ಕಾಂಗ್ರೆಸ್ ಗೆ ನ್ಯಾಯಯುತ, ವಾಸ್ತವಿಕ ನೆಲೆಗಟ್ಟಿನ ಅಧ್ಯಕ್ಷರ ಅಗತ್ಯವಿದೆ: ಕಪಿಲ್ ಸಿಬಲ್
Photo Courtesy: Hindusthan times

ಕಾಂಗ್ರೆಸ್ ಅಧ್ಯಕ್ಷರು ಮತ್ತು ಪಕ್ಷದೊಳಗೆ ಆಮೂಲಾಗ್ರ ಬದಲಾವಣೆಯಾಗಬೇಕೆಂದು 23 ಜನ ಮುಖಂಡರು ಬರೆದಿರುವ ಪತ್ರದ ಬಗ್ಗೆ ಯಾರಿಗೂ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯುಸಿ) ಪತ್ರ ಬರೆದವರ ಮೇಲೆ ವಾಗ್ದಾಳಿ ಮಾಡಿದಾಗ, ಯಾವುದೇ ನಾಯಕರು ಒಂದು ಹೆಜ್ಜೆ ಮುಂದೆ ಬಂದು ಮಾತನಾಡಲಿಲ್ಲ ಎಂದು ಭಿನ್ನಮತೀಯ ಪತ್ರ ಬರೆದವರಲ್ಲಿ ಪ್ರಮುಖರಾದ ಕಪಿಲ್ ಸಿಬಲ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

“ಕಾಂಗ್ರೆಸ್ ಪಕ್ಷಕ್ಕೆ ಈಗ ನ್ಯಾಯಯುತವಾದ ಮತ್ತು ವಾಸ್ತವಿಕ ನೆಲೆಗಟ್ಟಿನ ಆಧಾರದಲ್ಲಿ ಅಧ್ಯಕ್ಷರ ಅಗತ್ಯವಿದೆ” ಎಂದು ಉಲ್ಲೇಖಿಸುತ್ತಾ, ಪತ್ರದಲ್ಲಿ ಪಟ್ಟಿಮಾಡಲಾಗಿರುವ ಅಂಶಗಳನ್ನು ಚರ್ಚಿಸಿ, ಆದಷ್ಟು ಬೇಗ ಪರಿಹರಿಸಬೇಕು ಎಂದು ಹೇಳಿದರು.

“ಬಿಜೆಪಿ ಸಂವಿಧಾನವನ್ನು ಛಿದ್ರಗೊಳಿಸುತ್ತಿದೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್ ಪಕ್ಷವು ತನ್ನ ಸಂವಿಧಾನಕ್ಕೇ ಬದ್ದವಾಗಿಲ್ಲ. ನಮಗೆ ಬೇರೇನೂ ಬೇಡ, ನಮ್ಮ ಪಕ್ಷದ ಸಂವಿಧಾನವನ್ನು ಪಾಲಿಸಿದರೆ ಅಷ್ಟೇ ಸಾಕು” ಎಂದು ಸ್ಪಷ್ಟವಾದ ವಿರೋಧವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್ ಗೆ ಇನ್ನೂ 50 ವರ್ಷ ವಿರೋಧಪಕ್ಷದ ಸ್ಥಾನವೇ ಗತಿ!: ಗುಲಾಮ್ ನಬೀ

“ಪ್ರಸ್ತುತ ದೇಶದ ರಾಜಕಾರಣವು ನಿಷ್ಠೆಯ(loyalty) ಮೇಲೆ ಆಧರಿಸಿದೆ. ಹಾಗಾಗಿ ಈಗ ‘loyalty plus’ ಬೇಕಾಗಿದೆ. ಪ್ಲಸ್ ಎಂದರೆ, ಅರ್ಹತೆ, ಒಳಗೊಳ್ಳುವಿಕೆ, ಸ್ಪಷ್ಟ ಉದ್ದೇಶಕ್ಕೆ ಬದ್ಧತೆ ಮತ್ತು ಒಬ್ಬರ ಮಾತನ್ನು ಕೇಳಿಸಿಕೊಳ್ಳುವುದೇ ಆಗಿದೆ. ರಾಜಕೀಯ ಎಂದರೆ ಹೀಗಿರಬೇಕು” ಎಂದು ಕಪಿಲ್ ಸಿಬಲ್ ವಿವರಿಸಿದರು.

ಪತ್ರಕ್ಕೆ ಸಹಿ ಮಾಡಿದವರನ್ನು ಕೆಲವರು ‘ದೇಶದ್ರೋಹಿಗಳು’ ಎಂದು ಕರೆಯಲಾಗುತ್ತಿದೆ. ಆದರೆ ಪತ್ರದ ಭಾಷೆಯ ಉನ್ನತವಾಗಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ಬಯಕೆಯನ್ನು ದೇಶದ ಹಲವು ಜನರು ಶ್ಲಾಘಿಸಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿದರು.

ಆಗಸ್ಟ್ 24 ರಂದು, ಸಂಸದರು ಮತ್ತು ಮಾಜಿ ಮಂತ್ರಿಗಳು ಸೇರಿದಂತೆ 23 ಕಾಂಗ್ರೆಸ್ ಮುಖಂಡರು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ‘ವ್ಯಾಪಕ ಸುಧಾರಣೆ, ನ್ಯಾಯಯುತ ಆಂತರಿಕ ಚುನಾವಣೆ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪೂರ್ಣಕಾಲಿಕ ನಾಯಕತ್ವ’ದ ಬಗ್ಗೆ ಬೇಡಿಕೆ ಇಟ್ಟಿದ್ದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಪತ್ರ ಬರೆದಿರುವವರ ಮೇಲೆ ವಾಗ್ದಾಳಿ ಮಾಡಲಾಯಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಾಜರಿದ್ದರು. ಪತ್ರ ಬರೆದಿರುವವರನ್ನು ಖಂಡಿಸಿದ್ದನ್ನು ಬಿಟ್ಟರೆ, ಪತ್ರದಲ್ಲಿನ ವಿಷಯಗಳ ಚರ್ಚೆ ಮುನ್ನೆಲೆಗೆ ಬರಲೇ ಇಲ್ಲ. ಭಿನ್ನಮತೀಯ ಪತ್ರಕ್ಕೆ ದೇಶದಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನ ನಡೆಯುವವರೆಗೂ ಸೋನಿಯಾ ಗಾಂಧಿ ಮಧ್ಯಂತರ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂದು ಘೋಷಿಸುವುದರೊಂದಿಗೆ ಅಂದಿನ ಸಭೆ ಕೊನೆಗೊಂಡಿತ್ತು.


ಇದನ್ನೂ ಓದಿ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ; ’ಭಿನ್ನಮತೀಯ’ ಪತ್ರದ ಬಗ್ಗೆ ಭಾರಿ ಚರ್ಚೆ

LEAVE A REPLY

Please enter your comment!
Please enter your name here