Homeಮುಖಪುಟಜಾರ್ಖಂಡ್‌ನ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಜಾರ್ಖಂಡ್‌ನ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

- Advertisement -
- Advertisement -

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಹಾಗೂ ಕಾಂಗ್ರೆಸ್‌ನ ಏಕೈಕ ಸಂಸದೆ ಗೀತಾ ಕೋಡಾ ಅವರು ಸೋಮವಾರ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

ಗೀತಾ ಕೋಡಾ ನಿರ್ಗಮನದಿಂದ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮೈತ್ರಿಕೂಟದಲ್ಲಿ ವಿಜಯ್ ಹನ್ಸ್‌ಡಾಕ್‌ ಒಬ್ಬರು ಮಾತ್ರ ಸಂಸದರಾಗಿ ಉಳಿದಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿತ್ತು. ಉಳಿದ ಎರಡು ಸ್ಥಾನಗಳ ಪೈಕಿ ತಲಾ ಒಂದು ಸ್ಥಾನವನ್ನು ಕಾಂಗ್ರೆಸ್ ಮತ್ತು ಜೆಎಂಎಂ ಗೆದ್ದುಕೊಂಡಿತ್ತು.

ಗೀತಾ ಕೋಡಾ ಜೊತೆ ಅವರ ಪತಿ, 2017ರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ 4,000 ಕೋಟಿ ರೂಪಾಯಿ ಅವ್ಯವಹಾರದ ಆರೋಪ ಹೊತ್ತಿದ್ದ ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಧು ಕೋಡಾ ಕೂಡ ಬಿಜೆಪಿ ಸೇರಿದ್ದಾರೆ.

ಸಿಂಗ್‌ಭೂಮ್ ಕ್ಷೇತ್ರದ ಸಂಸದೆಯಾಗಿರುವ ಗೀತಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಕೊಲ್ಹಾನ್ ವಿಭಾಗದಲ್ಲಿ ಪಕ್ಷಕ್ಕೆ ಬಲ ಬರಲಿದೆ ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳಿವೆ. ಕೊಲ್ಹಾನ್ ವಿಭಾಗದಲ್ಲಿ
ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಸರೈಕೆಲಾ-ಖಾರ್ಸಾವಾನ್ ಈ ಮೂರು ಜಿಲ್ಲೆಗಳು ಒಳಗೊಂಡಿವೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಪ್ರದೇಶದಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು.

ಗೀತಾ ಕೋಡಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ, ಕಾಂಗ್ರೆಸ್ ಮಧು ಕೋಡಾ ಅವರನ್ನು ಸಿಎಂ ಮಾಡಿದ ನಂತರ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅರ್ಜುನ್ ಮುಂಡಾ ನೇತೃತ್ವದ ಎನ್‌ಡಿಎ ಸರ್ಕಾರದ ಪತನದ ನಂತರ, 2006 ರಲ್ಲಿ ಸ್ವತಂತ್ರ ಶಾಸಕರಾಗಿದ್ದ ಮಧು ಕೋಡಾ ಜಾರ್ಖಂಡ್‌ನ ಸಿಎಂ ಆಗಿದ್ದರು. ಯುಪಿಎ ಒಕ್ಕೂಟ ಇವರನ್ನು ಒಮ್ಮತದ ಅಭ್ಯರ್ಥಿಯಾಗಿ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಮಧು ಕೋಡಾ ಅವರ ಸರ್ಕಾರಕ್ಕೆ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಿತ್ತು.

ಆದರೆ, 2008ರಲ್ಲಿ ಯುಪಿಎಯ ಮೈತ್ರಿಕೂಟದ ಪಕ್ಷಗಳಲ್ಲಿ ಒಂದಾಗಿದ್ದ ಜೆಎಂಎಂ ತನ್ನ ಬೆಂಬಲವನ್ನು ಹಿಂಪಡೆದು ಮಧು ಕೋಡಾ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಮಧುಕೋಡಾ ಸರ್ಕಾರಕ್ಕೆ ಕಾಂಗ್ರೆಸ್ ಹೂಡಿದ ಸಂಚು ಕಾರಣ ಎಂದು ಹೇಳಲಾಗಿತ್ತು.

ನಂತರ ಮಧು ಕೋಡಾ ಅವರನ್ನು ಜಾರ್ಖಂಡ್‌ನ ಯುಪಿಎ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಆಗ ಜೆಎಂಎಂನ ಶಿಬು ಸೊರೆನ್ ಸಿಎಂ ಆಗಿದ್ದರು.

ಗೀತಾ ಕೋಡಾ ಅವರು ತಕ್ಷ ಪಕ್ಷ ತೊರೆದು ಬಿಜೆಪಿ ಸೇರಿರುವುದಕ್ಕೆ ಕಾಂಗ್ರೆಸ್ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. “ಈ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಪಕ್ಷದೊಂದಿಗೆ ಅವರಿಗೆ ಅಸಮಾಧಾನದ ಇತ್ತು ಎನ್ನುವುದು ಸುಳ್ಳು. ಗೀತಾ ಅವರು ಭಾನುವಾರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಗೀತಾ ಅವರು 2009ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಆ ವರ್ಷದಲ್ಲಿ ಅವರು ಜೈ ಭಾರತ್ ಸಮಂತಾ ಪಕ್ಷದ ಅಭ್ಯರ್ಥಿಯಾಗಿ ಜಗನ್ನಾಥಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಜೈ ಭಾರತ್ ಸಮಂತಾ ಪಕ್ಷವನ್ನು ಮಧುಕೋಡಾ ಸ್ಥಾಪಿದ್ದರು. ಗೀತಾ ಜಗನ್ನಾಥಪುರದಿಂದ ಗೆಲ್ಲುವ ಮುನ್ನ, ಇದೇ ಕ್ಷೇತ್ರದಿಂದ ಎರಡು ಬಾರಿ (2000ರಲ್ಲಿ ಬಿಜೆಪಿ ಮತ್ತು 2005ರಲ್ಲಿ ಸ್ವತಂತ್ರ) ಮಧು ಕೋಡಾ ಈ ಕ್ಷೇತ್ರದಿಂದ ಗೆಲುವುದ ದಾಖಲಿಸಿದ್ದರು.

ಕಾಂಗ್ರೆಸ್‌ನಿಂದ ಗೆದ್ದ ಏಕೈಕ ಅಭ್ಯರ್ಥಿ ಗೀತಾ ಅವರು, 2014ರಲ್ಲಿ ಮೋದಿ ಅಲೆಯನ್ನು ಎದುರಿಸಿ ಸೀಟು ಉಳಿಸಿಕೊಂಡಿದ್ದರು. 2018 ರಲ್ಲಿ ಅವರ ಜೈ ಭಾರತ್ ಸಮಂತಾ ಪಕ್ಷವು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು.

ಸಕ್ರಿಯ ಸಂಸದೀಯ ಪಟುವಾಗಿರುವ ಗೀತಾ ಕೋಡಾ ಅವರು, ಈ ಅವಧಿಯ ಲೋಕಸಭೆಯಲ್ಲಿ ಶೇ.69 ಹಾಜರಾತಿ ಹೊಂದಿದ್ದಾರೆ. ಗೀತಾ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

ಡಿಸೆಂಬರ್ 2021ರಲ್ಲಿ ಜನ ಗಣತಿ ನಡೆದಾಗ ಬುಡಕಟ್ಟು ಸಮುದಾಯದ ಜನರಿಗೆ ‘ಸರ್ನಾ ಧಾರ್ಮಿಕ ಸಂಹಿತೆ’ ಪ್ರತ್ಯೇಕ ಕೋಡ್ ಕೊಡುವಂತೆ ಗೀತಾ ಧ್ವನಿಯೆತ್ತಿದ್ದರು. ಈ ವಿಷಯದ ಬಗ್ಗೆ ಮೋದಿ ಸರ್ಕಾರದ ನಿಲುವನ್ನು ಅವರು ಪ್ರಶ್ನಿಸಿದ್ದರು. ಲೋಕಸಭೆಯಲ್ಲಿ ಮಾತನಾಡಿದ್ದ ಗೀತಾ, “ಸ್ಪೀಕರ್ ಸರ್, ಆದಿವಾಸಿಗಳು ಭಾರತದ ಮೂಲನಿವಾಸಿಗಳು ಮತ್ತು ಅವರ ಅಸ್ತಿತ್ವವು ಅಪಾಯದಲ್ಲಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೇವಲ ಯೋಜನೆಗಳು ಬುಡಕಟ್ಟು ಜನರಿಗೆ ಪ್ರಯೋಜನವನ್ನು ನೀಡುವುದಿಲ್ಲ. ಸರ್ಕಾರ ಆದಿವಾಸಿಗಳ ಪರ ಇದೆ ಎಂಬುವುದನ್ನು ತೋರಿಸಿಕೊಡಬೇಕು. ಅವರ ಪರ ಜೋರಾಗಿ ಮಾತನಾಡಬೇಕು. ಇಂದು ಆದಿವಾಸಿಗಳು ಅಪಾಯದಲ್ಲಿದ್ದಾರೆ” ಎಂದು ಹೇಳಿದ್ದರು.

ಇದನ್ನೂ ಓದಿ : ಆಂಧ್ರ ವಿಧಾನಸಭೆ ಚುನಾವಣೆ: ಮೊದಲ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...