Homeಮುಖಪುಟಭೀಮಾ ಕೋರೆಂಗಾವ್‌ ಪ್ರಕರಣ: ಸ್ಟಾನ್ ಸ್ವಾಮಿಯವರ ಕಂಪ್ಯೂಟರ್‌ಗೆ ನಕಲಿ ದಾಖಲೆ ತುರುಕಿದ್ದ ಹ್ಯಾಕರ್‌- ಬೆಚ್ಚಿಬೀಳಿಸುವ ವರದಿ...

ಭೀಮಾ ಕೋರೆಂಗಾವ್‌ ಪ್ರಕರಣ: ಸ್ಟಾನ್ ಸ್ವಾಮಿಯವರ ಕಂಪ್ಯೂಟರ್‌ಗೆ ನಕಲಿ ದಾಖಲೆ ತುರುಕಿದ್ದ ಹ್ಯಾಕರ್‌- ಬೆಚ್ಚಿಬೀಳಿಸುವ ವರದಿ ಬಹಿರಂಗ

ಸ್ಟಾನ್‌ಸ್ವಾಮಿಯವರು ಕಸ್ಟಡಿಯಲ್ಲೇ ಸಾವಿಗೀಡಾಗಿದ್ದರು. ವರದಿ ಹೊರಬಿದ್ದ ಬಳಿಕ ರಾಜಕಾರಣಿಗಳು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿಯವರ ಡಿವೈಸ್‌ನೊಳಗೆ ಹ್ಯಾಕರ್‌ ನಕಲಿ ದಾಖಲೆಗಳನ್ನು ತುರುಕಿದ್ದಾನೆ ಎಂಬ ವರದಿಯು ಬೆಳಕಿಗೆ ಬಂದ ಬಳಿಕ ಹಲವಾರು ರಾಜಕಾರಣಿಗಳು, ಶಿಕ್ಷಣ ತಜ್ಞರು, ಹೋರಾಟಗಾರರು ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. “ಇದು ನ್ಯಾಯ ವ್ಯವಸ್ಥೆಗೆ ಕಳಂಕ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪ್ರಜಾಪ್ರಭುತ್ವದ ದೇಶವು ತನ್ನದೇ ಆದ ರೀತಿಯಲ್ಲಿ ವರ್ತಿಸುತ್ತದೆಯೇ?” ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಅನೀಸ್ ಸೋಜ್ ಟ್ವೀಟ್ ಮಾಡಿದ್ದಾರೆ. “ನ್ಯಾಯಾಲಯಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದು ಅವರು ಮಾಡಬಹುದಾದ ಅತ್ಯುತ್ತಮ ಕಾರ್ಯವೇ?” ಎಂದು ಪ್ರಶ್ನಿಸಿದ್ದಾರೆ.

ಸ್ವಾಮಿಯವರ ಕುರಿತ ತನಿಖಾ ವರದಿಯನ್ನು ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ಬಿಡುಗಡೆ ಮಾಡಿದೆ. ಇತರ ಆರೋಪಿಗಳಾದ ಸುರೇಂದ್ರ ಗ್ಯಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಅವರ ಬಗ್ಗೆ ಇದೇ ರೀತಿಯ ಸಂಗತಿಗಳನ್ನು ಈ ಹಿಂದೆ ಇದೇ ಸಂಸ್ಥೆ ಹೊರಗೆಡವಿತ್ತು.

ಜೂನ್ 2019ರಲ್ಲಿ ಅವರ ಡಿವೈಸ್‌ಅನ್ನು ಪೊಲೀಸರು ವಶಪಡಿಸಿಕೊಳ್ಳುವವರೆಗೆ ಸುಮಾರು ಐದು ವರ್ಷಗಳಿಂದ ಸ್ವಾಮಿಯವರ ಮೇಲೆ ಇಂತಹದೊಂದು ಪಿತೂರಿ ನಡೆದಿದೆ ಎಂದು ಆರ್ಸೆನಲ್ ಕನ್ಸಲ್ಟಿಂಗ್ ಹೊರಗೆಡವಿದೆ. ಆ ಅವಧಿಯಲ್ಲಿ, ಸ್ಟಾನ್‌ ಸ್ವಾಮಿಯವರ ಕಂಪ್ಯೂಟರ್‌ನ ಮೇಲೆ ಹ್ಯಾಕರ್‌ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದನು. ಡಜನ್‌ಗಟ್ಟಲೆ ಫೈಲ್‌ಗಳನ್ನು ಗುಪ್ತವಾಗಿ ಇರಿಸಿದನು. ಇದು ಸ್ವಾಮಿಯವರ ಗಮನಕ್ಕೆ ಬಂದಿರಲಿಲ್ಲ ಎಂದು ವರದಿ ಬಹಿರಂಗಪಡಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟ ಸುಮಾರು ಒಂಬತ್ತು ತಿಂಗಳ ನಂತರ, ಕಳೆದ ವರ್ಷ ಜುಲೈ 5ರಂದು ಸ್ವಾಮಿಯವರು ಮುಂಬೈ ಆಸ್ಪತ್ರೆಯಲ್ಲಿ ಕಸ್ಟಡಿಯಲ್ಲಿದ್ದಾಗಲೇ ನಿಧನರಾಗಿದ್ದರು. 84 ವರ್ಷದ ಅವರು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮುಂಬೈನ ತಲೋಜಾ ಜೈಲಿನಲ್ಲಿ ಕರೋನವೈರಸ್ ಸೋಂಕಿಗೆ ಒಳಗಾಗಿದ್ದರು.

ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಆರ್ಸೆನಲ್ ಕನ್ಸಲ್ಟಿಂಗ್‌ಗೆ ಭಾರತದ ಕ್ರಿಶ್ಚಿಯನ್ ಸಂಸ್ಥೆ ಜೆಸ್ಯೂಟ್ಸ್ ಮಂಗಳವಾರ ಧನ್ಯವಾದ ಸಲ್ಲಿಸಿದೆ.

“ನಾವು ಭಾರತದ ಜೆಸ್ಯೂಟ್‌ಗಳು. ಬಡವರ ಹಕ್ಕುಗಳ ರಕ್ಷಣೆಗಾಗಿ ಹೋರಾಡಿ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿರುವವರೊಂದಿಗೆ, ವಿಶೇಷವಾಗಿ ಬಿಕೆ 16 [ಭೀಮಾ ಕೋರೆಗಾಂವ್] ಪ್ರಕರಣದಲ್ಲಿ ಆಧಾರವಿಲ್ಲದೆ ಬಂಧನದಲ್ಲಿ ಇರುವವರೊಂದಿಗೆ  ಇರುತ್ತೇವೆ. ಬಡವರಿಗೆ ಮತ್ತು ಅಂಚಿನಲ್ಲಿರುವವರಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ” ಎಂದು ಸಂಸ್ಥೆ ತಿಳಿಸಿದೆ.

“ಸ್ವಾಮಿಯವರು ಸಾಂಸ್ಥಿಕ ಹತ್ಯೆಗೆ ಬಲಿಯಾಗಿರುವುದನ್ನು ಮರೆಯಬಾರದು” ಎಂದು ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ಟ್ವೀಟ್ ಮಾಡಿದೆ.

“ಹ್ಯಾಕಿಂಗ್ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ಪಷ್ಟ ನಿಲುವು ತಾಳುತ್ತದೆಯೇ? ನ್ಯಾಯಾಲಯಗಳು ಫೋರೆನ್ಸಿಕ್ ವಿಶ್ಲೇಷಣೆಯನ್ನು ಪರಿಗಣಿಸುತ್ತವೆಯೇ” ಎಂದು ಪತ್ರಕರ್ತ ರಾಜದೀಪ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.

ಇತಿಹಾಸಕಾರ ಆಡ್ರೆ ಟ್ರುಶ್ಕೆ ಟ್ವೀಟ್ ಮಾಡಿದ್ದು, “ದೀನದಲಿತರಿಗಾಗಿ ಹೋರಾಡಿದ, ಇಳಿವಯಸ್ಸಿನ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಪಾದ್ರಿಯ ವಿರುದ್ಧ ಪುರಾವೆಗಳನ್ನು ಭಾರತೀಯ ಸರ್ಕಾರ ಸೃಷ್ಟಿಮಾಡಿದೆ. ಆ ಸುಳ್ಳು ಸಾಕ್ಷಿಗಳ ಆಧಾರದಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು. ಅವರು ಸಾಯುವವರೆಗೂ ವೈದ್ಯಕೀಯ ಸೇವೆಯಿಂದ ವಂಚಿತರಾದರು” ಎಂದು ವಿಷಾದಿಸಿದ್ದಾರೆ.

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಬಹಿರಂಗಗೊಂಡಿರುವ ಸಂಗತಿಯು ಆತಂಕಾರಿಯಾಗಿದೆ ಮತ್ತು ಭಯಾನಕವಾಗಿದೆ” ಎಂದು ಬಣ್ಣಿಸಿದ್ದಾರೆ.

“ಈ ರೀತಿಯಾಗಿ ಸಾಕ್ಷಿಗಳನ್ನು ತುರುಕುವುದು ಸಾಧ್ಯವಾದರೆ, ಸರ್ಕಾರವು ಎಲ್ಲಾ ರೀತಿಯ ಆರೋಪಗಳ ಮೇಲೆ ಅನೇಕ ಜನರನ್ನು ಕಂಬಿ ಹಿಂದೆ ಹಾಕಬಹುದು” ಎಂದು ಅವರು ಟೀಕಿಸಿದ್ದಾರೆ. “ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನದಲ್ಲಿದ್ದಾಗ ಸ್ಟಾನ್ ಸ್ವಾಮಿ ಸಾವನ್ನಪ್ಪಿದ್ದಾರೆ. ಇತರರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನ್ಯಾಯಾಲಯಗಳು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸ್ವಾಮಿಯವರ ಕಂಪ್ಯೂಟರ್‌ನಿಂದ 24,000 ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ತನ್ನ ಸರ್ವರ್‌ಗೆ ನಕಲಿಸಲು ಹ್ಯಾಕರ್‌‌ WinSCP ಸಾಧನ ಬಳಿಸಿದ್ದಾನೆ” ಎಂದು ಆರ್ಸೆನಲ್ ಕನ್ಸಲ್ಟಿಂಗ್ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...