Homeಕರ್ನಾಟಕಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್ ಸೇರ್ಪಡೆ

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್ ಸೇರ್ಪಡೆ

ಜಗದೀಶ್ ಶೆಟ್ಟರ್‌ ಅವರಿಗೆ ಧಾರವಾಡ ಭಾಗದ ಕ್ಷೇತ್ರಗಳ ಹೊಣೆಗಾರಿಕೆ ನೀಡುವುದಾಗಿ ಖರ್ಗೆ ತಿಳಿಸಿದ್ದಾರೆ

- Advertisement -
- Advertisement -

ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಜಗದೀಶ್ ಶೆಟ್ಟರ್‌ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಪಕ್ಷದ ಬಾವುಟ ನೀಡುವ ಮೂಲಕ ‘ಕೈ’ ನಾಯಕರು ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಪಕ್ಷದ ಸದಸ್ಯತ್ವದ ಪಡೆಯುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಗತ. ಶೆಟ್ಟರ್ ಅವರಿಗೆ ನಮ್ಮ ಪಕ್ಷದ ಸಿದ್ದಾಂತ ಈಗಾಗಲೇ ಗೊತ್ತಿದೆ. ಅವುಗಳನ್ನು ಒಪ್ಪಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ನನಗೆ ಇರುವ ಸಂತೋಷವೆಂದರೆ; ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಶೆಟ್ಟರ್ ಬಿಜೆಪಿ ತೊರೆದಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಶೆಟ್ಟರ್‌ ನಡೆ ಅಕ್ಷಮ್ಯ ಅಪರಾಧ ಎಂದ ಬಿಎಸ್‌ವೈ; ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದು ಯಾಕೆ?-ಶೆಟ್ಟರ್ ತಿರುಗೇಟು

“ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ. ಶೆಟ್ಟರ್ ಜೊತೆಗೆ ಅಭಯ್ ಸಿಂಗ್ ಕೈ ಹಿಡಿಯುತ್ತಿದ್ದಾರೆ. ನಾನು 35 ವರ್ಷ ರಾಜ್ಯದಲ್ಲಿ ರಾಜಕಾರಣ ಮಾಡಿರುವೆ. ಒಮ್ಮೆಯೂ ಶೆಟ್ಟರ್ ಜೊತೆಗೆ ಜಗಳವಾಡಿಕೊಂಡಿಲ್ಲ” ಎಂದು ತಿಳಿಸಿದ್ದಾರೆ.

“ಶೆಟ್ಟರ್ ಯಾವುದೇ ವಿವಾದ ಇಲ್ಲದೆ ಕೆಲಸ ಮಾಡಿಕೊಂಡಿದ್ದಾರೆ ಬಂದಿದ್ದಾರೆ. ಇವರು ನೇರ ಮಾತಿನ ರಾಜಕಾರಣಿ. ಜಗದೀಶ್ ಶೆಟ್ಟರ್‌ ಅವರಿಗೆ ಧಾರವಾಡ ಭಾಗದ ಕ್ಷೇತ್ರಗಳ ಹೊಣೆ ನೀಡುತ್ತೇವೆ” ಎಂದಿದ್ದಾರೆ.

ಎಂ ಬಿ ಪಾಟೀಲ್ ಅವರ ಜೊತೆಗೆ ಜಗದೀಶ್ ಶೆಟ್ಟರ್ ಅವರು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಅವರು ಹಾಜರಿದ್ದರು.

ಹುಬ್ಬಳಿ – ಧಾರವಾಡ ಸೆಂಟ್ರಲ್ ಸೀಟು ಹಂಚಿಕೆ ವಿಚಾರವಾಗಿ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದರು. ಬಳಿಕ ಬಿಜೆಪಿ ಹೈಕಮಾಂಡ್ ನಾಯಕರು ಶೆಟ್ಟರ್‌ ಮನವೊಲಿಕೆ ಯತ್ನಿಸಿ ವಿಫಲವಾಗಿದ್ದಾರೆ.

ಆದರೆ, ಬಿಜೆಪಿ ನಾಯಕರ ಮನವೊಲಿಕೆ ಮತ್ತು ಆಫರ್‌ಗಳನ್ನು ತಿರಸ್ಕರಿಸಿರುವ ಜಗದೀಶ್ ಶೆಟ್ಟರ್ ಪಕ್ಷದ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಬಿಜೆಪಿ ತೊರೆಯುವ ಶೆಟ್ಟರ್‌ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶೆಟ್ಟರ್‌, ”ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ನನ್ನ ಪರವಾಗಿ ಮಾತನಾಡಿದ್ದರು. ಆದರೆ, ಈಗ ಅವರು ನಾನು ಪಕ್ಷ ತೊರೆದಿರುವ ಬಗ್ಗೆ ಅಕ್ಷಮ್ಯ ಅಪರಾಧ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷ ಬಿಡುವುದು ಅಪರಾಧ ಎನ್ನುವುದಾದರೆ, ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದು ಯಾಕೆ? ಆಗ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಿರಲಿಲ್ಲವೇ?” ಎಂದು ಪ್ರಶ್ನಿಸಿದ್ದರು.

”ನನಗೆ ಪಕ್ಷ ಎಲ್ಲ ಸ್ಥಾನಮಾನವನ್ನು ಕೊಟ್ಟರೂ ನಾನು ಪಕ್ಷ ತೊರೆಯುತ್ತಿರುವುದರ ಬಗ್ಗೆ ಯಡಿಯೂರಪ್ಪ ಅವರು ಈ ಮಾತನಾಡುತ್ತಿದ್ದಾರೆ. ಹಾಗಾದರೆ ಈ ಹಿಂದೆ ಬಿ.ಎಸ್.‌ ಯಡಿಯೂರಪ್ಪ ಅವರಿಗೂ ಪಕ್ಷ ಸೂಕ್ತ ಸ್ಥಾನಮಾನವನ್ನು ಕೊಟ್ಟಿತ್ತು. ಆದರೆ, ಅವರು ಯಾಕೆ ಬಿಜೆಪಿ ಬಿಟ್ಟು ಕೆಜೆಪಿಯನ್ನು ಕಟ್ಟಿದರು?” ಎಂದು ಕೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...