Homeಮುಖಪುಟಹೊಸ ಕ್ರಿಮಿನಲ್ ಕಾನೂನುಗಳಡಿ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆ: ಅಮಿತ್ ಶಾ

ಹೊಸ ಕ್ರಿಮಿನಲ್ ಕಾನೂನುಗಳಡಿ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆ: ಅಮಿತ್ ಶಾ

- Advertisement -
- Advertisement -

ಮೂರು ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ- 1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್- 1898, ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಅನ್ನು ಬದಲಾಯಿಸುತ್ತದೆ.

ಮಸೂದೆಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ನ್ಯಾಯ (ಎರಡನೆಯ) ಸಂಹಿತಾ (ಹಳೆಯ ಭಾರತೀಯ ದಂಡ ಸಂಹಿತೆ) ಅಡಿ ಗುಂಪು ಹತ್ಯೆಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಐದು ಅಥವಾ ಹೆಚ್ಚು ಜನರ ಗುಂಪು ಒಬ್ಬ ವ್ಯಕ್ತಿಯ ಜನಾಂಗ, ಜಾತಿ, ಲಿಂಗ, ಭಾಷೆ ಅಥವಾ ವೈಯಕ್ತಿಕ ನಂಬಿಕೆಯ ಆಧಾರಗಳ ಮೇಲೆ ಕೊಲೆ ಅಥವಾ ಗಂಭೀರ ಗಾಯ ಮಾಡಿದರೆ ಅದು ಗುಂಪು ಹತ್ಯೆಯಾಗಲಿದೆ. ಇಂತಹ ಅಪರಾಧಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಅಮಿತ್ ಶಾ ವಿವರಿಸಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ನೀವು 58 ವರ್ಷಗಳ ಕಾಲ ದೇಶವನ್ನು ಆಳಿದ್ದೀರಿ. ಆದರೆ, ಯಾಕೆ ಗುಂಪು ಹತ್ಯೆಯನ್ನು ಕಾನೂನಿನಲ್ಲಿ ಸೇರಿಸಿಲ್ಲ? ಬಿಜೆಪಿಯನ್ನು ನಿಂದಿಸಲು ಗುಂಪು ಹತ್ಯೆ ಎಂಬ ಪದ ಬಳಸುವ ನೀವು, ಅಧಿಕಾರದಲ್ಲಿದ್ದಾಗ ಅದನ್ನು ಕ್ರಿಮಿನಲ್ ಕಾನೂನಿನಲ್ಲಿ ಸೇರಿಸಲು ಯಾಕೆ ಮರೆತಿರಿ? ಎಂದು ಪ್ರಶ್ನಿಸಿದ್ದಾರೆ.

ಒಮ್ಮೆ ನಾನು ಕಾಂಗ್ರೆಸ್ ನಾಯಕ ಚಿದಂಬರಂ ಅವರ ಭಾಷಣ ಕೇಳುತ್ತಿದ್ದೆ. ಅದರಲ್ಲಿ ಅವರು, “ಗೃಹ ಸಚಿವರಿಗೆ ಒಂದು ಸವಾಲು, ಹೊಸ ಕ್ರಿಮಿನಲ್ ಕಾನೂನು ತಂದರೆ ಅವರು ಗುಂಪು ಹತ್ಯೆಯನ್ನು ಏನೆಂದು ಪರಿಗಣಿಸುತ್ತಾರೆ? ಎಂದಿದ್ದರು” ಎಂದು ಹೇಳಿದರು.

ಚಿದಂಬರಂ ಅವರ ಹಳೆಯ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅಮಿತ್ ಶಾ, “ಚಿದಂಬರಂ ಅವರು ಬಿಜೆಪಿ ಅಥವಾ ಅದರ ತತ್ವಗಳನ್ನು ಅರ್ಥ ಮಾಡಿಕೊಂಡಿಲ್ಲ. ನಮ್ಮ ಪಕ್ಷವು ಒಂದೇ ಸಿದ್ಧಾಂತವನ್ನು ಹೊಂದಿದೆ ‘ಅದು ರಾಷ್ಟ್ರದ ಅಭಿವೃದ್ಧಿಯಾಗಿದೆ’ ಎಂದು ಅಮಿತ್ ಶಾ ತಿರುಗೇಟು ಕೊಟ್ಟರು.

ಹೊಸ ಕ್ರಿಮಿನಲ್ ಮಸೂದೆಗಳ ಕುರಿತು ಮಾತನಾಡಿದ ಅಮಿತ್‌ ಶಾ, ಪ್ರಸ್ತಾವಿತ ಕಾನೂನುಗಳನ್ನು ಸಮಗ್ರ ಸಮಾಲೋಚನೆಯ ನಂತರ ರಚಿಸಲಾಗಿದೆ ಮತ್ತು ಸದನದ ಅನುಮೋದನೆಗೆ ತರುವ ಮೊದಲು ಕರಡು ಶಾಸನಗಳ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಅವುಗಳು ಶಿಕ್ಷಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು, ನ್ಯಾಯ ನೀಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದ ಬೆನ್ನಲ್ಲೇ ಕ್ರಿಮಿನಲ್ ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರಗೊಂಡಿವೆ. ಲೋಕಸಭೆ ಮತ್ತು ರಾಜ್ಯಸಭೆಯಿಂದ ಒಟ್ಟು 143 ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಪೈಕಿ 97 ಸಂಸದರು ಲೋಕಸಭೆಯಿಂದ ಅಮಾನತುಗೊಂಡಿದ್ದಾರೆ. ಅಂದರೆ, ಲೋಕಸಭೆಯ ಒಟ್ಟು ಸದಸ್ಯರಲ್ಲಿ ಶೇಕಡಾ 68ಕ್ಕಿಂತ ಹೆಚ್ಚು ಪ್ರತಿಪಕ್ಷಗಳ ಸಂಸದರನ್ನು ಅಮಾನತು ಮಾಡಲಾಗಿದೆ. ಒಂದರ್ಥದಲ್ಲಿ ಪ್ರತಿಪಕ್ಷವಿಲ್ಲದೆ ಕೇವಲ ಆಡಳಿತ ಪಕ್ಷ ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆದುಕೊಂಡಿದೆ.

ಇದನ್ನೂ ಓದಿ: ಸಂಸದರ ಸಾಮೂಹಿಕ ಅಮಾನತಿನ ಬೆನ್ನಲ್ಲಿ ಲೋಕಸಭೆಯಲ್ಲಿ 3 ಕ್ರಿಮಿನಲ್ ಕಾನೂನು ಮಸೂದೆ ಅಂಗೀಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...