Homeಕರ್ನಾಟಕಹೆಣ್ಣು ಭ್ರೂಣ ಹತ್ಯೆ ಜಾಲ ಬೇಧಿಸಿದ ಪೊಲೀಸರು: 9 ಆರೋಪಿಗಳ ಬಂಧನ

ಹೆಣ್ಣು ಭ್ರೂಣ ಹತ್ಯೆ ಜಾಲ ಬೇಧಿಸಿದ ಪೊಲೀಸರು: 9 ಆರೋಪಿಗಳ ಬಂಧನ

- Advertisement -
- Advertisement -

ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ಮೈಸೂರು, ಮಂಡ್ಯ ಭಾಗದಲ್ಲಿ ಹೆಣ್ಣು ಭ್ರೂಣಗಳನ್ನು ಪತ್ತೆಹಚ್ಚಿ ಹತ್ಯೆ ಮಾಡುತ್ತಿದ್ದ ಭಾರೀ ಜಾಲವನ್ನು ಬೇಧಿಸಿರುವ ಬೆಂಗಳೂರು ಪೊಲೀಸರು ಇದುವರೆಗೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರಿನ ಉದಯಗಿರಿಯ ಮಾತಾ ಆಸ್ಪತ್ರೆಯ ಮುಖ್ಯಸ್ಥ ಡಾ.ಚಂದನ್‌ ಬಲ್ಲಾಳ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಇವರು ಭ್ರೂಣಗಳ ಹತ್ಯೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ. ತಮಿಳುನಾಡು ಮೂಲದ ವೈದ್ಯ ಡಾ.ತುಳಸಿರಾಮ್‌, ಮಹಿಳೆಯರನ್ನು ಗುರುತಿಸಿ ಕರೆ ತರುತ್ತಿದ್ದ ವಿರೇಶ್‌, ನವೀನ್‌ಕುಮಾರ್‌, ನಯನ್‌ ಕುಮಾರ್‌ ಹಾಗೂ ಶಿವನಂಜೇಗೌಡ, ಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಮೀನಾ, ಲ್ಯಾಬ್ ಟೆಕ್ನೀಷಿಯನ್ ನಿಸಾರ್ ಹಾಗೂ ಸ್ವಾಗತಕಾರ್ತಿ ರಿಜ್ಮಾ ಖಾನಂ ಬಂಧಿತ ಇತರ ಆರೋಪಿಗಳು.

ಮೂರು ವರ್ಷಗಳಲ್ಲಿ 900 ಭ್ರೂಣಗಳ ಹತ್ಯೆ!

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ಇದುವರೆಗೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಕಳೆದ ಮೂರು ವರ್ಷಗಳಲ್ಲಿ 900ಕ್ಕೂ ಹೆಚ್ಚು ಗರ್ಭಪಾತ ಮಾಡಿದ್ದಾರೆ. ಈ ಹಿಂದೆ ಪ್ರತಿ ತಿಂಗಳು 25ರಿಂದ 27 ಗರ್ಭಪಾತ ಮಾಡಿದ್ದರೆ, 2023 ಜುಲೈ 21ರಿಂದ ಆಗಸ್ಟ್‌ 16ರವರೆಗೆ ಬರೋಬ್ಬರಿ 242 ಗರ್ಭಪಾತ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರಮುಖ ಆರೋಪಿ ಡಾ.ಚಂದನ್ ಬಳ್ಳಾಲ್, ತನ್ನ ಮಾತಾ ಆಸ್ಪತ್ರೆಯನ್ನು ನೋಂದಣಿ ಮಾಡಿಸಿಕೊಂಡಿರಲಿಲ್ಲ. ಮೈಸೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಿಂದಲೂ ಮಹಿಳೆಯರುನ್ನು ಗುರುತಿಸಿ ಆರೋಪಿ ವೀರೇಶ್ ಮತ್ತು ತಂಡ ಕರೆ ತರುತ್ತಿತ್ತು. ಕೆಲವರು ಭ್ರೂಣ ಪತ್ತೆಗೆ ಬರುತ್ತಿದ್ದರು ಬಳಿಕ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಿಸುತ್ತಿದ್ದರು. ಇದಕ್ಕಾಗಿ ಆರೋಪಿಗಳು 25 ರಿಂದ 30 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದರು.

ಮೈಸೂರಿನ ಮಾತಾ ಆಸ್ಪತ್ರೆಯಲ್ಲದೇ ಮಂಡ್ಯದ ಕೆಲವು ಕಡೆಯೂ ಭ್ರೂಣ ಪತ್ತೆ ಮತ್ತು ಹತ್ಯೆ ನಡೆಯುತ್ತಿತ್ತು. ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್‌ ಯಂತ್ರ ಇರಿಸಿದ್ದರು. ಹಲವು ವರ್ಷಗಳಿಂದ ಇದು ನಡೆದಿತ್ತು. ಬೈಯಪ್ಪನಹಳ್ಳಿ ಪೊಲೀಸರು ವೀರೇಶ್‌ನನ್ನು ಬಂಧಿಸಿದಾಗ ಈ ಎಲ್ಲಾ ವಿಚಾರ ಬಯಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ದೇವರಾಜ್‌ ತಿಳಿಸಿದ್ದಾರೆ.

ತನ್ನ ಆಸ್ಪತ್ರೆಯ ಸಿಬ್ಬಂದಿಯ ಬಂಧನದ ವಿಚಾರ ತಿಳಿದು ಡಾ.ಚಂದನ್‌ ಬಲ್ಲಾಳ್‌ ತಲೆ ಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಕಳೆದ ಶನಿವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಂದನ್‌ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.

ಈಗಾಗಲೇ ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ, ಡಾ.ರಾಜಕುಮಾರ್‌ ಆಸ್ಪತ್ರೆಯಲ್ಲಿರುವ ಆಯುರ್ವೇದಿಕ್‌ ಪೈಲ್ಸ್‌ ಡೇ ಕೇರ್‌ ಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು, ಮಂಡ್ಯ, ರಾಮನಗರ ಮಾತ್ರವಲ್ಲದೇ ಇತರೆಡೆಗೂ ಭ್ರೂಣ ಹತ್ಯೆ ಜಾಲ ಹಬ್ಬಿರುವ ಶಂಕೆಯಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದಾರೆ.

ಭ್ರೂಣ ಹತ್ಯೆ ಜಾಲ ಪತ್ತೆಯಾಗಿದ್ದು ಹೇಗೆ?

ಅ.15ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕಾರು ನಿಲ್ಲಿಸದೆ ಹೋಗಿದ್ದರು. ಅವರನ್ನು ಹಿಂಬಾಲಿಸಿ ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಮೂವರಿಗೆ ಜಾಮೀನು :

ಬಂಧಿತ ಆರೋಪಿಗಳ ಪೈಕಿ ತಮಿಳುನಾಡು ಮೂಲದ ಮಕ್ಕಳ ತಜ್ಞ ಡಾ. ತುಳಸಿರಾಮ್, ಪ್ರಕರಣದ ಪ್ರಮುಖ ಆರೋಪಿ ಡಾ. ಚಂದನ್ ಬಲ್ಲಾಳ್ ಅವರ ಪತ್ನಿ ಮೀನಾ ಹಾಗೂ ಮಾತಾ ಆಸ್ಪತ್ರೆಯ ಸ್ವಾಗತಗಾರ್ತಿ ನಜ್ಮಾ ಖಾನಂ ಅವರಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದ ಎಂದು ತಿಳಿದು ಬಂದಿದೆ.

ಪ್ರಸವ ಪೂರ್ವ ಭ್ರೂಣ ಪತ್ತೆ ಮತ್ತು ಹತ್ಯೆ ಅಪರಾಧ :

ಪ್ರಸವ ಪೂರ್ವ ಲಿಂಗ ಆಯ್ಕೆ ನಿಷೇಧ ಅಧಿನಿಯಮ 1994ರ ಪ್ರಕಾರ ಭಾರತದಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ನಿಷೇಧವಿದೆ. ಯಾವುದೇ ವ್ಯಕ್ತಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣನಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯ ಮೇಲೆ ಒತ್ತಡ ಹೇರಿದರೆ ಅದು ಅಪರಾಧವಾಗುತ್ತದೆ. ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರದ ನೋಂದಣಿ ಈ ಅಧಿನಿಯಮದ ಅಡಿ ಕಡ್ಡಾಯವಾಗಿದೆ.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡಿದ ವ್ಯಕ್ತಿ ಶಿಕ್ಷಾರ್ಹ. ಮೊದಲ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ನಂತರದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಲಾಗತ್ತದೆ. ಇಂತಹ ಕೃತ್ಯಕ್ಕೆ ಸಹಾಯ ಮಾಡುವ ವ್ಯಕ್ತಿಯೂ ಶಿಕ್ಷಾರ್ಹ. ಸಹಾಯ ಮಾಡುವವರಿಗೆ ಮೊದಲ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ನಂತರದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ : ಉತ್ತರಕಾಶಿ: 17 ದಿನಗಳ ಬಳಿಕ ಸುರಂಗದಿಂದ ಹೊರಬಂದ 41 ಕಾರ್ಮಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...