Homeಕರ್ನಾಟಕವರುಣ ಜೊತೆಗೆ ಕೋಲಾರದಿಂದಲೂ ಸ್ಪರ್ಧೆ: ಸಿದ್ದರಾಮಯ್ಯ

ವರುಣ ಜೊತೆಗೆ ಕೋಲಾರದಿಂದಲೂ ಸ್ಪರ್ಧೆ: ಸಿದ್ದರಾಮಯ್ಯ

- Advertisement -
- Advertisement -

ವರುಣ ವಿಧಾನಸಭಾ ಕ್ಷೇತ್ರದ ಜೊತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಾಕ್ಷೇತ್ರದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಎಚ್‌ಡಿ ಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,  “ವರುಣ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು. ವರುಣ ಕ್ಷೇತ್ರವೇ ನನ್ನ ಹುಟ್ಟೂರು. ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ ಇದೆ, ಹಾಗಾಗಿ ಇಲ್ಲಿಂದ ಸ್ಪರ್ಧೆ ಮಾಡುತ್ತಿದ್ದೇನೆ” ಎಂದಿದ್ದಾರೆ.

“ಯಾವುದೇ ಒಂದು ಕ್ಷೇತ್ರ ಲಕ್ಕಿ ಹಾಗೂ ಅನ್‌ಲಕ್ಕಿ ಅಲ್ಲ. ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಹೀಗಾಗಿ ವರುಣಾ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸ್ ಮಾಡಿಕೊಂಡಿತ್ತು. ಈ ಚುನಾವಣೆಯಲ್ಲೂ ಅದರ ಸಾಧ್ಯತೆ ಇದೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌‌ ಜತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, “ನಮ್ಮ ಹೈಕಮಾಂಡ್ ಜತೆಗೆ ಯಾರೂ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಈ ಬಾರಿ ನಾವು ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೇವೆ” ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಿವಾಸದ ಮೇಲಿನ ಕಲ್ಲು ತೂರಾಟದ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿಯವರು ಇದು ಕಾಂಗ್ರೆಸ್‌ನವರ ಕೃತ್ಯ ಎನ್ನುತ್ತಾರೆ. ಯಡಿಯೂರಪ್ಪನವರೇ ಕಾಂಗ್ರೆಸ್ ನವರು ಅಲ್ಲ ಅಂತ ಹೇಳಿದ್ದಾರೆ. ಯಡಿಯೂರಪ್ಪನವರಿಗಿಂತ ಬೊಮ್ಮಾಯಿಗೆ ಈ ವಿಚಾರ ಹೆಚ್ಚು ಗೊತ್ತೇ? ಎಂದು ಪ್ರಶ್ನಿಸಿದ್ದಾರೆ.

ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಕೊಡಬೇಕಿತ್ತು. ಮೂರುವರೆ ವರ್ಷದಿಂದ ಈ ಬಗ್ಗೆ ಸುಮ್ಮನಿದ್ದ ಬಿಜೆಪಿ ಈಗ ಏನು ಮಾಡುತ್ತಿದೆ? ಎಂದು ಕೇಳಿದ್ದಾರೆ.

ಸಿದ್ದರಾಮಯ್ಯನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹುಕಾಲದಿಂದ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಅವರು ಸದ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರ ದೂರವಾದ್ದರಿಂದ ಬೆಂಗಳೂರಿಗೆ ಹತ್ತಿರದ ಕ್ಷೇತ್ರ ಇದ್ದರೆ ಸೂಕ್ತ ಎಂದು ಕೆಲ ದಿನಗಳ ಹಿಂದೆ ಕೋಲಾರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಅವರು ಕೋಲಾರದಿಂದ ಹಿಂದೆ ಸರಿಯುತ್ತಾರೆ ಅಥವಾ ಕೋಲಾರ ಮತ್ತು ವರುಣಾ ಎರಡು ಕ್ಷೇತ್ರಗಳಿಂದಲೂ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 13 ಚುನಾವಣೆಗಳ ಪೈಕಿ ಐದು ಬಾರಿ ಸಿದ್ದರಾಮಯ್ಯನವರು ಗೆದ್ದಿದ್ದರು. ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಂತರದಲ್ಲಿ ರಾಜಕೀಯ ನೆಲೆಯನ್ನು ಒದಗಿಸಿದ್ದು ವರುಣ. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ ವರುಣ ಹೋಬಳಿಯನ್ನು ಪ್ರತ್ಯೇಕಿಸಿ, ಟಿ.ನರಸೀಪರ ಹಾಗೂ ವರುಣದ ಭಾಗಶಃ ಪ್ರದೇಶಗಳನ್ನು ಸೇರಿಸಿ ವರುಣ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ರಚಿಸಲಾಯಿತು. ಈವರೆಗೆ ನಡೆದಿರುವ ಮೂರು ವಿಧಾನಸಭಾ ಚುನಾವಣೆಗಳ ಪೈಕಿ ಎರಡು ಬಾರಿ ಸಿದ್ದರಾಮಯ್ಯ, ಒಂದು ಭಾರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಆಯ್ಕೆಯಾಗಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ – ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಗೆದ್ದು, ಚಾಮುಂಡೇಶ್ವರಿಯಲ್ಲಿ ಸೋತಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...