ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆ ಹಿಂದೂ ಸೇನಾ ಆಗ್ರಹಿಸಿದೆ.
ಸೋಮವಾರ (ಸೆ. 21) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಹಿಂದೂ ಸೇನಾ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ, ಈ ವಿಷಯವು ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ.
ಮಾಜಿ ಉಪರಾಷ್ಟ್ರಪತಿಯವರು ತಮ್ಮ ಅಧಿಕಾರಾವಧಿಯಲ್ಲಿ ಮತ್ತು ನಂತರವೂ ಸತತವಾಗಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಹೇಳಿಕೆಗಳು ಸೇರಿದಂತೆ ಸಾರ್ವಜನಿಕ ಚರ್ಚೆಗಳ ಬೆಳಕಿನಲ್ಲಿ, ಅನ್ಸಾರಿ ಅವರ ಅಧಿಕಾರಾವಧಿಯಲ್ಲಿ ಸಂವೇದನಾಶೀಲ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ. ಪಾಕಿಸ್ತಾನದ ಗೂಢಚಾರಿ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಆಶ್ರಯ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ” ಎಂದು ಗುಪ್ತಾ ತಿಳಿಸಿದ್ದಾರೆ.
ಅನ್ಸಾರಿ ಅವರು ಇರಾನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ಬಗ್ಗೆ ‘ರಾ’ ಮಾಜಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು ಎಂದು ಹಿಂದೂ ಸೇನಾ ಸಂಸ್ಥಾಪಕರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 12 ರ ಶನಿವಾರದಂದು ಅನ್ಸಾರಿ ಮಾಡಿದ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಗುಪ್ತಾ, ಮಾಜಿ ಉಪರಾಷ್ಟ್ರಪತಿಗಳು “ಬಹುಸಂಖ್ಯಾತ ಹಿಂದೂ ಸಮುದಾಯ” ಮತ್ತು “ಬಲಪಂಥೀಯ ಸಿದ್ಧಾಂತವನ್ನು” ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು. ಹಿಂದೂ ರಾಷ್ಟ್ರೀಯತಾವಾದಿ ಚಿಂತನೆಯನ್ನು ದೇಶಕ್ಕೆ ಬೆದರಿಕೆ ಎಂದು ಬಿಂಬಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಕಳಂಕ ತರಲು ಅವರು ಯತ್ನಿಸಿದ್ದಾರೆ ಎಂದು ಗುಪ್ತಾ ಆರೋಪಿಸಿದರು.
ತಕ್ಷಣವೇ ಪದ್ಮಶ್ರೀ ಹಿಂಪಡೆಯುವಂತೆ ಆಗ್ರಹ
ಇಂತಹ ಪಕ್ಷಪಾತದ ಮತ್ತು ದಾರಿತಪ್ಪಿಸುವ ಮಾತುಗಳು ದೇಶದ ಸೌಹಾರ್ದತೆಗೆ ಧಕ್ಕೆ ತರಬಹುದು ಎಂದು ಹೇಳಿದ ಗುಪ್ತಾ, ದೇಶಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡ ಗಂಭೀರ ಆರೋಪಗಳನ್ನು” ಎದುರಿಸುತ್ತಿರುವ ಮತ್ತು “ಹಿಂದೂ ವಿರೋಧಿ ಪಕ್ಷಪಾತ” ಪ್ರದರ್ಶಿಸುವ ವ್ಯಕ್ತಿಯನ್ನು ಗೌರವಿಸುವುದನ್ನು ಮುಂದುವರಿಸುವುದು ಪ್ರಶಸ್ತಿಯ ಪವಿತ್ರತೆಗೆ ಧಕ್ಕೆ ತರುತ್ತದೆ ಮತ್ತು ಭಾರತದ ಸ್ವಾಭಿಮಾನಕ್ಕೆ ಪೆಟ್ಟು ನೀಡುತ್ತದೆ ಎಂದು ವಾದಿಸಿದ್ದಾರೆ.
ತಕ್ಷಣವೇ ಈ ಪ್ರಶಸ್ತಿಯನ್ನು ಹಿಂಪಡೆಯಬೇಕು, ಈ ಎಲ್ಲಾ ಆರೋಪಗಳ ಕುರಿತು ಸರ್ಕಾರವು ಉನ್ನತ ಮಟ್ಟದ ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಹಮೀದ್ ಅನ್ಸಾರಿ ಹೇಳಿದ್ದೇನು?
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅನ್ಸಾರಿ ಅವರು, “ಭಾರತಕ್ಕೆ ನಿಜವಾದ ಅಪಾಯ ಕಮ್ಯುನಿಸಂ ಅಲ್ಲ, ಬದಲಿಗೆ ಹಿಂದೂ ಬಲಪಂಥೀಯ ಕೋಮುವಾದ” ಎಂಬ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ನೆಹರೂ ನೀಡಿರುವ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಜಗತ್ ಸಿಂಗ್ ಗುಂಡೇವಿಯಾ ದಾಖಲಿಸಿದ ಈ ಹೇಳಿಕೆಗಳನ್ನು, ಸಂವಿಧಾನ ತಜ್ಞ ಎ.ಜಿ. ನೂರಾನಿ ಅವರು 2019 ರ ತಮ್ಮ ‘ದಿ ಆರ್‌ಎಸ್‌ಎಸ್: ಎ ಮೆನೇಸ್ ಟು ಇಂಡಿಯಾ’ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಮಾಜಿ ಉಪರಾಷ್ಟ್ರಪತಿಗಳು ಬೆಟ್ಟು ಮಾಡಿದ್ದರು.
ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೂಡ ಅನ್ಸಾರಿ ವಿರುದ್ಧ ಕಿಡಿಕಾರಿದ್ದು, ಅವರ ಹೇಳಿಕೆಗಳು ವಿರೋಧ ಪಕ್ಷದ “ಮುಸ್ಲಿಂ ಲೀಗ್, ಮಾವೋವಾದಿ” ಮನಸ್ಥಿತಿಯನ್ನು ಬಯಲು ಮಾಡುತ್ತವೆ ಎಂದು ಆರೋಪಿಸಿದೆ.


