ಮೀಸಲಾತಿಯನ್ನು ಹೆಚ್ಚುಸಿವಂತೆ, ಶೋಷಿತ ಸಮುದಾಯಗಳಿಗೆ ಒದಗುತ್ತಿರುವ ಮೀಸಲಾತಿ ವರ್ಗಕ್ಕೆ ತಮ್ಮನ್ನೂ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕದ ಹಲವು ಜಾತಿ ಸಮುದಾಯಗಳ ಮುಖಂಡರು, ಮಠಾಧೀಶರುಗಳು ಎದ್ದು ನಿಂತಿದ್ದಾರೆ. ಶಾಸನಬದ್ಧವಾಗಿ ನೀಡಲಾಗಿರುವ ಮೀಸಲಾತಿಯ ಕಲ್ಪನೆಯ ಬಗ್ಗೆಯೇ ಒಂದು ಕಾಲದಲ್ಲಿ ವಿರೋಧ ಮಾಡಿದ್ದ ಸಮುದಾಯಗಳು ಕೂಡ ಇಂದು ಮೀಸಲಾತಿ ಹೆಚ್ಚಳಕ್ಕೆ ಹಪಾಹಪಿಸುತ್ತಿರುವುದು ವಿಪರ್ಯಾಸ. ಸಾಮಾಜಿಕ ಸಮಾನತೆಯ ಕಲ್ಪನೆಯನ್ನು ನಿಜ ಅರ್ಥದಲ್ಲಿ ತನ್ನೊಳಗೆ ಬಿಟ್ಟುಕೊಳ್ಳದೆ, ಇಂದಿಗೂ ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳದೆ ಹೋಗಿದ್ದರೂ ಮತ್ತು ಈ ಸಮುದಾಯಗಳು, ತಮ್ಮ ಜಾತಿಯ ಜನರ ಒಳಿತನ್ನು ಯೋಚಿಸುತ್ತಿರುವಂತೆ ಬಿಂಬಿಸಿದರೂ, ಒಟ್ಟಾರೆಯಾಗಿ ಇದು ಪ್ರಜಾಪ್ರಭುತ್ವ ನಿರೀಕ್ಷಿಸುವ ಸಮಾನತೆಯ ಕನಸಿನ ಸೋಲು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮುಂದುವರೆಯುವ ಮುಂಚೆ ಸಮಾನತೆಯ ಕೂಗು ಹಾಕಿದ್ದ ಧಾರವಾಡದ ವ್ಯಕ್ತಿಯೊಬ್ಬರನ್ನು ಸ್ಮರಿಸಿಕೊಳ್ಳೋಣ.

1856ರಲ್ಲಿ ಧಾರವಾಡ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಅದೇ ಇಸವಿಯಲ್ಲಿ ಮಹಾರ್ ಸಮುದಾಯಕ್ಕೆ ಸೇರಿದ್ದ ಎರ್‍ಲೂ ಬಿನ್ ನಾರಾಯಣ್, ಸರ್ಕಾರ ನಡೆಸುತ್ತಿರುವ ಮರಾಠಿ ಶಾಲೆಯಲ್ಲಿ, ತನ್ನ ಜಾತಿಯ ಕಾರಣಕ್ಕಾಗಿ ನೇಮಕಾತಿ ಸಿಗದೆ ಶಿಕ್ಷಣ ನಿರಾಕರಿಸುತ್ತಿದ್ದರ ಬಗ್ಗೆ ಅಂದಿನ ಮೊದಲನೇ ಅಸಿಸ್ಟೆಂಟ್ ಕಲೆಕ್ಟರ್ ಸ್ಟುವರ್ಟ್ ಎಂ ಐ ಗೋರ್ಡೋನ್ ಅವರ ಮುಖಾಂತರ, ಅಂದಿನ ಬಾಂಬೆ ಪ್ರೆಸಿಡೆನ್ಸಿ ಗವರ್ನರ್ ಆಗಿದ್ದ ಲಾರ್ಡ್ ಎಲ್ಫಿನ್‌ಸ್ಟೋನ್ ಅವರಿಗೆ ಪೆಟಿಶನ್ ಕಳುಹಿಸಿದ್ದರು.

ತಾವು ಮುಕ್ತ ಶಿಕ್ಷಣ ನೀತಿಯ ಪ್ರತಿಪಾದಕರು ಮತ್ತು ನೆಲದ ಕಾನೂನು ಪಾಲಕರು ಎಂದು ಬ್ರಿಟಿಷ್ ಆಡಳಿತ ವ್ಯವಸ್ಥೆ ಕರೆದುಕೊಂಡಿದ್ದರೂ, ಭಾರತದ ಮೇಲ್ಜಾತಿಗಳ ಹಿಡಿತದಲ್ಲಿದ್ದ ಶಿಕ್ಷಣವನ್ನು, ಶೋಷಿತರಿಗೂ ವಿಸ್ತರಿಸಲು ಸಾಧ್ಯವಾಗದೆ ಸೋತ ಕಥೆ ಎರ್‍ಲೂ ಬಿನ್ ನಾರಾಯಣ್ ಅವರದ್ದು. ಎರ್‍ಲೂ ಬಿನ್ ನಾರಾಯಣ್ ಅವರ ಹಿನ್ನೆಲೆಯಲ್ಲಿ ಮಹಾರ್ ಮತ್ತು ಇತರ ಶೋಷಿತರನ್ನು ಶಾಲೆಗಳಿಗೆ ಸೇರಿಸಿಕೊಳ್ಳುವ ಪ್ರಶ್ನೆ ಪಡುವಣ-ಬಡಗಣವನ್ನೆಲ್ಲಾ ಸುತ್ತಿ ಕೊನೆಗೆ ಅಲ್ಲಿಗೇ ಬಂದು ನಿಲ್ಲುತ್ತದೆ. ಮೊದಲಿಗೆ ಈ ಪ್ರಶ್ನೆ ಅಂದಿನ ಭಾರತ ಸರ್ಕಾರಕ್ಕೆ (GOI) ತೆರಳುತ್ತದೆ. ಸರ್ಕಾರದ ಗೃಹಸಚಿವಾಲಯದ ಕಾರ್ಯದರ್ಶಿ ಈ ವಿಷಯದಲ್ಲಿ ಯಾವುದೇ ಹೊಸ ನಿರ್ಧಾರಕ್ಕೆ ಮುಂದಾಗದೆ ಯಥಾಸ್ಥಿತಿಯನ್ನು ಮುಂದುವರೆಸುವ ಬಾಂಬೆ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ “ಬೆಂಗಾಳ ಪ್ರಸೆಡೆನ್ಸಿಯಲ್ಲಿ ಆಗಿದ್ದರೆ ಆ ಹುಡುಗನಿಗೆ ನೇಮಕಾತಿಯನ್ನು ನಿರಾಕರಿಸುತ್ತಿರಲಿಲ್ಲ ಎಂಬ ಅಂಶವನ್ನು ಸೇರಿಸುತ್ತಾರೆ.

ಈ ರೀತಿ ಈ ವಿಷಯದ ಸುತ್ತ ಅಂದಿನ ಭಾರತ ಸರ್ಕಾರದ ಉನ್ನತ ವಲಯಗಳಲ್ಲಿ ಕೆಲವು ವಾದವಿವಾದಗಳು ನಡೆಯುತ್ತವಾದರೂ, ಶೋಷಕ ಮೇಲ್ಜಾತಿಗಳ ಜೊತೆಗೆ ಈ ವಿಷಯದಲ್ಲಿ ಜಟಾಪಟಿಗೆ ಬೀಳುವುದಕ್ಕೆ ಹೆದರಿ, ನೆಲೆಯೂರಿದ್ದ ತಾರತಮ್ಯದ ನಿಯಮಗಳನ್ನು ಮೀರಲು ಸೋತು, ಶಾಲೆಗೆ ಮಹಾರ್ ಜಾತಿಯ ಬಾಲಕನಿಗೆ ನೇಮಕಾತಿ ನೀಡಲು ಬ್ರಿಟಿಷ್ ಸರ್ಕಾರ ನಿರಾಕರಿಸುತ್ತದೆ. ಇದರ ಬಗ್ಗೆ ಬರೆದಿರುವ ಅರವಿಂದ ಗಣಚಾರಿಯವರು ದಾಖಲಿಸುವಂತೆ, ’ನ್ಯಾಯ ಮತ್ತು ಸಮತೆ’ಯ ಬಗ್ಗೆ ಬ್ರಿಟಿಷರು ಎಷ್ಟೇ ಕೊಚ್ಚಿಕೊಂಡರೂ ತಮ್ಮ ರಾಜಕೀಯ ಅನುಕೂಲಕ್ಕಾಗಿ ಯಾವುದೇ ಪರಂಪರೆಯನ್ನು ಮುರಿಯಲು ಅವರು ಸಿದ್ಧರಿರಲಿಲ್ಲ ಎನ್ನುತ್ತಾರೆ.

ಈ ಪ್ರಕರಣ ಕರ್ನಾಟಕ ಮತ್ತು ಡಾ. ಬಿ ಆರ್ ಅಂಬೇಡ್ಕರ ಅವರ ಸಂಬಂಧಕ್ಕೆ ಕಾರಣವಾಗಿತ್ತು ಎಂಬುದು ಕೂಡ ಕುತೂಹಲಕಾರಿ ಸಂಗತಿ. ಎರ್‍ಲೂ ಬಿನ್ ನಾರಾಯಣ್ ಅವರು 1856ರಲ್ಲಿಯೇ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದ ವಿಷಯವನ್ನು 1920ರಲ್ಲಿ ತಿಳಿಯುವ ಡಾ. ಬಿ ಆರ್ ಅಂಬೇಡ್ಕರ್ ಅವರು, 1927ರಲ್ಲಿ ನಾರಾಯಣ್ ಅವರ ಕುಟುಂಬವನ್ನು ಹುಡುಕಿಕೊಂಡು ಧಾರವಾಡಕ್ಕೆ ಬರುತ್ತಾರೆ. ಆದರೆ ನಾರಾಯಣ್ ಅವರ ಕುಟುಂಬದ ಬಗ್ಗೆ ಪತ್ತೆಹಚ್ಚಲು ಸಾಧ್ಯವಾಗದೆ ಹಿಂದಿರುಗುತ್ತಾರೆ.

ನಂತರ 1929ರಲ್ಲಿ ಅಂಬೇಡ್ಕರ್ ಅವರ ಪತ್ನಿ ರಮಾಭಾಯಿ ಅವರ ಅರೋಗ್ಯದ ಸಮಸ್ಯೆಯುಂಟಾದಾಗ, ಪರಿಸರ ಬದಲಾವಣೆಗಾಗಿ ಅಂಬೇಡ್ಕರ್ ಮತ್ತು ರಮಾಭಾಯಿಯವರು ಧಾರವಾಡದಲ್ಲಿ ಕೆಲವು ತಿಂಗಳುಗಳ ಕಾಲ ನೆಲೆಸುತ್ತಾರೆ. ಅಲ್ಲದೆ ಈ ಸಮಯವನ್ನು ದಕ್ಷಿಣ ಭಾರತದಲ್ಲಿ ದಲಿತರ ಸ್ವಾಭಿಮಾನದ ಚಳವಳಿಯನ್ನು ಹುಟ್ಟುಹಾಕಲು ಅಸಮಾನತೆಯ ವಿರುದ್ಧ ಹೋರಾಟ ನಡೆಸಲು ಬಳಸಿಕೊಂಡಿದ್ದು ಈಗ ಇತಿಹಾಸ.

ದಲಿತರ ಸಹಕಾರಿ ಒಕ್ಕೂಟಗಳನ್ನು ನಿರ್ಮಿಸುವುದಕ್ಕೆ, 1929ರಲ್ಲಿ ಕೊಪ್ಪಡಕೇರಿಯಲ್ಲಿ ದಮನಿತ ವರ್ಗದ ಹಾಸ್ಟೆಲ್ ಸ್ಥಾಪಿಸುವುದಕ್ಕೆ ಮತ್ತು ಅಂಬೇಡ್ಕರ್ ತಾವೇ ನಿರ್ವಾಹಕ ಟ್ರಸ್ಟಿಯಾಗಿ ಹಾಸ್ಟೆಲ್ ನಡೆಸುವುದಕ್ಕೆ ಮೇಲಿನ ಘಟನೆ ಕಾರಣವಾಯಿತು. 1931ರಲ್ಲಿ ಮತ್ತೆ ಧಾರವಾಡಕ್ಕೆ ಆಗಮಿಸುವ ರಮಾಭಾಯಿಯವರು ಹಾಸ್ಟೆಲ್ ಆರ್ಥಿಕ ಸಮಸ್ಯೆಯಲ್ಲಿದ್ದನ್ನು ಕಂಡು ತಮ್ಮ ಚಿನ್ನಾಭರಣಗಳನ್ನು ಮಾರಿ ಸಹಾಯ ಮಾಡಿದ್ದು ಕೂಡ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ಅಧ್ಯಾಯವಾಗಿ ಉಳಿದಿದೆ.

ಹೀಗೆ, ಸಾಮಾಜಿಕ ಸಮಾನತೆಗಾಗಿ, ಘನತೆಗಾಗಿ ದಲಿತರು ಮತ್ತು ಇತರ ಶೋಷಿತ ವರ್ಗ ಹೋರಾಡಿದ್ದಕ್ಕೆ ದೀರ್ಘ ಇತಿಹಾಸವಿದೆ. ಇದನ್ನು ಮಾನದಂಡವಾಗಿರಿಸಿಕೊಂಡೇ ಸಂವಿಧಾನದಲ್ಲಿ ಮೀಸಲಾತಿಯನ್ನು ಶಾಸನಬದ್ಧಗೊಳಿಸಿದ್ದು. ಮೀಸಲಾತಿ ಕೇವಲ ಆರ್ಥಿಕ ಸಮಾನತೆಯನ್ನು ಸರಿಪಡಿಸುವ ವಿಧಾನವಾಗಿರಲಿಲ್ಲ.

ಶತಶತಮಾನಗಳಿಂದ ಅನುಭವಿಸಿದ್ದ ಹಿಂಸೆ, ದೌರ್ಜನ್ಯ, ಶೋಷಣೆಯನ್ನು ತಡೆಯಲು ಮತ್ತು ಸರಿಪಡಿಸುವುದಕ್ಕೋಸ್ಕರ, ಎಲ್ಲ ಸಮುದಾಯಗಳಿಗೆ ಪ್ರತಿನಿಧಿತ್ವವನ್ನು ನೀಡಲು ಮಾಡಿದ ವ್ಯವಸ್ಥೆ ಅದಾಗಿತ್ತು.

ಇದರ ಹೊರತಾಗಿಯೂ ಇಂದಿಗೂ ಶೋಷಿತ ಸಮುದಾಯಗಳಿಗೆ ಅವರಿಗೆ ಸಿಕ್ಕಬೇಕಿದ್ದ ಪ್ರತಿನಿಧಿತ್ವ ದೊರಕಿಲ್ಲ ಎಂಬುದು ಅಂಕಿಅಂಶಗಳಲ್ಲೇ ಅಡಕವಾಗಿದೆ. ಸಣ್ಣ ಪುಟ್ಟ ಸರ್ಕಾರಿ ಕೆಲಸಗಳು ಮತ್ತು ಶಿಕ್ಷಣದಲ್ಲಿ ಒಂದಷ್ಟು ಪ್ರಗತಿಯನ್ನು ಸಾಧಿಸಲು ಶೋಷಿತ ಸಮುದಾಯಗಳಿಗೆ ಸಾಧ್ಯವಾಗಿರುವ ಸಮಯದಲ್ಲಿ, ಮೇಲ್ಜಾತಿಗಳು ಅದರ ವಿರುದ್ಧ ಬಂಡಾಯ ಎದ್ದಿರುವುದು ಪ್ರಜಾಪ್ರಭುತ್ವದ ಮತ್ತು ಈ ದೇಶವನ್ನು ಕಟ್ಟಿ ಬೆಳೆಸಲು ಪ್ರಯತ್ನಿಸಿದ ಧೀಮಂತರಿಗೆ ಮಾಡುವ ಅವಮಾನವಲ್ಲದೇ ಮತ್ತೇನು?

ಇವತ್ತು ಮೇಲ್ಜಾತಿಯ ಮುಖಂಡರು, ಆ ಜಾತಿಗಳ ಮಠಾಧೀಶರುಗಳು ತಮ್ಮ ಸಮುದಾಯದ ಜನರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಯಾವ ಶಿಕ್ಷಣ? ವ್ಯವಹಾರಕ್ಕಾಗಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು, ತಮ್ಮ ಜಾತಿಯ ಮಕ್ಕಳಿಗೆ ಹಾಸ್ಟೆಲ್‌ಗಳನ್ನು ತೆರೆದು ನೀಡುವ ಸೌಲಭ್ಯಗಳು ಮಾತ್ರವಲ್ಲ ಆ ಶಿಕ್ಷಣ. ದೇಶದ ಭವಿಷ್ಯಕ್ಕಾಗಿ ಎಲ್ಲ ಸಮುದಾಯಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಒಂದೇ ಮಟ್ಟಕ್ಕೆ ತರಬೇಕಾದ ಜವಾಬ್ದಾರಿಯ ಶಿಕ್ಷಣ ಅದಾಗಬೇಕಿದೆ. ಶತಮಾನಗಳಿಂದ ಸಾಮಾಜಿಕವಾಗಿ ತಮಗೆ ಸಿಕ್ಕಿರುವ ಸವಲತ್ತುಗಳನ್ನು ನೆನಪಿಸಿಕೊಂಡು, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕ ಸಮಾನತೆಯ ಕಡೆಗೆ ಕೊಂಡೊಯ್ಯಬೇಕಾದ ಅಗತ್ಯದ ಬಗ್ಗೆ ತಮ್ಮ ಸಮುದಾಯದ ಜನರನ್ನು ಸೆನ್ಸಿಟಿವ್ ಮಾಡುವುದಕ್ಕೆ, ತಮ್ಮ ಆಧ್ಯಾತ್ಮವನ್ನು ಈ ಮಠಾಧೀಶರು ಬಳಸಿಕೊಳ್ಳಬೇಕಿತ್ತು. ಆದರೆ ಸ್ವಜಾತಿ ಪ್ರೇಮವನ್ನು ಮೀರದ, ತಮಗಿಂತಲೂ ಶೋಷಿತರ ಪಾಲನ್ನು ಕಬಳಿಸಲು ನಡೆಸಿರುವ ಈ ಮೀಸಲಾತಿ ಹೋರಾಟವನ್ನು ಎಲ್ಲ ಪಾಜ್ಞರೂ ಒಕ್ಕೊರಲಿನಿಂದ ವಿರೋಧಿಸಬೇಕಿದೆ. ಸಾಮಾಜಿಕ ಸಮಾನತೆಯ ಕನಸು ನನಸಾದ ಮೇಲೆ ತಮ್ಮ ಸಮುದಾಯದ ಜನಗಳ ಆರ್ಥಿಕ ಸಮಾನತೆಗೆ ಇಂತಹ ಮೀಸಲಾತಿ ಕೇಳುವ ಸಮಯ ಮುಂದೆ ಬಂದೀತು! ಆದರೆ ಆ ಸಮಾನತೆಗೆ ಶ್ರಮಿಸಬೇಕಿರುವುದು ಹಿಂದಿನಿಂದ ಸವಲತ್ತು ಪಡೆದುಕೊಂಡು ಬಂದಿರುವ ಸಮುದಾಯಗಳೇ.


ಇದನ್ನೂ ಓದಿ: 2ಎ ಮೀಸಲಾತಿಗಾಗಿ ಬೃಹತ್ ರ‍್ಯಾಲಿ: ಪಂಚಮಸಾಲಿ ಸಮುದಾಯದ 10 ಲಕ್ಷ ಜನ ಸೇರುವ ನಿರೀಕ್ಷೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ ಎನ್
+ posts

LEAVE A REPLY

Please enter your comment!
Please enter your name here