Homeಕರ್ನಾಟಕಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್‌ಐಆರ್!

ಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್‌ಐಆರ್!

ಅತ್ಯಾಚಾರ ಪ್ರಕರಣವೊಂದರಲ್ಲಿ ಮುರುಘಾ ಮಠದ ಅಧಿಕಾರಿಗಳ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದರು. ಈ ಕುರಿತು ತನಿಖಾ ವರದಿ ಮಾಡಿರುವ ಮಹಂತೇಶ್, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆಗಳ ಸಮೇತ ಒದಗಿಸಿದ್ದರು.

- Advertisement -
- Advertisement -

ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿಯ ಭಾವಚಿತ್ರವನ್ನು ಸುದ್ದಿಯೊಂದರಲ್ಲಿ ಬಳಸಿದ್ದಕ್ಕಾಗಿ ಖ್ಯಾತ ಮತ್ತು ಸಂವೇದನಾಶೀಲ ಪತ್ರಕರ್ತ ಮತ್ತು ದಿ ಫೈಲ್‌ನ ಮುಖ್ಯಸ್ಥ ಜಿ ಮಹಂತೇಶ್ ವಿರುದ್ಧ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ಮುರುಘಾ ಮಠದ ಅಧಿಕಾರಿಯೊಬ್ಬರ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದರು. ಈ ಕುರಿತು ತನಿಖಾ ವರದಿ ಮಾಡಿರುವ ಮಹಂತೇಶ್, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆಗಳ ಸಮೇತ ಒದಗಿಸಿದ್ದರು.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಮಹಂತೇಶ್, “ಈ ಪ್ರಕರಣದಲ್ಲಿ ಮುರುಘಾ ಶರಣರ ಭಾವಚಿತ್ರ ಬಳಸಿರುವುದಕ್ಕೆ ನಾನು ಸ್ಪಷ್ಟನೆ ನೀಡುತ್ತೇನೆ. ಈ ಅತ್ಯಾಚಾರ ಪ್ರಕರಣದಲ್ಲಿ ಮಠದ ಆಡಳಿತಾಧಿಕಾರಿ ಸೇರಿದಂತೆ ಇತರೆ 3 ಅಧಿಕಾರಿಗಳ ಹೆಸರಿದೆ. ಜೊತೆಗೆ ಈ ವಿಷಯ ಮುರುಘಾ ಶರಣರಿಗೆ ಗೊತ್ತಿದೆ ಎಂದು ಅತ್ಯಾಚಾರ ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ. ಒಂದು ಮಠದ ಉನ್ನತ ಅಧಿಕಾರಿ ಮಠಾಧೀಶರೇ ಆಗಿರುತ್ತಾರೆ. ಹಾಗಾಗಿ ಸಾಂಕೇತಿಕವಾಗಿ ಮುರುಘಾ ಶರಣರ ಭಾವಚಿತ್ರವನ್ನು ಬಳಸಿದ್ದೇನೆ. ಇಷ್ಟಕ್ಕೆ ಮಠದವರು ನನ್ನ ವಿರುದ್ಧ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ” ಎಂದು ಹೇಳಿದರು.

ಮಹಾಂತೇಶ್ ವಿರುದ್ಧ ದಾಖಲಾಗಿರುವ ಎಫ್‌ಐಆರ್

ಇನ್ನು ಈ ಪ್ರಕರಣ ದಾಖಲಾದ ನಂತರ, ಮುರುಘಾ ಶರಣರು ಪತ್ರಿಕಾ ಘೋಷ್ಠಿ ನಡೆಸಿ, “ಮುರುಘಾ ಮಠವನ್ನು ರಕ್ತಸಂಬಂಧಗಳಿಂದ ಮುಕ್ತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ 10 ಅಧಿಕಾರಿಗಳಿಂದ ರಾಜೀನಾಮೆ ಪಡೆಯಲಾಗಿದೆ” ಎಂದು ಹೇಳಿದ್ದರು. ಈ ಏಕಮುಖ ಪತ್ರಿಕಾ ಗೋಷ್ಠಿಯಲ್ಲಿ ಶರಣರು ಬಹುತೇಕ ಗೊಂದಲಗಳನ್ನು ಉಳಿಸಿದ್ದಾರೆ ಎಂದು ಮತ್ತೊಂದು ವರದಿ ಮಾಡಿದ್ದೆ. ಜೊತೆಗೆ, ಇತ್ತೀಚೆಗೆ ಮಠದ ಆಸ್ತಿ ಮತ್ತು ಹಣ ದುರುಪಯೋಗ ಆಗಿದೆ ಎಂದು ಶರಣರಿಗೆ ಕೋರ್ಟ್ ನೋಟಿಸ್ ನೀಡಿತ್ತು. ಅದನ್ನೂ ವರದಿ ಮಾಡಿದ್ದೆ. ಇದಕ್ಕೆ ನೊಂದುಕೊಂಡ ಮಠ, ನನ್ನನ್ನು ನಿಗೂಢ ವ್ಯಕ್ತಿ ಎಂದು ಕರೆದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಮಹಂತೇಶ್ ವಿವರಿಸಿದರು.

 

ಮಠ ಹೊರಡಿಸಿರುವ ಪತ್ರಿಕಾ ಹೇಳಿಕೆ

ನಾನು ಮಾಡಿರುವ ಪ್ರತಿ ವರದಿಗೂ ದಾಖಲೆಗಳಿವೆ. ಹಾಗಾಗಿ ಮಠದ ಈ ಕ್ರಮದ ವಿರುದ್ಧ ದೆಹಲಿಯಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಲಿಖಿತ ದೂರು ನೀಡಿದ್ದೇನೆ. ಬೆಂಗಳೂರಿನಲ್ಲಿರುವ ಪತ್ರಕರ್ತರ ಸಂಘಕ್ಕೂ ದೂರು ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: 1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

ಘಟನೆಯ ಹಿನ್ನೆಲೆ ಏನು?

ವರದಿ- 1

ಫೆಬ್ರವರಿ 6ರಂದು ಮಹಂತೇಶ್, “ಅತ್ಯಾಚಾರ ಆರೋಪ; ಮುರುಘಾ ಶರಣರ ಸೋದರನಿಗೆ ಜಾಮೀನು ನೀಡಲು ಕೋರ್ಟ್ ನಕಾರ” ಎನ್ನುವ ವರದಿ ಮಾಡಿದ್ದರು. 32 ವರ್ಷದ ಉಪನ್ಯಾಸಕಿಯೊಬ್ಬರನ್ನು ಮುರುಘಾ ಶರಣರ ಪೂರ್ವಾಶ್ರಮದ ಖಾಸಾ ಸಹೋದರ ಮತ್ತು ಮಠದ ಸಿಇಒ (ಆಡಳಿತಾಧಿಕಾರಿ) ಎಂ.ಜಿ ದೊರೆಸ್ವಾಮಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ (ಈಗ ಈ ಎಫ್‌ಐಆರ್ ಅನ್ನು ಯಾರಿಗೂ ಕಾಣದಂತೆ ವೆಬ್‌ಸೈಟ್‌ನಿಂದ ಮರೆಮಾಚಲಾಗಿದೆ. ಇದು ಕಾನೂನು ಬಾಹಿರ). ಹಾಗಾಗಿ ದೊರೆಸ್ವಾಮಿಯವರು ಜಾಮೀನಿಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ ಎಂದು ಮಹಂತೇಶ್ ವರದಿ ಮಾಡಿದ್ದರು. ಇದರಲ್ಲಿ ಜಾಮೀನು ನಿರಾಕರಣೆ ಮಾಡಿರುವ ದಾಖಲೆ ಮತ್ತು ಸಂತ್ರಸ್ತ ಮಹಿಳೆ ನೀಡಿರುವ ದೂರಿನ ದಾಖಲೆಯನ್ನೂ ಒದಗಿಸಿದ್ದರು.

ಅದರಲ್ಲಿ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಮಠದ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ ಪರಮಶಿವಯ್ಯ, ಮಠದ ಕಾನೂನು ಸಲಹೆಗಾರರಾದ ಎನ್‌.ಗಂಗಾಧರ್ ಮತ್ತು ಸ್ಥಳೀಯ ಜಂಗಮ ಸಮಾಜದ ಅದ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಅವರ ಹೆಸರುಗಳು ಉಲ್ಲೇಖವಾಗಿದೆ. ಸಂತ್ರಸ್ತೆಗೆ ಜೀವ ಬೆದರಿಕೆ ನೀಡಿದ ಆರೋಪ ಈ ಮೂರು ಜನರ ಮೇಲಿದೆ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಜೊತೆಗೆ ದೂರಿನ ಕೊನೆಯಲ್ಲಿ ಈ ಘಟನೆಯನ್ನು ಮುರುಘಾ ಶರಣರ ಗಮನಕ್ಕೂ ತಂದಿರುತ್ತೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಈ ವರದಿಯ ವಿರುದ್ಧ ಮಹಂತೇಶ್‌ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಕಾರಣ, ಇದರಲ್ಲಿ ಶರಣರ ಭಾವಚಿತ್ರ ಬಳಸಲಾಗಿದೆ ಎಂಬುದೇ ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ- 2

ಫೆಬ್ರವರಿ 16 ರಂದು, “ಸೋದರ ದೊರೆಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ; ಕಡೆಗೂ ಬಾಯ್ಬಿಟ್ಟ ಶರಣರು” ಎಂದು ಮತ್ತೊಂದು ವರದಿ ಮಾಡಿದ್ದರು. ಇದರಲ್ಲಿ, ಶರಣರು ಫೆ. 15 ರಂದು ಮಠದಲ್ಲಿ ನಡೆಸಿದ ತುರ್ತು ಪತ್ರಿಕಾ ಗೋಷ್ಠಿಯ ಬಗ್ಗೆ ಮಹಂತೇಶ್‌ ಬರೆದಿದ್ದಾರೆ. ಕೇವಲ 4 ನಿಮಿಷಗಳ ಪತ್ರಿಕಾ ಗೋಷ್ಠಿಯಲ್ಲಿ ಶರಣರು, “ಮಠವನ್ನು ರಕ್ತಸಂಬಂಧದಿಂದ ಮುಕ್ತಗೊಳಿಸಲು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಗೌರವ ಮತ್ತು ಘನತೆಯನ್ನು ಕಾಪಾಡುವ ಸಲುವಾಗಿ 10 ಅಧಿಕಾರಿಗಳಿಂದ ರಾಜೀನಾಮೆ ಪಡೆಯಲಾಗಿದೆ” ಎಂದು ಹೇಳಿದ್ದರು.

ಮುಂದುವರಿದು, ಈ ಮಠ ಒಂದು ಐತಿಹಾಸಿಕ ಮಠವಾಗಿ ಬೆಳೆದು ನಿಂತಿದೆ. ಒಂದು ಸಂಸ್ಥೆ ಎಂದಮೇಲೆ ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ. ಅವರಲ್ಲಿ ಭಿನ್ನತೆಯೂ ಇರುತ್ತದೆ. ಯಾರು ತಮ್ಮ ಮಿತಿಮೀರಿ ವರ್ತಿಸುತ್ತಾರೋ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈಗಾಗಲೇ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಿದ ಶರಣರು ಪತ್ರಿಕಾಗೋ‍ಷ್ಠಿಯನ್ನು ಮುಗಿಸಿದ್ದರು ಎಂಬುದಾಗಿ ಮಹಂತೇಶ್ ವರದಿಯಲ್ಲಿ ಹೇಳಿದ್ದಾರೆ. ಶರಣರ ಪತ್ರಿಕಾ ಗೋಷ್ಠಿಯ ನಂತರವೂ ಕೇಳದೇ ಉಳಿದಿದ್ದ ಕೆಲವು ಪ್ರಶ್ನೆಗಳನ್ನೂ ಸಹ ಮಹಂತೇಶ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಶರಣರ ಕೌಟುಂಬಿಕ ವಿವರದಿಂದ ಹಿಡಿದು, ಪ್ರಸ್ತುತ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ಒದಗಿಸಿದ್ದಾರೆ. ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ- 3

ಫೆಬ್ರವರಿ 24 ರಂದು, “ಹಣ-ಆಸ್ತಿ ದುರುಪಯೋಗ ಆರೋಪ; ಮುರುಘಾ ಶರಣರಿಗೆ ಹೈಕೋರ್ಟ್ ತುರ್ತು ನೋಟಿಸ್” ಎನ್ನುವ ಮತ್ತೊಂದು ವರದಿಯನ್ನು ಮಹಂತೇಶ್ ಮಾಡಿದ್ದರು. ಈ ವರದಿಯಲ್ಲಿ, “ಮಠದ ಆಸ್ತಿ-ಹಣವನ್ನು ಮಠಾಧೀಶರಾದ ಮುರುಘಾ ಶರಣರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರುದಾರರೊಬ್ಬರು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಶರಣರು ಮಠದ ಸಂಪ್ರದಾಯ ಹಾಗೂ ಧಾರ್ಮಿಕ ಕ್ರಿಯೆಗಳ ಅನೂಚಾನ ಪಾಲನೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು” ಎಂದು ಮಹಂತೇಶ್ ದಾಖಲೆ ಸಮೇತ ತಿಳಿಸಿದ್ದರು.

ಈ ಮೇಲಿನ ಮೂರೂ ವರದಿಗಳು ಮಠದ ಮತ್ತು ಶರಣರ ವಿರುದ್ಧ ಇರುವುದರಿಂದ ಮಹಂತೇಶ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಂತೇಶ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಆದಿತ್ಯನಾಥ್ ಮತ್ತು ರಾಹುಲ್ ಗಾಂಧಿ ಇಬ್ಬರದೂ ಒಂದೇ ಭಾವನೆ: ಪಿಣರಾಯಿ ವಿಜಯನ್ ವಾಗ್ದಾಳಿ

ಪತ್ರಕರ್ತ ದಿನೇಶ್ ಕುಮಾರ್ ಅವರು, “ಪತ್ರಕರ್ತ ಜಿ.ಮಹಂತೇಶ್ ಅವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕಳೆದ ಎರಡು ದಶಕಗಳಿಂದ ಮಹಂತೇಶ್ ಹಲವು ಪತ್ರಿಕೆ, ವಾಹಿನಿಗಳಲ್ಲಿ ಕೆಲಸ ಮಾಡಿದವರು. ‘ದಿ ಫೈಲ್’ ಎಂಬ ನ್ಯೂಸ್ ಪೋರ್ಟಲ್ ಮೂಲಕ ತನಿಖಾ ಪತ್ರಿಕೋದ್ಯಮದ ಹೊಸ ರೂಪವನ್ನು ಬಿಡಿಸಿಟ್ಟವರು. ಮಹಂತೇಶ್ ಏನನ್ನೇ ಬರೆದರೂ ದಾಖಲೆ ಇಟ್ಟುಕೊಂಡೇ, ಜವಾಬ್ದಾರಿಯುತವಾಗಿಯೇ, ಬರೆಯುತ್ತಾರೆ. ದಿ ಫೈಲ್ ಕೋವಿಡ್ ಕಾಲದ ನೂರೆಂಟು ಹಗರಣಗಳನ್ನು ಬಯಲಿಗೆಳೆದಿದ್ದನ್ನು ನಾವು ಗಮನಿಸಿದ್ದೇವೆ. ದಿ ಫೈಲ್ ವರದಿಗಳು ವಿಧಾನಮಂಡಲ ಅಧಿವೇಶದಲ್ಲೂ ಸದ್ದು ಮಾಡಿದವು. ಈಗ ಮುರುಘಾ ಮಠದ ಶರಣರ ಪೂರ್ವಾಶ್ರಮದ ಸೋದರ ಮತ್ತು ಮಠದ ಅಧಿಕಾರಿ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧದ ವರದಿಯಲ್ಲಿ ಶರಣರ ಫೊಟೋ ಬಳಸಿದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇದು ನ್ಯಾಯೋಚಿತವಲ್ಲ. ಶರಣರನ್ನು ಅಪಾರವಾಗಿ ಗೌರವಿಸುವ ನನ್ನಂಥವರಿಗೆ ಇದು ಆಘಾತಕಾರಿ ವಿಷಯ. ನಿಷ್ಠುರ ಪತ್ರಿಕಾವೃತ್ತಿ ನಡೆಸುವವರ ಮೇಲೆ ಪೊಲೀಸರ ಮೂಲಕ ಕೇಸು ದಾಖಲಿಸಿ ಅವರ ಧ್ವನಿ ಹತ್ತಿಕ್ಕುತ್ತ ಹೋದರೆ, ನಾವು ಸಮಾಜದ ಧ್ವನಿಯನ್ನೇ ಕಿತ್ತುಕೊಂಡಂತಾಗುತ್ತದೆ. ಈ ದುರಿತ ಕಾಲದಲ್ಲಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಬಡವರ ಪರವಾಗಿ ಬಡಿದಾಡುವ ಒಂದೊಂದು ಧ್ವನಿಯೂ ಮುಖ್ಯ. ಯಾವುದನ್ನೂ ನಾವು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಶರಣರಿಗೆ ನಿಕಟವಾಗಿರುವವರು ಕೂಡಲೇ ಅವರೊಂದಿಗೆ ಮಾತನಾಡಿ ಇದನ್ನೆಲ್ಲ ನಿಲ್ಲಿಸಲು ಆಗ್ರಹಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯ ಮುಖಂಡರಾದ ರವಿಕೃಷ್ಣ ರೆಡ್ಡಿಯವರು, “ತಮ್ಮ (ಮುರುಘಾ ಮಠ) ಸಂಸ್ಥೆಯ ಮಾಜಿ ಸಿಬ್ಬಂದಿ ಮೂಲಕ ನೀಡಿರುವ ದೂರನ್ನು ಹಿಂಪಡೆಯಲು ತಾವು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಮಾಣಿಕ ಪತ್ರಕರ್ತರ ಧ್ವನಿ ಅಡಗಿಸುವ ಕೆಲಸ ತಮ್ಮ ಸಂಸ್ಥೆಯ ಯಾರಿಂದಲೂ ಆಗಲು ನ್ಯಾಯಪಕ್ಷಪಾತಿಗಳಾದ ತಾವು ಬಿಡಬಾರದು ಎಂದು ತಮ್ಮಲ್ಲಿ ವಿನಮ್ರತೆಯಿಂದ ಕೋರುತ್ತೇನೆ. ಶ್ರೀಮಠದ ಮತ್ತು ತಮ್ಮ ಜನಪರ ಕಾಳಜಿಯ ಬಗ್ಗೆ ಅಪಾರ ಗೌರವ ಇರುವ ನಮ್ಮಂತಹವರಿಗೆ ತಮ್ಮ ಸಂಸ್ಥೆಯ ಕೆಲವರ ಕೃತ್ಯಗಳಿಂದಾಗಿ ಟೀಕೆ, ಧರಣಿ, ಪ್ರತಿಭಟನೆ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗಿ ಬರುವಂತಹ ಪರಿಸ್ಥಿತಿ ಸೃಷ್ಟಿಸಬಾರದಾಗಿ ಕೈಮುಗಿದು ವಿನಂತಿಸುತ್ತೇನೆ” ಎಂದು ಎಫ್‌ಐಆರ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಜೊತೆಗೆ ಇನ್ನೂ ಹತ್ತಾರು ಜನ ಪತ್ರಕರ್ತ ಮಹಂತೇಶ್ ಪರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಹಂತೇಶ್ ಅವರ ಮೇಲೆ ಮಠ ತೆಗೆದುಕೊಂಡಿರುವ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೆ

ಒಬ್ಬ ಪ್ರಾಮಾಣಿಕ ಪತ್ರಕರ್ತನ ದನಿಯನ್ನು ಅಡಗಿಸಲು ಪ್ರಯತ್ನಿಸುವುದು ನಿಜಕ್ಕೂ ಖಂಡನೀಯ. ಹಾಗಾಗಿ ಪ್ರಜ್ಞಾವಂತರು ಇದರ ವಿರುದ್ಧ ಮಾತನಾಡಲೇ ಬೇಕು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಸಾಂಕ್ರಾಮಿಕದಂತೆ ಹರಡುವುದರಲ್ಲಿ ಸಂದೇಹವಿಲ್ಲ.


ಇದನ್ನೂ ಓದಿ: ಏನಿವು ಮೂರು ಕೃಷಿ ಕಾಯಿದೆಗಳು – ಮರು ಓದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...