ಕೆಲ ದಿನಗಳ ಹಿಂದೆ ಭಾರತದ 64ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಆದರೆ ಅದ್ಯಾಕೋ ಅವತ್ತು ನನ್ನಲ್ಲಿ ನಮ್ಮ ದೇಶದ ಬಗ್ಗೆ ಅಭಿಮಾನವಾಗಲಿ, ಭರವಸೆಯಾಗಲಿ ಮೂಡಲೇ ಇಲ್ಲ. ಇತ್ತೀಚೆಗೆ ಸವಣೂರಿನಲ್ಲಿ ಭಂಗಿ ಸಂಸಾರವೊಂದು ತಮ್ಮ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದು; ಹಣವಂತರು ತಮ್ಮ ದೇಶಪ್ರೇಮವನ್ನು ಪ್ರದರ್ಶಿಸಲು ಅನುಕೂಲವಾಗಲೆಂದು ಚಿಂದಿ ಬಟ್ಟೆ ಧರಿಸಿದ್ದ ಬಡಮಕ್ಕಳು ಸಿಗ್ನಲ್ ಲೈಟ್‌ಗಳಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರುತ್ತಿದ್ದದ್ದು; ಇದೇ ಶುಕ್ರವಾರ ಬಿಡುಗಡೆಗೊಳ್ಳುತ್ತಿರುವ ನಮ್ಮ ಪ್ರಕಾಶನದ ’ಅಸ್ಪೃಶ್ಯ ವಸಂತ’ ಕಾದಂಬರಿಯಲ್ಲಿನ ನಾಲ್ಕು ತಲೆಮಾರಿನ ದಲಿತ ಕುಟುಂಬವೊಂದರ ದಾರುಣ ಬದುಕು ಮತ್ತು ಪ್ರತಿಭಟನೆ… ಇವೆಲ್ಲವೂ ನನ್ನ ಮನಸ್ಸನ್ನು ಕವಿದಿದ್ದವು.
ನಮ್ಮ ದೇಶದ ಬಹಳಷ್ಟು ಜನ ಇವತ್ತಿಗೂ ಸ್ವಾಭಿಮಾನದ ಬದುಕಿನಿಂದ ವಂಚಿತರಾಗಿರುವಾಗ ಈ ’ಸ್ವಾತಂತ್ರ್ಯ ದಿನಾಚರಣೆ’ಗೆ ಏನು ಅರ್ಥ? 1947ರಲ್ಲಿ ಈ ದೇಶದ ಜನ ಕಂಡಿದ್ದ ’ಸಮಾನತೆ, ಸಹಬಾಳ್ವೆ, ಸೌಹಾರ್ದ ಭಾರತ’ದ ಕನಸು ಈಗ ನುಚ್ಚುನೂರಾಗಿದೆ.
ಇದೆಲ್ಲದರ ಬಗ್ಗೆ ಯೋಚಿಸುತ್ತಾ, ಸ್ವಾತಂತ್ರ್ಯದ ಮುಖ್ಯ ರೂವಾರಿ ಆಗಿದ್ದ ಮಹಾತ್ಮ ಗಾಂಧಿಯ ಸಿದ್ಧಾಂತ, ತ್ಯಾಗ, ಆಶಯಗಳೆಲ್ಲವೂ ಈಗ ಸಮಾಧಿ ಸೇರಿವೆ ಎಂದೆನಿಸುತ್ತಿದ್ದಾಗಲೇ ಒಂದು ಹಿಂದಿ ಸಿನಿಮಾ ನೋಡಿದೆ. ಅದರ ಹೆಸರು ’ದಿ ರೋಡ್ ಟು ಸಂಗಮ್.’
ಆ ಸಿನಿಮಾದ ಕೇಂದ್ರ ಹಸ್ಮತುಲ್ಲಾ ಎಂಬ ಮುಸಲ್ಮಾನ ಮೆಕಾನಿಕ್. ಅಲಹಾಬಾದಿನಲ್ಲಿ ಒಂದು ಗ್ಯಾರೇಜ್ ನಡೆಸುತ್ತಿರುವ ಹಸ್ಮತುಲ್ಲಾ ಎಂತಹ ಹಳೆ ಎಂಜಿನ್‌ಅನ್ನೂ ರಿಪೇರಿ ಮಾಡಬಲ್ಲ ಚಾಣಾಕ್ಷ. ಒಂದು ದಿನ ಅಲಹಾಬಾದಿನ ವಸ್ತು ಸಂಗ್ರಹಾಲಯದವರು ಪುರಾತನ ಫೋರ್ಡ್ ಎಂಜಿನ್ ಅನ್ನು ಆತನಿಗೆ ನೀಡಿ ಅದನ್ನು ಆದಷ್ಟು ಬೇಗ ರಿಪೇರಿ ಮಾಡಿಕೊಡಬೇಕೆಂದು ಕೋರುತ್ತಾರೆ. ಅದಕ್ಕೆ ಹಸ್ಮತುಲ್ಲಾ ಒಪ್ಪಿ ಕೆಲಸ ಪ್ರಾರಂಭಿಸುತ್ತಾನೆ.
ಆದರೆ ಮರುದಿನವೇ ಅಲಹಾಬಾದಿನಲ್ಲಿ ಬಾಂಬ್ ಸ್ಫೋಟವಾಗಿ ಕೆಲ ಜನ ಸಾಯುತ್ತಾರೆ. ಎಂದಿನಂತೆ ಪೊಲೀಸರು ಈ ಸ್ಫೋಟದ ಹಿಂದೆ ಮುಸಲ್ಮಾನರೇ ಇರಬೇಕೆಂದು ಭಾವಿಸಿ ಕೈಗೆ ಸಿಕ್ಕ ಮುಸಲ್ಮಾನರನ್ನು ಬಂಧಿಸುತ್ತಾರೆ. ಹೀಗೆ ಅಮಾಯಕರನ್ನು ಬಂಧಿಸಿದ್ದರ ಬಗ್ಗೆ ಕೋಪಗೊಳ್ಳುವ ಮುಸಲ್ಮಾನ ಸಮುದಾಯದ ನಾಯಕರು ತಮ್ಮ ಪ್ರದೇಶಗಳಲ್ಲಿ ಬಂದ್ ಘೋಷಿಸುತ್ತಾರೆ. ಹಸ್ಮತುಲ್ಲಾ ಕೂಡ ತನ್ನ ಗ್ಯಾರೇಜ್ ಬಾಗಿಲು ಹಾಕುತ್ತಾನೆ.
ಆಗ ಟಿವಿ ಚಾನೆಲ್ ಒಂದರ ವರದಿಗಾರ ಹಸ್ಮತುಲ್ಲಾನನ್ನು ಸಂದರ್ಶಿಸಲು ಬರುತ್ತಾನೆ. ಆ ವರದಿಗಾರ ಹಸ್ಮತುಲ್ಲಾಗೆ ಒಂದು ಅಚ್ಚರಿಯ ವಿಷಯವನ್ನು ಬಹಿರಂಗಪಡಿಸುತ್ತಾನೆ. ಅದೇನೆಂದರೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತಾಭಸ್ಮವಿರುವ ಒಂದು ಚೆಂಬು ಇಷ್ಟು ವರ್ಷಗಳ ಕಾಲ ಯಾವುದೋ ಲಾಕರ್‌ನಲ್ಲಿ ಇದ್ದುದ್ದಾಗಿಯೂ, ಗಾಂಧಿಯವರ ಮೊಮ್ಮಗ ಅದನ್ನೀಗ ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳು ಕೂಡುವ ಸಂಗಮದಲ್ಲಿ ವಿಸರ್ಜಿಸಲು ಉದ್ದೇಶಿಸಿದ್ದಾರೆಂದೂ, ಚಿತಾಭಸ್ಮವನ್ನು ಸಂಗಮಕ್ಕೆ ಸಾಗಿಸಲು 1948ರಲ್ಲಿ ಉಪಯೋಗಿಸಿದ್ದ ಫೋರ್ಡ್ ವಾಹನವನ್ನೇ ಉಪಯೋಗಿಸಲಿದ್ದಾರೆಂದೂ, ಅದಕ್ಕಾಗಿಯೇ ಆ ವಾಹನದ ಎಂಜಿನ್‌ಅನ್ನು ರಿಪೇರಿ ಮಾಡಲು ಹಸ್ಮತುಲ್ಲಾನನ್ನು ಕೇಳಲಾಗಿದೆ ಎಂದೂ ವರದಿಗಾರ ಹೇಳುತ್ತಾನೆ.
ಇದನ್ನು ಕೇಳಿ ಹಸ್ಮತುಲ್ಲಾನಿಗೆ ಆಘಾತವಾಗುತ್ತದೆ. ಒಂದೆಡೆ ಇಂತಹ ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದಾನೆ. ಇನ್ನೊಂದೆಡೆ ಅದನ್ನು ಪೂರೈಸಲಾಗದಂತೆ ಆತನ ಸಮುದಾಯದವರೇ ಬಂದ್ ಘೋಷಿಸಿದ್ದಾರೆ. ಹಸ್ಮತುಲ್ಲಾ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ, ಎಲ್ಲಾ ಕೋಮಿನವರೂ ಅಣ್ಣತಮ್ಮಂದಿರಂತೆ ಭಾರತದಲ್ಲಿ ವಾಸಿಸಬೇಕೆಂದು ಬಯಸಿದ್ದ ಮಹಾತ್ಮ ಗಾಂಧಿಯ ಬಗ್ಗೆ ಹಸ್ಮತುಲ್ಲಾನಿಗೆ ಅಪಾರವಾದ ಮೆಚ್ಚುಗೆ; ಆದ್ದರಿಂದಲೇ ಅವರ ಈ ಅಂತಿಮ ಯಾತ್ರೆಗೆ ತನ್ನ ಕೈಲಾದ ಸೇವೆಯನ್ನು ಸಲ್ಲಿಸಬೇಕೆಂಬ ಬಯಕೆ.
ಆ ಕಾರಣಕ್ಕಾಗಿಯೇ ತನ್ನ ಗ್ಯಾರೇಜ್‌ಗೆ ಈ ಬಂದ್‌ನಿಂದ ವಿನಾಯಿತಿ ಕೊಡಬೇಕೆಂದು ತನ್ನ ಸಮುದಾಯದ ನಾಯಕರನ್ನು ವಿನಂತಿಸಿಕೊಳ್ಳುತ್ತಾನೆ. ಆದರೆ ಅದಕ್ಕೆ ಅವರು ಒಪ್ಪುವುದಿಲ್ಲ. ಆಗ ಹಸ್ಮತುಲ್ಲಾ ತನ್ನ ಗ್ಯಾರೇಜ್ ಮುಂದೆ ಧರಣಿ ಕೂರುತ್ತಾನೆ; ಮುಸಲ್ಮಾನರ ಪರ ವಹಿಸಿದ್ದಕ್ಕೆ ತನ್ನ ಪ್ರಾಣತೆತ್ತ ಮಹಾತ್ಮ ಗಾಂಧಿಗೆ ತಾನು ಸೇವೆ ಸಲ್ಲಿಸುತ್ತೇನೆ ಎಂದು ಪಣ ತೊಡುತ್ತಾನೆ. ಹಸ್ಮತುಲ್ಲಾನ ಈ ಗಟ್ಟಿ ನಿರ್ಧಾರವನ್ನು ಕಂಡು ವಿಧಿಯಿಲ್ಲದೆ ಆತನ ಗ್ಯಾರೇಜ್‌ನ ಕೀಲಿ ಕೈಗಳನ್ನು ಆತನ ಸಮುದಾಯದವರೇ ನೀಡುತ್ತಾರೆ.
ಫೋರ್ಡ್ ಎಂಜಿನ್‌ಅನ್ನು ರಿಪೇರಿ ಮಾಡಲು ಹಸ್ಮತುಲ್ಲಾನಿಗೆ ಇತರರ ನೆರವೂ ಬೇಕಾಗುತ್ತದೆ. ಆತನ ಹಿಂದೂ ಸ್ನೇಹಿತ ಡಾ.ಅನ್ಸಾರಿ ನೀಡುವ ಸಲಹೆಯ ಪ್ರಕಾರ ಆತ ತನ್ನ ಸಮುದಾಯದವರ ಪ್ರಮುಖರನ್ನು ಒಬ್ಬೊಬ್ಬರಾಗಿ ತನ್ನತ್ತ ಸೆಳೆಯುತ್ತಾನೆ, ತಾನು ಮಾಡುತ್ತಿರುವುದು ಸರಿಯಾದದ್ದು ಎಂದು ಅವರಿಗೆ ಮನವರಿಕೆ ಮಾಡಿಕೊಡುತ್ತಾನೆ. ಕೊನೆಗೆ ಎಲ್ಲರೂ ಹಸ್ಮತುಲ್ಲಾನ ಪರ ನಿಂತರೂ ಸಮುದಾಯದ ಪ್ರಮುಖ ಕಸೂರಿ ಮತ್ತು ಮೌಲ್ವಿ ಖುರೇಷಿ ಮಾತ್ರ ಆತನ ವಿರುದ್ಧ ನಿಲ್ಲುತ್ತಾರೆ. ಇದರಿಂದ ಹಸ್ಮತುಲ್ಲಾ ತುಂಬಾ ಬೇಸರಗೊಂಡು “ನಾನು ರಿಪೇರಿ ಮಾಡುತ್ತಿರುವ ವಾಹನ ಜಿನ್ನಾದಾಗಿದ್ದರೆ ನಿಮ್ಮ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೆ? ಈ ದೇಶದ ಪ್ರಜೆಗಳಾಗಿ ಈ ದೇಶದ ರಾಷ್ಟ್ರಪಿತನಿಗೆ ನಾವು ತೋರಿಸುವ ಗೌರವವೇ ಇದು” ಎಂದು ಕುಟುಕುತ್ತಾನೆ. ಆದರೂ ಅವರು ಹಸ್ಮತುಲ್ಲಾನ ವಾದಕ್ಕೆ ಒಪ್ಪುವುದಿಲ್ಲ.
ನಗರದಲ್ಲಾಗಲೇ ಬಾಂಬ್ ಸ್ಫೋಟಗೊಂಡಿದೆ, ಮುಸಲ್ಮಾನರು ರೋಷಗೊಂಡು ಬಂದ್ ಘೋಷಿಸಿದ್ದಾರೆ, ಯಾವುದೇ ಕ್ಷಣದಲ್ಲಿ ದೊಂಬಿಗಳಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲೂ ಮಹಾತ್ಮಾ ಗಾಂಧಿ ಅವರ ಚಿತಾಭಸ್ಮವನ್ನು ಹೊತ್ತಿರುವ ವಾಹನ ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ತನ್ನ ಪ್ರದೇಶದಲ್ಲೂ ಸಾಗಿ ಹೋಗಬೇಕೆಂದು ಹಸ್ಮತುಲ್ಲಾ ಅಧಿಕಾರಿಗಳ ಮುಂದೆ ಬೇಡಿಕೊಳ್ಳುತ್ತಾನೆ. ತನ್ನ ಜನರೂ ಗಾಂಧಿಗೆ ಗೌರವ ಸಲ್ಲಿಸುವ ಅವಕಾಶ ನೀಡಬೇಕೆಂದು ಕೇಳಿಕೊಳ್ಳುತ್ತಾನೆ. ತನ್ನ ಎಲ್ಲ ಕಷ್ಟಗಳ ನಡುವೆಯೂ ಆತ ತಮ್ಮೊಂದಿಗೆ ಸಹಕರಿಸಿದ್ದರಿಂದ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.
ಗಾಂಧಿಯ ಚಿತಾಭಸ್ಮವನ್ನು ಹೊತ್ತ ವಾಹನ ಮುಸಲ್ಮಾನರ ಪ್ರದೇಶವನ್ನು ಪ್ರವೇಶಿಸುತ್ತದೆ. ಆದರೆ ಎಲ್ಲೂ ಜನರಿಲ್ಲ. ಎಲ್ಲ ಅಂಗಡಿಗಳು, ಮನೆಗಳು ತಮ್ಮ ಕದ ಮುಚ್ಚಿದ್ದು ಎಲ್ಲೆಡೆ ನಿಶಬ್ದ ಆವರಿಸಿದೆ. ಇದನ್ನು ನೋಡಿ ಹಸ್ಮತುಲ್ಲಾ ಆತಂಕಗೊಳ್ಳುತ್ತಾನೆ. ಆದರೆ ವಾಹನ ಸಾಗಿದಂತೆಲ್ಲ ನಿಧಾನವಾಗಿ ಜನ ಪ್ರತ್ಯಕ್ಷರಾಗುತ್ತಾರೆ. ಅವರೆಲ್ಲ ನೋಡುನೋಡುತ್ತಿದ್ದಂತೆ ಮುಸಲ್ಮಾನರ ನಾಯಕ ಕಸೂರಿ ತನ್ನ ಮನೆಯಿಂದ ಹೊರಬಂದು ಗಾಂಧಿಯವರ ಅಂತಿಮ ಯಾತ್ರೆಗೆ ತನ್ನ ನಮನ ಸಲ್ಲಿಸುತ್ತಾನೆ. ಮೌಲ್ವಿ ಖುರೇಷಿ ಕೂಡ ಆತನೊಂದಿಗೆ ನಿಲ್ಲುತ್ತಾನೆ. ಮರುಕ್ಷಣ ಜನಸಾಗರವೇ ಹರಿದು ಬಂದು ವಾಹನ ಸಾಗುತ್ತಿರುವ ರಸ್ತೆಯನ್ನು ಸ್ವಚ್ಛಗೊಳಿಸುತ್ತದೆ, ಪುಷ್ಪಗಳನ್ನು ಅರ್ಪಿಸಿ ಜನರೆಲ್ಲಾ ಕೈ ಮುಗಿಯುತ್ತಾರೆ. ಹಸ್ಮತುಲ್ಲಾ ನಿಟ್ಟುಸಿರಿನೊಂದಿಗೆ ಕಣ್ಣೀರು ಸುರಿಸುತ್ತಾನೆ. ಹಿನ್ನೆಲೆಯಲ್ಲಿ ಗಾಂಧೀಜಿ ಅವರಿಗೆ ಪ್ರಿಯವಾಗಿದ್ದ ’ಈಶ್ವರ್, ಅಲ್ಲಾ ತೇರೇ ನಾಮ್ ಸಬುಕೊ ಸಮ್ಮತಿ ದೇ ಭಗವಾನ್’ ಹಾಡು ಕೇಳಿಸುತ್ತಾ ಸಿನಿಮಾ ಅಂತ್ಯಗೊಳ್ಳುತ್ತದೆ.
ಈ ಚಿತ್ರದ ವಿಶೇಷ ಯಾವುದೆಂದರೆ ಇದರಲ್ಲಿ ಎಲ್ಲೂ ಗಾಂಧೀಜಿಯವರ ನೀತಿ, ಮೌಲ್ಯಗಳ ಬಗ್ಗೆ ಯಾರೂ ಮಾತಾಡುವುದಿಲ್ಲ. ಅವರು ಸಾಂದರ್ಭಿಕ ಕಥಾವಸ್ತು ಮಾತ್ರ ಆಗಿದ್ದಾರೆ. ಆದರೂ ಹಸ್ಮತುಲ್ಲಾ ಎಂಬ ಸಾಮಾನ್ಯ ಮನುಷ್ಯನೊಳಗಡೆ ಗಾಂಧಿ ಚಿಗುರೊಡೆದು ಆತನ ಮೂಲಕ ಕಾಣಿಸಿಕೊಳ್ಳುತ್ತಾರೆ. ಕಾಯಕವೇ ಕೈಲಾಸ, ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ; ತನಗೆ ಸರಿ ಅನ್ನಿಸಿದ್ದನ್ನು ಮಾಡಬೇಕು, ತನ್ನ ನಿಲುವು ಸರಿಯಾದದ್ದಾದರೆ ಜನ ತನ್ನ ಪರ ನಿಲ್ಲುತ್ತಾರೆ; ಯಾವುದೇ ಧರ್ಮ ಸೌಹಾರ್ದಕ್ಕೆ ಒತ್ತು ನೀಡುತ್ತದೆಯೇ ಹೊರತು ದ್ವೇಷಕ್ಕೆ, ಸಂಕುಚಿತ ಚಿಂತನೆಗೆ ಅಲ್ಲ ಎಂಬುದನ್ನೆಲ್ಲ ಹಸ್ಮತುಲ್ಲಾನ ನೇರ, ನಿಷ್ಠುರ ಬದುಕಿನ ಮೂಲಕವೇ ಚಿತ್ರಿಸುತ್ತದೆ.
’ರೋಡ್ ಟು ಸಂಗಮ್’ ಅಮಿತ್ ರೈ ಎಂಬುವವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ೬೪ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ದೇಶ ಎತ್ತ ಸಾಗಿದೆ ಎಂಬುದರ ಬಗ್ಗೆ ವಿಷಾದವಾಗುತ್ತಿರುವಾಗಲೇ ನಮ್ಮ ದೇಶದಲ್ಲಿ ಗಾಂಧೀಜಿಯ ಆಶಯಗಳನ್ನು ನಮ್ಮ ಮುಂದೆ ಮತ್ತೆ ತೆರೆದಿಡುವ ಮೂಲಕ ನಾವು ಸಿನಿಕರಾಗದಂತೆ ನೋಡಿಕೊಳ್ಳುವ ಯುವಕರೂ ಇದ್ದಾರೆ ಎಂದು ಈ ತೋರಿಸಿದ್ದರಿಂದ ಒಂದಿಷ್ಟು ನೆಮ್ಮದಿ ಆಯಿತು.
(ಸೆಪ್ಟೆಂಬರ್ 1, 2010ರ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)