ಭಾರತದಲ್ಲಿ 31 ಜನರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದ್ದು, ಜನ ಸಂದಣಿ ಇರುವ ಕಡೆಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಹೋಗಲೇ ಬೇಕಾದರೆ ಮಾಸ್ಕ್ ಧರಿಸಿ ಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಕೊರೋನ ವೈರಸ್ ಹರಡುವ ಮತ್ತು ಜನರು ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಾಕಷ್ಟು ಪ್ರಚಾರವನ್ನು ನಡೆಸುತ್ತಿದೆ. ಹೀಗಾಗಿ ಜನರು ಎಚ್ಚರ ವಹಿಸುವ ಜೊತೆಗೆ ಸ್ವಲ್ಪಮಟ್ಟಿನ ಭೀತಿಗೂ ಒಳಗಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಈ ಬಾರಿ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕೊರೋನಾ ವೈರಸ್ ಕುರಿತು ವದಂತಿ ಹಬ್ಬಿಸಿದರೆ ಶಿಕ್ಷೆ ಅನುಭವಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಜನರು ಜಾಗೃತಿಗೊಳ್ಳಲು ಮತ್ತು ಭೀತಿಗೊಳ್ಳಲು ಪುಷ್ಟಿ ನೀಡಿದೆ. ಸರ್ಕಾರಗಳು ಮತ್ತು ಆರೋಗ್ಯ ಇಲಾಖೆಯ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಯಾವುದೇ ಸರ್ಕಾರ ಇದ್ದರೂ ಜನರು ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜಾಗೃತಿ ಮೂಡಿಸಲೇಬೇಕು. ಆದರೆ ಇದೇ ಜನರ ಭೀತಿಗೆ ಕಾರಣವೂ ಆಗಬಾರದು ಅಲ್ಲವೇ?
ಮುಖ್ಯ ಸಂಗತಿಯೆಂದರೆ ತುಮಕೂರಿನಲ್ಲಿ ಕೊರೋನ ವೈರಸ್ ಭೀತಿ ಹೆಚ್ಚಾದಂತೆ ಕಂಡುಬರುತ್ತಿದೆ. ಇದೇ ಉದ್ದೇಶದಿಂದ ಮಾಸ್ಕ್ ಧರಿಸುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಮಾಸ್ಕ್ ಹಾಕದೆ ಕಳಿಸುತ್ತಿಲ್ಲ. ಅಷ್ಟರಮಟ್ಟಿಗೆ ಜಾಗೃತಿ ಮತ್ತು ಭೀತಿ ಜಯರನ್ನು ಕಾಡತೊಡಗಿದೆ. ತುಮಕೂರು ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಬಗೆದಿರುವುದರಿಂದ ಧೂಳು ಕೂಡ ಹೆಚ್ಚಾಗಿದೆ. ವಾಹನಗಳು ಮುಂದೆ ಸಾಗಿದರೆ ಸಾಕು ಸುಯ್ ಅಂತ ಧೂಳು ಮೆತ್ತಿಕೊಳ್ಳುತ್ತದೆ. ಧೂಳಿನಿಂದ ರಕ್ಷಣೆ ಪಡೆಯಲು ಜನರು ಮಾಸ್ಕ್ ಧರಿಸುವಂತಹ ಪರಿಸ್ಥಿತಿ ಬಂದಿದೆ. ಕೊರೋನ ಭೀತಿ ಒಂದು ಕಡೆಯಾದರೆ ಧೂಳಿನ ಭೀತಿ ಮತ್ತೊಂದು ಕಡೆ. ಇಲ್ಲಿನ ಆರೋಗ್ಯ ಇಲಾಖೆ ಕೊರೋನ ವೈರಸ್ ಬಂದವರಿಗಾಗಿ ಚಿಕಿತ್ಸೆ ನೀಡಲು ಹತ್ತು ಹಾಸಿಗೆಯ ಕೊಠಡಿ ಸಿದ್ದಮಾಡಿಟ್ಟುಕೊಂಡಿದೆ. ಆದರೆ ಧೂಳಿನ ಬಗ್ಗೆ ಜಾಗೃತಿ ಮೂಡಿಸುವ ಗೋಜಿಗೆ ಹೋಗಿಲ್ಲ.
ಕೊರೋನ ವೈರಸ್ ಮತ್ತು ಧೂಳಿನಿಂದ ರಕ್ಷಣೆ ಪಡೆಯಲು ಜನರು ಕಳೆದೊಂದು ವಾರದಿಂದಲೂ ಮಾಸ್ಕ್ ಖರೀದಿಸಿತ್ತಿದ್ದು ಈಗ ತುಮಕೂರಿನಲ್ಲಿ ಮಾಸ್ಕ್ ಗಳ ಕೊರತೆ ಉಂಟಾಗಿದೆ. ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಕೇಳಿದರೆ ಸ್ಟಾಕ್ ಇಲ್ಲ ಎಂಬ ಉತ್ತರ ಬರುತ್ತದೆ. ಕೊರೋನಾ ವೈರಸ್ ಹರಡುತ್ತದೆ ಎಂಬ ಕಾರಣಕ್ಕೆ ಜನರು ಮಾಸ್ಕ್ ಗಳನ್ನು ಖರೀದಿಸಿದರು. ನಮ್ಮ ಅಂಗಡಿಯಲ್ಲಿದ್ದ ಮಾಸ್ಕ್ ನ್ನು 20 ರೂ. 60 ರೂ. 150 ರೂಗಳಿಗೆ ಮಾರಾಟ ಮಾಡಿದೆವು. ಈಗ ಇಡೀ ತುಮಕೂರಿನಲ್ಲಿ ಮಾಸ್ಕ್ ಗಳ ಕೊರತೆ ಇದೆ. ಜನರು ಬಂದು ಕೇಳಿ ವಾಪಸ್ ಹೋಗುತ್ತಿದ್ದಾರೆ. ಇರೋವರಿಗೂ ಮಾರಾಟ ಮಾಡಿದೆ. ಈಗ ಸಿಗುತ್ತಿಲ್ಲ. ಎಲ್ಲಾ ಕಡೇನೂ ಇದೇ ಪರಿಸ್ಥಿತಿ ಇದೆ. ನೀವೇ ನೋಡ್ತಾ ಇದ್ದೀರಲ್ಲ. ಅಂಗಡಿನಲ್ಲಿ ಕುಳಿತಿರೋಕೆ ಆಗುತ್ತಿಲ್ಲ. ಧೂಳು. ನಗರಪಾಲಿಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೇಸಿಗೆ ಬೇರೆ. ಧೂಳಿನಿಂದ ಹಲವು ರೋಗಗಳು ಬರುತ್ತವೆ ಜೊತೆಗೆ ಕೊರೋನಾ ಭೀತಿ ಬೇರೆ. ಏನ್ ಮಾಡೋದು ಹೇಳಿ ಎನ್ನುತ್ತಾರೆ ವಾಸವಿ ಮೆಡಿಕಲ್‌ನ ಕುಮಾರ್.
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲೂ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅವುಗಳ ಬೆಲೆ ಗಗನಕ್ಕೇರಿದೆ. ಕೆಲವು ಶಾಲೆಗಳು ಪ್ರತಿಯೊಂದು ಮಗುವಿಗೂ ಮಾಸ್ಕ್ ಧರಿಸಿ ಬರುವುದನ್ನು ಕಡ್ಡಾಯ ಮಾಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮಾಸ್ಕ್ ಗಳಿಗೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಶಾಲೆಗಳು ಮಕ್ಕಳಿಗೆ ಮಾಸ್ಕ್ ಕೊಡುತ್ತಿವೆ. ಹೀಗಾಗಿ ಮಾಸ್ಕ್ ಗಳು ಸಿಗುತ್ತಿಲ್ಲ. ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ಮಾಸ್ಕ್ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಮಾಸ್ಕ್ ಗಳ ಕೊರತೆ ಉಂಟಾಗಿದ್ದು ಇದಕ್ಕೆ ಆಯಾ ಜಿಲ್ಲಾಡಳಿತಗಳು ಮತ್ತು ಆರೋಗ್ಯ ಇಲಾಖೆಗಳು ಕ್ರಮ ಕೈಗೊಂಡಂತೆ ಕಂಡುಬರುತ್ತಿಲ್ಲ.