Homeಕರ್ನಾಟಕಕರ್ನಾಟಕದಲ್ಲಿಯೂ ಚುನಾವಣೆ; ಈ ಉಪಚುನಾವಣೆಗಳಲ್ಲಿಯೂ ಬಿಜೆಪಿಯದ್ದೇ ಮೇಲುಗೈ?

ಕರ್ನಾಟಕದಲ್ಲಿಯೂ ಚುನಾವಣೆ; ಈ ಉಪಚುನಾವಣೆಗಳಲ್ಲಿಯೂ ಬಿಜೆಪಿಯದ್ದೇ ಮೇಲುಗೈ?

- Advertisement -
- Advertisement -

ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾರ್ಚ್ 27ರಿಂದ ಹಲವು ಸುತ್ತಿನ ಮತದಾನ ನಡೆಯಲಿದೆ. ಇದರ ಜೊತೆ ಜೊತೆಗೆ ಒಂದು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೂ ರಾಜ್ಯದಲ್ಲಿ ಉಪಚುನಾವಣೆ ನಿಗದಿಯಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಉಪಚುನಾವಣೆ ನಡೆಯಲಿದೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾಣೆ ನಡೆಯಬೇಕಿತ್ತು ಆದರೆ ಕಾರಣಾಂತರಗಳಿದಂದ ಅದು ಮುಂದೂಡಲ್ಪಟ್ಟಿದೆ. ಹಾಗಾಗಿ ಈಗಾಗಲೆ ಮೂರೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾಲ್ಲಿದೆ.

PC : Oneindia

ಕೇಂದ್ರ ಸಚಿವರಾಗಿದ್ದ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದರಿಂದ ಬೆಳಗಾವಿ ಕ್ಷೇತ್ರವು ತೆರವುಗೊಂಡಿದ್ದರೆ, ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅವರ ನಿಧನದಿಂದಾಗಿ ತೆರವುಗೊಂಡಿದೆ. ಆದರೆ ಮಸ್ಕಿ ವಿಧಾನಸಭಾ ಕ್ಷೇತ್ರವು ಇಲ್ಲಿನ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದರಿಂದ ಖಾಲಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ನಡೆದಿದೆ ಎಂದು ಆರೋಪಿಸಲಾಗಿದ್ದ ಆಪರೇಷನ್ ಕಮಲದಿಂದಾಗಿ ಅವರು ಪಕ್ಷಾಂತರಗೊಂಡಿದ್ದರು.

ಬೆಳಗಾವಿ ಕ್ಷೇತ್ರದಿಂದ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆಗೆ ಪ್ರವೇಶಿಸಿದ್ದ ಸುರೇಶ್ ಅಂಗಡಿ, ಆಮೇಲೆ ನಡೆದ ಒಟ್ಟು ಮೂರು ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದು ಬಂದಿದ್ದಾರೆ. 2019 ರಲ್ಲಿ ಸುರೇಶ್ ಅಂಗಡಿ ಅವರು ಕಾಂಗ್ರೆಸ್‌ನ ವಿ.ಎಸ್. ಸಾಧುನವರ ಅವರ ವಿರುದ್ಧ ಸುಮಾರು ನಾಲ್ಕು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಚುನಾವಣೆಯಲ್ಲಿ ಸುರೇಶ್ ಅಂಗಡಿಗೆ 63% ಮತಗಳನ್ನು ಲಭಿಸಿದ್ದವು.

ಬಿಜೆಪಿಯ ಈ ಭದ್ರಕೋಟೆಯಲ್ಲಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳು ಹದಿನೈದಕ್ಕೂ ಹೆಚ್ಚು ಮಂದಿಯಿದ್ದರು ಎಂದು ಹೇಳಲಾಗಿತ್ತು. ಚುನಾವಣೆ ಘೋಷಣೆಯಾಗಿ ಎರಡು ವಾರಗಳ ನಂತರ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸುರೇಶ್‌ ಅಂಗಡಿ ಅವರು ಪತ್ನಿ ಮಂಗಳಾ ಅಂಗಡಿ ಅವರ ಹೆಸರನ್ನು ಘೋಷಿಸಿದೆ. ಬಿಜೆಪಿ ಹೈಕಮಾಂಡ್‌ಗೆ ಆರು ಮಂದಿಯ ಹೆಸರುಗಳನ್ನು ರಾಜ್ಯ ಬಿಜೆಪಿ ಕಳುಹಿಸಿಕೊಟ್ಟಿತ್ತು ಎನ್ನಲಾಗಿತ್ತು. ಇವರಲ್ಲಿ ರಮೇಶ್ ಕತ್ತಿ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಮಗ ಸೂರ್ಯಕಾಂತ್ ನಾಗಮಾರಪಳ್ಳಿ ಸೇರಿದಂತೆ ಮಂಗಳಾ ಅಂಗಡಿ ಅವರ ಹೆಸರೂ ಇತ್ತು ಎನ್ನಲಾಗಿದೆ. ಕೊನೆಯ ಕ್ಷಣದವರೆಗೂ ಇವರಲ್ಲಿ ಯಾರಿಗೂ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೆಂದು ಹೇಳಲಾಗುತ್ತಿತ್ತಾದರೂ, ಕೊನೆಗೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

PC : Prajapragathi

ಕಾಂಗ್ರೆಸ್ ಪಕ್ಷವು ಈ ಬಾರಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದು, ಅದರಂತೆ ಅವರನ್ನೇ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಸತೀಶ್ ಜಾರಕಿಹೊಳಿ ಅವರು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ. ಅವರ ಆಸಕ್ತಿ ರಾಜ್ಯ ರಾಜಕಾರಣದಲ್ಲಿದ್ದು ಚುನಾವಣೆಗೆ ಹಿಂದೇಟು ಹಾಕುತ್ತಿದ್ದರು ಎನ್ನಲಾಗಿತ್ತು. ಇದೀಗ ಕಾಂಗ್ರೆಸ್‌ನ ಸರ್ವ ಸಮ್ಮತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ಉಳಿದಂತೆ ಜೆಡಿಎಸ್‌ ಕ್ಷೇತ್ರದಲ್ಲಿ ಯಾವುದೆ ಅಭ್ಯರ್ಥಿಯನ್ನು ಹಾಕಿಲ್ಲ.

ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ಅನಕಂಪದ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಇಳಿದಿದ್ದು, ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಇಳಿದಿದೆ. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ. ನಾರಾಯಣರಾವ್ 17 ಸಾವಿರ ಮತಗಳ ಅಂತರದಲ್ಲಿ ಬಿಜೆಪಿಯ ಮಲ್ಲಿಕಾರ್ಜುನ ಅವರನ್ನು ಸೋಲಿಸಿದ್ದರು.

ಮಲ್ಲಿಕಾರ್ಜುನ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದುಕೊಂಡಿದ್ದರು. ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಯ್ಯದ್ ಯಾಸ್ರಾಬ್ ಅಲಿ ಖಾದ್ರಿ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಶರಣು ಸಲಗಾರ್ ಅವರಿಗೆ ಬಿ ಪಾರಂ ನೀಡಿದೆ. ವಿಶೇಷವೇನೆಂದರೆ ಇಲ್ಲಿಯು ಸೂರ್ಯಕಾಂತ್ ನಾಗಮಾರಪಳ್ಳಿ ಟಿಕೆಟ್ ಆಕಾಂಕ್ಷಿಯಾಗಿದ್ದರು!.

2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದುಕೊಂಡಿದ್ದ ಪ್ರತಾಪ್ ಗೌಡ ಪಾಟಿಲ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಆಪರೇಷನ್ ಕಮಲದ ಮೂಲಕ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಸಹಾಯ ಮಾಡಿದ್ದರು. ಅದರಂತೆ ಆಪರೇಷನ್ ಕಮಲ ನಡೆದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದೆ.

PC : Pragativahini

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಎರಡು ವರ್ಷ ಕಳೆದರೂ ಮಸ್ಕಿಯಲ್ಲಿ ಉಪಚುನಾವಣೆ ನಡೆದಿರಲಿಲ್ಲ. ಏಕೆಂದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟಿಲ್ ಅವರ ವಿರದ್ದ, ಅವರ ಪ್ರತಿಸ್ಪರ್ಧಿಯಾಗಿದ್ದ ಬಸನಗೌಡ ತುರುವಿಹಾಳ (ಅಂದು ಬಿಜೆಪಿ ಪಕ್ಷದಲ್ಲಿದ್ದರು) ಅವರು ಹೈಕೋರ್ಟ್‌ನಲ್ಲಿ ಚುನವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ಆಪರೇಷನ್ ಕಮಲದಿಂದ ತೆರವುಗೊಂಡಿದ್ದ ಉಳಿದೆಲ್ಲಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದರೂ ಮಸ್ಕಿಯಲ್ಲಿ ಚುನವಣೆ ನಡೆದಿರಲಿಲ್ಲ. ಇದೀಗ ಬಸನಗೌಡ ತುರುವಿಹಾಳ ಅವರು ತಮ್ಮ ಅರ್ಜಿಯನ್ನು ವಾಪಸ್ಸು ಪಡೆದಿದ್ದಾರೆ. 2018ರಲ್ಲಿ ಬಸನಗೌಡ ತುರುವಿಹಾಳ ಅವರ ವಿರುದ್ಧ ಪ್ರತಾಪ್ ಗೌಡ ಕೇವಲ 213 ಮತಗಳ ಅಂತರದಿಂದ ಗೆದ್ದಿದ್ದರು.

ಆಪರೇಷನ್ ಕಮಲಕ್ಕೊಳಗಾಗಿ ಬಿಜೆಪಿ ಸೇರಿಕೊಂಡಿದ್ದ ಪ್ರತಾಪಗೌಡ ಅವರನ್ನು ನಿರೀಕ್ಷೆಯಂತೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ವಿಶೇಷವೇನೆಂದರೆ 2018ರಲ್ಲಿ ಅವರ ವಿರುದ್ಧ ಬಿಜೆಪಿಯಿಂದ ನಿಂತು ಸೋಲುಂಡಿದ್ದ ಬಸನಗೌಡ ತುರುವಿಹಾಳ ಅವರು ಇದೀಗ ಕಾಂಗ್ರೆಸ್ ಸೇರಿದ್ದು, ಪಕ್ಷವು ಅವರಿಗೆ ಟಿಕೆಟ್ ನೀಡಿದೆ. ಒಟ್ಟಿನಲ್ಲಿ ಅಭ್ಯರ್ಥಿಗಳು ಅವರೆ ಆಗಿದ್ದು, ಪಕ್ಷಗಳಷ್ಟೇ ಬದಲಾಗಿದೆ. ಈ ಬದಲಾವಣೆಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಕಾದು ನೊಡಬೇಕಾಗಿದೆ.

ಈ ಕ್ಷೇತ್ರದಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. 2018ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ 8.33% ಮತಗಳನ್ನಷ್ಟೇ ಜೆಡಿಎಸ್ ಪಡೆದಿತ್ತು.

ಮೂರು ಕ್ಷೇತ್ರಳಿಗೆ ಮಾರ್ಚ್ 30 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಎಪ್ರಿಲ್ 17 ಕ್ಕೆ ಚುನಾವಣೆ ನಡೆಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಿಲಿದೆ.


ಇದನ್ನೂ ಓದಿ: ಆರ್‌ಎಸ್‌ಎಸ್ ಅನ್ನು ‘ಸಂಘ ಪರಿವಾರ’ ಎಂದು ಕರೆಯುವುದು ಸರಿಯಲ್ಲ- ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....