Homeಮುಖಪುಟಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ಎಲ್ಲ ಬೃಹತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇರುವುದು, ಎಲ್ಲ ಭಿನ್ನತೆಗಳ ನಡುವೆ ಸೇರುವ ಬಿಂದುಗಳನ್ನು ಮಹಿಳಾ ಸಮುದಾಯ ಗುರುತಿಸಿಕೊಳ್ಳುತ್ತಾ, ಒಗ್ಗೂಡುತ್ತಾ ಹೋಗುವುದರಲ್ಲಿ ಮಾತ್ರ.

- Advertisement -
- Advertisement -

ಮಾರ್ಚ್ 2021ರಲ್ಲಿ ಬಿಬಿಸಿ ನ್ಯೂಸ್‌ನಲ್ಲಿ ಭಾರತದ ಒಂದು ಸುದ್ದಿ ಪ್ರಕಟವಾಯಿತು. ಅದರ ತಲೆಬರಹ ಹೀಗಿತ್ತು- ‘ಹೆಣ್ಣುಮಕ್ಕಳು ರಿಪ್ಡ್ ಜೀನ್ಸ್ ತೊಡುವುದರಿಂದಲ್ಲ ಅತ್ಯಾಚಾರಗಳು ಹೆಚ್ಚುವುದು, ಉತ್ತರಖಂಡದ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅಂತಹವರು ಸ್ತ್ರೀದ್ವೇಷವನ್ನು ಬಹಿರಂಗವಾಗಿ ಪ್ರದರ್ಶಿಸುತ್ತಲೂ ತಮ್ಮ ಸ್ಥಾನಗಳಲ್ಲಿ ಭದ್ರವಾಗಿ ಮುಂದುವರೆಯುವುದರಿಂದ; ರಾಷ್ಟ್ರ ನಾಯಕರ ಕೆಲಸ ಹೆಣ್ಣುಮಕ್ಕಳು ಏನು ಉಡುತ್ತಾರೆ ಅಥವಾ ಉಣ್ಣುತ್ತಾರೆ ಎಂಬುದನ್ನು ಇಣುಕಿ ನೋಡುತ್ತಾ ಕೂರುವುದಲ್ಲ’. ಈ ಕಟು ತಲೆಬರಹವುಳ್ಳ ಲೇಖನವು ಬಿಬಿಸಿ ಸುದ್ದಿಯಲ್ಲಿ ಪ್ರಕಟವಾಗಲು ಕಾರಣ ಆಗಷ್ಟೇ ಹೊಸದಾಗಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ತಿರತ್ ಸಿಂಗ್ ರಾವತ್ ಅನಗತ್ಯವಾಗಿ “ಮಹಿಳೆಯರು ಹರಿದುಹೋದ ಜೀನ್ಸ್ ಧರಿಸಿ (ರಿಪ್ಡ್ ಜೀನ್ಸ್) ಮಂಡಿ ತೋರಿಸುವುದರಿಂದಲೇ ಅತ್ಯಾಚಾರಗಳು ಹೆಚ್ಚುತ್ತಿರುವುದು” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಚಡ್ಡಿ ಧರಿಸಿ ಮಂಡಿ ತೋರಿಸುತ್ತಿರುವ ಚಿತ್ರಗಳು ಹರಿದಾಡಿದ್ದವು.

ಇತ್ತೀಚೆಗೆ ಉಡುಪಿಯ ಕಾಲೇಜೊಂದರಲ್ಲಿ ಬುರ್ಖಾ ಮತ್ತು ತಲೆವಸ್ತ್ರ (ಹಿಜಾಬ್) ಧರಿಸಿ ಬರುವ ವಿದ್ಯಾರ್ಥಿನಿಯರನ್ನು ತರಗತಿಯೊಳಕ್ಕೆ ಬಿಡುವುದಿಲ್ಲ ಎಂದು ಸರ್ಕಾರಿ ಕಾಲೇಜಿನ ಆಡಳಿತ ಮಂಡಳಿ ಹೇಳಿತು. ಇದಕ್ಕೆ ಸಂಘಪರಿವಾರದ ಪ್ರಚೋದನೆಯಿಂದ ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಒತ್ತಡ ಕಾರಣವೆಂದೂ ಕಾಲೇಜು ಹೇಳಿತ್ತು. ಸಂವಿಧಾನಬದ್ಧವಾಗಿ ಯಾವುದೇ ಉಡುಪು ಧರಿಸಿ ಬರುವ ತಮ್ಮ ಶಿಕ್ಷಣ ಸಂಸ್ಥೆಯ ಯಾರೇ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶಿಸಲು ಬಿಡುವುದಿಲ್ಲವೆಂದು ಹೇಳಲು ಅವಕಾಶವೇ ಇಲ್ಲದಾಗಲೂ, ಹಾಗೊಂದು ವೇಳೆ ಯಾರಾದರೂ ಅದಕ್ಕೆ ಅಡ್ಡಿ ಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಬಾಧ್ಯತೆ ಇದ್ದಾಗಲೂ ಅದೆಲ್ಲವನ್ನೂ ಗಾಳಿಗೆ ತೂರಿ ಕಾಲೇಜು ಹೀಗೊಂದು ವಿಪರ್ಯಾಸಕರ ನಿರ್ಧಾರ ಕೈಗೊಂಡಿತ್ತು. ಇಂತಹ ಪೂರ್ವನಿರ್ಧಾರಿತ ಪ್ರತಿಭಟನೆಗಳು ಮತ್ತು ಕಾಲೇಜುಗಳ ಮಣಿಯುವಿಕೆಗಳು ನಡೆಯವುದು ಇದೇ ಮೊದಲಲ್ಲವಾದರೂ, ಈ ಬಾರಿ ಅನೇಕ ದಿನಗಳ ಕಾಲ ಈ ಘಟನೆ ಎಳೆದಾಡಿ ಹಲವು ವಿದ್ಯಾರ್ಥಿನಿಯರು ದಿನಗಟ್ಟಲೆ ತರಗತಿಯ ಹೊರಗೆ ಕಾರಿಡಾರ್‌ಗಳಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿ ಆತಂಕ ಹುಟ್ಟುಹಾಕಿತು.

ಯಾವಾಗಲೂ ಬಹಳ ಅನುಕೂಲಕರವಾಗಿ ಇದನ್ನು ಸಮವಸ್ತ್ರದ ವಿವಾದವೆಂಬಂತೆ ಬಿಂಬಿಸಲಾಗುತ್ತದೆ. ಇದು ಬಲಗೊಳ್ಳುತ್ತಿರುವ ಬಹುಸಂಖ್ಯಾತ ಕೋಮುವಾದದ ಮುಖಕ್ಕೆ ರಾಚುವಂತಹ ದುರಾಕ್ರಮಣ ಎಂಬುದರಲ್ಲಿ ಏನಾದರೂ ಅನುಮಾನ ಇರಲು ಸಾಧ್ಯವೇ? ಅದೇ ಸಂದರ್ಭದಲ್ಲಿ ಇಂತಹ ದುರಾಕ್ರಮಣವು ಮೊದಲೇ ಅಂಚಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ಇನ್ನಷ್ಟು ಅಭದ್ರತೆಗೆ ತಳ್ಳಿ, ಮತ್ತಷ್ಟು ಧಾರ್ಮಿಕ ಮೂಲಭೂತವಾದಿ ತಳಹದಿಯ ಮೇಲೆ ಆ ಸಮುದಾಯ ಒಗ್ಗೂಡಲು ಪ್ರಯತ್ನಿಸುವ ಕಡೆಗೆ ಅನಿವಾರ್ಯವಾಗಿ ಜಾರುವಂತೆ ಮಾಡಲಾಗುತ್ತದೆ. ಅಂದರೆ, ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಬರಲೇಕೂಡದೆಂಬ ಕಣ್ಣಪ್ಪಣೆಯನ್ನು ಹಿಂದೂ ಪುರೋಹಿತಶಾಹಿ ಪಿತೃಪ್ರಧಾನತೆ ಹೇರಿಕೆ ಮಾಡಲು ನೋಡಿದರೆ ಮತ್ತೊಂದೆಡೆ ಹಿಜಾಬ್ ಧರಿಸದಿದ್ದರೆ ಶಾಲೆ/ಕಾಲೇಜಿಗೆ ಹೋಗಲೇಕೂಡದು ಎಂಬ ಹೇರಿಕೆಯನ್ನು ಅಲ್ಪಸಂಖ್ಯಾತ ಪಿತೃಪ್ರಧಾನತೆ ಮಾಡುತ್ತದೆ.

ಮಹಿಳೆಯರ ಉಡುಪು, ಓದು, ಉದ್ಯೋಗ, ಸಂಗಾತಿ ಮತ್ತು ಒಟ್ಟಾರೆಯಾಗಿ ಇಡೀ ಬದುಕು ಮತ್ತು ವ್ಯಕ್ತಿತ್ವ ಅವರದಲ್ಲದ ಆಯ್ಕೆಯಾಗಿರುವುದು ಕಾಲಾನುಕಾಲದಿಂದ ನಡೆದು ಬಂದ ಸಂಗತಿ. ಇದರಲ್ಲಿ ಹೊಸತೇನೂ ಇಲ್ಲ. ಅದೇ ಹಳೆಯ ವಿಷಯವೇ ಹೊಸ ಕಾಲವೆಂದು ಕರೆಯಲ್ಪಡುತ್ತಿರುವ ಈ ದಿನಗಳಲ್ಲಿಯೂ ಮತ್ತೆ ಮತ್ತೆ ಹೊಸ ತಲೆಮಾರುಗಳನ್ನೂ ಬಿಡದೇ ಕಾಡುತ್ತಿರುವುದಷ್ಟೇ ಹೊಸದಾಗಿ ನಾವು ಚಿಂತಿಸಬೇಕಾದ ವಿಷಯ. ಈಚೆಗೆ, ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಬುರ್ಖಾ-ನಕಾಬ್ ಧರಿಸಿ ಬಂದರೆ ಅವರನ್ನು ಒಳಗೆ ಬಿಡುವುದಿಲ್ಲವೆನ್ನುವುದು, ವ್ಯಾಯಾಮ ಮಾಡುವ ಹೆಣ್ಣುಮಕ್ಕಳ ಒಳುಡುಪಿನ ಕುರಿತು ಮಾಧ್ಯಮಗಳು ಗಂಟೆಗಟ್ಟಲೆಯ ಚರ್ಚೆ ಮಾಡುವುದು, ಬುಲ್ಲಿ ಬಾಯಿ ಥರದ ಆಪ್‌ಗಳು ಹೆಣ್ಣುಮಕ್ಕಳನ್ನು ಹರಾಜಿಗಿಡುವ ದಾಷ್ಟ್ಯ ತೋರುವುದು, ತಮ್ಮ ಉಡುಪಿನ ಬಗ್ಗೆ ಧೈರ್ಯವಾಗಿ ಮಾತನಾಡುವ ಮಹಿಳೆಯರ ಮೇಲೆ ಪ್ರಕರಣ ದಾಖಲಿಸುವುದಕಿವು ಕೊನೆಮೊದಲಿಲ್ಲದಂತೆ ನಡೆಯುತ್ತಲೇ ಹೋಗುತ್ತಿರುವುದು ಸಂವೇದನಾಶೀಲರ ಪಾಲಿಗೆ ಉಸಿರುಕಟ್ಟಿಸುವ ಅಸಹನೀಯ ವಾತಾವರಣವನ್ನು ಸೃಷ್ಟಿಸಿದೆ. ಹೆಣ್ಣುಮಕ್ಕಳು ಏನು ಉಡುತ್ತಾರೆ, ಏನು ಓದುತ್ತಾರೆ, ಏನು ತಿನ್ನುತ್ತಾರೆ, ಯಾರೊಂದಿಗೆ ತಿರುಗುತ್ತಾರೆ ಎಂಬುದೆಲ್ಲ ಅವರದ್ದೇ ಆಯ್ಕೆ ಎಂದು ಸಂವಿಧಾನ ಹೇಳುತ್ತಿರುವಾಗಲೇ, ಈ ಎಲ್ಲವನ್ನೂ ಮಹಿಳೆಯರ ಪರವಾಗಿ ತಾವೇ ಆಯ್ಕೆ ಮಾಡಿ ಅವರ ತಲೆಯ ಮೇಲೆ ಚಪ್ಪಡಿಯಂತೆ ಎಳೆದುಹಾಕಲು ಸದಾ ಸಿದ್ಧವಾಗಿ ಪುರುಷಾಧಿಪತ್ಯವೇ ಮೈವೆತ್ತಂತಹ ನಮ್ಮ ಸಮಾಜ ನಿಂತಿದೆ!

ಕರ್ನಾಟಕವನ್ನೂ ಒಳಗೊಂಡಂತೆ ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಬುರ್ಕಾ ಅಥವಾ ತಲೆಗೆ ಸ್ಕಾರ್ಫ್ ಧರಿಸುವುದರ ವಿರುದ್ಧ ಬಹಳ ಆತಂಕಕಾರಿಯಾದ ಬಲಪಂಥೀಯ ಪ್ರಚಾರ ಮತ್ತು ಪ್ರತಿಭಟನೆಗಳು ನಡೆದಿವೆ. 2019ರ ಮೇ ತಿಂಗಳಿನಲ್ಲಿ ಲಕ್ನೋ ನಗರದ ಮೆಟ್ರೋದಲ್ಲಿ ಬುರ್ಖಾ ಧರಿಸಿದ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಸ್ಥಳೀಯ ಬಜರಂಗದಳ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ ಮೆಟ್ರೋ ಆಡಳಿತ ಮಂಡಳಿ ಇನ್ನು ಮುಂದೆ ಬುರ್ಕಾ ಮತ್ತು ಸಂಪೂರ್ಣ ಮುಖ ಮುಚ್ಚುವಂತೆ ಸ್ಕಾರ್ಫ್ ಧರಿಸಿ ಮೆಟ್ರೋದಲ್ಲಿ ಪಯಣಿಸಲು ಅವಕಾಶ ಇಲ್ಲವೆಂಬ ನಿರ್ಧಾರ ಕೈಗೊಂಡಿತು. ಶಾಲಾ ಕಾಲೇಜುಗಳಲ್ಲಂತೂ ಸ್ಕಾರ್ಫ್ ಧರಿಸುವ ಮುಸ್ಲಿಂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಎಪಿವಿಪಿ ‘ಕೇಸರಿ ಶಾಲು’ ಪ್ರತಿಭಟನೆ ನಡೆಸುವುದು ಸಾಮಾನ್ಯವೆಂಬಂತಾಗಿದೆ. ಕೇರಳದಂತಹ ರಾಜ್ಯವೂ ಇಂತಹ ಘಟನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ನಿರುಪದ್ರವಿಯಾಗಿ ಕಾಣುವ ಈ ಪ್ರತಿಭಟನೆಗಳ ಪರಿಣಾಮ ಅಷ್ಟು ಸರಳವಾಗಿಲ್ಲ. ಇದರ ಪರಿಣಾಮವಾಗಿ ಪೋಷಕರು ಮತ್ತು ಸ್ವತಃ ವಿದ್ಯಾರ್ಥಿನಿಯರು ಅಪಾರ ಆತಂಕ ಮತ್ತು ಒತ್ತಡಕ್ಕೆ ಗುರಿಯಾಗುತ್ತಾರೆ. ಕೆಲವು ವರ್ಷಗಳ ಹಿಂದೆ ನಡೆದ ಉಡುಪಿಯ ವಿವಾಹಿತ ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿನಿಯ ಪ್ರಕರಣದಲ್ಲಿ ಆದಂತೆ, ಮೊದಲೇ ಕುಟುಂಬದಲ್ಲಿ ಸಂಘರ್ಷ ನಡೆಸಿ ವಿದ್ಯಾಭ್ಯಾಸ ಪಡೆಯಲು ಅಥವಾ ಉನ್ನತ ಶಿಕ್ಷಣ ಮುಂದುವರೆಸಲು ಅವಕಾಶ ಪಡೆದಿರಬಹುದಾದ ಅನೇಕ ಯುವತಿಯರು ತಮ್ಮ ಕನಸುಗಳಿಗೆ ತಿಲಾಂಜಲಿಯಿಡಬೇಕಾದ ದುರಂತದ ಸನ್ನಿವೇಶ ಕಾಣುತ್ತಿದೆ.

ಇವೆಲ್ಲವೂ ಬೆಳೆಯುತ್ತಿರುವ ಫ್ಯಾಸಿಸಂ ಮತ್ತು ಬಲಪಂಥೀಯ ಚಿಂತನೆಗಳು, ಪ್ರಚಾರಗಳು ಮತ್ತು ದಾಳಿಗಳ ಹಿನ್ನೆಲೆಯಲ್ಲಿ ಮಾತನಾಡಬೇಕಾದ ಸಂಗತಿಗಳು. ಅದೇ ಸಂದರ್ಭದಲ್ಲಿ ‘ಬುರ್ಖಾ ವಿವಾದ’ಕ್ಕೆ ಮತ್ತೂ ಒಂದು ಆಯಾಮವೂ ಇದೆ. ಇದು ಫ್ಯಾಸಿಸಂನ ಉಬ್ಬರಕ್ಕಿಂತ ಮೊದಲಿನಿಂದಲೂ ಚರ್ಚೆಯಲ್ಲಿರುವ, ಹೆಚ್ಚು ಉದಾರವಾದಿ ಚಿಂತನೆಗಳಿರುವವರನ್ನು ಕಾಡುತ್ತಿರುವ ವಿಚಾರ. ಅದು ‘ಬುರ್ಕಾ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕನ್ನು ಮೊಟಕುಗೊಳಿಸುವಂಥದ್ದಲ್ಲವೇ?’ ಎಂಬುದು. ಇದು ಕೇವಲ ಬುರ್ಖಾವನ್ನು ಕುರಿತ ಪ್ರಶ್ನೆಯಲ್ಲ. ಸಂಪ್ರದಾಯವಾದಿ ಶಕ್ತಿಗಳು ಚಾಲ್ತಿಯಲ್ಲಿಟ್ಟುಕೊಂಡು ಬಂದಿರುವ ಎಲ್ಲ ಧಾರ್ಮಿಕ ಆಚರಣೆಗಳ ಕುರಿತಾದದ್ದು. ಉದಾಹರಣೆಗೆ ಭಾರತದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ‘ಪರ್ದಾ’ ಪದ್ಧತಿಯೂ ಸ್ವತಂತ್ರ ಮನೋಧರ್ಮವುಳ್ಳ ಮಹಿಳೆಯರು ಮತ್ತು ಮಹಿಳಾ ಹಕ್ಕುಗಳ ಪರವಾಗಿರುವವರ ವಿರೋಧಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಅದರ ಸುತ್ತಲಿನ ಕಟ್ಟುನಿಟ್ಟಿನ ನಿಯಮಾವಳಿಗಳು ಸ್ವಲ್ಪ ಸಡಿಲಗೊಂಡಿರುವಂತೆ ಕಾಣುತ್ತವೆ, ಆದರೂ ಆ ಪದ್ಧತಿಯ ಕುರಿತ ವಿರೋಧ ಇದ್ದೇಇದೆ. ಆದರೆ, ವಿಪರ್ಯಾಸದ ಸಂಗತಿಯೆಂದರೆ, ಬಹುಸಂಖ್ಯಾತರ ಕೋಮುವಾದಿ ಪ್ರಭಾವ ಹೆಚ್ಚುತ್ತಾ ಹೋದಂತೆಲ್ಲ ಅಲ್ಪಸಂಖ್ಯಾತ ಸಮುದಾಯಗಳಲ್ಲಿರುವ ‘ಬುರ್ಖಾ’ದಂತಹ ಪದ್ಧತಿಗಳು ಹೆಚ್ಚು ವ್ಯಾಪಕಗೊಳ್ಳುತ್ತವೆ ಮಾತ್ರವಲ್ಲ, ಮಹಿಳೆಯರೇ ಸ್ವತಃ ದೊಡ್ಡ ಮಟ್ಟದಲ್ಲಿ ಇದನ್ನು ಬೆಂಬಲಿಸುವಂತಹ ಸಂದರ್ಭ ಉಂಟುಮಾಡುತ್ತವೆ. ಇನ್ನು, ಮುಸ್ಲಿಂ ಸಮುದಾಯಕ್ಕೆ ಸೇರಿರುವ, ಆದರೆ ಉದಾರವಾದಿ ಚಿಂತನೆಗಳನ್ನು ಬೆಂಬಲಿಸುವ ಬುರ್ಖಾ, ಹಿಜಾಬ್ ಮತ್ತು ಅಂತಹ ಇನ್ನಿತರ ಪದ್ಧತಿಗಳನ್ನು ಟೀಕಿಸುವ ಪುರುಷರಂತೂ ತಲೆಯೆತ್ತಲಾರದಂತಹ ಆಂತರಿಕ ಒತ್ತಡವನ್ನು ಸೃಷ್ಟಿಸುತ್ತವೆ.

ಕೋಮುವಾದಿ ಮನಸ್ಥಿತಿಯೊಂದಿಗಲ್ಲದೆ ಪುರೋಗಾಮಿ ಆಲೋಚನೆಗಳೊಂದಿಗೆ ಸಾಗುವವರ ಮುಂದೆಯೂ ಈ ಸಂದರ್ಭದಲ್ಲಿ ಬುರ್ಖಾ ಕೇವಲ ಮುಸ್ಲಿಂ ಮಹಿಳೆಯರ ಸಮಾನತೆಯ ಹಕ್ಕಿನ ವಿಚಾರವಾಗಷ್ಟೇ ನಿಲ್ಲುವುದಿಲ್ಲ. ಅದರ ಜೊತೆಜೊತೆಗೆ ಧಾರ್ಮಿಕ ಪದ್ಧತಿಗಳು ಮತ್ತು ‘ಸೆಕ್ಯುಲರ್’ ಸಾಮಾಜಿಕ ನಿಯಮಗಳು ಹೇಗೆ ಜೊತೆಜೊತೆಯಲ್ಲಿ ಸಾಗಬಹುದು ಎಂಬ ಪ್ರಶ್ನೆಯಾಗಿಯೂ ಮೂಡುತ್ತದೆ. ಸಾಧ್ಯವಾದಷ್ಟೂ ಧಾರ್ಮಿಕ ಚಿಹ್ನೆಗಳ ಬಹಿರಂಗ ಪ್ರದರ್ಶನವನ್ನು ನಿಲ್ಲಿಸುವುದರ ಮೂಲಕವೇ ಸೆಕ್ಯುಲರ್ ಸಮಾಜವನ್ನು ನಿರ್ಮಿಸಲು ಸಾಧ್ಯವೆಂಬ ಪಾಶ್ಚಿಮಾತ್ಯ ಸೆಕ್ಯುಲರ್ ಸಿದ್ಧಾಂತವನ್ನು ಭಾರತಕ್ಕೂ ಹಾಗೆಯೇ ಅಳವಡಿಸಬೇಕೆ ಅಥವಾ ಇಲ್ಲಿಗೆ ಮತ್ತು ಇಂದಿನ ಸನ್ನಿವೇಶಕ್ಕೆ ಹೊಂದುವಂತಹ ಬೇರೆ ಮಾದರಿಗಳಿವೆಯೇ ಎಂಬ ದ್ವಂದ್ವ ಅನೇಕರನ್ನು ಸದಾ ಕಾಡುತ್ತಿರುತ್ತದೆ.

ಉಡುಪಿನ ವಿಚಾರದಲ್ಲಿ ಮಾತ್ರವಲ್ಲ, ತಮ್ಮ ಸ್ವತಂತ್ರ ಅಭಿವ್ಯಕ್ತಿಯ ವಿಚಾರದಲ್ಲೂ ಮಹಿಳೆಯರಿಗೆ ಮುಕ್ತ ಅವಕಾಶ ನಿರಾಕರಿಸ್ಪಟ್ಟಿದೆ. ಇದೊಂದು ಗಾಜಿನ ಮೇಲ್ಛಾವಣಿ. ಮೇಲ್ನೋಟಕ್ಕೆ ಮಹಿಳೆಯಾಗಲೀ ಪುರುಷರಾಗಲೀ ಯಾರು ಬೇಕಾದರೂ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳಲು ಯಾರು ನಿಮ್ಮನ್ನು ತಡೆಯುತ್ತಾರೆ ಎಂಬಂತೆ ಕಂಡುಬಂದರೂ, ವಾಸ್ತವ ಮಾತ್ರ ಬೇರೆಯೇ ಆಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಅಸಭ್ಯ ರೀತಿಗಳಲ್ಲಿ ಟ್ರೋಲ್ ಮಾಡುವುದಂತೂ ಎಂತಹ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಮಾಜ ಅರಗಿಸಿಕೊಂಡರೂ, ನಿಜವಾಗಿ ಮನುಷ್ಯರ ಆಲೋಚನೆಯ ರೀತಿಗಳು ಬದಲಾಗದಿದ್ದರೆ ಆಧುನಿಕತೆಯೆಂಬುದು ಸೋಪಿನ ಗುಳ್ಳೆಯಂತೆ, ಮುಟ್ಟುವ ಮೊದಲೇ ಟಪ್ಪನೆ ಒಡೆದು ತನ್ನ ನಿಜವನ್ನು ತೋರಿಸಿಕೊಟ್ಟುಬಿಡುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೂ ಜಾತಿವಾದಿ ಪಿತೃಪ್ರಧಾನ ಸಂಪ್ರದಾಯವಾದಿ ಚಿಂತನೆಗಳ ಜೌಗಿನಲ್ಲೇ ಹೂತು ಕೊಳೆತು ಹೋಗಿರುವ ಭಾರತೀಯ ಸಮಾಜಕ್ಕೆ ಸ್ವತಂತ್ರ ಚಿಂತನೆಗಳನ್ನು ನಿರ್ಭೀತಿಯಿಂದ ಅಭಿವ್ಯಕ್ತಪಡಿಸುವ ಮಹಿಳೆಯರನ್ನು ಕಂಡರಾಗದು ಎಂಬುದು ಪದೇ ಪದೇ ಸಾಬೀತಾಗಿದೆ.

ತಮ್ಮ ಮೇಲೆ ನಡೆದ ಸಾಮಾಜಿಕ ಜಾಲಿಗರ ಅಸಹ್ಯಕರ ದಾಳಿಯ ಬಗ್ಗೆ ‘ದ ಹಿಂದು’ ಪತ್ರಿಕೆಯ ರಾಜಕೀಯ ಸಂಪಾದಕಿಯಾಗಿರುವ ನಿಸ್ತುಲಾ ಹೆಬ್ಬಾರ್‌ರವರು ಈ ರೀತಿ ಹೇಳಿದ್ದಾರೆ.
“ಎರಡು ವರ್ಷಗಳ ಹಿಂದೆ ಟ್ವಿಟರ್‌ನಲ್ಲಿ ನನಗೆ ಬಲಾತ್ಕಾರದ ಬೆದರಿಕೆಯೊಂದು ಬಂತು. ಒಬ್ಬ ಪತ್ರಕರ್ತೆಯಾಗಿ, ಸ್ಪಷ್ಟ ಅಭಿಪ್ರಾಯವುಳ್ಳ ಮಹಿಳೆಯಾಗಿ ಟ್ವಿಟರ್‌ನಲ್ಲಿ ಅನೇಕ ಸಲ ‘ಪಿತೃಪ್ರಾಧಾನ್ಯದ’ ಕಂಗೆಣ್ಣಿಗೆ ಗುರಿಯಾಗಿದ್ದೇನೆ, ಅದೇನೂ ನನಗೆ ಹೊಸತಲ್ಲ. ಆದರೆ, ರೇಪ್ ಬೆದರಿಕೆ ನನಗೆ ಎಂದೂ ಆ ಮುಂಚೆ ಬಂದಿದ್ದಿಲ್ಲ. ಹಾಗಾದಾಗ, ನಾನು ಸುಮ್ಮನೆ ಕೂರುವಂತಿರಲಿಲ್ಲ. ನಾನೂ ಪೋಲೀಸ್ ಸ್ಟೇಷನ್‌ಗೆ ಹೋಗಿ, ಅಲ್ಲಿಯ ಪೋಲೀಸರ ಅಸಡ್ಡೆಯ ಹೊರತಾಗಿಯೂ ನನ್ನ ದೂರನ್ನು ದಾಖಲಿಸಿದೆ. ಈಗದಕ್ಕೆ ಎರಡು ವರ್ಷಗಳಾದವು, ಇನ್ನೂವರೆಗೆ ಆ ಪ್ರಕರಣದಲ್ಲಿ ಯಾವುದೇ ಮುಂದುವರಿಕೆ ಆಗಿಲ್ಲ.”

“ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಆಗುವ ಮಹಿಳೆಯರ ವಿರುದ್ಧದ ನಿಂದನೆ ಬಹುತೇಕ ಬಾರಿ ಲೈಂಗಿಕ ಅಥವಾ ಸ್ತ್ರೀವಿರೋಧಿ ಸ್ವರೂಪವನ್ನು ಹೊಂದಿರುತ್ತದೆ. ಮಹಿಳೆಯರ ಮೇಲಿನ ಹಿಂಸಾತ್ಮಕ ಬೆದರಿಕೆಗಳನ್ನು ಲೈಂಗೀಕರಿಸಲಾಗಿರುತ್ತದೆ ಮತ್ತು ಮಹಿಳೆಯರ ಅಂಗಗಳಿಗೆ ವಿಕೃತ ಪ್ರಾಧಾನ್ಯತೆ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣ ಸಮಾಜದ ಒಂದು ವಿಸ್ತರಿತ ಅಂಗ. ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ನಿಜಜೀವನದಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಹಾಗೆ ಮಾಡಿದಲ್ಲಿ, ಸಮಾಜ ಅವರ ಬಾಯಿಮುಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿರುವವರೂ ಅದೇ ಜನರೇ ಆದ್ದರಿಂದ, ಮಹಿಳೆಯರು ತಮ್ಮ ಅನಿಸಿಕೆಗಳನ್ನು/ಅನುಭವಗಳನ್ನು ಹಂಚಿಕೊಂಡಾಗ, ತಾವು ವರ್ಷಗಳ ಕಾಲ ಮನೆಗಳಲ್ಲಿ ಕಲಿತದ್ದನ್ನು ಅಲ್ಲಿ ರಿಪೀಟ್ ಮಾಡುತ್ತಾರೆ” ಎಂದು ಹಿರಿಯ ಪತ್ರಕರ್ತೆ ನಮಿತಾ ಭಂಡಾರೆ ವಿಶ್ಲೇಷಿಸುತ್ತಾರೆ. ‘ದ ಕ್ವಿಂಟ್’ ಗೆ ಗರ್ವಿತಾ ಖೈಬರ್ ಅವರು ಬರೆದ ಲೇಖನದಲ್ಲಿ ಅವರು ಇಂತಹ ದಾಳಿಗಳ ಪರಿಣಾಮಗಳನ್ನು “ನಿರಂತರವಾಗಿ ಟ್ರಾಲ್‌ಗಳ ದಾಳಿಗೆ, ನಿಂದನೆಗೆ ಒಳಗಾದ ನಾಲ್ಕು ಮಂದಿ ಪತ್ರಕರ್ತೆಯರನ್ನು ‘ಕ್ವಿಂಟ್ ನಿಯಾನ್’ ವೆಬ್ ಪತ್ರಿಕೆಗಾಗಿ ಸಂದರ್ಶಿಸಿದಾಗ ಸಾಮಾಜಿಕ ಜಾಲತಾಣದ ಈ ‘ವರ್ಚುವಲ್’ ನಿಂದನೆಯಿಂದ ಎಲ್ಲರ ನಿಜಬದುಕಿನ ಮೇಲೂ ನೇರವಾದ ಪರಿಣಾಮಗಳಾಗಿವೆಯೆಂಬುದು ಸ್ಪಷ್ಟವಾಗಿ ಕಂಡುಬಂತು” ಎಂದು ವಿವರಿಸುತ್ತಾರೆ.

ಇಂತಹವು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆಯೆಂಬುದರ ಸಂಕೇತವಾಗಿ ಈಚಿನ ‘ಬುಲ್ಲಿ ಬಾಯಿ’ ಆಪ್‌ನ ಪ್ರಕರಣ ನೋಡಬಹುದು. ಮೇಲೇದ್ದು ಬರುತ್ತಿರುವ ಮುಸ್ಲಿಂ ಮಹಿಳಾ ದನಿಗಳನ್ನು ಎಲ್ಲದರಿಂದ ಪ್ರತ್ಯೇಕಿಸಿ ದಾಳಿ ಮಾಡುವ ಸಲುವಾಗಿಯೇ ವಿಕೃತವಾಗಿ ರೂಪುಗೊಳಿಸಲಾಗಿರುವ ಈ ಆಪ್ ಮತ್ತು ಇಂತಹ ಇನ್ನಿತರ ಜಾಲತಾಣಗಳು ಪ್ರಖ್ಯಾತ ಮತ್ತು ದಿಟ್ಟ ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡುವ ದಾಷ್ಟ್ಯ ತೋರಿದವು. ಪತ್ರಕರ್ತೆ ಇಸ್ಮತ್ ಅರಾ, ಶಬಾನಾ ಆಜ್ಮಿ ಒಳಗೊಂಡಂತೆ ಅನೇಕ ಖ್ಯಾತನಾಮರ ಫೋಟೋಗಳು ಇದ್ದಕ್ಕಿದ್ದಂತೆ ಒಂದು ದಿನ ಜಾಲತಾಣಗಳಲ್ಲಿ ‘ಹರಾಜಿಗಿದ್ದಾಳೆ’ ಎಂಬ ಟ್ಯಾಗ್‌ನೊಂದಿಗೆ ಹರಿದಾಡಲಾರಂಭಿಸಿದರೆ, ಈ ಮಹಿಳೆಯರು ಮತ್ತುವರ ಆಪ್ತರ ಮೇಲಾಗಿರುವ ಆಘಾತವನ್ನು ಊಹಿಸಬಹುದು. ವಿಶೇಷವಾಗಿ, ಸಿಎಎ ವಿರೋಧಿ ಹೋರಾಟದಲ್ಲಿ ಭಾರತೀಯ ಮುಸ್ಲಿಂ ಮಹಿಳಾ ಸಮೂಹ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದು ಸಂಘಪರಿವಾರದ ಅತಿತೀವ್ರವಾದಿಗಳನ್ನು ಇಂತಹ ಪ್ರಯತ್ನಗಳಿಗೆ ಇಳಿಯುವಷ್ಟು ಹತಾಶಗೊಳಿಸಿರಬೇಕು. ಮುಸ್ಲಿಂ ಮಹಿಳೆಯರ ಸಾರ್ವಜನಿಕ ಭಾಗೀದಾರಿಕೆಯು ಸಮಾಜದ ಮೇಲೆ ಉಂಟುಮಾಡಿರುವ ಸಕಾರಾತ್ಮಕ ಪರಿಣಾಮಗಳನ್ನೇ ನಿರ್ದಿಷ್ಟವಾಗಿ ಗುರಿಮಾಡುವಂತಹ ನೀಚ ಕೆಲಸ ಇದಾಗಿತ್ತು.

ಇದಾದ ನಂತರ ಈಗ ಕರ್ನಾಟಕದಲ್ಲಿ ಸುದ್ದಿವಾಹಿನಿಯೊಂದು ಬೆಳಗಿನ ವ್ಯಾಯಮಕ್ಕೆ ತೆರಳಿದ್ದ ಮಹಿಳೆಯೊಬ್ಬರ ಉಡುಪಿನ ಸುತ್ತಲೇ ತನ್ನ ಕಣ್ಣುಗಳನ್ನು ನೆಟ್ಟುಕೂತ ಅತಿರೇಕದ ಪ್ರಕರಣ. ಸಾಲುಸಾಲಾಗಿ ಅಂತರಧರ್ಮೀಯ ಮತ್ತು ಅಂತರಜಾತಿ ವಿವಾಹವಾದ ಯುವಕ-ಯುವತಿಯರ ಮರ್ಯಾದೆಗೇಡು ಹತ್ಯೆಗಳು; ಅದರ ಬೆನ್ನಿನಲ್ಲೇ ಹೊರರಾಜ್ಯವೊಂದರಲ್ಲಿ ಉಡುಪಿನ ವಿಚಾರವಾಗಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಅಭಿನೇತ್ರಿಗೆ ದಂಡ……..! ಇವೆಲ್ಲವೂ ಯಾವುದರ ದ್ಯೋತಕ? ಹೆಣ್ಣುಮಕ್ಕಳ ಆಯ್ಕೆಗಳು, ಆ ಎಲ್ಲ ಹಕ್ಕುಗಳು ಶೋಕೇಸಿನಲ್ಲಿಡಲಿಕ್ಕಷ್ಟೇ ಲಾಯಕ್ಕು; ವಾಸ್ತವವಾಗಿ ಆ ಆಯ್ಕೆ ಮಾಡುವುದು, ಅದನ್ನು ಅನುಸರಿಸಲು ಮಹಿಳೆಯರ ಮೇಲೆ ಹೇರುವುದು-ಇವೆರಡನ್ನೂ ಪಿತ್ರಪ್ರಧಾನತೆಯ ‘ಹರಿಕಾರ’ರು ಮಾಡುತ್ತಾರೆ. ಮಹಿಳೆಯರೇನಿದ್ದರೂ ಅವನ್ನೆಲ್ಲ ಚಾಚೂತಪ್ಪದೆ ಪಾಲಿಸುತ್ತಾ ಭಾರತದೊಳಗೆ ವಾಸಿಸಲು ತಮಗಿರುವ ಅರ್ಹತೆಯನ್ನು ಪದೇ ಪದೇ ಸಾಬೀತುಪಡಿಸತಕ್ಕದ್ದು!

ಇಂತಹ ವಿಲಕ್ಷಣ ಸನ್ನಿವೇಶವು ನಿಜಕ್ಕೂ ಸಂವೇದನಾಶೀಲರಾದ ಎಲ್ಲರನ್ನೂ ಉಸಿರುಕಟ್ಟಿಸುತ್ತಿದೆ. ಅದೇ ಸಮಯದಲ್ಲಿ ಈ ಸವಾಲುಗಳು ಮಹಿಳೆಯರನ್ನು ಪಿತೃಪ್ರಧಾನತೆಯ ಪ್ರವಾಹದ ವಿರುದ್ಧ ಈಜುವ ಸಾಹಸದಿಂದ ವಿಮುಖರನ್ನಾಗಿಸುವ ಬದಲು ಇನ್ನಷ್ಟು ದೃಢನಿಶ್ಚಯಿಗಳನ್ನಾಗಿಸುತ್ತಿರುವ ಅನಿರೀಕ್ಷಿತ ಬೆಳವಣಿಗೆಯೂ ಕಾಣುತ್ತಿರುವುದು ಸುಳ್ಳಲ್ಲ.

ಭಾರತದ ಸಂದರ್ಭದಲ್ಲಿ ಜಾತಿ, ವರ್ಗ, ಧರ್ಮ ಮತ್ತು ಲಿಂಗಗಳು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ. ಅವು ಒಂದನ್ನೊಂದು ಪ್ರಭಾವಿಸುವುದು ಮಾತ್ರವಲ್ಲ, ಒಂದರಿಂದೊಂದು ರೂಪುತಾಳಿವೆ. ಮದುವೆ ಮತ್ತು ಕುಟುಂಬ ವ್ಯವಸ್ಥೆ, ಮಹಿಳೆಯ ಲೈಂಗಿಕತೆ ಹಾಗೂ ಸಂತಾನೋತ್ಪತ್ತಿಗಳಿಗೆ ಬಿಗಿಯಲಾಗಿರುವ ಕಟ್ಟುಪಾಡುಗಳೇ ಭಾರತದ ಜಾತಿವ್ಯವಸ್ಥೆಯನ್ನು ಉಳಿಸಿಕೊಂಡಿರುವ ಅಡಿಪಾಯಗಳು. ಹಾಗೆಯೇ, ವರ್ಗ, ಲಿಂಗ, ಧರ್ಮಾಧಾರಿತ ಮತ್ತು ಇನ್ನಿತರ ಎಲ್ಲ ಬಗೆಯ ಅಸಮಾನತೆಗಳಿಗೂ ಇವೇ ಮೂಲಾಧಾರಗಳು. ಪುರುಷಾಧಿಪತ್ಯವನ್ನು ಖಾತ್ರಿಗೊಳಿಸುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಚನೆಗಳೇ ಜಾತಿ ವ್ಯವಸ್ಥೆಯ ಹುಟ್ಟು ಮತ್ತು ಅಸ್ತಿತ್ವಕ್ಕೆ ಕಾರಣವಾಗಿರುವಂಥವು. ಹಾಗೆಯೇ, ತನ್ನ ಸರದಿಯಲ್ಲಿ ಜಾತಿ ವ್ಯವಸ್ಥೆ ಪಿತೃಪ್ರಧಾನ ಮೌಲ್ಯವ್ಯವಸ್ಥೆಯನ್ನು ಬಲವಾಗಿ ಉಳಿಸಿಕೊಂಡು ಬಂದಿದೆ; ತುಳಿಯುವವರು ಮಾತ್ರವಲ್ಲ, ತುಳಿತಕ್ಕೊಳಗಾದವರೂ ಕೂಡಾ ಅವೇ ಮೌಲ್ಯಗಳನ್ನು ಒಪ್ಪಿ ಅನುಸರಿಸಿಕೊಂಡು ಹೋಗುವಂತೆ ಮಾಡಿದೆ.

ಇಂತಹ ಎಲ್ಲ ಬೃಹತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇರುವುದು, ಎಲ್ಲ ಭಿನ್ನತೆಗಳ ನಡುವೆ ಸೇರುವ ಬಿಂದುಗಳನ್ನು ಮಹಿಳಾ ಸಮುದಾಯ ಗುರುತಿಸಿಕೊಳ್ಳುತ್ತಾ, ಒಗ್ಗೂಡುತ್ತಾ ಹೋಗುವುದರಲ್ಲಿ ಮಾತ್ರ. ಬೇರೆ ಬೇರೆ ಗುರುತುಗಳಿಂದ ಈ ಸಮಾಜದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಮಹಿಳೆಯರು, ತಮ್ಮ ನೆಲೆಯಿಂದ ಮಾತ್ರವಲ್ಲದೆ, ಎದುರಿರುವ ಮತ್ತೊಬ್ಬ ಮಹಿಳೆಯ ನೆಲೆಯಿಂದ ಸಮಾಜವನ್ನು ಕಾಣಲು ಸಾಧ್ಯವಾಗಬೇಕು. ಇದಕ್ಕೆ ಬೇಕಾದ ವೈಚಾರಿಕ ಎಚ್ಚರಕ್ಕೆ ಅಡಿಪಾಯ ಹಾಕುವ ಕೆಲಸ ಅತ್ಯಗತ್ಯವಾಗಿ ಈಗ ಆಗಬೇಕಾಗಿದೆ.

ಬರಹ ಕೃಪೆ: ಸಂವಾದ ಮಾಸಪತ್ರಿಕೆ

ಮಲ್ಲಿಗೆ ಸಿರಿಮನೆ

(ಮಹಿಳಾ ಹಕ್ಕುಗಳ ಹೋರಾಟಗಾರರು, ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ)


ಇದನ್ನೂ ಓದಿ; ಅಪ್ರಾಪ್ತ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಪೋಸ್ಟ್‌‌ ಮಾಡಿದ್ದ ಬಿಜೆಪಿ: ಟ್ವೀಟ್‌ ರದ್ದು ಮಾಡಿದ ಟ್ವಿಟರ್‌‌ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಬರೆಹವನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸಪತ್ರಿಕೆಯ ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...