ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಇಡೀ ವಿಶ್ವವೇ ತಲ್ಲಣಿಸಿದೆ. ರಾಜ್ಯ ಕೂಡ ಆರ್ಥಿಕ ಬಿಕ್ಕಟಿನಲ್ಲಿದೆ ಎಂದು ಸರ್ಕಾರ ಹೇಳಿಕೊಂಡಿದೆ . ಈ ನಡುವೆಯೇ ಕರ್ನಾಟಕ ಸರ್ಕಾರ ತನ್ನ 32 ಮಂತ್ರಿಗಳು ಮತ್ತು 28 ಸಂಸದರಿಗೆ ಕಾರು ಖರೀದಿಸಲು ನೀಡುತ್ತಿದ್ದ ಹಣವನ್ನು 23 ಲಕ್ಷಕ್ಕೆ ಏರಿಕೆ ಮಾಡಿದೆ.
ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (ಡಿಪಿಎಆರ್) ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಮಂತ್ರಿಗಳು ಮತ್ತು ಸಂಸದರಿಗೆ ವಾಹನಗಳನ್ನು ಖರೀದಿಸುವ ಭತ್ಯೆಯನ್ನು 22 ಲಕ್ಷ ರೂ.ಗಳಿಂದ 23 ಲಕ್ಷ ರೂ.ಗೆ ಹೆಚ್ಚಿಸಿದೆ.
ಕೊರೊನಾ ಸಂಕಷ್ಟದಿಂದ ಈಗಾಗಲೇ ರಾಜ್ಯದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಬೆಲೆ ಏರಿಕೆ ಎಂಬುದು ಜನ ಸಾಮಾನ್ಯರನ್ನು ಹಿಂಸಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಕಾರು ಖರೀದಿಯ ಮೊತ್ತವನ್ನು ಹೆಚ್ಚಿಸಿದೆ. ಕಾರು ಖರೀದಿಗೆ ಮೊತ್ತವನ್ನು ಹೆಚ್ಚು ಮಾಡಬೇಕೆಂದು ಸಂಸದರು, ಶಾಸಕರು ಒತ್ತಡ ಹೇರಿದ್ದ ಹಿನ್ನೆಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಚಗೊಳಿಸುವುದು ಯಾವಾಗ? ಬಿಜೆಪಿ ಉತ್ತರಿಸಲಿ: ಅಖಿಲೇಶ್
ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿವೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ’ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ವರ್ಷಕ್ಕೆ ನಿರ್ಧಾರವನ್ನು ಮುಂದೂಡಬೇಕಾಗಿತ್ತು, ಸರ್ಕಾರ ಈಗಾಗಲೇ 85,000 ಕೋಟಿ ರೂ.ಗಳ ಸಾಲವನ್ನು ತೆಗೆದುಕೊಂಡಿದೆ’ ಎಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೆಖಿಸಿದೆ.
ಇನ್ನು ನಿಯಮಗಳ ಪ್ರಕಾರ, ಮಂತ್ರಿಗಳು ಅಥವಾ ಚುನಾಯಿತ ಪ್ರತಿನಿಧಿಗಳು ತಮ್ಮ ಕಾರುಗಳನ್ನು ಒಂದು ಲಕ್ಷ ಕಿ.ಮೀ ಓಟವನ್ನು ಪೂರ್ಣಗೊಳಿಸಿದ ನಂತರ ಅಥವಾ ಖರೀದಿಸಿದ ಏಳು ವರ್ಷಗಳ ನಂತರ ಮಾತ್ರ ಬದಲಾಯಿಸಬಹುದು. ಅದರ ನಂತರ, ಈ ಕಾರನ್ನು ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ವಿಐಪಿಗಳು ಜಿಲ್ಲೆಗಳಿಗೆ ಭೇಟಿ ನೀಡುವಾಗ ಅವರ ಪ್ರಯಾಣದ ಅವಶ್ಯಕತೆಗಳಿಗಾಗಿ ಇವುಗಳನ್ನು ಬಳಸಲಾಗುತ್ತದೆ.
ಈ ವರ್ಷದ ಆರಂಭದಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದಾಜು 33 ಲಕ್ಷ ರೂ ಬೆಲೆಬಾಳುವ ಟೊಯೋಟಾ ಫಾರ್ಚೂನರ್ ಎಂಬ ಐಷಾರಾಮಿ ಕಾರು ಖರೀದಿಸಿದ್ದಾರೆ. ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ದೇವೇಗೌಡರು ರಾಜ್ಯಸಭಾ ಸದಸ್ಯರಾದ ನಂತರ ರಾಜ್ಯ ಸರ್ಕಾರ 60 ಲಕ್ಷ ರೂ. ಬೆಲೆಯ ವೋಲ್ವೋ ಹೊಸ ಕಾರನ್ನು ಖರೀದಿಸಿ ನೀಡಿದೆ.
ಸಾಂಕ್ರಾಮಿಕ ರೋಗ ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ನೆನೆಗುದಿಗೆ ಬಿದ್ದಿದೆ. ಇದರ ನೆಪದಲ್ಲಿ ರಾಜ್ಯದಲ್ಲಿ ಅನೇಕ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಕಡಿತಗೊಳಿಸಲಾಗಿದೆ. ಆದರೆ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.
ಇದನ್ನೂ ಓದಿ: ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರಜಾಪ್ರಭುತ್ವ ಇರಬೇಕು – ಸಿದ್ದರಾಮಯ್ಯ
