Homeಕರ್ನಾಟಕಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

- Advertisement -
- Advertisement -

“ಸಂಘಪರಿವಾರದ ಮೊದಲ ಟಾರ್ಗೆಟ್ ಮಕ್ಕಳು. ಶಿಸ್ತು ಹಾಗೂ ಆಟೋಟಗಳ ಹೆಸರಲ್ಲಿ ಶಾಖೆಯತ್ತ ಮಕ್ಕಳನ್ನು ಸೆಳೆದು, ಮೈಂಡ್ ವಾಶ್ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ. ಈಗ ಸಂಘ ಪರಿವಾರದ ಸರ್ಕಾರವೇ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಪಠ್ಯದ ಮುಖೇನವೇ ಮಕ್ಕಳ ಮನಸ್ಸನ್ನು ಕೆಡಿಸುವ ಕೆಲಸಕ್ಕೆ ಕೈಹಾಕಲಾಗಿದೆ” ಎನ್ನುತ್ತಾರೆ ಆರ್‌ಎಸ್‌ಎಸ್ ಜೊತೆಗೆ ಹಲವು ವರ್ಷಗಳ ಕಾಲ ಒಡನಾಟದಲ್ಲಿದ್ದು ಹೊರಬಂದಿರುವ ಖ್ಯಾತ ಕಲಾವಿದ-ಚಿತ್ರ ನಿರ್ದೇಶಕ ಪ್ರಕಾಶ್ ಬಾಬು.

“ಗಾಂಧಿಯ ಕುರಿತು ತಿಳಿಯುವುದಕ್ಕಾಗಿ ಸಂಘಕ್ಕೆ ಹೋಗುತ್ತಿದ್ದೆ. ಆದರೆ ಅವರು ಗಾಂಧಿಯ ವಿರುದ್ಧ ಆಡುತ್ತಿದ್ದ ಮಾತುಗಳ ಉದ್ದೇಶ ಅರ್ಥವಾದ ಬಳಿಕ ಹೊರಬಂದೆ. ಆದರೀಗ ಪಠ್ಯದಲ್ಲೇ ತಮ್ಮ ಅಜೆಂಡಾಗಳನ್ನು ತರುತ್ತಿದ್ದಾರೆ” ಎಂದು ವಿಷಾದಿಸುತ್ತಾರೆ.

ಒಂದೆಡೆ ಏಕೋಪಧ್ಯಾಯ ಶಾಲೆಗಳು, ಮೂಲ ಸೌಕರ್ಯಗಳಿಲ್ಲದ ಶಾಲೆಗಳು ಹೆಚ್ಚಾಗುತ್ತಿದ್ದರೆ ಸರ್ಕಾರ ಇದ್ಯಾವುದಕ್ಕೂ ಗಮನ ಹರಿಸದೆ ತನ್ನ ಕೋಮು ಅಜೆಂಡಾವನ್ನು ಪಠ್ಯದೊಳಗೆ ತರಲು ಯತ್ನಿಸುತ್ತಿದೆ. ಶಿಕ್ಷಣ ಕ್ಷೇತ್ರದ ಹಿನ್ನೆಲೆ ಇಲ್ಲದ, ಸಂಘ ಪರಿವಾರದ ಮಿಲಿಟೆಂಟ್ ಸದಸ್ಯನಂತೆ ಕೆಲಸ ಮಾಡುವ ರೋಹಿತ್ ಚಕ್ರತೀರ್ಥ
ಎಂಬವರನ್ನು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ ಸರ್ಕಾರ, ಆ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರಲು ಮುಂದಾಗಿದೆ.

“ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ವಿಷಯ ಕುರಿತು ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಮಾಡಿರುವ ಭಾಷಣವನ್ನು 2022-23ರ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಕನ್ನಡ ವಿಷಯದ (ಪ್ರಥಮ ಭಾಷೆ) ಐದನೇ ಪಾಠವಾಗಿ ಸೇರಿಸಲಾಗಿದೆ. ಕೃತಿಕಾರರ ಪರಿಚಯದಲ್ಲಿ- “ಹೆಡಗೇವಾರರು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ” ಎಂದು ತಿಳಿಸಲಾಗಿದೆ. ಮತ್ತೊಂದೆಡೆ, “ಆರ್‌ಎಸ್‌ಎಸ್ ಇಂದು ಸರಿಸುಮಾರು ಅರವತ್ತು ಲಕ್ಷ ಸದಸ್ಯರನ್ನು ಹೊಂದಿದೆ” ಎಂದು ಪರಿಚಯಿಸಲಾಗಿದೆ.

ಹೆಡಗೇವಾರ್ ಭಾಷಣ ಸೇರ್ಪಡೆಯ ಜೊತೆಗೆ ನಾಡಿನ ಕೆಲವು ಹಿರಿಯ ಸಾಹಿತಿಗಳ ಪಾಠಗಳನ್ನು ಕೈಬಿಟ್ಟು, ಮತ್ತೆ ಕೆಲವರ ಪಠ್ಯಗಳನ್ನು ಸೇರಿಸಲಾಗಿದೆ. ಪಿ.ಲಂಕೇಶ್ ಅವರ ’ಮೃಗ ಮತ್ತು ಸುಂದರಿ’, ಜಿ.ರಾಮಕೃಷ್ಣ ಅವರ ’ಭಗತ್‌ಸಿಂಗ್’, ಸಾರಾ ಅಬೂಬಕ್ಕರ್ ಅವರ ’ಯುದ್ಧ’, ಎ.ಎನ್.ಮೂರ್ತಿರಾವ್ ಅವರ ’ವ್ಯಾಘ್ರ ಕಥೆ’, ಶಿವಕೋಟ್ಯಾಚಾರ್ಯರ ’ಸುಕುಮಾರಸ್ವಾಮಿ ಕಥೆ’- ಇವುಗಳನ್ನು ಕೈಬಿಡಲಾಗಿದೆ. ಶಿವಾನಂದ ಕಳವೆಯವರ ’ಸ್ವದೇಶಿ ಸೂತ್ರದ ಸರಳ ಹಬ್ಬ’, ಎಂ.ಗೋವಿಂದ ಪೈ ಅವರ ’ನಾನು ಪ್ರಾಸ ಬಿಟ್ಟ ಕಥೆ’, ಬನ್ನಂಜೆ ಗೋವಿಂದಾಚಾರ್ಯರ ’ಶುಕನಾಶನ ಉಪದೇಶ’, ಶತಾವಧಾನಿ ಆರ್.ಗಣೇಶ್ ಅವರ ’ಶ್ರೇಷ್ಠ ಭಾರತೀಯ ಚಿಂತನೆಗಳು’ ಬರಹಗಳನ್ನು ಸೇರಿಸಲಾಗಿದೆ.

ಟಿಪ್ಪು ಸಾಧನೆಗಳಿಗೆ ಕತ್ತರಿ, ಹೊಸ ಧರ್ಮ ಉದಯಗಳ ಪಠ್ಯದಲ್ಲಿ ಬದಲಾವಣೆ, ಸಿಂಧೂ ನಾಗರಿಕತೆಗೆ ’ಸಿಂಧೂ ಸರಸ್ವತಿ ನಾಗರಿಕತೆ’ ಎಂದು ಮರುನಾಮಕರಣ- ಹೀಗೆ ಹಲವು ಬದಲಾವಣೆಗಳನ್ನು ಸಮಾಜ ವಿಜ್ಞಾನ ಪಠ್ಯದಲ್ಲಿ ಮಾಡಿರುವುದು ಈ ಹಿಂದೆ ಬೆಳಕಿಗೆ ಬಂದಿತ್ತು. ಈಗ ನೇರವಾಗಿಯೇ ಆರ್‌ಎಸ್‌ಎಸ್ ಸಿದ್ಧಾಂತನ್ನು ಹೇರಲು ಹೆಡಗೇವಾರ್ ಭಾಷಣವನ್ನು ತರಲಾಗಿದೆ. ದುರಾದೃಷ್ಟವಶಾತ್, ಪಠ್ಯವನ್ನು ಕೇಸರೀಕರಣಗೊಳಿಸುವುದನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮರ್ಥಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೆಡಗೇವಾರ್ ಭಾಷಣವನ್ನು ಪಠ್ಯದಿಂದ ಹೊರಗಿಡುವುದಿಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ’ಭಗತ್‌ಸಿಂಗ್’ ಕುರಿತ ಪಾಠವನ್ನು ಕೈ ಬಿಟ್ಟಿದ್ದರೂ, ಸರ್ಕಾರ ಸುಳ್ಳು ಹೇಳಿ ಸಿಕ್ಕಿಬಿದ್ದಿದೆ. “ಭಗತ್‌ಸಿಂಗ್ ಪಾಠವನ್ನು ಕೈಬಿಟ್ಟಿಲ್ಲ” ಎಂದು ಸ್ಪಷ್ಟನೆ ನೀಡಿದ್ದರೂ, ಈಗ ಲಭ್ಯವಾಗಿರುವ ಪಠ್ಯಪುಸ್ತಕದ ಪಿಡಿಎಫ್‌ನಲ್ಲಿ ’ಭಗತ್‌ಸಿಂಗ್’ ಪಾಠ ಕಾಣೆಯಾಗಿದೆ. ಅಂದರೆ ಸರ್ಕಾರ ಸುಳ್ಳು ಹೇಳಿದೆ.

ಪಠ್ಯಪರಿಶೀಲನೆಯೇ ಅವೈಜ್ಞಾನಿಕವಾಗಿದೆ: ಶ್ರೀಪಾದ್ ಭಟ್

ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ವಿಕ್ಷಿಪ್ತ ಬದಲಾವಣೆಗಳ ಕುರಿತು ಮೊದಲಿನಿಂದಲೂ ಧ್ವನಿ ಎತ್ತುತ್ತಾ ಬಂದಿರುವ ಶಿಕ್ಷಣತಜ್ಞರಾದ ಶ್ರೀಪಾದ್ ಭಟ್, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಜೊತೆಗೆ, ಹೆಡಗೇವಾರ್ ಇತಿಹಾಸವನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.

“ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಎಂದರೆ ಏನೆಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಈ ಸಮಿತಿ ರಚನೆಗೆ ಮಾನದಂಡಗಳು ಇರುತ್ತವೆ. ಯಾರ್‍ಯಾರನ್ನೋ ತಂದು ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ಚಕ್ರತೀರ್ಥರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮಾಡಬೇಕಿತ್ತು. ಆದರೀಗ ತುಂಬಾ ತಡವಾಗಿದೆ” ಎಂದರು.

“ಪಠ್ಯ ಹೇಗಿರಬೇಕೆಂದು ’ನ್ಯಾಷನಲ್ ಕರಿಕುಲಮ್ ಫ್ರೇಮ್‌ವರ್ಕ್’ ಹೇಳುತ್ತದೆ. ಅದರ ಅಡಿಯಲ್ಲೇ ಪಠ್ಯವನ್ನು ರೂಪಿಸಬೇಕು. ಅಧ್ಯಕ್ಷರಾದ ತಕ್ಷಣ ತಮಗೆ ಬೇಕಾದಂತೆ ಬದಲಾಯಿಸಲು ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ವಿಚಾರವಂಥರಲ್ಲಿ ಈ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯಲ್ಲಿ ಯೂನಿವರ್ಸಿಟಿ ಮಟ್ಟದಲ್ಲಿ ಕೆಲಸ ಮಾಡಿದ ಕೆಲವರು ಇದ್ದಾರೆ. ಅಂಥವರು ಈ ಚಕ್ರತೀರ್ಥರ ಬಗ್ಗೆ ಮಾತನಾಡಬೇಕು. ಚಕ್ರತೀರ್ಥ ಶಿಕ್ಷಣ ತಜ್ಞ ಅಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಬೇಕಾಬಿಟ್ಟಿ ಬರೆದುಕೊಂಡು ಇದ್ದವರು” ಎಂದು ವಿಷಾದಿಸಿದರು.

ಶ್ರೀಪಾದ್ ಭಟ್

“ಪಠ್ಯ ಪುಸ್ತಕ ರಚನೆಗೆ ಒಂದು ಸಮಿತಿ, ಪರಿಷ್ಕರಣೆ ಮಾಡಲು ಒಂದು ಸಮಿತಿ ಹಾಗೂ ಪಠ್ಯವನ್ನು ಅನುಮೋದನೆ ಮಾಡಲು ಒಂದು ಸಮಿತಿ ಇರುತ್ತದೆ. ಅನುಮೋದನೆ ಮಾಡಬೇಕಾದ ತಂಡದಲ್ಲಿ ತಜ್ಞರು ಇರಬೇಕಲ್ಲ. ಅಲ್ಲಿ ಯಾರಿದ್ದಾರೆ? ಚಕ್ರತೀರ್ಥ ಹೇಳಿದ್ದನ್ನೆಲ್ಲ ಅನುಮೋದನೆ ಮಾಡುವುದು ಅಪಾಯಕಾರಿ. ಯಾಕೆಂದರೆ ಈತ ಶಿಕ್ಷಣ ತಜ್ಞ ಅಲ್ಲ” ಎಂದು ಎಚ್ಚರಿಸಿದರು.

“ಈಗ ಯಾವ ಆಧಾರದಲ್ಲಿ ಈಗಿನ ಪಠ್ಯವನ್ನು ಆಯ್ಕೆ ಮಾಡಲಾಗಿದೆ ಎಂದು ಕೇಳಬೇಕಾಗಿದೆ. ಪಠ್ಯಕ್ರಮವನ್ನು ರೂಪಿಸುವಾಗ ಒಂದು ಕ್ರಮಬದ್ಧತೆಯನ್ನು ಅನುಸರಿಸಬೇಕು. ಸ್ಥಳೀಯ ಪಠ್ಯ, ದೇಶ ಪಠ್ಯ, ರಾಷ್ಟ್ರೀಯ ಪಠ್ಯ, ಅಂತಾರಾಷ್ಟ್ರೀಯ ಪಠ್ಯ- ಹೀಗೆ ಹಲವು ದೃಷ್ಟಿಕೋನಗಳು ಇರುತ್ತವೆ. ಶತಾವಧಾನಿ ಗಣೇಶ್ ಅಂಥವರ ಪಠ್ಯವನ್ನು ಇಡಲು ಇರುವ ಮಾನದಂಡ ಯಾವುದು? ಇದನ್ನು ಪ್ರಶ್ನಿಸಬೇಕಾಗಿದೆ. ಇಲ್ಲಿನ ಬಹುಸಂಸ್ಕೃತಿಯನ್ನು ಪಠ್ಯದಲ್ಲಿ ಹೇಗೆ ತರುತ್ತೀರಿ?” ಎಂಬುದನ್ನು ವಿವರಿಸಬೇಕು ಎಂದು ಒತ್ತಾಯಿಸಿದರು.

ಹೆಡಗೇವಾರ್ ಕುರಿತು ಆರ್‌ಎಸ್‌ಎಸ್‌ನವರೇ ಬರೆದಿರುವ ಜೀವನ ಚರಿತ್ರೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಈ ಕೃತಿಗಳನ್ನು ಓದಿದರೆ ಹೆಡಗೇವಾರ್ ಅಂದರೆ ಏನೆಂದು ತಿಳಿಯುತ್ತದೆ. ಹೆಡಗೇವಾರ್ ಅವರು ಮುಸ್ಲಿಮರನ್ನು – ವಿದೇಶಿ ಹಾವುಗಳು- ಎಂದು ಕರೆಯುತ್ತಾರೆ. ಮಹಾತ್ಮ ಗಾಂಧೀಜಿಯವರು ಹಿಂದೂ – ಮುಸ್ಲಿಂ ಭಾಯಿಭಾಯಿ ಎಂದಾಗ, ಇದರಲ್ಲೇನೋ ಅಪಾಯವಿದೆ ಎಂದಾತ ಹೆಡಗೇವಾರ್. ಹೆಡಗೇವಾರ್ ಅವರನ್ನು ಒಮ್ಮೆ ಬ್ರಿಟಿಷರು ಜೈಲಿಗೆ ಹಾಕುತ್ತಾರೆ. ಹೆಡಗೇವಾರ್ ಜೈಲಿಗೆ ಬಂದಿದ್ದು ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ
ಅಲ್ಲ. ಸಂಘದ ಪ್ರಚಾರಕ್ಕಾಗಿ ಬಂದಿದ್ದರೆಂದು ಜೀವನ ಚರಿತ್ರೆಗಳಲ್ಲಿ ದಾಖಲಾಗಿದೆ.

1930, ಜನವರಿ 26ನೇ ದಿನವನ್ನು ಸ್ವಾತಂತ್ರ್ಯ ದಿನವೆಂದು ಘೋಷಣೆ ಮಾಡಬೇಕು, ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಘೋಷಿಸಬೇಕು ಎಂದು ಅಂದಿನ ಕಾಂಗ್ರೆಸ್ ಕರೆಕೊಟ್ಟಾಗ ಹೆಡಗೇವಾರ್, ’ತ್ರಿವರ್ಣ ಧ್ವಜ ಗೌರವಿಸಬೇಡಿ, ಭಗವಾಧ್ವಜ ಗೌರವಿಸಿ’ ಎಂದಿದ್ದರು. 1930ರಲ್ಲಿ ದಂಡಿ ಸತ್ಯಾಗ್ರಹವನ್ನು ಕಾಂಗ್ರೆಸ್ ಆರಂಭಿಸುತ್ತದೆ. ಆಗ ಆರ್‌ಎಸ್‌ಎಸ್‌ನ ಕಾರ್ಯಕರ್ತರಿಗೆ ಠರಾವು ಪಾಸ್ ಮಾಡಿದ ಹೆಡಗೇವಾರ್, ’ಅದರಲ್ಲಿ ಯಾರೂ ಭಾಗವಹಿಸಬೇಡಿ’ ಎಂದು ಸೂಚಿಸಿದ್ದರು. ಸಂಘದ ತೀರ್ಮಾನ ಇದಾಗಿದ್ದು, ವೈಯಕ್ತಿಕವಾಗಿ ನಿಮಗೆ ಅನಿಸಿದ್ದನ್ನು ಮಾಡಬಹುದು ಎಂದೂ ಹೇಳಿದ್ದರು. ಅಂದರೆ ಪರೋಕ್ಷವಾಗಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಬೇಡಿ ಎಂದು ಪ್ರತಿಪಾದಿಸಿದ್ದರು. ಆದರೆ ಹೆಡಗೇವಾರ್ ಸತ್ಯಾಗ್ರಹದಲ್ಲಿ ಹೋಗಿ ಸೇರಿಕೊಳ್ಳುತ್ತಾರೆ. ಜೈಲಿಗೆ ಹೋಗುತ್ತಾರೆ. ಆದರೆ ಹೆಡಗೇವಾರ್ ಜೈಲಿಗೆ ಹೋಗಿದ್ದು ಯಾಕೆಂದು ವಿವರಿಸುವ ಬಿಷಿಕರ್ – ’ಇಲ್ಲೊಂದು ತಂತ್ರಗಾರಿಕೆ ಇತ್ತು. ಜೈಲಿಗೆ ಸೇರುವ ಮೂಲಕ ಜೈಲಿನಲ್ಲಿರುವ ರಾಜಕೀಯ ಕೈದಿಗಳ ಮನವೊಲಿಸಿ ಸಂಘಕ್ಕೆ ಸೇರಿಸಿಕೊಳ್ಳುವ ಉದ್ದೇಶವಿತ್ತು’ ಎಂದು ತಾವು ಬರೆದಿರುವ ಜೀವನ ಚರಿತ್ರೆಯಲ್ಲಿ ದಾಖಲಿಸಿದ್ದಾರೆ” ಎಂದು ವಿವರಿಸಿದರು.

ಹೆಡಗೇವಾರ್

“ಹೆಡಗೇವಾರ್ ಅವರು ತಮ್ಮ ಸಹವರ್ತಿಗಳಾದ ಕೃಷ್ಣರಾವ್ ವಾಡೇಕರ್ ಹಾಗೂ ಭಾಸ್ಕರ್‌ರಾವ್ ನಿವಾಣೆಯವರ ಜೊತೆಯಲ್ಲಿ ನಾಸಿಕ್‌ನಲ್ಲಿರುವ ಡಾ.ಗಾಯ್‌ಧನಿ ಎಂಬ ಬ್ರಾಹ್ಮಣರ ಮನೆಗೆ ಹೋಗುತ್ತಾರೆ. ನಿವಾಣೆಯವರು ಅಸ್ಪೃಶ್ಯ ಜಾತಿಗೆ ಸೇರಿದ್ದರು. ಊಟಕ್ಕೆ ಕೂರುವಾಗ ನಿವಾಣೆ, ’ನಾನು ಊಟಕ್ಕೆ ಬೇರೆಡೆ ಕುಳಿತುಕೊಳ್ಳಬೇಕೆ?’ ಎಂದು ಕೇಳಿದರು. ಹೆಡಗೇವಾರ್ ಜೊತೆಯಲ್ಲಿ ಬಂದಿದ್ದ ಕೃಷ್ಣರಾವ್ ವಾಡೇಕರ್, ’ನೀನು ಅಸ್ಪೃಶ್ಯ ಎಂಬುದು ಅತಿಥೇಯನಾದ ಗಾಯ್‌ಧನಿಗೆ ಗೊತ್ತಿಲ್ಲ. ಬೇರೆ ಕೂರುವ ಅವಶ್ಯವಿಲ್ಲ’ ಎಂದದ್ದು ಹೆಡಗೇವಾರ್‌ಗೆ ಇಷ್ಟವಾಗುವುದಿಲ್ಲ. ಆಗ ಹೆಡಗೇವಾರ್, ’ನೀನು ಅಸ್ಪಶ್ಯ ಎಂಬುದು ಗೊತ್ತಾಗಿಬಿಟ್ಟರೆ ಅವರಿಗೆ ಮಾನಸಿಕವಾಗಿ ಬೇಜಾರಾಗುತ್ತದೆ. ಕೂತುಕೊಳ್ಳಬೇಡ. ನಾಳೆ ಅವರು ಮುಖ್ಯ’ ಎನ್ನುತ್ತಾರೆ. ಆರ್‌ಎಸ್‌ಎಸ್‌ನ ’ಹಿಂದೂ ರಾಷ್ಟ್ರ ಪರಿಕಲ್ಪನೆ’ಯನ್ನು ಬಿತ್ತಿದ್ದು ಇದೇ ಹೆಡಗೇವಾರ್. ಇವರೆಲ್ಲರ ವಿಚಾರಗಳು ಸಂವಿಧಾನಕ್ಕೆ ವಿರುದ್ಧವಿದೆ. ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ತ್ಯಾಗಮಾಡಿದ ಭಗತ್‌ಸಿಂಗ್ ಕುರಿತು ಪಠ್ಯವನ್ನು ತೆಗೆಯುತ್ತೀರಿ, ಮತ್ತೊಂದೆಡೆ ತ್ರಿವರ್ಣ ಧ್ವಜವನ್ನೇ ಒಪ್ಪದ ವ್ಯಕ್ತಿಯ ಭಾಷಣವನ್ನು ಪಠ್ಯವಾಗಿ ಇಡುತ್ತೀರಿ ಎಂದರೆ ಏನರ್ಥ? ಮಸೀದಿಯ ಮುಂದೆ ಜೋರಾಗಿ ಡ್ರಮ್ ಬಡಿಯುವ ವಿಕೃತಿಯನ್ನು ಆರಂಭಸಿದ್ದು ಇದೇ ಹೆಡಗೇವಾರ್ ಎಂಬುದು ಜೀವನ ಚರಿತ್ರೆಗಳ ಮೂಲಕ ಸಾಬೀತಾಗಿದೆ. ಇದೆಲ್ಲವೂ ಮನುಷ್ಯತ್ವ ವಿರೋಧಿ ನಡೆಗಳು. ಇಂಥವರ ಭಾಷಣವನ್ನು ಹೇಗೆ ಪಠ್ಯದಲ್ಲಿ ಇಡುತ್ತೀರಿ?” ಎಂದು ಪ್ರಶ್ನಿಸಿದರು.

ಎಂತಹ ಭಾರತ ಕಟ್ಟುತ್ತಿದ್ದೀರಿ? ಭಗತ್‌ಸಿಂಗ್‌ಗಿಂತ ದೇಶಪ್ರೇಮಿ ಬೇಕೆ?: ವಿ.ಪಿ.ನಿರಂಜನಾರಾಧ್ಯ

ಶಿಕ್ಷಣ ಕ್ಷೇತ್ರದ ಸುಧಾರಣೆಯ ಕುರಿತು ಹೋರಾಟ ಮಾಡುತ್ತಿರುವ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು, ಇಂದಿನ ಬೆಳವಣಿಗೆಯ ಕುರಿತು ಮಾತನಾಡುತ್ತಾ ಒಂದು ಕ್ಷಣ ಗದ್ಗದಿತರಾದರು. “ನಮ್ಮ ಸಮಾಜದ ಎತ್ತ ಸಾಗುತ್ತಿದೆ. ನಮ್ಮದೇನೋ ಮುಗಿಯಿತು. ನಮ್ಮ ಮಕ್ಕಳ ಭವಿಷ್ಯ ನೆನೆದರೆ ಆತಂಕವಾಗುತ್ತದೆ” ಎಂದರು.

“ಪಠ್ಯ ಪರಿಷ್ಕರಣೆಯನ್ನು ಒಂದು ಚೌಕಟ್ಟು ಇಲ್ಲದೆ ಮಾಡುವಂತಹದ್ದು ಅನೈತಿಕ. 2005ರ ಪಠ್ಯಕ್ರಮ ರಚಿಸುವಾಗ ಸಾವಿರಾರು ಜನ ಹಲವು ವರ್ಷಗಳ ಕಾಲ ಚರ್ಚೆ ಮಾಡಿ ಪಠ್ಯಕ್ರಮದಲ್ಲಿ ಏನಿರಬೇಕು, ಏನಿರಬಾರದು, ಸಂವಿಧಾನದ ಆಶಯಗಳು ಹೇಗೆ ಸಾಕಾರ ಆಗಬೇಕು, ಭಾರತದ ಸ್ವಾತಂತ್ರ್ಯ ಚಳವಳಿ ಕುರಿತು ಮಕ್ಕಳಿಗೆ ಹೇಗೆ ಕಲಿಸಬೇಕು, ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ಮಾಡಬೇಕಾದರೆ ಮಕ್ಕಳು ಮಾನವಿಕ ವಿಜ್ಞಾನ ವಿಷಯಗಳಲ್ಲಿ ಏನನ್ನು ಓದಬೇಕು ಎಂಬುದೆಲ್ಲ ನಿರ್ಧರಿಸಲಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂಬುದು ಸಂವಿಧಾನದ ಮೂಲ ಆಶಯ. ಇದನ್ನೆಲ್ಲ ಬದಲಾಯಿಸಿ ಹೊಸ ಶಿಕ್ಷಣ ನೀತಿ ತಂದು ಅದಕ್ಕೆ ಒಂದು ಚೌಕಟ್ಟು ರೂಪಿಸುವುದಾಗಿ ಹೇಳುತ್ತಿದ್ದಾರೆ. ಚೌಕಟ್ಟು ರೂಪಿಸಿರುವುದರೊಳಗಾಗಿ ಏಕೆ ಇಷ್ಟೊಂದು ಆತುರ? ಚೌಕಟ್ಟು ರೂಪಿಸಿ, ಅದರಲ್ಲಿ ನಿಮ್ಮ ವಿಚಾರಗಳನ್ನು ಬರೆಯಿರಿ. ಈವರೆಗೆ ಆಗಿರುವ ಪಠ್ಯಗಳ ಬದಲಾವಣೆಯ ಹಿಂದೆ ಒಂದು ಚೌಕಟ್ಟಿನ ಆಧಾರವಿದೆ. ಪಠ್ಯ ಬದಲಿಸುವ ಮುನ್ನ ಪಠ್ಯಕ್ರಮವನ್ನು ಸಿದ್ಧಪಡಿಸಬೇಕಲ್ಲವೇ” ಎಂದು ಪ್ರಶ್ನಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪಠ್ಯಪುಸ್ತಕಗಳನ್ನು ಅವರ ಪಕ್ಷದ ಪ್ರಣಾಳಿಕೆಗಳನ್ನಾಗಿ ಮಾಡುತ್ತಿದ್ದಾರೆಂಬುದು ಇಡೀ ಪ್ರಕ್ರಿಯೆಯನ್ನು ನೋಡಿದರೆ ಮನದಟ್ಟಾಗುತ್ತದೆ. ಇದು ವಿಷಾದನೀಯ ಹಾಗೂ ನಾಚಿಗೆಗೇಡಿನ ಸಂಗತಿ. ಶಿಕ್ಷಣ ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಬೇಕು. ಬಹಳ ನೋವಿನ ಸಂಗತಿ ಏನೆಂದರೆ – ಈ ದೇಶದಲ್ಲಿ ಭಗತ್‌ಸಿಂಗ್‌ಗಿಂತ ಅಪ್ರತಿಮ ದೇಶಪ್ರೇಮಿ ಇರಲು ಸಾಧ್ಯವೇನು? ಇವರೆಂಥ ದೇಶಪ್ರೇಮಿಗಳು? ನಾಳೆ ನೀವು ಗಾಂಧೀಜಿಯರ ಪಠ್ಯವನ್ನು ಬದಲಾಯಿಸಿ ನಾಥರಾಮ್ ಗೋಡ್ಸೆಯ ಪಠ್ಯವನ್ನು ಸೇರಿಸಿದರೆ ಆಶ್ಚರ್ಯವಿಲ್ಲ” ಎಂದು ಹೇಳುತ್ತಾ ಗದ್ಗದಿತರಾದರು.

“ದೇಶಪ್ರೇಮವನ್ನು ಇವರ ಕೋಮುವಾದ, ಸನಾತನವಾದದ ನೆಲೆಯಲ್ಲಿ ನೋಡುತ್ತಿದ್ದಾರೆ. ಸನಾತನವಾದ, ಕೋಮುವಾದ, ಹಿಂದುತ್ವವಾದ, ಒಂದು ಕೋಮಿನ ಜನರನ್ನು ಹೊರದೂಡಬೇಕೆನ್ನುವ ವಾದಗಳನ್ನು ಯಾರು ಬಯಸುತ್ತಾರೋ ಅದನ್ನು ಮಕ್ಕಳ ಮನಸ್ಸಲ್ಲಿ ತುಂಬುವ ಹುನ್ನಾರ ನಡೆಯುತ್ತಿದೆ. ಇವತ್ತಿನ ಬೆಳವಣಿಗೆಗಳು ಮಕ್ಕಳನ್ನು ಯಾವ ಮಟ್ಟಕ್ಕೆ ಕರೆದೊಯ್ಯತ್ತವೆ ಎಂದರೆ ಮುಂದೆ ಪ್ರತಿ ಶಾಲೆ, ಪ್ರತಿ ತರಗತಿಗಳು ರಣರಂಗವಾಗಲಿವೆ. ಈಗಾಗಲೇ ಹಿಜಾಬ್- ಕೇಸರಿಶಾಲು ವಿವಾದದಲ್ಲಿ ನೋಡಿದ್ದೇವೆ. ಮೊದಲೆಲ್ಲ ಶಾಲಾ, ಕಾಲೇಜುಗಳು ಸಹಬಾಳ್ವೆಯ ತಾಣವಾಗಿದ್ದವು. ಈಗ ಪರಸ್ಪರ, ದ್ವೇಷ, ಅಸೂಯೆಯ ತಾಣವಾಗಿ ಬದಲಾಗುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ವಿ.ಪಿ.ನಿರಂಜನಾರಾಧ್ಯ

“ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೆ ಇರುವಂತಹ, ಒಂದೇ ತರಗತಿಯಲ್ಲಿರುವ ಬೇರೆ ಬೇರೆ ಜಾತಿ, ಧರ್ಮದ ಮಕ್ಕಳು ಅಸಹನೆಯಿಂದ ಕುದಿಯುವಂತಹ ಪಠ್ಯವನ್ನು ರಚಿಸುತ್ತಿದ್ದಾರೆ. ಇದರ ಒಟ್ಟು ಫಲಿತಾಂಶ ಎಂದರೆ- ಕಳೆದ 75 ವರ್ಷಗಳಲ್ಲಿ ತನ್ನ ಎಲ್ಲ ಸಮಸ್ಯೆಗಳ ಇತಿಮಿತಿಗಳ ನಡುವೆ ರೂಪಿತಗೊಂಡಿದ್ದ ಆಧುನಿಕ ಶಿಕ್ಷಣ ವ್ಯವಸ್ಥೆಯು, ವೈಜ್ಞಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಕಟ್ಟಿದ ವ್ಯವಸ್ಥೆಯು ಸಂಪೂರ್ಣ ನಾಶವಾಗಲಿದೆ. ನಮ್ಮ ಪೀಳಿಗೆಯೇ ಭಾಗ್ಯಶಾಲಿ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಮಗೆ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ವಸ್ತುನಿಷ್ಠವಾದ ಶಿಕ್ಷಣ ಸಿಕ್ಕಿತು. ಈಗ ಪ್ರತಿಯೊಂದನ್ನೂ ಅವರದ್ದೇ ಆದ ಲೆನ್ಸ್‌ನಲ್ಲಿ, ಹಿಂದುತ್ವ, ಕೋಮುವಾದವನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳ ಕಲಿಕೆಯನ್ನು ನಿರ್ಧರಿಸುವುದಾದರೆ ಇವರು ಎಂತಹ ಭಾರತವನ್ನು ಕಟ್ಟುತ್ತಿದ್ದಾರೆಂಬುದು ಗೋಚರವಾಗುತ್ತಿದೆ. ಅದು ಈ ದೇಶದ ದುರಂತ” ಎಂದು ವಿಷಾದಿಸಿದರು.

“ಯಾವ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ, ಸಂವಿಧಾನದ ಮೌಲ್ಯಗಳ ಸಾಕಾರ ಎಂದು ಹೇಳುತ್ತಿದ್ದೆವೋ ಅದೇ ಶಿಕ್ಷಣದ ಮೂಲಕ ಸಂಪೂರ್ಣವಾಗಿ ಅರಾಜಕತೆ, ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸ ಆಗುತ್ತಿದೆ. ನಾನು ಇಷ್ಟು ದಿನದವರೆಗೆ ಇಷ್ಟು ನೊಂದುಕೊಂಡು ಮಾತನಾಡಿರಲಿಲ್ಲ. ಭಗತ್‌ಸಿಂಗ್ ಅವರನ್ನು ಪಠ್ಯದಿಂದ ಕೈ ಬಿಡುತ್ತಾರೆಂದರೆ ಇವರದೆಂಥ ಮನಸ್ಥಿತಿ. ಭಗತ್‌ಸಿಂಗ್ ಬಗ್ಗೆ ಬರೆದ ಡಾ.ಜಿ.ರಾಮಕೃಷ್ಣ ಅವರು ಎಡಪಂಥೀಯರೆಂಬುದು ಇದಕ್ಕೆ ಕಾರಣವೇ? ಇಡೀ ಜೀವನದಲ್ಲಿ ಅತ್ಯಂತ ಸರಳವಾಗಿ, ಆದರ್ಶಯುತವಾಗಿ ಬದುಕಿದವರು ರಾಮಕೃಷ್ಣ ಅವರು. ಅಂಥವರು ಬರೆದವರೆಂಬ ಕಾರಣಕ್ಕೆ ಪಠ್ಯವನ್ನು ಕೈಬಿಡುತ್ತೀರಾ? ಭಗತ್‌ಸಿಂಗ್‌ಗೆ ಸರಿಸಾಟಿ ಯಾರೂ ಇಲ್ಲ. ಹೆಡಗೇವಾರ್ ಎಲ್ಲಿ? ಭಗತ್‌ಸಿಂಗ್ ಎಲ್ಲಿ? ನಿಮ್ಮ ಮನಸ್ಸು ಎಷ್ಟು ಕ್ರೂರವಾಗಿದೆ, ಕಲುಷಿತವಾಗಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ” ಎಂದು ನೋವಿನಿಂದ ಮಾತನಾಡಿದರು.

“ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಏಕೋಪಾಧ್ಯಾಯ ಶಾಲೆಗಳಿವೆ. ಮೂಲಭೂತವಾಗಿ ಮಕ್ಕಳಿಗೆ ಕಲಿಸಬೇಕಾದದ್ದು ಸಾಕಷ್ಟಿರುವಾಗ ನಾವು ಇದನ್ನು ಮಾಡುತ್ತಾ ಕುಳಿತ್ತಿದ್ದೇವಲ್ಲ, ಏನು ಹೇಳೋದು ಇವರಿಗೆ? ಎಷ್ಟು ತಾರಕಕ್ಕೆ ಹೋಗಿದ್ದಾರೆ ನೋಡಿ. ಶಿಕ್ಷಣ ಸಚಿವರೇ, ಇದರಲ್ಲೇನಿದೆ ತಪ್ಪು ಎಂದು ಕೇಳುತ್ತಾರೆ. ನಮ್ಮ ಪಾಲಕರಿಗಾಗಲೀ, ಶಿಕ್ಷಕರಿಗಾಗಲೀ ಯಾವುದೂ ಅರ್ಥವಾಗುತ್ತಿಲ್ಲ. ಸಂವಿಧಾನದ ನೆಲೆಯಲ್ಲಿ ಯಾವುದನ್ನೂ ನೋಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ಬಹಳ ಸಂಕಟವಾಗುತ್ತದೆ. ಇದು ಎಲ್ಲಿಗೆ ಮುಟ್ಟುತ್ತದೆ ಎಂಬುದು ಗೊತ್ತಿಲ್ಲ. ಪಠ್ಯ ಪರಿಷ್ಕರಣೆ ಮಾಡಿರುವಾತ ಕನಿಷ್ಠ ಇತಿಹಾಸಕಾರನೂ ಅಲ್ಲ, ಸಂಶೋಧಕನೂ ಅಲ್ಲ, ಯಾವುದೂ ಅಲ್ಲದ ವ್ಯಕ್ತಿ ಮನಸ್ಸಿಗೆ ಬಂದಂತೆ ಸ್ವೇಚ್ಚೆಯಿಂದ ಬದಲಿಸುತ್ತಾನೆಂದರೆ, ಅದನ್ನು ಶಿಕ್ಷಣ ಮಂತ್ರಿ ಸಮರ್ಥಿಸಿಕೊಳ್ಳುತ್ತಾರೆಂದರೆ ಇದು ನಿಜಕ್ಕೂ ಅಧಃಪತನ” ಎಂದು ಭವಿಷ್ಯ ನುಡಿದರು.

ಆರ್‌ಎಸ್‌ಎಸ್ ಪರಿಚಯಿಸುವ ಹಿಡನ್ ಅಜೆಂಡಾ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಎಳೆಯ ಮನಸ್ಸುಗಳಿಗೆ ಶಿಕ್ಷಣದ ಮೂಲಕ ಪರಿಚಯಿಸುವುದೇ ಅವರ ಹಿಡನ್ ಅಜೆಂಡಾ. ಅದಕ್ಕಾಗಿ ಹೆಡಗೇವಾರ್ ಲೇಖನವನ್ನು ಸೇರಿಸಿದ್ದಾರೆ. ಹೆಡಗೇವಾರ್‌ರವರ ವ್ಯಕ್ತಿ ಚಿತ್ರಣವನ್ನು ಕೊಟ್ಟರೆ ಎಲ್ಲರೂ ಮುಗಿಬೀಳುತ್ತಾರೆ ಎಂಬ ಕಾರಣದಿಂದ ಲೇಖನವನ್ನು ಕೊಡುವ ಮೂಲಕ ಹೆಡಗೇವಾರ್ ಯಾರು, ಏನು ಮಾಡಿದವರು ಎಂದು ಪರಿಚಯಿಸಿ ಆರ್‌ಎಸ್‌ಎಸ್ ಮನಸ್ಥಿತಿಯನ್ನು ಬೆಳಸಲಾಗುತ್ತದೆ” ಎಂದರು.

“ಆರ್‌ಎಸ್‌ಎಸ್ ಎನ್ನುವುದು ಅವರ ಪ್ರಕಾರ ದೊಡ್ಡ ಸಂಘಟನೆ ಇರಬಹುದು. ಆದರೆ ಅದು ಕೋಮುವಾದಿ ಸಂಘಟನೆ. ಅಂತಹ ಸಂಘಟನೆಯ ಸಂಸ್ಥಾಪಕನ ಲೇಖನವನ್ನು ಪಠ್ಯವಾಗಿ ಇಡುವುದು, ಆ ಮುಖೇನ ಮಕ್ಕಳಿಗೆ ಆರ್‌ಎಸ್‌ಎಸ್ ಕುರಿತು ಪರಿಚಯಿಸುವುದು ಅನಾರೋಗ್ಯಕರ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟರು.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

“ಭಗತ್‌ಸಿಂಗ್ ಪಠ್ಯವನ್ನು ತೆಗೆದದ್ದು ಇವರ ಢೋಂಗಿ ದೇಶಪ್ರೇಮವನ್ನು ತೋರಿಸುತ್ತದೆ. ಜೊತೆಗೆ ಕನ್ನಡದ ಮುಖ್ಯ ಲೇಖಕರಾದ ಲಂಕೇಶ್, ಸಾ.ರಾ. ಅಬೂಬುಕರ್, ಎ.ಎನ್.ಮೂರ್ತಿರಾಯರು, ಜಿ.ರಾಮಕೃಷ್ಣ ಅವರ ಪಾಠಗಳನ್ನು ಹೊರಗಿಟ್ಟು ನಮ್ಮ ಪ್ರಾದೇಶಿಕ ಅಸ್ಮಿತೆಗೆ ದ್ರೋಹ ಮಾಡಿದ್ದಾರೆ. ಕನ್ನಡ ಪಠ್ಯ ಎಂದರೆ ಅದರ ಮುಖೇನ ಕನ್ನಡ ಭಾಷೆ, ಪರಂಪರೆ, ಕನ್ನಡದ ಪ್ರಜ್ಞೆಯನ್ನು ಪರಿಚಯಿಸಿಕೊಡುವುದೇ ಆಗಿದೆ. ಅಂತಹ ಮುಖ್ಯ ಆಶಯಗಳಿಗೆ ಕೊಡಲಿ ಪೆಟ್ಟು ನೀಡುವ ರೀತಿಯಲ್ಲಿ ಈ ಲೇಖಕರ ಪಾಠಗಳನ್ನು ತೆಗೆದು ಹಾಕಿರುವುದು ಕನ್ನಡ ದ್ರೋಹಿ ಕೃತ್ಯ” ಎಂದು ತಿಳಿಸಿದರು.

“ಹೊಸ ಲೇಖಕರ ಪಠ್ಯಗಳನ್ನು ಸೇರಿಸಲಾಗಿದೆ. ಅವರ ಹಿನ್ನೆಲೆಯನ್ನು ನೋಡಬೇಕಾಗುತ್ತದೆ. ಶತಾವಧಾನಿ ಗಣೇಶ್ ಲೇಖನವನ್ನು ಓದಿದೆ. ಅದು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೋಧಿಸುವ ಲೇಖನವೇ? ಮಕ್ಕಳ ಮನಸ್ಥಿತಿ, ಗ್ರಹಿಕೆಯ ಸ್ಥಿತಿ ಮತ್ತು ಭಾಷೆಯ ಮೂಲಕ ಮಕ್ಕಳಿಗೆ ಕಲಿಸಲು ಹೊರಟಿರುವ ವಿಷಯವು ಎಷ್ಟು ವೈಜ್ಞಾನಿಕವಾಗಿದೆ? ಎಂಬುದನ್ನೆಲ್ಲ ಯೋಚಿಸಬೇಕಿದೆ. ಆರ್‌ಎಸ್‌ಎಸ್ ವಿಚಾರಗಳನ್ನು ಕಲಿಸಲು ಹೊರಟಿದ್ದಾರೆ. ಆರ್‌ಎಸ್‌ಎಸ್ ಎಂದರೆ ಬ್ರಾಹ್ಮಣೀಕರಣ, ವೈದೀಕರಣ ಎಂದರ್ಥ. ಹಿಂದೂ ಎಂಬುದರ ನಿಜವಾದ ಮೂಲ ಅರ್ಥ ವೈದಿಕ ಧರ್ಮ, ವರ್ಣ ಧರ್ಮವೇ ಆಗಿದೆ. ವರ್ಣದೊಳಗೆ ತಾರತಮ್ಯವಿದೆ. ಇದನ್ನು ಮುಚ್ಚಿಹಾಕಲು ಹಿಂದೂ ನಾವೆಲ್ಲ ಒಂದು ಎಂದು ಹೇಳುತ್ತಾರೆ. ಇದು ಅವರ ರಾಜಕೀಯ ಪರಭಾಷೆಯೇ ಹೊರತು ವಾಸ್ತವವಲ್ಲ. ಹಿಂದೂ ಧರ್ಮವೆಂದರೆ ಅದು ವೈದಿಕ ಧರ್ಮವಷ್ಟೇ” ಎಂದು ವಿಶ್ಲೇಷಿಸಿದರು.

ಹೆಡಗೇವಾರ್ ಪಾಠದಲ್ಲಿ ದ್ವಿಮುಖ ನೀತಿ: ಅಲ್ಲಮಪ್ರಭು ಬೆಟ್ಟದೂರು

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ವೈಜ್ಞಾನಿಕವಾದ ವೈಚಾರಿಕವಾದ ಪಠ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದವು. ಮತ, ಧರ್ಮಗಳ ವಿಚಾರಗಳಿಗಿಂತ ಮಾನವೀಯತೆಗೆ ಕಡೆಗೆ ನಮ್ಮ ಪಠ್ಯಗಳು ಹೊರಳಿದ್ದವು. ಆದರೆ ಅದನ್ನು ಈಗ ಬದಲಿಸಲಾಗುತ್ತಿದೆ” ಎಂದು ಹೇಳಿದರು.

“ಹೆಡಗೇವಾರ್ ಪಠ್ಯವನ್ನು ನೀಡಿದ್ದಾರೆ. ಆದರ್ಶ ವ್ಯಕ್ತಿ ಯಾರಾಗಬೇಕು ಎಂದು ಮಾತನಾಡುತ್ತಾ ಹೆಡಗೇವಾರ್- ಯಾರೂ ಆದರ್ಶ ವ್ಯಕ್ತಿಗಳಿಲ್ಲ. ಭಗವಾಧ್ವಜವೇ ಆದರ್ಶವಾಗಬಹುದು- ಎಂದು ಒಂದು ಕಡೆ ಹೇಳಿದರೆ,- ಉತ್ತಮ ವ್ಯಕ್ತಿ ಇದ್ದರೆ ಆದರ್ಶವಾಗಬಹುದು- ಎಂದೂ ಮತ್ತೊಂದೆಡೆ ಹೇಳಿದ್ದಾರೆ. ಲೇಖನದಲ್ಲೇ ದ್ವಂದ್ವ ಇದೆ” ಎಂದು ಅಭಿಪ್ರಾಯಪಟ್ಟರು.

ಅಲ್ಲಮಪ್ರಭು ಬೆಟ್ಟದೂರು

“ಆರ್‌ಎಸ್‌ಎಸ್ ಹಿನ್ನೆಲೆ ಉತ್ತಮವಾಗಿಲ್ಲ. ಗಾಂಧಿಯನ್ನು ಕೊಂದ ವ್ಯಕ್ತಿ ಈ ಸಂಘಟನೆಯ ಸಂಪರ್ಕದಲ್ಲಿದ್ದವರು ಎಂಬ ಆರೋಪವಿದೆ. ಗಾಂಧಿಯಂತಹ ವ್ಯಕ್ತಿಗಳನ್ನು ಸಹಿಸಕೊಳ್ಳಲಾರದ ಸಂಘಟನೆ ಇದು. ಭಗತ್‌ಸಿಂಗ್ ಪಾಠವನ್ನು ತೆಗೆದು ಹಾಕಿದ್ದಾರೆ. ಸಾರಾ ಅಬೂಬುಕರ್ ಅವರ ’ಯುದ್ಧ’ ಕಥೆ ಅಪರೂಪದ್ದು. ಅದನ್ನೂ ತೆಗೆದು ಹಾಕಿದ್ದಾರೆ. ಇದೆಲ್ಲ ಸರಿಯಲ್ಲ. ರಾಷ್ಟ್ರದ ಸಂವಿಧಾನ ಜಾತ್ಯತೀತ ತತ್ವಗಳನ್ನು ಹೇಳುತ್ತದೆ. ಅದಕ್ಕೆ ವಿರುದ್ಧ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ಇವರೇನು ಖಾಯಂ ಅಲ್ಲ” ಎಂದು ಆಶಾವಾದ ವ್ಯಕ್ತಪಡಿಸಿದರು.

ಪೂರ್ವನಿರ್ಧರಿತವಾಗಿತ್ತು: ಮಾವಳ್ಳಿ ಶಂಕರ್

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, ಪಠ್ಯ ಪರಿಷ್ಕರಣೆಯಲ್ಲಿ ಸಂಘ ಪರಿವಾರದ ಹೆಜ್ಜೆಗಳನ್ನು ಗುರುತಿಸಿದರು.

“ಚಕ್ರತೀರ್ಥರನ್ನು ಪಠ್ಯ ಪರಿಷ್ಕರಣೆಗೆ ನೇಮಿಸಿದಾಗಲೇ ಅದು ನಿರ್ಧಾರವಾಗಿತ್ತು. ಅವರು ತಮ್ಮ ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರವೂ ಅದಕ್ಕೆ ಸಹಕಾರ ಕೊಡುತ್ತಿದೆ. ಅಖಂಡ ಭಾರತವೆಂದು ಪಾಕಿಸ್ತಾನ, ಅಫ್ಘಾನಿಸ್ತಾನವನ್ನೆಲ್ಲ ಸೇರಿಸಿಕೊಂಡಿದ್ದರು. ಆಗ ಪ್ರತಿಭಟನೆ ಮಾಡಿದ್ದೆವು. ಮತ್ತೆ ಅದೇ ರೀತಿಯ ವಿದ್ಯಮಾನಗಳು ನಡೆಯುತ್ತಿವೆ. ಬ್ರಿಟಿಷರಲ್ಲಿ ಕ್ಷಮೆ ಕೇಳಿದ್ದ ಸಾವರ್ಕರ್ ಫೋಟೋವನ್ನು ಪಾರ್ಲಿಮೆಂಟಿನೊಳಗೆ ಇರಿಸಿದ್ದಾರೆ. ಆತನಿಗೆ ಭಾರತರತ್ನವನ್ನು ಕೊಟ್ಟರೂ ಆಶ್ಚರ್ಯವಿಲ್ಲ” ಎಂದು ತಿಳಿಸಿದರು.

ಮಾವಳ್ಳಿ ಶಂಕರ್

“ಎನ್‌ಇಪಿ ಜಾರಿಗೊಳಿಸುತ್ತಿದ್ದಾರೆ. ಅದು ಬ್ರಾಹ್ಮಣ್ಯದ ಭಾಗ. ತಳ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವುದು ಇದರ ಉದ್ದೇಶ. ಇಂದು ಹೆಡಗೇವಾರ್ ಪಠ್ಯ ತಂದಿದ್ದಾರೆ. ನಾಳೆ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್ ಪಠ್ಯವನ್ನು ತಂದರೂ ಆಶ್ಚರ್ಯವಿಲ್ಲ. ಗಾಂಧಿ ಹತ್ಯೆಯನ್ನು ಸಮರ್ಥಿಸಿದ್ದ ಆಕೆಯನ್ನು ಜನರು ಗೆಲ್ಲಿಸಿದ್ದು, ತನ್ನೆಲ್ಲ ಕೃತ್ಯಗಳಿಗೆ ಸಮ್ಮತಿಯೆಂದೇ ಆರ್‌ಎಸ್‌ಎಸ್ ಭಾವಿಸುತ್ತದೆ” ಎಂದರು.

ಇತಿಹಾಸ ಬದಲಿಸಲು ಹೊರಟಿದ್ದಾರೆ: ಪ್ರಿಯಾಂಕ್ ಖರ್ಗೆ

“ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಇತಿಹಾಸವನ್ನು ಬದಲಿಸಲು ಹೊರಟಿದ್ದಾರೆ” ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.

“ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರ ಹೊಸಭಾರತದಲ್ಲಿ ನಾಥೂರಾಮ್ ಗೋಡ್ಸೆ ದೇಶಭಕ್ತ, ಗಾಂಧೀಜಿ ದೇಶದ್ರೋಹಿ. ಭಗತ್‌ಸಿಂಗ್ ದೇಶದ್ರೋಹಿ, ಹೆಡಗೇವಾರ್ ದೇಶಪ್ರೇಮಿ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ದೇಶದ್ರೋಹಿ, ಬ್ರಿಟಿಷರಲ್ಲಿ ಕ್ಷಮೆ ಕೇಳಿದ ವಿ.ಡಿ.ಸಾವರ್ಕರ್ ದೇಶಭಕ್ತ. ಇವರು ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“ಸ್ವಾತಂತ್ರ್ಯ ಹೋರಾಟದಲ್ಲಿ, ಆಧುನಿಕ ಭಾರತದ ನಿರ್ಮಾಣದಲ್ಲಿ, ಸಂವಿಧಾನ ರಚನೆಯಲ್ಲಿ ಆರ್‌ಎಸ್‌ಎಸ್ ಪಾಲ್ಗೊಂಡಿಲ್ಲ. ಉಪ್ಪಿನ ಸತ್ಯಾಗ್ರಹ ನಡೆದಾಗ ಇವರು ಎಲ್ಲಿದ್ದರು? ನಮ್ಮ ದೇಶವನ್ನು ಕಟ್ಟಲಿಕ್ಕೆ ಇವರ ಯಾವುದೇ ಕೊಡುಗೆ ಇಲ್ಲದೆ ಇರುವ ಕಾರಣ ಈಗ ಹುಸಿಯಾಗಿ ರಾಷ್ಟ್ರವಾದಿಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.

“ಬಿಜೆಪಿಯ ಅಂಧಭಕ್ತರಿಗೆ ಇತಿಹಾಸ ಗೊತ್ತಿಲ್ಲ. ಉದಾಹರಣೆಗೆ ಸಾವರ್ಕರ್‌ಗೆ ’ವೀರ್’ ಎಂಬ ಬಿರುದು ಕೊಟ್ಟಿದ್ದು ಯಾರು ಎಂಬುದಕ್ಕೆ ದಾಖಲೆಯಿಲ್ಲ. ಆದರೆ ಸುಭಾಷ್ ಚಂದ್ರ ಬೋಸ್ ಅವರಿಗೆ ’ನೇತಾಜಿ’ ಎಂದು, ಗಾಂಧೀಜಿಯವರಿಗೆ ’ಮಹಾತ್ಮ’ ಎಂದು ಬಿರುದುಕೊಟ್ಟಿದ್ದು ಯಾರೆಂಬುದು ಗೊತ್ತಿದೆ. ಇವುಗಳನ್ನು ಚರ್ಚಿಸುವುದಿಲ್ಲ. ಸಾವರ್ಕರ್‌ಗೆ ’ವೀರ್’ ಎಂದಿದ್ದು ಯಾರು? ’ನಿಮ್ಮ ವಿಧೇಯ ಸೇವಕ’ ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದು ಸಾವರ್ಕರ್ ತಾನೇ?” ಎಂದು ಕೇಳಿದರು.

ಪ್ರಿಯಾಂಕ್ ಖರ್ಗೆ

“ಭಗತ್‌ಸಿಂಗ್ ಕೋಮುವಾದದ ವಿರುದ್ಧವಿದ್ದರು. ’ನಾನೇಕೆ ನಾಸ್ತಿಕ’ ಎಂದು ಹೇಳಿಕೊಂಡಿದ್ದರು. ಇದು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರುದ್ಧವಲ್ಲವೇ? ಹೀಗಾಗಿ ಪಠ್ಯದಿಂದ ಕೈಬಿಟ್ಟಿದ್ದಾರೆ” ಎಂದ ಅವರು, “ಎನ್‌ಇಪಿ ವೈಜ್ಞಾನಿಕ ಮನೋಭಾವನೆಯನ್ನು ಕೊಲ್ಲುತ್ತಿದೆ. ವೈಜ್ಞಾನಿಕ ಮನೋಭಾವ ಇಲ್ಲದಿದ್ದರೆ ಪ್ರಗತಿ ಸಾಧ್ಯವಿಲ್ಲ. ಪುರಾಣಗಳ ಕಾಲದಲ್ಲೇ ನಮ್ಮಲ್ಲಿ ತಂತ್ರಜ್ಞಾನಗಳು ಬೆಳೆದಿದ್ದವು, ವಿಜ್ಞಾನ ಮುಂದುವರಿದಿತ್ತು ಎಂದೆಲ್ಲ ವಾಟ್ಸ್‌ಆಪ್‌ನಲ್ಲಿ ಚರ್ಚೆಯಾಗುತ್ತಿದ್ದದ್ದು, ಅದೀಗ ಟೆಕ್ಸ್ಟ್ ಬುಕ್ ಆಗುತ್ತಿದೆ. ಇದರಿಂದ ಯಾರಿಗೆ ಉದ್ಯೋಗ ಸಿಗುತ್ತದೆ. ಕೊರೊನಾ ಸಂದರ್ಭದಲ್ಲಿ ವಿಜ್ಞಾನ ಉಪಯೋಗಕ್ಕೆ ಬಂದಿತೋ, ತಟ್ಟೆ ಲೋಟ ಬಡಿದಿದ್ದು ಸಹಕಾರವಾಯಿತೋ?” ಎಂದು ಪ್ರಶ್ನಿಸಿದರು.

“ಕರ್ನಾಟಕದಲ್ಲಿ ಶಾಲೆಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳನ್ನು ಕಳೆದ ಮೂರು ವರ್ಷಗಳಿಂದ ಒದಗಿಸಿಲ್ಲ. ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣಕ್ಕೆ ಒತ್ತು ಕೊಟ್ಟಿಲ್ಲ. ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಸಮರ್ಪಕವಾಗಿ ಬಂದಿಲ್ಲ. ಶಿಕ್ಷಕರ ಕೊರತೆ ಇದೆ. ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟು ಕಳೆದೆರಡು ವರ್ಷಗಳಿಂದ ಮಕ್ಕಳಲ್ಲಿ ಕಲಿಯುವ ಆಸಕ್ತಿ ಕಡಿಮೆ ಆಗಿದೆ. ಮೂಲ ಶಿಕ್ಷಣವೇ ಸರಿಯಾಗಿ ಸಿಕ್ಕಿಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಬ್ರಿಡ್ಜ್ ಕ್ಲಾಸ್ ಮಾಡಿ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ” ಎಂದು ನೆನೆದರು.

ಮುಂದೆ ಬೇರೆ ಪಕ್ಷ ಬಂದಾಗ ಇದೇ ಆಗಲಿದೆ: ಎಂ.ಜಿ.ಹೆಗಡೆ

ಸಂಘ ಪರಿವಾರದೊಂದಿಗೆ ಹಲವು ವರ್ಷಗಳು ಇದ್ದು, ನಂತರ ಹೊರಬಂದಿರುವ ಶಿಕ್ಷಣ ತಜ್ಞ ಎಂ.ಜಿ.ಹೆಗಡೆಯವರು ಮಾತನಾಡಿ, “ಹೆಡಗೇವಾರ್ ಭಾಷಣ ಹಾಕಿದ್ದಾರೆ. ಆದರೆ ಭಾಷಣದ ನೆಪದಲ್ಲಿ ಆ ಭಾಷಣಕಾರನ ಹಿನ್ನೆಲೆಯನ್ನು ಹೇಳಬೇಕಾಗುತ್ತದೆ. ಆ ಮೂಲಕ ಆರ್‌ಎಸ್‌ಎಸ್ ಪರಿಚಯ ಮಾಡಿಕೊಡಬೇಕಾಗುತ್ತದೆ. ಹೀಗೆ ಆರ್‌ಎಸ್‌ಎಸ್ ಅನ್ನು ಶಾಲೆಗೆ ತರಲಾಗುತ್ತಿದೆ. ಮುಂದೆ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ತಮ್ಮ ಪಕ್ಷದ ಕುರಿತು ಪಠ್ಯ ರೂಪಿಸಿದರೆ ಎಳೆಯ ಮಕ್ಕಳ ಮನಸ್ಥಿತಿ ಏನಾಗುತ್ತದೆ? ಪಠ್ಯದಲ್ಲಿ ಸಂಘಟನೆಗಳ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅಲ್ಲದೆ ಈ ಪಾಠದಲ್ಲಿ ಭಗವಾಧ್ವಜ ಕುರಿತು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳು ರಾಷ್ಟ್ರಧ್ವಜಕ್ಕೆ ಗೌರವ ಕೊಡದೆ ಭಗವಾಧ್ವಜಕ್ಕೆ ಗೌರವ ಕೊಡುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಎಂ.ಜಿ.ಹೆಗಡೆ

ವಿಕಸನಗೊಳ್ಳಬೇಕಿರುವ ಮಕ್ಕಳ ಮನಸ್ಸಿಗೆ ವಿಷವನ್ನು ತುಂಬುವ ಕಾರ್ಯದಲ್ಲಿ ಸಂಘಪರಿವಾರ ಈಗ ಶಿಕ್ಷಣಕ್ಷೇತ್ರವನ್ನು ಗುರಿಯಾಗಿಸಿಕೊಂಡಿರಿವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರ ಭಾಗವಾಗಿ ನಡೆದಿರುವ ಪಠ್ಯ ಪರಿಷ್ಕರಣೆಯ ಬಗ್ಗೆ ತಜ್ಞರು ಮಂಡಿಸಿರುವ ವಾದವನ್ನು ಜನಸಾಮಾನ್ಯರು ಅರ್ಥಮಾಡಿಕೊಂಡು, ಇದು ಜಾರಿಯಾಗದಂತೆ ಸರ್ಕಾರಕ್ಕೆ ಗಟ್ಟಿಧ್ವನಿಯಿಂದ ಆಗ್ರಹಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...