Homeಕರ್ನಾಟಕರೈತರ ಸಾಲಮನ್ನಾದಿಂದ ದೇಶಕ್ಕೆ ಉಪಯೋಗವಾಗಿಲ್ಲ; ತೇಜಸ್ವಿ ಸೂರ್ಯ ಹೇಳಿಕೆಗೆ ಮಣ್ಣಿನ ಮಕ್ಕಳ ಆಕ್ರೋಶ

ರೈತರ ಸಾಲಮನ್ನಾದಿಂದ ದೇಶಕ್ಕೆ ಉಪಯೋಗವಾಗಿಲ್ಲ; ತೇಜಸ್ವಿ ಸೂರ್ಯ ಹೇಳಿಕೆಗೆ ಮಣ್ಣಿನ ಮಕ್ಕಳ ಆಕ್ರೋಶ

ತೇಜಸ್ವಿ ಸೂರ್ಯರಿಗೆ ಅರ್ಥವ್ಯವಸ್ಥೆಯ ಎಬಿಸಿಡಿ ಗೊತ್ತಿಲ್ಲ ಎಂದು ರೈತ ಮುಖಂಡರು ಪ್ರತಿಕ್ರಿಯಿಸಿದ್ದಾರೆ

- Advertisement -
- Advertisement -

ರೈತರ ಸಾಲಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿರುವ ಅವರು, “ಆಗ ಯುಪಿಎ ಸರ್ಕಾರವಿತ್ತು. 2009ನೇ ಇಸವಿಯಲ್ಲಿ ಚುನಾವಣೆಗೆ ಹೋಗಬೇಕಿತ್ತು. 2008ನೇ ಇಸವಿಯ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದರು. ಚುನಾವಣೆ ಗೆಲ್ಲುವ ದೃಷ್ಟಿಯಲ್ಲಿ ಈ ಕ್ರಮ ಜರುಗಿಸಿದರು. ಸಾಲಮನ್ನಾದಿಂದ ತಾತ್ಕಾಲಿಕವಾಗಿ ರೈತರಿಗೆ ಒಂದಿಷ್ಟು ಉಪಯೋಗವಾಯಿತು. ಅದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಾಗಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಮುಂದಿನ ವರ್ಷ ಚುನಾವಣೆ ಇದ್ದರೂ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶಕ್ಕೆ ಲುಕ್ಸಾನು (ನಷ್ಟ) ಆಗುವಂತಹ ಜನಪ್ರಿಯ ಯೋಜನೆಗಳಿಗೆ ಹೋಗಲಿಲ್ಲ. ಬದಲಿಗೆ ಹತ್ತು ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುತ್ತೇವೆ, ಮೂಲಸೌಕರ್ಯ ಸೃಷ್ಟಿಸುತ್ತೇವೆ, ಆ ಮೂಲಕ 30 ಲಕ್ಷ ಕೋಟಿ ರೂ. ಲಾಭವನ್ನು ಈ ದೇಶದಲ್ಲಿ ಕಾಣುತ್ತೇವೆ ಎನ್ನುವಂತಹ ದೂರದೃಷ್ಟಿಯ ಕೆಲಸವನ್ನು ಮೋದಿಯವರ ಸರ್ಕಾರ ಮಾಡಿದೆ” ಎಂದು ಬಣ್ಣಿಸಿದ್ದಾರೆ.

“ಕಾಂಗ್ರೆಸ್ ಮಾದರಿಯ ಆರ್ಥಿಕತೆ ಮತ್ತು ಬಿಜೆಪಿ ಮಾದರಿಯ ಆರ್ಥಿಕತೆ ನಡುವಿನ ವ್ಯತ್ಯಾಸವಿದು” ಎಂದು ಅವರು ವಿಶ್ಲೇಷಿಸಿದ್ದಾರೆ.

ಅವಿವೇಕದ ಹೇಳಿಕೆ: ಬಡಗಲಪುರ ನಾಗೇಂದ್ರ 

ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಸಂಸದರ ಹೇಳಿಕೆಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ತೇಜಸ್ವಿ ಸೂರ್ಯ ಅವರ ಹೇಳಿಕೆ ಅವಿವೇಕತನದಿಂದ ಕೂಡಿದೆ. ಸಾಮಾಜಿಕ ಮತ್ತು ಕೃಷಿಯ ಜ್ಞಾನದ ಕೊರತೆ ಇವರಿಗಿದೆ. ಕೃಷಿಯಿಂದ ಶೇ. 63ರಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಇದೇ ಬಿಜೆಪಿ ಸರ್ಕಾರದ ಸಚಿವರು ಉತ್ತರಿಸಿದ್ದಾರೆ. ಈ ದೇಶದಲ್ಲಿರುವ ಶೇ. 63ರಷ್ಟು ರೈತರು ಪರೋಕ್ಷ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಎಲ್ಲ ವಸ್ತುಗಳನ್ನು ಖರೀದಿಸಿ, ಖಜಾನೆಗೆ ಹಣ ಸಂದಾಯ ಮಾಡುತ್ತಿರುವವರು ನಾವು. ಸಾಲಮನ್ನಾ ಮಾಡಿ ಎಂದು ನಾವು ಕೇಳುತ್ತಿಲ್ಲ. ಎಂಎಸ್‌ಪಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿ ಈವರೆಗೂ ಈ ಕುರಿತು ಮಾತನಾಡಿಲ್ಲ. ರೈತರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ. ಇದರಿಂದ ಯಾವ ಉದ್ಧಾರವಾಗಿದೆ?” ಎಂದು ಕೇಳಿದರು.

“ಇಂದಿಗೂ 36% ಜನರು ಹಸಿವಿನಿಂದ, 37 % ಬಾಣಂತಿಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇವರ ಸರ್ಕಾರದಿಂದ ಯಾವ ಸಾಧನೆಯಾಗಿದೆ? ಅನ್ನ ತಿನ್ನುವ ಮುನ್ನ, ಯಾರ ಶ್ರಮದಿಂದ ಈ ಅನ್ನ ಬಂದಿದೆ ಎಂಬುದನ್ನು ತೇಜಸ್ವಿ ಸೂರ್ಯ ಯೋಜನೆ ಮಾಡಬೇಕು. ಗ್ರಾಮೀಣ ಪ್ರದೇಶಕ್ಕೆ ಬಂದು ರೈತರೊಂದಿಗೆ ಸಂವಾದ ಮಾಡಲಿ, ವಾಸ್ತವಗಳನ್ನು ಅವರು ತಿಳಿದುಕೊಳ್ಳಲಿ” ಎಂದು ಆಶಿಸಿದರು.

ತೇಜಸ್ವಿ ಸೂರ್ಯರಿಗೆ ಅರ್ಥವ್ಯವಸ್ಥೆಯ ಎಬಿಸಿಡಿ ಗೊತ್ತಿಲ್ಲ: ಟಿ.ಯಶವಂತ್

ಮದ್ದೂರಿನ ರೈತ ಮುಖಂಡರಾದ ಟಿ.ಯಶವಂತ್‌ ಅವರು ಪ್ರತಿಕ್ರಿಯಿಸಿ, “ತೇಜಸ್ವಿ ಸೂರ್ಯ ಅವರಿಗೆ ಅರ್ಥ ವ್ಯವಸ್ಥೆಯ ಎಬಿಸಿಡಿ ಗೊತ್ತಿಲ್ಲ. ಶತಮೂರ್ಖನ ರೀತಿ ಮಾತನಾಡಿದ್ದಾರೆ. ಜಗತ್ತು ಆರ್ಥಿಕ ಹಿಂಜರಿತದಿಂದ ಹೊರಬರಬೇಕಾದರೆ ಜನತೆಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಇಂದು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅರ್ಥ ವ್ಯವಸ್ಥೆಯ ಬಗ್ಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ ಅಜ್ಞಾನವನ್ನು ತೇಜಸ್ವಿ ಪ್ರದರ್ಶನ ಮಾಡಿದ್ದಾರೆ” ಎಂದು ಟೀಕಿಸಿದರು.

“ರೈತರು ಎರಡು ಸಲ ಮಾರ್ಕೆಟ್‌ಗೆ ಹೋಗುತ್ತಾರೆ- ತನಗೆ ಬೇಕಾದದ್ದನ್ನು ಖರೀದಿಸಲು ಹಾಗೂ ತಾನು ಬೆಳೆದದ್ದನ್ನು ಮಾರಲು. ಮಾರಲು ಹೋದಾಗಲೆಲ್ಲ ಅಗ್ಗ, ಬೇಕಾದದ್ದನ್ನೂ ಖರೀದಿಸುವಾಗಲೆಲ್ಲ ದುಬಾರಿಯನ್ನು ರೈತ ತೆರುತ್ತಾನೆ. ಇದು ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ಇದಕ್ಕೆ  ಸರ್ಕಾರದ ತಪ್ಪು ನೀತಿಗಳು ಕಾರಣ. ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಬಿಜೆಪಿ ಅನುಸರಿಸುತ್ತಿರುವ ತಪ್ಪು ನೀತಿಗಳು ಕಾರಣ” ಎಂದು ತಿಳಿಸಿದರು.

“ತಪ್ಪು ನೀತಿಯನ್ನು ಸರಿಪಡಿಸಿ, ರೈತ ಸಮುದಾಯಕ್ಕೆ ನೆರವು ನೀಡಬೇಕೆಂದರೆ ಸಾಲಮನ್ನಾ ಅಗತ್ಯ. ವಿಜಯ ಮಲ್ಯ, ನೀರವ್ ಮೋದಿ, ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳ ಸಾಲ ಕಳೆದ ಹದಿನಾಲ್ಕು ವರ್ಷಗಳಲ್ಲಿ ಹದಿನೈದು ಲಕ್ಷ ಕೋಟಿ ರೂ. ಮನ್ನಾವಾಗಿದೆ. ಇದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆಯೇ? ಉದ್ಯಮಿಗಳಿಗೆ ಒಂದು ನ್ಯಾಯ, ರೈತರಿಗೆ ಒಂದು ನ್ಯಾಯವೇ?” ಎಂದು ಪ್ರಶ್ನಿಸಿದರು.

“ಬೆಳೆ ಬೆಳೆಯಲು ರೈತ ಲಕ್ಷಾಂತರ ರೂ. ಖರ್ಚು ಮಾಡುತ್ತಾನೆ. ರೈತನ ಬಂಡವಾಳಕ್ಕೆ ರಕ್ಷಣೆ ಬೇಡವೇ? ರೈತರ ಬಗ್ಗೆ ಭಾಷಣ ಮಾಡಿ ಓಟು ಹಾಕಿಸಿಕೊಂಡ ನರೇಂದ್ರ ಮೋದಿಯವರು, ತೇಜಸ್ವಿ ಸೂರ್ಯರಂತಹ ಎಳಸು ವ್ಯಕ್ತಿಯ ಮೂಲಕ ಈ ಮಾತುಗಳನ್ನು ಹೇಳಿಸುತ್ತಿದ್ದಾರೆ. ಇದನ್ನು ರೈತ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ” ಎಂದರು.

ಸಾಲಮನ್ನಾ ಬೇಡವೆಂದರೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ: ಎಚ್‌.ಆರ್‌.ಬಸವರಾಜಪ್ಪ

ರೈತ ಮುಖಂಡರಾದ ಎಚ್.ಆರ್‌.ಬಸವರಾಜಪ್ಪ ಮಾತನಾಡಿ, “ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ಸಾಲ ಮನ್ನಾ ಮಾಡುವ ಅಗತ್ಯ ಬರುವುದಿಲ್ಲ. ಇವರು ಬಂಡವಾಳಶಾಹಿಗಳಿಗೆ ಶೇ. 1ರಷ್ಟು ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. ರೈತರಿಗೆ ಶೇ. 12ರಿಂದ ಶೇ. 36ರ ದರದಲ್ಲಿ ಬಡ್ಡಿ ವಿಧಿಸಿ ಸಾಲ ನೀಡುತ್ತಾರೆ. ಕಳೆದ 16 ವರ್ಷಗಳಲ್ಲಿ ರೈತರಿಗೆ  45 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸರ್ಕಾರಿ ಸಂಸ್ಥೆಗಳೇ ಹೇಳುತ್ತಿವೆ. ಇದನ್ನು ಯಾರು ಕೊಡುತ್ತಾರೆ? ನಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕಲ್ಲವೇ? ನಷ್ಟಕ್ಕೆ ಪರಿಹಾರವಾಗಿ ಸಾಲಮನ್ನಾ ಮಾಡುತ್ತಿದ್ದಾರಷ್ಟೇ” ಎಂದು ತಿಳಿಸಿದರು.

“ಬಂಡವಾಳಶಾಹಿಗಳು ಕೋಟಿ ಕೋಟಿ ಹಣವನ್ನು ಮುಳುಗಿಸುತ್ತಾರೆ. ಈ ತೇಜಸ್ವಿ ಸೂರ್ಯನಂಥವರಿಗೆ ರೈತರ ಹೆಸರು ಹೇಳುವ ಯೋಗ್ಯತೆ ಇಲ್ಲ. ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದು ಏಕೆ? ರೈತರ ಸಾಲ ಮನ್ನಾ ಬಂದಾಗ ಇವರ ಕಣ್ಣು ಕೆಂಪಾಗುತ್ತವೆ. ತೇಜಸ್ವಿ ಸೂರ್ಯ ರೈತರಲ್ಲ, ದೇಶಪ್ರೇಮಿಯೂ ಅಲ್ಲ, ದೇಶಕ್ಕೆ ಇವರ ಕೊಡುಗೆ ಏನೆಂದು ಸ್ಪಷ್ಟಪಡಿಸಬೇಕು. ರೈತರ ಬಗ್ಗೆ ಮಾತನಾಡುವ ನೈತಿಕತೆ ತೇಜಸ್ವಿಸೂರ್ಯರಿಗೆ ಇಲ್ಲ. ಹಿಂದುತ್ವ ಹೆಸರಲ್ಲಿ ಯುವಕರನ್ನು ಕೆರಳಿಸಿ ಮತಹಾಕಿಸಿಕೊಂಡು ಗೆದ್ದಂತೆ ಅಲ್ಲ” ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...