Homeಚಳವಳಿಒಬ್ಬ ಬಲಿಪಶು ಮಹಿಳೆ ವಿರೋಧಿಸಿದಾಕ್ಷಣ ಎಲ್ಲ ಪಟ್ಟಭದ್ರರೂ ಒಂದಾಗಿಬಿಡುತ್ತಾರೆ

ಒಬ್ಬ ಬಲಿಪಶು ಮಹಿಳೆ ವಿರೋಧಿಸಿದಾಕ್ಷಣ ಎಲ್ಲ ಪಟ್ಟಭದ್ರರೂ ಒಂದಾಗಿಬಿಡುತ್ತಾರೆ

- Advertisement -
ಪ್ರಶ್ನೆ: ಫೈರ್ ಅನ್ನು ಆರಂಭಿಸಿರುವುದು ಒಂದು ಬಹಳ ಮುಖ್ಯವಾದ ಹೋರಾಟದ ಆರಂಭ ಎನ್ನಬಹುದು. ಆದರೆ, ಈ ಹೋರಾಟಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿದಾಗ, ಇದಕ್ಕೂ ಬೇರೆ ರೀತಿಯ ಹೋರಾಟಗಳಿಗೂ ವ್ಯತ್ಯಾಸವಿದೆ ಅನ್ನಿಸುತ್ತಿಲ್ಲವಾ? ಯಾಕೆ ಆ ವ್ಯತ್ಯಾಸ ಇರಬಹುದು?
ಚೇತನ್: ಹೋರಾಟ ಅಂದಾಗ ಪವರ್ ಸ್ಟ್ರಕ್ಚರ್ ಅನ್ನು ಬದಲಾಯಿಸುವ ಪ್ರಯತ್ನ. ಶೇಣೀಕೃತ ಸಮಾಜವನ್ನು ಪ್ರಶ್ನಿಸುವ ಪ್ರಯತ್ನ. ಸ್ಥಾಪಿತ ವ್ಯವಸ್ಥೆಯನ್ನು ಬದಲಿಸಲು ಹೊರಟು ಶೋಷಿತರ ಪರ ನಿಂತರೆ ವ್ಯವಸ್ಥೆ ತಿರುಗೇಟು ಕೊಡುತ್ತದೆ.
ಎಲ್ಲಾ ಹೋರಾಟಗಳಲ್ಲೂ ಈ ಬ್ಯಾಕ್‍ಲಾಶ್ ಇದೇ ರೀತಿ ಇರುವುದಿಲ್ಲ ಉದಾಹರಣೆಗೆ, ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯದ ಯುವಜನರು ಖಾಸಗೀಕರಣದ ವಿರುದ್ಧ ಹೋರಾಟ ಆರಂಭಿಸಿದರು, ನಾನೂ ಅವರನ್ನು ಬೆಂಬಲಿಸಿದ್ದೆ. ಆದರೆ, ಅಲ್ಲಿ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಸಮಾಜ ಕೊನೆಗೆ ಸರ್ಕಾರವೂ ಕೂಡಾ ಚೆನ್ನಾಗಿ ಸ್ಪಂದಿಸಿತು.
ಆದರೆ ಈ ಹೋರಾಟ ಬೇರೆ ರೀತಿಯದ್ದು; ಬಹಳ ಅಪಾಯಕಾರಿ ಹೋರಾಟ. ಲೈಂಗಿಕ ಕಿರುಕುಳದ ವಿರುದ್ಧ-ಅದರಲ್ಲೂ ಚಿತ್ರರಂಗದಲ್ಲಿ-ದನಿಯೆತ್ತುವುದು ಕಷ್ಟ! ಇಲ್ಲಿರುವವರು ಬಹಳ ಬಲಾಢ್ಯರು, ಹೆಚ್ಚಾಗಿ ಮಾಡಬಾರದ್ದನ್ನು ಮಾಡುವವರೆ ಅಧಿಕಾರದಲ್ಲಿದ್ದಾರೆ. ಅವರ ನಿರಂಕುಶ ಆಡಳಿತವನ್ನು ಪ್ರಶ್ನಿಸುವುದೆಂದರೆ ನಮ್ಮ ಮೇಲೆ ಎಲ್ಲ ಬಗೆಯ ದಾಳಿ ನಡೆಯುತ್ತದೆ ಎಂದೇ ಅರ್ಥ-ಮಸಿ ಬಳಿಯುವ ಪ್ರಯತ್ನಗಳು, ಅವಕಾಶ ಇಲ್ಲದಂತೆ ಮಾಡುವ ಬೆದರಿಕೆ, ಹಣಕ್ಕಾಗಿ ಮಾಡುತ್ತಿದ್ದಾರೆ ಎಂಬ ಕೀಳು ಬಗೆಯ ಅಪಪ್ರಚಾರ ಎಲ್ಲ ನಡೆಯುತ್ತದೆ! ನಮ್ಮ ಬದುಕು, ಕೆರಿಯರ್, ಭವಿಷ್ಯ ಎಲ್ಲವನ್ನೂ ಬದಲಿಸುವಷ್ಟು ಪ್ರಬಲವಾದ ದಾಳಿಯಾಗುತ್ತದೆ. ಇದೆಲ್ಲ ಆಗಲೇ ಬರುತ್ತಿದೆ. ಆದರೂ ನಾವು ಗಟ್ಟಿಯಾಗಿದ್ದೇವೆ.
ಈ ಇಂಡಸ್ಟ್ರಿಯಲ್ಲಿ ಆರೋಪ ಮಾಡುತ್ತಿರುವವರು ಹಾಗೂ ಆರೋಪಿ ಇಬ್ಬರೂ ಪರಿಚಯ ಇರುವವರಾಗಿರುತ್ತಾರೆ. ಅಥವಾ ಎಷ್ಟೋ ಬಾರಿ ಆರೋಪಿಯೇ ಪರಿಚಿತರಿರಬಹುದು, ತೊಂದರೆಗೊಳಗಾದವರು ಹೊಸಬರಿರಬಹುದು; ಆದರೂ ನಾವು ನ್ಯಾಯದ ಪರ ಇರಬೇಕಾಗಿರುವುದು ಬಹಳ ಮುಖ್ಯವಾದದ್ದು.
ಫೈರ್ ಮಾಡಬೇಕು ಅಂತ ನಿಮಗೆ ಅನಿಸಿದ್ದು ಯಾವಾಗ? ಆ ಪ್ರಕ್ರಿಯೆಯನ್ನು ಸ್ವಲ್ಪ ವಿವರಿಸಿ.
ಆಗಸ್ಟ್ 2014ರಲ್ಲಿ ಒಂದು ಸ್ಟಿಂಗ್ ಆಪರೇಶನ್ ನಡೆಯಿತು. ಟಿವಿ 9 ಮಾಧ್ಯಮ ಇದನ್ನು ನಡೆಸಿತ್ತು. ನಿರ್ದೇಶಕರು ನಟಿಯರನ್ನು ಬಳಸಿಕೊಳ್ಳುವ ವಿಚಾರ (ಕಾಸ್ಟಿಂಗ್ ಕೌಚ್). ಇದನ್ನು ನೋಡಿ ನನಗೆ ಶಾಕ್ ಆಯಿತು. ಸಮಸ್ಯೆಗಳು, ದೌರ್ಜನ್ಯಗಳು ಇರುವ ವಿಚಾರ ನನಗೆ ಗೊತ್ತಿತ್ತು, ಆದರೆ ಈ ಮಟ್ಟಕ್ಕಿದೆ ಎಂದು ನಾನು ಊಹಿಸಿರಲಿಲ್ಲ! ಇದಕ್ಕೆ ಏನಾದರೂ ಮಾಡಬೇಕೆನಿಸಿ ಲೇಖನ ಬರೆದೆ. ಅದು ಪ್ರಕಟವೂ ಆಯಿತು. ಫೇಸ್‍ಬುಕ್‍ನಲ್ಲಿಯೂ ಹಾಕಿದೆ. ಇದನ್ನು ಗಮನಿಸಿದ ಚಿತ್ರರಂಗದ ಕೆಲವರು ತಮ್ಮ ಅನುಭವಗಳ ಬಗ್ಗೆ ಹೇಳಿಕೊಂಡರು. ಅಷ್ಟಕ್ಕೇ  ಸುಮ್ಮನಿರಬಾರದಲ್ಲ ಅನಿಸಿತು. ಆಗ ನಮಗೆ ಈ ವಿಚಾರದಲ್ಲಿ ಕಾನೂನಿನ ಬಲ ಏನಿದೆ ಅಂತಲೂ ಗೊತ್ತಿರಲಿಲ್ಲ. ಆದರತೀ ಸಮಸ್ಯೆಯನ್ನು ಅಡ್ರಸ್ ಮಾಡಲು ಏನಾದರೂ ಮಾಡಬೇಕು ಅಂತ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್)’ ಆರಂಭಿಸುವ ಯೋಚನೆ ಹುಟ್ಟಿತು. ಮಾರ್ಚ್ 2017ರಲ್ಲಿ ‘ಫೈರ್’ ಹುಟ್ಟಿಹಾಕಿದೆವು. ಇದೊಂದು ರಿಜಿಸ್ಟರ್ಡ್ ಸಂಸ್ಥೆ-ಚಿತ್ರರಂಗದಲ್ಲೂ ಕೂಡಾ ಇದರಲ್ಲಿರುವ ನಿರ್ಲಕ್ಷಿತರಿಗೆ, ದನಿಯಿಲ್ಲದವರಿಗೆ ಕೆಲಸ ಮಾಡಬೇಕು ಎಂಬುದು ಇದರ ಆಶಯ. ಈಗಾಗಲೇ ಒಂದಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ, ಪ್ರಚಾರಕ್ಕಾಗಿ ಅಲ್ಲ, ನ್ಯಾಯಕ್ಕಾಗಿ.
ಸಿನೆಮಾ ಕಾರ್ಮಿಕರಿಗೆ 175 ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ. ಹಾಗೆಯೇ, ಮಲೆಯಾಳಂಲ್ಲಿ ‘ಅಮ್ಮ’ ಸಂಸ್ಥೆ ನಟ ದಿಲೀಪ್‍ನ್ನು ಆರೋಪಮುಕ್ತ ಮಾಡಿದಾಗ 50 ಜನ ಸೇರಿ ಅಲ್ಲಿಗೆ ಪತ್ರ ಬರೆದೆವು.
ಈ ರೀತಿಯ ಕೆಲಸಗಳ ಭಾಗವಾಗಿ ಫೈರ್‍ನಲ್ಲಿ ‘ಆಂತರಿಕ ದೂರು ಸಮಿತಿ (ಐಸಿಸಿ)’ ಕೂಡಾ ರಚನೆಯಾಗಿದೆ. ಇದರಲ್ಲಿ ಇಬ್ಬರು ವಕೀಲರನ್ನೂ ಒಳಗೊಂಡಂತೆ 11 ಜನರಿದ್ದಾರೆ. ವಿಶಾಖಾ ಗೈಡ್‍ಲೈನ್ಸ್ ಪ್ರಕಾರ ಎಲ್ಲ ಕೆಲಸದ ಕ್ಷೇತ್ರಗಳಲ್ಲೂ ಕಡ್ಡಾಯವಾಗಿ ಈ ಸಮಿತಿ ಇರಲೇಬೇಕು. ಭಂವರೀದೇವಿ ಹೋರಾಟದ ಫಲ ಇದು. ಚಿತ್ರರಂಗದಲ್ಲಿ ಈ ಸಮಿತಿ ಇಲ್ಲದಿದ್ದರೆ ಚಿತ್ರರಂಗ ನಿಯಮ ಉಲ್ಲಂಘಿಸಿದಂತೆ. ಆದ್ದರಿಂದ ಇದು ಒಟ್ಟಾರೆ ಚಿತ್ರರಂಗಕ್ಕೇ ಬೇಕಿದ್ದ ಕೆಲಸ, ಫಿಲಂ ಚೇಂಬರ್ ಗಮನಕ್ಕೇ ತರಲಾಗಿದೆ ಕೂಡಾ.
ಮಿ ಟೂ ಆರಂಭವಾದ ನಂತರ ನಮ್ಮ ಕೆಲಸಕ್ಕೆ ಇನ್ನಷ್ಟು ಮಹತ್ವ ಬಂದಿದೆ. ಶೃತಿ ಹರಿಹರನ್ ಕೂಡಾ ನಮ್ಮ ಸದಸ್ಯೆ, ಅವರಿಗೆ ನಾವು ನೈತಿಕ ಮತ್ತು ಕಾನೂನಾತ್ಮಕ ಬೆಂಬಲ ನೀಡಿದ್ದೇವೆ. ಆಂತರಿಕ ದೂರು ಸಮಿತಿಯು 3 ಅಥವಾ 6 ತಿಂಗಳಿಗಿಂತ ಹಳೆಯ ಪ್ರಕರಣವನ್ನು ಎತ್ತಿಕೊಳ್ಳುವಂತಿಲ್ಲ. ಆದರೂ, ಕಾನೂನಿನ ಹೋರಾಟದ ಮೂಲಕ ಸತ್ಯ ಏನೆಂಬುದನ್ನು ಜಗತ್ತಿಗೆ ಖಂಡಿತ ತೋರಿಸಬಹುದು.
ಈ ವಿಚಾರಕ್ಕೆ ಈ ಬಗೆಯ ಪ್ರತಿಕ್ರಿಯೆ ನಿರೀಕ್ಷಿಸಿದ್ದಿರಾ?
ಇಂಡಸ್ಟ್ರಿಯಲ್ಲಿ ಬಲಾಢ್ಯರಾದ ಕೆಲವರು ಹೇಗೆ ಮಾತಾಡುತ್ತಾರೆಂದರೆ, ಮಹಿಳೆಯರು ಚಿತ್ರರಂಗಕ್ಕೆ ಬರುವುದಾದರೆ ಲೈಂಗಿಕ ಹಿಂಸೆಯನ್ನು ಒಪ್ಪಿಕೊಂಡು ಬರಬೇಕು, ಇಲ್ಲದಿದ್ದರೆ ಮನೆಯಲ್ಲಿರಬೇಕು ಎಂದು ಮಾತಾಡುತ್ತಾರೆ! ಮತ್ತೆ ಇವರೆಲ್ಲ ಹಿರಿಯರು, ತಿಳಿದವರುಲ್ಲಿಂತಹ ವಾತಾವರಣದಲ್ಲಿ ನಾವು ನ್ಯಾಯದ ಪ್ರಶ್ನೆ ಎತ್ತಿದಾಗ ಒಂದಷ್ಟು ವಿರೋಧ ಬರುತ್ತದೆಂದು ಗೊತ್ತಿತ್ತು…..ಒಂದೂವರೆ ವರ್ಷದ ಹಿಂದೆ ಫೈರ್ ಆರಂಭಿಸಿದಾಗಲೇ ನೀವು ಮಹಿಳಾ ಕಾರ್ಮಿಕರ ಪರ ಕೆಲಸ ಮಾಡಿದರೆ ನಿಮ್ಮನ್ನು ತುಳಿಯುತ್ತಾರೆ ಎಂದು ಕೆಲವರು ಎಚ್ಚರಿಸಿದ್ದರು. ಆ ಎಚ್ಚರಿಕೆಯಿಂದ ನನಗೆ ಗೊತ್ತಾಗಿದ್ದು ನಾವು ಸರಿಯಾದ ಕೆಲಸ ಮಾಡುತ್ತಿದ್ದೇವೆ ಅಂತ.
ಹಾಗೆಯೇ ನಾವು ಶೃತಿಗೆ ಬೆಂಬಲ ನೀಡಿದ ತಕ್ಷಣ ಈ ದಾಳಿ ನಡೆಯುತ್ತಿದೆ……
ಈಗ ‘ಮೀಟೂ’ ಎನ್ನುತ್ತಿರುವ ನಟಿಯರ ಪರ ನಿಲ್ಲುತ್ತಿವವರು ಎಡಪಂಥೀಯರು ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು? 
ಎಡಪಂಥ-ಬಲಪಂಥ ಎಂದರೇನು? ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ಬರಬೇಕೆಂಬುದು ಎಡಪಂಥ, ಶೋಷಣೆ, ಅಸಮಾನತೆಗಳು ಸೇರಿದಂತೆ ಇಡೀ ವ್ಯವಸ್ಥೆ ಹಾಗೆಯೇ ಇರಲಿ ಎಂಬುದು ಬಲಪಂಥ.
ಆದರೆ, ಯಾವುದೇ ಅಸಮಾನ ವ್ಯವಸ್ಥೆ ಹಾಗೆಯೇ ಇರಲು ಸಾಧ್ಯವಿಲ್ಲ. ಬದಲಾವಣೆ ಎಂಬುದು ಅನಿವಾರ್ಯವಾದ ಪ್ರಕ್ರಿಯೆ. ಆಗಲೇ ಹೇಳಿದಂತೆ ವ್ಯವಸ್ಥೆಯ ದೋಷಗಳನ್ನು ಪ್ರಶ್ನಿಸಿದಾಗ ಎಡಪಂಥೀಯರು ಎಂದು ಯಾರಾದರೂ ಹೇಳುವುದಾದರೆ ನಾನು ಆ ಬಗ್ಗೆ ಹೆಚ್ಚು ಯೋಚಿಸಲು ಹೋಗುವುದಿಲ್ಲ. ಈ ರೀತಿ ಸಮಾನತೆ ತರುವ ಕೆಲಸದಲ್ಲಿ ಬಲಪಂಥೀಯರೂ ನಮ್ಮ ಜೊತೆ ಬಂದರೆ ಸಂತೋಷ, ಬರಲಿ!
ಬುದ್ಧ ಬಸವ ಅಂಬೇಡ್ಕರ್ ನನ್ನ ಬೆನ್ನಿಗಿದ್ದಾರೆ ಎಂದು ಹೇಳುತ್ತಿರುತ್ತೀರಿ…ನಿಮ್ಮ ಪ್ರಕಾರ ಹಾಗೆಂದರೆ ಏನು?
ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ…ಇವರೆಲ್ಲ ಏನು ಮಾಡಿದರು, ಸಮಾನತೆ ಬರಬೇಕು ಎಂದರು. ಕುರುಡು ನಂಬಿಕೆಗಳನ್ನು ಬಿಟ್ಟು ವೈಚಾರಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿಸಿದರು. ಈಗ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಹೇರಿಕೆ ನಡುವೆ ನಾವು ವೈಜ್ಞಾನಿಕತೆ ಮರೆತು ಧಾರ್ಮಿಕ ಏಕರೂಪತೆಗೆ ಬಲಿಯಾಗುತ್ತಿದ್ದೇವೆ. ಬುದ್ಧ ಬಸವ ಅಂಬೇಡ್ಕರ್ ಅವರು ಹೇಳಿದ ವೈಜ್ಞಾನಿಕತೆಯ ಮಾರ್ಗವೇ ನಮ್ಮದು ಅನ್ನಿಸುತ್ತದೆ. ಸಂವಿಧಾನ ನಮ್ಮ ಮಾರ್ಗದರ್ಶಿ ಸೂತ್ರ.
- Advertisement -

ಶೃತಿ ಹರಿಹರನ್ ಅವರಿಗೆ ನೀವು ಬೆಂಬಲ ಘೋಷಿಸಿದ ತಕ್ಷಣ, ನಿಮ್ಮ ಮೇಲೆ ಹಣದ ಬೇಡಿಕೆ ಎಂಬ ಆಪಾದನೆ ಬಂದಿದೆ…..

ಈ ಆಪಾದನೆ ಪೂರ್ತಿ ತಪ್ಪು! ಚಿತ್ರರಂಗದಲ್ಲಿ ಹೇಗಿರುತ್ತದೆಂದರೆ, ಒಂದು ಚಿತ್ರ ಮಾಡುವ ಯೋಜನೆ ರೂಪುಗೊಂಡಾಗ ಅಡ್ವಾನ್ಸ್ ಕೊಟ್ಟರೂ ಚಿತ್ರ ಅದಾದ ಎಷ್ಟೋ ಕಾಲಕ್ಕೆ ಆರಂಭವಾಗಬಹುದು. ಅಥವಾ ಕೆಲವೊಮ್ಮೆ ಚಿತ್ರ ಮುಗಿದು ಎಷ್ಟೋ ಸಮಯದ ನಂತರ ಪೂರ್ತಿ ಹಣ ಕೊಡಬಹುದು…ಇದೆಲ್ಲ ಅಷ್ಟು ಮುಖ್ಯವಾಗುವುದಿಲ್ಲ. ಅದರಲ್ಲೂ ನಾನಂತೂ ದುಡ್ಡುಬಾಕತನದಿಂದ ಈ ಕೆಲಸ ಮಾಡುತ್ತಿಲ್ಲ, ನನಗೆ ಚಿತ್ರರಂಗವೂ ಕೂಡಾ ಒಳ್ಳೆಯ ಸಂದೇಶ ಕೊಡುವ ವೇದಿಕೆ. ಆದ್ದರಿಂದ, ನಾನು ಅವರಿಂದ ಹಣ ಕಬಳಿಸಲು ಈ ಆರೋಪ ಮಾಡುತ್ತಿದ್ದೇನೆ ಎಂದರೆ, ಅದು ಬಹಳ ಕೀಳುಮಟ್ಟದ್ದು ಎಂದು ಮಾತ್ರ ಹೇಳಬಹುದು.
ಮೈನಾ ನಿರ್ದೇಶಕ ನಾಗಶೇಖರ್ ಜೊತೆ ಕೆಲಸ ಮಾಡುವ ಯೋಜನೆ ಮೊದಲೇ ಇತ್ತು. ಆ ಸಮಯದಲ್ಲಿ ಅರ್ಜುನ್ ಸರ್ಜಾ ಬಂದು ಅಡ್ವಾನ್ಸ್ ಕೊಟ್ಟರು, ಸಿನೆಮಾ ಬಗ್ಗೆ ಸಾಕಷ್ಟು ಚರ್ಚೆ, ಒಂದಷ್ಟು ಫೋಟೋ ಶೂಟ್‍ಗಳು ಎಲ್ಲವೂ ಆದವು. ವ್ಯಕ್ತಿಗತವಾಗಿ ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡರು, ಅಂತಹ ವಿರೋಧ ವ್ಯಕ್ತಿಗಳಾಗಿ ನಮ್ಮ ಮಧ್ಯೆ ಇಲ್ಲ. ಆದರೆ ಆ ಸಮಯದಲ್ಲಿ ಆ ಸಿನೆಮಾ ಆಗಲಿಲ್ಲ. ಈ ಬಗ್ಗೆ ನನಗೆ ತಿಳಿಸಿ, ಅಡ್ವಾನ್ಸ್ ಅನ್ನು ಮುಂದಿನ ಸಿನೆಮಾಗೆ ಇಟ್ಟುಕೊಳ್ಳಿ ಎಂದು ಈ ಮೇಲ್ ಸಹಾ ಬರೆದರು. ಮುಂದೆ ಒಟ್ಟಿಗೆ ಕೆಲಸ ಮಾಡೋಣ ಅಂದುಕೊಂಡೆವು; ನಾನೂ ಕೂಡಾ ಅದೇ ರೀತಿ ಗೌರವದಿಂದ ಅಷ್ಟಕ್ಕೇ ಬಿಟ್ಟು ಸುಮ್ಮನಾದೆ. ದುಡ್ಡಿಗಾಗಿ ಹೀಗೆ ಮಾಡುತ್ತಿದ್ದಾನೆಂದು ಹೇಳುವ ಯಾರಿಗೇ ಆದರೂ ನನ್ನ ಉತ್ತರ ಇಷ್ಟೇ. ಇಂತಹ ಮಾತುಗಳಿಗೆ ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ!
‘ಮಿಟೂ’ ಎನ್ನುತ್ತ ತಮ್ಮ ನೋವಿನ ಕಥೆಗಳನ್ನು ಹೆಣ್ಣುಮಕ್ಕಳು ಹೇಳಿದಾಗ ಕೇಳಬೇಕು ಎಂಬುದು ನಿಜ; ಇತರ ಹಲವರು ಮಾಡುತ್ತಿರುವಂತೆ ನಾವೂ ಕೂಡಾ ವಿಚಾರಣೆಯಿಲ್ಲದೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದಂತಾಗುವುದಿಲ್ಲವೇ?
ಇದಕ್ಕೆ ಉತ್ತರಿಸುವ ಮೊದಲು ಒಂದು ವಿಚಾರ ನಾವು ಅರ್ಥ ಮಾಡಿಕೊಳ್ಳಬೇಕು. ಮಿ ಟೂ ಯಾಕೆ ಬಂತು? ಎಷ್ಟೋ ದಶಕಗಳ ಕಾಲ ಈ ಅಪರಾಧ ನಡೆಯುತ್ತಿದ್ದು ಅದನ್ನು ಸರಿಯಾದ ರೀತಿ ಬಗೆಹರಿಸದಿದ್ದಾಗ ಅದು ಸ್ಫೋಟಗೊಳ್ಳುತ್ತದೆ. ಅದೇ ಈಗ ಆಗುತ್ತಿರುವುದು. ಅದು ಸದಾ ಕಾಲ ಹಾಗೇ ಇರುವುದಿಲ್ಲ; ಲೈಂಗಿಕ ದೌರ್ಜನ್ಯದಂತಹ ಅಪರಾಧಗಳನ್ನು ಸರಿಯಾದ ಕ್ರಮದಲ್ಲಿ ಗಂಭೀರವಾಗಿ ಪರಿಗಣಿಸಿ ಬಗೆಹರಿಸುವ ಮಾರ್ಗ ಅಳವಡಿಸಿದರೆ ಹೀಗಾಗುವುದೇ ಇಲ್ಲ.
ಜೊತೆಗೆ ಗಮನಿಸಬೇಕಾದ್ದು, ಯಾವ ವ್ಯಕ್ತಿಗಳ ಮೇಲೆ ಆಪಾದನೆ ಬರುತ್ತಿದೆಯೋ ಅದು ಮತ್ತೆ ಮ್ತತೆ ಅದೇ ವ್ಯಕ್ತಿಗಳ ಮೇಲೆ ಮರುಕಳಿಸುತ್ತಿದೆ; ಒಬ್ಬರೇ ಅಲ್ಲ, ಅದು ಹಲವರು ಹೇಳುತ್ತಿದ್ದಾರೆ. ಅಂದರೆ ಅದರಲ್ಲಿ ಏನೋ ಸತ್ಯ ಇರಬೇಕು ಎಂದೇ ಅರ್ಥ ಅಲ್ಲವೇ?
ಅದೇನೇ ಇದ್ದರೂ ಮೀಡಿಯಾ ಟ್ರೈಯಲ್ ಯಾವಾಗಲೂ ಪಾಸಿಟಿವ್ ಆಗಿರುವುದಿಲ್ಲ. ಆದ್ದರಿಂದ ನಾವು ಕಾನೂನಿನ ಮಾರ್ಗದ ಮೇಲೆ ನಂಬಿಕೆ ಇಟ್ಟಿದ್ದೇವೆ. ಆರೋಪ ಹೊರಿಸಿದ ನಟಿಯೂ ಕಾನೂನಿನ ಮೂಲಕವೇ ನ್ಯಾಯ ಪಡೆಯಬೇಕಾಗುತ್ತದೆ ಹಾಗೂ ಆರೋಪಕೊಳಗಾದವರೂ ಕೂಡಾ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗಬಹುದಲ್ಲ!
ನೀವು ಅಮೇರಿಕಾ ಮತ್ತು ಭಾರತ ಎರಡೂ ಕಡೆ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಕಂಡಿದ್ದೀರಿ…ಎರಡನ್ನೂ ಹೋಲಿಸಿದರೆ ಏನನ್ನಿಸುತ್ತದೆ?
ಅಮೇರಿಕಾದ ಮಹಿಳೆಯರಿಗೆ ಸಮಸ್ಯೆಗಳಿಲ್ಲ ಎಂದಲ್ಲ; ಆದರೆ ಇಲ್ಲಿಗೂ ಅಲ್ಲಿಗೂ ಬಹಳವೇ ವ್ಯತ್ಯಾಸವಿದೆ. ಸ್ವಲ್ಪ ಸಮಯದ ಹಿಂದೆ ‘ಪಿಂಕ್’ ಸಿನೆಮಾ ಬಂತು-ಭಾರತದಲ್ಲಿ ಅದು ಇವತ್ತೂ ಕೂಡಾ ಜ್ವಲಂತ ಸಮಸ್ಯೆ, ಕುಡಿದಿದ್ದರೆ ಏನು ಬೇಕಾದರೂ ಮಾಡಬಹುದು, ಅಥವಾ ಬಲಾಢ್ಯರು ಹೀಗೆಲ್ಲ ಮಾಡುವುದನ್ನು ಮಹಿಳೆಯರು ಅದನ್ನು ಸಹಿಸಿಕೊಳ್ಳಬೇಕು ಎಂಬ ಮನೋಭಾವ ಈಗಲೂ ಇದೆ. ಭಾರತದ ಪರಿಸ್ಥಿತಿ ಸಂಪೂರ್ಣ ಏಕಪಕ್ಷೀಯವಾಗಿದ್ದಂತೆ ಕಾಣುತ್ತದೆ. ಇಲ್ಲಿ ಪ್ರತಿಯೊಬ್ಬ ದುಡಿಯುವ ಮಹಿಳೆಯೂ ಇಂಥದ್ದನ್ನು ಅನುಭವಿಸುತ್ತಾಳೆ, ಆದರೆ ಪ್ರತಿರೋಧಿಸಲು ಮುಂದಾಗುವುದು ಇಲ್ಲವೇ ಇಲ್ಲ. ಮಹಿಳೆಯರೂ ಕೂಡಾ ಇದನ್ನು ಒಪ್ಪಿಕೊಳ್ಳಬೇಕಾದ ಮನಸ್ಥಿತಿ ರೂಪಿಸಲಾಗಿದೆ. ಆಚೆ ಬರುವ ಮಹಿಳೆಯರನ್ನು ಹೆಚ್ಚಾಗಿ ಹೆಣ್ಣುಮಕ್ಕಳೇ ಟೀಕಿಸುತ್ತಾರೆ.
ಅಮೇರಿಕಾದಲ್ಲಿ ಹೀಗಿಲ್ಲ. ಗಂಡಸರೂ ಕೂಡಾ ಮಹಿಳೆಯರ ಪರ ಸಾಕಷ್ಟು ಸಂಖ್ಯೆಯಲ್ಲಿ ಮಾತನಾಡುತ್ತಾರೆ. ಜೊತೆಗೆ ಮಹಿಳೆಯರಂತೂ ಬಹಳ ದಿಟ್ಟವಾಗಿ ದನಿಯೆತ್ತುತ್ತಾರೆ. ಆದ್ದರಿಂದ, ಅನ್ಯಾಯವನ್ನು ವಿರೋಧಿಸುವವರಿಗೆ ಒಂಟಿತನದ ಭಾವ ಬರುವುದಿಲ್ಲ!
ಈ ವಿದ್ಯಮಾನ ನಿಮ್ಮನ್ನು ಕುಗ್ಗಿಸಿದೆಯಾ?
ಇಲ್ಲ, ನನಗೆ ಈಗಾಗಲೇ ಸಾಮಾಜಿಕ ಚಳವಳಿಯ ಒಡನಾಟ ಇರುವುದರಿಂದ ನನಗೆ ಇದು ಒಂದು ಪ್ಲಸ್ ಅನ್ನಿಸಿದೆ. ಸ್ವಲ್ಪ ದಿನದಿಂದ ನಿದ್ದೆ ಸ್ವಲ್ಪ ಕಡಿಮೆಯಾಗಿದೆ, ಜಿಮ್‍ಗೆ ಹೋಗಲು ಸಮಯ ಸಿಗುತ್ತಿಲ್ಲ ಅಷ್ಟೆ…….(ನಗು).
ನಮ್ಮ ವಿರುದ್ಧ ಇರುವ ಶಕ್ತಿಗಳು ಬಹಳ ಪ್ರಬಲ ಶಕ್ತಿಗಳು, ನಾವು ಎಚ್ಚರಿಕೆಯಿಂದಿರಬೇಕು, ಆದರೆ ಕುಗ್ಗಬಾರದು ಮುಂದೆ ಹೋಗುತ್ತಿರಬೇಕು.
ವಾಸ್ತವದಲ್ಲಿ ಮಹಿಳೆಯರು ಈ ಎಲ್ಲಾ ಸಮಸ್ಯೆಯ ಬಲಿಪಶುಗಳು; ಆದರೆ ಯಾರಾದರೊಬ್ಬರು ಅನ್ಯಾಯವನ್ನು ವಿರೋಧಿಸಿದಾಕ್ಷಣ ಎಲ್ಲ ಪಟ್ಟಭದ್ರರೂ ಒಂದಾಗಿಬಿಡುತ್ತಾರೆ ಮತ್ತು ಪುರುಷರು ಬಲಿಪಶುಗಳೆಂಬ ವಾತಾವರಣ ಸೃಷ್ಟಿಸುತ್ತಾರೆ. ಪ್ರಜ್ಞಾಪೂರ್ವಕವಾಗಿ ಒಂದು ಅಭಿಪ್ರಾಯವನ್ನು ಹುಟ್ಟುಹಾಕುತ್ತಾರೆ. ಗೊಂದಲ ಮೂಡಿಸುವುದೂ ಉಂಟು- ಪರಸ್ಪರ ಒಪ್ಪಿಗೆ ಇರುವ ಸಂಬಂಧ ಹಾಗೂ ಒಪ್ಪಿಗೆ ಇಲ್ಲದ ಒತ್ತಡದ ಪರಿಸ್ಥಿತಿ; ಕೆಲಸದ ಸ್ಥಳದಲ್ಲಿ ಇರಬೇಕಾದ ವಾತಾವರಣ ಮತ್ತು ಈಗಿರುವ ಸ್ಥಿತಿ- ಇವುಗಳ ನಡುವೆ ಇರುವ ವ್ಯತ್ಯಾಸದ ಗೆರೆಗಳನ್ನು ಅಸ್ಪಷ್ಟಗೊಳಿಸಲಾಗುತ್ತಿದೆ. ನಟಿಯೊಬ್ಬಳು ಒಂದು ದೃಶ್ಯದಲ್ಲಿ ಆತ್ಮೀಯವಾಗಿ ನಟಿಸಿದ ತಕ್ಷಣ ಎಲ್ಲದಕ್ಕೂ ಸಿದ್ದಳಿರಬೇಕು ಎಂದು ಭಾವಿಸುವುದು ಪುರುಷ ಯಾಜಮಾನ್ಯದ ಮನಸ್ಥಿತಿ, ಆದರೆ ಇದನ್ನೇ ಸರಿಯೆಂದೂ, ಚಿತ್ರರಂಗದಲ್ಲಿರುವ ಮಹಿಳೆಯರೇ ಗೌರವಕ್ಕೆ ಅರ್ಹರಲ್ಲವೆಂದೂ ಅಭಿಪ್ರಾಯಗಳನ್ನು ಮೊಬಿಲೈಸ್ ಮಾಡಲಾಗುತ್ತಿರುವುದನ್ನು ವಿರೋಧಿಸಬೇಕು.
‘ಮಿಟೂ’ ಅಭಿಯಾನವು ಈ ಮಟ್ಟಕ್ಕೆ ಅಲೆಯೆಬ್ಬಿಸಲು ಸಾಧ್ಯವಾದದ್ದಕ್ಕೆ ಕಾರಣ ಇಲ್ಲಿ ಮಾತನಾಡಿದವರು ಅನುಕೂಲಸ್ಥ ಹಿನ್ನೆಲೆಯ ಮಹಿಳೆಯರಾಗಿದ್ದದ್ದು, ಇದು ಹೆಚ್ಚಾಗಿ ನಗರ ಕೇಂದ್ರಿತ, ಸವಲತ್ತುಗಳುಳ್ಳ, ಸೊಫಿಸ್ಟಿಕೇಟೆಡ್ ಮಹಿಳೆಯರ ಆಂದೋಲನ; ಇದು ಅತ್ಯಂತ ಶೋಷಿತರಾದ ದಲಿತ ಹೆಣ್ಣುಮಕ್ಕಳ, ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಒಳಗೊಂಡಿಲ್ಲ ಎಂಬ ಟೀಕೆಯಿದೆ….ಏನು ಹೇಳುತ್ತೀರಿ?
ವ್ಯಕ್ತಿಗತವಾಗಿ ಹೇಳುವುದಾದರೆ, ನಾನು ಈಗ ‘ಮೀಟೂ’ ಆಂದೋಲನ ನಡೆಯುತ್ತಿರುವುದರಿಂದ ಮಾತ್ರ ಹೋರಾಟಕ್ಕಿಳಿದವನಲ್ಲ. ಸಾಕಷ್ಟು ಕಾಲದಿಂದ ಸಮಾಜದ ಅಸಮಾಣತೆಗಳ ವಿರುದ್ಧ ದುಡಿಯುತ್ತಿರುವವರ ಜೊತೆ ಕೆಲಸ ಮಾಡುತ್ತಾ ಬಂದಿದ್ದೇನೆ. ದೇವದಾಸಿ ಮಹಿಳೆಯರ ಪರವಾಗಿ, ಬಿಸಿಯೂಟ-ಅಂಗನವಾಡಿ ಕಾರ್ಯಕರ್ತೆಯರಿಗಾಗಿ, ಕೊಡಗಿನ ಆದಿವಾಸಿಗಳಿಗಾಗಿ ಏನು ಸಾಧ್ಯವೋ ಅಷ್ಟು ಮಟ್ಟಿಗೆ ಕೈಜೋಡಿಸಿದ್ದೇನೆ. ಹೀಗೆ ಎಲ್ಲರ ಪರವಾಗಿ ಕೆಲಸ ಮಾಡಿದ್ದೀನಿ. ಅದೇ ರೀತಿ, ಸಿನೆಮಾ ರಂಗದಲ್ಲೂ ಸಮಸ್ಯೆಗಳಿವೆ, ಮೇಲ್ನೋಟಕ್ಕೆ ಗೊತ್ತಾಗದಿದ್ದರೂ ಬಹಳ ತೊಂದರೆಯಲ್ಲಿರುವ ಜನರು ಇಲ್ಲೂ ಇದ್ದಾರೆ. ‘ಫೈರ್’ನ ಕೆಲಸ ಅದಕ್ಕೆ ಪರಿಹಾರ ಹುಡುಕುವ ಒಂದು ಪ್ರಯತ್ನ.
ಹಾಗೆಯೇ, ‘ಮೀಟೂ’ ಕೂಡಾ; ಕೆಲಸದ ಸ್ಥಳದಲ್ಲಿರುವ ಕೆಟ್ಟ ಪರಿಸ್ಥಿತಿಯ ಬಗ್ಗೆ ಅದರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮಾತನಾಡಲಾರಂಭಿಸಿದ್ದಾರೆ. ಎಲ್ಲ ಮಹಿಳೆಯರಿಗೆ ಇದರಿಂದ ತುಂಬ ಉಪಯೋಗ ಅಂತ ಇಲ್ಲ. ಒಂದು ಮಟ್ಟಿಗೆ ಇದರಲ್ಲಿ ಮಾತನಾಡುತ್ತಿರುವವರೆಲ್ಲ ‘ಸವಲತ್ತುಗಳುಳ್ಳವರು’ (ಪ್ರಿವಿಲೆಡ್ಜ್‍ಡ್) ಎಂಬುದು ನಿಜ; ಆದರೆ ಎಲ್ಲಿ? ಸಮಾಜದಲ್ಲಿ ಇತರರಿಗೆ ಹೋಲಿಸಿದಾಗ ಪ್ರಿವಿಲೆಡ್ಜಡ್ ಇರಬಹುದು, ಚಿತ್ರರಂಗದಲ್ಲಿ ಪ್ರಿವಿಲೆಡ್ಜ್ ಅಲ್ಲ. ಆದ್ದರಿಂದಲೇ ಅವರ ಮೇಲೆ ಇಂತಹ ಹಿಂಸೆಗಳು ನಡೆಯಲು ಸಾಧ್ಯವಾಗುತ್ತಿದೆ. ಅವರ ಪರವಾಗಿಯೂ ದನಿಗಳು ಏಳಬೇಕಿದೆ.
ಸಂದರ್ಭಕ್ಕೆ ತಕ್ಕಂತೆ ಕೆಲಸ ಇರಬೇಕು. ಒನ್ ಅಟ್ ದಿ ಎಕ್ಸ್‍ಪೆನ್ಸ್ ಆಫ್ ದಿ ಅದರ್ ಆಗಬಾರದು. ಎಲ್ಲಾ ಶೋಷಿತ ಮಹಿಳೆಯರ ಪರವಾದ ಆಂದೋಲನವು ನಡೆಯಬೇಕು; ಅವರ ಮೇಲಾಗುವ ಲೈಂಗಿಕ ಹಿಂಸಾಚಾರಕ್ಕೂ ನಾವೆಲ್ಲ ಸ್ಪಂದಿಸಬೇಕು ಮತ್ತು ಅದೇ ಸಂದರ್ಭದಲ್ಲಿ ಮೀಟೂ ಆಂದೋಲನವೂ ನಡೆಯಬೇಕು. ಮೀಟೂದಂತಹ ಆಂದೋಲನಗಳಿಗೆ ನಮ್ಮ ಸಮಾಜದಲ್ಲಿ ತನ್ನದೇ ಆದಂತಹ ಮಹತ್ವವಿದೆ.
ಓದುಗರಿಗೆ ಏನು ಹೇಳಲು ಬಯಸುತ್ತೀರಿ?
ಇಂತಹ ಆಂದೋಲನಗಳಿಗೆ ಒಂದು ರಭಸ ಇರಬೇಕು, ಎಲ್ಲರ ಬೆಂಬಲ ಬೇಕು. ಎಲ್ಲರೂ ಬಂದು-ಮುಖ್ಯವಾಗಿ ಮಹಿಳೆಯರು ಬಂದು- ಮಾತನಾಡಬೇಕು. ಸತ್ಯ ಹೇಳುವ ಜೊತೆ ಕೇಳುವುದಕ್ಕೂ ಒಂದು ಮನಸ್ಥಿತಿ ಬೇಕು.
‘ಮಿ ಟೂ ಚಳವಳಿ’ಯಿಂದ ಗೊತ್ತಾದದ್ದು ಮಹಿಳೆಯರಿಗೆ ತಮ್ಮ ಹಕ್ಕುಗಳ ಅರಿವು ಮೂಡುತ್ತಿದೆ. ಹಾಗೆನೇ ಗಂಡಸರಿಗೆ ತಮ್ಮ ನಡವಳಿಕೆ ಹೇಗಿರಬೇಕು ಎಂಬುದು ಅರಿವಾಗುತ್ತಿದೆ, ಅರಿವಾಗಿಲ್ಲದಿದ್ದರೆ ಅರ್ಥಮಾಡಿಸಲು ಕೂಡಾ ಹೆಣ್ಣುಮಕ್ಕಳು ಸಮರ್ಥರಾಗಿದ್ದಾರೆ ಎಂಬುದು. ಆದ್ದರಿಂದ ಈ ಬೆಳವಣಿಗೆ ಇನ್ನಷ್ಟು ಹೆಚ್ಚಾಗಬೇಕು, ವಿಸ್ತರಣೆಯಾಗಬೇಕು.
• ಸಂದರ್ಶನ
ಸರೋವರ್ ಬೆಂಕಿಕೆರೆ, ಮಲ್ಲಿಗೆ ಸಿರಿಮನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...