Homeಮುಖಪುಟಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು.

- Advertisement -
- Advertisement -

ಸುದ್ದಿ ಕಾಲಮ್ಮಿನ್ಯಾಗ ಸುದ್ದಿನ ಸುದ್ದಿ ಆಗೋ ಕಾಲ ಇದು. ಈ ಕೊರೊನಾ ಅನ್ನೋ ದುಸ್ಯಾ ನಮ್ಮ ಮ್ಯಾಲ ಕಡಕೊಂಡು ಬಿದ್ದಾಗಿಂದಾ ನಾವು ಕಿರಿಕಿರಿಯೊಳಗ ಇದ್ದೇವಿ. ಅಕ್ಕಿ- ಬ್ಯಾಳಿ- ಹಾಲು- ತರಕಾರಿ ಸಿಗತದೋ ಇಲ್ಲೋ ಅಂತ ಚಿಂತಿ ಆಗೇದ.

ಅದಕ್ಕಿಂತ ದೊಡ್ಡ ಚಿಂತಿ ಅಂದರ ಮಾಹಿತಿಯದ್ದು. ಬ್ಯಾರೆ ಕೊರತೆ ಹೆಂಗಾದರೂ ತಡಕೊಳ್ಳಬಹುದು. ಮಾಹಿತಿ ಕೊರತೆ ಹೆಂಗ ತಡಕೋತೀರಿ? ಒಂದು ವೇಳೆ ಮಾಹಿತಿ ಸಿಗದೇ ಇದ್ದರೂ ಪರವಾಗಿಲ್ಲ, ತಪ್ಪು ಮಾಹಿತಿ ಸಿಗಬಾರದು. ಅದು ನಮ್ಮನ್ನ ಅಂಧಕಾರದ ಕೂಪಕ್ಕ ತಳ್ಳತದ. ನಮ್ಮವರನ್ನ ದ್ವೇಷ ಮಾಡೋ ಹಂಗ ಮಾಡತದ. ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ.

ಈಗ ನಮಗ ಅನೇಕ ಮೂಲಗಳಿಂದ ಮಾಹಿತಿ ಬರಲಿಕ್ಕೆ ಹತ್ತೇದ. ಅದರಾಗ ಮುಖ್ಯವಾದ್ದದವು ಎರಡು- ಸರಕಾರ ಹಾಗೂ ಮಾಧ್ಯಮ. ಅವು ಎರಡೂ ಸರಿಯಾಗಿಲ್ಲ. ಜನಸಮೂಹ ಹೆದರಿಕೊಂಡು ಕೂತಾಗ ಅವರ ಹೆದರಿಕೆ ಕಡಿಮಿ ಮಾಡೋದು ಬಿಟ್ಟು ಹೆಚ್ಚು ಮಾಡಲಿಕ್ಕೆ ಹತ್ಯಾರು. ಇದಕ್ಕ ನಮ್ಮ ಕಡೆ ಹೆದರಿದವರ ಮ್ಯಾಲೆ ಕಪ್ಪಿ ಒಗದಂಗ ಅಂತ ಅಂತಾರ.

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು. ಮಹಾಮಹಿಮ ಪಂತ ಪ್ರಧಾನರು ನಿಮ್ಮ ಮನಿಯೊಳಗ ನಿಂತು ಕೊಂಡು ಚಪ್ಪಾಳೆ ಹೊಡೀರಿ ಅಂದರ ನಮ್ಮ ಮಂದಿ ಬೀದಿಗೆ ಬಂದು ಶಂಖಾ ಹೊಡದರು. ನನ್ನ ಮಾತು ಮಂದಿ ತಪ್ಪು ತಿಳಕೋಬಹುದು ಅಂತ ವಿಚಾರ ಮಾಡದೇ ಅವರು ಇಡೀ ದೇಶಾ ಮೂರು ವಾರ ಕೀಲಿ – ಕಿಟಕ್ ಮಾಡತೇವಿ ಅಂತ ಘೋಷಣೆ ಮಾಡಿದರು. ಅದರಿಂದ ಸಾವಿರಾರು ಜನ ದುಡಕೊಂಡು ತಿನ್ನೋರು ಊರು ಬಿಟ್ಟು ರಾಜ್ಯದಿಂದ ರಾಜ್ಯಕ್ಕ ನಡಕೊಂಡು ಹೋದರು. ನಾವು ಮಾಡಿದ್ದು ನಿಮಗ ಅರ್ಥ ಆಗಲಿಲ್ಲ. ಆದರ ನಾನು ಅದನ್ನ ಮಾಡಬೇಕಿತ್ತು. ಸಾರಿ ಅಂತ ಅಂದರು.

ಎರಡು ಸರೆ ಠೀವಿಯೊಳಗ, ಒಂದು ಸರೆ ರೇಡಿಯೋದಾಗ ಮೂರು ತಾಸು ಮಾತಾಡಿದರೂ ಸಹ, ನೀವು ಹಿಂಗ ಮಾಡರಿ, ಹಿಂಗಿಂಗ ಮಾಡಬ್ಯಾಡರಿ ಅಂತ ಹೇಳಿದರೋ ಸಹಾ, ನಾವು ಏನು ಮಾಡಲಿಕ್ಕೆ ಹತ್ತೇನಿ, ಏನು ಮಾಡಲಿಕ್ಕೆ ನಮ್ಮ ಕಡೆ ಆಗವಲ್ಲತು ಅಂತ ಅವರು ಹೇಳಲಿಲ್ಲ. ರಾಷ್ಟ್ರ ಮಟ್ಟದ ಒಂದು ಸಂಶೋಧನೆ ಕೇಂದ್ರ ಮಾಡತೇವಿ, ಅಂತರಾಷ್ಟ್ರೀಯ ತಜ್ಞರೊಡನೆ ನಮ್ಮ ದೇಶದ ವಿಜ್ಞಾನಿಗಳು ಕೂಡಿ ಏನೋ ಪ್ರಯೋಗ ಮಾಡಬೇಕಂತಾರ, ಅಥವಾ ದೇಶಾದ್ಯಂತ ಇಷ್ಟು ಆಸ್ಪತ್ರೆ ತಗದೇವಿ, ಇಷ್ಟು ಉಪಕರಣ ಅದಾವು, ಇನ್ನಷ್ಟು ಬೇಕಾಗ್ಯಾವು, ಅದಕ್ಕ ಇಷ್ಟು ರೊಕ್ಕ ತಗದ ಇಟ್ಟೇವಿ ಅಂತ ಹೇಳಲಿಲ್ಲ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ


ಅಷ್ಟಾದರೂ ನಾವು ಕಣ್ಣು – ಕಿವಿ ಮುಚಿಗೊಂಡು ಅವರಿಗೆ ಚಪ್ಪಾಳಿ ಹೊಡಿದಿವಿ. ಡಾಕ್ಟ್ರು, ಪೋಲಿಸರು, ಮಾಧ್ಯಮದವರು, ಅವಶ್ಯಕ ಸಾಮಗ್ರಿ ತಂದು ಕೋಡೋರಿಗೆ ಧನ್ಯವಾದ ಹೇಳಲಿಕ್ಕೆ ಚಪ್ಪಾಳಿ ಹೊಡೀರಿ ಅಂತ ಅವರು ಹೇಳಿದರೂ ನಾವು ಹಿಂಗ ಹೇಳ್ಯಾರಲ್ಲಾ ಅಂತ ಹೇಳಿ ಅವರಿಗೆ ಚಪ್ಪಾಳಿ ಹೊಡಿದೆವಿ. ಕೋರೋನಾ ಮುರ್ದಾಬಾದ ಅಂದಿವಿ, ಇವರಿಗೆ ಜಿಂದಾಬಾದ ಅಂದಿವಿ.

janta curfew violation Jinpar Case Book Karna Chahiye GODI Media Ye Kyun Nahi Batate

Posted by Deepika Singh Rajawat on Wednesday, April 1, 2020

ದೇಶದಾಗ ಒಬ್ಬರು ಆರೋಗ್ಯ ಮಂತ್ರಿ ಅದಾರು, ಅವರು ಕಾಲೇಜಿನ್ಯಾಗ ಡಾಕ್ಟರಿಕೆ ಓದ್ಯಾರು, ಅವರು ಕೊರೊನಾ ಸಂಬಂಧ ಏನು ಮಾಡಾಕ ಹತ್ಯಾರು ಅನ್ನೋದು ನಮಗ ಗೊತ್ತಿಲ್ಲ. ಲಾಕ್ ಡೌನ್ ಕೀಲಿ – ಕಿಟಕ್ ಮಾಡಿದಾಗ ಮಾತ್ರ ಅವರ ಮನೀಯವರ ಜೊತೆಗೆ ಅವರು ಚನ್ನೀಮಣಿ ಆಡಿದರೂ ಅಂತ ಮಾತ್ರ ಗೊತ್ತಾಗೇತಿ.

ಸರಕಾರದಿಂದಾ ಜನರಿಗೆ ಮಾಹಿತಿ ಹೆಂಗ ಬರಬೇಕು ಅನ್ನೋದಕ್ಕ ಇಂಗ್ಲಂಡಿನ್ಯಾಗ ಒಂದು ದೊಡ್ಡ ಆಂದೋಲನನ ಆಗಿ ಹೋತು. ಮಾರ್ಟಿನ ಕಟ್ಸ ಅಂತ ಹೇಳಿ ಒಬ್ಬ ಮನುಷಾ ಸರಕಾರ ಜನರಿಗೆ ಅರ್ಥವಾಗುವಂಥಾ ಭಾಷೆಯೊಳಗ ಮಾತಾಡಬೇಕು ಅಂತ ಹೇಳಿ ಹೋರಾಟ ಮಾಡಿದ. ಅವನ ಜೊತೆ ಅನೇಕರು ಸೇರಿಕೊಂಡರು. ಈಗ ಅಲ್ಲಿ ಸರಳ ಭಾಷಾ ಆಯೋಗ ಅಂತ ಒಂದು ಅದ. ಅದು ಸರಕಾರಿ ಆದೇಶಗಳಿಗೆ ಇದು ಸರಳ ಐತಿ, ಇದು ಇಲ್ಲಾ ಅಂತ ಪ್ರಮಾಣ ಪತ್ರ ಕೊಡತದ. ನಮ್ಮಲ್ಲಿ ಕಠಿಣ – ಅರ್ಥಹೀನ ಭಾಷಾ ಆಯೋಗ ಅಂತ ಮಾಡಬೇಕಾಗೇದ. ಸರಳ ಭಾಷೆ ಯೊಳಗ ಯಾವರ ಆದೇಶ ಇದ್ದರ ಅದು ಅಪವಾದ ಅನ್ನೋ ಹಂಗ ಆಗಿ ಹೋಗೇದ. ಅದರ ಬಗ್ಗೆ ಇನ್ನೊಮ್ಮೆ ನೋಡೋಣು.

ಇನ್ನ ಮಾಧ್ಯಮದವರು ʻಕೊರೋನಾ ಮಾರಿ: ಮೂರನೇ ಮಹಾಯುದ್ಧʼ ಅಂತ ಹೇಳಿ ಭೀತಿ ಹೆಚ್ಚು ಮಾಡಲಿಕ್ಕೆ ಹತ್ತಿ ಬಿಟ್ಟಾರ. ಸ್ಪೇನಿನ ಪ್ಲೇಗಿನ ಚಿತ್ರ ತೋರಿಸಿ ಸಮೂಹ ಸನ್ನಿ ಸೃಷ್ಟಸಲಿಕ್ಕೆ ಹತ್ತಿ ಬಿಟ್ಟಾರ. ಸಂಬಂಧ ಇರಲಾರದ ವಿಡಿಯೋ ತೋರಿಸಿ ನೀವು ಇವತ್ತ ನಿಮ್ಮ ಎಲ್‌ಐಸಿ ಪಾಲಿಸಿ ಸೆಟ್ಲ ಮಾಡೋ ಹಂಗ ಮಾಡಾಕ ಸುರು ಮಾಡ್ಯಾರ.

ʻಅವರು ಹೇಳಿ ಕೇಳಿ ಸುಳ್ಳುಬುರುಕರು, ಯಾವಾಗೋ ಹಾದಿ ತಪ್ಪಿ ಬಿಟ್ಟಾರ. ಅವರನ್ನ ಸರಿ ಮಾಡಲಿಕ್ಕೆ ಬರಂಗಿಲ್ಲ ಅನ್ನೋ ಮಟ್ಟಿಗೆ ಹೋಗಿಬಿಟ್ಟಾರʼ ಅಂತ ಕೆಲವರ ಅಂಬೋಣ. ಆದರ ಇಂತಹದ್ದೇ ಮಾತನ್ನ ಪತ್ರಿಕೋದ್ಯಮದ ದಂತಕಥೆಯಾದ ಗಣೇಶ ಶಂಕರ ವಿದ್ಯಾರ್ಥಿ ಅವರಿಗೆ ಯಾರೋ ಹೇಳಿದಾಗ. ಇತರರು ಹಾಳಾಗಿದ್ದಾರೆಂದು ನಾವು ಸುಮ್ಮನೇ ಕೂಡುವುದು ಬೇಡ. ನಮ್ಮ ಕೈಲಾದದ್ದು ನಾವು ಮಾಡೋಣ. ಹಸಿವೆಯಾಗಿದೆ ಎಂದು ಖಾಲಿ ಒಲೆಯ ಮುಂದೆ ಕೂತರೆ ಹೇಗೆ? ಒಲೆ ಉರಿಸಬೇಡವೇ, ರೊಟ್ಟಿ ತಟ್ಟಬೇಡವೇ ಅಂತ ಹೇಳಿದ್ದರಂತ. ನಾವೆಲ್ಲಾ ಕತ್ತಲಿನ್ಯಾಗ ಜಾರಿ ಬೀಳತಿರೋ ಈ ಟೈಂನ್ಯಾಗ ಇಂಥಾ ಬೆಳಕಿನ ಕೋಲು ನಮಗ ಆಸರೆ ಯಾಗಲಿ.

ಗಣೇಶ ಶಂಕರ ವಿದ್ಯಾರ್ಥಿ

ಕರ್ನಾಟಕ ಮೂಲದವರಾದ ಸುಪ್ರಿಂ ಕೋರ್ಟು ಮಾಜಿ ನ್ಯಾಯಮೂರ್ತಿ ಎಮ್‌ಎನ್ ವೆಂಕಟಾಚಲಯ್ಯ ಅವರು ಅಮೇರಿಕಾದ ನ್ಯಾಯಮೂರ್ತಿಯಾಗಿದ್ದ ಲೂಯಿಸ ಬ್ರ‍್ಯಾಂಡಿಸ ಅವರ ಒಂದು ಮಾತನ್ನು ಉಚ್ಛರಿಸುತ್ತಾರೆ. ಅದೇನೆಂದರೆ ʻಸೂರ್ಯನ ಬೆಳಕು ಶ್ರೇಷ್ಠ ಸೋಂಕು ನಿರೋಧಕʼ. ತನ್ನ ಒಡಲಿನಲ್ಲಿ ಅನೇಕ ಅರ್ಥಗಳನ್ನು ಒಳಗೊಂಡ ಈ ಮಾತನ್ನು ನಾವು ಮರಿಯೋದು ಬ್ಯಾಡ, ಅಲ್ಲವೇ ಮನೋಲ್ಲಾಸಿನಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಖಾಲಿ ಮೆದುಳಿನ ಸುತ್ತ….
    ಕೀಲಿ-ಕಿಟಕ್ – ಲಾಕ್‌ಡೌನ್‌ಗೆ ಎಂತಹ ಅರ್ಥಪೂರ್ಣ ಪದ. ನಗೆನೂ ಉಕ್ಕಿ ಬರಾಕ್ ಹತ್ತೆöÊತಿ.
    ಸರ‍್ಯಾನ ಬೆಳಕಿನ ಮ್ಯಾಲನು ರ‍್ದಾರ. ಅದಕಿಂತ ಸಂಡೇ ಹಚ್ಚತಾರಲ್ಲ ಬೆಂಕಿ-ಬೆಳಕು, ಅದ ಬಾಳಾ ಶ್ರೇಷ್ಠ ಅಂತಾರ ನೋಡ್ರಪ…
    -ಮಲ್ಲಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...