ಮೊನ್ನೆ ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶರು ನಮ್ಮನ್ನಗಲಿ ಮೂರು ವರ್ಷ. ಅವರ ಹತ್ಯೆಯ ತನಿಖೆ ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಎಲ್ಲಿವರೆಗೂ ಬಂತು ಎಂಬುದು ಹಲವರ ಪ್ರಶ್ನೆ.

2013 ರಿಂದ 2017 ರವರೆಗೆ ಒಟ್ಟು ನಾಲ್ವರು ವಿಚಾರವಾದಿ ಲೋಕಚಿಂತಕರ ಹತ್ಯೆ ನಡೆಯಿತು – ಮಹಾರಾಷ್ಟ್ರದಲ್ಲಿ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ, ಕರ್ನಾಟಕದಲ್ಲಿ ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್. ಮೊದಲ ಮೂರು ಹತ್ಯೆಗಳ ತನಿಖೆ ಕೊಲೆಗಡುಕರನ್ನು ತಲುಪಲಾಗದೇ ಮಧ್ಯದಲ್ಲೇ ದಾರಿ ತಪ್ಪಿತ್ತು, ಇಲ್ಲ ಡೆಡ್‍ಎಂಡ್‍ಗೆ ತಲುಪಿಬಿಟ್ಟಿತ್ತು. ಗೌರಿ ಹತ್ಯೆಯ ತನಿಖೆ ನಾಲ್ಕೂ ಪ್ರಕರಣಗಳನ್ನು ಬೇಧಿಸುವಲ್ಲಿ, ಈ ಹತ್ಯೆಗಳನ್ನು ಮಾಡಿದ ಗುಂಪನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಗೌರಿ ಪ್ರಕರಣದಲ್ಲಿ 2018ರ ನವೆಂಬರ್‌ನಲ್ಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲ, ಆ ನಂತರದ ದಿನಗಳಲ್ಲಿ ಕಲ್ಬುರ್ಗಿ ಅವರ ಪ್ರಕರಣವನ್ನೂ ಸಹ ಗೌರಿ ಹತ್ಯೆಯ ತನಿಖೆ ನಡೆಸಿದ ವಿಶೇಷ ತನಿಖಾ ದಳಕ್ಕೆ ವರ್ಗಾಯಿಸಲಾಯಿತು. ಸುಮಾರು ವರ್ಷ ನೆನೆಗುದಿಗೆ ಬಿದ್ದಿದ್ದ ಆ ಪ್ರಕರಣದ ತನಿಖೆಯನ್ನೂ ಪೂರ್ಣಗೊಳಿಸಿ 2019ರ ಜನವರಿಯಲ್ಲಿ ಆ ಪ್ರಕರಣದಲ್ಲೂ ಆರೋಪಪಟ್ಟಿ ಸಲ್ಲಿಸಲಾಗಿದೆ.

PC : Sikh News Express

ಸನಾತನ ಸಂಸ್ಥೆ ಪ್ರಕಟಿಸಿರುವ ‘ಕ್ಷಾತ್ರಧರ್ಮ ಸಾಧನಾ’ ಪುಸ್ತಕದಿಂದ ಪ್ರಭಾವಿತರಾಗಿ “ಹಿಂದೂರಾಷ್ಟ್ರ ಸ್ಥಾಪಿಸಲು, ದುರ್ಜನರನ್ನು ಕೊಂದು ಸತ್ಯಯುಗವನ್ನು ಆಹ್ವಾನಿಸಲು”, ಆರೋಪಿತರು ತಾವು “ದುರ್ಜನರು”, “ಹಿಂದೂ ವಿರೋಧಿಗಳು” ಎಂದೆಣಿಸಿದವರ ಸರಣಿ ಕೊಲೆಗಳನ್ನು ನಡೆಸಿದರು. ಆರೋಪಿಸಿರುವಂತೆ ಈ ಕೃತ್ಯಗಳನ್ನು ಸಂಘಟಿಸಿದ ಮೂಲ ಪುರುಷರು ಒಂದಿಲ್ಲೊಂದು ರೀತಿಯಲ್ಲಿ ಗೋವಾದ ಸನಾತನ ಸಂಸ್ಥಾ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದವರೇ. ಆದರೆ ಬಂದೂಕು ಹಿಡಿದು ಕೃತ್ಯ ನಡೆಸಿದವರಲ್ಲಿ ಸಂಸ್ಥಾದೊಂದಿಗೆ ನೇರಾನೇರ ಸಂಬಂಧ ಇರದವರೇ ಹೆಚ್ಚು. ಈ ಸಂಚಿನ ಭಾಗವಾದ ಬಹುತೇಕರನ್ನು ಈಗಾಗಲೆ ಬಂಧಿಸಲಾಗಿದೆ ಮತ್ತು ಆರೋಪಪಟ್ಟಿ ಸಲ್ಲಿಸಲಾಗಿದೆ. ಗೌರಿ ಮತ್ತು ಕಲ್ಬುರ್ಗಿ ಪ್ರಕರಣಗಳಲ್ಲಿ ವಾದ-ಪ್ರತಿವಾದಗಳು ನಡೆದು ನ್ಯಾಯಾಲಯವು ಚಾರ್ಜ್ ಫ್ರೇಮ್ ಮಾಡಿದೆ. ಈ ಪ್ರಕರಣಗಳಲ್ಲಿ ಟ್ರಯಲ್ ಇನ್ನಷ್ಟೇ ಶುರುವಾಗಬೇಕಿದೆ.

ತನಿಖೆಯ ಉಳಿಕೆಗಳು

ಗೌರಿ ಹತ್ಯೆಯ ತನಿಖೆ ನಮ್ಮ ತನಿಖಾ ಸಂಸ್ಥೆಗಳಲ್ಲಿ ನಿಜವಾಗಲೂ ನಂಬಿಕೆ ನೂರ್ಮಡಿಸುವಂತೆ ಮಾಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ತನಿಖೆಯಲ್ಲೂ ಕೆಲವು ಉಳಿಕೆಗಳಿವೆ.

ಗೋವಿಂದ ಪಾನ್ಸರೆ, ಕಲ್ಬುರ್ಗಿ ಮತ್ತು ಗೌರಿಯವರನ್ನು ಒಂದೇ ನಾಡಪಿಸ್ತೂಲಿನಿಂದ ಕೊಲ್ಲಲಾಗಿದೆ. ಈ ಕ್ರೈಂ ಸೀನ್‍ಗಳಲ್ಲಿ ಸಿಕ್ಕ ಬುಲೆಟ್ ಕಾರ್ಟ್ರಿಡ್ಜ್‌ಗಳ ಆಧಾರವಾಗಿಯೇ ಈ ಮೂರೂ ಕೊಲೆಗಳನ್ನು ಒಂದೇ ಪಿಸ್ತೂಲಿನಿಂದ ಮಾಡಲಾಗಿದೆ, ಹಾಗಾಗಿ ಈ ಎಲ್ಲ ಕೊಲೆಗಳ ಹಿಂದೆ ಒಂದೇ ತಂಡ ಇದೆ ಎಂದು ನಿರ್ಣಯಿಸಲಾಯಿತು. ಈಗ ಆ ಪಿಸ್ತೂಲು ಕೊಂಡು ತಂದವರು, ಅದನ್ನು ಬಳಸಲು ಕೊಲೆಗಾರರಿಗೆ ತರಬೇತಿ ನೀಡಿದವರು, ಬುಲೆಟ್ಟುಗಳನ್ನು ನೀಡಿದವರು, ಅದನ್ನು ಬಳಸಿ ಗುಂಡು ಹಾರಿಸಿ ಕೊಂದವರು ಎಲ್ಲರ ಬಂಧನ ಆಗಿದೆ. ಆದರೆ ಈ ಮೂರೂ ಪ್ರಕರಣಗಳಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಬಹುದಿದ್ದ ಪಿಸ್ತೂಲು ಭಗೀರಥ ಪ್ರಯತ್ನದ ಹೊರತಾಗಿಯೂ ಸಿಗಲಿಲ್ಲ.

ಆರೋಪಿಗಳಾದ ಶರದ್ ಕಲಸ್ಕರ್ ಮತ್ತು ವೈಭವ ರೌತ್ ಜುಲೈ 23, 2018ರಂದು, ಹತ್ಯೆ ಸಂಚಿನ ಪ್ರಮುಖ ರೂವಾರಿಗಳಾದ ಅಮೋಲ ಕಾಳೆ ಮತ್ತು ಅಮಿತ್ ದೇಗ್ವೇಕರ್ ಬಂಧನವಾದ ಕೆಲ ದಿನಗಳ ನಂತರ, ಪ್ರಮುಖ ಸಾಕ್ಷ್ಯವಾದ ಪಿಸ್ತೂಲನ್ನು ಮುಂಬೈ ಬಳಿಯ ಉಲ್ಲಾಸ ನದಿಯ ವಸೈ ಕ್ರೀಕ್‍ಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲಿಂದ ಪಿಸ್ತೂಲಿನ ಬಿಡಿ ಭಾಗಗಳನ್ನು ಬಿಡಿಸಿ ನದಿಗೆ ಎಸೆದುಬಿಟ್ಟರು. ಶರದ್ ಕಲಸ್ಕರ್‌ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿ ದಾಖಲಾಗಿದೆ. ಆದರೆ ಪೊಲೀಸರಿಗೆ ಈ ಮಾಹಿತಿ ತಿಳಿಯುವ ವೇಳೆಗೆ ಅಕ್ಟೋಬರ್ ದಾಟಿತ್ತು. ಆ ವರ್ಷ, ಅಂದರೆ ಒಂದು ಮುಂಗಾರು ಮುಗಿದಿತ್ತು. ಉಲ್ಲಾಸ ನದಿ ವಸೈ ಕ್ರೀಕ್‍ನಿಂದ ಕೊಂಚ ದೂರದಲ್ಲಿಯೇ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಆದರೂ ಮಧ್ಯ ಏಷಿಯಾದ ಒಂದು ಕಂಪೆನಿಯನ್ನು ಗೊತ್ತು ಮಾಡಿಕೊಂಡು ಇಡೀ ವಸೈ ಕ್ರೀಕ್‍ನ ತಳವನ್ನು ಶೋಧಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಮಹಾರಾಷ್ಟ್ರ-ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಸುಮಾರು ಒಂದೂವರೆ ಕೋಟಿ ರೂ ವ್ಯಯಿಸಿದೆ. ಬಹುಶಃ ಈ ಪಿಸ್ತೂಲನ್ನು ನಾವು ಸಮುದ್ರಕ್ಕೆ ಕಳೆದುಕೊಂಡಿದ್ದು ಇನ್ನು ಸಿಗುವ ಆಸೆ ಇಲ್ಲ. ಈ ಪಿಸ್ತೂಲು ಸಿಕ್ಕಿದ್ದರೆ ಈ ನಾಲ್ಕೂ ಪ್ರಕರಣಗಳು ಇನ್ನಷ್ಟು ಬಿಗಿಯಾಗುತ್ತಿದ್ದವು.

 

ಗೌರಿ ಪ್ರಕರಣದ ಆರೋಪ ಪಟ್ಟಿಯು ಒಟ್ಟು 18 ಜನರನ್ನು ಆರೋಪಿಗಳೆಂದು ಹೆಸರಿಸುತ್ತವೆ. ಅದರಲ್ಲಿ ಈವರೆಗೆ 17 ಜನರ ಬಂಧನವಾಗಿದೆ. ಒಬ್ಬ ನಿಹಾಲ್ ಅಲಿಯಾಸ್ ದಾದಾ ಎಂಬಾತ ಇನ್ನೂ ಸಿಕ್ಕಿಲ್ಲವಷ್ಟೇ ಅಲ್ಲ, ಆತನ ನಿಜ ಹೆಸರು ಸಹ ಇನ್ನೂ ಗೊತ್ತಾಗಿಲ್ಲ. ಒಟ್ಟಾರೆ ಸಂಚು ಮತ್ತು ಹತ್ಯೆಯಲ್ಲಿ ಈತನ ಪಾತ್ರ ಅಂಚಿನದೇ ಆದರೂ, ಈತ ಈ ಪ್ರಕರಣದ ಪ್ರಮುಖ ಆರೋಪಿಗಳ ಬ್ರೈನ್‍ವಾಶ್ ಮಾಡಿದ ಐಡಿಯಲೋಗ್. ಹಾಗಾಗಿ ಈತ ಹೊರಗಿದ್ದಷ್ಟೂ ದಿನ, ಇನ್ನಷ್ಟು ಜನರ ತಲೆಕೆಡಿಸಿ ಇಂತ ಹಿಂಸಾಕಾರ್ಯಗಳಿಗೆ ಅಣಿಮಾಡಿಸಬಲ್ಲವ. ಹಾಗಾಗಿ ಈತನ ಬಂಧನ ಜರೂರು ನಡೆಯಬೇಕಿದೆ. ಆದರೆ ಈತನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಆರೋಪಪಟ್ಟಿ ಸಲ್ಲಿಸುವಾಗ ಬಂಧಿತರು 16 ಜನ. ನಂತರ ಜನವರಿ 2020ರಲ್ಲಿ ಅದುವರೆಗೂ ತಲೆಮರೆಸಿಕೊಂಡಿದ್ದ ಇಂಥದೇ ಒಬ್ಬ ಐಡಿಯಲೋಗ್ ರಿಷಿಕೇಶ ದೇವಡೀಕರ್ ಅನ್ನು ಜಾರ್ಖಂಡ್‍ನಿಂದ ಬಂಧಿಸಿ ತಂದಿತು ವಿಶೇಷ ತನಿಖಾದಳ. ಆತ ಅಲ್ಲಿ ಸನಾತನ ಸಂಸ್ಥಾ ಪ್ರಕಾಶನದ ಪುಸ್ತಕಗಳ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದ, ಆದರೆ ಬೇರೆ ಹೆಸರಿನಲ್ಲಿ. ಹಾಗಾಗಿ ತನಿಖಾದಳವು ನಿಹಾಲ್‍ಅನ್ನು ಸಹ ಇಷ್ಟರಲ್ಲೇ ಬಂಧಿಸಲಿ ಎಂದು ಆಶಿಸೋಣ.

ಉತ್ತರ ಸಿಗದ ಪ್ರಶ್ನೆಗಳು

ಇನ್ನು ಈ ಇಡೀ ಪ್ರಕರಣ ಮತ್ತು ತನಿಖೆಯಲ್ಲಿ ಹಲವು ಉತ್ತರ ಸಿಗದ ಪ್ರಶ್ನೆಗಳಿವೆ. ತನಿಖಾಧಿಕಾರಿಗಳ ಅವಿರತ ಪ್ರಯತ್ನದ ಹೊರತಾಗಿಯೂ ಉಳಿದುಬಿಟ್ಟಿರುವ ಪ್ರಶ್ನೆಗಳಿವು. ಕೆಲವು ಅವರ ಕೈಮೀರಿದವು.

ಆರೋಪಪಟ್ಟಿಯು ಸ್ಪಷ್ಟವಾಗಿ ಈ ಕೊಲೆಗಳ ಷಡ್ಯಂತ್ರದ ಮೂಲ ಪುರುಷರಲ್ಲಿ ಅನೇಕರು ಸನಾತನ ಸಂಸ್ಥಾ ಅಥವಾ ಅದರ ಅಂಗಸಂಸ್ಥೆಗಳಿಗೆ ಸೇರಿದವರು ಅಷ್ಟೇ ಅಲ್ಲ, ಈ ಹತ್ಯೆಗಳ ಹಿಂದಿನ ವಿಕೃತ ತಾತ್ವಿಕತೆ ಸಂಸ್ಥಾದ ಸ್ಥಾಪಕ ಡಾ. ಜಯಂತ ಬಾಲಾಜಿ ಅಠಾವಳೆ ರಚಿಸಿರುವ ‘ಕ್ಷಾತ್ರಧರ್ಮ ಸಾಧನಾ’ ಎಂಬ ಪುಸ್ತಕದ್ದು ಎಂದೂ ಹೇಳುತ್ತದೆ. ಆದರೆ ಸನಾತನ ಸಂಸ್ಥಾ ಮತ್ತು ಅದರ ಸ್ಥಾಪಕ ಡಾ. ಅಠಾವಳೆ ವಿರುದ್ಧ ಕಾನೂನುರೀತ್ಯಾ ಯಾವುದೇ ಕ್ರಮ ಆಗಿಲ್ಲ. ಇದಕ್ಕೆ ನ್ಯಾಯಿಕವಾದ ಕೆಲವು ಕಾರಣಗಳಿವೆ. ಒಂದು ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಯು ಒಂದು ಕುಕೃತ್ಯ ಮಾಡಿದ ಮಾತ್ರಕ್ಕೆ ಅದರ ಸಂಸ್ಥೆಯನ್ನು ದೂರಲು ಬರುವುದಿಲ್ಲ. ಹಲವು ಬಾರಿ ಉಗ್ರಗಾಮಿ ಕೃತ್ಯಗಳಲ್ಲಿ ಕೆಲವು ಸಂಘಟನೆಗಳೇ ಜವಾಬ್ದಾರಿ ಹೊರುತ್ತವೆ. ಅಲ್ಲಿಗೆ ಈ ಸಂಘಟನೆ/ಸಂಸ್ಥೆಯೇ ತನ್ನ ಕಾರ್ಯಸೂಚಿಯ ಭಾಗವಾಗಿ ಈ ಕೃತ್ಯ ನಡೆಸಿದೆ. ಇಲ್ಲ ಅವರು ಜವಾಬ್ದಾರಿ ಹೊರದಿದ್ದರೂ, ತನಿಖಾಧಿಕಾರಿಗಳು ಸಂಸ್ಥೆಯೇ ಈ ಕೃತ್ಯಗಳನ್ನು ನಡೆಸಿವೆ ಎಂದು ಸಾಕ್ಷ್ಯಗಳ ಸಮೇತ ರುಜು ಮಾಡಬೇಕಿರುತ್ತದೆ. ಸದ್ಯ ಈ ನಾಲ್ಕು ಪ್ರಕರಣಗಳ ತನಿಖೆಯಲ್ಲಿ, ಸನಾತನ ಸಂಸ್ಥೆಯೇ ತನ್ನ ಕಾರ್ಯಸೂಚಿಯ ಭಾಗವಾಗಿ ಈ ಕೊಲೆಗಳನ್ನು ಮಾಡಿಸಿದೆ ಎಂದು ಹೇಳಲು ತಕ್ಕ ಸಾಕ್ಷಿ ಪುರಾವೆಗಳು ದೊರೆತಿಲ್ಲ. ಈ ಪ್ರಕರಣಗಳ ಆರೋಪಿಗಳು ಸನಾತನ ಸಂಸ್ಥಾ ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದವರೇ ಆದರೂ ಸುಮಾರು 2011-12ರ ಸುಮಾರಿಗೆ ಇವರಲ್ಲಿ ಬಹುತೇಕರು ಬಹಿರಂಗವಾಗಿ ಈ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಈಗ ಈ ಸಂಘಟನೆಗಳು ತಮಗೂ ಈ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದೇ ವಾದಿಸುತ್ತಿವೆ.

ಆದರೆ ಸನಾತನ ಸಂಸ್ಥಾದ ಅಂಗಸಂಸ್ಥೆ ಹಿಂದೂ ವಿಧಿಧಿಜ್ಞ ಪರಿಷತ್ತು, ವಕೀಲರ ಪ್ರಕೋಷ್ಠ. ಈ ನಾಲ್ಕು ಹತ್ಯೆ ಪ್ರಕರಣದ ಎಲ್ಲ ಆರೋಪಿಗಳ ಪರ ಇವರೇ ವಕೀಲರು. ಬಂಧಿತ ಆರೋಪಿಗಳೆಲ್ಲರೂ ನಿರ್ದೋಷಿಗಳೆಂದು ಅವರ ಪರ ನ್ಯಾಯಾಲಯಗಳಲ್ಲಿ ಮತ್ತು ಹೊರಗೆ ಸಮಾಜದಲ್ಲಿ ವಾದಿಸುತ್ತಿರುವವರು, ಹತ್ಯೆಗೀಡಾದ ನಾಲ್ವರ ಬಗ್ಗೆಯೂ ಕೀಳಾಗಿ ಮಾತಾಡುತ್ತಾ ಚಾರಿತ್ರ್ಯಹರಣಗೊಳಿಸುತ್ತಾ ಅವರ ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಿರುವುದು ಅದೇ ಸನಾತನ ಸಂಸ್ಥಾ! ಹಿಂದೂ ವಿಧಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಸಂಚಾಲಕ ಆರೋಪಿಗಳೆಲ್ಲರ ಪರ ವಾದಿಸುತ್ತಿರುವ ವಕೀಲ ಸಂಜೀವ ಪುಣಲೇಕರನನ್ನು ಸಿಬಿಐ ನರೇಂದ್ರ ದಾಭೋಲ್ಕರ್ ಪ್ರಕರಣದಲ್ಲಿ ಬಂಧಿಸಿ ಆರೋಪಿಯನ್ನಾಗಿಸಿದೆ. ಆತನ ಮೇಲೆ ಷಡ್ಯಂತ್ರದ ಭಾಗವಾಗಿರುವ ಮತ್ತು ಸಾಕ್ಷ್ಯ ನಾಶದ ಆರೋಪ ಇದೆ. ಇನ್ನು ‘ಕ್ಷಾತ್ರಧರ್ಮ ಸಾಧನಾ’ ಪುಸ್ತಕದ ತಾತ್ವಿಕ ತಳಹದಿ. ಹತ್ಯೆಯ ಆರೋಪಿಗಳಾರಿಗೂ ಡಾ. ಅಠಾವಳೆ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಸಿಬಿಐ ಡಾ. ಅಠಾವಳೆಯನ್ನೂ ತನಿಖೆಗೊಳಪಡಿಸಿದೆ. ಆತ ತನ್ನ ಬರವಣಿಗೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೋ ಕೆಲವರು ಪ್ರಚೋದನೆಗೊಳಗಾದರೆ ಅದಕ್ಕೆ ತನ್ನನ್ನು ಬಾಧ್ಯನನ್ನಾಗಿ ಮಾಡಲಾಗುವುದಿಲ್ಲ ಎಂದು ವಾದಿಸಿದ್ದಾರೆ. ಅದು ಕಾನೂನಾತ್ಮಕವಾಗಿ ನಿಜ ಕೂಡ. ಆದರೆ ಇದೇ ವಾದ ಜಾಕಿರ್ ನಾಯಕ್‍ನಿಗೆ ಬೇರೆ ರೀತಿಯಲ್ಲಿ ಅನ್ವಯಿಸಲಾಗಿದೆ ಎಂಬುದು ಇಂದಿನ ವಾಸ್ತವ.

ಪರಶುರಾಮ ವಾಘ್ಮೋರೆ PC : Vartha Bharathi

ಸನಾತನ ಸಂಸ್ಥಾವನ್ನು ಸಂಘ ಪರಿವಾರ ಮತ್ತು ಅಧಿಕಾರಾರೂಢ ಬಿಜೆಪಿ ರಕ್ಷಿಸುತ್ತಿದೆಯೇ, ಎಂಬುದು ನಮ್ಮ ಮುಂದಿರುವ ಅತಿದೊಡ್ಡ ಪ್ರಶ್ನೆ. ನಮ್ಮಲ್ಲಿ ಅನೇಕರು ಸೈದ್ಧಾಂತಿಕ ಕಾರಣಗಳಿಗಾಗಿ ಹೌದು ಎಂದೇ ನಂಬುತ್ತೇವೆ. ಆದರೆ ಬಹುಶಃ ಸಂಘ ಪರಿವಾರ ಮತ್ತು ಬಿಜೆಪಿಯು ಸನಾತನ ಸಂಸ್ಥಾವನ್ನು ಮಟ್ಟ ಹಾಕಬೇಕೆಂದೇ ಆಶಿಸಿದೆ ಎನಿಸುತ್ತದೆ. ಉಗ್ರ ಹಿಂದುತ್ವ ಪ್ರತಿಪಾದಿಸುವ ಸಂಸ್ಥಾ, ತನ್ನ ಅಂಗ ಸಂಸ್ಥೆ ಹಿಂದೂ ಜನಜಾಗೃತಿ ಸಮಿತಿಯ ಅಡಿಯಲ್ಲಿ ಸಂಘ ಪರಿವಾರದ ಹೊರಗಿರುವ ಉಗ್ರ ಹಿಂದುತ್ವವಾದಿಗಳೆಲ್ಲರನ್ನೂ ಒಂದು ತೆಕ್ಕೆಗೆ ತರುವ ಪ್ರಯತ್ನವನ್ನು ಕಳೆದೊಂದು ದಶಕದಿಂದ ಮಾಡುತ್ತಾ ಬಂದಿದೆ. ಇವರ ಪ್ರಕಾರ ಸಂಘ ಪರಿವಾರ ಅಧಿಕಾರದಾಸೆಗೆ ಹಿಂದುತ್ವ ಕೈಬಿಟ್ಟು ರಾಜಿಯಾದ ಸಂಘಟನೆ. ಇವರು ಬಲಗೊಂಡಂತೆ ಸಂಘಪರಿವಾರಕ್ಕೆ ಅಪಾಯ. ಮಹಾರಾಷ್ಟ್ರದ ಕೊಲೆಯ ತನಿಖಾಧಿಕಾರಿಗಳನ್ನು ಕೇಳಿ ನೋಡಿ. ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಫ್ರೀಹ್ಯಾಂಡ್ ನೀಡಿದ್ದಷ್ಟೇ ಅಲ್ಲ, ಕೊಲೆಗಾರರನ್ನು ಹಿಡಿದು ಎಡೆಮುರಿಕಟ್ಟುವಂತೆ ಒತ್ತಾಯಿಸಿದ್ದೂ ಇದೆ. ಆದರೆ ಅವರು ಬಹಿರಂಗವಾಗಿ ಸನಾತನ ಸಂಸ್ಥಾ ಜೊತೆಗೆ ವಾದಕ್ಕಿಳಿಯರು, ಒಂದೊಮ್ಮೆ ಇಳಿದರೆ ಯಾರದು ನೈಜ ಹಿಂದುತ್ವ ಎಂಬ ಚರ್ಚೆ ಆರಂಭವಾಗಿಬಿಡುತ್ತದೆ ಎಂಬ ಭಯ ಇದಕ್ಕೆ ಕಾರಣ. ಸಂಘ ಪರಿವಾರ ಮತ್ತು ಬಿಜೆಪಿಗೆ ಸನಾತನ ಸಂಸ್ಥಾ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪ.


ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

ಇದನ್ನೂ ಓದಿ: ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು… ಭಾಗ-2

ಇದನ್ನೂ ಓದಿ: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಸೂರ್ಯ ಚಿಂತಾಮಣಿ
+ posts

LEAVE A REPLY

Please enter your comment!
Please enter your name here