ಕೋಮು ಗಲಭೆ ಬಿಟ್ಟು ಚಪ್ಪಲಿ ಅಂಗಡಿ ಹಾಕಿದ ಅಶೋಕ್: ಗುಜರಾತಿನ ಈ ಗೆಳೆಯರು ಇಂದಿನ ಭಾರತಕ್ಕೆ ಮಾದರಿಯಾಗಬಲ್ಲರೆ?

ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಅನ್ಸಾರಿ

ಅಹಮದಾಬಾದ್ ನಲ್ಲಿ ಅಶೋಕ್ ಪರ್ಮಾರ್ ಎಂಬುವವರು ‘ಏಕತಾ ಚಪ್ಪಲ್ ಘರ್’ ಎಂಬ ಚಪ್ಪಲಿ ಶೂ ಅಂಗಡಿ ಆರಂಭಿಸಿದ್ದಾರೆ. ಅದನ್ನು ಕುತುಬುದ್ದೀನ್ ಅನ್ಸಾರಿ ಎಂಬುವವರು ಉದ್ಘಾಟಿಸಿದ್ದಾರೆ. ಆ ಇಬ್ಬರು ಗೆಳೆಯರು ಅಂಗಡಿಯ ಮುಂದೆ ನಿಂತು ತೆಗೆಸಿಕೊಂಡ ಫೋಟೊ ಎಲ್ಲಾ ಕಡೆ ವೈರಲ್ ಆಗಿದೆ. ಲಕ್ಷಾಂತರ ಜನ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಏಕೆ? ಯಾರಿವರು? ಇವರ ಹಿನ್ನೆಲೆ ಏನು?

ಅದು 2002ರ ಕಾಲ. ಸರಿಯಾಗಿ 17 ವರ್ಷಗಳ ಹಿಂದೆ ಗುಜರಾತ್ ನಲ್ಲಿ ಕೋಮುಗಲಭೆಗಳು ಉತ್ತುಂಗಕ್ಕೇರಿದ್ದವು. ಗೋಧ್ರಾ ರೈಲು ದುರಂತಕ್ಕೆ ಸೇಡು ತೀರಿಸಬೇಕೆಂದು ಒಂದು ಸಮುದಾಯದವರು ಮತ್ತೊಂದು ಸಮುದಾಯದವರನ್ನು ಹುಡಕಿ ಕೊಲ್ಲುತ್ತಿದ್ದ ಸಮಯ. ವೃತ್ತಿಯಲ್ಲಿ ಟೈಲರ್ ಆದ ಕುತುಬುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ನರೋಡಾ ಪಟಿಯಾ ಪ್ರದೇಶದಲ್ಲಿ ಗಲಭೆ ಉತ್ತುಂಗದಲ್ಲಿದ್ದಾಗ, ನರೋಲ್-ನರೋಡಾ ರಸ್ತೆಯಲ್ಲಿರುವ ತನ್ನ ಮನೆಯ ಹೊರಗೆ ಆತ ಸಹಾಯಕ್ಕಾಗಿ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಸಿಬ್ಬಂದಿಗೆ  ಕೈ ಮುಗಿದ ಮನವಿ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರ ರಕ್ತದ ಅಂಗಿಯ ಚಿತ್ರ ಮತ್ತು ಕಣ್ಣೀರು ತುಂಬಿದ ಕಣ್ಣುಗಳು ಗುಜರಾತ್ ಗಲಭೆಯ ಸಂತ್ರಸ್ತರನ್ನು ಪ್ರತಿನಿಧಿಸುವ ಚಿತ್ರವಾಯಿತು.

ಅದೇ ಸಂದರ್ಭದಲ್ಲಿ ಬಲಗೈಯ್ಯಲ್ಲೊಂದು ಕಬ್ಬಿಣದ ರಾಡ್, ತಲೆಗೆ ಕೇಸರಿ ಬಟ್ಟೆ ಕಟ್ಟಿ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅಟ್ಟಹಾಸ ಮೆರೆಯುತ್ತಿರುವ ಹಿಂದೂ ಸಮುದಾಯಕ್ಕೆ ಸೇರಿದ ಅಶೋಕ್ ಪರ್ಮಾರ್ ಅಲಿಯಾಸ್ ಅಶೋಕ್ ಮೋಚಿಯ ಫೋಟೊ ಕೂಡ ಅಂದಿನ ದೌರ್ಜನ್ಯದ ಸಂಕೇತವಾಗಿತ್ತು.

ಆದರ ಗಲಭೆಗಳು ನಿಂತು ಬಹಳ ಕಾಲವಾದ ನಂತರ ಅವರಿಬ್ಬರನ್ನು ಮಾತನಾಡಿಸಿ ಅವರನ್ನು ಒಂದೇ ವೇದಿಕೆಗೆ ತರುವ ಮೂಲಕ ಕೋಮು ಸೌಹಾರ್ದತೆ ಸಾರಲು ಕೇರಳದ ಸಿಪಿಎಂ ಪಕ್ಷ ಪ್ರಯತ್ನಿಸಿತ್ತು ಮತ್ತು ಅದಕ್ಕೆ ಯಶ ಸಿಕ್ಕಿತು ಕೂಡ. ಅಶೋಕ್ ಪರ್ಮಾರ್ ರನ್ನು ಮಾತನಾಡಿಸಿ ಈ ರೀತಿ ಕೋಮುದ್ವೇಷ ಸಾಧಿಸಿ ದಾಳಿ ಮಾಡುವುದು ತಪ್ಪಲ್ಲವೇ? ಇದರಿಂದ ಸಮಾಜಕ್ಕಾಗುವ ಅಪಾಯಗಳನ್ನು ತಿಳಿಹೇಳಲಾಯಿತು. ಆತನಿಗೆ ತನ್ನ ತಪ್ಪಿನ ಮನವರಿಕೆಯಾಗಿ ಬಹಿರಂಗ ಕ್ಷಮೆ ಕೇಳಿದ್ದ. ಮುಂದೆಂದೂ ಕೋಮುಗಲಭೆಗಳಲ್ಲಿ ಭಾಗವಹಿಸದೇ ಸಾಮಾನ್ಯ ಜೀವನ ಸಾಗಿಸಲು ನಿರ್ಧರಿಸಿದ್ದ. ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗವಹಿಸಿ ಅಶೋಕ್ ಮೋಚಿ, ಅನ್ಸಾರಿಗೆ ಗುಲಾಬಿ ಹೂ ಕೊಡುವ ಮೂಲಕ ಭಾವೈಕ್ಯತೆ ಮೆರದಿದ್ದ.

ಅಶೋಕ್ ಪರ್ಮಾರ್ ಬಡವನಾಗಿದ್ದರಿಂದ ದೆಹಲಿಯ ಫುಟ್ ಪಾತ್ ಗಳಲ್ಲಿ ಶೂ, ಚಪ್ಪಲಿ ಹೊಲೆಯುತ್ತಿದ್ದ ಮತ್ತು ಮಾರುತ್ತಿದ್ದ. ತನ್ನ ಜೀವನವನ್ನು ಮತ್ತಷ್ಟು ತಹಬದಿಗೆ ತರುವುದಕ್ಕಾಗಿ ಈಗ ಅಹಮದಾಬಾದ್ ನಲ್ಲಿ ಹೊಸ ಚಪ್ಪಲಿ ಅಂಗಡಿ ಹಾಕಿದ್ದಾನೆ. ಇದಕ್ಕಾಗಿ ಆತನಿಗೆ ಕೇರಳದ ಸಿಪಿಎಂ ಪಕ್ಷವು ಆರಂಭಿಕ ಬಂಡವಾಳದ ಹಣಕಾಸು ಸಹಾಯ ಮಾಡಿದೆ. ಅದಕ್ಕೆ ‘ಏಕತಾ ಚಪ್ಪಲ್ ಘರ್’ ಎಂಬ ಸೌಹಾರ್ದ ಸೂಚಿಸುವ ಹೆಸರು ಸಹ ಇಟ್ಟಿದ್ದಾನೆ. ಜೊತೆಗೆ ತನ್ನ ಗೆಳೆಯ ಕುತುಬುದ್ದೀನ್ ಅನ್ಸಾರಿರವರಿಂದಲೇ ಅದರ ಉದ್ಘಾಟನೆ ಮಾಡಿಸುವ ಮೂಲಕ ತನ್ನ ಹಿಂದಿನ ತಪ್ಪುಗಳಿಗೆ ಒಂದು ರೀತಿಯ ಪ್ರಾಯಶ್ಚಿತ ಮಾಡಿಕೊಂಡಿದ್ದಾನೆ ಎಂದು ಎಲ್ಲೆಡೆ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಅಶೋಕ್ ಪರ್ಮಾರ್ ರವರ ಹೊಸ ಅಂಗಡಿ ಉದ್ಘಾಟನೆಯ ಗೌರವಾನ್ವಿತ ಅತಿಥಿಯಾಗಿದ್ದ ಕುತುಬುದ್ದೀನ್ ಅನ್ಸಾರಿ ಗಲಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರು. ಅಲ್ಲಿಯೂ ಅವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಶೋಕ್ ಪರ್ಮಾರ್ ಮೋಚಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿರುವ ಕುತುಬುದ್ದೀನ್ ಅನ್ಸಾರಿ, “ನಾವು ಕಾಲಕಾಲಕ್ಕೆ ಭೇಟಿಯಾಗುತ್ತಲೇ ಇರುತ್ತೇವೆ. ಅವರು (ಅಶೋಕ್) ಅವರು ತಮ್ಮ ಅಂಗಡಿಯನ್ನು ನಾನು ಉದ್ಘಾಟಿಸಬೇಕೆಂದು ಕೇಳಿದರು ಮತ್ತು ನಾನು ಒಪ್ಪಿಕೊಂಡೆ. ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ನಾನು ಅವನನ್ನು ಚೆನ್ನಾಗಿ ಇರಲು ಬಯಸುತ್ತೇನೆ ಮತ್ತು ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿದೆ.

“ಇದು ಹಿಂದೂ ವರ್ಣ ವ್ಯವಸ್ಥೆಯಾಗಿದ್ದು, ನನ್ನನ್ನು ಚಮ್ಮಾರನಾಗಿ ಸಿಲುಕಿಕೊಳ್ಳುತ್ತಲೇ ಇದೆ. ಅವರು ನಮಗೆ ಮುಂದುವರಿಯಲು ಬಿಡುವುದಿಲ್ಲ” ಎಂದಿರುವ ಅಶೋಕ್ ಪರ್ಮಾರ್ ಮೋಚಿ, ಉನಾದಲ್ಲಿ ದಲಿತರನ್ನು ಸಾರ್ವಜನಿಕವಾಗಿ ಥಳಿಸಿದ ನಂತರ ತಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಡಲು 2017 ರಲ್ಲಿ ಗುಜರಾತ್‌ನ ದಲಿತ ಆಜಾದಿ ಕೂಚ್‌ಗೆ ಸೇರಿದ್ದರು. ತನ್ನ ಅಂಗಡಿಯ ಉದ್ಘಾಟನೆಯಲ್ಲಿ ತನ್ನ ಗೆಳೆಯ ಅನ್ಸಾರಿ ಟೇಪು ಕತ್ತರಿಸುವುದನ್ನು ನೋಡಿದ ಮೋಚಿ ಭಾವುಕಗೊಂಡಿದ್ದಾರೆ.

ಒಟ್ಟಿನಲ್ಲಿ ಗುಜರಾತ್ ಗಲಭೆಯ ಸಮಯದಲ್ಲಿ ಎರಡು ವಿರುದ್ಧ ಧ್ರುವಗಳನ್ನು ಪ್ರತಿನಿಧಿಸಿದ್ದ ಇಬ್ಬರೂ ವ್ಯಕ್ತಿಗಳು ವಾಸ್ತವವನ್ನು ಅರ್ಥ ಮಾಡಿಕೊಂಡು ಸೌಹಾರ್ದತೆ ಮೆರೆದಿದ್ದಾರೆ. ಅಲ್ಲದೇ ಕೇವಲ ಭಾವನಾತ್ಮಕ ವಿಚಾರದಲ್ಲಿ ಜನರು ಆವೇಶಗೊಳಗಾಗದೆ ತಮ್ಮ ಬದುಕನ್ನು ಸುಧಾರಿಸುವ ಜೀವನೋಪಾಯದ ಕಡೆ ಚಲಿಸಬೇಕೆಂಬುದನ್ನು ಸಹ ಈ ಚಪ್ಪಲಿ ಅಂಗಡಿ ತೋರಿಸಿದೆ. ಇದು ಇಂದು ಇಡೀ ಭಾರತ ಅರ್ಥ ಮಾಡಿಕೊಳ್ಳಬೇಕಾದ ಪಾಠವಾಗಿದೆ. ಧರ್ಮ-ಧರ್ಮಗಳ ನಡುವಿನ ಕಂದರಗಳನ್ನು ಮುಚ್ಚಿಹಾಕಿ ಭಾರತದ ಎಲ್ಲಾ ಜನರು ತಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವುದರ ಜೊತೆಗೆ ದೇಶದ ಐಕ್ಯತೆ, ಸೌಹರ್ದತೆಗೆ ಶ್ರಮಿಸಬೇಕಿದೆ.

ಕೊನೆಯಲ್ಲಿ ಈ ಗೆಳೆಯರು ಹೀಗೆ ಬದಲಾಗಲು, ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಕೇರಳ ಸಿಪಿಎಂ ಪಕ್ಷವನ್ನು ಮನಃಪೂರ್ವಕವಾಗಿ ಅಭಿನಂದಿಸೋಣ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

3 COMMENTS

 1. ಸೌಹಾರ್ದ ಳ್ಳೆಯದು.
  ಆದರೆ ಸಿಪಿಐದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
  ಹಿಂದೂ ಮಾತ್ರ ಗಲಭೆಕೋರ
  ಮುಸ್ಲಿಮರು ಸಂತ್ರಸ್ತರು !
  ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
  ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
  ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

 2. ಸೌಹಾರ್ದ ಳ್ಳೆಯದು.
  ಆದರೆ ಸಿಪಿಎಂದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
  ಹಿಂದೂ ಮಾತ್ರ ಗಲಭೆಕೋರ
  ಮುಸ್ಲಿಮರು ಸಂತ್ರಸ್ತರು !
  ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
  ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
  ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

LEAVE A REPLY

Please enter your comment!
Please enter your name here