Homeಕರ್ನಾಟಕ‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರ, ಕಂಪನಿಗಳಲ್ಲ’: ರಾಜ್ಯ ಸರ್ಕಾರದ ವಿರುದ್ಧ ಶ್ರೀಪಾದ್ ಭಟ್ ವಾಗ್ದಾಳಿ 

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರ, ಕಂಪನಿಗಳಲ್ಲ’: ರಾಜ್ಯ ಸರ್ಕಾರದ ವಿರುದ್ಧ ಶ್ರೀಪಾದ್ ಭಟ್ ವಾಗ್ದಾಳಿ 

- Advertisement -
- Advertisement -

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರವೇ ಹೊರತು ಅಂಬಾನಿ, ಅದಾನಿ ಅಥವಾ ಟೊಯೋಟಾ ಕಂಪನಿಗಳಲ್ಲ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡಲು ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿಲ್ಲ. ಶಿಕ್ಷಕರು, ಶೌಚಾಲಯ, ಪಠ್ಯಪುಸ್ತಕ ಸೇರಿದಂತೆ ಸರ್ಕಾರಿ ಶಾಲೆಗಳ ಎಲ್ಲ ಮೂಲಭೂತ ಅಗತ್ಯಗಳನ್ನು ಈಡೇರಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು. ನಮ್ಮ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಸಾಮಾಜಿಕ ಚಿಂತಕ, ಹೋರಾಟಗಾರ ಶ್ರೀಪಾದ್ ಭಟ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಸಮಗ್ರ ಜಾರಿಗೆ ಆಗ್ರಹಿಸಿ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಗೆ ದತ್ತು ನೀಡುವ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ (ನವೆಂಬರ್ 26) ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಡುತ್ತಿರುವ ತಾಯಂದಿರು, ಶಿಕ್ಷಣ ಹಕ್ಕುಗಳ ಹೋರಾಟಗಾರರು ಮತ್ತು ಸಾರ್ವಜನಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಾಮಾಜಿಕ ಚಿಂತಕ ಶ್ರೀಪಾದ್ ಭಟ್, ರಾಜ್ಯ ಸರ್ಕಾರದ ಶಿಕ್ಷಣ ನೀತಿ, ಸಚಿವರ ವರ್ತನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಪ್ರಶ್ನಿಸಿದರು.

ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ ಯಾವುದೇ ವೈಯಕ್ತಿಕ ಲಾಭ, ವೇತನ ಅಥವಾ ಇತರ ಪ್ರತಿಫಲಗಳನ್ನು ಅಪೇಕ್ಷಿಸದೆ ಹೋರಾಟ ನಡೆಸುತ್ತಿರುವ ಜನರ ತ್ಯಾಗವನ್ನು ಸ್ಮರಿಸಿದ ಅವರು, ಈ ಹೋರಾಟದಲ್ಲಿ ಭಾಗವಹಿಸಿರುವ ತಾಯಂದಿರನ್ನು ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳ ಪ್ರತಿರೂಪವಾಗಿ ಬಣ್ಣಿಸಿದರು.

“ಇಲ್ಲಿ ನೀವು ಸುಮ್ಮನೆ ಕುಳಿತಿಲ್ಲ. ನಿಮ್ಮ ಮುಖಗಳಲ್ಲಿ ನಮಗೆ ಸಾವಿತ್ರಿಬಾಯಿ ಫುಲೆ ಕಾಣಿಸುತ್ತಿದ್ದಾರೆ, ಫಾತಿಮಾ ಶೇಖ್ ಕಾಣಿಸುತ್ತಿದ್ದಾರೆ, ಅಂಬೇಡ್ಕರ್ ಕಾಣಿಸುತ್ತಿದ್ದಾರೆ. ಸುಮಾರು 180 ವರ್ಷಗಳ ಹಿಂದೆ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಶಿಕ್ಷಣಕ್ಕಾಗಿ ನಡೆಸಿದ ಹೋರಾಟದ ಮುಂದುವರಿಕೆಯಾಗಿ ಇಂದು ನೀವು ಇಲ್ಲಿ ಕುಳಿತಿದ್ದೀರಿ. ಸಂವಿಧಾನ ಇಲ್ಲದಿದ್ದರೆ ಇಂದು ನಮ್ಮ 41 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಉಳಿಯುತ್ತಿರಲಿಲ್ಲ. ಫುಲೆ, ಫಾತಿಮಾ ಶೇಖ್, ಅಂಬೇಡ್ಕರ್ ಮತ್ತು ಸಂವಿಧಾನದ ಪ್ರತಿರೂಪವಾಗಿ ನೀವೆಲ್ಲರೂ ಇಲ್ಲಿಗೆ ಬಂದಿದ್ದೀರಿ” ಎಂದು ಅವರು ಹೋರಾಟಗಾರರನ್ನು ಅಭಿನಂದಿಸಿದರು.

ಈ ಹೋರಾಟ ಯಾರೊಬ್ಬರ ವೈಯಕ್ತಿಕ ಅಥವಾ ಕುಟುಂಬದ ಹಿತಾಸಕ್ತಿಗಾಗಿ ನಡೆಯುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿದೆ ಎಂದು ಹೇಳಿದ ಶ್ರೀಪಾದ್ ಭಟ್, ರಾಜ್ಯದ ಜನತೆ ಈ ಹೋರಾಟದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

“ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 38 ಲಕ್ಷ ವಿದ್ಯಾರ್ಥಿಗಳ ಪರವಾಗಿ ನೀವು ಹೋರಾಟ ಮಾಡುತ್ತಿದ್ದೀರಿ. ಆ ಮಕ್ಕಳ ಪೋಷಕರಿಗೂ ನಿಮ್ಮ ತ್ಯಾಗ ಅರ್ಥವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಸುಮಾರು 48 ಲಕ್ಷ ಮಂದಿ ಇದ್ದಾರೆ. ಅವರು ತಮ್ಮ ಊರುಗಳನ್ನು ಬಿಟ್ಟು, ನೂರಾರು ಕಿಲೋಮೀಟರ್ ದೂರದಿಂದ, ಕೆಲವರು 200ರಿಂದ 300 ಕಿಲೋಮೀಟರ್ ಪ್ರಯಾಣಿಸಿ ಹಗಲು-ರಾತ್ರಿ ಇಲ್ಲಿ ಬಂದು ಕುಳಿತಿರುವ ತಾಯಂದಿರ ಹೋರಾಟವನ್ನು ಆತ್ಮಸಾಕ್ಷಿಯಿಂದ ನೋಡಬೇಕು. ಈ ಹೋರಾಟಕ್ಕೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದವರಿಗೇ ಬೀದಿಯಲ್ಲಿ ಹೋರಾಟ ಮಾಡುವ ಸ್ಥಿತಿ

2023ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತವನ್ನು ವಿರೋಧಿಸಿ ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದರು. ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಶಿಕ್ಷಣದ ಕೋಮುವಾದೀಕರಣ, ಜಾತಿವಾದ, ಲಂಚ ಮತ್ತು ಭ್ರಷ್ಟಾಚಾರದಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದಿನ ಸರ್ಕಾರದ ವಿರುದ್ಧ ಜನರು ಮತ ಚಲಾಯಿಸಿದ್ದರು. ಅದರಲ್ಲೂ ಮಹಿಳೆಯರು, ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳು ಒಗ್ಗಟ್ಟಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು ಎಂದು ಶ್ರೀಪಾದ್ ಭಟ್ ನೆನಪಿಸಿದರು.

“ಕಾಂಗ್ರೆಸ್‌ಗೆ 135 ಶಾಸಕರ ಸ್ಥಾನಗಳು ಬರಲು ಯಾರು ಕಾರಣ? ಮಹಿಳೆಯರು, ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ಜನರು ಒಗ್ಗಟ್ಟಾಗಿ ಮತ ಹಾಕಿದ್ದರಿಂದಲೇ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಯಾಕೆ ಮತ ಹಾಕಿದರು? ನಮ್ಮ ಮಕ್ಕಳಿಗೆ ಒಳ್ಳೆಯ ಸರ್ಕಾರಿ ಶಾಲೆಗಳು ಸಿಗುತ್ತವೆ, ಶಾಲೆಗಳಲ್ಲಿ ಶಿಕ್ಷಕರಿರುತ್ತಾರೆ, ಪಠ್ಯಪುಸ್ತಕಗಳು ಸಿಗುತ್ತವೆ, ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ನಮ್ಮ ಮಕ್ಕಳೂ ಓದಿ ಶಿಕ್ಷಕರು, ಎಂಜಿನಿಯರ್‌ಗಳು, ವೈದ್ಯರಾಗುತ್ತಾರೆ ಎಂಬ ಕನಸಿನಿಂದ ಮತ ಹಾಕಿದ್ದರು. ಆದರೆ ಇಂದು ಏನಾಗಿದೆ? ಯಾರ ಮತಗಳಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆಯೋ, ಅದೇ ಜನರನ್ನು ಸರ್ಕಾರ ಬೀದಿಗೆ ತಂದು ನಿಲ್ಲಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ತನ್ನನ್ನು ಅಧಿಕಾರಕ್ಕೆ ತಂದ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಿದ್ಧವಿಲ್ಲ. ಜನರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಅವರನ್ನು ನಿರ್ಲಕ್ಷಿಸುತ್ತಿದೆ. ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇವುಗಳು ಪ್ರಜಾಪ್ರಭುತ್ವದ ಮೂಲಭೂತ ಆಧಾರಗಳು. ಇವುಗಳನ್ನು ಬಲಪಡಿಸದೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಶಿಕ್ಷಣ ಸಚಿವರ ವರ್ತನೆಗೆ ತೀವ್ರ ಆಕ್ಷೇಪ

ಇತ್ತೀಚೆಗೆ ಕೊಪ್ಪಳ ಭಾಗದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (ಎಸ್‌ಡಿಎಂಸಿ) ಸದಸ್ಯರು ಶಾಲೆಗಳಲ್ಲಿ ಸಮವಸ್ತ್ರ ವಿತರಣೆ ವಿಳಂಬವಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಾಗ ಸಚಿವರು ಅವರ ಮೇಲೆ ಕೂಗಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಶ್ರೀಪಾದ್ ಭಟ್ ಪ್ರಸ್ತಾಪಿಸಿದರು.

ಶಾಲೆಗಳಲ್ಲಿ ಸಮವಸ್ತ್ರಗಳು ಸಮಯಕ್ಕೆ ಸರಿಯಾಗಿ ತಲುಪಿಲ್ಲ, ಇತರ ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂಬ ಸಮಸ್ಯೆಗಳನ್ನು ತಿಳಿಸಲು ಬಂದಿರುವವರೊಂದಿಗೆ ಸಚಿವರು ತಾಳ್ಮೆಯಿಂದ ಮಾತನಾಡಬೇಕಿತ್ತು. ಆದರೆ ಅವರ ಮೇಲೆ ದುರಹಂಕಾರದಿಂದ ಕೂಗಾಡಿರುವುದು ಖಂಡನೀಯ ಎಂದು ಹೇಳಿದರು.

“ಶಿಕ್ಷಕರನ್ನು ಕೊಡಲು ಸಾಧ್ಯವಾಗುತ್ತಿಲ್ಲವೇ, ಸಮವಸ್ತ್ರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲವೇ, ಪಠ್ಯಪುಸ್ತಕಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲವೇ ಎಂಬುದು ಬೇರೆ ಚರ್ಚೆ. ಆದರೆ ಈ ಸಮಸ್ಯೆಗಳನ್ನು ಕೇಳಿಕೊಂಡು ಬಂದಿರುವ ಜನರ ಮೇಲೆ ನೀವು ದುರಹಂಕಾರದಿಂದ ಮಾತನಾಡುವುದೇನು? ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿರುವವರೊಂದಿಗೆ ಕನಿಷ್ಠ ವಿನಯದಿಂದಲಾದರೂ ವರ್ತಿಸಬೇಕಲ್ಲವೇ? ಇಂತಹ ಶಿಕ್ಷಣ ಸಚಿವರನ್ನು ನಾವು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದೇವೆ?” ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಧರಣಿಯಲ್ಲಿ ಭಾಗವಹಿಸಿದ್ದವರೊಂದಿಗೆ ಶಿಕ್ಷಣ ಸಚಿವರ ವಿರುದ್ಧ ಧಿಕ್ಕಾರ ಕೂಗಿದ ಅವರು, ಜನರ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವೂ ಇಲ್ಲದ ಅಧಿಕಾರದ ವರ್ತನೆಯನ್ನು ಖಂಡಿಸಿದರು.

ಅಧಿಕಾರಿಗಳೊಂದಿಗೆ ಮಾತುಕತೆಗೂ ಅರ್ಥವಿಲ್ಲದ ಸ್ಥಿತಿ

ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹೋರಾಟಗಾರರು ಅಪರ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದ ಸಂದರ್ಭದಲ್ಲಿನ ಅನುಭವವನ್ನೂ ಶ್ರೀಪಾದ್ ಭಟ್ ವಿವರಿಸಿದರು. ಸಾವಿರಾರು ತಾಯಂದಿರು ತಮ್ಮ ದಿನನಿತ್ಯದ ಕೆಲಸಗಳನ್ನು ಬದಿಗಿಟ್ಟು, ಪ್ರಯಾಣದ ಖರ್ಚು ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿಕೊಂಡು ಹೋರಾಟಕ್ಕೆ ಬಂದಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದರೂ ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.

“ದಿನನಿತ್ಯದ ಬದುಕಿನಲ್ಲಿ ನೂರಾರು ರೂಪಾಯಿಗಳಿಗಾಗಿ ಕಷ್ಟಪಡುವ ತಾಯಂದಿರು ಇಲ್ಲಿಗೆ ಬಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಎರಡು-ಮೂರು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಈ ಜನರ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಮುಂದಕ್ಕೆ ಹೋಗುವುದಿಲ್ಲ ಎಂದು ಹೇಳಿದಾಗಲೂ ಅಧಿಕಾರಿಗಳು ದುರಹಂಕಾರದಿಂದ ಉತ್ತರಿಸುತ್ತಾರೆ. ಎಲ್ಲವನ್ನೂ ಕೊಟ್ಟಿದ್ದೇವೆ, ಎಲ್ಲವನ್ನೂ ಮಾಡಿದ್ದೇವೆ ಎಂದು ನಮ್ಮ ಕಣ್ಣೆದುರೇ ಹೇಳುತ್ತಾರೆ” ಎಂದು ಅವರು ಆಕ್ಷೇಪಿಸಿದರು.

ಶಾಲೆಗಳಲ್ಲಿ ಶಿಕ್ಷಕರಿಲ್ಲ ಎಂದು ಹೇಳಿದರೆ ಇಷ್ಟು ಶಿಕ್ಷಕರನ್ನು ನೇಮಿಸಿದ್ದೇವೆ ಎಂದು ದಾಖಲೆ ತೋರಿಸುತ್ತಾರೆ. ಶೌಚಾಲಯಗಳಿಲ್ಲ ಎಂದು ಹೇಳಿದರೆ ಇಷ್ಟು ಶೌಚಾಲಯಗಳನ್ನು ನಿರ್ಮಿಸಿದ್ದೇವೆ ಎನ್ನುತ್ತಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಹಣ ನೀಡಿದ್ದೇವೆ ಎಂದು ದಾಖಲೆಗಳನ್ನು ಮುಂದಿಡುತ್ತಾರೆ. ಆದರೆ ನೆಲಮಟ್ಟದಲ್ಲಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳದೆ ಅಂಕಿ-ಅಂಶ ಮತ್ತು ದಾಖಲೆಗಳನ್ನು ಮುಂದಿಟ್ಟುಕೊಂಡು ಸಮಸ್ಯೆಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ಪ್ರತ್ಯೇಕವಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಆದ್ದರಿಂದ ಶಾಲಾ ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆಯು ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಅವರು ತಿಳಿಸಿದರು.

ಮೊದಲ ಬೇಡಿಕೆ: ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಜಾರಿ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಶೌಚಾಲಯ ನಿರ್ಮಾಣ, ಪಠ್ಯಪುಸ್ತಕ ವಿತರಣೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಸೇರಿದಂತೆ ಪ್ರತಿಯೊಂದು ಮೂಲಭೂತ ಸಮಸ್ಯೆಯನ್ನೂ ಪ್ರತ್ಯೇಕವಾಗಿ ಚರ್ಚಿಸುವ ಬದಲು, ಇವೆಲ್ಲವನ್ನೂ ಒಳಗೊಂಡಿರುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಎಂಬುದು ಹೋರಾಟಗಾರರ ಮೊದಲ ಬೇಡಿಕೆ ಎಂದು ಶ್ರೀಪಾದ್ ಭಟ್ ಸ್ಪಷ್ಟಪಡಿಸಿದರು.

“ನೀವು ಶಿಕ್ಷಕರನ್ನು ಕೊಡುತ್ತೀರೋ ಇಲ್ಲವೋ, ಶೌಚಾಲಯ ಕಟ್ಟಿಸುತ್ತೀರೋ ಇಲ್ಲವೋ, ಪುಸ್ತಕಗಳನ್ನು ನೀಡುತ್ತೀರೋ ಇಲ್ಲವೋ ಎಂದು ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ನಿಮ್ಮೊಂದಿಗೆ ಚರ್ಚಿಸುತ್ತಾ ಕೂರುವುದಕ್ಕೆ ನಮಗೆ ಸಮಯವಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಿ. ಅದೇ ನಮ್ಮ ಮೊದಲ ಬೇಡಿಕೆ” ಎಂದು ಹೇಳಿದರು.

ಆರ್‌ಟಿಇ ಕಾಯ್ದೆಯಡಿ ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ಲಭ್ಯತೆ ಮತ್ತು ಮಕ್ಕಳಿಗೆ ದೊರೆಯಬೇಕಾದ ಶಿಕ್ಷಣದ ಹಕ್ಕುಗಳನ್ನು ಖಚಿತಪಡಿಸಬೇಕು. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಶಾಲೆ ಲಭ್ಯವಿರಬೇಕು. ಐದರಿಂದ ಎಂಟನೇ ತರಗತಿಯ ಮಕ್ಕಳಿಗೆ ಮೂರು ಕಿಲೋಮೀಟರ್ ವ್ಯಾಪ್ತಿಯೊಳಗೆ ಶಾಲೆ ಇರಬೇಕು ಎಂಬ ಕಾಯ್ದೆಯ ನಿಬಂಧನೆಗಳನ್ನು ಅವರು ಉಲ್ಲೇಖಿಸಿದರು.

ಹತ್ತು ಮಕ್ಕಳಿರುವ ಶಾಲೆಯಾದರೂ ಅಲ್ಲಿನ ಮಕ್ಕಳಿಗೆ ಅಗತ್ಯ ಶಿಕ್ಷಕರನ್ನು ಒದಗಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಯನ್ನು ನೆಪವಾಗಿಟ್ಟುಕೊಂಡು ಶಾಲೆಗಳನ್ನು ನಿರ್ಲಕ್ಷಿಸುವಂತಿಲ್ಲ. ಮಕ್ಕಳಿಗೆ ಹತ್ತಿರದಲ್ಲೇ ಶಾಲೆ ದೊರೆಯಬೇಕು ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇರಬೇಕು. ಶಿಕ್ಷಣ ಹಕ್ಕು ಕಾಯ್ದೆಯ 31ರಿಂದ 34ನೇ ಸೆಕ್ಷನ್‌ಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅಂಶಗಳಿವೆ. ಆದರೆ ಮಕ್ಕಳ ಹಕ್ಕುಗಳು ನಿಜವಾಗಿಯೂ ರಕ್ಷಿಸಲ್ಪಡುತ್ತಿವೆಯೇ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಡಬೇಕಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ಹಕ್ಕು ಕಾಯ್ದೆ ಈಗಾಗಲೇ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಪ್ರಶ್ನಿಸುವುದನ್ನು ಟೀಕಿಸಿದ ಅವರು, ಕಾಯ್ದೆ ಕಾಗದದಲ್ಲಿ ಇರುವುದಕ್ಕೂ ಅದರ ಎಲ್ಲ ಅಂಶಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದಕ್ಕೂ ವ್ಯತ್ಯಾಸವಿದೆ. ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಮತ್ತು ಹಕ್ಕುಗಳು ವಾಸ್ತವದಲ್ಲಿ ಖಚಿತವಾಗಬೇಕು ಎಂದು ಒತ್ತಾಯಿಸಿದರು.

ಎರಡನೇ ಬೇಡಿಕೆ: ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವುದನ್ನು ನಿಲ್ಲಿಸಿ

ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಗೆ ದತ್ತು ನೀಡುವ ಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಹೋರಾಟಗಾರರ ಎರಡನೇ ಪ್ರಮುಖ ಬೇಡಿಕೆಯಾಗಿದೆ. ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಸರ್ಕಾರದ್ದೇ ಆಗಿರಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಶಾಲೆಗಳ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವುದು ಸರಿಯಲ್ಲ ಎಂದು ಶ್ರೀಪಾದ್ ಭಟ್ ವಾದಿಸಿದರು.

“ಸರ್ಕಾರಿ ಶಾಲೆಗಳನ್ನು ಸರ್ಕಾರವೇ ನಡೆಸಬೇಕು. ನಿಮ್ಮನ್ನು ಅಧಿಕಾರಕ್ಕೆ ಆಯ್ಕೆ ಮಾಡಿದ್ದು ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವುದಕ್ಕಾಗಿಯೇ? ಅಂಬಾನಿಗೆ, ಅದಾನಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವುದಕ್ಕಾಗಿಯೇ ಜನರು ನಿಮಗೆ ಮತ ಹಾಕಿದ್ದಾರೆಯೇ? ಇದನ್ನೇ ಅಧಿಕಾರಿಗಳು ಮಾಡಬೇಕಾದರೆ ಜನಪ್ರತಿನಿಧಿಗಳ ಅಗತ್ಯವೇನು?” ಎಂದು ಅವರು ಪ್ರಶ್ನಿಸಿದರು.

ಟೊಯೋಟಾ ಕಂಪನಿ ಹಣ ನೀಡಿದರೆ ಆ ಸರ್ಕಾರಿ ಶಾಲೆಗೆ ಟೊಯೋಟಾ ಹೆಸರಿಡುವುದಾಗಿ ಮುಖ್ಯಮಂತ್ರಿ ಹೇಳಿರುವುದನ್ನು ಪ್ರಸ್ತಾಪಿಸಿದ ಅವರು, ಇಂತಹ ಹೇಳಿಕೆಗಳು ಸರ್ಕಾರಿ ಶಾಲೆಗಳ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದರು.

ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣ ನೀಡುವ ಕಟ್ಟಡಗಳಲ್ಲ; ಅವು ಪ್ರತಿಯೊಂದು ಊರಿನ ಸಾರ್ವಜನಿಕ ಅಸ್ಮಿತೆಯ ಭಾಗವಾಗಿವೆ. ಹಿಂದಿನ ತಲೆಮಾರುಗಳು ತಾವು ಯಾವ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದ್ದೇವೆ ಎಂಬ ಹೆಮ್ಮೆಯನ್ನು ಹೊಂದಿವೆ. ಹೊಸಪೇಟೆ, ರಾಯಚೂರು, ಕೊಪ್ಪಳ, ಯಾದಗಿರಿ ಅಥವಾ ಶಹಾಬಾದ್‌ನ ಶಾಲೆಗಳಲ್ಲಿ ಓದಿದವರು ತಮ್ಮ ಊರಿನ ಹೆಸರಿನೊಂದಿಗೆ ಶಾಲೆಯನ್ನು ಗುರುತಿಸುತ್ತಾರೆ. ಆದರೆ ಖಾಸಗಿ ಕಂಪನಿಗಳಿಗೆ ಶಾಲೆಗಳನ್ನು ದತ್ತು ನೀಡುವ ನೀತಿ ಮುಂದುವರಿದರೆ ಮುಂದಿನ ತಲೆಮಾರು ತಮ್ಮ ಊರಿನ ಸರ್ಕಾರಿ ಶಾಲೆಯ ಬದಲು ಅದಾನಿ, ಅಂಬಾನಿ, ಟೊಯೋಟಾ ಅಥವಾ ಜಿಂದಾಲ್ ಹೆಸರಿನ ಶಾಲೆಯಲ್ಲಿ ಓದಿದ್ದೇವೆ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳು ಶಾಲೆಗಳಿಗೆ ಫ್ಯಾನ್, ಕುರ್ಚಿ ಅಥವಾ ಇತರ ಸೌಲಭ್ಯಗಳನ್ನು ದೇಣಿಗೆಯಾಗಿ ನೀಡುವುದಕ್ಕೂ ಶಾಲೆಯನ್ನೇ ದತ್ತು ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದು ಅವರು ವಿವರಿಸಿದರು. ಹಿಂದೆ ದಾನಿಗಳು ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದರು. ಅವುಗಳನ್ನು ನೀಡಿದವರ ಹೆಸರನ್ನು ವಸ್ತುಗಳ ಮೇಲೆ ಉಲ್ಲೇಖಿಸಲಾಗುತ್ತಿತ್ತು. ಆದರೆ ಅದನ್ನು ಶಾಲೆಯ ನಿರ್ವಹಣೆಯನ್ನೇ ವಹಿಸಿಕೊಡುವ ದತ್ತು ಯೋಜನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಈ ದತ್ತು ಪ್ರಕ್ರಿಯೆ ಹೊಸದಲ್ಲ, ಕಳೆದ 25 ವರ್ಷಗಳಿಂದಲೂ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “25 ವರ್ಷಗಳಿಂದ ನಡೆಯುತ್ತಿದೆ ಎಂಬ ಕಾರಣಕ್ಕೆ ಈಗಲೂ ಮುಂದುವರಿಯಬೇಕು ಎಂದೇನಿಲ್ಲ. ಹಿಂದೆ ದಾನಿಗಳು ಶಾಲೆಗಳಿಗೆ ವಸ್ತುಗಳನ್ನು ನೀಡುತ್ತಿದ್ದರು. ಅದಕ್ಕೂ ಈಗ ನಡೆಯುತ್ತಿರುವ ದತ್ತು ಪ್ರಕ್ರಿಯೆಗೂ ವ್ಯತ್ಯಾಸವಿದೆ. ಹಿಂದೆ ದೇಣಿಗೆ ನೀಡಿದವರು ಶಾಲೆಯ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿರಲಿಲ್ಲ” ಎಂದು ಹೇಳಿದರು.

ಮುಖ್ಯಮಂತ್ರಿಗಳು ಖಾಸಗಿ ಶಾಲೆಗಳ ಶಿಕ್ಷಕರು ಸರ್ಕಾರಿ ಶಾಲೆಗಳಿಗೆ ಬಂದು ಪಾಠ ಮಾಡಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿರುವುದನ್ನೂ ಅವರು ಪ್ರಶ್ನಿಸಿದರು. ಸರ್ಕಾರಿ ಶಾಲೆಗಳ ಶಿಕ್ಷಕರ ವ್ಯವಸ್ಥೆಯನ್ನು ಬಲಪಡಿಸುವ ಬದಲು ಖಾಸಗಿ ಶಾಲೆಗಳ ಶಿಕ್ಷಕರನ್ನು ಕರೆತರುವ ಪ್ರಸ್ತಾಪ ಏಕೆ ಎಂಬುದು ಸ್ಪಷ್ಟವಾಗಬೇಕು ಎಂದು ಆಕ್ಷೇಪಿಸಿದರು.

ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ತರಬೇತಿಗೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಕ್ಕೆ ನೀಡಿರುವ ಜವಾಬ್ದಾರಿಯನ್ನೂ ಅವರು ಉಲ್ಲೇಖಿಸಿದರು. ಆ ಭಾಗದ ಶಿಕ್ಷಕರ ತರಬೇತಿಗಾಗಿ ಇಡೀ ವಿಶ್ವವಿದ್ಯಾಲಯದ ವ್ಯವಸ್ಥೆಯನ್ನು ಬಳಸಿಕೊಳ್ಳುವ ರೀತಿಯಲ್ಲಿ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದ ಅವರು, ಇಂತಹ ಕ್ರಮಗಳು ಮುಂದುವರಿದು ಮುಂದೆ ಇಡೀ ರಾಜ್ಯದ ಸರ್ಕಾರಿ ಶಾಲೆಗಳನ್ನೇ ದತ್ತು ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ವಹಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟವು ಕೇವಲ ಕಟ್ಟಡಗಳು ಅಥವಾ ಸೌಲಭ್ಯಗಳ ಉಳಿವಿನ ಹೋರಾಟವಲ್ಲ; ಅದು ಬಡವರು, ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ಕುಟುಂಬಗಳ ಮಕ್ಕಳ ಶಿಕ್ಷಣದ ಹಕ್ಕಿನ ಹೋರಾಟವಾಗಿದೆ ಎಂಬುದು ಶ್ರೀಪಾದ್ ಭಟ್ ಅವರ ಭಾಷಣದ ಮುಖ್ಯ ಆಶಯವಾಗಿತ್ತು. ಸರ್ಕಾರದ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸದೆ, ಶಿಕ್ಷಣ ಹಕ್ಕು ಕಾಯ್ದೆಯ ಎಲ್ಲ ಅಂಶಗಳನ್ನು ಸಮಗ್ರವಾಗಿ ಜಾರಿಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂಬ ಒತ್ತಾಯವನ್ನು ಅವರು ಪುನರುಚ್ಚರಿಸಿದರು.

ಆರ್‌ಟಿಇ ಕಾಯ್ದೆಯ ಸಮಗ್ರ ಜಾರಿ ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವುದನ್ನು ನಿಲ್ಲಿಸುವುದು ಎಂಬ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ತಾಯಂದಿರು ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರರು ಭಾಗವಹಿಸಿದ್ದಾರೆ. ಈ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂಬುದು ಧರಣಿಯಲ್ಲಿ ವ್ಯಕ್ತವಾದ ಪ್ರಮುಖ ಆಗ್ರಹವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ ಮೂಲಭೂತ ಹಕ್ಕು, ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ : ನಿರಂಜನಾರಾಧ್ಯ

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ, ಅದು ನಮ್ಮ ಮೂಲಭೂತ ಹಕ್ಕು. ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ...

ಸೌರವ್ ದಾಸ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಬ್ರಿಟನ್‌ಗೆ ಪ್ರಯಾಣಿಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್...

ಉತ್ತರ ಪ್ರದೇಶ: ಸಂವಿಧಾನ ದಿನದಂದೇ ಸಂವಿಧಾನ ರಕ್ಷಾ ಮೆರವಣಿಗೆಗೆ ತಡೆ; ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ 

ಲಕ್ನೋ: ಉತ್ತರ ಪ್ರದೇಶದಲ್ಲಿ ಸಂವಿಧಾನ ರಕ್ಷಾ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಅನುಮತಿ ನಿರಾಕರಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೆರವಣಿಗೆಗೆ ಅನುಮತಿ ನೀಡದಿದ್ದರೂ ಪ್ರತಿಭಟನೆಯಿಂದ ಹಿಂದೆ ಸರಿಯುವ...

ಹತ್ತು ವರ್ಷಗಳಲ್ಲಿ ಇ.ಡಿ. ಬಳಕೆ ಶೇ.600ರಷ್ಟು ಏರಿಕೆ: ಬಿಜೆಪಿ ಸೇರಿದ ಬಳಿಕ ತನಿಖೆಯಿಂದ ನಿರಾಳತೆ ಪಡೆದ ವಿರೋಧ ಪಕ್ಷದ ನಾಯಕರು?

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರದ ಬಿಜೆಪಿ...

ಸಂಯುಕ್ತ ಕಿಸಾನ್ ಮೋರ್ಚಾದ ಜಂತರ್ ಮಂತರ್ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರಿಂದ ಅನುಮತಿ ನಿರಾಕರಣೆ

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸದಸ್ಯರು ಮತ್ತು ಇತರ ಹೋರಾಟಗಾರರು ಗುರುವಾರ (ನ.26) ಕಾಳಿ ಬಾರಿಯಿಂದ ಜಂತರ್ ಮಂತರ್‌ವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ನವದೆಹಲಿ ಜಿಲ್ಲೆಯಲ್ಲಿ...

ರಾಹುಲ್ ಗಾಂಧಿ ಹೆಸರು, ಫೋಟೋ ಇರುವ ಪೋಸ್ಟ್‌ಗಳಿಗೆ ನಿರ್ಬಂಧ : ಮೆಟಾ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಯುವ ಕಾಂಗ್ರೆಸ್

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಹೊಂದಿರುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿವೆ ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್...

ಯುಪಿಎ ಅವಧಿಗೆ ಹೋಲಿಸಿದರೆ ಮೋದಿ ಆಡಳಿತದಲ್ಲಿ ಶೇ.16–28ರಷ್ಟು ಮಸೂದೆಗಳಷ್ಟೇ ಸಂಸದೀಯ ಸಮಿತಿಗಳಿಗೆ ರವಾನೆ: ತರಾತುರಿ ಕಾನೂನುಗಳಿಗೆ ಹ್ಯೂಮನ್‌ ರೈಟ್ಸ್‌ ವಾಚ್ ಕಳವಳ!

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ...

ತಿರುವಪ್ಪರಂಕುಂದ್ರಂ ‘ಕಾರ್ತಿಕ ದೀಪ’ ವಿವಾದ: ಸುಪ್ರೀಂ ಕೋರ್ಟ್‌ಗೆ ಮಧುರೈ ಜಿಲ್ಲಾಧಿಕಾರಿ ನೀಡಿದ ವಿವರಣೆ ಏನು?

ತಮಿಳುನಾಡಿನ ತಿರುವಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರವಾಗಿ ವಿವಾದ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮಧುರೈ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ನ್ಯಾಯಾಲಯದ ಆದೇಶದಂತೆ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಸ್ಥಳದಲ್ಲೇ...

ಎಸ್‌ಐಆರ್ ವಿರುದ್ಧ ಜಾರ್ಖಂಡ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ತಕ್ಷಣ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

ದೇಶಾದ್ಯಂತ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಜಾರ್ಖಂಡ್ ವಿಧಾನಸಭೆ ಬುಧವಾರ (ನ.25) ನಿರ್ಣಯವೊಂದನ್ನು ಅಂಗೀಕರಿಸಿದೆ. ಧ್ವನಿಮತದ ಮೂಲಕ ಅಂಗೀಕರಿಸಲಾದ ಈ ನಿರ್ಣಯದಲ್ಲಿ ಎಸ್‌ಐಆರ್...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ತಂದೆಯ ಹೆಸರು ಡಿಲೀಟ್; ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವೇಳೆ ತಂದೆಯ ಹೆಸರು ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿರುವ ಕಾರಣಕ್ಕೆ ಸುಮಾರು ಮೂರು ತಿಂಗಳ ಹಸುಗೂಸಿಗೆ ಜನನ ಪ್ರಮಾಣಪತ್ರ ನೀಡಲು ಪಂಚಾಯತ್ ಅಧಿಕಾರಿಗಳು...