Homeಮುಖಪುಟರಹಸ್ಯ ಕಾರ್ಯಸೂಚಿಗಳನ್ನು ಒಳಗೊಂಡ ನೂತನ ಪಠ್ಯಪುಸ್ತಕಗಳು ಬೇಕೆ?

ರಹಸ್ಯ ಕಾರ್ಯಸೂಚಿಗಳನ್ನು ಒಳಗೊಂಡ ನೂತನ ಪಠ್ಯಪುಸ್ತಕಗಳು ಬೇಕೆ?

ಚಕ್ರತೀರ್ಥ ಅವರ ಸಮಿತಿ ಹೊಸದಾಗಿ ಅಳವಡಿಸಿರುವ ಪಾಠಗಳನ್ನು ಒಂದೇ ಸಮುದಾಯದವರು ರಚಿಸಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಂದೇ ವಿಚಾರಧಾರೆಗೆ ಸಂಬಂಧಿಸಿದ ಪಾಠಗಳನ್ನು ಅಳವಡಿಸಿದ್ದಾರೆ.

ಜಗತ್ತಿನಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಫಿನ್‍ಲ್ಯಾಂಡ್ ಕೂಡ ಒಂದು. ಆ ದೇಶದ ನೀತಿ ನಿರೂಪಣೆ ರೂಪಿಸುವಲ್ಲಿ ಅಲ್ಲಿನ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಆ ಕಾರಣದಿಂದ ಶಿಕ್ಷಕರಿಗೂ ಅಲ್ಲಿನ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗೌರವಗಳಿವೆ. ಆದರೆ ನಮ್ಮ ದೇಶದಲ್ಲಿನ ಪರಿಸ್ಥಿತಿ ವ್ಯತಿರಿಕ್ತವಾಗಿವೆ. ದೇಶದ ನೀತಿ ನಿರೂಪಣೆ ಮಾಡುವುದಿರಲಿ ಶಿಕ್ಷಣ ಕ್ಷೇತ್ರದ ನೀತಿ ನಿರೂಪಣೆ ಸಹ ಶಿಕ್ಷಕರ ಕೈಯಲ್ಲಿಲ್ಲ. ಬದಲಿಗೆ ರಾಜಕಾರಣಿಗಳು ಮತ್ತು ಅವರ ನಿಷ್ಠಾವಂತ ವರ್ಗದ ಕೈಯಲ್ಲಿದೆ. ಈ ವರ್ಗ ಪಠ್ಯಪುಸ್ತಕಗಳನ್ನು ತಮ್ಮ ರಾಜಕೀಯ ಸಿದ್ಧಾಂತ ಮತ್ತು ವಿಚಾರಧಾರೆಗಳನ್ನು ಬಿತ್ತುವ ಸಾಧನವಾಗಿಸಿಕೊಂಡಿದೆ. ಪ್ರಸ್ತುತ ಕರ್ನಾಟಕದ ಪಠ್ಯಪುಸ್ತಕಗಳ ವಿಚಾರದಲ್ಲಿ ನಡೆಯುತ್ತಿರುವುದೂ ಇದೇ ಎಂದು ಬೇರೆ ಹೇಳಬೇಕಿಲ್ಲ. ಮಕ್ಕಳ ಪಠ್ಯ ಪುಸ್ತಕಗಳಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಶಿಕ್ಷಣತಜ್ಞರು ಮತ್ತು ಸಂಬಂಧಪಟ್ಟ ವಿಷಯತಜ್ಞರು ನಿರ್ವಹಿಸಬೇಕೇ ವಿನಃ ರಾಜಕಾರಣಿಗಳಾಗಲಿ, ಅವರ ನಿಷ್ಠಾವಂತ ಅನುಯಾಯಿಗಳಾಗಲಿ ಆಗಿರಬಾರದು ಎಂಬ ಎಚ್ಚರ ಎಲ್ಲಾ ಕಾಲದ ಸರ್ಕಾರಗಳಿಗೂ ಇರಬೇಕಾದ್ದು ಅವಶ್ಯ.

2017-18ನೇ ಸಾಲಿನಲ್ಲಿ ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಪಠ್ಯ ಪುಸ್ತಕಗಳ ಪರಿಷ್ಕರಣಾ ಕಾರ್ಯವು ಸುಮಾರು ಒಂದೂವರೆ ವರ್ಷಗಳ ಕಾಲ 27 ಸಮಿತಿಗಳ 175 ವಿಷಯ ತಜ್ಞರು ಎಲ್ಲಾ ಆಯಾಮಗಳಿಂದಲೂ ಸರಿಹೊಂದುವ ರೀತಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ರೂಪಿಸಿರುವುದರ ಹಿಂದೆ ಸಾಕಷ್ಟು ಪರಿಶ್ರಮ ಇದ್ದೇ ಇತ್ತು. ಈ ಪರಿಷ್ಕರಣಾ ಪಠ್ಯಪುಸ್ತಕಗಳಲ್ಲಿ 1 – 10ನೇ ತರಗತಿಯ ವರೆಗಿನ ಸಮಾಜ ವಿಜ್ಞಾನ, ಪರಿಸರ ಅಧ್ಯಯನ ಮತ್ತು ಭಾಷಾ ವಿಷಯಗಳ ಪಠ್ಯಪುಸ್ತಕಗಳನ್ನು ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ 6 ಮಂದಿ ತಜ್ಞ ಸದಸ್ಯರ ಸಮಿತಿಯು ಕೇವಲ ಒಂದು ತಿಂಗಳ ಅವಧಿಯಲ್ಲಿ ಪುನರ್ ಪರಿಷ್ಕರಣೆ ಮಾಡಿಕೊಡಲು ಸರ್ಕಾರ ಸೂಚಿಸಿದಾಗಲೇ ಬರಗೂರರ ನೇತೃತ್ವದಲ್ಲಿ ನಡೆದ ಅಷ್ಟೂ ಕಾರ್ಯ ನೀರಿನಲ್ಲಿ ಹೋಮ ಮಾಡಿದಂತಾಯಿತು! ಪುನರ್ ಪರಿಷ್ಕರಣಾ ಸಮಿತಿಯು ರಚನೆಯಾದಾಗಲೇ ಅನೇಕರು ಆತಂಕವನ್ನು ವ್ಯಕ್ತಪಡಿಸಿದ್ದರು. ಆಗ ಅದು ಆತುರದ ಆತಂಕವಾಗಿ ಕಂಡಿದ್ದರೂ, ಈಗ ಅವರ ಆತಂಕ ನಿಜವಾಗಿದೆ. ಒಂದೊಂದೇ ಪುನರ್ ಪರಿಷ್ಕೃತ ಪುಸ್ತಕಗಳು ಹೊರಬಂದಂತೆಲ್ಲ ವಿವಾದಗಳು ಭುಗಿಲೇಳುತ್ತಲೇ ಇವೆ.

ಪರಿಷ್ಕರಣೆ ಕುರಿತು ಬರಗೂರರು ಬರೆಯುತ್ತಾ “ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿವೆ. ಹೀಗೆ ಪರಿಷ್ಕರಿಸುವಾಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮೀರಿಲ್ಲವೆಂದು ತಿಳಿಸಬಯಸುತ್ತೇವೆ, ಜೊತೆಗೆ ನಮ್ಮ ಸಂವಿಧಾನದ ಆಶಯಗಳನ್ನು ಅನುಸರಿಸಲಾಗಿದೆ” ಎಂದು ತಿಳಿಸಿದ್ದಾರೆ. ಅದು ಪಠ್ಯ ಪುಸ್ತಕಗಳಲ್ಲಿ ಕೂಡ ವ್ಯಕ್ತವಾಗಿದೆ. ಆದರೆ ರೋಹಿತ್ ಚಕ್ರತೀರ್ಥ ಅವರು ಪುನರ್ ಪರಿಷ್ಕರಣೆಯ ಕುರಿತು ಬರೆಯುತ್ತಾ, “ಭಾಷಾಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ. ಹಾಗಾಗಿ ಭಾಷೆಯ ವೈವಿಧ್ಯ ಹಾಗೂ ವಿಶೇಷಗಳನ್ನು ಹೆಚ್ಚು ಕಾಣಿಸುವ ಗದ್ಯ/ಪದ್ಯ ಭಾಗಗಳನ್ನು ಆರಿಸಿಕೊಳ್ಳಬೇಕು. ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು. ಗ್ರಾಂಥಿಕ ಭಾಷೆಯಲ್ಲದೆ ಮೌಖಿಕ ಪರಂಪರೆಯ ಹಾಗೂ ಹಲವು ಪ್ರಕಾರದ ಸಾಹಿತ್ಯಗಳಿಗೆ ಅವಕಾಶ ಕೊಡಬೇಕು. ಬಳಸಿದ ಭಾಷೆ, ಭಾಷಾಸೊಗಡು, ಪ್ರತಿಪಾದಿಸಿರುವ ವಿಚಾರ, ಹೊಸ ಚಿಂತನೆಗಳನ್ನು ಹುಟ್ಟಿಸುವ ಸಾಧ್ಯತೆ, ಸಾಹಿತ್ಯ ಪ್ರಕಾರದ ವೈಶಿಷ್ಟ್ಯ ಇತ್ಯಾದಿ ಎಲ್ಲ ಬಗೆಯಲ್ಲೂ ಪಾಠಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕು” ಮುಂತಾದುದಾಗಿ ಹೇಳಿದ್ದಾರೆ.

ಭಾಷಾ ಪಠ್ಯಪುಸ್ತಕಗಳಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯ ಅಂಶಗಳ ಅಗತ್ಯವಿಲ್ಲ ಎಂಬುದೇ ಅಚ್ಚರಿಯುಂಟು ಮಾಡುತ್ತದೆ. ಭಾರತೀಯ ಸಮಾಜವು ವೈವಿಧ್ಯತೆಯಿಂದ ಕೂಡಿದೆ. ಒಂದೊಂದು ಪ್ರದೇಶದ, ಸಮುದಾಯದ, ಗಂಡು-ಹೆಣ್ಣಿನ ನಡುವೆ ಪ್ರಾದೇಶಿಕ ಭಾಷಾ ಸೊಗಡು, ಸಾಂಸ್ಕೃತಿಕ ವೈಶಿಷ್ಟ್ಯ, ಲೋಕಾನುಭವಗಳು ಭಿನ್ನ ಭಿನ್ನವಾಗಿರುತ್ತವೆ. ಆದ್ದರಿಂದ ಭಾಷಾ ಪಠ್ಯಗಳಲ್ಲಿಯೂ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿಗಳು ಅತ್ಯಗತ್ಯ. ಪಠ್ಯಪುಸ್ತಕಗಳಲ್ಲಿ ರಚಿಸುವ ಚಿತ್ರಗಳಿಂದ ಹಿಡಿದು ವಿಷಯಗಳಲ್ಲಿ ಬರುವ ಬರುವ ಪಾತ್ರಗಳವರೆಗೆ ಮಕ್ಕಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇವುಗಳು ಗಂಡು ಹೆಣ್ಣಿನ ನಡುವಿನ ತಾರತಮ್ಯವನ್ನು ಮೂಡಿಸುವಂತಿರಬಾರದೆಂಬ ಎಚ್ಚರಿಕೆಯು ಪಠ್ಯಪುಸ್ತಕ ರಚನಾಕಾರರಿಗೆ ಅಗತ್ಯ.
ಈಗ ಲಭ್ಯವಿರುವ ‘ಸಿರಿ ಕನ್ನಡ’ ಎಂಬ 10ನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯ ಪುಸ್ತಕವನ್ನು ಅವಲೋಕಿಸಿ ಹೇಳುವುದಾದರೆ ಚಕ್ರತೀರ್ಥ ಅವರ ಈ ಹೇಳಿಕೆ ಮತ್ತು ಪಠ್ಯಪುಸ್ತಕದಲ್ಲಿ ಅವರ ತಂಡ ಮಾಡಿರುವ ಪುನರ್ ಪರಿಷ್ಕರಣೆ ತೀರಾ ವಿರೋಧಭಾಸಗಳಿಂದ ಕೂಡಿರುವುದು ಗೋಚರಿಸುತ್ತದೆ. ಚಕ್ರತೀರ್ಥ ಅವರು ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು ಎಂದು ಹೇಳುತ್ತಾರೆ. ಆದರೆ ಅಮೃತ ಮಹೋತ್ಸವದ ಗಳಿಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿ ಭಗತ್‍ಸಿಂಗರ ಪಾಠವನ್ನು ತೆಗೆದಿದ್ದಾರೆ. ಕಾರಣ ಭಗತ್ ಸಿಂಗ್ ‘ನಾನೇಕೆ ನಾಸ್ತಿಕ’ ಎಂಬ ಕೃತಿಯನ್ನು ಬರೆದವರು. ಎಡಪಂಥೀಯ ವಿಚಾರಧಾರೆಗಳಿಗೆ ಹತ್ತಿರವಾದವರು. ಮಿಗಿಲಾಗಿ ಈ ಪಾಠವನ್ನು ಎಡಪಂಥೀಯ ಚಿಂತಕರಾದ ಜಿ. ರಾಮಕೃಷ್ಣ ಅವರು ಬರೆದಿದ್ದಾರೆ ಎಂಬುದೇ ಆಗಿದೆ. ಆದರೆ ಪಾಠದಲ್ಲಿ ಬಾಲಕ ಭಗತ್ ಜಲಿಯನ್‍ ವಾಲಾಬಾಗಿನಲ್ಲಿ ನಡೆದ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ರಕ್ತಮೆತ್ತಿದ ಮಣ್ಣನ್ನು ಸಂಗ್ರಹಿಸಿ ಪೂಜ್ಯನೀಯ ಭಾವದಿಂದ ಕಂಡ ವಿಚಾರವನ್ನು ಹೇಳುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಅಂಶವನ್ನು ಹೇಳಲಾಗಿತ್ತೆ ವಿನಃ ಯಾವ ಎಡಪಂಥೀಯ ವಿಚಾರಗಳೂ ಇರಲಿಲ್ಲ. ವಿವಾದ ಭುಗಿಲೆದ್ದ ಮೇಲೆ ಆ ಪಾಠ ಕೈಬಿಟ್ಟಿಲ್ಲ. ಮತ್ತಷ್ಟು ಸೇರ್ಪಡೆಗೊಳಿಸಿದ್ದೇವೆ ಎಂದು ತಿಪ್ಪೆತಾರಿಸುವ ಕೆಲಸವನ್ನು ಸಚಿವರಾದಿಯಾಗಿ ಮಾಡುತ್ತಿದ್ದಾರೆ. ಅಲ್ಲದೆ, ಈಗಾಗಲೇ ಮುದ್ರಣಗೊಂಡಿರುವ ಪುಸ್ತಕಗಳನ್ನು ತಡೆಹಿಡಿದು ಮರುಮುದ್ರಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಗದಗಳ ಕೊರತೆ ಎದುರಿಸುತ್ತಿರುವ ಕಾಲದಲ್ಲಿ ಜನರ ತೆರಿಗೆಯ ಹಣವನ್ನು ಈ ರೀತಿ ದುರ್ಬಳಕೆ ಮಾಡುವುದು ಎಷ್ಟು ಸರಿ?

ಮಿಗಿಲಾಗಿ ಚಕ್ರತೀರ್ಥ ಅವರ ಸಮಿತಿ ಹೊಸದಾಗಿ ಅಳವಡಿಸಿರುವ ಪಾಠಗಳನ್ನು ಒಂದೇ ಸಮುದಾಯದವರು ರಚಿಸಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒಂದೇ ವಿಚಾರಧಾರೆಗೆ ಸಂಬಂಧಿಸಿದ ಪಾಠಗಳನ್ನು ಅಳವಡಿಸಿದ್ದಾರೆ. ಇಲ್ಲಿ ಸಿದ್ಧಾಂತದ ಪ್ರಚಾರ ಗೋಚರಿಸುವುದಿಲ್ಲವೇ?

6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ಭಾಗ-1 (ಪುಟ 82)ರಲ್ಲಿವ “ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು ಮತ್ತು ಆಹಾರಧಾನ್ಯ, ಹಾಲು, ತುಪ್ಪಗಳನ್ನು ‘ಹವಿಸ್ಸು’ ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರ ಅಭಾವ ಕೂಡ ಸೃಷ್ಟಿಯಾಯಿತು” ಎಂಬ ಅಂಶವನ್ನು ಕೈಬಿಡಲು ಸರ್ಕಾರವೇ ಚಕ್ರತೀರ್ಥ ನೇತೃತ್ವದಲ್ಲಿ ಪುನರ್ ಪರಿಷ್ಕರಣ ಸಮಿತಿ ರಚಿಸಿತು. ಈ ಭಾಗವನ್ನು ಕಡಿತಮಾಡಿರುವ ಸಮಿತಿಯು ಯಾಗ, ಯಜ್ಞಗಳನ್ನು ಸಮರ್ಥಿಸುವ ಸಲುವಾಗಿ ಆರ್. ಗಣೇಶ್ ಅವರಿಂದ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಎಂಬ ಪಾಠವನ್ನು ಪ್ರಕಟಿಸುವ ಮೂಲಕ ತನ್ನ ಪ್ರತಿಗಾಮಿತನವನ್ನು ಪ್ರದರ್ಶಿಸಿರುವುದು ಸಿದ್ಧಾಂತ ಹೇರುವಿಕೆಯ ಸ್ಪಷ್ಟ ನಿದರ್ಶನವಾಗಿದೆ.

ಸಮಾಜ ವಿಜ್ಞಾನ ವಿಷಯಗಳಲ್ಲಿ ಟಿಪ್ಪುವನ್ನು ವೈಭವೀಕರಿಸಿದ್ದಾರೆ ಎನ್ನುವ ನೆಪದಲ್ಲಿ ಅವನು ಮಾಡಿದ ಕಾರ್ಯಗಳಾದ ರೇಷ್ಮೆ ಪರಿಚಯ, ರಾಕೇಟ್ ತಂತ್ರಜ್ಞಾನದ ಅಭಿವೃದ್ಧಿ ಮೊದಲಾದ ಅಂಶಗಳನ್ನು ಪಠ್ಯದಿಂದ ಕೈಬಿಟ್ಟು, “ನಾವು ತಟಸ್ಥ ಮತ್ತು ಪ್ರತ್ಯಕ್ಷ ವಾಸ್ತವಾಂಶಕ್ಕೆ ಅಂಟಿಕೊಂಡಿದ್ದೇವೆ. ಟಿಪ್ಪುವಿನ ವಿವಿಧ ಅಂಶಗಳು ಸತ್ಯವಲ್ಲ. ನಾವು ಅವುಗಳನ್ನು ಕೈಬಿಟ್ಟಿದ್ದೇವೆ” ಎಂದು ಪತ್ರಿಕೆಗಳಲ್ಲಿ ಹೇಳಿದ್ದು ವರದಿಯಾಗಿತ್ತು. ಅಲ್ಲದೆ ಭಾಷಣವೊಂದರಲ್ಲಿ ಟಿಪ್ಪುವಿಗೆ ‘ಮೈಸೂರು ಹುಲಿ’ ಎಂಬ ಬಿರುದು ಕೊಟ್ಟವರಾರು? ಎಂದು ಪ್ರಶ್ನಿಸಿದ್ದರು. ಅದೇ ರೀತಿ ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತ ಪಠ್ಯಗಳನ್ನು ತೆಗೆದಿರುವ ವಿಚಾರಗಳು ಕೂಡ ವಿವಾದಕ್ಕೆಡೆ ಮಾಡಿವೆ. ಇದೆಲ್ಲಕ್ಕೂ ತೀವ್ರ ಆಕ್ಷೇಪಗಳು ಕೇಳಿ ಬಂದ ನಂತರ “ತೆಗೆದಿಲ್ಲ, ಉಳಿಸಿಕೊಂಡಿದ್ದೇವೆ. ಇದೆಲ್ಲ ಅಪಪ್ರಚಾರ” ಎನ್ನುವ ಮೂಲಕ ತಮ್ಮ ತಪ್ಪನ್ನು ಚಕ್ರತೀರ್ಥ ಮತ್ತು ತಂಡ ತಿದ್ದುಕೊಂಡಂತೆ ತೋರುತ್ತದೆ. ಅಲ್ಲದೆ, ಪರಿಷ್ಕೃತ ಪಠ್ಯಪುಸ್ತಕಗಳಲ್ಲಿನ ಇತಿಹಾಸ ಪಾಠಗಳನ್ನು ಟೀಕಿಸುತ್ತಾ, ‘ಹರಪ್ಪ ನಾಗರಿಕತೆ’ಯನ್ನು ಸಿಂಧೂ-ಸರಸ್ವತಿ ನಾಗರಿಕತೆ ಎಂಥಲೂ, ಸಿಂಧೂ ಸರಸ್ವತಿ ನಾಗರಿಕತೆಗೂ ಮೊದಲು ವೇದಗಳ ಸಂಸ್ಕೃತಿ ಅಸ್ತಿತ್ವದಲ್ಲಿ ಇತ್ತು ಎಂತಲೂ ಚಕ್ರತೀರ್ಥ ಅವರು ಯೂಟೂಬ್‍ನಲ್ಲಿ ಮಾತನಾಡಿರುವುದನ್ನು ಗಮನಿಸಿದಾಗ ಇತಿಹಾಸ ಪಠ್ಯಪುಸ್ತಕಗಳಲ್ಲಿ ಏನೆಲ್ಲಾ ತಮ್ಮ ಸಿದ್ಧಾಂತಗಳನ್ನು ತುರುಕಿದ್ದಾರೊ ಎಂಬ ಸಂಶಯ ಮೂಡುತ್ತದೆ. ಒಟ್ಟಾರೆ, ಇವರು ಹೇಳುವುದು ಒಂದು ಮಾಡುವುದು ಇನ್ನೊಂದು.

ಶಿಕ್ಷಣ ಸಚಿವ ನಾಗೇಶ್ ಅವರು “ಪಠ್ಯಪುಸ್ತಕ ಮುದ್ರಣ ಆಗಿ ಬಂದ ಮೇಲೆ ನೋಡಿ ಹೇಳಿ. ಆಗ ಇಲ್ಲದಿದ್ದಾಗ ಕೇಳಿ… ಅಪಪ್ರಚಾರ ಮಾಡುತ್ತಿರುವುದು ಶಿಕ್ಷಣದಲ್ಲಿ ರಾಜಕೀಯಕರಣ ಮಾಡುವುದರ ಭಾಗವಾಗಿದೆ. ಪುಸ್ತಕದ್ದು ಎನ್ನಲಾದ ಪಿಡಿಎಫ್ ಅಧಿಕೃತವಲ್ಲ. ಮುದ್ರಿತ ಪುಸ್ತಕ ಮಾತ್ರ ಅಧಿಕೃತ” ಎಂದಿದ್ದಾರೆ. ಪುಸ್ತಕಗಳು ಮುದ್ರಣಕ್ಕೆ ಸಿದ್ಧವಾಗಿದ್ದ ಮೇಲೆ ಪಿಡಿಎಫ್ ಸಿದ್ಧವಾಗಿರಲೇ ಬೇಕಲ್ಲವೇ? ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ತಾತ್ಕಾಲಿಕವಾಗಿ ಪಾಠ ಪ್ರವಚನಗಳಿಗೂ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ಪರಿಷ್ಕೃತ ಮತ್ತು ಪಠ್ಯಪುಸ್ತಕಗಳ ಪಿಡಿಎಫ್‍ಗಳನ್ನು ಸರ್ಕಾರವೇ ‘ಕರ್ನಾಟಕ ಪಠ್ಯಪುಸ್ತಕ ಸಂಘ’ದ ಅಧಿಕೃತ ವೆಬ್‍ಸೈಟಿನಲ್ಲಿ ಪ್ರಕಟಿಸಿಬಿಟ್ಟರೆ ಎಲ್ಲಾ ತಪ್ಪುತಿಳುವಳಿಕೆ ಮತ್ತು ಗೊಂದಲಗಳಿಗೆ ತೆರೆ ಎಳೆಯಲೂಬಹುದು. 2021ರ ಅಕ್ಟೋಬರ್‌ನಲ್ಲಿ ಸಚಿವರು ನೀಡಿದ್ದ “ಶಾಲಾ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ, ಸಂಬಂಧಪಟ್ಟವರ ಮೇಲೆ ಹಲ್ಲೆ ಮಾಡುತ್ತಿದ್ದರು” ಎಂಬ ಅನಿರೀಕ್ಷಿತ ಹೇಳಿಕೆಯು ಕೂಡ ಬದಲಾದ ಸನ್ನಿವೇಶದಲ್ಲಿ ತಿರುಗುಬಾಣವಾಗಲೂಬಹುದು!

ಶಾಲಾ ಪಠ್ಯಪುಸ್ತಕಗಳ ಮೂಲಕ ತಮ್ಮ ತಮ್ಮ ಸಿದ್ಧಾಂತಗಳನ್ನು ಮಕ್ಕಳ ಮನಸ್ಸಿನ ಮೇಲೆ ಹೇರಿ ವಿಕಾರಗೊಳಿಸುವ ಬದಲು; ಮನಸ್ಸನ್ನು ವಿಕಾಸಗೊಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ರಾಜಕೀಯ ಹಸ್ತಕ್ಷೇಪವಿಲ್ಲದೆ, ನಿಜವಾದ ಶಿಕ್ಷಣತಜ್ಞರಿಗೆ ಮತ್ತು ವಿಷಯತಜ್ಞರಿಗೆ ಸರ್ಕಾರ ಸ್ವಯತ್ತತೆ ನೀಡಿ, ಸಂವಿಧಾನದ ಆಶಯಕ್ಕೆ ಹಾಗೂ ಶಿಕ್ಷಣನೀತಿಗೆ ಪೂರಕವಾಗಿ ಪಠ್ಯಪುಸ್ತಕಗಳು ರಚನೆಯಾಗಬೇಕೇ ಹೊರತು, ರಹಸ್ಯ ರಾಜಕೀಯ ಕಾರ್ಯಸೂಚಿಗಳನ್ನೊಳಗೊಂಡ ಪಠ್ಯಪುಸ್ತಕಗಳನ್ನು ಮಕ್ಕಳ ಮನಸ್ಸಿಗೆ ತುರುಕುವುದಲ್ಲ.

  • ಡಾ. ಶಿವಕುಮಾರಿ ಎಂ.ಎಸ್, ಬೆಂಗಳೂರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇಶಿ ಮುಸ್ಲಿಮರ ಗಣತಿಗೆ ಅಸ್ಸಾಂ ಸಂಪುಟ ಅನುಮೋದನೆ

0
ರಾಜ್ಯದ ದೇಶಿ ಮುಸ್ಲಿಮರ ಆರ್ಥಿಕ-ಸಾಮಾಜಿಕ ಸಮೀಕ್ಷೆಗೆ ಸಮೀಕ್ಷೆಗೆ ಅಸ್ಸಾಂ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ಮುಸ್ಲಿಂ ಜನಾಂಗದ ಐದು ಸಮುದಾಯಗಳನ್ನು ದೇಶಿಯ ಅಸ್ಸಾಂ ಮುಸ್ಲಿಮರು ಎಂದು ಹಿಮಂತ್ ಬಿಶ್ವ ಶರ್ಮಾ ನೇತೃತ್ವದ ಸರ್ಕಾರ...