HomeದಿಟನಾಗರFact Check: ವಿದೇಶಿ ಮಹಿಳೆಯ ಅತ್ಯಾಚಾರ ಆರೋಪಿಗಳೆಲ್ಲರೂ ಕ್ರೈಸ್ತರೆಂದು ಸುಳ್ಳು ಸುದ್ದಿ ಹಂಚಿಕೆ

Fact Check: ವಿದೇಶಿ ಮಹಿಳೆಯ ಅತ್ಯಾಚಾರ ಆರೋಪಿಗಳೆಲ್ಲರೂ ಕ್ರೈಸ್ತರೆಂದು ಸುಳ್ಳು ಸುದ್ದಿ ಹಂಚಿಕೆ

- Advertisement -
- Advertisement -

ಮಾರ್ಚ್ 1,2024 ಶುಕ್ರವಾರದಂದು ಜಾರ್ಖಂಡ್‌ನ ದುಮ್ಕಾದಲ್ಲಿ ಪ್ರವಾಸಕ್ಕೆಂದು ಬಂದಿದ್ದ 28 ವರ್ಷದ ಸ್ಪ್ಯಾನಿಷ್ ಮಹಿಳೆಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ.

ಸಂತ್ರಸ್ತೆ ಮತ್ತು ಆಕೆಯ ಸಂಗಾತಿ ಜಾರ್ಖಂಡ್‌ನ ದುಮ್ಕಾ ಮೂಲಕ ಭಾಗಲ್‌ಪುರಕ್ಕೆ ತೆರಳುತ್ತಿದ್ದರು. ಈ ನಡುವೆ, ಮಾರ್ಚ್‌ 1ರಂದು ರಾತ್ರಿ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೆಂಟ್ ಹಾಕಿ ತಂಗಿದ್ದರು. ಈ ವೇಳೆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಘಟನೆಯ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ಸಂತ್ರಸ್ತೆ, “ಏಳು ಜನರು  ನಮ್ಮ ಮೇಲೆ ದಾಳಿ ಮಾಡಿ ಥಳಿಸಿದ್ದಾರೆ. ನಮ್ಮ ಕುತ್ತಿಗೆಗೆ ಚಾಕು ಇಟ್ಟು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ” ಎಂದು ಹೇಳಿಕೊಂಡಿದ್ದರು.

ಪ್ರಕರಣ ಸಂಬಂಧ ಮಾರ್ಚ್‌ 6ರ ವೇಳೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಸಂತ್ರಸ್ತೆ 7 ಜನರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿದ್ದರು. ಎಂಟನೇ ವ್ಯಕ್ತಿ ಇತರ ಏಳು ಮಂದಿಯ ದುಷ್ಕೃತ್ಯಕ್ಕೆ ಸಹಾಯ ಮಾಡಿದವ ಎಂದು ಜಾರ್ಮುಂಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆರಂಭದಲ್ಲಿ, ಅಂದರೆ ಮಾರ್ಚ್ 3ರಂದು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಬಳಿಕ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳ ಬಂಧನವಾಗುತ್ತಿದ್ದಂತೆ ಅನೇಕ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು, ಈ ಮೂವರನ್ನು ‘ರೈಸ್ ಬ್ಯಾಗ್ ಮತಾಂತರಿಗಳು’ ಎಂದು ಹೇಳಿದ್ದಾರೆ. ಇದು ಕ್ರಿಶ್ಚಿಯನ್ನರನ್ನು ವಿವರಿಸಲು ಬಳಸುವ ಅವಹೇಳನಕಾರಿ ಪದವಾಗಿದೆ.

ಬಂಧಿತ ವ್ಯಕ್ತಿಗಳು ಕ್ರಿಶ್ಚಿಯನ್ ಮಿಷನರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಬಿಜೆಪಿ ನಾಯಕ ಮತ್ತು ಬೋಧಗಯಾದ ಮಾಜಿ ಶಾಸಕ ಹರಿ ಮಾಂಝಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. “ರೈಸ್ ಬ್ಯಾಗ್‌ಗಾಗಿ ಮಾರಲ್ಪಡುವ ಈ ಜನರು ಯಾವ ನಂಬಿಕೆ ಅಥವಾ ಧರ್ಮಕ್ಕೆ ಸೇರಿದವರು? ಇವರೆಲ್ಲರಿಗೂ ಮರಣದಂಡನೆ ವಿಧಿಸಬೇಕು” ಎಂದು ಅವರು ಬರೆದುಕೊಂಡಿದ್ದರು.

ಪೋಸ್ಟ್ ಲಿಂಕ್ ಇಲ್ಲಿದೆ

ಬಿಜೆಪಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಉಮ್ರಾವ್ ಕೂಡ ಇದೇ ಹೇಳಿಕೆಯನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಬಳಿಕ ಆ ಪೋಸ್ಟ್‌ನ್ನು ಅವರು ಡಿಲೀಟ್ ಮಾಡಿದ್ದಾರೆ. ಡಿಲಿಟ್ ಮಾಡಲಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಕೆಳಗಡೆ ಇದೆ.

ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿರುವ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ಜಿತೇಂದ್ರ ಪ್ರತಾಪ್ ಸಿಂಗ್, “ಬಂಧಿತರೆಲ್ಲರೂ ಕ್ರಿಶ್ಚಿಯನ್ ಮಿಷನರಿಗಳಿಗಾಗಿ ಕೆಲಸ ಮಾಡಿದವರು” ಎಂದು ಬರೆದುಕೊಂಡಿದ್ದರು.

ಪೋಸ್ಟ್ ಲಿಂಕ್ ಇಲ್ಲಿದೆ 

ವೆರಿಫೈ ಮಾಡಲಾದ ಮತ್ತೊಂದು ಬಲಪಂಥೀಯ ಎಕ್ಸ್‌ ಖಾತೆ @RealBababanaras ಎಂಬುವುದರಲ್ಲಿ ಕೂಡ “ರೈಸ್‌ ಬ್ಯಾಗ್‌ಗೆ ಮತಾಂತರಗೊಂಡವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ” ಎಂದು ಬರೆದುಕೊಳ್ಳಲಾಗಿದೆ. ಈ ಪೋಸ್ಟ್‌ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 3,000 ಬಾರಿ ಇದನ್ನು ಮರು ಟ್ವೀಟ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ : ಪೊಲೀಸರು ನೀಡಿದ ಮಾಧ್ಯಮ ಹೇಳಿಕೆಗಳು ಮತ್ತು ಇತರ ಮಾಧ್ಯಮ ವರದಿಗಳ ಪ್ರಕಾರ ಬಂಧಿತ ಎಂಟು ಜನರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಅವರ ಹೆಸರನ್ನು ಹೊರತುಪಡಿಸಿ ಇನ್ನುಳಿದ 6 ಆರೋಪಿಗಳ ಹೆಸರು ಈ ರೀತಿಯಿದೆ.

1.ಸುಕ್ಲಾಲ್ ಹೆಂಬ್ರೋಮ್ (30), ವೃತ್ತಿಯಲ್ಲಿ ಆಟೋ ಚಾಲಕ. 2. ಬಬ್ಲು ಹೆಂಬ್ರೋಮ್ (22), ಗುಜರಾತ್‌ನ ಕಾರ್ಮಿಕ, ಘಟನೆಗೆ ಎರಡು ವಾರಗಳ ಮೊದಲು ಈತ ಜಾರ್ಖಂಡ್‌ಗೆ ಆಗಮಿಸಿದ್ದ. 3.ಬುದ್ಲಾಲ್ ಮರಾಂಡಿ (21), ಗುಜರಾತ್‌ನ ಕಾರ್ಮಿಕ, ಘಟನೆಗೆ ಎರಡು ವಾರಗಳ ಮೊದಲು ಜಾರ್ಖಂಡ್‌ಗೆ ಆಗಮಿಸಿದ್ದ. 4.ಬಾಬೂಜಿ ಸೊರೇನ್ (22), ರೈತ. 5.ರಾಜೋನ್ ಮರಾಂಡಿ (24), ಗುಜರಾತ್‌ನ ಕಾರ್ಮಿಕ, ಘಟನೆಗೆ ಎರಡು ವಾರಗಳ ಮೊದಲು ಜಾರ್ಖಂಡ್‌ಗೆ ಆಗಮಿಸಿದ್ದ.6. ರಾಜೇಶ್ ಮುರ್ಮು (24), ರೈತ.

ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ ಆಲ್ಟ್‌ ನ್ಯೂಸ್ ಜರ್ಮುಂಡಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಸಂತೋಷ್ ಕುಮಾರ್ ಅವರನ್ನು ಸಂಪರ್ಕಿಸಿ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿದೆ.

ಆಲ್ಟ್‌ ನ್ಯೂಸ್‌ ಪ್ರಕಾರ, ಅತ್ಯಾಚಾರ ಪ್ರಕರಣ ಸಂಬಂಧ ಆರಂಭದಲ್ಲಿ ಬಂಧಿಸಲ್ಪಟ್ಟ ಮೂವರಲ್ಲಿ ಯಾರೂ ಕ್ರಿಶ್ಚಿಯನ್ ಅಥವಾ ಕ್ರಿಶ್ಚಿಯನ್ ಮಿಷನರಿಗಾಗಿ ಕೆಲಸ ಮಾಡಿದವರಿಲ್ಲ. ಬಂಧಿತ ಎಂಟು ಜನರಲ್ಲಿ ಒಬ್ಬನಾದ ಬಾಬೂಜಿ ಸೊರೆನ್ ಮಾತ್ರ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನು. ಆದರೆ, ಆತ ಕೂಡ ಮಿಷನರಿಗಳಿಗಾಗಿ ಕೆಲಸ ಮಾಡಿದವನಲ್ಲ, ಮಾಡುತ್ತಿರಲಿಲ್ಲ. ಆತ ವೃತ್ತಿಯಲ್ಲಿ ಕೃಷಿಕನಾಗಿದ್ದು, ಡಿಜೆ ಕಾರ್ಯಕ್ರಮಗಳಿಗೆ ತನ್ನ ಸಂಗೀತ ಉಪಕರಣಗಳನ್ನು ಬಾಡಿಗೆ ನೀಡುವ ವ್ಯವಹಾರ ಕೂಡ ಮಾಡುತ್ತಿದ್ದಾನೆ. ಉಳಿದ ಎಲ್ಲಾ ಆರೋಪಿಗಳು ಬುಡಕಟ್ಟುಗಳ ‘ಸರ್ನಾ’ ನಂಬಿಕೆಯ ಅನುಯಾಯಿಗಳು ಎಂದು ಎಸ್‌ಡಿಪಿಒ ಸ್ಪಷ್ಟಪಡಿಸಿದ್ದಾರೆ.

‘ಸರ್ನಾ’ ಎಂಬುವುದು ಬುಡಕಟ್ಟು ಜನಾಂಗದವರಲ್ಲಿ ಜನಪ್ರಿಯವಾಗಿರುವ ಸ್ಥಳೀಯ ನಂಬಿಕೆಯಾಗಿದೆ. ಇದರ ಅನುಯಾಯಿಗಳು ಪ್ರಕೃತಿ ಆರಾಧಕರು. ಇವರು ದಶಕಗಳಿಂದ ಪ್ರತ್ಯೇಕ ಧಾರ್ಮಿಕ ಗುರುತಿಗಾಗಿ ಹೋರಾಡುತ್ತಿದ್ದಾರೆ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸೆಪ್ಟೆಂಬರ್ 2023ರಲ್ಲಿ ಬುಡಕಟ್ಟು ಜನಾಂಗದವರ ‘ಸರ್ನಾ ಧಾರ್ಮಿಕ ಸಂಹಿತೆ’ಗೆ ಮಾನ್ಯತೆ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದರು.

“ಸರ್ನಾ ನಂಬಿಕೆಯ ಜನರ ಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ನಿರಂತರ ಕುಸಿಯುತ್ತಿದೆ. ಇದರ ಪರಿಣಾಮವಾಗಿ ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್ ಅಡಿಯಲ್ಲಿ ಬುಡಕಟ್ಟು ಅಭಿವೃದ್ಧಿಯ ನೀತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ, ಸರ್ನಾ ಅಥವಾ ಪ್ರಕೃತಿಯನ್ನು ಪೂಜಿಸುವ ಆದಿವಾಸಿಗಳನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಜೈನ ಅನುಯಾಯಿಗಳಿಂದ ಭಿನ್ನವೆಂದು ಗುರುತಿಸಲು ಮತ್ತು ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಪ್ರತ್ಯೇಕ ಬುಡಕಟ್ಟು ಸರ್ನಾ ಕೋಡ್ ಅಗತ್ಯವಾಗಿದೆ” ಎಂದು ಸೊರೇನ್ ಪತ್ರದಲ್ಲಿ ತಿಳಿಸಿದ್ದರು. ಜಾರ್ಖಂಡ್‌ನ ಹೆಚ್ಚಿನ ಜನರು ಸರ್ನಾ ಧರ್ಮವನ್ನು ಅನುಸರಿಸುವವರಾಗಿದ್ದಾರೆ.

ಅಲ್ಟ್‌ ನ್ಯೂಸ್‌ ಪ್ರಕಾರ, ಬಂಧಿತ ಬಾಬೂಜಿ ಸೊರೇನ್ ಮತ್ತು ಇಬ್ಬರು ಅಪ್ರಾಪ್ತರನ್ನು ಹೊರತುಪಡಿಸಿ, ಆರೋಪಿಗಳಲ್ಲಿ ಇಬ್ಬರು ಹೆಂಬ್ರಾಮ್‌ಗಳು, ಇಬ್ಬರು ಮರಾಂಡಿಗಳು ಮತ್ತು ಒಬ್ಬ ಮುರ್ಮು ಇದ್ದಾರೆ. ಇವೆಲ್ಲವೂ ‘ಸಂತಾಲ್’ ಸಮುದಾಯದೊಳಗಿನ ಕುಲಗಳು. ‘ಹೆಂಬ್ರೊಮ್’, ‘ಮೆರಾಂಡಿ’ ಮತ್ತು ‘ಮುರ್ಮು’ ಸಂತಾಲ್‌ನ 12 ‘ಗೋತ್ರ’ಗಳಲ್ಲಿ ಸೇರಿವೆ. ಸುಮಾರು 6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಸಂತಾಲ್‌ಗಳು, ಭಾರತದ ಅತಿದೊಡ್ಡ ಬುಡಕಟ್ಟು ಜನಾಂಗದವರಾಗಿದ್ದಾರೆ. ಇವರು ಹೆಚ್ಚಾಗಿ ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಕೃತವಾಗಿದ್ದಾರೆ.

ಕೊನೆಯದಾಗಿ ಹೇಳುವುದಾದರೆ, ಸ್ಪ್ಯಾನಿಷ್ ವ್ಲಾಗರ್‌ನ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎಂಟು ವ್ಯಕ್ತಿಗಳಲ್ಲಿ ಒಬ್ಬ ಮಾತ್ರ ಕ್ರಿಶ್ಚಿಯನ್. ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಾಚಾರ ಆರೋಪಿಗಳೆಲ್ಲರೂ ಕ್ರಿಶ್ಚಿಯನ್ ಸಮುದಾಯದವರು ಎಂದು ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲಾಗಿದೆ.

ಇದನ್ನೂ ಓದಿ : Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೆನ್‌ಡ್ರೈವ್‌ ಬಿಡುಗಡೆಯಲ್ಲಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಕೈವಾಡ: ಡಿ.ಕೆ.ಸುರೇಶ್

0
ಪೆನ್ ಡ್ರೈವ್ ವಿಚಾರ ಎಲ್ಲರಿಗಿಂತ ಮೊದಲೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ತಿಳಿದಿತ್ತು. ಈ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಪೆನ್‌ ಡ್ರೈವ್‌ ಬಿಡುಗಡೆಯಲ್ಲಿ ಮೈತ್ರಿ...