HomeದಿಟನಾಗರFact Check: ಶ್ರೀಲಂಕಾದ ಕಚ್ಚತೀವು ದ್ವೀಪದ ಕುರಿತು ಸುಳ್ಳು ಹೇಳಿದ್ರಾ ಪ್ರಧಾನಿ ಮೋದಿ?

Fact Check: ಶ್ರೀಲಂಕಾದ ಕಚ್ಚತೀವು ದ್ವೀಪದ ಕುರಿತು ಸುಳ್ಳು ಹೇಳಿದ್ರಾ ಪ್ರಧಾನಿ ಮೋದಿ?

- Advertisement -
- Advertisement -

ಕಳೆದ ಕೆಲ ದಿನಗಳಿಂದ ಭಾರತ ಮತ್ತು ಶ್ರೀಲಂಕಾದ ನಡುವಿನ ಕಚ್ಚತೀವು ದ್ವೀಪದ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಭಾರತದ ಭಾಗವಾಗಿದ್ದ ಕಚ್ಚತೀವು ದ್ವೀಪವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶ್ರೀಲಂಕಾಗೆ ಬಿಟ್ಟು ಕೊಡಲಾಗಿದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ವಿಷಯ ಮಹತ್ವ ಪಡೆದುಕೊಂಡಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರ್‌ಟಿಐ ಮೂಲಕ ಪಡೆದ ಮಾಹಿತಿಯ ಪ್ರಕಾರ ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟು ಕೊಡಲಾಗಿದೆ ಎಂದು ಸರ್ಕಾರ ತಿಳಿಸಿದೆಯಂತೆ. ಈ ಕುರಿತು ಟೈಮ್ಸ್‌ ಆಫ್ ಇಂಡಿಯಾ ಸುದ್ದಿಯೊಂದನ್ನು ಪ್ರಕಟಿಸಿತ್ತು.

ಸುದ್ದಿ ಲಿಂಕ್ ಇಲ್ಲಿದೆ 

ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾರ್ಚ್ 31,2024ರಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕಣ್ಣು ತೆರೆಸುವ ಮತ್ತು ಬೆಚ್ಚಿಬೀಳಿಸುವ ವಿಷಯ. ಕಚ್ಚತೀವು ಅನ್ನು ಕಾಂಗ್ರೆಸ್ ಹೇಗೆ ಬಿಟ್ಟು ಕೊಟ್ಟಿತ್ತು ಎಂದು ಹೊಸ ವಿಷಯಗಳು ಬಹಿರಂಗಪಡಿಸಿವೆ. ಇದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ ಮತ್ತು ಜನರ ಮನಸ್ಸಿನಲ್ಲಿ ನಾವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ದೃಢಪಟ್ಟಿದೆ. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್‌ 75 ವರ್ಷಗಳಿಂದ ಮಾಡುತ್ತಾ ಬಂದಿರುವ ಕೆಲಸವಾಗಿದೆ” ಎಂದು ಬರೆದುಕೊಂಡಿದ್ದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ಸಚಿವ ಎಸ್‌ ಜೈಶಂಕರ್, “ಭಾರತದಲ್ಲಿ ನಡೆಯುತ್ತಿದ್ದ ವಿರೋಧವನ್ನು ಗಮನದಲ್ಲಿಟ್ಟುಕೊಂಡು, ಮೇ 10, 1961 ರಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಒಂದು ನಿಮಿಷದಲ್ಲಿ ಈ ವಿಷಯವನ್ನು ಅಪ್ರಸ್ತುತವೆಂದು ತಳ್ಳಿ ಹಾಕಿದ್ದರು. ಈ ದ್ವೀಪದ ಮೇಲಿನ ಹಕ್ಕು ಬಿಟ್ಟುಕೊಡಲು ನಾನು ಯಾವುದೇ ಹಿಂಜರಿಕೆ ತೋರಿಸುವುದಿಲ್ಲ ಎಂದು ಅವರು ಬರೆದಿದ್ದರು. ನಾನು ಈ ಪುಟ್ಟ ದ್ವೀಪವನ್ನು ಗೌರವಿಸುವುದಿಲ್ಲ ಮತ್ತು ಅದರ ಮೇಲಿನ ನನ್ನ ಹಕ್ಕನ್ನು ಬಿಟ್ಟುಕೊಡಲು ಯಾವುದೇ ಹಿಂಜರಿಕೆಯಿಲ್ಲ. ಈ ವಿವಾದವು ಅನಿರ್ದಿಷ್ಟವಾಗಿ ಮುಂದುವರಿಯುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಪ್ರಸ್ತಾಪಿಸುವುದು ನನಗೆ ಇಷ್ಟವಿಲ್ಲ ಎಂದಿದ್ದರು ಎಂದು” ಹೇಳಿದ್ದರು.

ಹಾಗಿದ್ದರೆ, ನಿಜವಾಗಿಯೂ ಕಾಂಗ್ರೆಸ್‌ ಸರ್ಕಾರ ಅಥವಾ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟು ಕೊಟ್ಟರಾ? ಎಂಬುವುದನ್ನು ನೋಡೋಣಾ.

ಫ್ಯಾಕ್ಟ್‌ಚೆಕ್ : ಈಗ ‘ಕಚ್ಚತೀವು’ ಎಂದು ಕರೆಯಲ್ಪಡುವ ಪ್ರದೇಶವು 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ನಿರ್ಮಾಣವಾದ ದ್ವೀಪವಾಗಿದೆ. ಇದು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತ್ತು. ಕಚ್ಚತೀವು ದ್ವೀಪ ಭಾರತ ಮತ್ತು ಶ್ರೀಲಂಕಾದ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಭಾರತದ ರಾಮೇಶ್ವರಂ ಕರಾವಳಿಯಿಂದ ಈಶಾನ್ಯ ದಿಕ್ಕಿನಲ್ಲಿದೆ. 285 ಎಕರೆ ವಿಸ್ತಾರವುಳ್ಳ ಈ ದ್ವೀಪವು ಕುಡಿಯಲು ನೀರಿಲ್ಲದ ಕಾರಣ ಜನ ವಸತಿಗೆ ಯೋಗ್ಯವಾಗಿಲ್ಲ.

ಈ ದ್ವೀಪವು ತಮಗೆ ಸೇರಿದ್ದು ಎಂದು ಶ್ರೀಲಂಕಾವು ಡಚ್ಚರು ಮತ್ತು ಬ್ರಿಟಿಷರ ಆಳ್ವಿಕೆ ಅವಧಿಯ ದಾಖಲೆಗಳನ್ನು ತೋರಿಸಿತ್ತು. ರಾಮನಾಥಪುರದ ಅರಸು ಮನೆತನ ಇದರ ಒಡೆತನ ಹೊಂದಿತ್ತು ಎಂದು ಪ್ರತಿಪಾದಿಸಿತ್ತಾದರೂ, ಅದನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ. ಎರಡು ದಶಕಕ್ಕೂ ಮೀರಿದ ಅವಧಿಯಲ್ಲಿ ಹಲವು ಸುತ್ತಿನ ಮಾತುಕತೆಗಳ ನಂತರ 1973ರಲ್ಲಿ ಭಾರತ–ಶ್ರೀಲಂಕಾ ಜಲಗಡಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಯಿತು. ಆ ಸಂಬಂಧ 1974ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

1974ರಲ್ಲಿ ಒಪ್ಪಂದಲ್ಲಿ ಏನಿದೆ?

1974ರ ಒಪ್ಪಂದದಲ್ಲಿ ಗುರುತಿಸಲಾದ ಜಲಗಡಿಯ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾಕ್ಕೆ ಸೇರಿತು. ಆದರೆ, ಈ ದ್ವೀಪವನ್ನು ಶ್ರೀಲಂಕಾದಿಂದ ಪಡೆದುಕೊಳ್ಳಬೇಕು ಎಂಬ ಕೂಗೂ ರಾಜಕೀಯ ವಲಯದಲ್ಲಿ ಇದ್ದೇ ಇತ್ತು. ಈ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಶ್ನೆಗಳನ್ನು ಎತ್ತಿದಾಗ ಎಲ್ಲಾ ಸರ್ಕಾರಗಳು, ಕಚ್ಚತೀವು ದ್ವೀಪದ ವಿಚಾರ ಈಗಾಗಲೇ ಮುಗಿದಿದೆ. ಅಲ್ಲಿನ ಕೆಲವು ಹಕ್ಕುಗಳ ಬಗ್ಗೆ ಮಾತ್ರ ವಿವಾದವಿದೆ ಎಂದೇ ಹೇಳಿಕೆ ನೀಡಿದ್ದವು.

ಈ ಬಗ್ಗೆ ಪ್ರಶ್ನೆ ಕೇಳಿ, ಅಲಾಡಿ ಗುರುಸ್ವಾಮಿ ಅವರು 2015ರ ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸಚಿವೆ ಸುಷ್ಮಾ ಸ್ವರಾಜ್‌ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಅರ್ಜಿಗೆ ಅದೇ ಜನವರಿ 27ರಂದು ಉತ್ತರ ನೀಡಿತ್ತು.

ಉತ್ತರದಲ್ಲಿ, ‘1974 ಮತ್ತು 1976ರ ಒಪ್ಪಂದಗಳ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿಯವರೆಗೆ ಆ ದ್ವೀಪವು ಯಾರ ವ್ಯಾಪ್ತಿಗೆ ಸೇರುತ್ತದೆ ಎಂಬುದನ್ನು ಗುರುತಿಸಿರಲೇ ಇಲ್ಲ. ಹೀಗಾಗಿ ಎರಡೂ ದೇಶಗಳ ಮಧ್ಯೆ ಜಲಗಡಿಯನ್ನು ಗುರುತಿಸುವ ಅವಧಿಯಲ್ಲಿ ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಸಚಿವಾಲಯವು ವಿವರಿಸಿತ್ತು.

ಅಲ್ಲದೆ, ಜಲ ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಉತ್ತರದೊಂದಿಗೆ ನೀಡಿತ್ತು. ಮೋದಿ ಅವರ ಸರ್ಕಾರದ್ದೇ ಸಚಿವಾಲಯವು ಅಧಿಕೃತವಾಗಿ ನೀಡಿದ್ದ ದಾಖಲೆಗಳ ಪ್ರಕಾರ ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ ಎಂದು ಏಪ್ರಿಲ್ 2, 2024ರಂದು ಪ್ರಜಾವಾಣಿ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ವರದಿಯ ಲಿಂಕ್ ಇಲ್ಲಿದೆ 

ಪ್ರಧಾನಿ ಮೋದಿ ನೇತೃತ್ವದ ಸರ್ಕಾರವೇ ಈ ಹಿಂದೆ ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ, ‘ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲಎಂದು ಉತ್ತರಿಸಿತ್ತು. ತಮ್ಮದೇ ಸರ್ಕಾರ ನೀಡಿದ್ದ ಉತ್ತರಕ್ಕೆ ವ್ಯತಿರಿಕ್ತವಾದ ಆರೋಪವನ್ನು ಈಗ ಪ್ರಧಾನಿ ಮಾಡಿದ್ದಾರೆ. ಹಾಗಾಗಿ, ಇದು ಕಚ್ಚತೀವು ದ್ವೀಪದ ವಿಚಾರ ಮುಂದಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸ್ಥಾನವನ್ನು ಗೆಲ್ಲಲು ಮಾಡುತ್ತಿರುವ ತಂತ್ರ ಎಂದೇ ಹೇಳಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ನಾವು ನಡೆಸಿದ ಪರಿಶೀಲನೆ ಪ್ರಕಾರ, ಮೋದಿ ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಕಚ್ಚತೀವು ದ್ವೀಪ ಎಂದಿಗೂ ಭಾರತದ ಭಾಗವಾಗಿ ಇರಲೇ ಇಲ್ಲ. ಹೀಗಿರುವಾಗ ಅದನ್ನು ಕಾಂಗ್ರೆಸ್ ಸರ್ಕಾರ ಶ್ರೀಲಂಕಾಗೆ ಬಿಟ್ಟು ಕೊಡುವ ಪ್ರಮೇಯವೇ ಬರುವುದಿಲ್ಲ. ಆದ್ದರಿಂದ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪ ಸುಳ್ಳು ಎಂದು ಹೇಳಬಹುದು.

ಇದನ್ನೂ ಓದಿ: Fact Check: ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದರು ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...