HomeದಿಟನಾಗರFact Check: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರಾ?

Fact Check: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರಾ?

- Advertisement -
- Advertisement -

“ಇನ್ನೊಂದು ಜನ್ಮವಿದ್ದರೆ ನಾನು ಮುಸ್ಲಿಮನಾಗಿ ಹುಟ್ಟಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೋ ಕ್ಲಿಪ್ ಒಂದು ಭಾರೀ ವೈರಲ್ ಆಗಿದೆ. ಅನೇಕ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ.

‘Murali Purshotham’ಎಂಬ ಎಕ್ಸ್‌ ಬಳಕೆದಾರ ವಿಡಿಯೋ ಹಂಚಿಕೊಂಡಿದ್ದು, “ಮುಂದಿನ ಜನ್ಮ ಯಾಕೆ ಇವಾಗ್ಲೇ ಕನ್ವರ್ಟ್ ಆಗಿ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ

ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ‘ರಿಷಿ ಬಾಗ್ರೀ’ (Rishi Bagree)ಕೂಡ ಎಕ್ಸ್‌ನಲ್ಲಿ ವೈರಲ್ ವಿಡಿಯೋ ಹಂಚಿಕೊಂಡಿದ್ದು, “ಸಿದ್ದರಾಮಯ್ಯ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ಅನೇಕ ಎಕ್ಸ್ ಬಳಕೆದಾರರು ಮರು ಟ್ವೀಟ್ ಮಾಡಿದ್ದಾರೆ. ಆದರೆ, ರಿಷಿ ಬಾಗ್ರೀ ಪ್ರಸ್ತುತ ಪೋಸ್ಟ್ ಡಿಲಿಟ್ ಮಾಡಿದ್ದಾರೆ.

 

‘BJP Intellectual Cell- Bengaluru (Modi Ka Parivar)’ ಎಂಬ ಎಕ್ಸ್‌ ಖಾತೆಯಲ್ಲಿ ವೈರಲ್ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಆಸೆ ಸಿದ್ದರಾಮಯ್ಯ ಅವರದ್ದು. ಆದರೆ ಸಾಹೇಬರು ಇದೆ ಜನಮದಲ್ಲಿ ವಿಶೇಷ ಸಮುದಾಯದ ತುಷ್ಟೀಕರಣ ರಾಜಕಾರಣ ಆರಂಭಿಸಿದ್ದಾರೆ” ಎಂದು ಬರೆದುಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಕರ್ನಾಟಕದ ಕೆಲ ಬಿಜೆಪಿ ನಾಯಕರು ಸೇರಿದಂತೆ, ಇನ್ನೂ ಹಲವರು ವೈರಲ್ ವಿಡಿಯೋ ಹಂಚಿಕೊಂಡಿದ್ದರು. ಆದರೆ, ಈಗ ಅದನ್ನು ಡಿಲಿಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್ : ಸಿಎಂ ಸಿದ್ದರಾಮಯ್ಯ ಕುರಿತ ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾನುಗೌರಿ.ಕಾಂ ಮೊದಲು ಸಿಎಂ ಭಾಷಣದ ಮೂಲ ವಿಡಿಯೋವನ್ನು ಹುಡುಕಿದೆ.

ಗೂಗಲ್‌ನಲ್ಲಿ ಸಂಬಂಧಿತ ಕೀ ವರ್ಡ್‌ ಹಾಕಿ ಹುಡುಕಾಡಿದಾಗ ನಮಗೆ ಯೋಯೋ ಟಿವಿ (yoyo Tv) ಎಂಬ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ 29:45 ನಿಮಿಷದ ವಿಡಿಯೋವೊಂದು ಸಿಕ್ಕಿದೆ.

‘ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೈ ವೋಲ್ಟೇಜ್ ಭಾಷಣ’ ಎಂಬ ತಂಬ್‌ನೈಲ್ ಶೀರ್ಷಿಕೆಯಲ್ಲಿ ಇತ್ತೀಚೆಗೆ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ, 13 ನಿಮಿಷ 36 ಸೆಕೆಂಡ್‌ನಿಂದ ವೈರಲ್ ಕ್ಲಿಪ್‌ನಲ್ಲಿರುವ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಡಿಯೋವನ್ನು 13 ನಿಮಿಷ 26 ಸೆಕೆಂಡ್‌ನಿಂದ 13 ನಿಮಿಷ 44 ಸೆಕೆಂಡ್‌ಗಳ ನಡುವೆ ಸರಿಯಾಗಿ ಗಮನಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಆಡಿರುವ ಸಂಪೂರ್ಣ ಮಾತುಗಳು ಇವೆ. ” ಅದರಲ್ಲಿ, ಇದೇ ದೇವೆಗೌಡರು ನಾನು ಯಾವ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ. ಏನಾದರು ಇನ್ನೊಂದು ಜನ್ಮ ಇದೇ ಎನ್ನುದಾದರೆ, ಮುಂದಿನ ಜನ್ಮದಲ್ಲಿ ನಾನು ಮುಸ್ಲಿಮನಾಗಿ ಹುಟ್ಟಬೇಕು ಎಂದಿದ್ದರು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯೂಟ್ಯೂಬ್ ವಿಡಿಯೋ ಲಿಂಕ್ ಇಲ್ಲಿದೆ 

ಇಲ್ಲಿ, ಮುಂದಿನ ಜನ್ಮವಿದ್ದರೆ ನಾನು ಮುಸ್ಲಿಮನಾಗಿ ಹುಟ್ಟಬೇಕು ಎಂದು ದೇವೆಗೌಡರು ಹೇಳಿದ್ದರು. ಅಂತಹ ದೇವೆಗೌಡರು ಈಗ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂಬುವುದಾಗಿದೆ ಸಿಎಂ ಸಿದ್ದರಾಮಯ್ಯ ಅವರ ಮಾತಿನ ಆರ್ಥ. ಆದರೆ, ಬಿಜೆಪಿ ನಾಯಕರು ಮತ್ತು ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ‘ದೇವೆಗೌಡರು ಹೇಳಿದ್ದರು’ ಎಂಬುವುದನ್ನು ಕಟ್ ಮಾಡಿ ಹಂಚುವ ಮೂಲಕ, ಸಿಎಂ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಹೇಳಿದ್ದಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನೇ ನಿಜವೆಂದು ನಂಬಿದ ಅನೇಕ ಮಂದಿ ವಿಡಿಯೋ ಶೇರ್ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿಡಿಯೋದ 12ನೇ ನಿಮಿಷದಲ್ಲಿ, “ಅವರು (ಜೆಡಿಎಸ್) ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. 2018 ರಲ್ಲಿ, ನಮ್ಮ ನಾಯಕರು ಅವರ (ಕುಮಾರಸ್ವಾಮಿ) ಮನೆಗೆ ಹೋಗಿಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದರು. ನಾವು ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಏಕೆಂದರೆ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದು ನಮಗೆ ಇಷ್ಟವಿರಲಿಲ್ಲ. ನಂತರ, ಅವರ ಪಕ್ಷವನ್ನು ಮುರಿದವರು ಯಾರು? ಯಡಿಯೂರಪ್ಪನವರು. ಬಿಜೆಪಿ ಆಪರೇಷನ್ ಕಮಲ ಮಾಡಿ 17 ಶಾಸಕರಿಗೆ ಹಣ ನೀಡಿ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತು”ಎಂದು ಹೇಳಿದ್ದಾರೆ.

ವೈರಲ್ ಕ್ಲಿಪ್‌ಗೆ ಸಂಬಂಧಿಸಿದ ಕಾರ್ಯಕ್ರಮದ ವರದಿಯನ್ನು ಹಿಂದುಸ್ತಾನ್ ಟೈಮ್ಸ್ ಮಾರ್ಚ್ 11ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. “ದೇವೇಗೌಡರು ತಮ್ಮ ಉಳಿವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ” ಎಂಬ ಶೀರ್ಷಿಕೆಯ ವರದಿಯಲ್ಲಿ, ಜನತಾ ದಳ (ಜಾತ್ಯತೀತ) ಪಕ್ಷದ ನಾಯಕ ಹೆಚ್‌ಡಿ ದೇವೇಗೌಡರು ತಮ್ಮ ಪಕ್ಷದ ಉಳಿವಿಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಭಾನುವಾರ ಮಂಡ್ಯದ ಕಂಗೇರಿಯಲ್ಲಿ ನಡೆದ ಶಿಕ್ಷಕರ ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಮಾತನಾಡಿದರು” ಎಂದು ಬರೆಯಲಾಗಿದೆ.

ವರದಿಯ ಲಿಂಕ್ ಇಲ್ಲಿದೆ 

ಮಾರ್ಚ್‌ 11ರಂದು ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಾಕಿದ್ದ ಸಿಎಂ ಸಿದ್ದರಾಯ್ಯ “ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿಕೊಂಡು ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ದ್ವಂದ್ವ ಹೇಳಿಕೆ ನೀಡುವ ಇವರನ್ನು ಹೇಗೆ ನಂಬುತ್ತೀರಿ? ಪ್ರಶ್ನಿಸಿದ್ದರು.

ಮೊನ್ನೆ ನಡೆದ ವಿಧಾನ‌ಪರಿಷತ್ ಚುನಾವಣೆಯು ನಾಳೆ ಬರಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಪುಟ್ಟಣ್ಣ ಜಯಭೇರಿ ಬಾರಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರ ಮಾತಿನಂತೆ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಸೋಲುತ್ತದೆ. ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬರೆದುಕೊಂಡಿದ್ದರು.

ಲಭ್ಯವಿರುವ ಎಲ್ಲಾ ಮೂಲಗಳನ್ನು ಪರಿಶೀಲಿಸಿ ನೋಡಿದಾಗ, ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಜನಿಸಲು ಬಯಸುತ್ತೇನೆ ಎಂದು ಹೇಳಿದ್ದರು ಎಂಬುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ ಹೊರತು, ನಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಜನಿಸಲು ಬಯಸುತ್ತೇನೆ ಎಂದು ಹೇಳಿಲ್ಲ. ಸಿಎಂ ಭಾಷಣವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚುತ್ತಿರುವುದು ಈ ಮೂಲಕ ಖಚಿತವಾಗಿದೆ.

ಇದನ್ನೂ ಓದಿ : Fact Check: ನಮಾಝ್ ಮಾಡಲು ಬಂದ ವ್ಯಕ್ತಿ ಬುರ್ಖಾ ಧರಿಸಿದ್ದ ಎಂದು ಸುಳ್ಳು ಸುದ್ದಿ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...