Homeಕರ್ನಾಟಕಏಳು ವರ್ಷ ಕಳೆದರೂ ವೇಗ ಪಡೆದುಕೊಳ್ಳದ ಗೌರಿ ಹತ್ಯೆ ಪ್ರಕರಣದ ವಿಚಾರಣೆ; ನಾಲ್ವರು ಆರೋಪಿಗಳಿಗೆ ಜಾಮೀನು

ಏಳು ವರ್ಷ ಕಳೆದರೂ ವೇಗ ಪಡೆದುಕೊಳ್ಳದ ಗೌರಿ ಹತ್ಯೆ ಪ್ರಕರಣದ ವಿಚಾರಣೆ; ನಾಲ್ವರು ಆರೋಪಿಗಳಿಗೆ ಜಾಮೀನು

- Advertisement -
- Advertisement -

ಸಾಮಾಜಿಕ ಹೋರಾಟಗಾರ್ತಿ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ನಾಳೆಗೆ ಏಳು ವರ್ಷ ಕಳೆದು ಎಂಟನೇ ವರ್ಷ ಆರಂಭವಾಗುತ್ತದೆ. ಸದಾ ಸತ್ಯದ ಪರವಾಗಿದ್ದ, ದಮನಿತರ ಹಕ್ಕುಗಳಿಗಾಗಿ ತಮ್ಮ ಪತ್ರಿಕೆಯನ್ನು ಮೀಸಲಿಟ್ಟಿದ್ದ ಅವರ ಸಾವು ದೇಶದ ಹಲವಾರು ಜನರಿಗೆ ಆಘಾತ ಮೂಡಿಸಿದ್ದಂತೂ ಸತ್ಯ. ಆದರೆ, ಕೊಲೆಯಾಗಿ ಏಳು ವರ್ಷ ಕಳೆದರೂ ಈವರೆಗೆ ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎನ್ನುವ ಅಸಮಾಧಾನ ಬಹುತೇಕರದ್ದು.

ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ರಾಜರಾಜೇಶ್ವರಿನಗರದ ಅವರ ಮನೆಯ ಹೊರಗೆ ಗೌರಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಹತ್ಯೆಯನ್ನು ನಡೆಸಲು ಅಪರಿಚಿತ ಸಂಘಟನೆಯೊಂದು ಬಲಪಂಥೀಯ ಕಾರ್ಯಕರ್ತರನ್ನು ನೇಮಿಸಿಕೊಂಡಿದೆ ಎಂದು ಕಂಡುಹಿಡಿದಿದೆ. ಅದಕ್ಕೆ ತಕ್ಕನಾದ ಸಾಕಷ್ಟು ಪೂರಕ ಸಾಕ್ಷಿಗಳನ್ನೂ ತನ್ನ ಚಾರ್ಜ್‌ ಶೀಟ್‌ನಲ್ಲಿ ಸಲ್ಲಿಸಿದೆ.

ಕೋರ್ಟ್‌ ಕಲಾಪಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಅಸಮಾಧಾನಗೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅವರ ಬೆಂಬಲಿಗರು ‘ವಿಶೇಷ ತ್ವರಿತ ನ್ಯಾಯಾಲಯ’ ಸ್ಥಾಪಿಸಿ ವಿಚಾರಣೆ ನಡೆಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ.

ನಾಲ್ವರು ಆರೋಪಿಗಳಿಗೆ ಜಾಮೀನು!

ಗೌರಿ ಹತ್ಯೆ ಪ್ರಕರಣದ ವಿಚಾರಣೆ ಕಳೆದ ಏಳು ವರ್ಷಗಳಿಂದ ಸುದೀರ್ಘವಾಗಿ ನಡೆಯುತ್ತಿದೆಯಾದರೂ ವೇಗ ಪಡೆದುಕೊಂಡಿಲ್ಲ. ಆದರೆ, ಇದೀಗ ‘ಮಾನವ ಹಕ್ಕುಗಳ’ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಕೋರ್ಟ್‌ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

11ನೇ ಆರೋಪಿ ಮೋಹನ್ ನಾಯಕ್ ಅಲಿಯಾಸ್ ಸಂಪ, ಐದನೇ ಆರೋಪಿ ಅಮಿತ್ ರಾಮಚಂದ್ರ ದೇಗ್ವೆಕರ್ ಅಲಿಯಾಸ್ ಪ್ರದೀಪ್ ಮಹಾಜನ್, ಏಳನೇ ಆರೋಪಿ ಸುರೇಶ್ ಎಚ್‌.ಎಲ್. ಅಲಿಯಾಸ್ ಟೀಚರ್, 17ನೇ ಆರೋಪಿ ಕೆಟಿ ನವೀನ್ ಕುಮಾರ್ ಎಂಬುವವರಿಗೆ ಹೈಕೋರ್ಟ್‌ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್‌ ಕೂಡ ಈ ಆರೋಪಿಗಳ ಜಾಮೀನು ಆದೇಶವನ್ನು ಎತ್ತಿಹಿಡಿದಿದೆ.

ಆರನೇ ಆರೋಪಿ ಭರತ್ ಕುಮಾರ್, ಒಂಬತ್ತನೇ ಆರೋಪಿ ಸುಧನ್ವಾ ಗೊಂಡಾಲೆಕರ್, 13ನೇ ಆರೋಪಿ ಸುಜಿತ್ ಕುಮಾರ್ ಮತ್ತು 16ನೇ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಅವರ ಜಾಮೀನು ಅರ್ಜಿಗಳು ಹೈಕೋರ್ಟಿನಲ್ಲಿ ಬಾಕಿ ಉಳಿದಿವೆ.

ಇನ್ನು ಟ್ರಯಲ್ ಕೋರ್ಟಿನಲ್ಲಿ ಮೊದಲನೇ ಆರೋಪಿಯಾದ ಅಮೋಲ್ ಕಾಳೆ, 2ನೇ ಆರೋಪಿ ಪರಶುರಾಮ್ ವಾಗ್ಮೋರೆ ಮತ್ತು 3ನೇ ಆರೋಪಿ ಗಣೇಶ್‌ ಮಿಸ್ಕಿನ್ ಜಾಮೀನು ಅರ್ಜಿಗಳು ಬಾಕಿ ಉಳಿದಿವೆ. ಒಟ್ಟು 18 ಆರೋಪಿಗಳನ್ನು ಗೌರಿ ಹತ್ಯೆ ತನಿಖೆಗಾಗಿ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿತ್ತು.

2018 ರಲ್ಲಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದರೂ, ವಿಚಾರಣೆಯು ಇನ್ನೂ ಹೇಳಿಕೊಳ್ಳುವಂತ ಪ್ರಗತಿ ಸಾಧಿಸಿಲ್ಲ. 400ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ. ವಿಚಾರಣೆ ನಿಧಾನವಾಗಿರುವದರಿಂದ 137 ಸಾಕ್ಷಿಗಳನ್ನು ಮಾತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. 2018ರಲ್ಲಿ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿದ್ದರೂ ವಿಚಾರಣೆ ಆರಂಭವಾಗಿದ್ದು ಮಾರ್ಚ್ 2022ರ ಕೊನೆಯಲ್ಲಿ. ಅಂದಿನಿಂದ ಈವರೆಗೆ ಮೂವರು ನ್ಯಾಯಾಧೀಶರು ಬದಲಾಗಿದ್ದಾರೆ.

ವಿಚಾರಣೆ ವಿಳಂಬದಿಂದ ಬಗ್ಗೆ ಗೌರಿ ಕುಟುಂಬ ಮತ್ತು ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕೆಂಬ ಬೇಡಿಕೆಯನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಗಂಭಿರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. “2018 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ, ಆದರೆ, ತ್ವರಿತ ವಿಚಾರಣೆಯ ಬದಲಿಗೆ, ವಿಚಾರಣೆಯನ್ನು ಎಳೆಯಲಾಗುತ್ತಿದೆ. ಸರ್ಕಾರವು ವಿಚಾರಣೆಯನ್ನು ವೇಗಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಗೌರಿ ಸಹೋದರಿ ಕವಿತಾ ಹಲವು ಬಾರಿ ಅಸಮಾಧಾನ ಹೊರಹಾಕಿದ್ದಾರೆ.

ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯು ನಾಲ್ವರು ವಿಚಾರವಾದಿಗಳಾದ ಎಂಎಂ ಕಲ್ಬುರ್ಗಿ, ಗೋವಿಂದ್ ಪನ್ಸಾರೆ, ನರೇಂದ್ರ ಧಾಬೋಲ್ಕರ್ ಮತ್ತು ಗೌರಿ ಲಂಕೇಶ್ ಅವರ ಹತ್ಯೆಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ ಕಾರಣ ಈ ವಿಚಾರಣೆಯು ನಿರ್ಣಾಯಕವಾಗಿದೆ. ತನಿಖೆಯ ಆರಂಭಿಕ ದಿನಗಳಲ್ಲಿ, ಎಸ್‌ಐಟಿ ಲಂಕೇಶ್ ಮತ್ತು 2015 ರ ಆಗಸ್ಟ್ 30 ರಂದು ಕೊಲೆಯಾದ ಪ್ರೊಫೆಸರ್ ಕಲ್ಬುರ್ಗಿ ಅವರ ಕೊಲೆಗಳ ನಡುವೆ ಸಂಪರ್ಕವನ್ನು ಕಂಡುಹಿಡಿದಿತ್ತು.  ಗೌರಿ ಅವರ ಮನೆಯಿಂದ ವಶಪಡಿಸಿಕೊಂಡ ನಾಲ್ಕು ಬುಲೆಟ್ ಸ್ಲಾಗ್‌ಗಳು ಮತ್ತು ಕಾರ್ಟ್ರಿಡ್ಜ್‌ಗಳು ಕಲ್ಬುರ್ಗಿಯ ಸ್ಲಗ್ ಮತ್ತು ಕಾರ್ಟ್ರಿಡ್ಜ್‌ಗಳಿಗೆ ಹೊಂದಿಕೆಯಾಗಿದ್ದವು. ಫೊರೆನ್ಸಿಕ್ ಲ್ಯಾಬ್‌ ವರದಿಯು ಎರಡೂ ಗುಂಡುಗಳನ್ನು ಒಂದೇ ಬಂದೂಕಿನಿಂದ ಹಾರಿಸಿರುವುದನ್ನು ಬಹಿರಂಗಪಡಿಸಿತ್ತು.

ಮಹಾರಾಷ್ಟ್ರದ ಮತ್ತೊಬ್ಬ ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಸ್‌ಐಟಿ ಲಂಕೇಶ್ ಮತ್ತು ಪನ್ಸಾರೆ ಹತ್ಯೆಯಲ್ಲೂ ಇದೇ ಗನ್ ಬಳಸಿರುವುದು ಪತ್ತೆಯಾಗಿದೆ. ಆಗಸ್ಟ್ 20, 2013 ರಂದು ಹತ್ಯೆಯಾದ ಮಹಾರಾಷ್ಟ್ರ ಮೂಲದ ಮತ್ತೊಬ್ಬ ವಿಚಾರವಾದಿ ನರೇಂದ್ರ ಧಾಬೋಲ್ಕರ್ ಮತ್ತು ಗೌರಿ ಲಂಕೇಶ್ ಅವರ ಕೊಲೆಗಳ ನಡುವಿನ ಸಂಬಂಧವು ತನಿಖೆಯ ನಂತರದ ಹಂತಗಳಲ್ಲಿ ಹೊರಹೊಮ್ಮಿತು.

ಈ ಬಗ್ಗೆ ಗೌರಿ ಲಂಕೇಶ್ ಆಪ್ತರು ಹಾಗೂ ಸಾಮಾಜಿಕ ಚಿಂತಕರಾದ ಶಿವಸುಂದರ್ ಮಾತನಾಡಿ, “ಗೌರಿ ಲಂಕೇಶ್ ಹತ್ಯೆಯಾಗಿ ನಾಳೆಗೆ ಏಳು ವರ್ಷ. ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಸಿಂಗ್ ಮತ್ತು ಅನುಚೇತ್ ಅವರ ನೇತೃತ್ವದಲ್ಲಿ ರಚಿಸಿದ ಎಸ್‌ಐಟಿ ಶ್ರಮವಹಿಸಿ, ಜಾಣ್ಮೆ, ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿ 18 ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳೆಲ್ಲರೂ ಅತ್ಯಂತ ಕರ್ಮಠ ಹಾಗೂ ಭಯೋತ್ಪಾದಕ ಹಿಂದುತ್ವವಾದಿ ಸಂಘಟನೆಯಾದ ‘ಸನಾತನ ಸಂಸ್ಥೆ’ ಮತ್ತು ‘ಹಿಂದೂ ಜನಜಾಗೃತಿ ವೇದಿಕೆ’ಯಿಂದ ಪ್ರಭಾವಿತರೆಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಇದೇ ತಂಡವೇ ದೇಶದ ಪ್ರಖ್ಯಾತ ವಿಚಾರವಾದಿಗಳು ಮತ್ತು ಜನಪರ ಬುದ್ಧಿಜೀವಿಗಳಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಭೋಲ್ಕರ್ ಮತ್ತು ಪ್ರೊ. ಕಲಬುರ್ಗಿಯವರನ್ನು ಹತ್ಯೆ ಮಾಡಿ ರುವುದನ್ನು ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳು ಸ್ಪಷ್ಟಪಡಿಸಿವೆ” ಎಂದು ಹೇಳಿದರು.

“ಗೌರಿ ಹತ್ಯಾ ತನಿಖೆ ಮುಗಿದು 2018ರ ನವೆಂಬರ್‌ನಲ್ಲೇ ಚಾರ್ಜ್‌ಶೀಟ್ ದಾಖಲಿಸಿದರೂ 2022ರ ತನಕ ವಿಚಾರಣೆಯೇ ಪ್ರಾರಂಭವಾಗಲಿಲ್ಲ. ಚಾರ್ಜ್‌ಶೀಟ್ ಪ್ರಕಾರ ಪ್ರಕರಣದಲ್ಲಿ 400ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಕ್ಕೂ ಹೆಚ್ಚು ಪುರಾವೆಗಳಿವೆ. ಆದರೂ ವಿಚಾರಣೆ ಆಮೆಗತಿಯಲ್ಲಿ ನಡೆದಿರುವುದರಿಂದ ಈವರೆಗೆ ಕೇವಲ 137 ಸಾಕ್ಷಿಗಳ ವಿಚಾರಣೆಯಾಗಿದೆ. ವಿಚಾರಣೆ ತ್ವರಿತಗತಿಯಲ್ಲಿ ನಡೆದು ಶಿಕ್ಷೆಯಾಗಬೇಕೆಂಬ ಉದ್ದೇಶದಿಂದ ಪ್ರಾಸಿಕ್ಯೂಶನ್ ವಕೀಲ ಪ್ರಖ್ಯಾತ ಜನಪರ ಅಡ್ವೊಕೇಟ್ ಬಾಲನ್ ಅವರು ಅಷ್ಟು ಮುಖ್ಯವಲ್ಲದ ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ಕೈಬಿಡಲು ಸಿದ್ಧವೆಂದು ಕೋರ್ಟಿಗೆ ತಿಳಿಸಿದ್ದಾರೆ. ಆದರೂ ವಿಚಾರಣೆ ಮುಗಿಯಲು ಇನ್ನೂ ಸಾಕಷ್ಟು ವಿಳಂಬವಾಗುತ್ತದೆ ಎಂಬ ವಾದವನ್ನು ಮುಂದಿಟ್ಟು ಈಗಾಗಲೇ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.

ಇತ್ತೀಚೆಗಿನ ಪ್ರಮುಖ ಬೆಳವಣಿಗೆಗಳು ಕೆಳಗಿನಂತಿವೆ..

ಆರೋಪಿ ಮೋಹನ್ ನಾಯಕ್‌ಗೆ ಜಾಮೀನು: ಗೌರಿ ಲಂಕೇಶ್ ಹತ್ಯೆ ಪ್ರಕರಣದ 11 ಆರೋಪಿ ಎಂದು ಮೋಹನ್ ನಾಯಕ್ ಎನ್ ಅವರಿಗೆ ಕರ್ನಾಟಕ ಹೈಕೋರ್ಟ್ 2023 ರ ಡಿಸೆಂಬರ್ 09ರಂದು ಜಾಮೀನು ಮಂಜೂರು ಮಾಡಿತು.

ಪ್ರಕರಣದಲ್ಲಿ 527 ಚಾರ್ಜ್‌ಶೀಟ್ ಸಾಕ್ಷಿಗಳಿದ್ದು, ಕಳೆದ ಎರಡು ವರ್ಷಗಳಲ್ಲಿ 90 ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ ಎಂಬುದನ್ನು ಗಮನಿಸಿದ ಕೋರ್ಟ್‌, 2019 ರ ಫೆಬ್ರುವರಿಯಲ್ಲಿ ಹೈಕೋರ್ಟ್, ನಾಯಕ್ ಅವರ ಹಿಂದಿನ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರೂ ಸಹ ಆತ ಜುಲೈ 18, 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಎಂಬುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಮೂಲದ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ), 2000 ರ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಜಾಮೀನು ಮಂಜೂರಾತಿಯನ್ನು ಪರಿಶೀಲಿಸುವ ಸೀಮಿತ ಉದ್ದೇಶಕ್ಕಾಗಿ ಆರೋಪಗಳನ್ನು ವಿಶ್ಲೇಷಿಸುವಾಗ, ಆತ ಕೋಕಾ ಅಡಿಯಲ್ಲಿ ಸಂಘಟಿತ ಅಪರಾಧ ಎಸಗುವ ಸಿಂಡಿಕೇಟ್‌ನ ಸದಸ್ಯ ಎಂದು ಆರೋಪಿಸಲಾಗಿದ್ದರೂ, ದಾಖಲೆಯಲ್ಲಿರುವ ವಿಷಯವು ಆತನನ್ನು ಸಹ-ಸಹಕಾರರಾಗಿ ಹಾಜರುಪಡಿಸಿಲ್ಲ ಎಂದು ತೋರಿಸುತ್ತದೆ ಎಂದು ಹೈಕೋರ್ಟ್ ಗಮನಿಸಿದೆ.

ಕಾಯಿದೆಯ ಸೆಕ್ಷನ್ 3(2), 3(3) ಮತ್ತು 3(4) ರ ಅಡಿಯಲ್ಲಿ ಅಪರಾಧಗಳ ಆರೋಪಗಳು ಸಾಬೀತಾದರೂ, ಆತ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವುದಿಲ್ಲ ಮತ್ತು ಕನಿಷ್ಠ ಶಿಕ್ಷೆ ಐದು ವರ್ಷಗಳು ಎಂದು ಹೈಕೋರ್ಟ್ ಹೇಳಿತ್ತು.

ನಾಯಕ್ ಜಾಮೀನು ರದ್ದುಗೊಳಿಸಲು ಸುಪ್ರೀಂ ನಕಾರ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್‌ಗೆ ಜಾಮೀನು ಮಂಜೂರು ಮಾಡಿದ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧ ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೇ ವರ್ಷದ ಆಗಸ್ಟ್‌ 22ರಂದು ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಎಸ್ ಸಿ ಶರ್ಮಾ ಅವರ ಪೀಠವು ಆರೋಪಿ ಮೋಹನ್ ನಾಯಕ್ ಅವರು ವಿಚಾರಣೆಯಲ್ಲಿ ವಿಚಾರಣಾ ನ್ಯಾಯಾಲಯದೊಂದಿಗೆ ಸಹಕರಿಸಿದ್ದಾರೆ ಮತ್ತು ಯಾವುದೇ ಮುಂದೂಡಿಕೆಯನ್ನು ಕೋರಿಲ್ಲ ಎಂದು ಗಮನಿಸಿದರು.

“ಉಚ್ಚ ನ್ಯಾಯಾಲಯವು ಅಂಗೀಕರಿಸಿದ ನಿರ್ಭೀತ ಆದೇಶಗಳಲ್ಲಿ ಮಧ್ಯಪ್ರವೇಶಿಸಲು ನಾವು ಒಲವು ತೋರುವುದಿಲ್ಲ. ಆದಾಗ್ಯೂ, ವಿಚಾರಣಾ ನ್ಯಾಯಾಲಯವು ತ್ವರಿತವಾಗಿ ವಿಚಾರಣೆಯನ್ನು ನಡೆಸಬೇಕು ಮತ್ತು ಎಲ್ಲಾ ಕಕ್ಷಿದಾರರು ವಿಚಾರಣೆಯನ್ನು ಮುಕ್ತಾಯಗೊಳಿಸುವಲ್ಲಿ ವಿಚಾರಣಾ ನ್ಯಾಯಾಲಯದೊಂದಿಗೆ ಸಹಕರಿಸಬೇಕು” ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

“ಆರೋಪಿ ಸಹಕರಿಸದಿದ್ದರೆ ಅಥವಾ ಅನಗತ್ಯ ಮುಂದೂಡಿಕೆ (ಗಳನ್ನು) ಕೇಳಿದರೆ ಅಥವಾ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ, ಕರ್ನಾಟಕ ರಾಜ್ಯ ಅಥವಾ ದೂರುದಾರರು ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಅಂತಹ ಯಾವುದೇ ಅರ್ಜಿಯನ್ನು ಸಲ್ಲಿಸಿದರೆ, ಅದನ್ನು ಅದರ ಸ್ವಂತ ಅರ್ಹತೆಯ ಮೇಲೆ ಮತ್ತು ಕಾನೂನಿನ ಪ್ರಕಾರ ನಿರ್ಧರಿಸಲಾಗುತ್ತದೆ” ಎಂದು ಪೀಠ ಹೇಳಿದೆ.

ಡಿಸೆಂಬರ್ 7, 2023 ರ ಹೈಕೋರ್ಟ್ ಆದೇಶದ ವಿರುದ್ಧ ಕವಿತಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಇದುವರೆಗೆ 137 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದೆ, 137 ಸಾಕ್ಷಿಗಳನ್ನು ಕೈಬಿಡಲಾಗಿದೆ ಮತ್ತು ಪ್ರಾಸಿಕ್ಯೂಷನ್ 150 ಸಾಕ್ಷಿಗಳನ್ನು ಕೈಬಿಡುವ ಸಾಧ್ಯತೆಯಿದೆ ಮತ್ತು ಈಗ ಸುಮಾರು 100 ಸಾಕ್ಷಿಗಳು ಇನ್ನೂ ಇದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ತೀರ್ಪಿಗೂ ಮೊದಲು ಆರೋಪಿಗೆ ನೋಟಿಸ್‌ ನೀಡಿದ್ದ ಸುಪ್ರೀಂಕೋರ್ಟ್‌

ಕವಿತಾ ಲಂಕೇಶ್ ಅರ್ಜಿ ವಜಾಗೊಳಿಸುವುದಕ್ಕೂ ಮೊದಲು ಗೌರಿ ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆರೋಪಿಗೆ ನೋಟಿಸ್ ಜಾರಿ ಮಾಡಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹತ್ಯೆಗೀಡಾದ ಪತ್ರಕರ್ತೆಯ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಅರ್ಜಿಯಲ್ಲಿ ಮೋಹನ್ ನಾಯಕ್‌ಗೆ ಜಾಮೀನು ರದ್ದುಗೊಳಿಸುವಂತೆ ಕವಿತಾ ಲಂಕೇಶ್ ಕೋರಿದ್ದರು.

ಗೌರಿ ಲಂಕೇಶ್‌ ಹತ್ಯೆ ಆರೋಪಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಡಿ.7, 2023ರಂದು ಜಾಮೀನು ನೀಡಿತ್ತು. ಮೋಹನ್ ನಾಯಕ್ ಪರ ಹೈಕೋರ್ಟ್‌ನಲ್ಲಿ ವಕೀಲ ಅಮರ್ ಕೊರಿಯಾ ವಾದ ಮಂಡಿಸಿದ್ದರು. ಗೌರಿ ಹತ್ಯೆಯ ಕ್ರಿಮಿನಲ್ ಪಿತೂರಿಯ ಭಾಗವಾಗಿರುವ ಮೋಹನ್ ನಾಯಕ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡುವಂತೆ ಕವಿತಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಆರೋಪಿಯು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾನೆ ಮತ್ತು ವಿಚಾರಣೆಯಲ್ಲಿ ಅನಗತ್ಯ ವಿಳಂಬವನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಯಕ್‌ಗೆ ಜಾಮೀನು ಮಂಜೂರು ಮಾಡಿತ್ತು. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ನಾಯಕ್ ಪ್ರಕರಣದಲ್ಲಿ 11ನೇ ಆರೋಪಿಯಾಗಿದ್ದು, ಒಟ್ಟು 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ತನಿಖೆಗೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

‘ಪೊಲೀಸರು ನಮ್ಮನ್ನು ಬಂಧಿಸುವ ಮುನ್ನ ನಮ್ಮ ಕುಟುಂಬದ ಅಥವಾ ಹತ್ತಿರದ ಸದಸ್ಯರ ಗಮನಕ್ಕೆ ತಂದಿಲ್ಲ‌, ಪೊಲೀಸ್ ಬಂಧನದಲ್ಲಿದ್ದಾಗ ನಮಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಆದ್ದರಿಂದ, ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಗೌರಿ ಹತ್ಯೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಜುಲೈ 3ರಂದು ವಜಾಗೊಳಿಸಿದೆ.

ಪೊಲೀಸರು ಕಾನೂನು ಬಾಹಿರವಾಗಿ ನಮ್ಮನ್ನು ಬಂಧಿಸಿ, ಹಿಂಸೆ ನೀಡಿದ ಕುರಿತಂತೆ ವಿಶೇಷ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಕರಣದ ಆರೋಪಿಗಳಾದ ಸುಜಿತ್ ಕುಮಾರ್, ಮನೋಹರ ಎಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದಿಗ್ವೇಕರ್ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಎಸ್‌.ಸಂಜಯ ಗೌಡ ಅವರಿದ್ದ ಏಕಸದಸ್ಯ ಪೀಠ, ಈಗಾಗಲೇ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹಾಗಾಗಿ, ಈ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿದರು.

ಗೌರಿ ಹತ್ಯೆ ಆರೋಪಿಯನ್ನು ಭೇಟಿಯಾದ ಪ್ರತಾಪ್ ಸಿಂಹ

ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಳೆದ ತಿಂಗಳು ಭೇಟಿಯಾಗಿದ್ದು, ಅದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ‌ಯು ಬಿಜೆಪಿ ಮುಖಂಡ ಪ್ರತಾಪ್ ಸಿಂಹ‌ ಸ್ನೇಹಿತ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠವು ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್ಎಲ್ ಸುರೇಶ್ ಅವರಿಗೆ ಜುಲೈ 16ರಂದು ಜಾಮೀನು ನೀಡಿತ್ತು.

ಇದನ್ನೂ ಓದಿ; “ಪ್ರತಿಯೊಬ್ಬ ನಟಿಯರದ್ದೂ ಒಂದೊಂದು ಕಥೆಯಿದೆ, ಅದು ಎಲ್ಲಾ ನಟರಿಗೆ ಗೊತ್ತಿದೆ”: ರಾಧಿಕಾ ಶರತ್‌ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...