‘ವಂದೇ ಮಾತರಂ’ ದೇಶದ ರಾಷ್ಟ್ರೀಯ ಗೀತೆಯಾಗಿ (National Song) ಮುಂದುವರಿಯಲಿದೆ, ಆದರೆ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ನೈಜ ಧಾರ್ಮಿಕ ಆಕ್ಷೇಪಣೆ ಹೊಂದಿರುವ ಯಾವುದೇ ವ್ಯಕ್ತಿಯು ಅದರ ಕೆಲವು ಚರಣಗಳನ್ನು ಹಾಡದೇ ಇದ್ದರೆ, ಅವರ ವಿರುದ್ಧ ಯಾವುದೇ ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಹಾಗೂ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಗೆ ತಂದ ತಿದ್ದುಪಡಿಯನ್ನು ಪ್ರಶ್ನಿಸಿ ಪ್ರಸಿದ್ಧ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಅರ್ಜಿಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್, ಗೀತೆಯ ಆರು ಚರಣಗಳ ಪೈಕಿ ನಾಲ್ಕು ಚರಣಗಳು ಹಿಂದು ದೇವತೆಗಳ ಆರಾಧನೆಯನ್ನು ಒಳಗೊಂಡಿವೆ. ಇವುಗಳನ್ನು ಎಲ್ಲರ ಮೇಲೆಯೂ ಬಲವಂತವಾಗಿ ಹೇರುವುದು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ. ಸರ್ಕಾರವು ಯಾವುದೇ ಜಾಗೃತಿ ಅಥವಾ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೆ ಆತುರದಲ್ಲಿ ಈ ನಿಯಮ ತಂದಿದೆ. ಹೀಗೆ ಅಸ್ಪಷ್ಟ ನಿಯಮಗಳ ಮೇಲೆ ಜನರಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ, “ವಂದೇ ಮಾತರಂ ದೇಶದ ರಾಷ್ಟ್ರೀಯ ಗೀತೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಒಬ್ಬ ವ್ಯಕ್ತಿ ಎಷ್ಟು ಚರಣಗಳನ್ನು ಹಾಡಬೇಕು ಎಂಬುದನ್ನು ಅವರೇ ನಿರ್ಧರಿಸಬಹುದು, ಇದನ್ನು ಹಾಡದಿದ್ದಕ್ಕೆ ಶಿಕ್ಷೆ ವಿಧಿಸಲು ಬರುವುದಿಲ್ಲ” ಎಂದರು. ಐತಿಹಾಸಿಕ ‘ಬಿಜೋಯ್ ಇಮ್ಯಾನುಯೆಲ್’ ತೀರ್ಪನ್ನು ನೆನಪಿಸಿದ ಅವರು, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಧಕ್ಕೆಯಾದಾಗ ಕಾನೂನಿನಡಿ ಯಾರನ್ನೂ ಅಪರಾಧಿ ಎನ್ನಲಾಗುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುವಾಗ “ಕಾನೂನು ರಚನೆಯು ನಕ್ಸಲೈಟ್‌ಗಳ ಇಷ್ಟದಂತೆ ನಡೆಯಬಾರದು” ಎಂದು ಹೇಳಿದ್ದು ವಕೀಲರ ನಡುವೆ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ನಂತರ ಮೆಹ್ತಾ ಅವರು, ಕಾನೂನು ಪ್ರಕ್ರಿಯೆಯು ಸಾಂವಿಧಾನಿಕವಾಗಿರಬೇಕು ಎಂಬುದಷ್ಟೇ ತಮ್ಮ ಉದ್ದೇಶವಾಗಿತ್ತು ಎಂದು ಸ್ಪಷ್ಟನೆ ನೀಡಿದರು. ಈ ಮಾತನ್ನು ನ್ಯಾಯಾಲಯದ ದಾಖಲೆಗೆ ತೆಗೆದುಕೊಳ್ಳದ ಪೀಠವು, ಭಯೋತ್ಪಾದನೆ ಆರೋಪಿಗಳಿಗೂ ಸಂವಿಧಾನದ ಅಡಿಯಲ್ಲೇ ವಿಚಾರಣೆ ನಡೆಯುತ್ತದೆ ಎಂದು ನೆನಪಿಸಿತು.
ಅಂತಿಮವಾಗಿ, ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆ ಎಂದು ಘೋಷಿಸಿರುವುದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದ ಪೀಠವು, ಗೀತೆ ಹಾಡದಿದ್ದಾಗ ವಿಧಿಸಲಾಗುವ ಶಿಕ್ಷಾರ್ಹ ಕ್ರಮಗಳ ಕಾನೂನು ಸಿಂಧುತ್ವವನ್ನು ಪರಿಶೀಲಿಸುವುದಾಗಿ ತಿಳಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.


