Homeಅಂಕಣಗಳುಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

ಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

- Advertisement -
- Advertisement -

ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ನೈಋತ್ಯ ದೆಹಲಿಯ ಭಾರೀ ಚರಂಡಿಗಳಲ್ಲಿ ಕೊಳೆತ ಹೆಣಗಳು ತೇಲತೊಡಗಿವೆ. ರಣಕೇಕೆ, ರಕ್ತಪಾತ, ಅಟ್ಟಹಾಸ, ಅಕ್ರಂದನಗಳು ಅಡಗಿವೆ. ದಿಕ್ಕುಗಾಣದ ತಬ್ಬಲಿತನ, ದುಃಖ, ಆಘಾತಗಳು ಮಡುಗಟ್ಟಿವೆ. ಬದುಕುಗಳನ್ನು ಬಂಧು ಮಿತ್ರರನ್ನು ಕಳೆದುಕೊಂಡು ಬರಿಗೈಯಾಗಿರುವವರು ತಮ್ಮ ನೆಲದಲ್ಲೇ ಅನಾಥರಾಗಿದ್ದಾರೆ. ಪರಕೀಯತೆ ಮುತ್ತಿ ಕಾಡಿದೆ. ಬೆಂದ ಬದುಕುಗಳನ್ನು ಎಲ್ಲಿಂದ ಪುನಃ ಕಟ್ಟಬೇಕೋ ಕಾಣದಾಗಿದ್ದಾರೆ.

ಹದ್ದುಬಸ್ತುಗಳಿಲ್ಲದೆ ಹೂಂಕರಿಸಿದ ಕ್ರೌರ್ಯ ಅಮಾನುಷತೆ ಪೈಶಾಚಿಕ ನಗ್ನ ನರ್ತನದ ನಡುವೆ ಮಾನವೀಯತೆ ಮತ್ತು ಬಂಧುತ್ವದ ಪ್ರೀತಿ ಹರಿಸಿ ಜೀವಗಳನ್ನು ಕಾಪಾಡಿದ ಅನೇಕ ಉದಾಹರಣೆಗಳು ಕಾರ್ಮೋಡದ ನಡುವಿನ ಕೋಲ್ಮಿಂಚಿನಂತೆ ಗೋಚರಿಸಿವೆ.

ದೇಶದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೂರು ದಿನಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಸಂಪೂರ್ಣ ಕುಸಿದು ಗಲಭೆಕೋರರ ಕಾಲ ಕೆಳಗೆ ನರಳಿದ ಪರಿ ಸೋಜಿಗ ಮತ್ತು ಖೇದ ಉಂಟು ಮಾಡಿದೆ. ದೆಹಲಿ ಪೊಲೀಸ್ ವ್ಯವಸ್ಥೆ ಖುದ್ದಾಗಿ ಮುಂದೆ ನಿಂತು ಕೊಲೆಗಡುಕ ಗಲಭೆಕೋರ ಗುಂಪುಗಳಿಗೆ ಉತ್ತೇಜನ ನೀಡಿದ ಅನೇಕ ಕರಾಳ ನಿದರ್ಶನಗಳು ಹೊರಬಿದ್ದಿವೆ.

ಇಂತಹ ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ದಂಡಿಸಬೇಕಾದವರ ರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ. ಪೊಲೀಸರನ್ನು ದಂಡಿಸುವುದು ಬಿಟ್ಟು ನ್ಯಾಯವನ್ನು ನೇಣಿಗೇರಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಬಿಜೆಪಿ ತಲೆಯಾಳುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಕಿರುಬೆರಳು ಕೂಡ ಇದುವರೆಗೆ ಕದಲಲಿಲ್ಲ.

ವರ್ಗಾವಣೆಯಾದ ನ್ಯಾಯಮೂರ್ತಿಯವರ ಜಾಗದಲ್ಲಿ ಕುಳಿತು ವಿಚಾರಣೆ ನಡೆಸಿದ ಮತ್ತೊಂದು ನ್ಯಾಯಪೀಠ ದೆಹಲಿ ಪೊಲೀಸರ ನಿಷ್ಕ್ರಿಯತೆ ಕುರಿತ ಕೇಸಿನ ವಿಚಾರಣೆಯನ್ನು ಒಂದೂವರೆ ತಿಂಗಳ ಕಾಲ ಮುಂದಕ್ಕೆ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಶಾಂತಿಯಾತ್ರೆಯಲ್ಲೂ ಕೋಮುವಾದವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಕುರಿತು ಆಳುವ ವ್ಯವಸ್ಥೆ ಮೌನ ಕಿವಿಗಡಚಿಕ್ಕಿದೆ. ಜೈಲಿಗೆ ಅಟ್ಟಬೇಕಾದ ವ್ಯಕ್ತಿಗೆ ವೈ ಕೆಟಗರಿಯ ಸರ್ಕಾರಿ ಮೈಗಾವಲನ್ನು ಒದಗಿಸಿರುವುದು ವಿಕೃತಿಯ ಪರಮಾವಧಿ.

ದೆಹಲಿಯ ನರಮೇಧದ ಬೂದಿ ಇನ್ನೂ ಪೂರ್ಣ ತಣಿದಿಲ್ಲ. ರಕ್ತದಾಹದ ರಣಕೇಕೆ ಬಂಗಾಳದಲ್ಲಿ ಮೊಳಗಿದೆ. ದೆಹಲಿ ವಿಧಾನಸಭಾ ಚುನಾವಣೆಗಳ ಪ್ರಚಾರವನ್ನು ದ್ವೇಷ ಮತ್ತು ಧೃವೀಕರಣದಿಂದ ತುಂಬಿಸಿದ ಗೃಹಮಂತ್ರಿಯವರು ಕೊಲ್ಕತ್ತಾಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಯೂ ಚುನಾವಣೆಗಳು ಕದ ಬಡಿಯುತ್ತಿವೆ. ‘ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ’ ಘೋಷಣೆಗಳು ಬಂಗಾಳದಲ್ಲಿಯೂ ಕೇಳಿ ಬಂದಿವೆ. ದೆಹಲಿಯ ನರಮೇಧ ಬಂಗಾಳಕ್ಕೆ ಪಯಣಿಸದಿರಲಿ. ಈಶಾನ್ಯ ಭಾರತ ಮತ್ತೊಮ್ಮೆ ಭುಗಿಲೇಳತೊಡಗಿದೆ. ದೆಹಲಿಯಂತೆ ಮೇಘಾಲಯದಲ್ಲೂ ಎನ್.ಆರ್.ಸಿ. ಮತ್ತು ಸಿ.ಎ.ಎ. ಜನರ ಪ್ರಾಣಗಳನ್ನು ಬಲಿ ಪಡೆಯತೊಡಗಿವೆ. ಇರಿತಗಳಿಂದ ಮೂವರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ ಹೊತ್ತಿಸಿರುವ ಪೌರತ್ವದ ಕಿಚ್ಚು ಬಗೆಬಗೆಯ ಧೃವೀಕರಣಗಳನ್ನು ಬಿತ್ತಿ ಬೆಳೆಸತೊಡಗಿದೆ.

ಬುಡಕಟ್ಟುಗಳ ಭಾರತವಾಗಿರುವ ಈಶಾನ್ಯದಲ್ಲಿ ಅಸ್ಮಿತೆಯ ಪ್ರಶ್ನೆ ಬಲು ಸೂಕ್ಷ್ಮದ್ದು. ಅಸ್ಸಾಮಿನಲ್ಲಿ ಎನ್.ಆರ್.ಸಿ. ಮತ್ತು ಆನಂತರದ ಸಿ.ಎ.ಎ. ಈ ಸೀಮೆಯ ಶಾಂತಿಯನ್ನು ಗಾಢವಾಗಿ ಕದಡಿವೆ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಈ ಅಶಾಂತಿಯ ಭೂತವನ್ನು ಬಡಿದೆಬ್ಬಿಸಿ ಹಬ್ಬಿಸಿರುವವರು ರಾಜಕಾರಣಿಗಳು. ಈ ಭೂತ ತಮ್ಮ ಮುಷ್ಠಿಯ ಬಂಧಿ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಈ ಹಿಡಿತದಿಂದ .ಬಿಡಿಸಿಕೊಂಡು ಅಕರಾಳ ವಿಕರಾಳ ರೂಪ ಧರಿಸಿ ಅಮಾಯಕರ ಬೇಟೆಯಲ್ಲಿ ತೊಡಗಿದೆ. ತನ್ನನ್ನು ಬಡಿದೆಬ್ಬಿಸಿದವರನ್ನೂ ಇಂದಲ್ಲ ನಾಳೆ ಬಲಿ ತೆಗೆದುಕೊಂಡೀತು. ಹಚ್ಚಲಾಗುವ ಕಿಚ್ಚಿಗೆ ಹಿಂದೂಗಳು- ಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿಯಾಗಿಸುವುದೊಂದೇ ಅದರ ನಿಜ ಧರ್ಮ. ಸಿ.ಎ.ಎ. ಮತ್ತು ಎನ್.ಆರ್.ಸಿ. ಈಶಾನ್ಯ ಭಾರತದಲ್ಲಿ ಎಬ್ಬಿಸಿರುವ ಶಂಕೆ ಮತ್ತು ಭಯ ಬೇರೆಯದೇ ಆದದ್ದು. ಸಿ.ಎ.ಎ. ಅಡಿಯಲ್ಲಿ ಹಿಂದೂ-ಬೌದ್ಧ-ಕ್ರೈಸ್ತರ ಹೆಸರಿನಲ್ಲಿ ‘ಹೊರಗಿನವರು’ ಬಂದು ಬೀಡು ಬಿಟ್ಟು, ತಮ್ಮ ನೆಲ ಜಲ ಸಂಸ್ಕೃತಿ ಅಸ್ಮಿತೆಯ ಮೇಲೆ ದಾಳಿ ನಡೆಸಿ ರಾಜಕೀಯ ಅಧಿಕಾರವನ್ನೂ ಕಿತ್ತುಕೊಂಡಾರು, ತಮ್ಮ ನೆಲದಲ್ಲಿ ತಾವೇ ಪರಕೀಯರಂತೆ ಬದುಕಬೇಕಾದೀತು ಎಂಬುದು ಈಶಾನ್ಯ ರಾಜ್ಯಗಳ ಜನಸಮುದಾಯಗಳ ಆಶಂಕೆ. ನೆಲದ ಮಕ್ಕಳಾದ ಬುಡಕಟ್ಟುಗಳು ಮತ್ತು ಪರಕೀಯರು ಎಂಬ ರೂಪವನ್ನು ಸಿ.ಎ.ಎ.- ಎನ್.ಆರ್.ಸಿ. ಧರಿಸಿದೆ. ಇಬ್ಬರ ನಡುವೆ ರಕ್ತಸಿಕ್ತ ಕದನವನ್ನು ಹುಟ್ಟಿ ಹಾಕಿದೆ. ಮೊನ್ನೆ ಮೇಘಾಲಯದಲ್ಲಿ ನಡೆದ ಇಂತಹ ಘರ್ಷಣೆಗಳಲ್ಲಿ ಸತ್ತ ಮೂವರ ಪೈಕಿ ಇಬ್ಬರು ಅಸ್ಸಾಮಿನವರು. ಬುಡಕಟ್ಟು ಜನಾಂಗಗಳು ಪರಕೀಯರು ಎಂದು ಭಾವಿಸುವ ‘ಇತರರು’. ಇವರು ಹಿಂದೂಗಳೇ ಇರಬಹುದು, ಮುಸಲ್ಮಾನರೂ ಆಗಿರಬಹುದು.

ಸಿ.ಎ.ಎ.-ಎನ್.ಆರ್.ಸಿ. ತರಲೇಬೇಕೆಂಬ ಜಿದ್ದು ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಬಿಗುವಿನ ಭಾವಗಳನ್ನು ದಟ್ಟಗೊಳಿಸತೊಡಗಿವೆ ಎಂಬ ವಾಸ್ತವವನ್ನು ಸರ್ಕಾರ ಗುರುತಿಸಿ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡರೆ ಹೊರದಾರಿ ತಾನಾಗಿಯೇ ಗೋಚರಿಸೀತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...