Homeಕರ್ನಾಟಕಮುಖ್ಯಮಂತ್ರಿ ಜೊತೆಗಿನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ ಅತಿಥಿ ಉಪನ್ಯಾಸಕರು

ಮುಖ್ಯಮಂತ್ರಿ ಜೊತೆಗಿನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ ಅತಿಥಿ ಉಪನ್ಯಾಸಕರು

- Advertisement -
- Advertisement -

ಖಾಯಂ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗಿನ ಮಾತುಕತೆ ಬಳಿಕ ಮುಷ್ಕರ ಅಂತ್ಯಗೊಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸಿಎಂ ನೀಡಿದ ಭರವಸೆಗಳಿಗೆ ಅತಿಥಿ ಉಪನ್ಯಾಸಕರು ಒಪ್ಪಿದ್ದು, ಮುಷ್ಕರ ಕೈಬಿಟ್ಟು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲು ಒಪ್ಪಿದ್ದಾರೆ.

ಮುಖ್ಯಮಂತ್ರಿಗಳು ನೀಡಿದ ಭರವಸೆಗಳೇನು?

  • ಮಹಿಳಾ ಅತಿಥಿ ಉಪನ್ಯಾಸಕರಿಗೆ ಇದೇ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ಮೂರು ತಿಂಗಳ ಕಾಲ ಹೆರಿಗೆ ರಜೆಯನ್ನು ಸಂಬಳ ಸಹಿತ ನೀಡುವುದು.
  • ಅತಿಥಿ ಉಪನ್ಯಾಸಕರ ಮೆರಿಟ್ ಆಧರಿಸಿ, ಸ್ವಇಚ್ಛೆ ವ್ಯಕ್ತಪಡಿಸಿದಲ್ಲಿ ಹಾಲಿ ಇರುವ ಕಾಲೇಜಿನಲ್ಲೇ ಕೌನ್ಸಿಲಿಂಗ್‌ಗೆ ಒಳಪಡದೆ ಮುಂದುವರೆಯಲು ಅವಕಾಶ.
  • ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ರಜೆ ನೀಡುವ ಕುರಿತು ಪರಿಶೀಲಿಸಲಾಗಿದ್ದು, ರಜೆಯ 1 ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು 15/19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಮಾಸಿಕ 1 ದಿನ ರಜೆ ನೀಡುವುದು.
  • ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಅರ್ಜಿಗಳನ್ನು ಕರೆಯದೆ, ದಾಖಲೆಗಳನ್ನು ಪರಿಶೀಲನೆ ಮಾಡುವುದರ ಬದಲು ಹಿಂದಿನ ವರ್ಷದ ಅರ್ಜಿಯನ್ನೇ ನಂತರದ ವರ್ಷಗಳಲ್ಲಿನ ಆಯ್ಕೆಗೆ ಪರಿಗಣಿಸುವುದು. ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಆಯ್ಕೆಯಾದ ಅತಿಥಿ ಉಪನ್ಯಾಸಕರ ದಾಖಲೆಗಳನ್ನು ಕೇಂದ್ರೀಕೃತ ಡೇಟಾ ಬೇಸ್ ಸೃಷ್ಟಿಸಿ ನಿರ್ವಹಿಸುವುದು.
  • ಹಿಂದಿನ ಸೇವೆಯನ್ನು ಆಧರಿಸಿ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿ, ಅತಿಥಿ ಉಪನ್ಯಾಸಕರಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕೃಪಾಂಕವನ್ನು ನೀಡುವುದರ ಬಗ್ಗೆ ಪರಿಶೀಲಾಗಿದ್ದು, ಸರ್ವೋಚ್ಚ ನ್ಯಾಯಾಲಯ ಉಮಾದೇವಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಆಧಾರದಲ್ಲಿ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇಲ್ಲದಿರುವುದರಿಂದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರು, ತಾಂತ್ರಿಕ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್‌ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಪಾಲಿಟೆಕ್ನಿಕ್‌ ಉಪನ್ಯಾಸಕರುಗಳ ಮುಂದಿನ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಕನಿಷ್ಠ 05 ವರ್ಷಗಳಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಶೇ.1 ರಂತೆ ಗರಿಷ್ಠ ಶೇ.5 ರಷ್ಟು ಕೃಪಾಂಕ (Weightage) ನೀಡುವ ಅವಕಾಶವನ್ನು ವಿಶೇಷ ನಿಯಮಗಳಲ್ಲಿ ಅಳವಡಿಸುವುದು.
  • 10-15 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ ಇವರಿಗೆ ಭದ್ರತಾ ರೂಪದಲ್ಲಿ ಇಡಿಗಂಟು ಸೌಲಭ್ಯವನ್ನು ಅವರುಗಳು ಸಲ್ಲಿಸಿರುವ ಸೇವಾ ಅವಧಿ ಪರಿಗಣಿಸಿ ವಾರ್ಷಿಕ ರೂ.50,000 ಮೊತ್ತದಂತೆ (ಉದಾಹರಣೆಗೆ 10 ವರ್ಷ ಸೇವೆ ಸಲ್ಲಿಸಿದಲ್ಲಿ 10 ವರ್ಷ x50,000=5,00,000)ಇಡಿಗಂಟು ನೀಡುವುದು.

    ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ಅವರ ಕುಟುಂಬದ ಎಲ್ಲರಿಗೂ ವಾರ್ಷಿಕ ರೂ.5 ಲಕ್ಷದ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ ರೂ.400 ಸ್ವೀಕರಿಸಿ, ಅಷ್ಟೇ ಮೊತ್ತದ ವಂತಿಗೆಯನ್ನು (ಅತಿಥಿ ಉಪನ್ಯಾಸಕರಿಂದ ರೂ.400 + ಸರ್ಕಾರದಿಂದ ರೂ.400 ಒಟ್ಟು ರೂ.800) ಸರ್ಕಾರದಿಂದ ಭರಿಸಿ ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸುವುದು.

  • ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಗೌರವ ಧನಕ್ಕೆ ಅವರ ಸೇವೆಯನ್ನು ಪರಿಗಣಿಸಿ ಐದು ವರ್ಷ ಪೂರೈಸಿದವರಿಗೆ ರೂ.6,000 ಹೆಚ್ಚಳ, ಹತ್ತು ವರ್ಷ ಪೂರೈಸಿದವರಿಗೆ ರೂ.7,000 ಹೆಚ್ಚಳ ಹಾಗೂ 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ರೂ. 8000 ಹೆಚ್ಚಳ ಮಾಡುವುದು.

ಜನವರಿ 1ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಪ್ರಾರಂಭಿಸಿದ್ದ ಅತಿಥಿ ಉಪನ್ಯಾಸಕರು, ಜನವರಿ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ತಲುಪಿ ಅನಿರ್ದಿಷ್ಟಾವಧಿ ಮುಷ್ಕರ ಕುಳಿತಿದ್ದರು. ಕೆಲ ಉಪನ್ಯಾಸಕರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸೇವಾ ಭದ್ರತೆ ಅಥವಾ ಖಾಯಂ ನೇಮಕಾತಿ ಕುರಿತು ಸರ್ಕಾರ ಮಾತನಾಡುವವರೆಗೆ ಮುಷ್ಕರ ಕೈ ಬಿಡುವುದಿಲ್ಲ ಎಂದು ತಿಳಿಸಿದ್ದರು.

ಇದಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, 5 ಸಾವಿರ ರೂಪಾಯಿ ವೇತನ ಹೆಚ್ಚಳ ಸೇರಿದಂತೆ ನಾಲ್ಕು ಭರವಸೆಗಳನ್ನು ನೀಡಿದ್ದರು. ಅದನ್ನು ತಿರಸ್ಕರಿಸಿದ್ದ ಉಪನ್ಯಾಸಕರು, ನಮಗೆ ಪರ್ಯಾಯ ವ್ಯವಸ್ಥೆ ಬೇಡ ಸೇವಾ ಭದ್ರತೆ ಕೊಡಿ ಎಂದು ಆಗ್ರಹಿಸಿದ್ದರು. ಆದರೆ, ಸಿಎಂ ಜೊತೆಗಿನ ಸಭೆ ಬಳಿಕ ಮುಷ್ಕರ ಕೈಬಿಡಲು ನಿರ್ಧಿರಿಸಿದ್ದಾರೆ.

ಇದನ್ನೂ ಓದಿ: ‘ಸಂಘ’ದೋಷದ ಫಲ: ದೇವೇಗೌಡರ ‘ಕಾಂಗ್ರೆಸ್‌ ಮುಕ್ತ’ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read