Homeಮುಖಪುಟಕಾಳಿ ದೇವಿ ಕುರಿತ ಹೇಳಿಕೆಗೆ ದೂರು: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಹೇಳಿದ್ದೇನು?

ಕಾಳಿ ದೇವಿ ಕುರಿತ ಹೇಳಿಕೆಗೆ ದೂರು: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಹೇಳಿದ್ದೇನು?

- Advertisement -
- Advertisement -

ಕಾಳಿ ದೇವಿ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರ ನೀಡಿದ ಹೇಳಿಕೆಗಳು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಕೋಲ್ಕತ್ತಾದಲ್ಲಿ ಬಿಜೆಪಿ ಮುಖಂಡ ಜಿತಿನ್ ಚಟರ್ಜಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂಡಿಯಾ ಟುಡೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂಸದೆ ಮಹುವಾ ಮೊಯಿತ್ರಾರವರು “ಜನರು ತಮ್ಮ ದೇವರನ್ನು ಹೇಗೆ ನೋಡುತ್ತಾರೆ, ಕಲ್ಪಿಸಿಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಅವರು ತಮಗಿಷ್ಟ ಬಂದಂತೆ ತಮ್ಮ ದೇವರನ್ನು ಪೂಜಿಸಬಹುದು. ಉದಾಹರಣೆಗೆ ನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ, ಅವರು ಪೂಜೆ ಮಾಡುವಾಗ ತಮ್ಮ ದೇವರಿಗೆ ವಿಸ್ಕಿ ಅರ್ಪಿಸುತ್ತಾರೆ. ಆದರೆ ನೀವು ಉತ್ತರ ಪ್ರದೇಶಕ್ಕೆ ಹೋಗಿ ನಿಮ್ಮ ದೇವರಿಗೆ ವಿಸ್ಕಿಯನ್ನು ಪ್ರಸಾದವಾಗಿ ಅರ್ಪಿಸಿ ಎಂದು ಹೇಳಿದರೆ, ಅದು ಧರ್ಮನಿಂದನೆಯೆಂದು ಕರೆಸಿಕೊಳ್ಳುತ್ತದೆ” ಎಂದು ಹೇಳಿದ್ದರು.

ಮುಂದುವರಿದು, “ನನಗೆ ಕಾಳಿ ದೇವಿಯು ಮಾಂಸ ತಿನ್ನುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಂತೆ ಕಾಣುತ್ತಾರೆ. ನೀವು ತಾರಾಪೀಠಕ್ಕೆ ಹೋದರೆ, ನೀವು ಧೂಮಪಾನ ಮಾಡುವ ಸಾಧುಗಳನ್ನು ನೋಡುತ್ತೀರಿ. ಆ ರಿತಿಯಾಗಿ ಅವರು ಕಾಳಿಯನ್ನು ಪೂಜಿಸುತ್ತಾರೆ. ನಾನು ಹಿಂದೂ ಧರ್ಮದಲ್ಲಿ, ಕಾಳಿ ಆರಾಧಕಳಾಗಿ ಕಾಳಿಯನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವ ಹಕ್ಕಿದೆ; ಅದು ನನ್ನ ಸ್ವಾತಂತ್ರ್ಯ” ಎಂದು ಹೇಳಿದ್ದರು.

“ನಿಮ್ಮ ದೇವರನ್ನು ಸಸ್ಯಾಹಾರಿಯಾಗಿ ಮತ್ತು ಬಿಳಿ ಬಟ್ಟೆ ತೊಟ್ಟವರಂತೆ ಪೂಜಿಸಲು ನಿಮಗೆ ಎಷ್ಟು ಸ್ವಾತಂತ್ರ್ಯವಿದೆಯೋ ಹಾಗೆಯೇ ಮಾಂಸ ತಿನ್ನುವ ದೇವತೆಯಾಗಿ ಕಲ್ಪಿಸಿಕೊಳ್ಳುವ ಹಕ್ಕು ಸಹ ನನಗಿದೆ” ಎಂದು ಹೇಳಿದ್ದರು.

ಈ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೆ ಟಿಎಂಸಿ ಪಕ್ಷ ಸಹ ಮಹುವಾ ಹೇಳಿಕೆಯನ್ನು ಖಂಡಿಸಿತ್ತು. ಆ ಕುರಿತು ಟ್ವೀಟ್ ಮಾಡಿ, “#IndiaTodayConclaveEast2022 ನಲ್ಲಿ ಮಹುವಾ ಮೊಯಿತ್ರಾರವರು ನೀಡಿದ ಹೇಳಿಕೆ ಮತ್ತು ಕಾಳಿ ದೇವಿಯ ಕುರಿತು ಅವರ ಅಭಿಪ್ರಾಯಗಳನ್ನು ಅವರ ವೈಯಕ್ತಿಕವಾದವುಗಳಾಗಿವೆ. ಅವಗಳನ್ನು ಯಾವುದೇ ರೀತಿಯಲ್ಲಿ ಅಥವಾ ರೂಪದಲ್ಲಿ ಪಕ್ಷವು ಅನುಮೋದಿಸುವುದಿಲ್ಲ. ಇಂತಹ ಹೇಳಿಕೆಗಳನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ” ಎಂದು ಪಕ್ಷ ಟ್ವೀಟ್ ಮಾಡಿತು. ಆದಾದ ನಂತರ ಮಹುವಾ ಮೊಯಿತ್ರ ಪಕ್ಷದ ಟ್ವಿಟರ್ ಖಾತೆಯನ್ನು ಅನ್‌ಫಾಲೋ ಮಾಡಿದ್ದರು.

ಕೆಲದಿನಗಳ ಹಿಂದೆ ಸಿನಿಮಾ ನಿರ್ದೇಶಕಿಯೊಬ್ಬರು ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ಫೋಟೊವನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದರು. ಈ ಕುರಿತು ವಿವಾದ ಉಂಟಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಅವರನ್ನು ಮಹುವಾ ಮೊಹಿತ್ರ ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಹುವಾ, “ನಿಮಗೆಲ್ಲ ಸಂಘಿ-ಸುಳ್ಳು ಹೇಳುವುದು ನಿಮ್ಮನ್ನು ಉತ್ತಮ ಹಿಂದೂಗಳನ್ನಾಗಿ ಮಾಡುವುದಿಲ್ಲ. ನಾನು ಯಾವುದೇ ಚಲನಚಿತ್ರ ಅಥವಾ ಪೋಸ್ಟರ್ ಅನ್ನು ಬೆಂಬಲಿಸಿಲ್ಲ ಅಥವಾ ಧೂಮಪಾನದ ಪದವನ್ನು ಉಲ್ಲೇಖಿಸಿಲ್ಲ. ಭೋಗ್ ಆಗಿ ಯಾವ ಆಹಾರ ಮತ್ತು ಪಾನೀಯವನ್ನು ನೀಡಲಾಗುತ್ತದೆ ಎಂಬುದನ್ನು ನೋಡಲು ತಾರಾಪೀಠದಲ್ಲಿರುವ ನನ್ನ ಮಾ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ಎಂದು ಸಲಹೆ ನೀಡಿದ್ದೇನೆ ಅಷ್ಟೆ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡ ಕೂಡಲೇ ಮಹುವಾ ಮೊಯಿತ್ರರವರು “ಜೈ ಮಾ ಕಾಳಿ, ಬಂಗಾಳಿಗರು ದೇವರನ್ನು ಯಾವುದೇ ಭಯವಿಲ್ಲದೆ ಆರಾಧನೆ ಮಾಡುತ್ತಾರೆಯೇ ಹೊರತು ತುಷ್ಟೀಕರಣ ಮಾಡುವುದಿಲ್ಲ” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ತಮ್ಮ ವಿರುದ್ಧ ದೂರು ನೀಡಿದ ಬಿಜೆಪಿ ವಿರುದ್ಧವೂ ಅವರು ಕಿಡಿಕಾರಿದ್ದಾರೆ. “ನಾನು ಕಾಳಿಯ ಆರಾಧಕಿ, ನನಗೆ ಯಾರ ಭಯವಿಲ್ಲ. ನಿಮ್ಮ ಅಜ್ಞಾನಿಗಳ, ನಿಮ್ಮ ಗೂಂಡಾಗಳ, ನಿಮ್ಮ ಪೊಲೀಸರ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಟ್ರೋಲ್ ಪಡೆಯ ಭಯ ನನಗಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಹುವಾ ಮೊಯಿತ್ರಾರವರ ವಿರುದ್ದದ ದಾಳಿಗಳನ್ನು ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳು ಇಡೀ ದೇಶಾದ್ಯಂತ ವಿಭಿನ್ನವಾಗಿವೆ ಎಂಬುದನ್ನು ಎಲ್ಲಾ ಹಿಂದೂಗಳು ತಿಳಿದಿದ್ದಾರೆ. ಅದನ್ನೆ ಮಹುವಾರವರು ಹೇಳಿದ್ದಾರೆ ಎಂದಿದ್ದಾರೆ.

ಅವೈದಿಕ ದೇವರುಗಳಿಗೆ ಮಾಂಸಾಹಾರವನ್ನು ಪ್ರಸಾದ, ನೈವೈದ್ಯವಾಗಿ ಅರ್ಪಿಸುವ ಪದ್ದತಿ ಕರ್ನಾಟಕದಲ್ಲಿಯೂ ನಡೆದುಕೊಂಡು ಬಂದಿದೆ. ಮಂಟೇಸ್ವಾಮಿ, ಮಾರಮ್ಮ ಸೇರಿದಂತೆ ಹಲವು ದೇವರುಗಳಿಗೆ ಕುರಿ-ಕೋಳಿಗಳನ್ನು ಬಲಿಕೊಟ್ಟು ಅಡುಗೆ ಮಾಡಿ ಬಡಿಸುವುದು ಎಲ್ಲರಿಗೂ ತಿಳಿದೇ ಇದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಲೇಖಕ, ಹೋರಾಟಗಾರ ಜಿ.ಎನ್ ನಾಗರಾಜುರವರು, “ಚೌಡಮ್ಮ, ಕಾಳಮ್ಮ, ಮಾರಮ್ಮ, ಊರಮ್ಮ ಇತ್ಯಾದಿ ನಮ್ಮ ಬಹಳಷ್ಟು ಅಮ್ಮ ದೇವತೆಗಳು ಮಾಂಸಾಹಾರಿಗಳು. ಬುಡಕಟ್ಟುಗಳ ಆರಾಧ್ಯ ದೇವತೆಗಳಾದ ಇವರು ಹಿಂದೆ ಸ್ವತಃ ಬೇಟೆ ಮತ್ತು ಯುದ್ದದಲ್ಲಿ ಭಾಗವಹಿಸುತ್ತಿದ್ದರು. ಆದ ಕಾರಣ ಇವರು ಮಾಂಸಾಹಾರಿಗಳು ಮತ್ತು ಆಯಾ ಬುಡಕಟ್ಟಿನ ಮದ್ಯವನ್ನು ಸೇವನೆ ಮಾಡುತ್ತಿದ್ದರು. ಇವೆಲ್ಲವೂ ಬುಡಕಟ್ಟು ಪದ್ದತಿಗಳಾಗಿವೆ” ಎಂದರು.

ಬುಡಕಟ್ಟು ಜನರು ತಮ್ಮ ಕುಲದೇವತೆಗಳೆಂದು ಪೂಜಿಸುತ್ತಾರೆ. ತಮ್ಮನ್ನು ಅಮ್ಮನ ಒಕ್ಕಲು ಎಂದು ಕರೆದುಕೊಳ್ಳುತ್ತಾರೆ. ಕಾಳೆ, ದುರ್ಗೆ, ಚಾಮುಂಡಿ ಎಲ್ಲರೂ ಇಂತಹ ಕುಲದೇವತೆಗಳೆ ಆಗಿದ್ದಾರೆ. ಅವರ ನಡುವೆಯೇ ಒಬ್ಬ ಪೂಜಾರಿ ಇದ್ದು ಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿಯೇ ಬಲಿ ಕೊಡಲಾಗುತ್ತಿತ್ತು. ಆದರೆ ಈ ದೇವಾಲಯಗಳಲ್ಲಿ ಕೆಲವು ಹೆಚ್ಚು ಆದಾಯ ತಂದ ನಂತರ ಅಲ್ಲಿ ಬ್ರಾಹ್ಮಣ ಪೂಜಾರಿಗಳು ಬಂದರು. ಕಾಲ ಅದನ್ನು ಸಸ್ಯಾಹಾರಿಗಳೆಂದು ಬಿಂಬಿಸುವುದು ಆರಂಭವಾಯಿತು. ಹಾಗಾಗಿ ಜನರು ದೇವಾಲಯದ ದೂರದಲ್ಲಿ ಬಲಿಕೊಡುವುದು ಇಂದಿಗೂ ನಡೆದುಕೊಂಡು ಬಂದಿದೆ. ನಮ್ಮ ಪುರುಷ ದೇವರುಗಳು ಸಹ ಮಾಂಸಾಹಾರಿಗಳೆ. ಸಸ್ಯಾಹಾರಿ ದೇವರುಗಳೆ ನನಗೆ ಕಂಡುಬರುವುದಿಲ್ಲ” ಎಂದರು.

ಕಾಳಿ ದೇವಿಯ ವಿಷಯಕ್ಕೆ ಬಂದರೆ ಅವರನ್ನು ಬಗೆ ಬಗೆಯಾಗಿ ಜನರು ಆರಾಧಿಸುತ್ತಾರೆ. ಕಪ್ಪು ಬಣ್ಣದ ಅರ್ಥ ನೀಡುವ ಕಾಳಿ ಬುಡಕಟ್ಟುಗಳ ಆರಾಧ್ಯ ದೈವ. ಕಾಳಿಯನ್ನು ಹೆಚ್ಚಾಗಿ ಪೂಜಿಸುವ ತಾಂತ್ರಿಕರು ಪಂಚಮಕರವನ್ನು ನಂಬಿದ್ದಾರೆ. ಅವರ ಪ್ರಕಾರ “ಮದ್ಯ, ಮಾಂಸ, ಮತ್ಸ್ಯ, ಮುದ್ರೆ ಮತ್ತು ಮೈಥುನ” ಇವೆಲ್ಲವ ಪೂಜ್ಯವಾಗಿವೆ, ಇವುಗಳಿಂದ ದೇವರು ಸಂಪ್ರೀತರಾಗುತ್ತಾರೆ ಎಂದು ನಂಬಿದ್ದಾರೆ.

ಇದನ್ನೂ ಓದಿ: ಭದ್ರಾವತಿ: ಬಜರಂಗದಳದ ದುಷ್ಕರ್ಮಿಗಳಿಂದ ದಾಂಧಲೆ; 6 ಮಂದಿ ವಿರುದ್ಧ ಎಫ್‌ಐಆರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಎಲ್ಲಾ ಪ್ರಣಿಗಳು ತಮ್ಮ ಹಸಿವಿಗಾಗಿ ಆಹಾರ ಸೇವನೆ ಮಾಡುತ್ತವೆ ,ನಾಯಿ,ಹಂದಿಗಳು ಜನರ ಹೊಲಸು ತಿನ್ನುವ ಕಾರಣ ಮಾನವ ಸಹ ಪ್ರಾಣಿ ಸಂಕುಲದ ಭಾಗ ಆಗಾಗಿ ಇವಳು ನಾಯಿ,ಹಂದಿ ತಿನ್ನುವ ಹೊಲಸನ್ನು ತಿನ್ನಲಿ ,ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಈ ರೀತಿಯ ಚೀನೀ ಬೆಂಬಲಿತ ಹೊಲಸು ತಿನ್ನುವ ಇಂತ ಕಮ್ಯೂನಿಸ್ಟ್ ಪಕ್ಷದ ಮೊಯಿತ್ರಾ ಸಂಸದರ ನಡವಳಿಕೆ ಅವರ ಕೊಳಕುತನ ನೋಡಿಸುತ್ತೇ

  2. ಎಲ್ಲಾ ಪ್ರಣಿಗಳು ತಮ್ಮ ಹಸಿವಿಗಾಗಿ ಆಹಾರ ಸೇವನೆ ಮಾಡುತ್ತವೆ ,ನಾಯಿ,ಹಂದಿಗಳು ಜನರ ಹೊಲಸು ತಿನ್ನುವ ಕಾರಣ ಮಾನವ ಸಹ ಪ್ರಾಣಿ ಸಂಕುಲದ ಭಾಗ ಆಗಾಗಿ ಇವಳು ನಾಯಿ,ಹಂದಿ ತಿನ್ನುವ ಹೊಲಸನ್ನು ತಿನ್ನಲಿ ,ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಈ ರೀತಿಯ ಚೀನೀ ಬೆಂಬಲಿತ ಹೊಲಸು ತಿನ್ನುವ ಇಂತ ಪಕ್ಷದ ಮೊಯಿತ್ರಾ ಸಂಸದರ ನಡವಳಿಕೆ ಅವರ ಕೊಳಕುತನ ನೋಡಿಸುತ್ತೇ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...