Homeಕರ್ನಾಟಕಕುವೆಂಪು ಆಶಯ ಕಡೆಗಣಿಸಿ ಕುಪ್ಪಳಿಯಲ್ಲಿ ಪರಿಸರ ನಾಶ; ನೈಜ ಜವಾಬ್ದಾರಿ ಮರೆತಿದೆಯೇ ಕುವೆಂಪು ಪ್ರತಿಷ್ಠಾನ?

ಕುವೆಂಪು ಆಶಯ ಕಡೆಗಣಿಸಿ ಕುಪ್ಪಳಿಯಲ್ಲಿ ಪರಿಸರ ನಾಶ; ನೈಜ ಜವಾಬ್ದಾರಿ ಮರೆತಿದೆಯೇ ಕುವೆಂಪು ಪ್ರತಿಷ್ಠಾನ?

- Advertisement -
- Advertisement -

ರಾಷ್ಟ್ರಕವಿ ಕುವೆಂಪು ಅವರ ಆಶಯಗಳನ್ನು ಕಡೆಗಣಿಸಿ ಕುವೆಂಪು ಪ್ರತಿಷ್ಠಾನವು ಕುಪ್ಪಳಿಯಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದು, ತನ್ನ ನಿಜವಾದ ಜವಾಬ್ದಾರಿಗಳನ್ನು ಅದು ಮರೆತಿದೆ ಎಂಬ ಆರೋಪಗಳು ಬಂದಿವೆ.

ಅರಣ್ಯ ಕಾಯ್ದೆ 1963ರ ಅಡಿ 2002ರಲ್ಲಿ ಕುಪ್ಪಳಿಯ ಸುತ್ತಲಿನ ಪರಿಸರವನ್ನು ‘ಕುವೆಂಪು ಜೈವಿಕ ಅರಣ್ಯ’ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ಸದ್ದಿಲ್ಲದೆ 1933 ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ಕುವೆಂಪು ವಿಚಾರಧಾರೆಗಳಿಗೆ ವಿರೋಧಿವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂಬ ಆಕ್ಷೇಪಗಳು ಬಂದಿವೆ.

ಕುವೆಂಪು ಪ್ರತಿಷ್ಠಾನವು ಅನವಶ್ಯಕವಾಗಿ ಅನುದಾನವನ್ನು ಖರ್ಚು ಮಾಡುತ್ತಿದ್ದು, “ಕವಿಮನೆ, ಹೇಮಾಂಗಣ, ಸುತ್ತಲಿನ ಪ್ರದೇಶದ ದುರಸ್ತಿ ಕಾಮಗಾರಿಗೆ ರಾಜ್ಯ ಸರ್ಕಾರ ನೀಡಿರುವ ಅನುದಾನ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಕಾಡು ಕಡಿದು ಕಾಂಕ್ರೀಟ್‌ ಕಾಡನ್ನು ನಿರ್ಮಿಸಲು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮುಂದಾಗಿದೆ. ಪರಿಸರದ ವಿಸ್ಮಯಗಳನ್ನು ತೆರೆದಿಟ್ಟ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿಯ ಸುತ್ತಲಿನ ನೈಸರ್ಗಿಕ ಕಾಡನ್ನು ಧ್ವಂಸ ಮಾಡಲಾಗುತ್ತಿದೆ” ಎಂದು ಕುವೆಂಪು, ತೇಜಸ್ವಿ ಸಾಹಿತ್ಯಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಾನಕ್ಕೆ ಈ ಕುರಿತು ಪತ್ರವನ್ನೂ ಬರೆದಿರುವ ಸಾಹಿತ್ಯಾಸಕ್ತರು, “ಅಗಾಧ ಜೀವವೈವಿಧ್ಯತೆಯುಳ್ಳ ಹಾಗೂ ಬೆಟ್ಟಗುಡ್ಡಗಳ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಸಹ್ಯಾದ್ರಿಯ ಪರಿಸರವು ಈ ನಾಡಿನ ಸಾಕ್ಷಿಪ್ರಜ್ಞೆಯಾದ ಕುವೆಂಪು ಅವರನ್ನು ರೂಪಿಸಲು ಕಾರಣವಾಯಿತು. ಸ್ವತಃ ಕುವೆಂಪು ಅವರೇ ತಮ್ಮ ಕೃತಿಗಳಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ಸಹ್ಯಾದ್ರಿಯ ಪರಿಸರದಲ್ಲಿ ನಾನು ಹುಟ್ಟದೇ ಹೋಗಿದ್ದರೆ, ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿಯಂತಹ ಬೃಹತ್ ಕೃತಿಗಳನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ. ಅಂಥ ಪರಿಸರವನ್ನು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನೆಪಗಳಲ್ಲಿ ಬರಿದುಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಹೀಗೆ ಅಭಿವೃದ್ಧಿಯ ನೆಪಗಳಲ್ಲಿ ಪರಿಸರವನ್ನು ನಾಶಗೊಳಿಸಿದರೆ ಮುಂದಿನ ಪೀಳಿಗೆಗೆ ಕುವೆಂಪು ಅವರ ಕೃತಿಗಳಲ್ಲಿ ವರ್ಣಿತವಾಗಿರುವ ಸಹ್ಯಾದ್ರಿ ಪರಿಸರದ ಮಲೆನಾಡಿನ ಚಿತ್ರಗಳನ್ನು ಅಕ್ಷರಗಳಲ್ಲಿ ಮಾತ್ರವೇ ಕಾಣಲು ಸಾಧ್ಯವಾಗುತ್ತದೆ” ಎಂದಿದ್ದಾರೆ.

ಕುಪ್ಪಳಿಯ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸ್ಮಾರಕವಾಗಬೇಕು ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಯಸಿದ್ದರು. ಅಂತೆಯೇ ರಾಜೇಶ್ವರಿ ತೇಜಸ್ವಿ, ಕುವೆಂಪು ಅವರ ಕುಟುಂಬದವರು ಹಾಗೂ ಕುವೆಂಪು ಸಾಹಿತ್ಯಪ್ರೇಮಿಗಳ ಆಶಯವೂ ಆಗಿತ್ತು. ಆದರೆ ಕುವೆಂಪು ಪ್ರತಿಷ್ಠಾನಕ್ಕೆ ಹಣದ ಪ್ರವಾಹ ಹರಿದಂತೆಲ್ಲಾ ಕವಿಮನೆಯ ಪರಿಸರ ಕಾಂಕ್ರೀಟ್ ಕಾಡಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕವಿಮನೆಯ ದುರಸ್ತಿಗಾಗಿ, ಸರ್ಕಾರದಿಂದ ಒಂದು ಕೋಟಿ ರೂ. ಅನುದಾನವನ್ನು ಪಡೆದ ಸುದ್ದಿ ಈಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಈ ಅನುದಾನದ ಹಣವನ್ನು ಕೇವಲ ಕವಿಮನೆಯ ದುರುಸ್ತಿಗೆ ವಿನಿಯೋಗಿಸದೆ ತೇಜಸ್ವಿ ಸ್ಮಾರಕದ ಪಕ್ಕದಲ್ಲಿರುವ ಸುಂದರವಾದ ಕಾಡನ್ನು ಕಡಿದು ಕಟ್ಟಡಗಳನ್ನು ಕಟ್ಟಲು ಈ ಹಣವನ್ನು ಬಳಸುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ. ಕುವೆಂಪು ಅವರು ಹುಟ್ಟಿ ಬೆಳೆದ ಕುಪ್ಪಳಿಯ ಪರಿಸರವನ್ನು ವ್ಯಾಪಾರೀಕರಣದ ದೃಷ್ಟಿಯಿಂದ ನೋಡುವುದು ತರವಲ್ಲ ಎಂದು ಎಚ್ಚರಿಸಿದ್ದಾರೆ.

“ಕುಪ್ಪಳಿಯ ಪರಿಸರದಲ್ಲಿ ಅಂಗಡಿ ಮುಂಗಟ್ಟು ಮತ್ತು ಹೋಟೆಲ್‌ಗಳನ್ನು ತೆರೆದರೆ ಕುವೆಂಪು ಅವರ ವ್ಯಕ್ತಿತ್ವ ಮತ್ತು ವಿಚಾರಗಳ ಬಗೆಗೆ ಗೌರವಾದರವನ್ನು ಹೊಂದಿರುವ ಸಾಹಿತ್ಯಾಭಿಮಾನಿಗಳು ಭೇಟಿ ನೀಡುವುದಕ್ಕಿಂತ ಹೆಚ್ಚಾಗಿ ವಿಲಾಸಿ ಜೀವನ ನಡೆಸಲು ಬರುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗುತ್ತದೆ. ಇದರಿಂದ ಕುಪ್ಪಳಿಯ ಪರಿಸರದ ಪ್ರಶಾಂತತೆಗೆ ಧಕ್ಕೆಯುಂಟಾಗುತ್ತಿದೆ. ಸಾಂಸ್ಕೃತಿಕವಾಗಿ ಹಾಗೂ ಪ್ರಾಕೃತಿಕವಾಗಿ ಕುಪ್ಪಳಿಗಿರುವ ಮಹತ್ವ ಕಡಿಮೆಯಾಗುತ್ತದೆ. ಇಂಥ ಪ್ರಕರಣಗಳನ್ನು ಗಮನಿಸಿದಾಗ ಪ್ರತಿಷ್ಠಾನವು ಕುವೆಂಪು ಅವರ ಆಶಯಗಳಿಗೆ ವಿರುದ್ಧವಾದ ದಿಕ್ಕಿನಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕುಪ್ಪಳಿ ಒಂದು ಸಾಂಸ್ಕೃತಿಕ ಕೇಂದ್ರವಾಗಲಿ’ ಎಂಬ ಬಯಕೆ ಕುವೆಂಪು ಅವರದಾಗಿತ್ತು. ಆದರೆ ಪ್ರತಿಷ್ಠಾನವು ಕುವೆಂಪು ಅವರ ಆಶಯದಂತೆ ಕುಪ್ಪಳಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಬದಲು ಕೇವಲ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ದಶಕಗಳಿಂದ ಪದಾಧಿಕಾರಿಗಳು ಬದಲಾಗಿಲ್ಲ: ಅಭಿಗೌಡ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ಯ ಮುಖಂಡರಾದ ಅಭಿಗೌಡ ಹನಕೆರೆ, “ಕುವೆಂಪು ಪ್ರತಿಷ್ಠಾನವು ಇಂತಹ ದುಂದುವೆಚ್ಚಗಳನ್ನು ಮಾಡದೆ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ಹೆಚ್ಚಿಸಬೇಕು. ಕೆಲವು ವ್ಯಕ್ತಿಗಳಷ್ಟೇ ಕಳೆದ ಇಪ್ಪತ್ತು ವರ್ಷಗಳಿಂದ ಪದಾಧಿಕಾರಿಗಳಾಗಿದ್ದು, ಅವರು ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.

“ಪ್ರತಿ ವರ್ಷ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆ ಹಣವನ್ನು ಬಳಸಿಕೊಂಡು ಕುವೆಂಪು ವಿಚಾರಧಾರೆಗಳನ್ನು ಜಗತ್ತಿನೆಲ್ಲೆಡೆ ಪಸರಿಸಬೇಕು. ಆದರೆ ಬರುವ ಕೋಟಿ ಕೋಟಿ  ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿರುವುದು ಏತಕ್ಕೆ?” ಎಂದು ಪ್ರಶ್ನಿಸಿದರು.

“ಕವಿಶೈಲಕ್ಕೆ ಸುಮಾರು ಎಂಟು ಕಿಮೀ ದೂರದಲ್ಲಿ ದೇವಾಂಗಿಯಲ್ಲಿ ಪ್ರತಿಷ್ಠಾನದ ಕಚೇರಿ ತೆರೆಯುತ್ತಿದ್ದಾರೆ. ಆದರೆ ಈಗಾಗಲೇ ಹೇಮಾಂಗಣವಿದ್ದು, ಅಲ್ಲಿ ಕಚೇರಿಯನ್ನು ನಡೆಸುತ್ತಿದ್ದಾರೆ. ಹೀಗಿದ್ದರೂ ಮತ್ತೊಂದು ಕಚೇರಿ ತೆರೆಯಲಾಗುತ್ತಿದೆ. ಕಮಿಷನ್ ದಂಧೆ ನಡೆಯುತ್ತಿರುವ ಗುಮಾನಿ ವ್ಯಕ್ತವಾಗುತ್ತಿದೆ” ಎಂದರು.

“ಕುಪ್ಪಳಿಯು ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಅನಿಸುವುದೇ ಇಲ್ಲಿನ ಸುಂದರ ಪರಿಸರದ ಮೂಲಕ. ಒಂದು ಕಿ.ಮಿ.ಗಿಂತ ಹೆಚ್ಚು ದೂರ ಕಾಡಿನೊಳಗೆ ನಡೆದ ಅನುಭವವಾಗುತ್ತದೆ. ಇದನ್ನು ಉಳಿಸಿಕೊಳ್ಳಬೇಕು. ಕುಪ್ಪಳಿಯನ್ನು ಬೆಂಗಳೂರಿನ ಎಂ.ಜಿ.ರೋಡ್‌ ಆಗಿ ಬದಲಿಸಲು ಪ್ರತಿಷ್ಠಾನ ಮುಂದಾಗಿದೆ” ಎಂದು ಟೀಕಿಸಿದರು.

ಹಿಂದಿ ಫಲಕ ಬಂದಿದ್ದೇಕೆ?

“ಕುಪ್ಪಳಿಯಲ್ಲಿ ಪ್ರತಿಷ್ಠಾನವು ಹಿಂದಿಯಲ್ಲೂ ಫಲಕಗಳನ್ನು ಹಾಕುತ್ತಿದೆ. ಕನ್ನಡ ಹಾಗೂ ಬೇರೆ ಭಾಷಿಕರಿಗಾಗಿ ಇಂಗ್ಲಿಷ್‌ ಫಲಕ ಇದ್ದರೆ ಸಮಸ್ಯೆಯಿಲ್ಲ. ಆದರೆ ಹಿಂದಿಯನ್ನೂ ತುರುಕುವ ಮೂಲಕ ಕನ್ನಡಗರ ಭಾವನೆಗೆ ಧಕ್ಕೆ ತರಲಾಗಿದೆ. ಕುವೆಂಪು ಅವರು ಕೂಡ ಎರಡು ನುಡಿ ಪದ್ಧತಿಯನ್ನೇ ಬೆಂಬಲಿಸಿದ್ದರು. ಹಿಂದಿಯನ್ನು ವಿರೋಧಿಸಿದ್ದರು. ಅವರ ಆಶಯಕ್ಕೆ ವಿರೋಧವಾಗಿ ಪ್ರತಿಷ್ಠಾನ ಕೆಲಸ ಮಾಡುತ್ತಿದೆ” ಎಂದು ಅಭಿಗೌಡ ಆರೋಪಿಸಿದರು.

“ಎರಡು ದಶಕಗಳಿಂದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಪ್ರತಿಷ್ಠಾನ ಸಿಲುಕಿದೆ. ಕುವೆಂಪು ಆಶಯ, ಸಮಾನತೆ ಎಂದು ಮಾತನಾಡುವವರು ಬೇರೆಯವರಿಗೆ ಅವಕಾಶ ನೀಡಬೇಕಲ್ಲವೇ? ಟ್ರಸ್ಟ್‌ನ ಬೈಲಾದಲ್ಲಿ ನಿಯಮ ಇಲ್ಲವಾದರೆ ಅದನ್ನು ಬದಲಾಯಿಸಿ, ಅಧಿಕಾರದಿಂದ ಕೆಳಗೆ ಇಳಿಯಬೇಕಲ್ಲವೇ? ಹೀಗೆ ಅಧಿಕಾರದಲ್ಲಿರಲು ಇವರಿಗೆ ಮುಜುಗರವಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

ಸಂಘಪರಿವಾರ ಕುಪ್ಪಳಿಗೆ ನುಸುಳುತ್ತಿದೆ: ಜಗದೀಶ್‌

ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟಿಸಿರುವ ‘ಜಾಣೆಜಾಣೆಯರು ಯೂಟ್ಯೂಬ್ ಚಾನೆಲ್ ಖ್ಯಾತಿ’ಯ ಜಗದೀಶ್‌ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಕುವೆಂಪು ಆಶಯಗಳಿಗೆ ವಿರುದ್ಧವಾಗಿ ಮಾತನಾಡುವ ಜಿ.ಬಿ.ಹರೀಶ್ ಥರದವರನ್ನು ಕರೆಸಿ ಇಲ್ಲಿ ಭಾಷಣ ಮಾಡಿಸಲಾಗುತ್ತಿದೆ. ಸಂಘಪರಿವಾರ ಮೆಲ್ಲಗೆ ಇಲ್ಲಿ ತೂರಿಕೊಳ್ಳುತ್ತಿದೆ. ನಾಡಗೀತೆಯನ್ನು ತಿರುಚಿದ್ದ ರೋಹಿತ್‌ ಚಕ್ರತೀರ್ಥರನ್ನು ತೀರ್ಥಹಳ್ಳಿಗೆ ಕರೆಸಿ ಭಾಣ ಮಾಡಿಸಿದಾಗಲೂ ಪ್ರತಿಷ್ಠಾನದವರು ಒಂದು ಖಂಡನಾ ಹೇಳಿಕೆಯನ್ನೂ ನೀಡಲಿಲ್ಲ” ಎಂದು ವಿಷಾದಿಸಿದರು.

“ನಿಂತ ನೀರು ಕೊಳತು ನಾರುತ್ತದೆ ಎಂಬುದನ್ನು ಹಲವು ವರ್ಷಗಳು ಅಧಿಕಾರದಲ್ಲಿದ್ದವರು ಅರಿಯಬೇಕು. ಬೈಲಾದಲ್ಲಿ ಬದಲಾವಣೆ ತರಬೇಕು. ಇವತ್ತಿನ ತಲೆಮಾರಿಗೆ ಕುವೆಂಪು ಅವರನ್ನು ಸಶಕ್ತವಾಗಿ ಪರಿಚಯಿಸುವ ಕೆಲಸವನ್ನು ಪ್ರತಿಷ್ಠಾನ ಮಾಡಬೇಕು. ಜಗತ್ತಿನ ಮಹತ್ವದ ಕೃತಿಗಳನ್ನು ಒಳಗೊಂಡ ಒಂದು ಗ್ರಂಥಾಲಯವನ್ನು ಇಲ್ಲಿ ನಿರ್ಮಿಸಬೇಕು. ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಪ್ರೋತ್ಸಾಹ ನೀಡಬೇಕು. ಕುವೆಂಪು ಅವರ ಮಂತ್ರ ಮಾಂಗಲ್ಯವನ್ನು ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರತಿಷ್ಠಾನ ಮಾಡಬೇಕಿತ್ತು. ಹೆಸರಿಗೆ ಮಾತ್ರ ಇಲ್ಲಿ ಮಂತ್ರ ಮಾಂಗಲ್ಯ ನಡೆಯುತ್ತದೆ, ಆದರೆ ಅದ್ಧೂರಿ ವಿವಾಹ ಹಮ್ಮಿಕೊಳ್ಳಲಾಗಿರುತ್ತದೆ” ಎಂದು ಖಂಡನೆ ವ್ಯಕ್ತಪಡಿಸಿದರು.

“ಅವಶ್ಯಕತೆ ಇದ್ದರೆ ದೊಡ್ಡ ಕಟ್ಟಡಗಳ ಬದಲು ಕುಟೀರಗಳನ್ನು ನಿರ್ಮಿಸಬೇಕು. ಆದರೆ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಕಟ್ಟಡ ನಿರ್ಮಿಸಲಾಗುತ್ತಿದೆ. ಹೇಮಾಂಗಣದಲ್ಲೇ ಕಚೇರಿ ನಿರ್ಮಿಸಬಹುದಲ್ಲ. ಅದಕ್ಕಾಗಿ ಪ್ರತ್ಯೇಕ ಕಟ್ಟಡ ಏತಕ್ಕೆ? ಕುವೆಂಪು ಅವರನ್ನು ಈ ತಲೆಮಾರಿಗೆ ಹೇಗೆ ತಿಳಿಸಲು ಯತ್ನಿಸುತ್ತಿದ್ದೀರಿ?” ಎಂದು ಕೇಳಿದರು.

ಅಧಿಕಾರದಿಂದ ಇಳಿಯಲು ಸಿದ್ಧ: ಕಡಿದಾಳ್ ಪ್ರಕಾಶ್‌

ಈಗ ಬಂದಿರುವ ತಕರಾರುಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು.

“ಕುಪ್ಪಳಿಯಲ್ಲಿ ಶೌಚಾಲಯಗಳ ಸಮಸ್ಯೆ ತುಂಬಾ ಇದೆ. ಮಳೆಗಾಲದಲ್ಲಿ ಡ್ರೈನೇಜ್‌ ತುಂಬಿ ಹರಿಯುತ್ತದೆ. ನವೆಂಬರ್‌, ಡಿಸೆಂಬರ್‌ನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಬಂದವರಿಗೆ ಊಟದ ವ್ಯವಸ್ಥೆ ಇರುವುದಿಲ್ಲ. ಅವರಾಗಿಯೇ ಅಡುಗೆ ಮಾಡಿಕೊಳ್ಳುತ್ತಾರೆ. ಆ ದೃಷ್ಟಿಯಲ್ಲಿ ತೇಜಸ್ವಿ ಸ್ಮಾರಕದ ಬಳಿ ಸಣ್ಣದೊಂದು ಕ್ಯಾಂಟೀನ್ ಮಾಡುತ್ತಿದ್ದೇವೆ. ಅಲ್ಲಿ ಮರಗಿಡಗಳು ಇರಲಿಲ್ಲ” ಎಂದು ತಿಳಿಸಿದರು.

“ಮಂತ್ರ ಮಾಂಗಲ್ಯಗಳು ಮದುವೆಗಳು ಇಲ್ಲಿ ನಡೆಯುತ್ತಿವೆ. ಹೊರಗಿನ ಜಿಲ್ಲೆಯಲ್ಲಿ ನಡೆಯುವ ಮಂತ್ರ ಮಾಂಗಲ್ಯಕ್ಕೆ ಬೆಂಬಲ ನೀಡುವ ಕೆಲಸವೂ ಆಗುತ್ತಿದೆ. ಕುವೆಂಪು ಅವರ ಮುಖ್ಯ ಬರಹಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಿದ್ದೇವೆ. ನಮಗೆ ವಾರ್ಷಿಕವಾಗಿ ಕೇವಲ ಏಳರಿಂದ ಎಂಟು ಲಕ್ಷ ರೂ.ಗಳಷ್ಟೇ ಅನುದಾನ ಬರುತ್ತಿದೆ. 13 ಮಂದಿ ಸಿಬ್ಬಂದಿಯ ಸಂಬಳ, ಹೇಮಾಂಗಣ, ಕವಿಶೈಲ, ಕವಿಮನೆ ಮೊದಲಾದವುಗಳ ನಿರ್ವಹಣೆ ನಮ್ಮ ಮೇಲಿದೆ” ಎಂದರು.

ಪ್ರತಿಷ್ಠಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲವರಷ್ಟೇ ಅಧಿಕಾರದಲ್ಲಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಪ್ರತಿಷ್ಠಾನ ಚೆನ್ನಾಗಿ ನಡೆಯುತ್ತಿದೆ. ಬದಲಾವಣೆ ಮಾಡಬೇಕು ಅನಿಸಿದರೆ ಸರ್ಕಾರ ಬದಲಾಯಿಸಲಿ. ನಮಗೆ ಕೊಂಚವೂ ಬೇಸರವಿಲ್ಲ. ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಾ ನಮಗೂ ಸಾಕಾಗಿದೆ. ಇನ್ನೂ ಚೆನ್ನಾಗಿ ಪ್ರತಿಷ್ಠಾನವನ್ನು ನಡೆಸುವುದಾಗಿ ಮುಂದೆ ಯಾರಾದರೂ ಬಂದರೆ ನಾವು ತೆರೆದ ಮನಸ್ಸಿನಿಂದ ಜಾಗ ಬಿಟ್ಟುಕೊಡುತ್ತೇವೆ. ಅಂಟಿಕೊಂಡು ಕೂರುವ ಪ್ರಮೇಯವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...