Homeಅಂಕಣಗಳುನಾನೂ ಗೋವುಗಳನ್ನು ಸಾಕಿದೆ, ಮಾರಿದೆ

ನಾನೂ ಗೋವುಗಳನ್ನು ಸಾಕಿದೆ, ಮಾರಿದೆ

- Advertisement -
- Advertisement -

| ಗೌರಿ ಲಂಕೇಶ್ |
10 ಮಾರ್ಚ್, 2010 (ಸಂಪಾದಕೀಯದಿಂದ)

ಯಡಿಯೂರಪ್ಪನ ‘ಬ್ರಾಹ್ಮಣಶಾಹಿ’ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಕುರಿತಂತೆ ನಿಮ್ಮ ಈ ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಬಹಳಷ್ಟು ಚರ್ಚಿಸಿವೆ. ಆದರೆ ಎಲ್ಲ ಚರ್ಚೆಗಳೂ ಆಹಾರ ಸಂಸ್ಕೃತಿ, ಸಂವಿಧಾನ, ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಆಯ್ಕೆ ಇತ್ಯಾದಿಗಳ ಸುತ್ತ ನಡೆದಿದೆ.

ಆದ್ದರಿಂದ ನಾನಿಲ್ಲಿ ರೈತರ ದೃಷ್ಟಿಕೋನದಿಂದ ಮತ್ತು ವೈಯಕ್ತಿಕ ಅನುಭವದಿಂದ ಹತ್ತಿರವಿರುವ ಅಮ್ಮನ ತೋಟದ ಜವಾಬ್ದಾರಿಯನ್ನು ಐದಾರು ವರ್ಷಗಳ ಹಿಂದೆ ವಹಿಸಿಕೊಂಡಾಗ ತೋಟದೊಂದಿಗೆ ಒಂದು ಜೊತೆ ಎತ್ತು ಬಂದಿದ್ದವು.

ಎರಡು ವರ್ಷಗಳ ಹಿಂದೆ ತೋಟವನ್ನು ನೋಡಿಕೊಳ್ಳಲು ಬಂದ ನಮ್ಮ ಲಿಂಗರಾಜು ಆ ಎರಡೂ ಎತ್ತುಗಳು ಮುದಿ ಆಗಿವೆ ಎಂದೂ, ಅವುಗಳನ್ನು ಮಾರಿ ಬೇರೆ ಜೋಡಿಯನ್ನು ಖರೀದಿಸಿದರೆ ಉತ್ತಮ ಎಂದೂ ಹೇಳಿದ. ಆ ಎತ್ತುಗಳಿಗೆ ಎಷ್ಟು ವಯಸ್ಸಾಗಿತ್ತೆಂದರೆ ಅವುಗಳಿಂದ ಯಾವ ಕೆಲಸವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವುಗಳನ್ನು ಮಾರದೆ ಹಾಗೆ ಇಟ್ಟುಕೊಳ್ಳುವುದೂ ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇವಿನ ಸಮಸ್ಯೆ.

ಇವತ್ತು ನೆಲಮಂಗಲದ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುತ್ತಿದೆ; ಹೊಲಗಳಿದ್ದ ಜಾಗಗಳಲ್ಲಿ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ; ಗೋಮಾಳಗಳು ಸೈಟುಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಎತ್ತುಗಳಿಗೆ ಎಲ್ಲಿಂದ ಮೇವು ತರುವುದು? ಹಿಂಡಿ, ಬೂಸಾ ಮಾತು ಬದಿಗಿರಲಿ, ಒಣಹುಲ್ಲು ಕೂಡ ಎಷ್ಟು ದುಬಾರಿ ಆಗಿದೆ ಎಂದರೆ ಒಂದು ಮೆದೆ ಹುಲ್ಲಿಗೆ ಇವತ್ತು ಕನಿಷ್ಠ ಆರು ಸಾವಿರ ರೂಪಾಯಿಗಳನ್ನು ತೆರಬೇಕು. ಇವತ್ತು ಹಲವಾರು ಚೆಡ್ಡಿಗಳು “ಗೋವು ಸಗಣಿ ಕೊಡುತ್ತದಲ್ಲ” ಎಂದೆಲ್ಲ ವಾದಿಸುತ್ತಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ಬೆಲೆಬಾಳುವ ಸಗಣಿಗಾಗಿ ಹತ್ತಾರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಹುಲ್ಲು ಖರೀದಿಸುವುದು ಎಷ್ಟು ಸಮಂಜಸ? ಅಷ್ಟು ಆರ್ಥಿಕ ಶಕ್ತಿ ಅದೆಷ್ಟು ರೈತರಿಗೆ ಇರುತ್ತದೆ? ಈಗಾಗಲೇ ಸಾಲ-ನಷ್ಟಗಳಡಿ ತತ್ತರಿಸುತ್ತಿರುವ ರೈತರ ಮೇಲೆ ಇಂತಹ ಇನ್ನೊಂದು ಆರ್ಥಿಕ ಹೊರೆಯನ್ನು ಹೊರಿಸುವಷ್ಟು ಅಮಾನವೀಯರಾಗಿದ್ದೇವೆಯೇ ನಾವು?

ತೋಟದ ಮುದಿ ಎತ್ತುಗಳನ್ನು ಮಾರಲು ಲಿಂಗರಾಜುವಿಗೆ ಹೇಳಿದೆ. ಅವುಗಳನ್ನು ಕೊಂಡವರು ಅವುಗಳನ್ನು ಸಾಕಿದರೋ ಅಥವಾ ಕಸಾಯಿಖಾನೆಗೆ ಮಾರಿದರೋ, ಅದರ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವುಗಳನ್ನು ಮಾರಿ ಬಂದ 10,500 ರೂಪಾಯಿಗಳೊಂದಿಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಎರಡು ನಾಟಿ ಹಸುಗಳನ್ನು ಕೊಂಡುಕೊಂಡೆ. ಈ ಎರಡೂ ಹಸುಗಳು ಈಗ ಎರಡು ಗಂಡು ಕರುಗಳನ್ನು ಈದಿವೆ. ನನ್ನ ಈ ನಾಲ್ಕು ಗೋವುಗಳಲ್ಲದೆ ಲಿಂಗರಾಜು ಕೂಡ ಎರಡು ಹಸುಗಳನ್ನು ಸಾಕಿದ್ದಾನೆ. ಆದರೆ ಆ ಹಸುಗಳನ್ನು ಕೊಂಡ ವರ್ಷ ಮಳೆ ಮತ್ತು ನಮ್ಮ ಬೋರ್‍ವೆಲ್ ಕೈಕೊಟ್ಟಿದ್ದರಿಂದ ಮೇವಿಗಾಗಿ ನಾನು ಮತ್ತು ಲಿಂಗರಾಜು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ನಮ್ಮ ಚಂದ್ರೇಗೌಡರ ಬಿದಿರಿನ ಕೆರೆಯಿಂದ ಏಳು ಸಾವಿರ ರೂಪಾಯಿ ಕೊಟ್ಟು ಒಣಹುಲ್ಲು ತರಿಸಿದ್ದಾಯಿತು. ಆದೂ ಸಾಕಾಗದೆ ಹತ್ತಿರದಿಂದಲೇ ಮತ್ತೆ ಐದು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಇನ್ನು ಎರಡೂ ಹಸುಗಳು ಗಬ್ಬ ಆಗಿದ್ದಾಗ ಹಿಂಡಿ, ಬೂಸಾ ಅಂತ ಮತ್ತಷ್ಟು ಸಾವಿರ ರೂಪಾಯಿಗಳು ಕೈಬಿಟ್ಟವು. ಹೀಗೆ ಲೆಕ್ಕ ಹಾಕಿದರೆ ಆ ಎರಡು ಹಸು ಮತ್ತು ಅವುಗಳ ಕರುಗಳಿಗೆಂದು ಈಗಾಗಲೇ 30,000 ರೂಪಾಯಿಗಳು ವೆಚ್ಚವಾಗಿವೆ.

ಈ ವೆಚ್ಚದೊಂದಿಗೆ ಆ ಗೋವುಗಳಿಂದ ಆದ ಉಳಿತಾಯ ಯಾವ ಲೆಕ್ಕಕ್ಕೂ ಆಗುವುದಿಲ್ಲ. ಆದರೆ ತೋಟದಲ್ಲಿ ಗೋವುಗಳಿದ್ದರೆ ಚಂದ ಎಂಬ ನಂಬಿಕೆ ಮತ್ತು ಆ ಕರುಗಳಿಂದ ನಮ್ಮ ಇಶಾಳಿಗೆ ಆಗುವ ಆನಂದ(ಅವುಗಳಿಗೆ ಶಿವ ಮತ್ತು ಬಸವ ಎಂದು ಹೆಸರಿಟ್ಟಿದ್ದಾಳೆ)ಕ್ಕೆ ಹೋಲಿಸಿದರೆ ವೆಚ್ಚವೆಲ್ಲ ಗೌಣ. ಹವ್ಯಾಸಿ ರೈತ ಮಹಿಳೆಯಾದ ನನಗೆ ಆ ಆರ್ಥಿಕ ಭಾರವನ್ನು ಹೊರುವ ಶಕ್ತಿ ಮತ್ತು ಹುಮ್ಮಸ್ಸು ಇರಬಹುದು, ಆದರೆ ಅದು ಎಲ್ಲ ರೈತರಿಂದ ನಿರೀಕ್ಷಿಸುವುದು ತಪ್ಪು ಮಾತ್ರವಲ್ಲ ದೊಡ್ಡ ಅನ್ಯಾಯವಾಗುತ್ತದೆ.

ಅಂದಹಾಗೆ, ಈಗಿರುವ ಹಸುಗಳೂ ಮುದಿ ಆದಾಗ ಅವುಗಳನ್ನೂ ಮಾರುತ್ತೇನೆ. ಕರುಗಳು ಬೆಳೆದಾಗ ಅವುಗಳನ್ನು ಇತರೆ ರೈತರಿಗೆ ಮಾರುತ್ತೇನೆ. ಬಂದ ಹಣದಲ್ಲಿ ಹೊಸ ಹಸುಗಳನ್ನು, ಹೊಸ ಎತ್ತುಗಳನ್ನು ಕೊಂಡು ಸಾಕುತ್ತೇನೆ. ಬುದ್ದಿ ಇರುವ ಎಲ್ಲಾ ಕೃಷಿಕರೂ ಮಾಡುವುದು ಇದನ್ನೇ.

ಆದರೆ ಬುದ್ದಿ ಇಲ್ಲದ, ಗೋವನ್ನು ಸಾಕದ ಅವುಗಳಿಗಾಗಿ ಪರದಾಡುವ, ಅವುಗಳನ್ನು ಆರ್ಥಿಕ ಲಾಭ-ನಷ್ಟದ ಲೆಕ್ಕದಲ್ಲಿ ನೋಡದ ಯಡಿಯೂರಪ್ಪನಂತಹ ಬುದ್ಧಿಹೀನರು ಮಾತ್ರ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲು ಹೊರಡುತ್ತಾರೆ…..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...