HomeದಿಟನಾಗರFact Check: ಚುನಾವಣಾ ಬಾಂಡ್‌ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಸುಳ್ಳು

Fact Check: ಚುನಾವಣಾ ಬಾಂಡ್‌ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಸುಳ್ಳು

- Advertisement -
- Advertisement -

ತಮಿಳಿನ ತಂತಿ ಟಿವಿ ಚಾನೆಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಬಾಂಡ್‌ ಕುರಿತು ಮಾತನಾಡಿದ್ದು, ಪ್ರಧಾನಿ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವಿಶೇಷ ಸಂದರ್ಶನದ ಬರೊಬ್ಬರಿ 1 ಗಂಟೆ 2 ನಿಮಿಷ 56 ಸೆಕೆಂಡ್‌ನ ಸುದೀರ್ಘ ವಿಡಿಯೋವನ್ನು ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ 53 ನಿಮಿಷ 58 ಸೆಕೆಂಡ್‌ನಿಂದ 54 ನಿಮಿಷ 43 ಸೆಕೆಂಡ್‌ ನಡುವೆ ಪ್ರಧಾನಿ ಚುನಾವಣಾ ಬಾಂಡ್‌ ಕುರಿತು ಮಾತನಾಡಿರುವುದು ಇದೆ.

ಸಂದರ್ಶನದಲ್ಲಿ ನಿರೂಪಕಿ, “ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ ರದ್ದುಪಡಿಸಿರುವುದು ನಿಮ್ಮ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಲ್ಲವೇ?” ಎಂದು ಪ್ರಧಾನಿಯನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಧಾನಿ, “ನಮಗೆ ಯಾಕೆ ಹಿನ್ನಡೆ? ನೋಡಿ 2014ರ ಮೊದಲು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆಯುತ್ತಿದ್ದವು. ಆದರೆ, ಅದನ್ನು ಯಾರು, ಯಾರಿಗೆ ಕೊಟ್ಟಿದ್ದಾರೆ. ಎಷ್ಟು ಖರ್ಚಾಗಿದೆ ಇತ್ಯಾದಿ ಮಾಹಿತಿ ಗೊತ್ತಾಗುತ್ತಿರಲಿಲ್ಲ. ನಾವು ಚುನಾವಣಾ ಬಾಂಡ್ ತಂದ ಬಳಿಕ, ಯಾರು ಯಾವ ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದಾರೆ? ಎಷ್ಟು ಕೊಟ್ಟಿದ್ದಾರೆ? ಎಷ್ಟು ಖರ್ಚಾಗಿದೆ? ಎಂಬ ಸಂಪೂರ್ಣ ದಾಖಲಾತಿ ಸಿಗುತ್ತಿತ್ತು” ಎಂದಿದ್ದಾರೆ.

ಯೂಟ್ಯೂಬ್‌ ವಿಡಿಯೋ ಲಿಂಕ್ ಇಲ್ಲಿದೆ 

ಪ್ರಧಾನಿ ಮೋದಿಯವರು ನೀಡಿರುವ ಈ ಹೇಳಿಕೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್‌ ಪ್ರಕರಣದ ವಿಚಾರಣೆ ವೇಳೆ ನಡೆದ ಕೆಲವು ಸನ್ನಿವೇಶಗಳು ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ, ಪ್ರಧಾನಿ ಹೇಳಿರುವುದು ನಿಜವೇ? ಎಂದು ನೋಡೋಣ.

ಫ್ಯಾಕ್ಟ್‌ಚೆಕ್ : ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಎಷ್ಟು ಸತ್ಯ ಎಂಬುವುದರ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಇದಕ್ಕಾಗಿ ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳನ್ನು ನಾವು ಗಮನಿಸಿದ್ದೇವೆ.

ಅಕ್ಟೋಬರ್ 30, 2023ರಂದು Livelaw.in ಪ್ರಕಟಿಸಿದ ‘Citizens Don’t Have Right To Know Source Of Political Parties’ Funds : Attorney General Tells Supreme Court In Electoral Bonds Case’ಎಂಬ ಶೀರ್ಷಿಕೆಯ ವರದಿಯಲ್ಲಿ ” ಚುನಾವಣಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಟಾರ್ನಿ ಜನರಲ್ ಆರ್‌. ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ಕುರಿತು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿಲ್ಲ ಎಂದು ತಿಳಿಸಿದ್ದಾರೆ. ಚುನಾವಣಾ ಬಾಂಡ್‌ ಮಾಹಿತಿ ಒದಗಿಸುವಂತೆ ಪ್ರತಿಪಾದಿಸಿದ ಅರ್ಜಿದಾರರ ವಾದವನ್ನು ಅಟಾರ್ನಿ ಜನರಲ್ ತಳ್ಳಿ ಹಾಕಿದ್ದಾರೆ ಎಂದು” ತಿಳಿಸಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಜನವರಿ 11, 2020ರಂದು ‘thewire.in’ಪ್ರಕಟಿಸಿದ ‘Electoral Bonds: SBI Refuses Yet Again to Divulge Information on Rs 1 Crore Donors’ಎಂಬ ಶೀರ್ಷಿಕೆಯ ವರದಿಯಲ್ಲಿ “ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಕೇಂದ್ರದಿಂದ ಅಧಿಕಾರ ಪಡೆದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದೊಡ್ಡ ದಾನಿಗಳ ವಿವರಗಳನ್ನು ‘ಮಾಹಿತಿ ಹಕ್ಕು ಕಾಯ್ದೆ’ಯಡಿ ಬಹಿರಂಗಪಡಿಸಲು ಮತ್ತೊಮ್ಮೆ ನಿರಾಕರಿಸಿದೆ.” ಎಂದು ಹೇಳಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಫೆಬ್ರವರಿ 15, 2024ರಂದು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ “ಈ ಯೋಜನೆ ಅಸಂವಿಧಾನಿಕ ಮತ್ತು ಜನರ ‘ಮಾಹಿತಿ ಹಕ್ಕಿಗೆ’ ವಿರುದ್ದವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ನಮಗೆ ತಿಳಿಯುವುದು ಏನೆಂದರೆ, ಚುನಾವಣಾ ಬಾಂಡ್‌ನ ಮಾಹಿಯು ‘ಮಾಹಿತಿ ಹಕ್ಕು ಕಾಯ್ದೆ'(ಆರ್‌ಟಿಐ) ಅಡಿ ದೊರೆಯುತ್ತಿರಲಿಲ್ಲ ಎಂಬುದು.

ಸುದ್ದಿ ಲಿಂಕ್ ಇಲ್ಲಿದೆ 

ಫೆ.15ರಂದು ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್‌ಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು ಮತ್ತು ಈ ಮಾಹಿತಿಯನ್ನು ಮಾರ್ಚ್ 12ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

2024ರ ಮಾರ್ಚ್ 6ರೊಳಗೆ ಮಾಹಿತಿ ಒದಗಿಸದ ಎಸ್‌ಬಿಐ, ಮಾರ್ಚ್ 4ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಬಾಂಡ್‌ ಮಾಹಿತಿ ಒದಗಿಸಲು ಜೂನ್‌ 30ರವರೆಗೆ ಸಮಯ ವಿಸ್ತರಣೆ ಮಾಡುವಂತೆ ಸೂಚಿಸಿತ್ತು. ಮಾರ್ಚ್‌ 11ರಂದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಸ್‌ಬಿಐಗೆ ಛೀಮಾರಿ ಹಾಕಿ ನಾಳೆಯೊಳಗೆ (ಮಾರ್ಚ್‌ 12) ಮಾಹಿತಿ ಒದಗಿಸಿ ಎಂದು ಖಡಕ್ ಆದೇಶ ನೀಡಿತ್ತು. ಮಾರ್ಚ್‌ 15ರೊಳಗೆ ಎಸ್‌ಬಿಐ ನೀಡಿದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡಿತ್ತು.

ಕೊನೆಗೂ ಮಾರ್ಚ್‌ 12 ರಂದು ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿಯನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿತ್ತು. ಅದನ್ನು ಗಡುವಿಗಿಂತ ಒಂದು ದಿನ ಮೊದಲೇ, ಅಂದರೆ ಮಾರ್ಚ್‌ 14ರಂದು ಸಂಜೆಯೇ ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಇದರಿಂದ ಮೊದಲ ಬಾರಿಗೆ ದೇಶದ ಯಾವ ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ. ಎಷ್ಟು ನೀಡಿದ್ದಾರೆ. ರಾಜಕೀಯ ಪಕ್ಷಗಳು ಪಡೆದ ದೇಣಿಗೆ ಎಷ್ಟು ಇತ್ಯಾದಿ ಬಯಲಾಗಿತ್ತು.

ಆದರೆ, ಯಾವ ಸಂಸ್ಥೆ ಅಥವಾ ವ್ಯಕ್ತಿ ನಿರ್ದಿಷ್ಟವಾಗಿ ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಹೊರ ಬಂದಿರಲಿಲ್ಲ. ಕಾರಣ, ಅದನ್ನು ಕಂಡು ಹಿಡಿಯಲು ಸಹಕಾರಿಯಾಗುವ ವಿಶೇಷ ಸಂಖ್ಯೆ ಅಥವಾ ‘ಆಲ್ಫಾ ನ್ಯೂಮರಿಕ್ ನಂಬರ್’ ಅನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿರಲಿಲ್ಲ. ಮಾರ್ಚ್‌ 18ರಂದು ಮತ್ತೊಮ್ಮೆ ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಆಲ್ಫಾ ನ್ಯೂಮರಿಕ್ ನಂಬರ್ ಸಹಿತ ಎಲ್ಲಾ ಮಾಹಿತಿಗಳನ್ನು ಮಾರ್ಚ್‌ 21ರ ಒಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ ಸೂಸಿತ್ತು.

ಮಾರ್ಚ್ 21ರಂದು ‘ಆಲ್ಫಾ ನ್ಯೂಮರಿಕ್’ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ ಎಂದು ಎಸ್‌ಬಿಐ ಅಧ್ಯಕ್ಷರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಅಂದೇ ಸಂಜೆ ಚುನಾವಣಾ ಆಯೋಗ ಬಾಂಡ್‌ ನಂಬರ್‌ಗಳೊಂದಿಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಿತ್ತು.

ಎಸ್‌ಬಿಐ ನೀಡಿದ ಆಲ್ಪಾ ನ್ಯೂಮರಿಕ್ ಕೋಡ್‌ ಬಳಸಿ ಅನೇಕ ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಯಾವ ರಾಜಕೀಯ ಪಕ್ಷಕ್ಕೆ, ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಹೊರಗೆಳೆದಿದ್ದರು. ಈ ಮೂಲಕ ಚುನಾವಣಾ ಬಾಂಡ್ ಎಂಬ ‘ಅಸಂವಿಧಾನಿಕ’ ಯೋಜನೆಯ ಬಣ್ಣ ಬಯಲಾಗಿತ್ತು.

ನಾವು ಮೇಲೆ ಉಲ್ಲೇಖಿಸಿದ ಮಾಧ್ಯಮ ವರದಿಗಳು ಇತರ ಮಾಹಿತಿಯನ್ನು ಗಮನಿಸುವುದಾದರೆ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕವಷ್ಟೇ ಚುನಾವಣಾ ಬಾಂಡ್‌ಗಳ ಮಾಹಿತಿ ಹೊರ ಬಂದಿದೆ. ಅದಕ್ಕೂ ಮುನ್ನ ಆರ್‌ಟಿಐ ಅಡಿ ಅರ್ಜಿ ಹಾಕಿದರೂ, ಮಾಹಿತಿ ಸಿಗುತ್ತಿರಲಿಲ್ಲ. ಆರ್‌ಟಿಐ ಅಡಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ವತಃ ಅಟಾರ್ನಿ ಜನರಲ್ ಅವರೇ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದರು. ಹಾಗಾಗಿ, “ನಾವು ಚುನಾವಣಾ ಬಾಂಡ್‌ ತಂದ ಬಳಿಕ ಯಾವ ರಾಜಕೀಯ ಪಕ್ಷಕ್ಕೆ ಯಾರು, ಎಷ್ಟೆಷ್ಟು ದೇಣಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿತ್ತು” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ರದ್ದುಗೊಳಿಸಿ ಮಾಹಿತಿ ಬಹಿರಂಗಪಡಿಸುವಂತೆ ಆದೇಶ ನೀಡಿರದಿದ್ದರೆ, ಇವತ್ತಿಗೂ ಬಾಂಡ್‌ಗಳ ಮಾಹಿತಿ ಜನ ಸಾಮಾನ್ಯಗರಿಗೆ ಗೊತ್ತಾಗುತ್ತಿರಲಿಲ್ಲ.

ಇದನ್ನೂ ಓದಿ : Fact Check: ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರನ್ನು ಸೋನಿಯಾ ಗಾಂಧಿ ಅವಮಾನಿಸಿದ್ದರು ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...