Homeಕರ್ನಾಟಕ2024ನೇ ಸಾಲಿನ 'ಬೋಧಿವೃಕ್ಷ-ಬೋಧಿವರ್ಧನ' ಪ್ರಶಸ್ತಿ ಪ್ರಕಟ; ಹಿರೇಮಠ್, ರಾಮ್‌ದೇವ್ ರಾಖೆ ಸೇರಿದಂತೆ ಐವರು ಆಯ್ಕೆ

2024ನೇ ಸಾಲಿನ ‘ಬೋಧಿವೃಕ್ಷ-ಬೋಧಿವರ್ಧನ’ ಪ್ರಶಸ್ತಿ ಪ್ರಕಟ; ಹಿರೇಮಠ್, ರಾಮ್‌ದೇವ್ ರಾಖೆ ಸೇರಿದಂತೆ ಐವರು ಆಯ್ಕೆ

- Advertisement -
- Advertisement -

ಬೆಂಗಳೂರಿನ ಸ್ಪೂರ್ತಿಧಾಮ ಸಂಸ್ಥೆ ಪ್ರತಿವರ್ಷ ಕೊಡಮಾಡುವ 2024ನೇ ಸಾಲಿನ ‘ಬೋಧಿವೃಕ್ಷ’ ಪ್ರಶಸ್ತಿಗೆ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್. ಹಿರೇಮಠ್, ಬೋಧಿವರ್ಧನ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ದಲಿತ ಚಳವಳಿ ಮುಖಂಡ ರಾಮ್‌ದೇವ್, ಸುಶೀಲ ನಾಡ, ಜಿ.ಕೆ. ಪ್ರೇಮಾ ಮತ್ತು ಹಸನಬ್ಬ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಎಸ್. ಮರಿಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಕಳೆದ ಹದಿನಾರು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬ’ವಾಗಿ ಆಚರಿಸಿಕೊಂಡು ಬರುತ್ತಿರುವ ‘ಸ್ಪೂರ್ತಿಧಾಮ’, ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಮತ್ತು ‘ಭೋಧಿವರ್ಧನ’ ಹೆಸರಿನ ರಾಷ್ಟ ಪ್ರಶಸ್ತಿಗಳನ್ನು ನೀಡುತ್ತಿದೆ. ‘ಬೋಧಿವೃಕ್ಷ’ ಪ್ರಶಸ್ತಿಗೆ ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷರೂಪಾಯಿ ನಗದು ಹಾಗೂ ಐದು ‘ಭೋಧಿವರ್ಧನ’ ಪ್ರಶಸ್ತಿಗೆ ಪ್ರಶಸ್ತಿ ಫಲಕ ಮತ್ತು ತಲಾ ಇಪ್ಪತ್ತೆಂಟು ಸಾವಿರ ರೂಪಾಯಿ ನಗದು ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.

‘A great man is different from an eminent one, in that he is ready to be a servant of the society’ ಎಂದು ಅಂಬೇಡ್ಕರ್ ಹೇಳಿದ ಮಾತುಗಳು ತಳಸ್ತರದವರ ಚಲನೆಗೆ ತಳಪಾಯವಾಗಬೇಕಾದ ಸೇವೆಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ತೀರಾ ನಿಕೃಷ್ಟರೆಂದು ಪರಿಗಣಿಸಲ್ಪಡುವ ತಳಸಮುದಾಯದವರ ಹಿತಕ್ಕೆ ತಮ್ಮನ್ನು ತೆತ್ತುಕೊಂಡು, ಅವರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆಯನ್ನು ತಂದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಮ್ಮ ಕಾಲದ ರೋಗಗ್ರಸ್ಥ ಸ್ಥಿತಿಯನ್ನು, ತಾಯ್ತನದ ಇಂಥ ವಾತ್ಸಲ್ಯದ ಮೂಲಕ ಗುಣಪಡಿಸುವ ‘ಮಹಾತ್ಮ’ರನ್ನು ಪುರಸ್ಕರಿಸುವ ಮೂಲಕ ‘ಸ್ಪೂರ್ತಿಧಾಮ’ ಅವರ ಜೊತೆಗೆ ಹೆಜ್ಜೆ ಹಾಕುತ್ತದೆ’ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಪ್ರಶಸ್ತಿಗಳು ಹಲವು ಕಾರಣಗಳಿಗಾಗಿ ವಿಭಿನ್ನವಾದವೂ ಹೌದು, ವಿಶಿಷ್ಟವಾದವೂ ಹೌದು. ನಮ್ಮಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಸರ್ಕಾರಿ, ಅರೆ ಸರ್ಕಾರಿ, ಪ್ರತಿಷ್ಠಿತ ಅಕಾಡೆಮಿಗಳು, ಸಂಘ-ಸಂಸ್ಥೆಗಳು ಕೊಡುವ ಅನೇಕ ಪ್ರಶಸ್ತಿಗಳಿವೆ. ಆದರೆ, ಆರ್ಥಿಕ, ಸಾಮಾಜಿಕ, ರಾಜಕೀಯ ಅಥವ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಬದುಕನ್ನು ಅರ್ಥಪೂರ್ಣವಾಗಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವವರನ್ನು ಗೌರವಿಸುವ ಪ್ರಶಸ್ತಿಗಳು ನಮ್ಮಲ್ಲಿಲ್ಲ. ಸಮಾಜದೊಂದಿಗೆ ಇಂಥ ಸಾವಯುವ ಸಂಬಂಧವನ್ನು ಸ್ಥಾಪಿಸಿಕೊಂಡವರನ್ನು ಸನ್ಮಾನಿಸುವ ಮೂಲಕ ‘ಸ್ಪೂರ್ತಿಧಾಮ’ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತದೆ’ ಎಂದು ಹೇಳಿದ್ದಾರೆ.

ಬೋಧಿವೃಕ್ಷ ಪ್ರಶಸ್ತಿ ವಿಜೇತರ ಕುರಿತು:

ಎಸ್.ಆರ್.ಹಿರೇಮಠ್ ಅವರು 5ನೇ ನವೆಂಬರ್ 1944 ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿಯಲ್ಲಿ ಜನಿಸಿದರು. ಅವರು ಕರ್ನಾಟಕದ ಪ್ರತಿಷ್ಠಿತ ಭಾರತೀಯ ಪರಿಸರವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯು ಸಾಮಾಜಿಕ ಪರಿವರ್ತನೆಗೆ ಹೋರಾಡುತ್ತಿದೆ. ಹಿರೇಮಠ್ ಅವರ ಅಕ್ರಮ ಗಣಿಗಾರಿಕೆ ವಿರುದ್ಧದ ನಿರಂತರ ಹೋರಾಟವು ಬಳ್ಳಾರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಹಾಯವಾಯಿತು. ಪ್ರಬಲ ಗಣಿ ನಿರ್ವಾಹಕರು, ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ನಿರ್ಭಯವಾಗಿ ಎದುರಿಸಿದ ಇವರ ಅಭಿಯಾನಕ್ಕೆ ವಿವಿಧ ಸಂಘಸಂಸ್ಥೆಗಳಿಂದ ಶ್ಲಾಘನೆ ಸಂದಿದೆ. ಇವರಿಗೆ ಭಾರತದ ಅತ್ಯುನ್ನತ ಪರಿಸರ ಗೌರವ ‘ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ; ಸಹ ದೊರೆತಿದೆ.

ಬೋಧಿವರ್ಧನ ಪ್ರಶಸ್ತಿ ವಿಜೇತರ ಕುರಿತು::

ರಾಮ್‌ದೇವ್ ರಾಖೆ

ಮಂಡ್ಯ ಜಿಲ್ಲೆಯ ರಾಮ್‌ದೇವ್, ರಾಖೆನವಾಡಿ ಗ್ರಾಮದಲ್ಲಿ ಶಿಕ್ಷಕರ ಮಗನಾಗಿ ಜನಿಸಿದ ರಾಖೆಯವರು ಬಾಬಾ ಸಾಹೇಬರ ಪ್ರೇರಣೆಯಿಂದ ಸಾಹಿತ್ಯ ಮತ್ತು ರಾಜಕೀಯಗಳ ವಿಶಾಲ ಓದಿನೊಂದಿಗೆ ಸಾಮಾಜಿಕ ಪ್ರಜ್ಞೆಯನ್ನೂ ಬೆಳೆಸಿಕೊಂಡರು. ನಂತರ ಸ್ನೇಹಿತರ ಜೊತೆಗೂಡಿ ಸಮಾಜದ ಧ್ವನಿಯಿಲ್ಲದವರಿಗೆ ಧ್ವನಿ ನೀಡಲು ‘ಶೋಷಿತ’ ಪತ್ರಿಕೆ ಪ್ರಾರಂಭಿಸಿದರು. ಶೋಷಿತ ಪತ್ರಿಕೆ ಕೆಲಕಾಲದ ನಂತರ ‘ಪಂಚಮ’ವಾಗಿ ಬದಲಾಯಿತು. ಅದರ ಸಂಪಾದಕತ್ವದ ಹೊರೆಯನ್ನೂ ಹೊತ್ತರು. ಆ ಸಂದರ್ಭದಲ್ಲಿ ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಯಿತು. ಆ ಸಂಸ್ಥಾಪಕರಲ್ಲಿ ರಾಮದೇವ್ ರಾಖೆರವರು ಸಹ ಒಬ್ಬರು. ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ದಲಿತ ಚಳುವಳಿಯ ಮೊದಲ ಪೂರ್ಣಪ್ರಮಾಣದ ಕಾರ್ಯಕರ್ತ ರಾಮದೇವ್ ರಾಖೆ. ರಾಜ್ಯದಲ್ಲಿ ದಲಿತ ಚಳುವಳಿಯನ್ನು ಕಟ್ಟಿ ಬೆಳೆಸಲು ರಾಮದೇವ್ ರಾಖೆಯವರು ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ.

ಸುಶೀಲ ನಾಡ

ಮೈಸೂರು ಹಾಗೂ ಕೊಡಗು ಜಿಲ್ಲೆಯ ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಸಲರು ಹಾಗೂ ಗೊಂಡರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯರು ಮುಂತಾದ ಕರ್ನಾಟಕದ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದಲ್ಲಿ ಇವರು ಸಕ್ರಿಯರಾಗಿದ್ದಾರೆ. ಈ ಸಮುದಾಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಒಕ್ಕೂಟದ ಪ್ರಯತ್ನದಿಂದಾಗಿ 12 ಅರಣ್ಯ ಮೂಲಬುಡಕಟ್ಟು ಸಮುದಾಯಗಳಿಗೆ ಅರಣ್ಯ ಹಕ್ಕು, ಪೌಷ್ಟಿಕ ಆಹಾರ, ಆಶ್ರಮ ಶಾಲೆಗಳ ಉನ್ನತೀಕರಣ ಸಾಧ್ಯವಾಗಿದೆ.

ಹಸನಬ್ಬ

ಹಸನಬ್ಬ ಕಳೆದ ಮೂರು ದಶಕಗಳಿಂದ ಬೆಳ್ತಂಗಡಿಯ ಚಾರ್ಮಡಿ ಘಾಟ್‌ನಲ್ಲಿ ಉಂಟಾಗುವ ಅಪಘಾತಗಳಲ್ಲಿ ಸಿಕ್ಕಿ ಗಾಯಗೊಂಡವರನ್ನು ಆಸ್ಪತ್ರಗೆ ಸಾಗಿಸಿ, ಅವರಿಗೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುವ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಹೀಗೆ ನೂರಾರು ಜೀವ ಉಳಿಸಿದ್ದಾರೆ. ಸರ್ಕಾರಿ ಆಂಬುಲೆನ್ಸ್‌ಗಳು ತಡಮಾಡಿದಾಗ ಅವರು ತಮ್ಮ ಸ್ವಂತ ಗಾಡಿಯಲ್ಲಿ ಗಾಯಾಳುಗಳನ್ನು ಸಾಗಿಸಿ ಬದುಕಿಸಿದ್ದಾರೆ. ಹಸನಬ್ಬ ಅವರ ಈ ಕೆಲಸವನ್ನು ಮೆಚ್ಚಿ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಜಿ.ಕೆ.ಪ್ರೇಮ

ಕರ್ನಾಟಕದ ಕೆಲ ಭಾಗಗಳಲ್ಲಿ ಋತುಮತಿ ಆದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಒಂದು ಸಣ್ಣ ಗುಡಿಸಿಲಿನಲ್ಲಿ ಅಥವಾ ಮರದ ಕೆಳಗೆ ಬಿಟ್ಟುಬರುವುದು ಒಂದು ವಾಡಿಕೆ. ನಂತರ ಪ್ರತಿ ಸಾರಿ ಮುಟ್ಟಾದಾಗ ಅವರು ಹೀಗೇ ಇರಬೇಕಾಗುತ್ತದೆ. ಅನೇಕ ವೇಳೆ ಹಾವು ಕಚ್ಚಿ ಅಥವಾ ಇನ್ಯಾವುದೋ ಕಾರಣಕ್ಕೆ ಅನೇಕರು ಪ್ರಾಣ ಕಳೆದುಕೊಂಡಿರುತ್ತಾರೆ. ಇಂತಹ ಒಂದು ಅನಿಷ್ಟ ಪದ್ಧತಿಯ ವಿರುದ್ಧ ಟೊಂಕ ಕಟ್ಟಿ ನಿಂತಿರುವವರು ಜಿ.ಕೆ.ಪ್ರೇಮ. ಅವರ ಈ ಪ್ರಯತ್ನದಿಂದಾಗಿ ಅವರ ಕಾಡುಗೊಲ್ಲ ಸಮುದಾಯದ ಮಹಿಳೆಯರು ಈ ಪದ್ಧತಿಯಿಂದ ಹೊರಬರಲು ಸಾಧ್ಯವಾಗಿದೆ. ತುಮಕೂರು, ಚಿತ್ರದುರ್ಗ ಚಿಕ್ಕಮಗಳೂರು, ಹಾಸನ, ಬಳ್ಳಾರಿ ಜಿಲ್ಲೆಗಳ ಕನಿಷ್ಠ 10 ಹಳ್ಳಿಗಳಲ್ಲಿ ಈ ಪದ್ಧತಿ ನಿಂತಿದೆ ಮತ್ತು ಇವರ ಶ್ರಮದಿಂದ ಇತರ ಹಳ್ಳಿಗಳವರೂ ಈ ಬಗ್ಗೆ ಯೋಚಿಸುವಂತಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯಯದ ನಿವೃತ್ತ ಪ್ರಾದ್ಯಾಪಕರಾದ ಡಾ. ಟಿ.ಆರ್.ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಎಸ್. ಮರಿಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...