Homeಮುಖಪುಟರೈತರ ‘ದಿಲ್ಲಿ ಚಲೋ': 2 ಕ್ರೀಡಾಂಗಣಗಳನ್ನು ಜೈಲನ್ನಾಗಿ ಸಿದ್ಧಪಡಿಸಿದ ಬಿಜೆಪಿ ಸರಕಾರ!

ರೈತರ ‘ದಿಲ್ಲಿ ಚಲೋ’: 2 ಕ್ರೀಡಾಂಗಣಗಳನ್ನು ಜೈಲನ್ನಾಗಿ ಸಿದ್ಧಪಡಿಸಿದ ಬಿಜೆಪಿ ಸರಕಾರ!

- Advertisement -
- Advertisement -

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ 13ರಂದು ರೈತರು ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200ಕ್ಕೂ ಹೆಚ್ಚು ರೈತ ಸಂಘಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದೆ. ಮಂಗಳವಾರ ದೆಹಲಿಗೆ ಸಾವಿರಾರು ರೈತರು ನಡೆಸಲಿರುವ ಮೆರವಣಿಗೆಗೆ ಮುನ್ನ ಹರಿಯಾಣ ಸರಕಾರ ಎರಡು ದೊಡ್ಡ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಿದೆ.

ಸಿರ್ಸಾದ ಚೌಧರಿ ದಲ್ಬೀರ್ ಸಿಂಗ್ ಒಳಾಂಗಣ ಕ್ರೀಡಾಂಗಣ ಮತ್ತು ದಬ್ವಾಲಿಯ ಗುರು ಗೋಬಿಂದ್ ಸಿಂಗ್ ಕ್ರೀಡಾಂಗಣಗಳನ್ನು ತಾತ್ಕಾಲಿಕ ಬಂಧನ ಕೇಂದ್ರಗಳನ್ನಾಗಿ ಮಾಡಿದ ಹರ್ಯಾಣದ ಬಿಜೆಪಿ ಸರಕಾರ ರೈತರು ಮೆರವಣಿಗೆಯನ್ನು ಮುಂದುವರೆಸಿದರೆ ಬಂಧಿಸಲು ಮುಂದಾಗಿದೆ. ಯಾವುದೇ ಅಹಿತಕರ ಪರಿಸ್ಥಿತಿಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿತ ರೈತರನ್ನು ತಾತ್ಕಾಲಿಕ ಜೈಲುಗಳಲ್ಲಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಉತ್ತರಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ವಿವಿಧ ಭಾಗಗಳ ರೈತರು ಕೇಂದ್ರ ಸರ್ಕಾರದ ವಿರುದ್ದ ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದು, ರೈತರು ರಾಜಧಾನಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ರಸ್ತೆಗಳನ್ನೇ ಮುಚ್ಚಿದ್ದಾರೆ. ಅಧಿಕಾರಿಗಳು ಅನೇಕ ಸ್ಥಳಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳಿಂದ ಗಡಿಗಳನ್ನು ಮುಚ್ಚಿದ್ದಾರೆ, ಅಂತರಾಜ್ಯ ಗಡಿಯಲ್ಲಿ, ಮುಳ್ಳುತಂತಿಗಳನ್ನು ಹಾಕಲಾಗಿದೆ ಮತ್ತು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹರ್ಯಾಣ ಪೊಲೀಸರು ಅಂಬಾಲಾದ ಘಗ್ಗರ್ ನದಿಯ ಹೆದ್ದಾರಿಯ ಎರಡೂ ಬದಿಗಳನ್ನು ಮುಚ್ಚಲು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಲೋಹದ ಶೀಟ್‌ಗಳನ್ನು ಅಳವಡಿಸಿದ್ದಾರೆ. ರೈತರು ಟ್ರ್ಯಾಕ್ಟರ್‌ಗಳ ಮೂಲಕ ಹೆದ್ದಾರಿಗೆ ಬರುವುದನ್ನು ತಡೆಯಲು ಘಗ್ಗರ್ ನದಿಯ ಬದಿಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ.

ಮೂರು ಕೃಷಿ ಕಾನೂನುಗಳ ವಿರುದ್ಧದ 2020ರ ಪ್ರತಿಭಟನೆಯನ್ನು ಉಲ್ಲೇಖಿಸಿ ಹರ್ಯಾಣ ಮತ್ತು ದೆಹಲಿಯ ಅಧಿಕಾರಿಗಳು ನಿರ್ಬಂಧಗಳನ್ನು ಸಮರ್ಥಿಸಿಕೊಂಡಿದ್ದಾರೆ. ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ನಿರ್ಬಂಧಿಸುವ ಕ್ರಮವು ವಿರೋಧ ಪಕ್ಷಗಳು ಮತ್ತು ರೈತ ಗುಂಪುಗಳಿಂದ ಟೀಕೆಗೆ ಗುರಿಯಾಗಿತ್ತು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ರಾಜ್ಯದ ಗಡಿಗಳಲ್ಲಿ ರಸ್ತೆಗೆ  ತಡೆಗೋಡೆಗಳನ್ನು ಹಾಕಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ರೈತರ ಹಾದಿಯಲ್ಲಿ ಮೊಳೆ-ಮುಳ್ಳುಗಳನ್ನು ಹಾಕುವುದು ‘ಅಮೃತಕಾಲ’ ಅಥವಾ ‘ಅನ್ಯಾಯಕಾಲವೇ? ಎಂದು ಪ್ರಶ್ನಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಮಾನ್ ದೆಹಲಿ ಮತ್ತು ಹರ್ಯಾಣವನ್ನು ಪ್ರವೇಶಿಸುವ ರಸ್ತೆಗಳನ್ನು ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಗೆ (ಎಲ್‌ಒಸಿ) ಹೋಲಿಸಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ನಿಜವಾದ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ, ಪಾಕಿಸ್ತಾನದ ಗಡಿಯಲ್ಲಿರುವಂತೆ ದೆಹಲಿಗೆ ಹೋಗುವ ರಸ್ತೆಗಳಲ್ಲಿ ಅನೇಕ ತಂತಿಗಳನ್ನು ಹಾಕಲಾಗಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ (SKM) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, ರಸ್ತೆಗಳ ತಡೆ ನಡೆಸಿರುವುದನ್ನು ಖಂಡಿಸಿದ್ದಾರೆ. ಸರ್ಕಾರವೇಕೆ ಹೆದರುತ್ತಿದೆ? ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ, ಇದು ಪ್ರಜಾಪ್ರಭುತ್ವವೇ? ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಅದಕ್ಕೆ ಖಟ್ಟರ್ ಸರ್ಕಾರವೇ ಹೊಣೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಹರ್ಯಾಣವು ಅಂಬಾಲಾ ಬಳಿಯ ಶಂಭು ಎಂಬಲ್ಲಿ ಪಂಜಾಬ್‌ನ ಗಡಿಯನ್ನು ಮುಚ್ಚಿದೆ. ಮೆರವಣಿಗೆಯನ್ನು ತಡೆಯಲು ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳ ಗಡಿಯಲ್ಲಿ ದೊಡ್ಡ ವ್ಯವಸ್ಥೆ ಮಾಡಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 13ರ ಮಧ್ಯಾಹ್ನದವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು, ಮೆಸೇಜ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

2020ರಲ್ಲಿ ಕೇಂದ್ರದ 3 ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ವೇಳೆ ಪಂಜಾಬ್ ಮತ್ತು ಅಂಬಾಲಾದ ಹತ್ತಿರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಶಂಭು ಗಡಿಯಲ್ಲಿ ಜಮಾಯಿಸಿದ್ದರು ಮತ್ತು ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ಮೆರವಣಿಗೆ ಸಾಗಿದ್ದರು. ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ರೈತರು, ದೆಹಲಿಯ ಗಡಿ ಭಾಗವಾದ ಸಿಂಘು, ಟಿಕ್ರಿ ಮತ್ತು ಘಾಜಿಪುರದಲ್ಲಿ ಧರಣಿ ನಡೆಸಿದ್ದರು. ಬಳಿಕ ರೈತರ ಹೋರಾಟಕ್ಕೆ ಮಣಿದ ಸರಕಾರ ಮೂರು ಕೃಷಿ ಕಾಯ್ದೆಯನ್ನು ವಾಪಾಸ್ಸು ಪಡೆದುಕೊಂಡಿತ್ತು.

ಇದನ್ನು ಓದಿ: ಹಲ್ದ್ವಾನಿ ಹಿಂಸಾಚಾರ: ಮಾಹಿತಿ ಬಿಚ್ಚಿಟ್ಟ ಮೃತರ ಸಂಬಂಧಿಕರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...