Homeಮುಖಪುಟಉಭಯಲಿಂಗತ್ವ ಮತ್ತು ದ್ವಂದ್ವವು ಭಾರತದಲ್ಲಿ ಪ್ರತಿರೋಧದ ಪ್ರಧಾನ ಧಾರೆಗಳಾದುದು ಹೇಗೆ?

ಉಭಯಲಿಂಗತ್ವ ಮತ್ತು ದ್ವಂದ್ವವು ಭಾರತದಲ್ಲಿ ಪ್ರತಿರೋಧದ ಪ್ರಧಾನ ಧಾರೆಗಳಾದುದು ಹೇಗೆ?

- Advertisement -
- Advertisement -

(ಓದುವ ಮೊದಲು: ಲೇಖಕ ಜಿ.ಎನ್. ದೇವಿಯವರು ಇಲ್ಲಿ ಪ್ರತಿರೋಧದ ವಿಧಾನಗಳೆಂದು ಹೇಳುವ Androgyny ಮತ್ತು Ambivalence ಪದಗಳ ಅರ್ಥಗಳನ್ನು ಕನ್ನಡ ಓದುಗರಿಗೆ ನೀಡುವುದು ಅಗತ್ಯ. Androgyny ಎಂದರೆ ಒಂದೇ ವ್ಯಕ್ತಿಯಲ್ಲಿ ಎರಡು ಲಿಂಗಗಳ ಗುಣಸ್ವಭಾವಗಳು ಇರುವುದು. ಉಭಯಲಿಂಗತ್ವ, ದ್ವಿಲಿಂಗತ್ವ ಎನ್ನಬಹುದು. ಒಳ್ಳೆಯ ಉದಾಹರಣೆ ಎಂದರೆ ಅರ್ಧನಾರೀಶ್ವರ. Ambivalence ಎಂಬುದಕ್ಕೆ ದ್ವಂದ್ವ, ದ್ವಂದ್ವಾರ್ಥಕತೆ, ದ್ವಿಮುಖತೆ, ಚಾಂಚಲ್ಯ, ಗೊಂದಲ, ಅನಿರ್ಧಾರ ಇತ್ಯಾದಿ ಅರ್ಥಗಳಿವೆ. ಅನುವಾದದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಪದಬಳಕೆ ಮಾಡಲಾಗಿದೆ- ಅನುವಾದಕ)

******

ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ತ್ರೀತ್ವ ಮತ್ತು ಪುರುಷತ್ವದ ಸಮಾಗಮದ ದೃಶ್ಯಚಿತ್ರಣಗಳು ನಮಗೆ ಧಾರಾಳವಾಗಿ ಸಿಗುತ್ತವೆ.

******

ಕಳೆದ ಒಂದೂವರೆ ಶತಮಾನದಲ್ಲಿ ಭಾರತದ ಸಾಂಸ್ಕೃತಿಕ ಇತಿಹಾಸದ ಏಕೈಕ ಅಪ್ರತಿಮ ಘನ ವಿದ್ವಾಂಸರ ಕುರಿತು ಚಿಂತಿಸಬೇಕೆಂದರೆ, ಆನಂದ ಕೆಂಟಿಶ್ ಕುಮಾರಸ್ವಾಮಿ (Ananda Kentish Coomaraswamy) ಅವರ ಹೆಸರು ಸುಲಭದಲ್ಲಿ ಮನಸ್ಸಿಗೆ ಬರುತ್ತದೆ. ಸಿಲೋನಿನ ತಂದೆ ಮತ್ತು ಇಂಗ್ಲಿಷ್ ತಾಯಿಗೆ, ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಭಾರತಕ್ಕೆ ಬಂದದ್ದು ಯಾಕೆಂದರೆ, ಬ್ರಿಟಿಷ್ ಕಾಲದಲ್ಲಿ ಸಿಲೋನ್ (ಶ್ರೀಲಂಕಾ) ಮತ್ತು ಭಾರತದ ನಡುವೆ ಇದ್ದ ನಿಕಟ ಸಂಬಂಧದ ಕಾರಣದಿಂದಾಗಿ. ಅವರು ಬೌದ್ಧ ಧರ್ಮ ಮತ್ತು ಹಿಂದೂ ತತ್ವಜ್ಞಾನಗಳನ್ನು ತನ್ನ ಅಧ್ಯಯನದ ಕ್ಷೇತ್ರಗಳನ್ನಾಗಿ ಆಯ್ಕೆ ಮಾಡಿಕೊಂಡು, ಭಾರತದ ಎಲ್ಲಾ ರೀತಿಯ ಕಲಾಪ್ರಕಾರಗಳಿಂದ ಅಪಾರ ಪ್ರಮಾಣದ ಮಾಹಿತಿ ಸಂಗ್ರಹಿಸಿದರು ಮತ್ತು ಅವುಗಳ ಕುರಿತು ಯಥೇಚ್ಛವಾಗಿ ಬರೆದರು. ಅವರು ತಮ್ಮ ಕಾಲದ ಎರಡು ಮಹಾನ್ ಮನಸ್ಸುಗಳಾದ ಠಾಗೋರ್ ಮತ್ತು ಗಾಂಧಿಯವರ ಜೊತೆಗೆ ಸಂವಾದ ನಡೆಸಿದ್ದರು ಮತ್ತು ವಿವಿಧ ಯುಗಗಳ, ವಿವಿಧ ನಾಗರಿಕತೆಗಳ ತತ್ವಜ್ಞಾನಗಳಲ್ಲಿ ಆಳವಾಗಿ ಮಗ್ನರಾಗಿದ್ದರು. ಅವರ ಈ ಜ್ಞಾನವು ಅವರು ಭಾರತೀಯ ಸಂಸ್ಕೃತಿಯ ಕುರಿತು ಬರೆದಿರುವ ಪ್ರತಿಯೊಂದು ಕೃತಿಯಲ್ಲಿ ಪ್ರತಿಫಲಿಸುತ್ತದೆ ಮತ್ತು ಅದು ಅವರನ್ನು ಅಗತ್ಯ ಭಾರತದ ಅತ್ಯಂತ ಮಹಾನ್ ವ್ಯಾಖ್ಯಾನಕಾರರಲ್ಲೊಬ್ಬರನ್ನಾಗಿ ಮಾಡಿದೆ.

ಆನಂದ ಕೆಂಟಿಶ್ ಕುಮಾರಸ್ವಾಮಿ

ಅವರ ಕೃತಿಗಳಲ್ಲಿ ಅತ್ಯಂತ ವ್ಯಾಪಕವಾಗಿ ಓದಲಾಗಿರುವ ಕೃತಿಯೆಂದರೆ, “ಡ್ಯಾನ್ಸ್ ಆಫ್ ಶಿವ” (ಶಿವ ನೃತ್ಯ). ಅದರಲ್ಲಿರುವ ಪ್ರಬಂಧ ಒಂದನ್ನು ಆಧರಿಸಿ ಈ ಪುಸ್ತಕದ ಮುಖಪುಟದಲ್ಲಿ ನಟೇಶ್ವರನ (ಜನಪ್ರಿಯವಾಗಿ ನಟೇಶ್ವರ ಅಥವಾ ಅರ್ಧನಾರಿ-ನಟೇಶ್ವರ ಎಂದೂ ಕರೆಯಲಾಗುತ್ತದೆ) ಒಂದು ಚಿತ್ರವಿದೆ. ಅದು ಅದ್ಭುತವಾದ ನಿಖರತೆ ಮತ್ತು ಸೌಷ್ಟವಗಳೊಂದಿಗೆ ಕೆತ್ತಲಾಗಿರುವ ಪುರಾತನ ವಿಗ್ರಹ ಒಂದರ ಚಿತ್ರಣವಾಗಿದೆ. ಅದು ಸ್ತ್ರೀತ್ವದ ನವಿರುತನ ಮತ್ತು ಪುರುಷತ್ವದ ಚೈತನ್ಯದ ಸಮ್ಮಿಳನವಾಗಿದ್ದು, ನಾವು ಏನಾಗಿದ್ದೇವೆ ಮತ್ತು ಒಂದು ನಾಗರಿಕತೆಯಾಗಿ ಏನಾಗಿದ್ದೆವು ಎಂಬುದರ ಮಹಾನ್ ಸಂಕೇತವಾಗಿದೆ.

ಅನಾದಿಕಾಲದಿಂದಲೂ ಸ್ತ್ರೀತ್ವ ಮತ್ತು ಪುರುಷತ್ವದ ಸಂಗಮವು ಭಾರತೀಯ ಕಲ್ಪನೆಯನ್ನು ಸನ್ಮೋಹನಗೊಳಿಸಿದೆ. ಮಹಾಭಾರತದಲ್ಲಿ ಪಾಂಡವರ ನಡುವೆ ಅತ್ಯಂತ ಪರಾಕ್ರಮಿಯಾದ ಅರ್ಜುನನನ್ನು ಒಂದು ಅಲ್ಪ ಅವಧಿಯಲ್ಲಿ ಬೃಹನ್ನಳೆ ಎಂಬ ನೃತ್ಯಗಾರ್ತಿಯಾಗಿ ತೋರಿಸಲಾಗಿದೆ. ನಿಜವಾಗಿಯೂ ಅವನು ಕೌರವ ಮತ್ತು ಪಾಂಡವರ ಸೇನೆಗಳ ನಡುವೆ ನಿಂತು ಕೃಷ್ಣನಿಗೆ ಹೇಳುತ್ತಾನೆ: ತಾನು ಕ್ಲೈಭ್ಯದ (ಪುರುಷತ್ವದ ನಾಶ) ಲಕ್ಷಣಗಳಿಂದ ಬಳಲುತ್ತಿದ್ದೇನೆ- ಸೀದಂತಿ ಮಮ ಗಾತ್ರಾಣಿ ಮುಖಂಸ್ಯ ಪರಿಸುಷ್ಯತಿಃ. (ನನ್ನ ದೇಹವು ನಡುಗುತ್ತಿದೆ. ನನ್ನ ಬಾಯಿ ಒಣಗಿಹೋಗಿದೆ). ಅದಕ್ಕೆ ಕೃಷ್ಣ- ಈ ಸ್ಥಿತಿಯು ನಿನ್ನನ್ನು ದಿವ್ಯ ಚಕ್ಷು (ದಿವ್ಯ ದೃಷ್ಟಿ) ಪಡೆಯುವುದಕ್ಕೆ ಮತ್ತು ಜೀವನ ಮತ್ತು ಮರಣದ ಸಾರವನ್ನು ತಿಳಿಯಲು ಅರ್ಹನನ್ನಾಗಿ ಮಾಡುತ್ತದೆ ಎಂದು ಹೇಳುತ್ತಾನೆ. ಭೀಷ್ಮನ ಎದುರು ನಿಂತು ಅವನ ಮರಣಕ್ಕೆ ಕಾರಣನಾದ ಶಿಖಂಡಿಯ ಕತೆಯೂ ಜನಜನಿತವಾಗಿದೆ.

ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹಳಷ್ಟು ಬಾರಿ ಸ್ತ್ರೀತ್ವ ಮತ್ತು ಪುರುಷತ್ವದ ಸಮಾಗಮದ ದೃಶ್ಯಚಿತ್ರಣಗಳು ನಮಗೆ ಸಿಗುತ್ತವೆ. ಎರಡು ಎದ್ದುಕಾಣುವ ಉದಾಹರಣೆಗಳೆಂದರೆ, ಮಧ್ಯಕಾಲೀನ ಕಬೀರ ಮತ್ತು 19ನೇ ಶತಮಾನದ ಸಂತ ರಾಮಕೃಷ್ಣ ಪರಮಹಂಸ. ಆಶಿಶ್ ನಂದಿ ಅವರು ವಸಾಹತುಶಾಹಿಗೆ ಭಾರತದ ಪ್ರತಿರೋಧದ ಕುರಿತ ತಮ್ಮ ಉಜ್ವಲವಾದ ವಿಶ್ಲೇಷಣೆಯಲ್ಲಿ ಮಹಾತ್ಮಾ ಗಾಂಧಿ ತಮ್ಮ ಕೆಲಸ ಹಾಗು ನಡೆ ಮತ್ತು ತೋರಿಕೆಯಲ್ಲಿ ಹೇಗೆ ಸ್ತ್ರೀತ್ವ ಮತ್ತು ಪುರುಷತ್ವವನ್ನು ಜೋಡಿಸಿದರು ಮತ್ತು ಭಾರತದ ಸಾಕ್ಷಿಪ್ರಜ್ಞೆಯಾಗಿ ಬೆಳೆದು ಬ್ರಿಟಿಷರ ವಿರುದ್ಧ ಪ್ರತಿರೋಧದ ಸಂಕೇತವಾದರು ಎಂಬುದನ್ನು ವಿವರಿಸುತ್ತಾರೆ.

“ಉಪ್ಪಿನ” ಸತ್ಯಾಗ್ರಹವನ್ನು ಫ್ರಾಯ್ಡ್‌ನ ದೃಷ್ಟಿಕೋನದಿಂದ ನೋಡಿದಾಗ, ಮೌನ ಮತ್ತು ಅಸಹಕಾರಗಳು ನಂದಿಯವರ ಪ್ರಕಾರ ಸಾಮಾನ್ಯವಾಗಿ ಸ್ತ್ರೀಯರ ಪ್ರತಿಭಟನಾ ವಿಧಾನಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರ ಜೀವನವನ್ನು ಯಥಾವತ್ತಾಗಿ ಚಿತ್ರಿಸುವ ಶ್ಯಾಮ್ ಬೆನಗಲ್ ಅವರ ಚಲನಚಿತ್ರ “ದಿ ಮೇಕಿಂಗ್ ಆಫ್ ಮಹಾತ್ಮ”, 1910 ಮತ್ತು 1915ರ ನಡುವೆ ಗಾಂಧಿಯವರ ರಾಜಕೀಯದಲ್ಲಿ ಆದ ಈ ರೂಪಾಂತರವನ್ನು ಹಿಡಿದಿಡುತ್ತದೆ.

ಭಾರತದಲ್ಲಿ ದ್ವಿತ್ವ, ಉಭಯತ್ವ ಅಥವಾ ಇಬ್ಬಗೆ (duality)ಯನ್ನು ಹಿಡಿದಿಡಲು ಯತ್ನಿಸಿರುವುದು ಕೇವಲ ಪುರಾಣ, ಕಲೆ ಮತ್ತು ಆಧ್ಯಾತ್ಮದಲ್ಲಿ ಮಾತ್ರವೇ ಅಲ್ಲ. ವಿಶ್ವ ದೃಷ್ಟಿ ಮತ್ತು ಭೌತಿಕ ಅಸ್ತಿತ್ವದ ಕಥಾನಕಗಳೂ ದ್ವಿತ್ವದ ಸಮ್ಮಿಳನವನ್ನು ತೋರಿಸುತ್ತವೆ. ಗ್ರೀಕ್ ಪುರಾಣದ ಆರಂಭಿಕ ಹಂತದಲ್ಲಿ ದೇವರು ಮತ್ತು ಮನುಷ್ಯರು, ಭಾವನೆಗಳು ಮತ್ತು ಆಶೋತ್ತರಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಇವು ಹೆಚ್ಚಾಗಿ ಅಸ್ತಿತ್ವದ ಎರಡು ಕ್ಷೇತ್ರಗಳಲ್ಲಿ (ಮಾನವ ಮತ್ತು ದೈವಿಕ) ಸಂಘರ್ಷಕ್ಕೆ ಕಾರಣವಾಗುವ ಕತೆಗಳಿದ್ದವು. ನಂತರದಲ್ಲಿ ಗ್ರೀಕ್ ಪುರಾಣವು ಭೌತಶಾಸ್ತ್ರ ಮತ್ತು ತತ್ವಶಾಸ್ತ್ರಕ್ಕೆ ದಾರಿ ಬಿಟ್ಟುಕೊಟ್ಟಿತು ಮತ್ತು ಇದು ಮಾನವ ಮತ್ತು ಅತಿಮಾನವ ಕ್ಷೇತ್ರಗಳ ನಡುವೆ ಬಿರುಕಿಗೆ ಕಾರಣವಾಯಿತು.

ವಿಚಾರ ಅಥವಾ ಆದರ್ಶದ (idea or ideal) ಕಲ್ಪನೆಯು ಗ್ರೀಕರು ಅರ್ಥಮಾಡಿಕೊಂಡಿದ್ದಂತೆ ನಂಬಿಕೆಯಿಂದ, ಅದಕ್ಕಿಂತಲೂ ಹೆಚ್ಚಾಗಿ ಭಯದಿಂದ ಹುಟ್ಟಿತ್ತು ಮತ್ತು ವಿಚಾರಗಳ ಪ್ರಪಂಚ ಮತ್ತು ಮನುಷ್ಯರ ಪ್ರಪಂಚದ ನಡುವೆ ರಾಜಿ ಮಾಡಲಾಗದು. ಇಲ್ಲಿ “ಐಡಿಯಾ ಅಥವಾ ವಿಚಾರ” ಎಂಬುದು ಅವರಿಗೆ “ಒಂದು ಪರಿಕಲ್ಪನೆ ಅಥವಾ ಒಂದು ಚಿಂತನೆ” ಎಂದು ಅರ್ಥವಲ್ಲ ಎಂಬುದನ್ನು ನೆನಪು ಮಾಡಿಕೊಳ್ಳಬೇಕು; ಬದಲಾಗಿ ಅದು “ಒಂದು ರೀತಿಯ ವಸ್ತು ಅಥವಾ ಒಂದು ಅಸ್ತಿತ್ವ” (thing or an existence), ಮತ್ತದಕ್ಕೆ ಅತಿಮಾನುಷದ ಕ್ಷೇತ್ರದಲ್ಲಿ ಚಿರಸ್ಥಾಯಿಯಾದ ಮತ್ತು ಅಳಿವಿಲ್ಲದ (ಶಾಶ್ವತ) ಜೀವನವಿರುತ್ತದೆ.

ವಿಚಾರಗಳು ಮತ್ತು ವಸ್ತುಗಳ ನಡುವೆ ರಾಜಿಯಾಗದ ಅಸಾಧ್ಯತೆಯು ಗ್ರೀಕ್ ಚಿಂತಕರನ್ನು- ಜ್ಞಾನದ ಪ್ರತಿಯೊಂದು ಶಾಖೆಯನ್ನೂ ಕೆಲವು ಮೂಲಭೂತ ದ್ವಿತ್ವಗಳ ಅಥವಾ ಯುಗಳಗಳ ರೂಪದಲ್ಲಿ ಇಟ್ಟು ನೋಡುವಂತೆ ನೂಕಿತು. ಅವರ ಚಿಂತನೆಗಳೆಲ್ಲವೂ ಎಂದೆಂದಿಗೂ ವೈರುಧ್ಯಗಳಲ್ಲಿ ಮತ್ತು ಭಿನ್ನಾಭಿಪ್ರಾಯಗಳಿಂದ ಹುಟ್ಟಿಕೊಂಡ ಉದ್ವಿಗ್ನತೆಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿತು.

ಭಾರತೀಯ ತತ್ವಜ್ಞಾನದ ಸಂಪ್ರದಾಯಗಳು ದ್ವಿತ್ವ, ಉಭಯತ್ವ ಅಥವಾ ದ್ವಂದ್ವತೆಗಳ (duality) ಜೊತೆ ಅಂಥ ಭ್ರಮನಿರಸನದ ಸ್ಥಿತಿಯನ್ನು ತಲುಪಲಿಲ್ಲ. ವಿಚಾರವಿನಿಮಯ, ಪರಸ್ಪರ ವಲಸೆಯ ಸಾಧ್ಯತೆಗಳು ಮತ್ತು ಎರಡೂ ಕ್ಷೇತ್ರಗಳು (ಮಾನವ ಮತ್ತು ಅತಿಮಾನವ) ಪರಸ್ಪರ ವಿನಿಮಯಗೊಳ್ಳಬಹುದಾಂತವುಗಳಾಗಿ ಉಳಿಯುತ್ತವೆ ಎಂಬ ನಂಬಿಕೆ- ಭಾರತದಲ್ಲಿ ಕೇಂದ್ರ ಚಿಂತನಾ ಸಂಪ್ರದಾಯ ಮತ್ತು ಜೀವನೋದ್ದೇಶದ ಒಂದು ಭಾಗವೇ ಆಯಿತು. ಬೇಕೆಂದರೆ ಇದನ್ನು ಒಂದು ಗೊಂದಲಗೊಂಡ ಧರ್ಮಶಾಸ್ತ್ರ ಎಂದು ಕರೆಯಿರಿ. ಇದರ ಒಂದು ಭಯಂಕರ ಫಲಿತಾಂಶ ಎಂದರೆ ಪುನರ್ಜನ್ಮದ ಕಲ್ಪನೆಯು ಭಾರತೀಯ ಚಿಂತನೆ ಮತ್ತು ಜೀವನದಲ್ಲಿ ನೆಲೆಯೂರುವಂತಾಯಿತು.

ಸಾಮಾಜಿಕ ಜೀವನದಲ್ಲಿ ಈ ಅಂಶದ ಇನ್ನೊಂದು ಫಲಿತಾಂಶ ಎಂದರೆ, ಒಬ್ಬರು “ಆಧುನಿಕತೆ”ಯೊಳಗೆ ಆಳವಾಗಿ ಪ್ರವೇಶಿಸಿದ ನಂತರವೂ, “ಸಂಪ್ರದಾಯಗಳು” ಸುಲಭಸಾಧ್ಯವಾಗಿ ಮುಂದುವರಿಯುತ್ತವೆ ಎಂಬ ಮುಗ್ಧ ನಂಬಿಕೆ.

ಇದರ ಮೂರನೇ ಪರಿಣಾಮ ಎಂದರೆ, ಜನರು ತಮ್ಮ ಭೌತಿಕ ಮತ್ತು ಐಹಿಕ ಅಥವಾ ಪ್ರಾಪಂಚಿಕ ಜೀವನವನ್ನು ನಂಬಿಕೆಗಳ ಒಂದು ದಾರಿಯಲ್ಲಿ ಮುನ್ನಡೆಸುವಾಗಲೇ, ಬೇರೆಯೇ ಆದ ಇನ್ನೊಂದು ನಂಬಿಕೆಗಳ ಗೊಂಚಲಿಗೆ “ಮೌಲ್ಯಗಳು” ಎಂದು ನಂಬಿ ಅಂಟಿಕೊಳ್ಳುವುದು ಮತ್ತು ಇವೆರಡೂ ನೇರವಾಗಿ ಪರಸ್ಪರ ವಿರುದ್ಧವಾಗಿರುವ ಕಲ್ಪನೆಗಳ ಮೇಲೆ ಆಧರಿತವಾಗಿರುವುದು.

ಇದನ್ನೂ ಓದಿ: ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಇಂಗ್ಲೆಂಡಿನ ಲೇಖಕರೊಬ್ಬರು 1920ರ ದಶಕದ ಪುಸ್ತಕ ಒಂದರಲ್ಲಿ- ನಾನಿದನ್ನು ಹತ್ತಿರಹತ್ತಿರ 50 ವರ್ಷಗಳ ಹಿಂದೆ ಓದಿದ್ದು- ಲೇಖಕರ ಹೆಸರು ಮತ್ತು ಪುಸ್ತಕದ ಶೀರ್ಷಿಕೆ ಮರೆತಿದ್ದೇನೆ- ಲೇಖಕರು, ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಪಾಶ್ಚಾತ್ಯ ವಿಜ್ಞಾನವನ್ನು ಕಲಿಸುತ್ತಾರೆ ಮತ್ತು ಸಂಜೆ ಸತ್ಯನಾರಾಯಣ ಕಥೆಗೆ ಹೋಗುತ್ತಾರೆ ಎಂಬ ಬಗ್ಗೆ ಒಂದು ರೀತಿಯ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇವೆರಡು ಅವರ (ಆ ಪ್ರಾಧ್ಯಾಪಕರ) ಚಿಂತನೆಗಳಲ್ಲಿ ಸಂಘರ್ಷ ಉಂಟುಮಾಡುವುದಿಲ್ಲವೇ ಎಂದು ಕೇಳಿದಾಗ ಅವರಿಗೆ ಅಚ್ಚರಿಯಾಯಿತಂತೆ. “ಆದರೆ ಯಾಕೆ? ನಾವಿರುವುದೇ ಹೀಗೆ” ಎಂದು ಅವರು ಪ್ರತಿಕ್ರಿಯಿಸಿದರಂತೆ.

ನಾನು ಇತ್ತೀಚೆಗೆ ಬೆಂಗಳೂರಿನ ಸಂಶೋಧನಾ ಸಂಸ್ಥೆಯೊಂದರ ಜೀವಶಾಸ್ತ್ರಜ್ಞರ ತಂಡವೊಂದರ ಜೊತೆ ಮಾತುಕತೆ ನಡೆಸುತ್ತಿದ್ದೆ. ಇದು ಎನ್‌ಸಿಇಆರ್‌ಟಿಯು ಡಾರ್ವಿನ್‌ನ ಪಾಠವನ್ನು ಶಾಲಾ ಪಠ್ಯ ಪುಸ್ತಕಗಳಿಂದ ಹೊರಗೆಸೆಯಲು ನಿರ್ಧಾರ ಮಾಡಿದ ತಕ್ಷಣವೇ ಆಗಿತ್ತು. ಈ ವಿಜ್ಞಾನಿಗಳಲ್ಲಿ ಒಬ್ಬರು ಬಹಳ ದೊಡ್ಡ ವೈಜ್ಞಾನಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಕೂಡಾ ಆಗಿದ್ದರು. ಜೀವವಿಕಾಸದ ಕುರಿತು ಡಾರ್ವಿನ್‌ನ ಚಿಂತನೆ ಮತ್ತು “ಪವಿತ್ರ” ಎಂದು ಪರಿಗಣಿಸಲಾಗುವ ಪುರಾತನ ಭಾರತೀಯ ಗ್ರಂಥಗಳ ನಡುವೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂಘರ್ಷ ಇಲ್ಲವೇ ಎಂದು ನಾನವರಲ್ಲಿ ಕೇಳಿದಾಗ, ಅವರು, ಇಲ್ಲವೆಂದು ಹೇಳಿದರು. ಅವರಲ್ಲಿ ಕೆಲವರು ಆ ಕುರಿತು ಚಿಂತಿಸಿಯೇ ಇರಲಿಲ್ಲ. ಚಿಂತಿಸಿದವರು ತಮಗೆ ಎರಡೂ ಕ್ಷೇತ್ರಗಳ ಮಹತ್ವವನ್ನು ಕುಂಠಿತಗೊಳಿಸದೆಯೇ ಎರಡನ್ನೂ ತಮ್ಮ ಚಿಂತನಾ ಪ್ರಕ್ರಿಯೆಯಲ್ಲಿ ಪ್ರತ್ಯೇಕವಾಗಿ ಇರಿಸಲು ಸಾಧ್ಯವಿದೆ ಎಂದು ವಿವರಿಸಿದರು.

ಜೇಮ್ಸ್ ಜಾಯ್ಸ್ ಅವರ “ದಿ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್” ಪಾಶ್ಚಾತ್ಯ ಸಾಹಿತ್ಯದಲ್ಲಿ ಒಂದು ಮೇರು ಕೃತಿಯಾಗಿದ್ದು, ಚರ್ಚ್ ನೈತಿಕತೆ ಮತ್ತು ಕಲಾವಿದನ ಸ್ವಾತಂತ್ರ್ಯಗಳ ನಡುವಿನ ಯಾತನಾಮಯ ಸಂಘರ್ಷವನ್ನು ಚಿತ್ರಿಸುತ್ತದೆ. ಆದರೆ, ಇಂಥ ಆಳವಾದ ದ್ವಂದ್ವಗಳನ್ನು ಎದುರಿಸುವಾಗ, ಭಾರತೀಯ ಮನಸ್ಸುಗಳಿಗೆ ಆ ಯಾತನೆಯು ಕಾಡುವುದಿಲ್ಲ. ಭಾರತೀಯ ಕಾದಂಬರಿಕಾರರ ರಾಜಾ ರಾವ್ ಸುಮಾರು ಎಂಟು ದಶಕಗಳ ಹಿಂದೆ ಮಾರ್ಕ್ಸ್‌ವಾದಿ ರಾಜಕೀಯಕ್ಕೆ ತಿರುಗಿದ ನಂಬೂದರಿ ಬ್ರಾಹ್ಮಣನೊಬ್ಬನನ್ನು ಚಿತ್ರಿಸುವ ಉಜ್ವಲ ಕಥಾನಕ ಒಂದನ್ನು ಬರೆದರು. “ಕಾಮ್ರೇಡ್ ಕಿರಿಲೋವ್” ಹೆಸರಿನ ಈ ಕಾದಂಬರಿಯ ನಾಯಕ- ಶಂಕರಾಚಾರ್ಯನ “ಬ್ರಹ್ಮ ಸೂತ್ರ ಭಾಷ್ಯ” ಮತ್ತು ಮಾರ್ಕ್ಸ್‌ನ “ದಾಸ್ ಕ್ಯಾಪಿಟಲ್” ಎರಡರಲ್ಲೂ ಪಾರಂಗತ. ಎರಡರ ಕುರಿತೂ ಆತ ಅತ್ಯಂತ ಉಜ್ವಲವಾಗಿ ವ್ಯಾಖ್ಯಾನ ಮಾಡಬಲ್ಲ ಮತ್ತು ಎರಡೂ ಗ್ರಂಥಗಳ ಪ್ರತಿಯೊಂದು ಪದಸಮುಚ್ಚಯವನ್ನೂ ಸಮರ್ಥಿಸಬಲ್ಲ.

ಭಾರತೀಯ ಮನಸ್ಸಿನಲ್ಲಿ ನೈತಿಕ ದ್ವಂದ್ವ ಅಥವಾ ಚಂಚಲತೆ ಮತ್ತು ಲಿಂಗತ್ವಗಳ ಮಿಶ್ರಣವು, ಹಿಂದಿನಿಂದಲೇ ಪ್ರತಿರೋಧದ ವಿಧಾನವಾಗಿದ್ದುಕೊಂಡು ಬಂದಿದೆ ಎಂದು ಆಶಿಶ್ ನಂದಿಯವರು ವಾದಿಸಿದ್ದಾರೆ. ಅವರು ಪ್ರತಿರೋಧದ ಇತರ ವಿಧಾನಗಳನ್ನೂ ಉಲ್ಲೇಖಿಸಿದ್ದು, ಅವುಗಳಲ್ಲಿ ಬುದ್ಧಿಸಂ ಮತ್ತು ಭಕ್ತಿ ಪಂಥವೂ (ಮಧ್ಯಕಾಲೀನ ಭಾರತದ ಭಕ್ತಿ ಸಾಹಿತ್ಯದಲ್ಲಿ ಇರುವಂತೆ) ಸೇರಿದೆ. ಆದರೆ, ಭಾರತೀಯ ಇತಿಹಾಸದಲ್ಲಿ ಪ್ರತಿರೋಧದ ವಿಧಾನಗಳಾಗಿ ಉಭಯಲಿಂಗತ್ವ ಮತ್ತು ದ್ವಂದ್ವ (Androgyny and Ambivalence) ಉಳಿದೆಲ್ಲವುಗಳನ್ನು ಮೀರಿ ನಿಂತಿವೆ ಎಂದವರು ವಾದಿಸುತ್ತಾರೆ. ನಾನವರನ್ನು ಒಪ್ಪುವ ಒಲವು ತೋರಿಸುತ್ತೇನೆ.

ಭಾರತದ ಸಾಂಸ್ಕೃತಿಕ ಮತ್ತು ತತ್ವಶಾಸ್ತ್ರೀಯ ವಿಶಿಷ್ಟತೆಗಳ ಕುರಿತ ಈ ಎಲ್ಲಾ ಚರ್ಚೆಗಳು ಇಂದು ಹಿಂದೆಂದಿಗಿಂತಲೂ ಮಹತ್ವದ್ದಾಗಿವೆ. ಭಾರತೀಯ ಇತಿಹಾಸದ ಕುರಿತ ಸಾವರ್ಕರ್ ತಿಳಿವಳಿಕೆ ಮತ್ತು ಭಾರತೀಯ ಸಮಾಜದ ಕುರಿತ ಆರೆಸ್ಸೆಸ್ ತಿಳಿವಳಿಕೆಯಿಂದ ಪ್ರೇರಿತವಾದ ಪ್ರಸ್ತುತ ಪ್ರಭುತ್ವವು ಹಿಂದುತ್ವವನ್ನು ಸೈನ್ಯೀಕರಣಗೊಳಿಸುವುದರಲ್ಲಿ ವ್ಯಸ್ತವಾಗಿದೆ. “ಎಸೆನ್ಷಿಯಲ್ಸ್ ಆಫ್ ಹಿಂದುತ್ವ” ಕೃತಿಯಲ್ಲಿ ಸಾವರ್ಕರ್ ಸೂಚಿಸಿರುವ ಪರಿಹಾರಗಳಲ್ಲಿ ಇದೂ ಒಂದು. ಆದರೆ, ಈಗಿನ ಪ್ರಭುತ್ವವು, ಭಾರತೀಯರು ರಾಜಕೀಯ ವಿದ್ಯಮಾನಗಳಿಗೆ ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬುದನ್ನು ಇನ್ನೂ ಪೂರ್ಣವಾಗಿ ಗ್ರಹಿಸಿಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ಎದೆಬಡಿದುಕೊಳ್ಳುವ ಪುರುಷತ್ವ ಮತ್ತು ಮತದಾರರ ಧ್ರುವೀಕರಣವನ್ನು ಬಿಜೆಪಿ ಪ್ರತಿಪಾದಿಸಿದ್ದರೂ ಅದು ಆ ಪಕ್ಷಕ್ಕೆ ನಿರೀಕ್ಷಿಸಿದ್ದ ಫಲಿತಾಂಶ ತಂದುಕೊಡಲಿಲ್ಲ.

ಇದೇ ರೀತಿಯಲ್ಲಿ ಲಾಭಾರ್ಥಿಗಳು- ಇದು ಸರಕಾರಿ ಯೋಜನೆಗಳಿಂದ ಕೃತಾರ್ಥರಾದ ಫಲಾನುಭವಿಗಳಿಗೆ ಬಿಜೆಪಿಯು ಮುಂಚೂಣಿಗೆ ತಂದ ಹೊಸ ಹೆಸರು- ಹೆಚ್ಚಿನ ರಾಜ್ಯಗಳ ಪಂಚಾಯತ್ ಚುನಾವಣೆಗಳಲ್ಲಿ ಅಷ್ಟೊಂದು ಕೃತಾರ್ಥ ಅಥವಾ ಕೃತಜ್ಞರಾಗಲಿಲ್ಲ. ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟ ಮತ್ತು ತಾಳಲಾರದ ಬೆಲೆಯೇರಿಕೆಯ ನಂತರವೂ- ಭಾರತೀಯರು- ಪೆಟ್ರೋಲ್ ಬೆಲೆ ಗಗನಕ್ಕೇರಿದಾಗ ಶ್ರೀಲಂಕಾದ ಜನರು ಮಾಡಿದ್ದನ್ನು ಇಲ್ಲಿ ಮಾಡಲಿಲ್ಲ- ಎಂಬ ವಾಸ್ತವವನ್ನೇ ನರೇಂದ್ರ ಮೋದಿಯ ಜನಪ್ರಿಯತೆಯ ಲಕ್ಷಣ ಎಂದು ಪ್ರಭುತ್ವವು ತಿಳಿದುಕೊಂಡಿದೆ. ಇದು ಜನಸಮೂಹದ ಕಣ್ಣಿಗೆ ಕಾಣುವ ಮೌನವನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿರುವ ಸಾಧ್ಯತೆಯಾಗಿರುವಂತಿದೆ. ತನ್ನ ಶಿವನ ನೃತ್ಯ (ಡ್ಯಾನ್ಸ್ ಆಫ್ ಶಿವ) ಪುಸ್ತಕದಲ್ಲಿ ಆನಂದ ಕುಮಾರಸ್ವಾಮಿಯವರು ಪೌರಾಣಿಕವಾದ ತಾಂಡವ ನೃತ್ಯವನ್ನು ನಿಗೂಢ ಮೌನದಿಂದ ಹುಟ್ಟಿದ ಸುಡುಕೋಪದ ನೃತ್ಯ ಎಂದು ವಿವರಿಸುತ್ತಾರೆ. 2024ರಲ್ಲಿ ಭಾರತದ ಈ ಸಾಂಸ್ಕೃತಿಕ ನೆಲೆಗಟ್ಟು ಗೆಲ್ಲುತ್ತದೋ ಅಥವಾ ಈ ಪ್ರಭುತ್ವ ಅದರಲ್ಲಿ ಸಂಪೂರ್ಣವಾದ ರೂಪಾಂತರವನ್ನು ತಂದಿದೆಯೋ ಎಂದು ನಮಗೆ ತಿಳಿಯಲಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಜಿ ಎನ್ ದೇವಿ

ಜಿ.ಎನ್. ದೇವಿ
ಗಣೇಶ್ ದೇವಿ ಅವರು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯಾಲಾಜಿಕಲ್ ಸೈನ್ಸಸ್‌ನ ಒಬೈದ್ ಸಿದ್ಧಿಕಿ ಪೀಠದ ಪ್ರಾಧ್ಯಾಪಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...