ಮಲಯಾಳಂ ಸಿನಿಮಾ ರಂಗದಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ಮತ್ತು ಇತರ ದೌರ್ಜನ್ಯಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಪಡಿಸಿದ ಬಳಿಕ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾ ರಂಗದ ಕುರಿತು ಅಂತಹದ್ದೇ ವರದಿ ತಯಾರಿಸಬೇಕು ಎಂಬ ಒತ್ತಾಯಗಳು ಹೆಚ್ಚಾಗಿದೆ.
ಹೇಮಾ ಸಮಿತಿ ವರದಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ತಮಿಳು ನಟಿ ಕುಟ್ಟಿ ಪದ್ಮಿನಿ, ‘ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮಿತಿ ಮೀರಿದೆ’ ಎಂದಿದ್ದರು. ಇದೀಗ ತಮಿಳಿನ ಮತ್ತೊಬ್ಬರು ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು ಮಹಿಳೆಯರ ಸಮಸ್ಯೆಗಳ ಕುರಿತು ಮೌನ ಮುರಿಯುವಂತೆ ತನ್ನ ಸಹೋದ್ಯೋಗಿಗಳಿಗೆ ಆಗ್ರಹಿಸಿದ್ದಾರೆ.
ಹೇಮಾ ಸಮಿತಿಯ ವರದಿಯ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ ಎಂಬ ನಟ ರಜನಿಕಾಂತ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ರಾಧಿಕಾ “ಅವರು ಗೊತ್ತಿಲ್ಲ ಅಂದರೆ ಗೊತ್ತಿಲ್ಲ, ಅಷ್ಟೇ” ಎಂದಿದ್ದಾರೆ.
“ಸಿನಿಮಾ ರಂಗದ ಪುರುಷರೇ ನಿಮ್ಮ ಮೌನ ಸರಿಯಲ್ಲ. ನಾವ್ಯಾಕೆ ಮಾತನಾಡಬೇಕು? ಏನು ಮಾತನಾಡಬೇಕು? ಎಂದು ನಿಮಗನಿಸಿದ್ದರೆ, ನಾನು ಹೇಳುತ್ತೇನೆ ಇದು ಅಷ್ಟೊಂದು ಕಠಿಣ ವಿಷಯವಲ್ಲ. “ನಾನು ಮಹಿಳೆಯರ ಸುರಕ್ಷತೆಗೆ ಎಲ್ಲಾ ಸಹಕಾರ ನೀಡುತ್ತೇನೆ” ಎಂಬ ಒಂದು ಮಾತು ನೀವು ಹೇಳಿದರೆ ಸಾಕು, ಅದು ಸಂತ್ರಸ್ತ ಮಹಿಳೆಯರಿಗೆ ದೊಡ್ಡ ಸಾಂತ್ವನ ನೀಡುತ್ತದೆ, ಬಹುಶ ನಿಮಗೆ ಗೊತ್ತಿಲ್ಲ ಕಿರಿಯ ಕಲಾವಿದರು ಸೇರಿದಂತೆ” ಎಂದು ರಾಧಿಕಾ ಹೇಳಿದ್ದಾರೆ.
“ಈ ವ್ಯವಸ್ಥೆಯಲ್ಲಿ ಯಾವ ನಟಿಗೆ ಸಮಸ್ಯೆಯಾಗಿದೆ ಎಂದು ಎಲ್ಲಾ ನಟರಿಗೆ ಗೊತ್ತಿದೆ. ಕಲಾವಿದರು, ನಿರ್ದೇಶಕರಿಗೂ ಗೊತ್ತಿದೆ. ಈ ಬಗ್ಗೆ ಪುರುಷರು ಒಗ್ಗಟ್ಟಿನಿಂದ ಒಂದು ವಾಕ್ಯ ಹೇಳಿದರೆ, ಅದು ಎಲ್ಲಾ ಮಹಿಳೆಯರಿಗೆ ಆಶ್ವಾಸನೆ ನೀಡುತ್ತದೆ” ಎಂದು ರಾಧಿಕಾರ ತಿಳಿಸಿದ್ದಾರೆ.
ತಮಿಳು ಚಿತ್ರರಂಗದ ಅನೇಕ ನಟರು ರಾಜಕೀಯದಲ್ಲಿ ಆಕಾಂಕ್ಷೆಗಳನ್ನು ಹೊಂದಿದ್ದಾರೆ ಎಂದಿರುವ ರಾಧಿಕಾ ಅವರು “ನೀವೆಲ್ಲರೂ ಜನರ ಪರವಾಗಿ ನಿಂತು ಮಾತನಾಡಲು ಹಂಬಲಿಸುತ್ತಿದ್ದೀರಿ, ಅಲ್ಲವೇ? ನಿಮ್ಮ ಮಹಿಳಾ ಸಹೋದ್ಯೋಗಿಗಳ ಪರವಾಗಿ ನೀವು ಏಕೆ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಚಿತ್ರೋದ್ಯಮದಲ್ಲಿನ ಪರಿಸ್ಥಿತಿಯು ‘ತೋರಿಕೆಗೆ’ ಸುಧಾರಿಸಿದೆ ಎಂದಿರುವ ರಾಧಿಕಾ ಅವರು, “ಮೊದಲಿನಂತೆ ಸಮಸ್ಯೆಗಳಿಲ್ಲ ಎಂದು ನಿಮಗೆ ಅನಿಸುತ್ತದೆ. ಆದರೆ, ಪರಿಸ್ಥಿತಿ ಶೋಚನೀಯವಾಗಿದೆ. ವಿಶೇಷವಾಗಿ ನೃತ್ಯಗಾರರು ಮತ್ತು ಪಾತ್ರ ಕಲಾವಿದರದ್ದು”ಎಂದಿದ್ದಾರೆ.
“ನಿರ್ಮಾಪಕರು ಮಹಿಳಾ ಕಲಾವಿದರ ಬಗ್ಗೆ ಗಮನ ಹರಿಸಬೇಕು. ಅವರಿಗೆ ಕೆಟ್ಟ ಅನುಭವವಾದರೆ ಬಂದು ದೂರು ದಾಖಲಿಸಲು ಹೇಳಬೇಕು. ಒಂದೈದು ವರ್ಷಗಳ ಬಳಿಕ ತಡವಾಗಿ ದೂರು ಕೊಟ್ಟರೆ, ಇಷ್ಟು ವರ್ಷ ಏಕೆ ತಡ ಮಾಡಿದ್ರು, ಮೊದಲೇ ಏಕೆ ದೂರು ನೀಡಿಲ್ಲ? ಎಂಬ ಸಾಮಾನ್ಯ ಪ್ರಶ್ನೆಯನ್ನು ಪುರುಷರು ಕೇಳುತ್ತಾರೆ” ಎಂದು ರಾಧಿಕಾ ಹೇಳಿದ್ದಾರೆ.
“ಹೆಣ್ಣಿನ ನೋವು ಯಾರಿಗೆ ಅರ್ಥವಾಗುತ್ತದೆ? ಆ ಐದು ವರ್ಷಗಳಲ್ಲಿ ಅವರು ಅನುಭವಿಸಿದ ನೋವು, ಕುಟುಂಬ ನಡೆಸುವ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳುತಾರೆ? ಸಿನಿಮಾ ರಂಗ ಮಾತ್ರವಲ್ಲ, ಮನೆ ಕೆಲಸದವರು, ಐಟಿ ವೃತ್ತಿಪರರು ಅಥವಾ ಉನ್ನತ ಬಾಣಸಿಗರು ಸೇರಿದಂತೆ ಎಲ್ಲಾ ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಸುರಕ್ಷತೆಯನ್ನು ಹೊಂದಿರಬೇಕು” ಎಂದಿದ್ದಾರೆ.
“ಅನೇಕ ನಟರು ತಮ್ಮ ಮಾತುಗಳನ್ನು ತಪ್ಪಾಗಿ ಉಲ್ಲೇಖಿಸಬಹುದು ಅಥವಾ ಹೆಡ್‌ಲೈನ್‌ಗಾಗಿ ತಿರುಚಬಹುದು ಎಂಬ ಭಯದಿಂದ ಮಾಧ್ಯಮಗಳೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ” ಎಂದು ರಾಧಿಕಾ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮಲಯಾಳಂ ಸಿನಿಮಾ ರಂಗದ ಹೇಮಾ ಸಮಿತಿಯ ವರದಿ ಕುರಿತು ಮಾತನಾಡಿದ್ದ ರಾಧಿಕಾ ಅವರು, “ಕ್ಯಾರವ್ಯಾನ್‌ಗಳಲ್ಲಿ ಹಿಡನ್ ಕ್ಯಾಮರಾ ಇಟ್ಟು ಮಹಿಳಾ ಕಲಾವಿದರು ಬಟ್ಟೆ ಬದಲಾಯಿಸುವ ದೃಶ್ಯ ಸೆರೆ ಹಿಡಿಯುತ್ತಿದ್ದರು” ಎಂಬ ಮಲಯಾಳಂ ಸಿನಿಮಾ ಸೆಟ್‌ನ ಕಹಿ ಅನುಭ ಹಂಚಿಕೊಂಡಿದ್ದರು.
ಚಲನಚಿತ್ರ ಸೆಟ್‌ಗಳಲ್ಲಿ ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಪೋರೇಟ್ ಕಂಪನಿಗಳಂತೆ ಕಾನೂನು ಜಾರಿ ವೃತ್ತಿಪರರನ್ನು ಒಳಗೊಂಡಿರುವ ಸಮಿತಿ ರಚಿಸಬೇಕು. ಮಹಿಳೆಯರು ಅಸಹಾಯಕರಲ್ಲ, ಬಲಿಷ್ಠರು. ಅವರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ಒಗಿಸಬೇಕು ಎಂದು ರಾಧಿಕಾ ಆಗ್ರಹಿಸಿದ್ದಾರೆ.
ತಮಿಳು ಸಿನಿಮಾ ರಂಗದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾರೆ ಎಂಬ ವಿಷಯದಲ್ಲಿ ಮಿಶ್ರ ಅಭಿಪ್ರಾಯವಿದೆ. ಇತ್ತೀಚೆಗೆ ಹೇಮಾ ಸಮಿತಿಯ ವರದಿ ಕುರಿತು ಪ್ರತಿಕ್ರಿಯಿಸಿದ್ದ ನಟ ಜೀವ ಅವರು, “ತಮಿಳು ಇಂಡಸ್ಟ್ರಿಯಲ್ಲಿ ಆ ರೀತಿಯ ಸಮಸ್ಯೆಗಳಿಲ್ಲ, ಮಲಯಾಳಂನಲ್ಲಿ ಮಾತ್ರ ಇದೆ ಎಂದಿದ್ದರು. ಇದೇ ವೇಳೆ ತಮಿಳು ಚಿತ್ರರಂಗದ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಬೇಕು ಎಂದು ನಟ ವಿಶಾಲ್ ಹೇಳಿದ್ದರು.
ತಮಿಳು ಚಿತ್ರರಂಗದ ಸ್ಟಾರ್ ನಟ ರಜನಿಕಾಂತ್ ಅವರು ಹೇಮಾ ಸಮಿತಿ ವರದಿಯ ಬಗ್ಗೆ ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದರು.
ತಮ್ಮ ಕಿರುಕುಳದ ಅನುಭವಗಳ ಬಗ್ಗೆ ಧ್ವನಿಯೆತ್ತಿರುವ ಗಾಯಕಿ ಚಿನ್ಮಯಿ ಶ್ರೀಪಾದ ಅವರು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಸಾರ್ವಜನಿಕರಿಗೆ ತಿಳಿಸಲು. ಆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಹಲವಾರು ಮಹಿಳೆಯರಿಂದ ಕಿರುಕುಳದ ಆರೋಪ ಹೊತ್ತಿರುವ ಪ್ರಮುಖ ಗೀತರಚನೆಕಾರರು ಉದ್ಯಮದ ಪ್ರಬಲ ವ್ಯಕ್ತಿಗಳಿಂದ ರಕ್ಷಿಸಲ್ಪಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
Courtesy : indianexpress.com
ಇದನ್ನೂ ಓದಿ : ಹಿಂಸಾತ್ಮಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಸ್ವಘೋಷಿತ ಗೋರಕ್ಷಕ ರಾಕಿ ರಾಣಾ : ಕ್ರಮಕ್ಕೆ ಆಗ್ರಹ