್ಯವೋ ಅಷ್ಟು ಕೇಸ್ ಜಡಿದುಬಿಡಿ!” : ಪತ್ರಕರ್ತರ ಮೇಲಿನ ಪ್ರಭುತ್ವದ ದಮನಕ್ಕೆ ಪರಿಹಾರವೇನು?

ಪತ್ರಕರ್ತರ ಮೇಲಿನ ಬೇಕಾಬಿಟ್ಟಿ ಕೇಸುಗಳು ಪ್ರಭುತ್ವದ ಖಚಿತ ರಣತಂತ್ರವೊಂದರ ಭಾಗ ಎನ್ನುತ್ತಾರೆ ಹಿರಿಯ ಪತ್ರಕರ್ತ ರಾಜರಾಂ ತಲ್ಲೂರು...

- Advertisement -
- Advertisement -

ಕಳೆದ ಹತ್ತು ವರ್ಷಗಳಲ್ಲಿ ಒಂದು ಹೊಸ ಟ್ರೆಂಡ್ ನೀವು ಗಮನಿಸಿದ್ದೀರ? ಗೊತ್ತಿಲ್ಲ?

ಒಬ್ಬ ಪತ್ರಕರ್ತ / ಪತ್ರಿಕೆಯ ಜುಟ್ಟು ಹಿಡಿದು ಅಲ್ಲಾಡಿಸಲು ಬಹಳ ಸರಳ ಹಾದಿ ಎಂದರೆ, ಯಾವುದಾದರೊಂದು ಸುದ್ದಿಯನ್ನು ಮುಂದಿಟ್ಟುಕೊಂಡು, ತಮಗೆ, ತಮ್ಮ ನಂಬಿಕೆಗಳಿಗೆ ಹಾನಿ ಆಗಿದೆ, ಸರ್ಕಾರದ ವಿರುದ್ಧ ಸಂಚು ಎಂದು ಅವರ ಮೇಲೆ ಎಷ್ಟು ಊರುಗಳಲ್ಲಿ ಸಾಧ್ಯವೋ ಅಷ್ಟು ಪ್ರಕರಣ ದಾಖಲಿಸಿಬಿಡುವುದು!

ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ನಿಲುವು ತಳೆದು ಕೊರೊನಾ ಜಗನ್ಮಾರಿಯ ಕುರಿತಾದ ಸುದ್ದಿ ವಿಶ್ಲೇಷಣೆ ಮಾಡಿದ್ದಕ್ಕಾಗಿ ಶಿಮ್ಲಾದಲ್ಲಿ FIR ಹಾಕಿಸಿಕೊಂಡ ವಿನೋದ್ ದುವಾಗೂ ಇದು ಸತ್ಯ, ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಪ್ರತಿನಿಧಿಸುವ ವಾರಾಣಸಿಯಲ್ಲಿ ಕೊರೊನಾ ಕುರಿತ ವರದಿಗಾಗಿ FIR ಹಾಕಿಸಿಕೊಂಡ ಸುಪ್ರಿಯಾ ಶರ್ಮಾಗೂ ಇದು ಸತ್ಯ. ಅವರಿಗೆ ಮಾತ್ರವಲ್ಲ, ಜಗತ್ತಿನ ಹಲವು ಡೆಮಾಕ್ರಸಿಗಳಲ್ಲಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಪ್ರಭುತ್ವಗಳು ಬಳಸುವ ಏಳೆಂಟು ಹತ್ಯಾರುಗಳಲ್ಲಿ ಇದು ಪ್ರಮುಖವಾದದ್ದು.

ಪತ್ರಕರ್ತ ವಿನೋದ್ ದುವಾ

ಜಗತ್ತಿನಾದ್ಯಂತ ಪ್ರಭುತ್ವಗಳು ತಮ್ಮ ಮೂಗಿನ ನೇರಕ್ಕೆ ಸುದ್ದಿಗಳಿಗೆ “ಫ್ಲೇವರ್” ಕೊಡಲು ಬಹಳ ಸುಧಾರಿತ ಎಸೆನ್ಸ್ ಗಳನ್ನು ಬಳಸಲಾರಂಭಿಸಿ, ಈಗ ಒಂದು ದಶಕ ಕಳೆದಿದೆ. ಹಾಗಾಗಿ, ಸುದ್ದಿಯ ಕತ್ತಿನ ಮೇಲೆ ಮೊಣಕಾಲಿಟ್ಟು ಕತ್ತು ಹಿಸುಕುವಕಷ್ಟ ಈಗಿಲ್ಲ. ಅವರು ಹುಡುಕಿಕೊಂಡಿರುವ ಈ ಸುಧಾರಿತ ಹಾದಿ ಬಹಳ ನಯ-ನಾಜೂಕುಗಳದು. ಪ್ರಭುತ್ವ ಎಲ್ಲೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳದಂತೆ ಮರೆಮಾಚುವ ಈ ಹತ್ಯಾರುಗಳು, ಬಹಳ ಸಲೀಸಾಗಿ ಬಳಕೆ ಆಗುತ್ತಿರುವ ಬಗ್ಗೆ ಜಗತ್ತಿನಾದ್ಯಂತ ನೂರಾರು ಉದಾಹರಣೆಗಳನ್ನು ಕೊಡಬಹುದು. ಭಾರತದಲ್ಲಿ ನಮ್ಮ ಕಣ್ಣೆದುರೇ ಅಂತಹ ಬೆಳವಣಿಗೆಗಳು ಪ್ರತಿದಿನ ನಡೆಯುತ್ತಿವೆ. ಅಧಿಕಾರಕ್ಕೆ ಬರಲಿಚ್ಛಿಸುವ ಅಥವಾ ಅಧಿಕಾರಕ್ಕೇರಿದ ರಾಜಕೀಯ ನಾಯಕರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಇಂದು ಜಗತ್ತಿನಾದ್ಯಂತ ಅನುಸರಿಸುತ್ತಿರುವ ಹಾದಿ ಇದು.

ಈ ತಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗಮನಿಸೋಣ: ಮಾಧ್ಯಮಗಳಲ್ಲಿ ಯಾರು ತಮ್ಮ ಪರ ನಿಲ್ಲಬಲ್ಲರು ಎಂಬುದನ್ನು ಗುರುತಿಸುವುದು ಮತ್ತು ನಿಷ್ಪಕ್ಷವಾಗಿವೆ ಎನ್ನಿಸಿದ ಮಾಧ್ಯಮಗಳನ್ನು ತಮ್ಮ ಕಾರ್ಪೋರೇಟ್ ಕ್ರೋನಿಗಳ ಮೂಲಕ ಖರೀದಿಸಿ, ಅಲ್ಲಿರುವ ನಿಷ್ಪಕ್ಷ ಶಕ್ತಿಗಳನ್ನು ಹೊರಗಟ್ಟುವುದು ಮೊದಲ ಹೆಜ್ಜೆ.

ಆ ಬಳಿಕದ ಎರಡನೆಯ ಹೆಜ್ಜೆ ಮತ್ತೂ ಸರಳ: ಯಾರು ಮಿತ್ರರು – ಯಾರು ಶತ್ರುಗಳು ಎಂಬ ಖಚಿತಪಟ್ಟಿ ಸಿಕ್ಕ ಬಳಿಕ, ಸರ್ಕಾರಕ್ಕೆ ಮಾಧ್ಯಮವನ್ನು ನಿಭಾಯಿಸುವುದು ಬಹಳ ಸುಲಭ.

ಮಿತ್ರ ಮಾಧ್ಯಮಗಳಿಗೆ:

1. ಸರ್ಕಾರಿ ಮತ್ತು ಸರ್ಕಾರ ಪರ ಕಾರ್ಪೋರೇಟ್ ಜಾಹೀರಾತುಗಳ ಮೂಲಕ ಸಂತುಷ್ಟ ಪಡಿಸುವುದು.

2. ಅಧಿಕೃತ-ಅನಧಿಕೃತ ಆರ್ಥಿಕ ಬೆಂಬಲ.

3. ಸರ್ಕಾರದ ಆಯಕಟ್ಟಿನ ಮಾಹಿತಿಗಳನ್ನು ಅವರ ಮೂಲಕವೇ ಬಹಿರಂಗಪಡಿಸುವುದು (ನಮ್ಮಲ್ಲಿ ಸರ್ಜಿಕಲ್ ಸ್ಟ್ರೈಕ್ ಗಳ ವರದಿ-ಕ್ಲಿಪ್ಪಿಂಗ್ ಗಳು ಮೊದಲು ಯಾರಿಗೆ ಸಿಕ್ಕವೆಂಬುದನ್ನು ನೆನಪಿಸಿಕೊಳ್ಳಿ).

4. ಕಾನೂನು ಅನುಷ್ಠಾನ- ಲೈಸನ್ಸಿಂಗ್ ನಿರ್ಧಾರಗಳಿಗೆ ಸಂಬಂಧಿಸಿ ತಮ್ಮ ಜೊತೆಗಿರುವವರ ಪರವಾಗಿ ನಿಲುವು ತಳೆಯುವುದು.
ಹೀಗಾದಾಗ ಆ ಮಾಧ್ಯಮಗಳು ಸಹಜವಾಗಿಯೇ ತಮ್ಮ ಓದುಗರ ಬದಲು ಸರ್ಕಾರದ ಪರ ವಕ್ತಾರಿಕೆ ಮಾಡತೊಡಗುತ್ತವೆ. ಬಗ್ಗಿ ಎಂದಲ್ಲಿ ತೆವಳಲಾರಂಭಿಸುತ್ತವೆ.

ಶತ್ರು ಮಾಧ್ಯಮಗಳಿಗೆ:

1. ವೈಯಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ನ್ಯಾಯಾಲಯಗಳನ್ನು ಎಡತಾಕುವಂತೆಮಾಡಿ, ಸಮಯ, ಶ್ರಮ, ದುಡ್ಡು ಎಲ್ಲವೂ ಅತ್ತ ಸುರಿಯಬೇಕಾಗುವಂತೆ ನೋಡಿಕೊಳ್ಳುವುದು.

2. ತೆರಿಗೆ ಸಂಬಂಧಿ – ದಾಖಲೆಗಳಿಗೆ ಸಂಬಂಧಿ ಕ್ಯಾತೆ ತೆಗೆದು ತನಿಖೆಗಳನ್ನು ಆರಂಭಿಸುವುದು.

3. ಕಾನೂನುಗಳ ಅನುಷ್ಠಾನ- ಲೈಸನ್ಸಿಂಗ್ ಪ್ರಕ್ರಿಯೆಗಳಲ್ಲಿ ಅನಗತ್ಯ ಅಲೆದಾಡಿಸುವುದು.

4. ಬೆದರಿಕೆಗಳು, ಪ್ರಾಕ್ಸಿಗಳ ಮೂಲಕ ಕಿರುಕುಳ.
ಹೀಗಾದಾಗ, ಬಹುತೇಕ ಮಾಧ್ಯಮಗಳ ಹೂಡಿಕೆದಾರರು ಸಹಜವಾಗಿಯೇ ಪ್ರಭುತ್ವದ ಪರ ನಿಲ್ಲುವ ನಿಲುವು ತಳೆಯುತ್ತಾರೆ; ಬೆನ್ನುಕೋಲು ನೆಟ್ಟಗಿರುವವರು ಅಂತಹ ಪತ್ರಿಕೆಗಳಿಂದ ದೂರ ಸರಿಯಬೇಕಾಗುತ್ತದೆ. ಶತ್ರು ಮಾಧ್ಯಮವೊಂದು ಉಳಿಯಬೇಕಾದರೆ ಮಿತ್ರಮಾಧ್ಯಮವಾಗಿ ಬದಲಾಗಬೇಕಾಗುತ್ತದೆ.

SLAPP ತಂತ್ರ

ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾನೂನು ಕೊಕ್ಕೆ ಬಳಸಿ ಚಾಣಾಕ್ಷತೆಯಿಂದ ತಡೆಯುವ ವಿಧಾನಗಳು ಹೊಸದಲ್ಲ. Strategic lawsuit against public participation (SLAPP) ಹುಟ್ಟಿದ್ದು ಅಮೆರಿಕದಲ್ಲಿ. ಆರಂಭದಲ್ಲಿ ಮಾನನಷ್ಟ, ತಪ್ಪಾಗಿ ವರದಿಗಾರಿಕೆ, ಸಮುದಾಯಕ್ಕೆ ಅಪಮಾನ ಎಂದೆಲ್ಲ ಆರಂಭಗೊಂಡ ಈ ತಂತ್ರ ಇಂದು ಜಗತ್ತಿನಾದ್ಯಂತ ಪ್ರಭುತ್ವಗಳಿಗೆ ನಿಷ್ಪಕ್ಷ ಮಾಧ್ಯಮಗಳನ್ನು ಹಣಿಯುವ ಪ್ರಬಲ ಹತ್ಯಾರಾಗಿದೆ. ಭಾರತದಲ್ಲಂತೂ ಸಂಚು, ದೇಶದ್ರೋಹದಂತಹ ಘೋರ ಅಪರಾಧಗಳ ಹೆಸರಲ್ಲಿ ಮಾಧ್ಯಮಗಳಲ್ಲಿರುವ “ಶತ್ರುಗಳ” ಬೆನ್ನು ಹತ್ತಲಾಗುತ್ತಿದೆ.

ಜಗತ್ತಿನಾದ್ಯಂತ ಬಲಪಂಥೀಯ ಪಾಪ್ಯುಲಿಸ್ಟ್ ಪ್ರಭುತ್ವಗಳು ಈ ತಂತ್ರವನ್ನಿಂದು “ಕಾಪಿಬುಕ್” ಮಾದರಿಯಾಗಿರಿಸಿಕೊಂಡು ಪಾಲಿಸುತ್ತಿವೆ. ಅದಕ್ಕೆ ಭಾರತ ಮಾತ್ರವಲ್ಲ ದೇಹಂಗರಿ, ಸರ್ಬಿಯಾ, ಆಸ್ಟ್ರಿಯಾ, ಇನ್ನೂಕೆಲವು ಯುರೋಪಿಯನ್ ದೇಶಗಳು, ಇಸ್ರೇಲ್, ಅಮೆರಿಕಗಳಲ್ಲಿ ಉದಾಹರಣೆಗಳು ಸಿಗುತ್ತವೆ. ಅವರೆಲ್ಲರ ಗುರಿ-ಹಾದಿಗಳು ಬಹುತೇಕ ಒಂದೇ ರೀತಿಯಾಗಿರುವುದು ಆಕಸ್ಮಿಕ ಅನ್ನಿಸುವುದಿಲ್ಲ. ಚೀನಾ, ಉತ್ತರ ಕೊರಿಯಾದಂತಹ ಕಮ್ಯುನಿಸ್ಟ್ ಪ್ರಭುತ್ವಗಳು ಕೂಡ ಇದಕ್ಕಿಂತ ಖಟ್ಟರ್ ಹಾದಿಯಲ್ಲಿರುವುದು ಸುಳ್ಳಲ್ಲ. “ಫ್ರೀಡಂ ಇನ್ ದ ವಲ್ರ್ಡ್” ಎಂಬ ಖಾಸಗಿ ಅಧ್ಯಯನವೊಂದು ತನ್ನ 2019ರ ವರದಿಯಲ್ಲಿ, 16 ದೇಶಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಸಿದಿರುವುದನ್ನು ತೋರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಯುರೋಪು, ಯುರೇಷಿಯಾ, ಮಧ್ಯಪೂರ್ವ ದೇಶಗಳಲ್ಲಿ ಈ ಕುಸಿತ ಗಮನಾರ್ಹವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಸರ್ವಾಧಿಕಾರಿ ಪ್ರಭುತ್ವಗಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಬೆಳವಣಿಗೆಗಳು “ಪ್ರಜಾಪ್ರಭುತ್ವ” ಇರುವ ದೇಶಗಳಲ್ಲೂ ಕಾಣಿಸತೊಡಗಿದೆ ಎಂದರೆ ಅದರ ಅರ್ಥ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಧ್ವನಿ ಕ್ಷೀಣಿಸತೊಡಗಿದೆ ಎಂದೇ ಅಲ್ಲವೆ?

ಟರ್ಕಿಯ ಇಸ್ತಾಂಬುಲ್‍ನಲ್ಲಿ ವಾಷಿಂಗ್ಟನ್ ಪೋಸ್ಟ್ ನ ಅಂಕಣಕಾರ ಜಮಾಲ್ ಖಾಷೋಗ್ಗಿ ಸೌದಿ ಅರೇಬಿಯಾದ ಕಾನ್ಸುಲೇಟ್ ಕಚೇರಿಯಲ್ಲಿ ಕೊಲೆಯಾದಾಗ (2018 ಅಕ್ಟೋಬರ್) ಅಮೆರಿಕದ ಪ್ರಭುತ್ವ ಎಷ್ಟು ವಿಳಂಬವಾಗಿ ಮತ್ತು ಹೇಗೆ ಪ್ರತಿಕ್ರಿಯಿಸಿತು ಎಂಬಲ್ಲಿಂದ ಆರಂಭಿಸಿ, ಭಾರತದಲ್ಲೇ ರವೀಶ್ ಕುಮಾರ್ ಅವರನ್ನು ಪ್ರಭುತ್ವದ ಪರ ಇರುವ ಟ್ರಾಲ್ ಸೇನೆ ಎಷ್ಟು ಕೆಟ್ಟದಾಗಿ ಬೆನ್ನು ಹತ್ತಿದೆ ಎಂಬಲ್ಲಿಯ ತನಕ ನೂರಾರು ಘಟನೆಗಳನ್ನು ಗಮನಿಸುತ್ತಾ ಬನ್ನಿ, ಪ್ರಭುತ್ವಗಳು ಇಂತಹ ಪ್ರತಿದಿನ ಎಂಬಂತೆ ನಡೆಯುತ್ತಿರುವ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನೂ ಗಮನಿಸಿ. ಒಂದು ವಿಚಾರ ಸ್ಪಷ್ಟ – ಅದೇನೆಂದರೆ ಇವೆಲ್ಲ ಖಚಿತ ರಣತಂತ್ರವೊಂದರ ಭಾಗ ಎಂಬುದು.

ರವೀಶ್‌ ಕುಮಾರ್‌

ಏನಿದಕ್ಕೆ ಪರಿಹಾರ?

ಪಾಪ್ಯುಲಿಸ್ಟ್ ಪ್ರಭುತ್ವಗಳ ಈ ತಂತ್ರಗಳನ್ನು ಗುರುತಿಸಿ, ಅದರ ವಿರುದ್ಧ ಕ್ಷೀಣವಾಗಿಯಾದರೂ, ಸಾಧ್ಯವಿರುವಷ್ಟು ಧ್ವನಿಯೆತ್ತುವುದೊಂದೇ ಇದಕ್ಕೆ ಪರಿಹಾರ.

* ನ್ಯಾಯಬದ್ಧವಾದ ಪತ್ರಿಕೋದ್ಯಮವನ್ನು ಸುಳ್ಳುಗಳ ಮತ್ತು ವದಂತಿಗಳ ಮೂಲಕ ತಪ್ಪಾಗಿ, ಜನವಿರೋಧಿಯೆಂದು, ದೇಶ ವಿರೋಧಿಯೆಂದು ಬಿಂಬಿಸುವ ಪ್ರಯತ್ನಗಳನ್ನು ಗುರುತಿಸಿ, ಅವುಗಳನ್ನು ದಾಖಲೆಗಳ ಸಮೇತ ಸಾರ್ವಜನಿಕರ ಗಮನಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯಬೇಕು.

* ಪ್ರಜಾತಂತ್ರದ ಪರ ಇರುವ ಬುದ್ಧಿಜೀವಿಗಳು, ನೀತಿ ನಿರೂಪಕರು, ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಮಾಧ್ಯಮ ಸ್ವಾತಂತ್ರ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಗತಿಗಳ ಬಗ್ಗೆ, ಪ್ರಭುತ್ವಗಳು ಮಾಧ್ಯಮಗಳ ಮೇಲೆ ಹಾಬಿಯಾಗುತ್ತಿರುವುದರ ವಿರುದ್ಧ ಸ್ಪಷ್ಟ ಧ್ವನಿಯಲ್ಲಿ ಮಾತನಾಡಬೇಕು.

* ಕಾನೂನು ಬಳಸಿಕೊಂಡು ಪತ್ರಕರ್ತರನ್ನು ಹಣಿಯುವ ಪ್ರಯತ್ನಗಳ ಬಗ್ಗೆ ನ್ಯಾಯಾಂಗದ ಗಮನ ಸೆಳೆದು, ದೂರು ನೀಡುವ ಸ್ವಾತಂತ್ರ್ಯದ ದುರುಪಯೋಗ ಆಗುತ್ತಿರುವುದನ್ನು ತಡೆಯಲು ಮತ್ತು ಅಂತಹ ತಂಟೆಕೋರರ ವಿರುದ್ಧ ಕ್ರಮಕೈಗೊಳ್ಳಲು ಕೋರಬೇಕು. SLAPP ತಂತ್ರ ಬಳಕೆ ಕೊನೆಯಾಗಬೇಕು.

* ಗುಣಮಟ್ಟದ ಸುದ್ದಿಗಳಿಗೆ ಇವತ್ತಿಗೂ ಕೊಳ್ಳುಗರು ಇರುವುದರಿಂದ, ನವಮಾಧ್ಯಮಗಳನ್ನು ಬಳಸಿಕೊಂಡು, ಗುಣಮಟ್ಟದ ಸುದ್ದಿ ಸರಬರಾಜು ಮಾಡಲು ಅನುಕೂಲ ಆಗುವಂತಹ ಸುದ್ದಿ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು.

* ಜಗತ್ತಿನಾದ್ಯಂತ ಎಲ್ಲೇ ಮಾಧ್ಯಮ ಸ್ವಾತಂತ್ರ್ಯಕ್ಕೆ ಅಪಾಯ ಬಂದರೂ ಅದರ ವಿರುದ್ಧ ಸ್ಪಷ್ಟ ಧ್ವನಿಯಲ್ಲಿ ಮಾತನಾಡುವುದು, ಆ ಮೂಲಕ, ಮುಕ್ತ ಮಾಧ್ಯಮದ ಅಗತ್ಯವನ್ನು ಸಾರ್ವಜನಿಕರಿಗೆ ಅದರಲ್ಲೂ ಎಳೆಯರಿಗೆ ಮನದಟ್ಟುಮಾಡಬೇಕು.


ಇದನ್ನು ಓದಿ: ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...