“ಭಾಷಾ ವೈವಿಧ್ಯತೆಯು ದೇಶದ ಹೆಮ್ಮೆ, ಆದರೆ ಅದರ ಬಗ್ಗೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿರುವುದನ್ನು ನಟ ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ.
“ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ” ಎಂದು ಇತ್ತೀಚೆಗೆ ಸುದೀಪ್ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಸುದೀಪ್ ಅವರ ಬೆಂಬಲಕ್ಕೆ ಕನ್ನಡಿಗರು ಹಾಗೂ ಹಲವಾರು ಸಿನಿಮಾ ನಟ-ನಟಿಯವರು ನಿಂತಿದ್ದರು. ಸಂವಿಧಾನವನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದ ಕನ್ನಡಿಗರು ‘ರಾಷ್ಟ್ರಭಾಷೆ ಎಂಬುದಿಲ್ಲ’ ಎಂದು ನೆನಪಿಸಿದರು. ಕಿಚ್ಚ ಸುದೀಪ್ ಹೇಳಿಕೆಯನ್ನು ವಿರೋಧಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ‘ಹಿಂದಿ ರಾಷ್ಟ್ರ ಭಾಷೆ’ ಎಂದದ್ದು ತೀವ್ರ ವಿರೋಧಕ್ಕೆ ಕಾರಣವಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಂದೆ ಹೇರಿಕೆ ಸಂಬಂಧ ಎದ್ದಿರುವ ಕಿಡಿಯ ನಡುವೆ ಪ್ರಧಾನಿ ಹೇಳಿಕೆ ಹೊರಬಿದ್ದಿದ್ದು, ಕಿಚ್ಚ ಸುದೀಪ್ ಪ್ರಧಾನಿಯವರ ಮಾತನ್ನು ಸ್ವಾಗತಿಸಿದ್ದಾರೆ. ಎನ್‌ಡಿಟಿವಿಯೊಂದಿಗೆ ಮಾತನಾಡಿರುವ ಸುದೀಪ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ನಾನು ಯಾವುದೇ ಗಲಭೆ ಅಥವಾ ಯಾವುದೇ ರೀತಿಯ ಚರ್ಚೆಯನ್ನು ಪ್ರಾರಂಭಿಸಲು ಉದ್ದೇಶಿಸಿರಲಿಲ್ಲ. ಇದು ಅಜೆಂಡಾ ಇಲ್ಲದೆ ನಡೆದಿದೆ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನಷ್ಟೇ. ಪ್ರಧಾನಿಯವರೇ ಗೌರವಯುತ ಹಾಗೂ ಸೌಭಾಗ್ಯಯುತವಾದ ಮಾತುಗಳನ್ನು ಆಡಿದ್ದಾರೆ” ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿಯವರು ಈ ರೀತಿಯಲ್ಲಿ ಹೇಳಿರುವುದು ತಮ್ಮ ತಮ್ಮ ಭಾಷೆಯನ್ನು ಗೌರವಿಸುವ ಪ್ರತಿಯೊಬ್ಬರಿಗೂ ಅಗಾಧವಾದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
“ಎಲ್ಲಾ ಭಾಷೆಗಳಿಗೂ ಆತ್ಮೀಯ ಸ್ವಾಗತ. ನಾನು ಕೇವಲ ಕನ್ನಡವನ್ನು ಮಾತ್ರ ಪ್ರತಿನಿಧಿಸಿ ಹೇಳುತ್ತಿಲ್ಲ, ಎಲ್ಲರ ಮಾತೃಭಾಷೆಗಳ ಕುರಿತು ಮಾತನಾಡುತ್ತಿದ್ದೇನೆ. ಪ್ರಧಾನಿಯವರು ಇಂದು ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸಿದ್ದಾರೆ. ನಾವು ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ, ನಾಯಕರನ್ನಾಗಿ ನೋಡುತ್ತೇವೆ” ಎಂದು ತಿಳಿಸಿದ್ದಾರೆ.
“ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ, ಕೆಲವು ವಿಷಯಗಳು ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ” ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ
ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾಗಳ ನಡುವೆ ಇತ್ತೀಚೆಗೆ ನಡೆದ ಕಿರು ತಿಕ್ಕಾಟದತ್ತ ಗಮನ ಸೆಳೆದ ಸುದೀಪ್, “ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಯಾವುದೋ ಒಂದು ಭಾಷೆಗೆ ಸೀಮಿತವಾಗಿಲ್ಲ. ಸಿನಿಮಾ ಚೆನ್ನಾಗಿದ್ದರೆ ಎಲ್ಲಾ ಭಾಷೆಯ ಜನರು ದೇಶದಾದ್ಯಂತ ನೋಡುತ್ತಾರೆ. ಅದು ದಕ್ಷಿಣ ಭಾರತದ ಸಿನಿಮಾವಾಗಿರಲಿ, ಹಿಂದಿ ಸಿನಿಮಾವಾಗಿರಲಿ, ಡಬ್ಬಿಂಗ್ ಆಗಿರಲಿ ಎಲ್ಲರೂ ನೋಡುತ್ತಾರೆ” ಎಂದಿದ್ದಾರೆ.
ಪ್ರಧಾನಿ ಮೋದಿಯವರು ಭಾಷೆಗಳ ಕುರಿತು ಮಾತನಾಡುತ್ತಾ, “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿರುವುದು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ನಾವು ವ್ಯಕ್ತಪಡಿಸಿರುವ ಬದ್ಧತೆಯನ್ನು ತೋರಿಸುತ್ತದೆ. ಬಿಜೆಪಿಯು ಭಾರತೀಯ ಭಾಷೆಗಳನ್ನು ದೇಶದ ಆತ್ಮ ಮತ್ತು ದೇಶಕ್ಕೆ ಉತ್ತಮ ಭವಿಷ್ಯದ ಲಿಂಕ್ ಎಂದು ಪರಿಗಣಿಸುತ್ತದೆ” ಎಂದು ಹೇಳಿದ್ದಾರೆ.
“ನಾನು ಇದನ್ನು ವಿಶೇಷವಾಗಿ ಪ್ರಸ್ತಾಪಿಸಲು ಬಯಸುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಭಾಷೆಯ ಆಧಾರದ ಮೇಲೆ ಹೊಸ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ನಾವು ಈ ಬಗ್ಗೆ ದೇಶದ ಜನರನ್ನು ನಿರಂತರವಾಗಿ ಎಚ್ಚರಿಸಬೇಕು” ಎಂದು ತಿಳಿಸಿದ್ದಾರೆ.