Homeಮುಖಪುಟಶ್ರೀಲಂಕಾ ಬಿಕ್ಕಟ್ಟಿನ ಬೀಜಗಳು

ಶ್ರೀಲಂಕಾ ಬಿಕ್ಕಟ್ಟಿನ ಬೀಜಗಳು

- Advertisement -
- Advertisement -

2022 ಮಾರ್ಚ್ ತಿಂಗಳಿಂದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ದೇಶದಲ್ಲಿ ಸಾವಿರಾರು ಜನರು ಸಾವಿರಾರು ಕಡೆಗಳಲ್ಲಿ ಸೇರಿ ಪ್ರತಿಭಟನೆ ಮತ್ತು ಬೀದಿ ಹೊರಾಟಗಳನ್ನು ನಡೆಸಿದ್ದು ಕಂಡುಬಂತು.

ಏರುತ್ತಿರುವ ವಿದ್ಯುತ್ ಬೆಲೆ, ಗ್ಯಾಸ್ ಬೆಲೆ, ದಿನಕ್ಕೆ ಹತ್ತು ಗಂಟೆ ವಿದ್ಯುತ್ ನಿಲುಗಡೆ, ಬ್ರಹ್ಮಾಂಡ ಭ್ರಷ್ಟಾಚಾರ- ಇವು ರಾಜಪಕ್ಸ ವಿರುದ್ಧದ ಈ ಪ್ರತಿಭಟನೆಗಳಿಗೆ ಕಾರಣವಾಗಿದ್ದವು. ರಾಜಪಕ್ಸ ರಾಜೀನಾಮೆ ನೀಡಬೇಕು ಹಾಗೂ ಕುಟುಂಬ ರಾಜಕಾರಣ ಮತ್ತು ಸರ್ಕಾರದ ಭ್ರಷ್ಟಾಚಾರ ಕೊನೆಗೊಳ್ಳಬೇಕು ಎಂಬುದು ಪ್ರತಿಭಟನಕಾರರ ಆಗ್ರಹವಾಗಿತ್ತು. ಮೇ 9, 2022ರಂದು ಸಂಸತ್ ಸದಸ್ಯ ಅಮರಕೀರ್ತಿ ಅತುಕೊರಲ ಅವರು ಜನರ ಗುಂಪಿನ ಕೈಯಲ್ಲಿ ಸಾವಿಗೀಡಾದಂತ ಹಿಂಸಾತ್ಮಕ ಘಟನೆಗಳು ನಡೆದರೂ, ಈ ಪ್ರತಿಭಟನೆಗಳು ಸಹಜ ಮತ್ತು ಸ್ವಯಂಸ್ಫೂರ್ತಿಯಿಂದ ನಡೆದಂತವುಗಳು. ಬಹುತೇಕ ಪ್ರತಿಭಟನೆಗಳು ಶಾಂತವಾಗಿಯೇ ಇದ್ದವು.

ಈಗ ಶ್ರೀಲಂಕಾ ಸರಕಾರವು ತುರ್ತುಪರಿ ಸ್ಥಿತಿಯನ್ನು ಹೇರಿದೆ. ಪ್ರತಿಭಟನಕಾರರ ಮೇಲೆ ಬಲಪ್ರಯೋಗ ನಡೆಸಿದ ಕಾರಣಕ್ಕೆ ಈಗಾಗಲೇ ಒಂಬತ್ತು ಮಂದಿ ಸತ್ತು, ನೂರಾರು ಜನರು ಗಾಯಗೊಂಡಿದ್ದಾರೆ. ನೂರಾರು ಜನರನ್ನು ಬಂಧಿಸಲಾಗಿದೆ.

ಮಹಿಂದ ರಾಜಪಕ್ಸ

ರಾಷ್ಟ್ರೀಯ ಸಚಿವ ಸಂಪುಟದ 26 ಸದಸ್ಯರು ಏಪ್ರಿಲ್ ತಿಂಗಳ ಆರಂಭದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಪ್ರಧಾನಮಂತ್ರಿ ಮಹಿಂದ ರಾಜಪಕ್ಸ ರಾಜೀನಾಮೆ ಕೊಟ್ಟು ಸುರಕ್ಷತೆಯ ಕಾರಣ ನೀಡಿ ಟ್ರಿಂಕಾಮಲಿಯ ನೌಕಾ ನೆಲೆಯಲ್ಲಿ ಅಡಗಿ ಕುಳಿತಿದ್ದಾರೆ. ಪ್ರತಿಭಟನಕಾರರು ಮಹಿಂದ ರಾಜಪಕ್ಸ ಬಂಧನದ ಬೇಡಿಕೆ ಇಟ್ಟಿದ್ದಾರೆ.

ಬಿಕ್ಕಟ್ಟಿನ ಬೇರುಗಳ ಮೂಲ

ಶ್ರೀಲಂಕಾವು 1948ರಲ್ಲಿ ಸ್ವತಂತ್ರವಾಯಿತು. ಬ್ರಿಟಿಷರ ಕಾಲದಲ್ಲಿ ಶ್ರೀಲಂಕಾವು ಆಗಿನ ಭಾರತ ಸರಕಾರದಿಂದ ಆಳಲ್ಪಡುತ್ತಿರಲಿಲ್ಲ. ಆದು ಭಾರತದ ಭಾಗವೂ ಆಗಿರಲಿಲ್ಲ. ಅದು ಸ್ವತಂತ್ರವಾದಾಗ ಬ್ರಿಟಿಷ್ ರಾಜಾಧಿಪತ್ಯವನ್ನು ಒಪ್ಪಿಕೊಂಡಿತ್ತು ಮತ್ತು ಡೊಮಿನಿಯನ್ ಆಫ್ ಸಿಲೋನ್ ಎಂದು ಕರೆಯಲ್ಪಡುತ್ತಿತ್ತು. ಇದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಶ್ರೀಲಂಕಾ ಎಷ್ಟು ಸ್ವತಂತ್ರವಾಗಿದೆ ಎಂಬ ಪ್ರಶ್ನೆ ಎದ್ದಿತ್ತು.

ವಸಾಹತುಶಾಹಿ ಆಡಳಿತದಲ್ಲಿ ಶ್ರೀಲಂಕಾದ ಆರ್ಥಿಕತೆಯನ್ನು ವಾಣಿಜ್ಯ ಬೆಳೆಗಳು ಮತ್ತು ರಫ್ತು ಆಧಾರಿತವಾಗಿ ಬೆಳೆಸಲಾಗಿತ್ತು. ಅದು ಜಾಗತಿಕ ಚಹಾ ಮತ್ತು ರಬ್ಬರ್ ಮಾರುಕಟ್ಟೆಯನ್ನು ಅವಲಂಬಿಸಿತ್ತು. ಅದೇ ಹೊತ್ತಿಗೆ ಭಾಗಶಃ ಮಿಷನರಿಗಳ ಕೆಲಸದಿಂದಾಗಿ, ಭಾಗಶಃ ಬೌದ್ಧ ಸಂಘಟನೆಗಳ ಕೆಲಸದಿಂದಾಗಿ, ಅಲ್ಲದೆ, ವಾಣಿಜ್ಯ ಕೇಂದ್ರವಾಗಿ ಇದ್ದುದರಿಂದ ಬೇರೆ ಚಿಕ್ಕ ದೇಶಗಳಿಗೆ ಹೋಲಿಸಿದಾಗ ಹೆಚ್ಚು ಸಮೃದ್ಧಿಯಿಂದಾಗಿ ಮತ್ತು ಹೆಚ್ಚಾಗಿ ತಮಿಳರಾಗಿದ್ದ ತೋಟದ ಕೆಲಸಗಾರರ ವರ್ಗ ಹೋರಾಟಗಳ ಫಲವಾಗಿ- ಸ್ವಾತಂತ್ರ್ಯ ಪಡೆದ ಕಾಲದಲ್ಲಿ ಶ್ರೀಲಂಕಾವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಏಷ್ಯಾದ ಇತರ ದೇಶಗಳಿಗಿಂತ ಬಹಳಷ್ಟು ಉತ್ತಮ ಮಟ್ಟದ ದಾಖಲೆ ಹೊಂದಿತ್ತು.

ಶ್ರೀಲಂಕಾ ಎಡಕ್ಕೆ ವಾಲಿದ ಸಮಯ

ಶ್ರೀಲಂಕಾದ ರಫ್ತು ಆರ್ಥಿಕತೆಯು 1950 ಮತ್ತು 1960ರ ದಶಕಗಳಲ್ಲಿ ಉಜ್ವಲವಾಗಿ ಇದ್ದು, ಈ ಪ್ರದೇಶದ ಉಳಿದ ದೇಶಗಳಿಗಿಂತ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚು ಯಶಸ್ವಿಯಾಗಿತ್ತು. 1960 ಮತ್ತು 1970ರ ದಶಕಗಳಲ್ಲಿ ಅದು ಸಮಾಜವಾದದ ಕಡೆಗೆ ಸರಿಯಿತು. ದುಡಿಯುವ ವರ್ಗದ ಹೋರಾಟಗಳ ಫಲವಾಗಿ ಅದು ರಾಜಸತ್ತೆಯ ಅಧಿಕಾರವನ್ನು ತಿರಸ್ಕರಿಸಿ, ತನ್ನನ್ನು ಒಂದು ಗಣರಾಜ್ಯವಾಗಿ ಸ್ಥಾಪಿಸಿಕೊಂಡಿತು. ದೇಶವು ಒಂದು ಯೋಜಿತ ಆರ್ಥಿಕತೆಯ ಮಾದರಿಯತ್ತ ಸರಿಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಗಲೂ ಆರ್ಥಿಕತೆಯು ರಫ್ತನ್ನೇ ಅವಲಂಬಿಸಿತ್ತು. 1970ರ ದಶಕದಲ್ಲಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳ ಮೇಲೆ ಪಾಶ್ಚಾತ್ಯ ಶಕ್ತಿಗಳ ನಡೆಸಿದ ಆಕ್ರಮಣದ ಪರಿಣಾಮವಾಗಿ (ಉದಾಹರಣೆಗೆ ವಿಯೆಟ್ನಾಂ, ಕಾಂಬೋಡಿಯಾ ಮತ್ತು ಲಾವೋಸ್ ಮೇಲೆ ಅಮೆರಿಕ ನಡೆಸಿದ ಆಕ್ರಮಣ) ಒಂದು ವ್ಯಾಪಾರ ಕೇಂದ್ರವಾಗಿ ಶ್ರೀಲಂಕಾದ ಸ್ಥಾನಮಾನವು ಕುಸಿಯುತ್ತಾ ಬಂತು.

ಮಾರುಕಟ್ಟೆಗೆ ಶ್ರೀಲಂಕಾದ ಮಾರಾಟ

1977ರಲ್ಲಿ ಸಿರಿಮಾವೋ ಭಂಡಾರನಾಯಕೆ ಸರಕಾರವು ಸರಕಾರಿ ಯೋಜಿತ ಆರ್ಥಿಕತೆಗೆ ಒತ್ತು ನೀಡಿತು. ಆದರೆ, ಅದು ಚುನಾವಣೆಯಲ್ಲಿ ಸೋತು, ಜೆ.ಆರ್. ಜಯವರ್ಧನೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಸರಕಾರ ಅಸ್ತಿತ್ವಕ್ಕೆ ಬಂತು. ಹೊಸ ಸರಕಾರವು ಮಾರುಕಟ್ಟೆ ಆಧರಿತ ಆರ್ಥಿಕತೆಗೆ ಒತ್ತು ನೀಡಿ, ದೇಶವನ್ನು ಮಾರುಕಟ್ಟೆಯ ನಿಯಂತ್ರಣಕ್ಕೆ ತಂದಿತು. ಜಯವರ್ಧನೆ- ಹಿಂದಿನ ಸರಕಾರದ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತು ನಿಯಂತ್ರಣ ಧೋರಣೆಗಳ ವಿರುದ್ಧವಾಗಿದ್ದರು.

ಜೆ.ಆರ್. ಜಯವರ್ಧನೆ

ಜಯವರ್ಧನೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಹಲವಾರು ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸಿದರು. ಅದರ ನಿರ್ದೇಶನದಂತೆ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಯಿತು. ಆಹಾರ ಸಬ್ಸಿಡಿಗಳು ಕುಸಿದವು. ಇದರಿಂದ ಬಡತನವು ಹೆಚ್ಚಾಯಿತು. ಶಿಕ್ಷಣದ ಮೇಲಿನ ವೆಚ್ಚವು ಕಡಿಮೆಯಾಯಿತು. ಪರಿಣಾಮವಾಗಿ ಸಾಕ್ಷರತೆಯ ಮಟ್ಟ ಕಡಿಮೆಯಾಯಿತು. ಆದಾಯ ಮತ್ತು ಸಂಪತ್ತಿನ ಅಸಮಾನತೆ ಹೆಚ್ಚಾಯಿತು. ಅದರ ಪರಿಣಾಮವಾಗಿ ಸಾಮಾಜಿಕ ವಿಭಜನೆ ಮತ್ತು ಧ್ರುವೀಕರಣ ಹೆಚ್ಚಾಯಿತು.

ನಾಗರಿಕ ಅಂತರ್ಯುದ್ಧ

ಶ್ರೀಲಂಕಾದಲ್ಲಿ ತಮಿಳರು ಮತ್ತು ಸಿಂಹಳೀಯರ ನಡುವೆ ಜನಾಂಗೀಯ ಮೇಲಾಟ ಮತ್ತು ಉದ್ವಿಗ್ನತೆ ನಿರಂತರವಾಗಿರುವ ವಿದ್ಯಮಾನವಾಗಿದೆ. ಬ್ರಿಟಿಷ್ ಸರಕಾರದ ಧೋರಣೆಗಳ ಫಲವಾದ ಈ ಉದ್ವಿಗ್ನತೆಯು ಸ್ವಾತಂತ್ರ್ಯದ ಮೊದಲ ವರ್ಷಗಳಲ್ಲಿ ತಾರಕಕ್ಕೆ ಏರಿತು. ಜಯವರ್ಧನೆ ಆಡಳಿತದಲ್ಲಿ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಯಿತು. ಸರಕಾರಿ ಪ್ರಾಯೋಜಿತ ತಮಿಳು ವಿರೋಧಿ ದಮನ ಕಾರ್ಯಾಚರಣೆಗಳು ಹೆಚ್ಚಾದವು. 1981ರಲ್ಲಿ ತಮಿಳ್ ಯುನೈಟೆಡ್ ಲಿಬರೇಷನ್ ಫ್ರಂಟ್ ನೇತೃತ್ವದಲ್ಲಿ ನಡೆದ ಸಭೆ ಮತ್ತು ರ್‍ಯಾಲಿಯ ಬಳಿಕ, ಸರಕಾರದ ಬೆಂಬಲದೊಂದಿಗೆ ಸಿಂಹಳೀಯರ ಗುಂಪು ಜಾಫ್ನಾದ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿತು. ಪ್ರಭುತ್ವ ಬೆಂಬಲಿತ ತಮಿಳಿಗರ ಹಲವು ಹತ್ಯಾಕಾಂಡಗಳಿಗೆ ಇದೂ ಸೇರಿಕೊಂಡಿತು. ಇನ್ನಷ್ಟು ದಮನಗಳು ನಡೆದವು. ಈ ದಮನಗಳ ಜೊತೆಗೆ ಎಟಿಟಿಇಯೂ ಬೆಳೆಯಿತು. 1983ರಲ್ಲಿ ಶ್ರೀಲಂಕಾ ನಾಗರಿಕ ಅಂತರ್ಯುದ್ಧಕ್ಕೆ ಧುಮುಕಿತು. ಇದು 2009ರ ತನಕವೂ ಮುಂದುವರಿಯಿತು. ಅದರ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯೊಂದಿಗೆ ಅಂತರ್ಯುದ್ಧ ಕೊನೆಗೊಂಡರೂ, ಯುದ್ಧದ ಕೊನೆಯ ವರ್ಷಗಳಲ್ಲಿ ಅಂದಾಜು ಒಂದು ಲಕ್ಷ ನಾಗರಿಕರು ಹತ್ಯೆಗೀಡಾದರು.

ಅಂತರ್ಯುದ್ಧ ನಡೆಯುತ್ತಿರುವಾಗಲೇ ಶ್ರೀಲಂಕಾದಲ್ಲಿ ಹಲವಾರು ರಾಚನಿಕ ಬದಲಾವಣೆಗಳಾದವು. ಸರಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಒಂದು ಡಜನ್‌ನಷ್ಟು ಬಾರಿ ಸಾಲ ಪಡೆಯಿತು. ಜೊತೆಗೆ ಇತರ ದೇಶಗಳಿಂದ ಸಾಲ ಪಡೆದದ್ದು ಸೇರಿ, ಶ್ರೀಲಂಕಾದ ಸಾಲವು 1977ರಲ್ಲಿ ರಾಷ್ಟ್ರೀಯ ಉತ್ಪನ್ನದ ಸರಿಸುಮಾರು ಕಾಲು ಭಾಗ ಇದ್ದದ್ದು, 2009ರಲ್ಲಿ ಅರ್ಧ ಭಾಗಕ್ಕೆ ಏರಿತ್ತು. ಜೊತೆಗೆ ಆರ್ಥಿಕ ಅಸಮಾನತೆಯೂ, ಭ್ರಷ್ಟಾಚಾರವೂ ಏರಿತ್ತು.

ರಾಜಪಕ್ಸ ಕುಟುಂಬ

ರಾಜಪಕ್ಸ ಕುಟುಂಬದವರು ಜಮೀನ್ದಾರರಾಗಿದ್ದು ವಸಾಹತುಶಾಹಿ ಕಾಲದಲ್ಲೇ ರಾಜಕೀಯಕ್ಕೆ ಇಳಿದವರು. 1977ರ ತನಕ ಒಬ್ಬರಲ್ಲದಿದ್ದರೆ ಇನ್ನೊಬ್ಬರು ರಾಜಪಕ್ಸ ಕುಟುಂಬದವರು ಸಂಸತ್ ಸದಸ್ಯರಾಗಿರುತ್ತಿದ್ದರು. ನಂತರ ಅವರು ಮರಳಿ ರಾಜಕೀಯಕ್ಕೆ ಬಂದದ್ದು 1989ರಲ್ಲಿ. ಅಂತರ್ಯುದ್ಧದ ಕಾಲದಲ್ಲಿ ಗೊಟಬಯ ರಾಜಪಕ್ಸ ಸೇನೆಯಲ್ಲಿ ಸಮನ್ವಯ ಅಧಿಕಾರಿಯಾಗಿ ಸರಕಾರಕ್ಕೆ ತಮಿಳರ ವಿರುದ್ಧ ಹಲವಾರು ಜಯಗಳನ್ನು ದೊರಕಿಸಿಕೊಟ್ಟಿದ್ದರು. ಅವರ ಅಣ್ಣ ಚಾಮಲ್ ರಾಜಪಕ್ಸ ರಾಜಕೀಯದಲ್ಲಿಯೇ ಇದ್ದು, 2005ರಲ್ಲಿ ಗೊಟಬಯ ಶ್ರೀಲಂಕಾದ ಅಧ್ಯಕ್ಷನಾಗಿ, ತಮ್ಮ ದಮನಕಾರಿ ಕ್ರಮಗಳಿಂದ ಅಂತರ್ಯುದ್ಧವನ್ನು ಕೊನೆಗೊಳಿಸುವ ತನಕ, ಅವರ ಕುಟುಂಬದ ಪ್ರಭಾವ ಬೆಳೆಯುತ್ತಲೇ ಇತ್ತು.

ಬಿಕಟ್ಟಿನ ಹಾದಿ

ಅಂತರ್ಯುದ್ಧ ಕೊನೆಗೊಂಡ ಬಳಿಕ ಅಲ್ಪ ಅವಧಿಗೆ ಶ್ರೀಲಂಕಾದ ಆರ್ಥಿಕತೆಯು ಏರುಗತಿ ಕಂಡಿತ್ತು. ಯುದ್ಧದ ಖರ್ಚಿನಿಂದಾಗಿ ಕುಸಿದುಹೋಗಿದ್ದ ವಿದೇಶಿ ವಿನಿಮಯ ಮೀಸಲು ಸಂಗ್ರಹವನ್ನು ಏರಿಸಲು ಗೊಟಬಯ ಇನ್ನೊಂದು ಐಎಂಎಫ್ ಸಾಲಕ್ಕೆ ಅರ್ಜಿ ಸಲ್ಲಿಸಿದರು. ಇದು ಹಾವು ತನ್ನ ಬಾಲವನ್ನು ತಾನೇ ನುಂಗಿದಂತಾಯಿತು. ಶ್ರೀಲಂಕಾ ತನ್ನ ವೆಚ್ಚದಲ್ಲಿನ ಕೊರತೆಯನ್ನು ಕಡಿಮೆ ಮಾಡಬೇಕು ಎಂಬ ಷರತ್ತಿನೊಂದಿಗೆ ಐಎಂಎಫ್ ಸಾಲ ನೀಡಿತು. ಇದರ ಅರ್ಥ ಶ್ರೀಲಂಕಾ ಎಂದಿಗೂ ತನ್ನ ಮೀಸಲನ್ನು ತುಂಬಿಸಿಕೊಳ್ಳಲು ಆಗದೆಂದೇ ಆಗಿತ್ತು.

2012ರಲ್ಲಿಯೇ ಶ್ರೀಲಂಕಾ ತನ್ನ ಆರ್ಥಿಕ ದೌರ್ಬಲ್ಯವನ್ನು ತೋರಿಸಿಕೊಳ್ಳಲು ಆರಂಭಿಸಿತ್ತು. ಆದರೆ, ನಂತರ ಬಂದ ಕೋವಿಡ್ ಮತ್ತು ಯುರೋಪಿನ ಯುದ್ಧವು ದೇಶದ ಎರಡು ಮುಖ್ಯ ಆದಾಯ ಮೂಲವಾದ ಚಹಾ ಮತ್ತು ಪ್ರವಾಸೋದ್ಯಮ ಕುಸಿಯುವಂತೆ ಮಾಡಿತು. ಇದೇ ಹೊತ್ತಿನಲ್ಲಿ ಇಂಧನದ ಬೆಲೆ ಏರಿತು. ಆರ್ಥಿಕತೆಯ ಒಂಟೆಯು ಭಾರ ತಡೆಯಲಾರದೇ ಕುಸಿಯುವಂತೆ ಮಾಡಿದ ಕೊನೆಯ ಕ್ರಮವೇ ಯಾವುದೇ ಪೂರ್ವತಯಾರಿಯಿಲ್ಲದೆ ಸಾವಯವ ಕೃಷಿಯತ್ತ ಏಕಾಏಕಿಯಾಗಿ ಧೋರಣೆಯನ್ನು ಬದಲಾಯಿಸಿದ್ದು. ಇವೆಲ್ಲವೂ ಆರ್ಥಿಕತೆಯನ್ನು ಹಳ್ಳ ಹಿಡಿಸಿದವು

ನಾವು ಕಲಿಯಬೇಕಾಗಿರುವುದು

ಸಾರ್ವಜನಿಕ ರಂಗದಲ್ಲಿ ಕಡಿಮೆ ಖರ್ಚು, ಬೆಳೆದ ಭ್ರಷ್ಟಾಚಾರ ಹಾಗೂ ಅಸಮಾನತೆ ತೀವ್ರವಾಗಿ ಏರಿದ್ದು ಆಳುವ ಪ್ರತಿಷ್ಠಿತರ ಮೇಲೆ ಜನರ ಭ್ರಮನಿರಸನಕ್ಕೆ ಕಾರಣವಾಯಿತು. ದಶಕಗಳ ಬಡತನ ಮತ್ತು ಜನಾಂಗೀಯ ಉದ್ವಿಗ್ನತೆಯಿಂದ ಬಳಲಿದ್ದ ಜನರಿಗೆ ಪ್ರತಿಭಟಿಸಿ ಬೀದಿಗಿಳಿಯುವುದರ ಹೊರತು ಬೇರೆ ದಾರಿಯೇ ಇರಲಿಲ್ಲ.

ಶ್ರೀಲಂಕಾದ ಬಿಕ್ಕಟ್ಟು ದಶಕಗಳಿಂದ ಮಾರುಕಟ್ಟೆಯ ಪರವಾಗಿ ತೆಗೆದುಕೊಳ್ಳಲಾದ ಜನವಿರೋಧಿ ಧೋರಣೆಗಳ ಫಲವಾಗಿದೆ. ದಶಕಗಳ ಜನಾಂಗೀಯ ಧ್ರುವೀಕರಣವು ಜನರಿಗೆ ಮಂಕು ಕವಿಸಿದ್ದು, ಈ ಮಂಜಿನ ಪರದೆಯ ಹಿಂದೆ ಈ ಧೋರಣೆಗಳನ್ನು ಇನ್ನಷ್ಟು ಆಳವಾಗಿ ಅನು ಸರಿಸಲು ಸರಕಾರಕ್ಕೆ ಸಾಧ್ಯಮಾಡಿಕೊಟ್ಟು ಈಗಿನ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿತು. ಈಗ ಶ್ರೀಲಂಕಾವು ಅತಿಯಾದ ಬಡತನ, ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸಿರುವ ನಿಧಾನಗತಿಯ ಆರ್ಥಿಕತೆ, ಸಂಪನ್ಮೂಲಕಗಳ ಹಂಚಿಕೆಯಲ್ಲಿ ತೀವ್ರ ಅಸಮಾನತೆ, ಚಾಕಚಕ್ಯತೆಯಿಲ್ಲದ ಮತ್ತು ಭ್ರಷ್ಟ ಸಾರ್ವಜನಿಕ ರಂಗದೊಂದಿಗೆ ಸೆಣೆಸುತ್ತಿದೆ. ಭಾರತೀಯರು ಶ್ರೀಲಂಕಾದ ಬೆಳವಣಿಗೆಗಳನ್ನು ಒಂದು ಎಚ್ಚರಿಕೆಯಾಗಿ ತೆಗೆದುಕೊಳ್ಳಬೇಕು. ಅಲ್ಲಿ ಬಿಕ್ಕಟ್ಟು ಉಂಟುಮಾಡಿದ ಪರಿಸ್ಥಿತಿಗಳು ಭಾರತದಲ್ಲಿಯೂ ಇವೆ. ಬೆಳೆಯುತ್ತಿರುವ ಕೋಮು ಉದ್ವಿಗ್ನತೆ, ಜನವಿರೋಧಿ ನೀತಿಗಳು, ಬೆಳೆಯುತ್ತಿರುವ ಸಾರ್ವಜನಿಕ ಸಾಲ ಇತ್ಯಾದಿಗಳ ಕಾರಣದಿಂದ ಭಾರತವು ಶ್ರೀಲಂಕಾದ ಹಾದಿ ಹಿಡಿಯುವುದಕ್ಕೆ ಕೆಲವೇ ವರ್ಷಗಳ ದೂರದಲ್ಲಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

₹100 ₹200 ₹500 ₹1000 Others


ಇದನ್ನೂ ಓದಿ: ‘ಪ್ರಧಾನಿಯ ಸಕಾರಾತ್ಮಕ ಕ್ರಮಗಳನ್ನು ಬೆಂಬಲಿಸುತ್ತೇವೆ, ಆದರೆ…’: ಶ್ರೀಲಂಕಾ ವಿಪಕ್ಷ ನಾಯಕನ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ನಮ್ಮ ದೇಶಕ್ಕೆ ಶ್ರೀಲಂಕಾದ ದುರ್ಗತಿಯೇ ಕಾದಿದೆ.

  2. ಖಂಡಿತಾ ಇಲ್ಲ,,ದಯಮಾಡಿ ಜನರಲ್ಲಿ ನಿಷೇಧಾತ್ಮಕ ಭಾವನೆಗಳನ್ನ ತುಂಬಬೇಡಿ,ಸಾದ್ಯವಾದರೆ ಭಾರತೀಯತೆ ತುಂಬಿ ಬೆಳಸಿ,

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...