Homeಮುಖಪುಟಅಂಬೇಡ್ಕರ್‌ಗೆ ಅಗೌರವ ತೋರಿದ ಜಡ್ಜ್‌ ವಿರುದ್ಧ ದೂರು ದಾಖಲು: ಶುಕ್ರವಾರ ಬೆಂಗಳೂರಿನ ವಿಧಾನಸೌಧ ಎದುರು ಪ್ರತಿಭಟನೆ

ಅಂಬೇಡ್ಕರ್‌ಗೆ ಅಗೌರವ ತೋರಿದ ಜಡ್ಜ್‌ ವಿರುದ್ಧ ದೂರು ದಾಖಲು: ಶುಕ್ರವಾರ ಬೆಂಗಳೂರಿನ ವಿಧಾನಸೌಧ ಎದುರು ಪ್ರತಿಭಟನೆ

ಎಲ್ಲಾ ಕೋರ್ಟುಗಳಲ್ಲಿ ಅಂಬೇಡ್ಕರ್ ಫೋಟೊ ಕಡ್ಡಾಯಗೊಳಿಸಬೇಕು ಮತ್ತು ನ್ಯಾಯಾಂಗದಲ್ಲಿ ಮೀಸಲಾತಿ ಬೇಕು ಎಂಬ ಎರಡು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಧೀರ್ಘ ಹೋರಾಟಕ್ಕೆ ಸಭೆ ನಿರ್ಧರಿಸಿದೆ.

- Advertisement -
- Advertisement -

ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸಿ ಅಗೌರವ ತೋರಿದ ಸೆಶೆನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಯಚೂರಿನ ಘಟನೆ ಖಂಡಿಸಿ ಇಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ವಿ.ನಾಗರಾಜು, ಕರ್ನಾಟಕ ಜನಶಕ್ತಿಯ ಗೌರಿ, ಹಿರಿಯ ವಕೀಲರಾದ ಎಸ್ ಬಾಲನ್, ಹೋರಾಟಗಾರರಾದ ಸಿರಿಮನೆ ನಾಗರಾಜುರವರು ಭಾಗವಹಿಸಿದ್ದರು. “ರಾಯಚೂರಿನ ಜಡ್ಜ್‌ ಅಂಬೇಡ್ಕರ್ ಫೋಟೊ ತೆಗೆಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಅಂಬೇಡ್ಕರ್‌ರವರಿಗೆ ಅಪಚಾರ ಮಾಡಿದ್ದಾರೆ, ಆ ಮೂಲಕ ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇದು ದಲಿತರ ಮೇಲೆ ನಡೆದಿರುವ ದೌರ್ಜನ್ಯವಾಗಿದ್ದು, ಆ ನ್ಯಾಯಾಧೀಶರ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ರಾಜ್ಯಾದ್ಯಂತ ದೂರು ದಾಖಲಿಸಲು ಕರೆ ನೀಡಲಾಗಿದೆ.

“ರಾಯಚೂರಿನಲ್ಲಿ ನಡೆದಿರುವುದು ಬಿಡಿ ಪ್ರಕರಣವಲ್ಲ. ವ್ಯವಸ್ಥಿತವಾಗಿ ಅಂಬೇಡ್ಕರ್‌ರನ್ನು ಮರೆವು ಮಾಡುವ, ಮರೆಯಿಸುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ಪ್ರತಿ ವರ್ಷ ಡಿಸೆಂಬರ್ 06ರ ಅಂಬೇಡ್ಕರ್ ಪರಿನಿರ್ವಾಣದಂದು ಬೆಂಗಳೂರಿನ ವಿಧಾನಸೌಧ ಎದುರು ಇರುವ ಅಂಬೇಡ್ಕರ್ ಪ್ರತಿಮೆ ಎದುರು ಮಾಲಾರ್ಪಣೆ ಮಾಡಿ, ಅವರನ್ನು ಸ್ಮರಿಸಲಾಗುತ್ತಿತ್ತು. ಅದರೆ 2019ರಲ್ಲಿ ಯಡಿಯೂರಪ್ಪನವರು ಸಿಎಂ ಆದ ನಂತರ ಅದನ್ನು ಕಡೆಗಣಿಸಲಾಗುತ್ತಿದೆ. 2021ರ ಡಿಸೆಂಬರ್‌ 06 ರಂದು ಸಹ ಮಾಲಾರ್ಪಣೆ ಮಾಡದಿದ್ದಾಗ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಬೇಕಾಗಿತ್ತು. ಜೊತೆಗೆ ಜನವರಿ 26 ರಂದು ಸಹ ಗಣರಾಜ್ಯೋತ್ಸವದ ದಿನ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ. ಅದಕ್ಕೂ ಪ್ರತಿಭಟನೆ ನಡೆದ ನಂತರವಷ್ಟೇ ಕಾಟಾಚಾರಕ್ಕೆ ಮಾಲಾರ್ಪಣೆ ಮಾಡಲಾಗಿದೆ. ರಾಯಚೂರಿನಲ್ಲಿ ಅಂಬೇಡ್ಕರ್ ಫೋಟೊ ತೆಗೆಸಿರುವುದು ಸಹ ಅದರ ಮುಂದುವರೆದ ಭಾಗವಾಗಿದ್ದು ಅಂಬೇಡ್ಕರ್‌ರವರನ್ನು ಮರೆ ಮಾಚುವ ಹುನ್ನಾರ ನಡೆಯುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ” ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಹೈಕೋರ್ಟ್‌ನಲ್ಲಿ ನ್ಯಾಯಾಧೀಶರೊಬ್ಬರು “ದೇಶದ ಎಲ್ಲಾ ಕೋರ್ಟುಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೊ ಮಾತ್ರ ಇರಬೇಕು ಎಂಬ ಸುತ್ತೋಲೆ ಹೊರಡಿಸಿದ್ದಾರೆ. ಇದು ಸರಿಯಾದುದ್ದಲ್ಲ. ದೇಶದ ಎಲ್ಲಾ ಕೋರ್ಟುಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೊ ಇಡುವಂತೆ ಒತ್ತಾಯಿಸಬೇಕಿದೆ” ಎಂಬ ಆಗ್ರಹ ಕೇಳಿಬಂತು.

ಹಿರಿಯ ವಕೀಲರಾದ ಎಸ್ ಬಾಲನ್‌ರವರು ಮಾತನಾಡಿ “ಇಡಿ ನ್ಯಾಯಾಂಗದಲ್ಲಿಯೇ ದಲಿತ ಪ್ರಾತಿನಿಧ್ಯ ತೀರಾ ಕನಿಷ್ಠ ಮಟ್ಟದಲ್ಲಿದೆ. ‘ಕರ್ನಾಟಕದಲ್ಲಿನ 45 ನ್ಯಾಯಾಧೀಶರಲ್ಲಿ 25 ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, 20 ಜನರು ಇತರೆ ಪ್ರಬಲ ಜಾತಿಗಳಿಗೆ ಸೇರಿದ್ದಾರೆ. ಒಬ್ಬರು ಮಾತ್ರ ದಲಿತ ಸಮುದಾಯಕ್ಕೆ ಸೇರಿದ್ದಾರೆ. ಇನ್ನು ನ್ಯಾಯಾಂಗದ ಉನ್ನತ ಅಧಿಕಾರಿ ಹುದ್ದೆಗಳಲ್ಲಿಯೂ ಸಹ ದಲಿತರಿಲ್ಲ. ಪ್ರತಿಭಾವಂತ ದಲಿತರಿದ್ದರೂ ಸಹ ಅವರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿಲ್ಲ. ಹಾಗಾಗಿ ನ್ಯಾಯಾಂಗದಲ್ಲಿ ಮೀಸಲಾತಿ ಜಾರಿಯಾಗಬೇಕು” ಎಂದು ಆಗ್ರಹಿಸಿದರು.

ಎಲ್ಲಾ ಕೋರ್ಟುಗಳಲ್ಲಿ ಅಂಬೇಡ್ಕರ್ ಫೋಟೊ ಕಡ್ಡಾಯಗೊಳಿಸಬೇಕು ಮತ್ತು ನ್ಯಾಯಾಂಗದಲ್ಲಿ ಮೀಸಲಾತಿ ಬೇಕು ಎಂಬ ಎರಡು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಧೀರ್ಘ ಹೋರಾಟಕ್ಕೆ ಸಜ್ಜಾಗಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಯಾವುದೇ ದೇಶಕ್ಕೆ ಅದರ ಸಂವಿಧಾನವೇ ಮೂಲಾಧಾರವಾಗಿದೆ. ಸಂವಿಧಾನದ ಆಶಯದಂತೆ ಆ ದೇಶಗಳು ಕಾರ್ಯನಿರ್ವಹಿಸುತ್ತವೆ. ಭಾರತದ ಸಂವಿಧಾನದ ಶಿಲ್ಪಿ (Architect of Indian Constitution) ಎಂದು ಅಧಿಕೃತವಾಗಿ ಅಂಬೇಡ್ಕರ್‌ರನ್ನು ಹೆಸರಿಸಲಾಗಿದೆ. ಅಂತಹ ಸಂವಿಧಾನದ ಶಿಲ್ಪಿಯ ಫೋಟೊವನ್ನು ಕೋರ್ಟ್‌ಗಳಲ್ಲಿ ಇಡಬಾರದು ಎಂದರೆ ನಾಚಿಗೇಡಿನ ವಿಷಯ. ಹಾಗಾಗಿ ಎಲ್ಲಾ ಕೋರ್ಟುಗಳಲ್ಲಿ ಫೋಟೊ ಇಡುವಂತೆ ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ತುರ್ತು ಹಕ್ಕೊತ್ತಾಯವಾಗಿ ‘ಗಣರಾಜ್ಯೋತ್ಸವದ ದಿನ ಅಂಬೇಡ್ಕರ್ ಫೋಟೊ ಇರಬೇಕು ಎಲ್ಲಾ ಇಲಾಖೆಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಉಲ್ಲಂಘಿಸಿ ರಾಯಚೂರು ಜಿಲ್ಲಾಧಿಕಾರಿ ತಾಂತ್ರಿಕ ಕಾರಣವೊಡ್ಡಿ ಅಂಬೇಡ್ಕರ್ ಫೋಟೊ ತೆಗೆಸಿದ್ದಾರೆ. ಇದು ಗಂಭೀರ ಲೋಪವಾಗಿದ್ದು, ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಕೂಡಲೇ ಹೈಕೋರ್ಟ್ ಎಲ್ಲಾ ನ್ಯಾಯಾಲಯಗಳಿಗೆ ಅಂಬೇಡ್ಕರ್ ಫೋಟೊ ಇರಬೇಕೆಂಬ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿ ಜನವರಿ 28ರ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಶುಕ್ರವಾರದ ಪ್ರತಿಭಟನೆ ನಂತರ ವಿಸ್ತೃತ ಸಭೆ ನಡೆಸಿ, ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಮತ್ತು ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶಗಳನ್ನು ನಡೆಸಲು ಚಿಂತಿಸಲಾಯಿತು. ಸಭೆಯಲ್ಲಿ ಕಾರ್ಮಿಕ ಮುಖಂಡರಾದ ವರದರಾಜೇಂದ್ರ, ದಲಿತ ಮುಖಂಡರಾದ ಡಿ.ರಾಜಗೋಪಾಲ್ ಮತ್ತಿತರರು ಭಾಗವಹಿಸಿದ್ದರು.


ಇದನ್ನೂ ಓದಿ; ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...