ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು ‘ಬಹುತೇಕ ಯಾಂತ್ರಿಕವಾಗಿ’ ಜಾರಿಯಾದಂತೆ ಕಂಡುಬರುತ್ತಿವೆ ಮತ್ತು ‘ತಾರ್ಕಿಕ ವ್ಯತ್ಯಾಸ’ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಸೆ.22) ಭಾರತೀಯ ಚುನಾವಣಾ ಆಯೋಗಕ್ಕೆ ಹೇಳಿದೆ.
‘ತಾರ್ಕಿಕ ವ್ಯತ್ಯಾಸಗಳು’ (Logical Discrepancies) ಎಂಬ ವರ್ಗದ ಅಡಿಯಲ್ಲಿ ಮತದಾರರನ್ನು ವರ್ಗೀಕರಿಸಲು ಕಾರಣವಾಗಿರುವ ಮಾನದಂಡಗಳು, ವ್ಯಾಖ್ಯಾನಗಳು, ಅಲ್ಗಾರಿದಮಿಕ್ ನಿಯತಾಂಕಗಳು (algorithmic parameters) ಮತ್ತು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಬಹಿರಂಗಪಡಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆಯರು ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ಅಭಿಯಾನದ ಮುಂಚೂಣಿ ನಾಯಕರಾದ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ದೆಹಲಿ ಮುಖ್ಯ ಚುನಾವಣಾಧಿಕಾರಿಯು ನೋಟಿಸ್ ನೀಡಲಾದ ಮತದಾರರ ಹೆಸರುಗಳನ್ನು ಮತ್ತು ಅವರಿಗೆ ನೋಟಿಸ್ ನೀಡಲು ಇರುವ ನಿರ್ದಿಷ್ಟ ಕಾರಣಗಳನ್ನು ಸೂಕ್ತವಾಗಿ ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಈ ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಿಚಾರಣೆ ವೇಳೆ ಆರಂಭದಲ್ಲೇ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ತೀರಾ ಕ್ಷುಲ್ಲಕ ಕಾರಣಗಳಿಗಾಗಿ 33 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗುತ್ತಿರುವುದರಿಂದ ಈ ಇಡೀ ಪ್ರಕ್ರಿಯೆಯು ‘ಆಘಾತಕಾರಿ’ ರೀತಿಯಲ್ಲಿ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
livelaw.in ವರದಿ ಪ್ರಕಾರ, ನ್ಯಾಯಮೂರ್ತಿ ಬಾಗ್ಚಿ ಅವರು ಪ್ರಶಾಂತ್ ಭೂಷಣ್ ಅವರ ಈ ವಾದವನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಿದ್ದು, “ಬಹುತೇಕ ಯಾಂತ್ರಿಕವಾಗಿ ನೋಟಿಸ್‌ಗಳು ಹೋಗುತ್ತಿವೆ. ಬಹುಪಾಲು ಇವು ಯಂತ್ರ-ಚಾಲಿತ (machine-generated) ನೋಟಿಸ್‌ಗಳಾಗಿವೆ…” ಎಂದು ಅಭಿಪ್ರಾಯಪಟ್ಟಿದ್ದಾರೆ.
“ನೀವು ‘ತಾರ್ಕಿಕ ವ್ಯತ್ಯಾಸ’ದ ಬಗ್ಗೆ ಸ್ವಲ್ಪ ಸ್ಪಷ್ಟನೆ ನೀಡಬೇಕಿದೆ “ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.
‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಹೊಂದಿದ್ದಾರೆಂದು ವರ್ಗೀಕರಿಸಲಾದ ಅಥವಾ ಹಿಂದಿನ ಎಸ್‌ಐಆರ್ ಪಟ್ಟಿಯೊಂದಿಗೆ ಸೆಲ್ಫ್ ಮ್ಯಾಪ್ ಮಾಡದ (unmapped) ಭಾರಿ ಸಂಖ್ಯೆಯ ಮತದಾರರಿಗೆ ನೋಟಿಸ್ ಜಾರಿ ಮಾಡಿರುವ ವಿಧಾನದ ಕುರಿತು ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ನೋಟಿಸ್ ನೀಡಲು ಸುಮಾರು 33.13 ಲಕ್ಷ ಮತದಾರರನ್ನು ಗುರುತಿಸಿದೆ.
“ನೋಟಿಸ್‌ಗಳು ಮತದಾರರಿಗೆ ಪ್ರಾಯೋಗಿಕ ತೊಂದರೆಗಳನ್ನು ಉಂಟುಮಾಡುತ್ತಿವೆ. ಏಕೆಂದರೆ, ವ್ಯತ್ಯಾಸಗಳನ್ನು ಸರಿಪಡಿಸಲು ಮತದಾರರು ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ. ಇಸಿಐ ನಿರ್ದಿಷ್ಟಪಡಿಸಿದ ದಾಖಲೆಗಳ ಮೂಲಕ ಆ ವ್ಯತ್ಯಾಸಗಳನ್ನು ಸಾಬೀತುಪಡಿಸಲು ಅಥವಾ ಬಗೆಹರಿಸಲು ಮತದಾರರಿಗೆ ಸಾಧ್ಯವಾಗದೇ ಇರಬಹುದು” ಎಂದು ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.
“ಸಮಸ್ಯೆಯೇನೆಂದರೆ, ನೀವು ನೋಟಿಸ್ ಪಡೆದರೆ, ನೀವು ದಾಖಲೆಗಳೊಂದಿಗೆ ಹೋಗಬೇಕಾಗುತ್ತದೆ” ಎಂದು ಭೂಷಣ್ ಹೇಳಿದ್ದಾರೆ.
ಮತದಾರ ಮತ್ತು ಅವರ ಪೋಷಕರ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಗಳಿಗಿಂತ ಕಡಿಮೆ ಇದೆ ಎಂದು ತಿಳಿಸುವ ನೋಟಿಸ್‌ನ ಉದಾಹರಣೆ ನೀಡಿ ಪ್ರಶಾಂತ್ ಭೂಷಣ್ ಅವರು, ಇಸಿಐ ನಿರ್ದಿಷ್ಟಪಡಿಸಿದ 12 ದಾಖಲೆಗಳಲ್ಲಿ ಪೋಷಕರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವಾಗ, ಮತದಾರರು ಅಂತಹ ವಯಸ್ಸಿನ ವ್ಯತ್ಯಾಸಕ್ಕೆ ಕಾರಣವನ್ನು ಹೇಗೆ ಸಾಬೀತುಪಡಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕಳವಳಕ್ಕೆ ಪ್ರತಿಕ್ರಿಯಿಸಿದ ಇಸಿಐ ಪರ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಕೆಲಸದ ಹೊರೆ ನಿಭಾಯಿಸಲು ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ ಮತ್ತು ನೋಟಿಸ್‌ಗಳಲ್ಲಿ ಕಾರಣಗಳನ್ನು ನೀಡಲಾಗಿದೆ. ಸೂಕ್ತ ಮಾಹಿತಿಯನ್ನೂ ಪ್ರದರ್ಶಿಸಲಾಗುತ್ತಿದೆ ಎಂದಿದ್ದಾರೆ.
ಈ ವೇಳೆ, ದೊಡ್ಡ ಸಂಖ್ಯೆಯ ನೋಟಿಸ್‌ಗಳನ್ನು ನಿರ್ವಹಿಸಲು ಎಷ್ಟು ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ನಿಯೋಜಿಸಲಾಗಿದೆ ಎಂದು ನ್ಯಾಯಪೀಠವು ಪ್ರಶ್ನಿಸಿದೆ. “ನೀವು ಸುಮಾರು 30 ಲಕ್ಷ ನೋಟಿಸ್‌ಗಳನ್ನು ಕಳುಹಿಸಿದ್ದೀರಿ. ಎಷ್ಟು ಬಿಎಲ್‌ಒಗಳನ್ನು ನಿಯೋಜಿಸಲಾಗಿದೆ?” ಎಂದು ನ್ಯಾಯಮೂರ್ತಿ ಬಾಗ್ಚಿ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ನಾಯ್ಡು, “ಸುಮಾರು 14,000 ಬಿಎಲ್‌ಒಗಳು ಮತ್ತು 1,200 ಮತದಾರರ ನೋಂದಣಿ ಅಧಿಕಾರಿಗಳನ್ನು (EROs) ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 29 ಅಂತಿಮ ಗಡುವಾಗಿದ್ದು, ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಗಡುವನ್ನು ವಿಸ್ತರಿಸಲು ಭಾರತೀಯ ಚುನಾವಣಾ ಆಯೋಗ ಸಿದ್ಧವಿದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಶೀಲನಾ ಪ್ರಕ್ರಿಯೆ ಮತ್ತು ಅನುಸರಿಸಲಾಗುತ್ತಿರುವ ಸುರಕ್ಷತಾ ಕ್ರಮಗಳನ್ನು ಉಲ್ಲೇಖಿಸುತ್ತಾ, “ಒಬ್ಬ ಮತದಾರನ ಹೆಸರನ್ನು ಕೂಡ ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
14,000 ಮಂದಿ ಬಿಎಲ್‌ಒಗಳನ್ನು ನಿಯೋಜಿಸಿರುವುದರಿಂದ, ನೋಟಿಸ್‌ಗಳಿಗೆ ಪ್ರತಿಕ್ರಿಯಿಸುವಲ್ಲಿ ಅವರು ಮತದಾರರಿಗೆ ನೆರವಾಗಬಲ್ಲರು ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನೋಟಿಸ್‌ಗಳಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸಲು ಮತದಾರರಿಗೆ ಯಾವ ಮಾಹಿತಿ ಸಾಕಾಗುತ್ತದೆ ಎಂಬುದನ್ನು ಕೂಡ ಕೇಳಿದ್ದಾರೆ.
ನೋಟಿಸ್‌ಗಳಲ್ಲಿ ಉಲ್ಲೇಖಿಸಲಾದ 12 ದಾಖಲೆಗಳ ಪಟ್ಟಿ ಅಂತಿಮವಲ್ಲ (ಪೂರ್ಣ ಪ್ರಮಾಣದ್ದಲ್ಲ) ಎಂದು ನಾಯ್ಡು ನ್ಯಾಯಾಲಯಕ್ಕೆ ಹೇಳಿದ್ದಾರೆ.
ನ್ಯಾಯಾಲಯಕ್ಕೆ ತೋರಿಸಲಾದ ನೋಟಿಸ್‌ಗಳ ಮಾದರಿಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ, ಪ್ರತಿಯೊಂದು ನೋಟಿಸ್‌ನಲ್ಲೂ ಕಾರಣಗಳನ್ನು ನಮೂದಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತದಾರರಿಗೆ ಬಿಎಲ್‌ಒಗಳು ನೆರವಾಗಬೇಕು ಎಂದು ಹೇಳಿದ ಅವರು, 2002ರ ಹಳೆಯ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಸಂಬಂಧಿತ ಹೆಸರನ್ನು ಗುರುತಿಸುವುದೇ ಸಾಕಾಗಬಹುದು ಎಂದು ಸೂಚಿಸಿದ್ದಾರೆ.
ಆದರೆ, ಈಗಾಗಲೇ ಎನ್ಯುಮರೇಷನ್ ಫಾರಂ ಸಲ್ಲಿಸಿ, ವಯಸ್ಸು ಹಾಗೂ ವಾಸಸ್ಥಳದ ದಾಖಲೆಗಳನ್ನು ಒದಗಿಸಿರುವ ವ್ಯಕ್ತಿಯೊಬ್ಬರು ಹೆಚ್ಚಿನ ದಾಖಲೆಗಳನ್ನು ಏಕೆ ನೀಡಬೇಕೆಂದು ಭೂಷಣ್ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿರುವ ಹೆಚ್ಚಿನ ಸಂಖ್ಯೆಯ ವಲಸಿಗ ಜನಸಂಖ್ಯೆಯಿಂದಾಗಿ ಅಲ್ಲಿನ ಪರಿಸ್ಥಿತಿ ವಿಶಿಷ್ಟವಾಗಿರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
“ದೆಹಲಿಯಲ್ಲಿ ಸಮಸ್ಯೆ ವಿಭಿನ್ನವಾಗಿರುತ್ತದೆ. ಇಲ್ಲಿನ ದೊಡ್ಡ ಜನಸಂಖ್ಯೆಯು ಮೂಲ ದೆಹಲಿಗರದ್ದಾಗಿದೆ. ಆದರೆ ನನ್ನ ಸಹೋದರ, ನನ್ನ ಸಹೋದರಿಯಂತಹ ವ್ಯಕ್ತಿಗಳು… ನಾವು ಇಲ್ಲಿಗೆ ಬರುತ್ತೇವೆ… ನಾವು ಇಲ್ಲಿ ವಲಸೆ ಕಾರ್ಮಿಕರಾಗಿದ್ದೇವೆ. ನಾನು ಹಿಂದೆ ಚಂಡೀಗಢದಲ್ಲಿದ್ದೆ, ಈಗ ದೆಹಲಿಯಲ್ಲಿದ್ದೇನೆ ಎಂದು ಹೇಳಬೇಕಾಗುತ್ತದೆ. ಇದು ಮತದಾನದ ದುಪ್ಪಟ್ಟು ಪ್ರಕ್ರಿಯೆಯನ್ನು ತಡೆಯಲು ಸಹಾಯ ಮಾಡುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮತ್ತೊಂದು ಪ್ರಾಯೋಗಿಕ ಕಳವಳವನ್ನು ಎತ್ತಿ ತೋರಿಸುತ್ತಾ, ದೆಹಲಿಯಲ್ಲಿ ಬಹುಮಹಡಿ ಕಟ್ಟಡಗಳಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLOs) ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆಯು ಹೆಚ್ಚು ಕಷ್ಟಕರವಾಗಿದ್ದಕ್ಕೆ ಹೋಲಿಸಿದರೆ, ದೆಹಲಿಯ ವಿಷಯದಲ್ಲಿ ಅದು ಬಹಳ ಸುಲಭವಾದ ಕೆಲಸವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಆಯೋಗವು ಶಿಬಿರಗಳು ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮತದಾರರಿಗೆ ನೆರವಾಗಲು ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ನಾಯ್ಡು ಹೇಳಿದ್ದಾರೆ.
ಮತದಾರರು ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ವಾರ್ಡ್ ಕಚೇರಿಗಳಲ್ಲಿ ಬಿಎಲ್‌ಒಗಳನ್ನು ಲಭ್ಯವಾಗುವಂತೆ ಮಾಡಬಹುದೆಂದು ನ್ಯಾಯಮೂರ್ತಿ ಬಾಗ್ಚಿ ಸಲಹೆ ನೀಡಿದ್ದು, ಅಂತಹ ವ್ಯವಸ್ಥೆಗಳನ್ನು ಈಗಾಗಲೇ ಮಾಡಲಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ.
ಆದಾಗ್ಯೂ, ಕೆಲವು ನೋಟಿಸ್‌ಗಳಲ್ಲಿ ಅಧಿಕಾರಿ ಎಲ್ಲಿದ್ದಾರೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸದೆ, ಕೇವಲ ಮತದಾರರು ಅಧಿಕಾರಿಯನ್ನು ಭೇಟಿ ಮಾಡಬಹುದು ಎಂದು ಮಾತ್ರ ನಮೂದಿಸಲಾಗಿದೆ ಎಂದು ಕಪಿಲ್ ಸಿಬಲ್ ಬೆಟ್ಟು ಮಾಡಿದ್ದಾರೆ.
ಮತದಾರರಲ್ಲಿ ವಿಶ್ವಾಸ ಮೂಡಿಸಲು ಚುನಾವಣಾ ಅಧಿಕಾರಿಗಳು ಕೆಲವು ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಲು ಸಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ಮತ್ತಷ್ಟು ವಾದಿಸಿದ್ದು, ಅದಕ್ಕಾಗಿ ಅವರು ಭಾಗದ ಸಂಖ್ಯೆ (part number) ಮತ್ತು ಕ್ಷೇತ್ರವನ್ನು (constituency) ನಮೂದಿಸಬೇಕಾಗುತ್ತದೆ; ಆದರೆ ಈ ವಿವರಗಳು ಅನೇಕ ಸಾಮಾನ್ಯ ಮತದಾರರಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
ಈ ವಿಷಯವನ್ನು ನೋಟಿಸ್‌ಗಳ ಮೂಲಕವೇ ಬಗೆಹರಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದು, ನೋಟಿಸ್‌ಗಳ ಮೂಲಕ ಮತದಾರರಿಗೆ ಒದಗಿಸಲಾಗುತ್ತಿರುವ ಮಾಹಿತಿಯ ಸಮರ್ಪಕತೆಯ ಬಗ್ಗೆಯೂ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಅನೇಕ ಬಡ ಮತ್ತು ಸಾಮಾನ್ಯ ನಾಗರಿಕರ ಬಳಿ ಇರುವ ಏಕೈಕ ದಾಖಲೆ ಆಧಾರ್ ಆಗಿದೆ ಎಂದು ಪ್ರತಿಪಾದಿಸಿದ ಭೂಷಣ್, ಅದರಲ್ಲಿ ಹೆಸರು, ವಯಸ್ಸು ಮತ್ತು ವಿಳಾಸಕ್ಕೆ ಸಂಬಂಧಿಸಿದ ವಿವರಗಳಿರುವುದರಿಂದ ಮತದಾರರಾಗಿ ನೋಂದಾಯಿಸಿಕೊಳ್ಳಲು ಅದು ಸಾಕಾಗಬೇಕು ಎಂದು ವಾದಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಮತದಾರರನ್ನು “ಸ್ಥಳಾಂತರಗೊಂಡವರು” ಎಂದು ವರ್ಗೀಕರಿಸಲಾಗಿದೆ ಮತ್ತು ಅಂತಹ ವ್ಯಕ್ತಿಗಳು ಎನ್ಯುಮರೇಷನ್ ನಮೂನೆಗಳನ್ನು ಭರ್ತಿ ಮಾಡದಂತೆ ತಡೆಯಲಾಗುತ್ತಿದೆ; ಬದಲಾಗಿ, ತಾವು ಬೇರೆಡೆ ಮತ ಚಲಾಯಿಸಿಲ್ಲ ಎಂಬ ಘೋಷಣೆಯನ್ನು ಒಳಗೊಂಡಿರುವ ಮತ್ತೊಂದು ನಮೂನೆಯನ್ನು ಭರ್ತಿ ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಭೂಷಣ್ ಆರೋಪಿಸಿದ್ದಾರೆ.
ವಿಚಾರಣೆಯ ಅಂತ್ಯದಲ್ಲಿ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕರಣಗಳಲ್ಲಿ ನ್ಯಾಯಾಲಯವು ಹೊರಡಿಸಿದ್ದ ಮಧ್ಯಂತರ ಆದೇಶಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸ್ತಾಪಿಸಿದ್ದು, ಆ ನಿರ್ದೇಶನಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆ ಮಧ್ಯಂತರ ನಿರ್ದೇಶನಗಳು, ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿಗಳ ಹೆಸರುಗಳನ್ನು ಅದಕ್ಕೆ ಕಾರಣಗಳೊಂದಿಗೆ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದ್ದವು.
ನ್ಯಾಯಾಲಯವು ಅರ್ಜಿಯ ಸಂಬಂಧ ನೋಟಿಸ್ ಜಾರಿಗೊಳಿಸಿದ್ದು, ಈ ವಿಷಯದಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸುವ ಮೊದಲ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.


