Homeಮುಖಪುಟದ್ವೇಷ, ಹಿಂಸೆಯೆಂಬ ವಿಪತ್ತನ್ನು ಪ್ರೀತಿ ಮತ್ತು ಮಾತುಕತೆ ಮೂಲಕ ಮಾತ್ರ ಎದುರಿಸಬಹುದು: ಮಣಿಪುರ ಭೇಟಿ ಬಳಿಕ...

ದ್ವೇಷ, ಹಿಂಸೆಯೆಂಬ ವಿಪತ್ತನ್ನು ಪ್ರೀತಿ ಮತ್ತು ಮಾತುಕತೆ ಮೂಲಕ ಮಾತ್ರ ಎದುರಿಸಬಹುದು: ಮಣಿಪುರ ಭೇಟಿ ಬಳಿಕ ರಾಹುಲ್ ಗಾಂಧಿ

- Advertisement -
- Advertisement -

ದ್ವೇಷ ಮತ್ತು ಹಿಂಸೆಯೆಂಬದು ಒಂದು ವಿಪತ್ತು. ಅದನ್ನು ನಾವು ಪ್ರೀತಿ ಮತ್ತು ಮಾತುಕತೆ ಮೂಲಕ ಮಾತ್ರ ಎದುರಿಸಬಹುದು ಎಂದು ಮಣಿಪುರ ಭೇಟಿ ಬಳಿಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಮೊಯಿರಾಂಗ್‌ನಲ್ಲಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದೆ. ಮಣಿಪುರದ ನಮ್ಮ ಸಹೋದರ ಸಹೋದರಿಯರನ್ನು ನೋಡಿದೆ. ಅವರ ನೋವನ್ನು ಕೇಳಿದೆ ಮತ್ತು ಅನುಭವಿಸಿದೆ ಎಂದು ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದಿದ್ದಾರೆ.

 

View this post on Instagram

 

A post shared by Rahul Gandhi (@rahulgandhi)

ಇದೇ ವೇಳೆ ಆಜಾದ್ ಹಿಂದ್ ಫೌಜ್ ಹುತಾತ್ಮರ ಸ್ಮಾರಕಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದೆನು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿನ್ನೆ ಪರಿಹಾರ ಶಿಬಿರದ ಮಹಿಳೆಯರನ್ನು ಮಾತನಾಡಿಸಿದ ನಂತರ ಅವರು “ಮಣಿಪುರಕ್ಕೆ ಚಿಕಿತ್ಸೆ ಅಗತ್ಯವಿದೆ. ಶಾಂತಿ ಮಾತ್ರ ನಮ್ಮ ಆದ್ಯತೆಯಾಗಬೇಕು” ಎಂದು ಟ್ವೀಟ್ ಮಾಡಿದ್ದರು.

ಮಣಿಪುರಕ್ಕೆ ಈಗ ಅಗತ್ಯವಿರುವ ಪ್ರಮುಖ ವಿಷಯವೆಂದರೆ ಶಾಂತಿ. ನಮ್ಮ ಜನರ ಜೀವನ ಮತ್ತು ಜೀವನೋಪಾಯವನ್ನು ಸುರಕ್ಷಿತಗೊಳಿಸುವುದು. ಆ ಗುರಿಯತ್ತ ನಮ್ಮೆಲ್ಲರ ಪ್ರಯತ್ನಗಳು ಒಂದಾಗಬೇಕು ಎಂದು ಅವರು ಹೇಳಿದ್ದರು.

ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಇಂದು ಸಂಜೆ ಇಂಫಾಲ್‌ನಲ್ಲಿ 10 ಸಮಾನ ಮನಸ್ಕ ಪಕ್ಷದ ನಾಯಕರು, ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ) ನಾಯಕರು ಮತ್ತು ನಾಗರಿಕ ಸಮಾಜ ಸಂಘಟನೆಗಳ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೇಶಾಮ್ ಮೇಘಚಂದ್ರ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿದ್ದರು. ಆನಂತರ ಅವರು ಹೆಲಿಕ್ಯಾಪ್ಟರ್ ಮೂಲಕ ತೆರಳಿ ಸಂತ್ರಸ್ತರನ್ನು ಭೇಟಿಯಾಗಿದ್ದರು.

ಈಶಾನ್ಯ ರಾಜ್ಯ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಕೊನೆಗೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್‌ ಅವರು ಇಂದು (ಜೂನ್ 30, ಶುಕ್ರವಾರ) ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಬಿರೇನ್ ಸಿಂಗ್ ಮತ್ತು ರಾಜ್ಯಪಾಲೆ ಅನುಸೂಯಾ ಉಯ್ಕೆ ಭೇಟಿಗೆ ಸಮಯ ನಿಗದಿಯಾಗಿತ್ತು. ಅದರಂತೆ ಇದೀಗ ಭೇಟಿಯಾಗಿದ್ದು, ಈ ಸಂದರ್ಭದಲ್ಲೇ ರಾಜೀನಾಮೆ ಪತ್ರ ಸಲ್ಲಿಕೆ ಮಾಡುತ್ತಾರೆ ಎಂದು ಮೂಲಗಳು ಹೇಳಿವೆ.

ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದರೂ, ನಿಯಂತ್ರಿಸುವಲ್ಲಿ ಬಿರೇನ್ ವಿಫಲರಾಗಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಮೈತಿ ಸಮುದಾಯದ ಇಬ್ಬರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read