Homeಕರ್ನಾಟಕಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

ಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

- Advertisement -
- Advertisement -

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಅಂಬಣ್ಣ ಅರೋಲಿಕರ್‌ ಅವರ ತಂದೆ ಷಣ್ಮುಖಪ್ಪ ಅರೋಲಿ ನಿಧನರಾಗಿದ್ದಾರೆ.

ಶತಾಯುಷಿಯಾಗಿದ್ದ ಷಣ್ಮುಖಪ್ಪ ಅವರು ವಯೋಸಹಜ ಅನಾರೋಗ್ಯದಲ್ಲಿದ್ದರು. ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಬುಧವಾರ 2.30ಕ್ಕೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಅರೋಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ನಿಧನದ ಕುರಿತು ‘ಒಳಮೀಸಲಾತಿ’ ಫೇಸ್‌ಬುಕ್‌ ಪುಟದಲ್ಲಿ ತಿಳಿಸಲಾಗಿದ್ದು, “ವಯಸ್ಸಾದ, ಅನಾರೋಗ್ಯದಲ್ಲಿದ್ದ ತಂದೆಯನ್ನು ಮನೆಯಲ್ಲಿ ಬಿಟ್ಟು ಶೋಷಿತ, ಅವಕಾಶ ವಂಚಿತ ಜನರ ಹಕ್ಕುಗಳಿಗಾಗಿ ಹಲವಾರು ದಿನ, ನೂರಾರು ಊರು ಕೇರಿ ಸುತ್ತಿ ಅಂಬಣ್ಣ ಅರೋಲಿಕರ್‌‌ ಪಾದಯಾತ್ರೆ ಮಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟದಲ್ಲಿದ್ದ ಅಂಬಣ್ಣ ಅವರ ತಂದೆ ಈಗ ನಮ್ಮನ್ನ ಅಗಲಿದ್ದಾರೆ. ಇವರಿಗೆ ಎಲ್ಲಾ ರೀತಿಯಲ್ಲೂ ಅನೇಕ ಹೋರಾಟದ ಸಂಗಾತಿಗಳು ಜೊತೆ ನಿಂತಿದ್ದಾರೆ. ಹೋರಾಟವೂ ಮುಂದುವರೆಯುತ್ತಿದೆ. ಇಂತಹ ಹೊತ್ತಲ್ಲಿ ತಂದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅಂಬಣ್ಣ ಮತ್ತು ಅವರ ಕುಟುಂಬಕ್ಕೆ ಬರಲಿ. ನಿಮ್ಮ ದುಃಖದಲ್ಲಿ ನಾವೆಲ್ಲ ಭಾಗಿ, ನಿಮ್ಮ ಜೊತೆಯಲ್ಲಿ ನಾವಿದ್ದೇವೆ” ಎಂದು ಸಂತಾಪ ಸೂಚಿಸಲಾಗಿದೆ.

ಚಿಂತಕರಾದ ಹುಲಿಕುಂಟೆಮೂರ್ತಿಯವರು ಪ್ರತಿಕ್ರಿಯಿಸಿ, “ಒಳಮೀಸಲಾತಿ ಕಾಲ್ನಡಿಗೆ ಜಾಥಾ ತುಮಕೂರಿಗೆ ಬಂದ ದಿನವೇ ಅಂಬಣ್ಣ ಅವರ ತಂದೆ ಆರೋಗ್ಯದಲ್ಲಿ ಹೆಚ್ಚೇ ಏರುಪೇರಾಗಿತ್ತು. ಅಂಬಣ್ಣ ಹೋಗಿ ಜಾಥಾ ನೆಲಮಂಗಲ ತಲುಪುವಷ್ಟರಲ್ಲಿ ಬಂದುಬಿಟ್ಟರು. ಅವರಿಗೆ ತಂದೆಯ ಅನಾರೋಗ್ಯ ಮತ್ತು ಹೋರಾಟದ ದಿಕ್ಕು ಎರಡೂ ತಲೆಯಲ್ಲಿ ಕೊರೆಯುತ್ತಿದ್ದವು. ಜೈಲಿಗೂ ಹೋಗಿಬಂದರು. ಒಳಗಿನ ಕಾರಣಗಳಿಗೆ‌ ಕಣ್ಣೀರು ಹಾಕಿದರು. ಅಪ್ಪ ಅಂಬಣ್ಣನನ್ನು ಬಿಟ್ಟು ಹೋಗೇಬಿಟ್ಟರು. ಅಂತ್ಯಕ್ರಿಯೆ ಮುಗಿಸಿ ಅಂಬಣ್ಣ ನಾಳೆಯೇ ಬೆಂಗಳೂರಿಗೆ ಬರ್ತಿದಾರೆ. ಹೋರಾಟ ನಿಲ್ಲುವುದಿಲ್ಲ” ಎಂದಿದ್ದಾರೆ.

ಮುಖಂಡರಾದ ಉದಯ್ ಅರೋಲಿಕರ್‌ ಅವರು ಅಂಬಣ್ಣ ಅವರ ಪ್ರತಿಕ್ರಿಯೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನಪ್ಪ ಡಿಸೆಂಬರ್ 11 ರ ಹೋರಾಟಕ್ಕೂ ಮುನ್ನವೇ ಕೊನೆಯುಸಿರು ಬಿಡಬಹುದೆಂಬ ಆತಂಕ ನನ್ನ ಕುಟುಂಬಕ್ಕಿತ್ತು. ಭರವಸೆಯನ್ನು ತಂದೆ ಹುಸಿಗೊಳಿಸಿ ಹೋರಾಟದ ಗಡುವಿಗೆ ಜೀವತುಂಬಿ ಇಂದು ಜೀವ ಬಿಟ್ಟಿದ್ದಾರೆ. ಅಪ್ಪನ ಅಂತಿಮ ಪಯಣಕ್ಕೆ ನಾವುಗಳು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸೋಣ. ನನ್ನ ತಾಯಿ ನಾನು 11 ವರ್ಷದವನಿದ್ದಾಗಲೇ ಕಾಲರಾಕ್ಕೆ ಬಲಿಯಾದಾಗಿನಿಂದ ನನಗೆ ತಂದೆಯೇ ನನಗೆ ತಾಯಿಯಾಗಿದ್ದರು.  ಮಾರ್ಗದರ್ಶಕನಾಗಿರುವುದಲ್ಲದೇ ನನ್ನ ಹೋರಾಟದ ಹಾದಿಗೆ ಎಂದು ಅಡ್ಡಿಪಡಿಸದೇ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ನನ್ಪಪ್ಪನದು ಸಹ ಅವಿಶ್ರಾಂತ ಹೋರಾಟದ ದಾರಿಯೆನ್ನುವುದರಲ್ಲಿ ಸಂಶಯವಿಲ್ಲ” ಎಂದು ಅಂಬಣ್ಣ ಸ್ಮರಿಸಿದ್ದಾರೆ.

“ಸಾಲಿ ಮಾಸ್ತಾರನಾಗಬೇಕೆಂಬ ನನ್ನ ತಂದೆಯ ಆಶಯಕ್ಕೆ ತದ್ವಿರುದ್ಧವಾಗಿ ತಮಟೆ ಬಾರಿಸಿದ ನನ್ನ ಮೇಲೆ ಹಾಗೂ ನನ್ನ ಹೋರಾಟದ ಸ್ಫೂರ್ತಿಯಾದ ಪ್ರಜಾಯುದ್ದನೌಕೆ ಗದ್ದರ್ ವಿರುದ್ಧದ ಕೋಪ ಇಂದಿಗೂ ಶಮನವಾಗದಿದ್ದರೂ ನಾನು ನಡೆವ ದಾರಿ ನೂರಾರು ಜನರಿಗೆ ಉಪಯುಕ್ತ ಮಾರ್ಗವೆಂಬ ಖಾತರಿ ಇರುವುದರಿಂದ ನನಗೆ ಸಂಪೂರ್ಣ ವಿನಾಯಿತಿ ಸಿಕ್ಕಿತ್ತು” ಎಂದು ನೆನೆದಿದ್ದಾರೆ.

“ಮೂರು ದಿನಗಳ ಹಿಂದೆ ಹೋರಾಟದ ಒತ್ತಡಗಳ ಮಧ್ಯೆ ಒಮ್ಮೆ ನೋಡಿ ಕಣ್ತುಂಬಿಸಿಕೊಂಡಿದ್ದೆ. ಡಿಸೆಂಬರ್ 11ರ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಡಿಸೆಂಬರ್‌‌ 19ರ ಅಧಿವೇಶನದಲ್ಲಿ ಒಳಮೀಸಲಾತಿ ಪ್ರಸ್ತಾಪಕ್ಕೆ ಸರ್ಕಾರದ ಗಮನಸೆಳೆಯುವ ಬಿರುಸಿನ ಪ್ರಯತ್ನಕ್ಕಾಗಿ ಇಂದು ಒಡನಾಡಿಗಳು ಖಾಯಂ ಹೋರಾಟದ ಬಿಡಾರ ಸಜ್ಜುಗೊಳಿಸುವ ಪ್ರಯತ್ನದಲ್ಲಿದ್ದೆವು. ಈ ಸಂದರ್ಭದಲ್ಲಿ ನನ್ನ ಪತ್ನಿ ಸುಜಾತಾ ಅಘಾತಕರ ಸುದ್ದಿಯನ್ನು ತಿಳಿಸಿದರು. ರಾಜಧಾನಿಯಿಂದ ರಾಯಚೂರಿಗೆ ಪಯಣ ಬೆಳೆಸಿರುವೆ” ಎಂದು ಹೇಳಿದ್ದಾರೆ.

“ನನ್ನ ಅನುಪಸ್ಥಿತಿಯಲ್ಲಿ ನನ್ನ ಮಡದಿ ಸುಜಾತಳ ಹಾರೈಕೆಯಿಂದಾಗಿ ಅಪ್ಪ ಇಷ್ಟು ವರ್ಷ ನಮ್ಮೊಂದಿಗಿರಲು ಸಾಧ್ಯವಾಗಿದೆ. ಸರ್ಕಾರ ಪ್ರಕಟಿಸಿರುವ ಒಳಮೀಸಲಾತಿ ಕುರಿತ ಉಪಸಮಿತಿ ಹಾಗೂ ಉಪಸಮಿತಿಯ ಮೊದಲ ಸಭೆ ಘೋಷಣೆಯ ಹಿನ್ನೆಲೆಯಲ್ಲಿ ಮುಂದೆ ಹಮ್ಮಿಕೊಳ್ಳಬೇಕಾದ ಹೋರಾಟದ ಹೆಜ್ಜೆಗಳನ್ನು ಅತ್ಯಂತ ಜಾಗರೂಕತೆಯಿಂದ ಮುಂದುವರೆಸೋಣ ಎಂದು ತಮ್ಮಲ್ಲಿ ಕೋರುತ್ತಾ ಅಪ್ಪನ ಅಂತಿಮ ಪಯಣಕ್ಕೆ ಹೋಗಿಬರುವೆ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...